Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ವ್ಯವಸ್ಥೆಯನ್ನು ಸರಿಪಡಿಸುವ ಅದೃಷ್ಟ ಬಿಜೆಪಿಗೇ ಸಿಕ್ಕಿದೆ!

ದಿಲ್ಲಿ ಗದ್ದುಗೆಯ ಮೇಲೆ ವಿರಾಜಮಾನವಾದ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕರ್ನಾಟಕದ ಮೂರು ಮಂದಿ ಸೇರ್ಪಡೆಯಾಗಿದ್ದಾರೆ. ಅನಂತಕುಮಾರ್, ಡಿ.ವಿ.ಸದಾನಂದಗೌಡ ಹಾಗೂ ಜಿ.ಎಂ.ಸಿದ್ದೇಶ್. ಈ ಪೈಕಿ ಅನಂತಕುಮಾರ್‌ಗೆ ಈಗಾಗಲೇ ಕೇಂದ್ರ ಮಂತ್ರಿಯಾದ ಅನುಭವವಿದೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಶಕ್ತಿಯಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೂ ಆಡಳಿತದ ಅನುಭವವಿದೆ. ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಗೌಡರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು ಸರಿಯಾಗಿದೆ. ಹೀಗೆ ಬ್ರಾಹ್ಮಣರ, ವಕ್ಕಲಿಗರ ಕೋಟಾದಂತೆ ಲಿಂಗಾಯತರ ಕೋಟಾದಲ್ಲಿ ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ ಮಂತ್ರಿಯಾಗಿದ್ದಾರೆ. ಅದು ಮಾತ್ರ ಯಡಿಯೂರಪ್ಪನವರ ಆಯ್ಕೆಯಂತೆ ಕಾಣುತ್ತಿದೆ. ಅದರರ್ಥ, ಸಿದ್ದೇಶ್ ಅಧ್ಯಕ್ಷರು ಎಂದಲ್ಲ. ಆದರೆ ಲಿಂಗಾಯತರ ಕೋಟಾದ ವಿಷಯ ಬಂದಾಗ ಯಡಿಯೂರಪ್ಪನವರಿಗೆ ಅವಕಾಶ ನೀಡುವ ಲೆಕ್ಕಾಚಾರ ಇತ್ತು. ಆದರೆ ಅವರ ವಿರುದ್ಧ ಇನ್ನೂ ಆರೋಪಗಳು ಇವೆ. ಖುದ್ದು ಯಡಿಯೂರಪ್ಪನವರು ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಎಲ್ಲದಕ್ಕೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎನ್ನುತ್ತಾರೆ.

ಆದರೆ ವಿಷಯ ಹೈಕೋರ್ಟ್‌ನಲ್ಲಿದೆ ಎಂದಾಗ ಅದು ಒಂದಲ್ಲ, ಒಂದು ದಿನ ಸ್ಫೋಟಗೊಳ್ಳುತ್ತದೆ. ಅವರ ಪರ ತೀರ್ಪು ಬಂದರೆ ಬೇರೆ ವಿಷಯ. ಬರದೇ ಇದ್ದಾಗ ಸಮಸ್ಯೆ ಶುರುವಾಗುತ್ತದೆ. ಇಂತಹ ಸಮಸ್ಯೆಯನ್ನು ಆರಂಭದಲ್ಲಿಯೇ ಮೈಮೇಲೆ ಎಳೆದುಕೊಳ್ಳುವ ಉತ್ಸಾಹ ಮೋದಿ ಅವರಿಗಿದ್ದಂತಿಲ್ಲ. ಹೀಗಾಗಿ ಯಡಿಯೂರಪ್ಪನವರ ಬದಲಿಗೆ ಅವರು ಹೇಳಿದ ಅಭ್ಯರ್ಥಿಯನ್ನು ಮಂತ್ರಿ ಮಾಡಿದ್ದಾರೆ. ಅಂದಹಾಗೆ ಈ ಮೂರು ಜನ ಸೇರಿ ಯಾವ ಮಟ್ಟಿಗೆ ಕರ್ನಾಟಕಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಅನ್ನುವುದೇ ಸದ್ಯದ ಕುತೂಹಲ. ಈ ಹಿಂದೆ ಮನಮೋಹನ್‌ಸಿಂಗ್ ಅವರ ಸರ್ಕಾರದಲ್ಲಿ ಕರ್ನಾಟಕದಿಂದ ಗೆದ್ದವರ ಸಂಖ್ಯೆ ಕಡಿಮೆ ಇದ್ದರೂ ದಂಡಿಯಾಗಿ ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು. ಯುಪಿಎ-೧ ಸರ್ಕಾರ ಇರಬಹುದು, ತದನಂತರ ಬಂದ ಸರ್ಕಾರ ಇರಬಹುದು. ಒಟ್ಟಿನಲ್ಲಿ ಕರ್ನಾಟಕಕ್ಕೆ ಒಳ್ಳೆಯ ಪ್ರಾತಿನಿಧ್ಯ ದೊರೆಯಿತು. ಒಂದು ಕಡೆಯಿಂದ ನೋಡುತ್ತಾ ಬಂದರೆ ಎಸ್ಸೆಂ ಕೃಷ್ಣ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಹಾಗೂ ಕೆ.ಎಚ್.ಮುನಿಯಪ್ಪನವರಂತಹವರು ಮಂತ್ರಿಗಳಾಗಿದ್ದರು.

ಈ ಪೈಕಿ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್ ಹಾಗೂ ಎಸ್ಸೆಂ ಕೃಷ್ಣ ಥರದವರು ನಿಜಕ್ಕೂ ಜನ ಮೆಚ್ಚುವಂತೆ ಕೆಲಸ ಮಾಡಿದರು. ಅದರಲ್ಲೂ ಯುಪಿಎ-೨ ಸರ್ಕಾರದಲ್ಲಿ ಮಂತ್ರಿಯಾದ ಆಸ್ಕರ್ ಫರ್ನಾಂಡಿಸ್ ಕೇಂದ್ರದ ಭೂ ಸಾರಿಗೆ ಸಚಿವರಾಗಿ ದಂಡಿಯಾಗಿ ಕೆಲಸ ಮಾಡಿದರು. ರಾಜ್ಯಕ್ಕೆ ನಲವತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣ ಕೊಟ್ಟು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟರು. ಯಾವತ್ತೂ ಮುಗಿಯದ ಕತೆ ಅನ್ನಿಸಿದ್ದ ಶಿರಾಡಿ ಘಾಟ್ ರಸ್ತೆಗೆ ಒಂದು ರೂಪ ಕೊಟ್ಟರು. ಹೀಗೆ ಹೇಳುತ್ತಾ ಹೋದರೆ ಆಸ್ಕರ್ ಫರ್ನಾಂಡಿಸ್ ರಾಜ್ಯದ ಪಾಲಿಗೆ ನಿಜಕ್ಕೂ ಅಲ್ಪ ಕಾಲಾವಧಿಯಲ್ಲಿ ವರದಾನವಾಗಿ ಕೆಲಸ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು ಎಂಬ ಕಾರಣಕ್ಕಾಗಿ ಅವರು ಈ ಪ್ರಮಾಣದ ಹಣ ನೀಡಿದರು ಎಂದು ಹೇಳಬಹುದು. ಆದರೆ ನಮ್ಮ ನೆಲದಿಂದ ಸಚಿವರಾದವರು ಈ ಪ್ರಮಾಣದ ಕೆಲಸ ಮಾಡಬೇಕು. ಜನರಿಗೆ ನೆಮ್ಮದಿ ಕೊಡಬೇಕು. ಟೋಲ್ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಇರಬಹುದು. ಇವತ್ತಲ್ಲ, ನಾಳೆ ಅದು ಮಾತುಕತೆಯ ಮೂಲಕ ಬಗೆಹರಿಯುವಂತೆ ಈಗಿರುವ ಸಚಿವರು ಮಾಡಬೇಕು. ಹೆದ್ದಾರಿಗಳನ್ನು ಬಳಸದವರು ಸರ್ವೀಸ್ ರಸ್ತೆಗಳನ್ನು ಬಳಸಲು ದಾರಿ ಮಾಡಿಕೊಡಬೇಕು. ಯಾಕೆಂದರೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಹೋರಾಡಿದ್ದಾರೋ, ಅದನ್ನು ಸರಿಪಡಿಸಬೇಕಾದ ಕರ್ತವ್ಯವೂ ಅವರ ಮೇಲಿದೆ.

ಅದೇನೇ ಇರಲಿ, ಒಟ್ಟಿನಲ್ಲಿ ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿ ಕರ್ನಾಟಕದ ಪಾಲಿಗೆ ನಿಜಕ್ಕೂ ಒಳ್ಳೆಯದನ್ನೇ ಮಾಡಿದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೧(ಜೆ) ಕಾನೂನನ್ನು ಜಾರಿಗೆ ತರಲು ಬಹಳ ಪ್ರಯತ್ನಪಟ್ಟರು. ನನ್ನ ಪ್ರಕಾರ, ಇದನ್ನು ಮಂಡಿಸಿ ಮಾತನಾಡುವ ಸಂದರ್ಭದಲ್ಲಿ ಖರ್ಗೆ ಕೇವಲ ನಾಯಕನಂತೆ ಕಾಣುತ್ತಿರಲಿಲ್ಲ. ಒಬ್ಬ ಮುತ್ಸದ್ದಿಯಂತೆ ಕಾಣಿಸಿದರು, ಹಾಗೇ ಮಾತನಾಡಿದರು. ಒಂಬತ್ತು ಸಲ ಶಾಸಕರಾಗಿ, ಎರಡು ಸಲ ಸಂಸದರಾಗಿರುವ ಅವರು ಮನಮೋಹನ್‌ಸಿಂಗ್ ಸರ್ಕಾರ ಕೆಳಗಿಳಿಯುವ ಮುನ್ನ ಗಣನೀಯ ಸಾಧನೆ ಮಾಡಿದರು. ಹೈದ್ರಾಬಾದ್ ನಿಜಾಮನ ಕೈಗೆ ಸಿಕ್ಕ ಹೈದ್ರಾಬಾದ್- ಕರ್ನಾಟಕ ಭಾಗ ಆರ್ಥಿಕವಾಗಿ, ಸಾಮಾಜಿಕವಾಗಿ ಎಷ್ಟು ಹಿಂದುಳಿದಿದೆ ಎಂಬುದು ಎಲ್ಲರಿಗೂ ಗೊತ್ತು. ಇಂತಹ ಪ್ರದೇಶವನ್ನು ಮುಂದುವರಿದ ಪ್ರದೇಶಗಳ ಸಾಲಿಗೆ ತಂದು ನಿಲ್ಲಿಸಲು ಅದಕ್ಕೆ ವಿಶೇಷ ಸ್ಥಾನಮಾನ ಬೇಕಿತ್ತು. ರಜಾಕಾರರ ವಿರುದ್ಧ ಹೋರಾಡಿದ ನೆಲ ಅದು. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅದನ್ನು ಆರ್ಥಿಕವಾಗಿ ಮೇಲಕ್ಕೇರಿಸುವ ಕೆಲಸ ಹಿಂದುಳಿಯಿತು. ಖರ್ಗೆ ರೈಲ್ವೇ ಸಚಿವರಾದಾಗ ಈ ಕಾಯ್ದೆ ಜಾರಿಯಾಯಿತು. ಆ ಮೂಲಕ ಹೈದ್ರಾಬಾದ್-ಕರ್ನಾಟಕ ಆರ್ಥಿಕವಾಗಿ ಮೇಲಕ್ಕೆ ಬರಲು ಒಂದು ದಾರಿ ತೆರೆದುಕೊಂಡಿತು.

ಈ ಮಧ್ಯೆ ಕಾರ್ಮಿಕ ಸಚಿವರಾಗಿ ಖರ್ಗೆ ರಾಜ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರಿಂದ ಹಿಡಿದು ಹಲವು ಮಹತ್ವದ ಕೆಲಸ ಮಾಡಿದರು. ಅವರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ತಪ್ಪಿಸುತ್ತಿದ್ದೇವೆ ಎಂಬುದು ಕೇಂದ್ರದ ನಾಯಕರಿಗೂ ಗೊತ್ತಿತ್ತು. ನ್ಯಾಯವಾಗಿ ಅವರನ್ನು ಒಂದು ಬಾರಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಮೇಲೆ ತರಬೇಕು ಎಂಬುದು ಖುದ್ದು ಸೋನಿಯಾಗಾಂಧಿಗೂ ಗೊತ್ತಿತ್ತು. ಆದರೆ ಖರ್ಗೆ ಆ ಕುರಿತು ಚಕಾರವೆತ್ತಲಿಲ್ಲ. ಅವರು ಯಾವತ್ತೂ ಹೈಕಮಾಂಡ್ ಹೇಳಿದ ರೀತಿ ನಡೆದುಕೊಳ್ಳುವ ಗುಣದವರು. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವವರು. ಹೀಗಾಗಿ ಕಾರ್ಮಿಕ ಖಾತೆ ಕೊಟ್ಟರೂ ದೇಶಕ್ಕೆ ಒಳ್ಳೆಯದು ಮಾಡಿದರು. ರಾಜ್ಯಕ್ಕೆ ಒಳ್ಳೆಯದಾಗುವಂತೆ ಮಾಡಿದರು. ಅವರಿಗೆ ಮುಖ್ಯಮಂತ್ರಿ ಪದವಿ ತಪ್ಪಿಸುತ್ತಿದ್ದೇವೆ ಎಂಬ ಕೀಳರಿಮೆಯಿಂದ ಕಾಂಗ್ರೆಸ್ ಹೈಕಮಾಂಡ್ ಆಮೇಲೆ ಅವರಿಗೆ ರೈಲ್ವೇ ಖಾತೆ ನೀಡಿತು. ಇದರಲ್ಲೂ ಖರ್ಗೆ ಅದ್ಭುತವಾಗಿ ಕೆಲಸ ಮಾಡಿದರು. ಹೊಸ ಹೊಸ ಯೋಜನೆಗಳನ್ನು ದೇಶಕ್ಕೆ ಹೇಗೆ ತಂದರೋ, ಹಾಗೆ ಕರ್ನಾಟಕಕ್ಕೂ ತಂದರು. ಜಾಫರ್ ಷರೀಫ್ ನಂತರ ಕರ್ನಾಟಕ ಕಂಡ ಉತ್ತಮ ಮಂತ್ರಿಗಳ ಪೈಕಿ ಅವರ ಹೆಸರು ಕಾಣಿಸಿಕೊಂಡಿತು.

ಇಷ್ಟು ಸಾಧನೆ ಮಾಡಿದ ಖರ್ಗೆ ಮೊನ್ನೆ ಚುನಾವಣೆ ಮುಗಿದು, ಫಲಿತಾಂಶ ಬಂದ ನಂತರ ಹೇಳಿದರು. ಯಾವತ್ತೂ ನೀವು ನನ್ನನ್ನು ಸಿಎಂ ಸ್ಥಾನದ ಜತೆ ಹೋಲಿಸಿ ನೋಡಬೇಡಿ. ಅದು ಖಾಲಿಯಾಗಿಲ್ಲ. ಈಗಿರುವ ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಾಗವೇ ಖಾಲಿ ಇಲ್ಲ ಎಂದ ಮೇಲೆ ಅದರ ಮೇಲೆ ನಾನು ಕೂರುತ್ತೇನೆ ಎಂದು ಪ್ರಚಾರ ಮಾಡುವುದು ಸರಿಯಲ್ಲ ಎಂದರು. ಖರ್ಗೆ ಗುಣವೇ ಹಾಗೆ. ತಾವೇನೇ ಮಾಡಿದರೂ ಹೈಕಮಾಂಡ್ ಮನಸ್ಸಿನಲ್ಲಿ ಬರದಿದ್ದರೆ ತಾವು ಮುಖ್ಯಮಂತ್ರಿ ಆಗುವುದಿಲ್ಲ ಎಂಬುದು ಅವರಿಗೆ ಗೊತ್ತು. ಅದೇ ರೀತಿ ಒಂದು ಸಲ ಹೈಕಮಾಂಡ್ ಮನಸ್ಸು ಮಾಡಿದರೆ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ಏನು ಮಾಡಬೇಕೋ ಅದನ್ನು ಯಶಸ್ವಿಯಾಗಿ ಮಾಡುತ್ತದೆ ಎಂದು ಗೊತ್ತು. ಹೀಗಾಗಿ ಅವರು ಯಾವುದಕ್ಕೂ ಪ್ರತಿಕ್ರಿಯಿಸುವುದು ಕಡಿಮೆ. ಅಂದ ಹಾಗೆ ಏನೋ ಹೇಳಲು ಹೋಗಿ ಮತ್ಯಾವುದೋ ವಿಷಯಕ್ಕೆ ಬಂದಂತಾಯಿತು. ನಾನು ಇಲ್ಲಿ ಏನು ಹೇಳಲು ಹೊರಟೆ ಎಂದರೆ ಕೇಂದ್ರ ಮಂತ್ರಿಯಾಗಿ ಖರ್ಗೆ ಉತ್ತಮವಾಗಿ ಕೆಲಸ ಮಾಡಿದರು. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದಂತೆ ಕರ್ನಾಟಕದಲ್ಲೂ ಹೆಸರು ಮಾಡಿದರು.

ಉಳಿದಂತೆ ಎಸ್ಸೆಂ ಕೃಷ್ಣ ಕೇಂದ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದರು. ಆದರೆ ಅವರಿಗೆ ಕೊಟ್ಟಿದ್ದೇ ವಿದೇಶಾಂಗ ಇಲಾಖೆ. ಹೀಗಾಗಿ ಅವರು ಕರ್ನಾಟಕಕ್ಕೆ ಏನು ಮಾಡಿದರು ಎಂಬುದಕ್ಕಿಂತ ರಾಷ್ಟ್ರ ಮಟ್ಟದಲ್ಲಿ ಚೆನ್ನಾಗಿ ಕೆಲಸ ಮಾಡಿದರು ಎಂಬ ಹೆಸರು ಉಳಿಯಿತು. ಎಂಬತ್ತು ದಾಟಿದರೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅವರು ದೇಶ-ವಿದೇಶಗಳನ್ನು ಸುತ್ತಿದರು. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಹಿಡಿದು ಪಾಕಿಸ್ತಾನದ ಅಧ್ಯಕ್ಷರ ತನಕ ಎಲ್ಲರ ಜತೆ ಮಾತನಾಡಿದರು. ದೇಶದ ಸಂರಕ್ಷಣೆಗೆ ಸಂಬಂಧಿಸಿದಂತೆ ನಿಜವಾಗಿಯೂ ಅತ್ಯುತ್ತಮ ಕೆಲಸ ಮಾಡಿದರು. ವಯಸ್ಸು ಅವರ ಪರವಾಗಿದ್ದಿದ್ದರೆ ಇನ್ನಷ್ಟು ದಿನಗಳ ಕಾಲ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದರೋ ಏನೋ? ಅದೇನೇ ಇದ್ದರೂ ಮಂತ್ರಿಯಾಗಿದ್ದಷ್ಟು ಕಾಲ ಅವರು ಕರ್ನಾಟಕದ ಗೌರವವನ್ನು ಉಳಿಸಿದರು. ಕೆ.ಎಚ್.ಮುನಿಯಪ್ಪನವರು ಚೆನ್ನಾಗಿ ಕೆಲಸ ಮಾಡಲು ಯತ್ನಿಸಿದರಾದರೂ ಕೇಂದ್ರದವರೇ ಅವಕಾಶ ನೀಡಲಿಲ್ಲ. ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಅವರು ಏನೇ ಮಾಡಲು ಹೋದರೂ ಅಡ್ಡಿ ಎದುರಾಗುತ್ತಿತ್ತು. ಆನಂತರ ಖಾತೆ ಬದಲಿಸಿದ ಮೇಲೂ ಅದೇ ಕತೆ.

ಇನ್ನು ನಿಜಕ್ಕೂ ರಾಜ್ಯದ ಪರವಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡದೇ ಉಳಿದವರೆಂದರೆ ವೀರಪ್ಪ ಮೊಯ್ಲಿ ಅವರೇ. ಕಾನೂನಿನಿಂದ ಹಿಡಿದು ಪೆಟ್ರೋಲಿಯಂ ತನಕ ಹಲವು ಮಹತ್ವದ ಖಾತೆಗಳು ಸಿಕ್ಕರೂ ಅವರು ಕರ್ನಾಟಕದ ಪಾಲಿಗೆ ವರವಾಗಿ ಪರಿಣಮಿಸಲಿಲ್ಲ. ಚಿಕ್ಕಬಳ್ಳಾಪುರದ ಜನರಿಗೆ ಎತ್ತಿನಹೊಳೆ ಯೋಜನೆಯನ್ನು ತೋರಿಸಿ ಆಸೆ ಹುಟ್ಟಿಸಿದ್ದು ಬಿಟ್ಟರೆ ಅವರು ಬೇರೇನೂ ಮಾಡಿದ ಹಾಗೆ ಕಾಣೆ. ಕಳೆದ ಬಾರಿ ಗೆಲ್ಲುವಾಗ ಅವರು ಕೊಟ್ಟ ಭರವಸೆಗಳ ಪಟ್ಟಿ ನೋಡಿದರೆ ಇನ್ನೇನು ಚಿಕ್ಕಬಳ್ಳಾಪುರದ ಕಷ್ಟಗಳೆಲ್ಲ ತೀರಿ ಹೋದವೇನೋ ಅನ್ನಿಸಿತ್ತು. ಆದರೆ ಇಲ್ಲಿಂದ ದಿಲ್ಲಿಗೆ ಹೋಗಿದ್ದೇ ಹೋಗಿದ್ದು. ವೀರಪ್ಪ ಮೊಯ್ಲಿ ಬದಲಾಗಿಬಿಟ್ಟರು. ಚಿಕ್ಕಬಳ್ಳಾಪುರವನ್ನು ಮರೆತರು. ಅವರು ಇಲ್ಲಿಂದ ಗೆದ್ದು ಹೋಗಿ ಕೇಂದ್ರದಲ್ಲಿ ಮಂತ್ರಿಯಾದರು ಎಂಬ ಹೆಗ್ಗಳಿಕೆ ಬಿಟ್ಟರೆ ರಾಜ್ಯಕ್ಕೆ, ಚಿಕ್ಕಬಳ್ಳಾಪುರಕ್ಕೆ ಏನೂ ಆಗಲಿಲ್ಲ. ನಿಜ ಹೇಳಬೇಕೆಂದರೆ ಈ ಸಲ ಕುಮಾರಸ್ವಾಮಿ ನಿಲ್ಲದೇ ಹೋಗಿದ್ದರೆ ಚಿಕ್ಕಬಳ್ಳಾಪುರದ ಮತದಾರರು ವೀರಪ್ಪ ಮೊಯ್ಲಿ ಅವರಿಗೆ ಚೆನ್ನಾಗಿ ಪಾಠ ಕಲಿಸುತ್ತಿದ್ದರು. ಆದರೆ ಕುಮಾರಸ್ವಾಮಿ ನಿಂತ ಪರಿಣಾಮವಾಗಿ ಅಲ್ಲಿ ಗೆಲ್ಲಬಹುದಾಗಿದ್ದ ಬಚ್ಚೇಗೌಡ ಸೋತು ಮತ್ತೆ ವೀರಪ್ಪ ಮೊಯ್ಲಿಯೇ ಗೆಲ್ಲುವಂತಾಯಿತು.

ನಿಜಕ್ಕೂ ಚಿಕ್ಕಬಳ್ಳಾಪುರದ ಮತದಾರರು ಮತ್ತೆ ವೀರಪ್ಪ ಮೊಯ್ಲಿ ಸಂಸದರಾಗುವುದನ್ನು ಬಯಸಿರಲಿಲ್ಲ. ಆದರೆ ಕುಮಾರಸ್ವಾಮಿ ಮಾಡಿದ ಒಂದು ತಪ್ಪು ವೀರಪ್ಪ ಮೊಯ್ಲಿಯನ್ನು ಮತ್ತೆ ಸಂಸತ್ತಿಗೆ ಕಳಿಸಿಬಿಟ್ಟಿತು. ಕೆಲಸ ಮಾಡಬಹುದಾದ ಕಾಲದಲ್ಲೇ ಕೆಲಸ ಮಾಡಲಿಲ್ಲ. ಇನ್ನು ಈಗ ಮೊಯ್ಲಿ ಏನಾದರೂ ಕೆಲಸ ಮಾಡುತ್ತಾರೆ ಅಂದುಕೊಂಡರೆ ತಪ್ಪಾಗುತ್ತದೆ. ಅವರನ್ನೇನಿದ್ದರೂ ಕರ್ನಾಟಕದ ಒಂದು ವರ್ಗ ಸುಖಾಸುಮ್ಮನೆ ಭರಿಸಬೇಕು. ಅಷ್ಟು ಬಿಟ್ಟರೆ ಕೇಂದ್ರ ಸಚಿವರಾಗಿ ಅವರೇನೂ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ. ಇವರಿಗೆ ಹೋಲಿಸಿದರೆ ಕೆಲಸ ಮಾಡಲು ಬಿಜೆಪಿಯವರಿಗೆ ಅವಕಾಶವಿದೆ. ಅನಂತಕುಮಾರ್ ಅವರಿಗೆ ಈ ಹಿಂದೆ ಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಸದಾನಂದಗೌಡ ಕೆಲಸ ಮಾಡಬಲ್ಲರು ಎಂಬುದನ್ನು ಯಾವತ್ತೋ ನೋಡಿದ್ದೇವೆ. ಸಿದ್ದೇಶ್ ಕೆಲಸ ಮಾಡಲೇಬೇಕಾದ ಸ್ಥಿತಿಯಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿ ಏನನ್ನಾದರೂ ಸಾಧಿಸಿ ತೋರಿಸುವ ಮನಸ್ಥಿತಿಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಂತ್ರಿಗಳ ಪ್ರೋಗ್ರೆಸ್ ಕಾರ್ಡ್ ನೋಡುತ್ತಾರೆ. ಹೀಗಾಗಿ ಮಂತ್ರಿಗಳು ಅನ್ನಿಸಿಕೊಂಡವರು ಕೆಲಸ ಮಾಡಲೇಬೇಕು.

ಈ ಮಧ್ಯೆ ಯಡಿಯೂರಪ್ಪ ಮತ್ತು ದಲಿತ ಸಮುದಾಯದ ರಮೇಶ್ ಜಿಗಜಿಣಗಿ ಎರಡನೇ ಕಂತಿನಲ್ಲಿ ಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಇದೆ. ಸಿದ್ದೇಶ್ ಅವರಿಗೆ ಲಿಂಗಾಯತರ ಕೋಟಾದಲ್ಲಿ ಮಂತ್ರಿಗಿರಿ ಕೊಡುವಾಗ ರಾಜ್ಯ ಖಾತೆ ಕೊಟ್ಟಿದ್ದಕ್ಕೆ ಇದು ಒಂದು ಕಾರಣ. ಯಾಕೆಂದರೆ ಇವತ್ತಲ್ಲ, ನಾಳೆ ಯಡಿಯೂರಪ್ಪನವರು ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ. ಅವರು ಮತ್ತು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಕೈ ಹಿಡಿಯುತ್ತಾ ಬಂದಿರುವ ದಲಿತ ವರ್ಗದ ಎಡಗೈ ಸಮುದಾಯಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ ರಮೇಶ್ ಜಿಗಜಿಣಗಿ ಅವರನ್ನು ಮಂತ್ರಿ ಮಾಡುವ ಲೆಕ್ಕಾಚಾರ ದಿಲ್ಲಿಯಲ್ಲಿದೆ. ಹಾಗೆ ನೋಡಿದರೆ ಈಗ ಮಂತ್ರಿಗಳಾಗಿರುವವರಿಗೆ ಹೆಚ್ಚು ಕೆಲಸ ಮಾಡಲು, ಜನರಿಂದ ಮೆಚ್ಚುಗೆ ಪಡೆಯಲು ಜಾಸ್ತಿ ಅವಕಾಶವಿದೆ. ಅದೇ ರೀತಿ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಜನರಿಗೂ ಹೆಚ್ಚಿನ ನಿರೀಕ್ಷೆಯಿದೆ. ಅವರ ಈ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ಈಗ ಸಚಿವರಾಗಿರುವ ನಾಯಕರು ಒಳ್ಳೆಯ ಕೆಲಸ ಮಾಡಲಿ, ರಾಜ್ಯದ ಹಿತಕ್ಕೆ ಯಾವ ಸಂದರ್ಭದಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳಲಿ. ಇದನ್ನು ಬಿಟ್ಟು ಯಾರದೋ ಕೈಗೊಂಬೆಗಳಂತೆ ಕೆಲಸ ಮಾಡಿದರೆ ರಾಜ್ಯದ ಜನ ಅಂತಹವರನ್ನು ಕ್ಷಮಿಸುವುದಿಲ್ಲ.

ಕೇಂದ್ರದಲ್ಲಿ ಮಂತ್ರಿಗಳಾದರೆ ದಂಡಿಯಾಗಿ ಕೆಲಸ ಮಾಡಬಹುದು ಎಂದು ಖರ್ಗೆ, ಆಸ್ಕರ್ ಥರದವರು ತೋರಿಸಿ ಕೊಟ್ಟಿದ್ದಾರೆ. ಇದನ್ನು ಹಾಲಿ ಸಚಿವರು ನೆನಪಿನಲ್ಲಿಟ್ಟುಕೊಳ್ಳಲಿ. ಇಲ್ಲಿ ಇರುವ ಸರ್ಕಾರ ಯಾವುದು ಎಂಬುದನ್ನು ನೋಡದೇ ಕೇಂದ್ರದಿಂದ ರಾಜ್ಯಕ್ಕೆ ತರಬೇಕಾದ ಅನುದಾನಗಳನ್ನು ತರಲಿ. ಉದಾಹರಣೆಗೆ ಚಂದ್ರಬಾಬು ನಾಯ್ಡು ಅವರನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ತಮ್ಮ ರಾಜ್ಯದ ಕೆಲಸಕ್ಕಾಗಿ ತಾವೇ ದಿಲ್ಲಿಗೆ ಅಲೆದಾಡುವುದು ಅವರಿಗೆ ಅಭ್ಯಾಸವಾಗಿತ್ತು. ತಮಿಳ್ನಾಡಿನ ರಾಜಕೀಯ ಪಕ್ಷಗಳಲ್ಲಿ ಏನೇ ಭೇದವಿರಲಿ, ಆದರೆ ರಾಜ್ಯದ ಹಿತ ಬಂದಾಗ ಒಗ್ಗೂಡಿ ಹೋರಾಡುವುದು ಅವರಿಗೆ ಅಭ್ಯಾಸ. ಆದರೆ ಕರ್ನಾಟಕಕ್ಕೆ ಈ ಅಭ್ಯಾಸ ಕಡಿಮೆ. ಇನ್ನಾದರೂ ಇಂತಹ ಅಭ್ಯಾಸಗಳು ಜಾಸ್ತಿಯಾಗಲಿ. ಫೈನಲಿ, ಈಗ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರಿರುವವರಿಂದ ರಾಜ್ಯಕ್ಕೆ ಒಳ್ಳೆಯದಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books