Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂಥ ಮಗಳು ನಿಮ್ಮ ಮನೆಯಲ್ಲೂ ಇದ್ದಾಳು ಅನ್ನಿಸಿ ಹೀಗೆಲ್ಲ ಬರೆದದ್ದು!

ಥಟ್ಟನೆ ಕಿವಿ ನೆಟ್ಟಗಾದವು.
ಆ ಹುಡುಗಿ ಉರ್ದು ಓದುತ್ತಿದ್ದಳು. ಅವು ಉರ್ದು ಕವಿತೆಗಳು. ನಾವು ಷೇರೋ ಶಾಯರಿ ಅನ್ನುತ್ತೀವಲ್ಲ; ಆ ಧಾಟಿಯವು. ಅವಳ ಗೆಳತಿಯೊಬ್ಬಳು ಎದುರಿಗೆ ಕುಳಿತು ಕೇಳಿಸಿಕೊಳ್ಳುತ್ತಿದ್ದಳು. ನಾನು ಬಾಗಿಲಲ್ಲೇ ನಿಂತು ಕೇಳಿಸಿಕೊಂಡೆ.
“ಯಾರ ಬರವಣಿಗೆಯದು?" ಕೇಳಿದೆ.
“ನಂ...ದೇ..." ಉತ್ತರಿಸಿತು ಹುಡುಗಿ.­
ಅವಳ ಹೆಸರು ಭಾವನಾ.
ನನ್ನ ಎರಡನೆಯ ಮಗಳು. ನಾನು ಪ್ರೀತಿಯಿಂದ "ಬಾನಿ'' ಅನ್ನುತ್ತೇನೆ. ಆಗಿನ್ನೂ ಮೊದಲ ಬಿ.ಎ. ಸೇರಿಕೊಂಡು ಅಕ್ಕನಂತೆಯೇ ಪತ್ರಿಕೋದ್ಯಮ ಓದುತ್ತಿದ್ದಳು. ಅಸಾಧ್ಯ ಚಟುವಟಿಕೆಯ, ಶುಭ್ರಶುದ್ಧ ಅಂತಃಕರಣದ ಹುಡುಗಿ. ದೊಡ್ಡ ಮಗಳು ಸದಾ ನನ್ನೊಂದಿಗೇ ಇದ್ದು ಬೆಳೆದವಳು. ಮಗರಾಯ ಕರ್ಣ ಚಿಕ್ಕಂದಿನಲ್ಲಿ ನನ್ನನ್ನು ಹಲ್ಲಿಯಂತೆ ಸದಾ ಅವಚಿಕೊಂಡಿರುತ್ತಿದ್ದ. ಈ ಮಧ್ಯದ ಕೂಸು ಮಾತ್ರ ಅವರ ಅಮ್ಮನಿಗೇ ಅಂಟಿಕೊಂಡು ಬೆಳೆಯಿತು. ಅದ್ಯಾವ ಘಳಿಗೆಯಲ್ಲಿ ಹುಟ್ಟಿದಳೋ; ಇಡೀ ರಾತ್ರಿ ಮಲಗುತ್ತಿರಲಿಲ್ಲ. ನಮಗಿನ್ನೇನು ನಿದ್ದೆ ಹತ್ತಬೇಕು! ಇವಳು "ಬ್ಯಾ...'' ಅಂತ ಬಾಯಿ ತೆರೆದರೆ, ಬಾಯಿ ಮುಚ್ಚುತ್ತಿದ್ದುದು ಮಾರನೆಯ ಮುಂಜಾನೆಯೇ. ನಾನು ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ದಿನವಿಡೀ ದುಡಿದು ಹೈರಾಣಾಗಿ ಬಂದು ಹಾಸಿಗೆಗೆ ಬೆನ್ನು ಬಿಸಾಕುತ್ತಿದ್ದಂತೆಯೇ ಬಾನಿಯ ಅಖಂಡ ಆಲಾಪನೆ ಪ್ರಾರಂಭವಾಗಿಬಿಡುತ್ತಿತ್ತು. ಎದ್ದು ಎರಡೇಟು ಬಡಿಯೋಣವೆಂದರೆಮೈಯಲ್ಲಿ ಕೇವಲ ಮೂಳೆಗಳಿದ್ದ ತೆಳ್ಳಗಿನ ಅರ್ಭಕಿ. ಎತ್ತಿಕೊಂಡರೆ ಗೊಂಬೆಯಷ್ಟೇ ಭಾರ. ಉಳಿದವರಿಗೆ ಹಾಗಿರಲಿ; ಈ ಮಗು ನನಗೇ ಸರಿಯಾಗಿ ರೂಢಿಯಾಗಿರಲಿಲ್ಲ.

ಆಮೇಲಿನವು ಕೆಟ್ಟ ಆತಂಕದ ದಿನಗಳು. ಭಾವನಾಗೆ ಮಾತೇ ಬರಲಿಲ್ಲ. ಏನು ಕೇಳಿದರೂ ಕೈ ಸನ್ನೆ, ಬಾಯಿ ಸನ್ನೆ. ಅಳುವುದು ಮಾತ್ರ ಆಕಾಶಕ್ಕೆ ತಲುಪುವಷ್ಟು ಜೋರು. ಇದೊಂದು ಮೂಕ ಮಗು ಹುಟ್ಟಿಬಿಟ್ಟಿತಾ ಅಂತ ನಾನು-ಲಲಿತೆ ಆತಂಕಗೊಳ್ಳುತ್ತಿದ್ದೆವು. ಆದರೆ ಯಾವ ಸರಹೊತ್ತಿನಲ್ಲಿ ಸಣ್ಣ ಪುಟ್ಟ ಸದ್ದು ಮಾಡಿದರೂ, "ಬಾನೀ" ಅಂತ ಕೂಗಿದರೂ ಸಟ್ಟನೆ ಹಾವಿನ ಹೆಡೆಯಂತೆ ತಲೆಯೆತ್ತಿ ತಿರುಗಿ ನೋಡುತ್ತಿದ್ದಳಲ್ಲ? ಹೀಗಾಗಿ ಕಿವಿ ಕೇಳಿಸುತ್ತಿವೆ ಅಂತ ಖಾತರಿಯಾಗುತ್ತಿತ್ತು. ಮಾತು ಮಾತ್ರ ಮೂರನೇ ವರ್ಷಕ್ಕೆ ಕಾಲಿಡುವ ತನಕ ಉಹುಂ. ಆ ಕಾಲಕ್ಕೆ ಬಳ್ಳಾರಿಯಲ್ಲಿ ಕಿವುಡಮೂಕ ಮಕ್ಕಳ ಡಾಕ್ಟರುಗಳೂ ಇರಲಿಲ್ಲ. ಮೈಸೂರಿನಲ್ಲಿ ಈ ಸಮಸ್ಯೆಗಳನ್ನು ಪರಿಹರಿಸುವ ಆಸ್ಪತ್ರೆಯೊಂದಿದೆ ಅಂತ ಕೇಳಿದ್ದೆ. ಇನ್ನೊಂದಷ್ಟು ದಿನ ಪರಿಸ್ಥಿತಿ ಹೀಗೇ ಮುಂದುವರೆದರೆ, ಬಾನಿಗೆ ಮಾತು ಬಾರದಿದ್ದರೆ ಮೈಸೂರಿಗೇ ಕರೆದುಕೊಂಡು ಹೋಗುವುದು ಅಂದುಕೊಂಡಿದ್ದೆ. ಆಗಿನ್ನೂ ಭವಿತವ್ಯದಲ್ಲಿ ಎದುರಾಗಲಿರುವ ಫಜೀತಿಯೊಂದರ ಕಲ್ಪನೆ ನನಗಿರಲಿಲ್ಲ. ಅದೊಂದು ಬೆಳಗ್ಗೆ ಎದ್ದೆದ್ದವಳೇ,

"ಅಮ್ಮಾ ನಂಗೆ ಕುಡಿಯೋಕೆ ಹಾಲು ಬೇಕು!'' ಎಂದೇ ಮಾತು ಶುರುವಿಟ್ಟ ಬಾನಿ ಇವತ್ತಿನ ಈ ಕ್ಷಣಕ್ಕೂ ಮಾತು ನಿಲ್ಲಿಸಿಲ್ಲ. ಚಿಕ್ಕಂದಿನಲ್ಲಿ ಮಾತ್ರೆಗೆ "ಮಾತರೆ" ಮತ್ತು ಆಸ್ಪತ್ರೆಗೆ "ಆಪತ್ತರೆ" ಅನ್ನುತ್ತಿದ್ದುದು ಬಿಟ್ಟರೆ, ಪಾಪಿ ಒಂದೇ ಒಂದು ತೊದಲ ಮಾತು ಆಡಲಿಲ್ಲ. ಸೆಂಟೆನ್ಸುಗಳ ಹಳಿ ತಪ್ಪಲಿಲ್ಲ. ಅನೇಕ ವರ್ಷಗಳಿಂದ ಮನಸ್ಸಿನಲ್ಲೇ ಮಾತು ರೂಢಿ ಮಾಡಿಕೊಂಡಿದ್ದು ಇದ್ದಕ್ಕಿದ್ದಂತೆ ಒಂದು ದಿನ ಮಾತಾಡಲು ಆರಂಭಿಸಿಬಿಟ್ಟಳೇನೋ ಎಂಬಂತೆ ಸ್ಫುಟವಾಗಿ, ಲಯಬದ್ಧವಾಗಿ, ಸರಾಗವಾಗಿ ಮಾತನಾಡತೊಡಗಿದ ಹುಡುಗಿಯದು.
ಅಷ್ಟೇ ಲಯಬದ್ಧವಾಗಿ ಕವಿತೆ ಬರೆದಿದ್ದಾಳಾ? ಅವಳ ಉರ್ದು coupletsನತ್ತ ಇಣುಕಿ ನೋಡಿದೆ. ಅವುಗಳ ಬಗ್ಗೆ ನನ್ನ ಅಭಿಪ್ರಾಯ ಹೇಳಲಿಲ್ಲ. ಅವಳೂ ಅಭಿಪ್ರಾಯ ಕೊಡೆಂಬಂತೆ ನನ್ನೆಡೆಗೆ ನೋಡಲಿಲ್ಲ. ನಮ್ಮ ಮನೆಯ ಸಂಪ್ರದಾಯವೇ ಹಾಗೆ. ಲಲಿತೆ ಸಿತಾರ್ ಕಲಿಯುತ್ತಿದ್ದಾಳೆ; ನನ್ನೆದುರಿಗೆಂದೂ ನುಡಿಸಿಲ್ಲ. ಕರ್ಣ ಕ್ರಿಕೆಟ್ ಆಡುತ್ತಾನೆ; ನನ್ನೆದುರಿಗೆಂದೂ ಆಡಿಲ್ಲ ಅಥವಾ ಅವನು ಆಡುವುದನ್ನು ನಾನೇ ಹೋಗಿ ನಿಂತು ನೋಡಿಲ್ಲ. ಚೇತನಾ ಹಾಡುತ್ತಾಳೆ. ನನ್ನೆದುರಿಗೆ ಹಾಡುವುದಿಲ್ಲ. "ಪರ್‌ಫೆಕ್ಷನ್ ಬರುವ ತನಕ ಅಪ್ಪನೆದುರು ಹಾಡಲ್ಲ" ಅಂತ ಆಣೆ ಮಾಡಿದ್ದಾಳೆ. ಅವಳು ನಟಿಸಿದ ನಾಟಕಗಳನ್ನು ನಾನಿನ್ನೂ ನೋಡಿಲ್ಲ. ತಂದುಕೊಂಡ ಪ್ರೈಜು, ಸರ್ಟಿಫಿಕೇಟುಗಳನ್ನೂ ಅವಳು ತೋರಿಸಿಲ್ಲ. ಕರ್ಣ ಕದ್ದು ಹೋಗಿ ಸಿತಾರ್ ಕಲಿಯುತ್ತಾನೆ. ಅದು ಗೊತ್ತಾದರೂ ನಾನು ignore ಮಾಡುತ್ತೇನೆ.

ಇದೊಂಥರಾ ಉದ್ದೇಶಪೂರ್ವಕವಾಗಿ ನಾವು ಮೊದಲಿಂದಲೂ ರೂಢಿಸಿಕೊಂಡು ಬಂದ ಸಂಪ್ರದಾಯ. ಮಕ್ಕಳು ಯಾವ ಜಾಡಿಗೆ ಬೀಳುತ್ತಾರೆ, ಯಾವುದರಲ್ಲಿ ಕರಾರುವಾಕ್ಕಾಗಿ ಚಿಗಿತು ಬೆಳೆಯುತ್ತಾರೆ, ಯಾವುದರಲ್ಲಿ ಗೆಲ್ಲುತ್ತಾರೆ ಅದನ್ನು ಅವರೇ ತೀರ್ಮಾನಿಸಿಕೊಳ್ಳಲಿ. ಒಂದು ಹಂತದ ಸಾಧನೆ ಮಾಡಿದ ನಂತರವೇ ನಾವು ಅದರ ವಿಷಯಕ್ಕೆ ತಲೆ ಹಾಕೋಣ. ಸಿಗಬೇಕಾದ ಪ್ರೋತ್ಸಾಹ, ಸ್ವಾತಂತ್ರ್ಯ, ಸಲಹೆ ಅವೆಲ್ಲವೂ ಮನೆಯ ವಾತಾವರಣದಲ್ಲೇ ಅವರಿಗೆ ಸಿಗುತ್ತವೆ. ನಾನು ಮನೆಯಲ್ಲಿದ್ದರಂತೂ ನಿರಂತರವಾಗಿ ಹಿಂದಿ ಉರ್ದು ಗೀತೆಗಳು ಕಿವಿಗೆ ಬೀಳುತ್ತವೆ. ಓದಿದ ಒಳ್ಳೆಯ ಕನ್ನಡ ತೆಲುಗು ಕವಿತೆಗಳನ್ನು ಅವರ ಗಮನಕ್ಕೆ ಬರುವಂತೆ ಬಿಟ್ಟು ಹೋಗಿರುತ್ತೇನೆ. ಪತ್ರ ಬರೆದರೆ, mail ಮಾಡಿದರೆ ಅದರಲ್ಲಿ ಹೆಚ್ಚಿನ ಭಾಗ ಸಾಂಸ್ಕೃತಿಕ ವಿಷಯಗಳಿರುತ್ತವೆ, ಪತ್ರಿಕೋದ್ಯಮವಿರುತ್ತದೆ, ಸಾರ್ವಜನಿಕ ಚರ್ಚೆಗೆ ಸಂಬಂಧಿಸಿದ ಸಂಗತಿಗಳಿರುತ್ತವೆ. ವೈಯಕ್ತಿಕವಾದ ಸಂಗತಿಗಳನ್ನು ನಾವು ಎದುರಾಬದುರಾ ಕುಳಿತು ಮಾತಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಫೋನಿಗೆ ಸಿಕ್ಕರೂ ಸಾಕು. ಎಲ್ಲರೂ ಒಟ್ಟಿಗೆ ಸೇರಿದರೆ ಮಾತ್ರ ಮನೆಯ ಸೂರು ಕದಲಿ ಹೋಗುವಂತೆ ಭಯಂಕರ ಜೋಕುಗಳನ್ನು ಹೇಳಿಕೊಂಡು, ಒಬ್ಬರದೊಬ್ಬರು ಕಾಲೆಳೆದುಕೊಂಡು ಕಾಲ ಕಳೆದುಬಿಡುತ್ತೇವೆ. ತುಂಬ ವೈಯಕ್ತಿಕವಾದ ಅವರ ಸಾಧನೆ, ಪ್ರಯತ್ನ, ಯಶಸ್ಸುಗಳ ಬಗ್ಗೆ ನನ್ನ ಅಭಿಪ್ರಾಯ ಯಾವತ್ತಿಗೂ reserved.
ಅವತ್ತೂ ಅದೇ ಆಯಿತು.

ನೀನು ಬರೆದ ಉರ್ದು ಕವಿತೆಗಳು ಚೆನ್ನಾಗಿವೆ, ಚೆನ್ನಾಗಿಲ್ಲ ಎಂದು ನಾನು ಹೇಳಲಿಲ್ಲ. ಸರಿಯಾಗಿ ಇದೇ ವಯಸ್ಸಿನಲ್ಲಿ, ಹೀಗೇ ಮೊದಲ ಬಿ.ಎ ಓದುತ್ತಿರುವಾಗಲೇ ಅಲ್ಲವೇ ನಾನು ಉರ್ದು ಕವಿತೆಗಳನ್ನು ಬರೆಯುವ ಪ್ರಯತ್ನ ಮಾಡಿದ್ದು ಅಂತ ನೆನಪಿಸಿಕೊಂಡೆ. ಬಳ್ಳಾರಿಯಂತಹ ಊರಿನಲ್ಲಿ ನನಗೆ ಒಬ್ಬೇ ಒಬ್ಬ ಉರ್ದು ಕವಿಯ, ಉರ್ದು ಸಾಹಿತ್ಯಾಸಕ್ತನ ಸಾಹಚರ್ಯ ದೊರಕುತ್ತಿರಲಿಲ್ಲ. ಹಿರಿಯ ಕಮ್ಯುನಿಸ್ಟ್ ವಕೀಲ ಅರವಿಂದ ಮಳೆಬೆನ್ನೂರ್ ಮಾತ್ರ ಒಮ್ಮೆ ಕರೆದು ಗಾಲಿಬ್ ಮತ್ತು ಫೈಜ್ ಅಹ್ಮದ್ ಫೈಜ್‌ರ ಕವಿತೆಗಳ ಕುರಿತಾದ ಎರಡು ಪುಸ್ತಕಗಳನ್ನು ಕೊಟ್ಟಿದ್ದರು. ಅವು ಕೂಡ ನನಗೆ ಅರ್ಥವಾಗದಂತಹ ಕಬ್ಬಿಣದ ಉರ್ದುವಿನಲ್ಲಿದ್ದವು. ನನ್ನೊಂದಿಗೆ ಓದುತ್ತಿದ್ದ ಮುಸಲ್ಮಾನ್ ಗೆಳೆಯರಿಗೆ ಬಳ್ಳಾರಿಯ "ತುರಕ" ಭಾಷೆ ಬರುತ್ತಿತ್ತೇ ಹೊರತು; ಅವರಿಗೆ ಉರ್ದು ನನಗಿಂತ ತುಟ್ಟಿ. ಅವರಿಗೆ ಹೋಲಿಸಿಕೊಂಡರೆ ನಾನೇ ಒಳ್ಳೆಯ ಉರ್ದು ಮಾತನಾಡುತ್ತಿದ್ದೆ. ಅಂಥ ಸಂದರ್ಭದಲ್ಲಿ ಏನು ಬರೆದನೋ, ಹೇಗೆ ಬರೆದೆನೋ ಗೊತ್ತಿಲ್ಲ. ಒಟ್ಟು ಮುನ್ನೂರು ಉರ್ದು ಕವಿತೆಗಳನ್ನು ಬರೆದಿಟ್ಟೆ. "ಟೂಟಾಜಾಮ್‌" ಎಂಬ ಕಾವ್ಯನಾಮ ಇಟ್ಟುಕೊಂಡಿದ್ದೆ. ಅದರರ್ಥ ಒಡೆದು ಹೋದ ಮಧುಪಾತ್ರೆ! ಕೆಲವರು ಅದನ್ನು ಗೇಲಿ ಮಾಡಿ ಫಟಾ ಪಾಯಿಜಾಮ್ (ಹರಿದುಹೋದ ಪಾಯಜಾಮಾ) ಅನ್ನುತ್ತಿದ್ದರು. ಅವರಿಗೆ ಅಷ್ಟಿಷ್ಟು ಉರ್ದು ಬರುತ್ತಿತ್ತು. ಆದರೆ ಕವಿತೆ ಆಸ್ವಾದಿಸುವ ಬುದ್ಧಿ, ಸಹನೆ ಎರಡೂ ಇರಲಿಲ್ಲ. ಒಬ್ಬ ಅಮ್ಮ ಮಾತ್ರ ನನ್ನ ಉರ್ದು ಕವಿತೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಳು. ಆಕೆಗೆ ಹಿಂದಿ ಬರುತ್ತಿತ್ತಾದ್ದರಿಂದ ಅವು ಅರ್ಥವಾಗುತ್ತಿದ್ದವು. ಎರಡು ಉತ್ತೇಜನದ ಮಾತುಗಳನ್ನಾಡುತ್ತಿದ್ದಳು. ಮುಸ್ಲಿಂ ಕೇರಿಯ ಒಬ್ಬ ಗುಪ್ತ ಗೆಳತಿಯ ಹೊರತಾಗಿ, ನನ್ನ ಉರ್ದು ಕವಿತೆಗೆ ಬೇರೆ ಶ್ರೋತೃಗಳೇ ಇರಲಿಲ್ಲ. ಅದು ಕಾಡ ಬೆಳದಿಂಗಳು.

"ನೋಡು ಬಾನೀ, ನನ್ನ ಕಲೆಕ್ಷನ್‌ನಲ್ಲಿ ಒಂದಷ್ಟು ಒಳ್ಳೇ ಉರ್ದು ಕವಿತಾ ಸಂಕಲನಗಳಿವೆ. ನಾಲ್ಕು ರೆಟ್ಟೆಗಾತ್ರದ ಉತ್ತಮ ಡಿಕ್ಷನರಿಗಳಿವೆ. ಒಂದು ಸಲ ಅವುಗಳನ್ನು ಓದುವ ಪ್ರಯತ್ನ ಮಾಡು. ಬರವಣಿಗೆಯೇ ನಿನ್ನ ಬದುಕಿನ ಮುಖ್ಯ ಮಾಧ್ಯಮವಾಗುತ್ತೆ ಅನ್ನಿಸಿದರೆ ಪತ್ರಿಕೋದ್ಯಮಕ್ಕೆ ಬರಬೇಡ. Live with the poetry'' ಅಂದೆ. ಆಮೇಲೆ ಎಂದೋ ಕೇಳಿ ಮರೆತ ಉರ್ದು ಶಾಯರಿಯೊಂದು ನೆನಪಾಗಿ ಅದನ್ನವಳಿಗೆ ಹೇಳಿದೆ.
"ಚಂದ್ ಕಲಿಯಾಂ ನಾಷಾದ್ ಕೆ
ಚುನ್‌ಕರ್ ಮುದ್ದತೇ ಮಹಿವಾಸ್
ರೆಹತಾ ಹೂಂ...
ತುಝ್‌ಸೆ ಮಿಲ್‌ನಾ ಖುಷೀಕಿ
ಬಾತ್ ಸಹೀ...
ಮಿಲ್‌ಕರ್ ಭೀ ಉದಾಸ್ ರೆಹತಾ ಹೂಂ!"
ಬಾನಿ ಇಷ್ಟಗಲ ಕಣ್ಣು ಬಿಟ್ಟುಕೊಂಡು ನನ್ನನ್ನೇ ನೋಡುತ್ತಿದ್ದಳು. "ಒಂದಷ್ಟು ನೋವಿನ ಹೂವುಗಳನ್ನಾರಿಸಿಕೊಂಡು ಎಷ್ಟೋ ಕಾಲ ದುಃಖಿತನಾಗಿರುತ್ತೇನೆ. ನಿನ್ನನ್ನು ಭೇಟಿಯಾಗುವುದು ಸಂತಸದ ಸಂಗತಿಯೇನೋ ನಿಜ; ಭೇಟಿಯ ನಂತರವೂ ನಾನು ದುಃಖಿತನಾಗಿರುತ್ತೇನೆ" ಎಂಬ ಭಾವಾರ್ಥದ ಉರ್ದು ಶಾಯರಿ ಅದು. ಬಾನಿ ಅದನ್ನು ಕೇಳಿ ಬೆರಗಾದಂತಿದ್ದಳು. ಈ ಮಟ್ಟದ ಕವಿತೆ ನಿಲುಕಬೇಕೆಂದರೆ ಅದೆಷ್ಟು ವರ್ಷಗಳ ಉರ್ದು ತಾಲೀಮು ಬೇಕೋ?

ಆಮೇಲೆ ನಾನು ಅವಳೊಂದಿಗೆ ಆ ಬಗ್ಗೆ ಮಾತನಾಡಲು ಹೋಗಲಿಲ್ಲ. ಅವಳಿಗೆ ಒದಗಿಸಬೇಕಾದ ಪುಸ್ತಕಗಳನ್ನೂ, ಕೆಸೆಟ್ಟುಗಳನ್ನೂ ಒದಗಿಸಿ ಸುಮ್ಮನಾಗುವ ತೀರ್ಮಾನಕ್ಕೆ ಬಂದೆ. ನನಗೆ ನೆನಪಿದೆ: ನಾನು ಉರ್ದು ಓದುತ್ತ ಓದುತ್ತ ತೆಲುಗಿಗೆ migrate ಆದೆ. ಸಾಹಿತ್ಯಿಕವಲ್ಲದ ಇಂಗ್ಲಿಷು ಪುಸ್ತಕಗಳನ್ನು ಓದಿಕೊಂಡೆ. ಎಲ್ಲೋ ಒಂದು ಎಳೆ, ಒಂದು ಬೆಳಕು, ಒಂದು ದಿಕ್ಕು ಸಿಕ್ಕುಬಿಟ್ಟಂತಾಯಿತು. ೧೯೭೪-೭೫ರಲ್ಲಿ ಉರ್ದು ಕವಿತೆ ಬರೆಯಲು ಆರಂಭಿಸಿದವನು ೧೯೭೮ರ ಹೊತ್ತಿಗೆ, ನಾನು ಯಾವತ್ತೂ ಶಾಲೆಯಲ್ಲಿ ಒಂದು ಸಬ್ಜೆಕ್ಟ್ ಆಗಿ ಕಲಿಯದಿದ್ದ ಕನ್ನಡದಲ್ಲಿ ಮೊಟ್ಟ ಮೊದಲ ಕಿರುಗತೆ ಬರೆದುಬಿಟ್ಟಿದ್ದೆ.

ನನಗೆ ಉರ್ದು ಒಲಿಯಿತಾ, ಒಲಿಯಲಿಲ್ಲವಾ? ತೆಲುಗು ನೆನಪಿಗಿದೆಯಾ? ಮರೆತೇ ಹೋಯಿತಾ? ನನ್ನ ಇಂಗ್ಲಿಷು ಅದರ ಹಣೆಯಬರಹ ಎಷ್ಟರ ಮಟ್ಟಿನದು? ಉಹುಂ, ಇವ್ಯಾವೂ ಪ್ರಶ್ನೆಗಳೇ ಅಲ್ಲ. ಒಟ್ಟಿನಲ್ಲಿ ಒಂದು ಭಾಷೆ ಒಲಿಯಬೇಕು. ಬರವಣಿಗೆ ಬದುಕಿನ passoin ಆಗಬೇಕು. ಅದರ ಹೊರತಾಗಿ ಮತ್ತೇನೂ ನನ್ನಿಂದ ಮಾಡಲಾಗದು ಎಂಬ ತೀರ್ಮಾನಕ್ಕೆ ಬರುವಂತಾಗಬೇಕು. ಬರೆಯದೆ ಇರಲು ಇನ್ನು ಸಾಧ್ಯವೇ ಇಲ್ಲ ಎಂಬ ತುಡಿತ ಹುಟ್ಟಿಕೊಳ್ಳಬೇಕು. ಮನಸು ಕವಿಯಾಗಬೇಕು.

ಆಗ ಶುರುವಾಗುತ್ತದೆ ಬರವಣಿಗೆ, ಒಂದು ಭಾಷೆ ಒಲಿದ ನಂತರ ಜಗತ್ತಿನ ಮತ್ಯಾವುದೇ ಭಾಷೆ ಕೂಡ ಅಷ್ಟೇ ಸಲೀಸಾಗಿ ಒಲಿಯುತ್ತದೆ. ಭಾಷೆಗಳ ಗೊಡವೆಗೆ ಹೋಗುವ ಮುನ್ನ ಅತ್ಯಂತ ಸಮೃದ್ಧ ಭಾಷೆಯಾದ ಮೌನ ನಮಗೆ ಒಲಿಯಬೇಕು. ಆ ಮೌನದಲ್ಲಿ ಮಾತಾಡಿಕೊಳ್ಳಬೇಕು. ಅದು ಬಾನಿಗೆ ಸಾಧ್ಯವಾ?

ಒಬ್ಬ ಶುದ್ಧ ಅಂತಃಕರಣದ ಹುಡುಗಿಗೆ ಕವಿತೆಯೂ ಒಲಿದರೆ, ಯಾವತ್ತಿಗಾದರೂ ಅದು ಅವಳ ಮಾತು ಕೇಳಿದರೆ ಇನ್ನಷ್ಟು ಸಂತೋಷ ಪಟ್ಟೇನು ಅಂದುಕೊಂಡೆ.
ಇದನ್ನೆಲ್ಲ ಅವಳಿಗೇ ಬರೆದು ತಿಳಿಸಬೇಕಿತ್ತು.
ಅಂಥ ಮಗಳು ನಿಮಗೂ ಇದ್ದಾಳು ಅನ್ನಿಸಿ ಪತ್ರಿಕೆಯ ತೆಕ್ಕೆಯಲ್ಲಿಟ್ಟು ಕೊಡುತ್ತಿದ್ದೇನೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books