Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹಾಗೆ ಒಂದು ಗೀಳು ಹುಟ್ಟಿಕೊಳ್ಳದೆ ಇದ್ದಿದ್ದರೆ ಇಷ್ಟೆಲ್ಲ ಆಗುತ್ತಿದ್ದರಾ ಕವಿ ಗುಲ್ಜಾರ್?

ತುಂಬ ಖುಷಿಯಾಗಿದೆ.


‘ಫಾಲ್ಕೆ’ ಪ್ರಶಸ್ತಿ ನನಗೇ ಬಂದಷ್ಟು ಎಕ್ಸೈಟ್ ಆಗಿದ್ದೇನೆ. ಗುಲ್ಜಾರ್ ನನ್ನ ಅತ್ಯಂತ ಪ್ರೀತಿಯ ಕವಿ. ಬಹುಶಃ ಗಾಲಿಬ್, ಫೈಜ್ ಅಹ್ಮದ್ ಫೈಜ್, ಫರಾಜ್, ಸಾಹಿರ್ ಲುಧಿಯಾನವಿ ಮುಂತಾದವರ ಸಾಲಿಗೆ ಇನ್ನೊಬ್ಬರನ್ನು ಸೇರಿಸುವುದೇ ಆದರೆ ಅದು ಗಾಲಿಬ್ ಸಾಹೇಬರ ಹೆಸರು. ಇದು ನನ್ನ ತಾರುಣ್ಯದ ದಿನಗಳಲ್ಲಿ ತಗುಲಿಕೊಂಡ ‘ಹಿತರೋಗ’. ತುಂಬ ಚಿಕ್ಕವಯಸ್ಸಿನಲ್ಲೇ ನನಗೆ ಉರ್ದು ಗಂಟುಬಿತ್ತು. ನಿಮಗೂ ಗೊತ್ತು. ನಾನು ತೆಲುಗು ಬ್ರಾಹ್ಮಣ. ಮನೆಯಲ್ಲಿ ತೆಲುಗನ್ನೇ ಮಾತನಾಡುತ್ತಿದ್ದೆವು, ನಾನು ಮತ್ತು ಅಮ್ಮ. ಕಳೆದ ವರ್ಷ ತೀರಿಕೊಂಡ ನನ್ನ ಸೋದರ ಮಾವ ಮತ್ತು ನಾನು ಕೊನೆ ಕೊನೆಯ ದಿನಗಳಲ್ಲೂ ತೆಲುಗನ್ನೇ ಮಾತನಾಡುತ್ತಿದ್ದೆವು. ಇದಕ್ಕೆ ಸರಿಯಾಗಿ ಹುಟ್ಟಿ-ಬೆಳೆದದ್ದೆಲ್ಲ ಬಳ್ಳಾರಿಯಲ್ಲೇ ಅಲ್ವಾ? ಕೇವಲ ಎರಡು ವರ್ಷ ತುಮಕೂರಿನ ನನ್ನ ಅಣ್ಣನ ಮನೆಯಲ್ಲಿ ಓದಲಿಕ್ಕೆ ಅಂತ ಇದ್ದುದು ಬಿಟ್ಟರೆ, ನನ್ನ ಇಡೀ ವಿದ್ಯಾಭ್ಯಾಸ ಬಳ್ಳಾರಿಯಲ್ಲೇ ಆಯಿತು. ಅಲ್ಲಿ ಮನೆಯ ಭಾಷೆ ಕನ್ನಡವೇ ಆಗಿದ್ದರೂ ಹೊಸ್ತಿಲು ದಾಟಿ ಆಚೆಗೆ ಬಿದ್ದರೆ ಗೆಳೆಯರೆಲ್ಲ ತೆಲುಗೇ ಮಾತನಾಡುತ್ತಿದ್ದೆವು. ಈಗಲೂ ಪರಿಸ್ಥಿತಿ ಹಾಗೇ ಇದೆ. ಇನ್ನೇನು? ಜೊತೆಗಿರುವವರ ಪೈಕಿ ಯಾರಿಗಾದರೂ ತೆಲುಗು ಬರುವುದೇ ಇಲ್ಲ ಅಂತಾದರೆ ಆಗ ಮಾತ್ರ ಕನ್ನಡ ಮಾತನಾಡುತ್ತಿದ್ದೆವು. ಬರೋಬ್ಬರಿ ಪ್ರೈಮರಿ ಸ್ಕೂಲ್ ದಾಟುವವರೆಗೂ, ಅಂದರೆ ಐದನೆಯ ತರಗತಿಯ ತನಕ ನಾನು ಓದಿದ್ದು ತೆಲುಗು ಮೀಡಿಯಂನಲ್ಲೇ. ಹೈಸ್ಕೂಲಿನಲ್ಲಿ ಇಂಗ್ಲಿಷ್ ಮೀಡಿಯಮ್ಮು. ಪಿಯುಸಿಗೆ ಕಾಲಿಟ್ಟ ತಕ್ಷಣ ಸೆಕೆಂಡ್ ಲ್ಯಾಂಗ್ವೇಜ್ ಅಂತ ನಾನು ಆಯ್ಕೆ ಮಾಡಿಕೊಂಡದ್ದು: ಹಿಂದಿ. ಆಗ ತ್ರಿಭಾಷಾ ಸೂತ್ರ ಇರಲಿಲ್ಲ. ಇದ್ದುದು ಎರಡೇ ಭಾಷೆ. ಮೊದಲನೆಯದು ಇಂಗ್ಲಿಷ್. ಎರಡನೆಯದು ಹಿಂದಿ ಅಥವಾ ಕನ್ನಡ. ನಾನು ತೆಲುಗಿನಲ್ಲೇ ಓದಿಕೊಂಡವನಾದ್ದರಿಂದ ಅಮ್ಮ ನನಗೆ ಗೊಂದಲವಾಗದಿರಲಿ ಅಂತ ಹಿಂದಿ ಮೀಡಿಯಂನಲ್ಲಿ ಓದಲಿಕ್ಕೆ ಹೇಳಿದ್ದಳು. ಶುದ್ಧ ಬ್ರಾಹ್ಮಣರ ಹಾಗೆ ಆಕೆ ಸಂಸ್ಕೃತ ಮೀಡಿಯಂಗೆ ಸೇರಿಸಲಿಲ್ಲ. ಹಾಗೆ ಬಿ.ಎ., ಮುಗಿಸಿ ಎಂ.ಎ., ವ್ಯಾಸಂಗಕ್ಕೆ ಬಂದೆನಲ್ಲ? ಆಗ ಇದ್ಯಾವುದರ ಗೊಡವೆಯೇ ಇಲ್ಲದೆ, ಕೇವಲ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ಓದಿ ಯೂನಿವರ್ಸಿಟಿಯಿಂದ ಹೊರಬಿದ್ದೆ. ನಿಮಗೆ ಆಶ್ಚರ್ಯವಾಗಬಹುದು: ನಾನು ಬಳ್ಳಾರಿಯ ಕಾಲೇಜಿನಲ್ಲಿ ಇತಿಹಾಸ ಕಲಿಸಲು ನಿಂತರೆ ಆಗ ನನ್ನೆದುರಿಗೆ ಮೂರು ಗುಂಪುಗಳಿರುತ್ತಿದ್ದವು. ಮೊದಲನೆಯದು ಇಂಗ್ಲಿಷ್ ಅರ್ಥ ಮಾಡಿಕೊಳ್ಳಬಲ್ಲ ಹುಡುಗಿಯರದು. ಒಂದಷ್ಟು ಜನ ಕನ್ನಡದಲ್ಲಿ ಓದಿ ಬಂದಿರುತ್ತಿದ್ದರು. ಮೂರನೆಯ ಗುಂಪು ಮುಸಲ್ಮಾನರದು. ತುಂಬ ಜನ ಮುಸ್ಲಿಂ ಹುಡುಗಿಯರು ಆಗಿನ ವುಮೆನ್ಸ್ ಕಾಲೇಜಿಗೆ ಬರುತ್ತಿದ್ದರು. ಅವರಲ್ಲಿ ಅನೇಕರಿಗೆ ಕನ್ನಡ ಬಾರದು. ಇಂಗ್ಲಿಷ್, ಇದ್ದದ್ದೂ ದುಬಾರಿ. ತುಂಬ ಕ್ಲಿಷ್ಟ ಅನ್ನಿಸಿದ ಛಾಪ್ಟರುಗಳನ್ನು ಕೈಗೆತ್ತಿಕೊಂಡಾಗ ಮೊದಲು ಇಂಗ್ಲಿಷಿನಲ್ಲಿ, ನಂತರ ಕನ್ನಡದಲ್ಲಿ, ಅದಾದಮೇಲೆ ಉರ್ದುವಿನಲ್ಲಿ ಪಾಠ ಮಾಡುತ್ತಿದ್ದೆ. ಇದೆಲ್ಲದರ ಮಧ್ಯೆ ನನಗೆ ಉರ್ದು ಹೇಗೆ ಬರುತ್ತಿತ್ತು ಅಂತ ನನ್ನ ಸಹೋದ್ಯೋಗಿಗಳೇ ಕೇಳುತ್ತಿದ್ದರು. ಅದಕ್ಕೆ ಕಾರಣವಿತ್ತು: ಹುಟ್ಟಿದ್ದು ಬ್ರಾಹ್ಮಣ ಕೇರಿಯಲ್ಲೇ ಆದರೂ ಬೆಳೆದದ್ದು ಮಸ್‌ಜಿದ್ ಗಲ್ಲಿ, ಗ್ಲಾಸ್ ಬಜಾರ್ ಮತ್ತು ಪಿಂಜಾರ ಓಣಿಯಲ್ಲಿ. ನನಗೆ ಮೊದಲಿಂದಲೂ ಬ್ರಾಹ್ಮಣರಿಗಿಂತ ಹೆಚ್ಚಾಗಿ ಮುಸ್ಲಿಮರ, ಬೇಡರ, ವಾಲ್ಮೀಕಿ ಜನಾಂಗದವರ ಹಾಗೂ ಕುರುಬರದೇ ಸ್ನೇಹ. ತುಂಬ ಚಿಕ್ಕ ವಯಸ್ಸು-ಅಂದರೆ ಆರೆಂಟು ವರ್ಷದವನಿರುವಾಗಲೇ ನನಗೆ ಕೋಳಿ ಮೊಟ್ಟೆ, ಮಾಂಸದ ರುಚಿ ಹತ್ತಿತ್ತು. ಅಮ್ಮ ಕೂಡ “ಈ ಮುಸಲ್ಮಾನರ ಅಥವಾ ಪಿಂಜಾರರ ಸ್ನೇಹ ಮಾಡಬೇಡ" ಅಂತ ಯಾವತ್ತೂ ಹೇಳಿದವಳಲ್ಲ. ಮನೆಯ ಕಂಪೋಂಡು ದಾಟಿದರೆ ಬೇಡರ ಗುಂಪು ಇದಿರಾಗುತ್ತಿತ್ತು. ಅದು ಬಿಟ್ಟರೆ ಸೈಕಲ್ ಹತ್ತಿಕೊಂಡು ನೇರವಾಗಿ ನಾನು ಹೋಗುತ್ತಿದ್ದುದು ಮುಸಲ್ಮಾನರ ಕೇರಿಗೇ. ಮುಸ್ಲಿಮರ ಇಡೀ ಕೇರಿಯಲ್ಲಿ ನಾನು ಚಿರಪರಿಚಿತ. ಆ ಹೆಣ್ಣು ಮಕ್ಕಳು ಇವತ್ತಿಗೂ ಇದಿರಾದರೆ “ಕ್ಯಾ ರವೀ ಭಾಯೀ" ಅಂತಲೇ ಮಾತನಾಡಿಸುತ್ತಾರೆ. ಆ ಕಡೆಯ ಮುಸ್ಲಿಮರಲ್ಲಿ ರಮಜಾನ್ ಮತ್ತು ಬಕ್ರೀದ್ ಅಲ್ಲದೆ ಇನ್ನೂ ಒಂದು ಹಬ್ಬವಿದೆ: ‘ಗ್ಯಾರವೀ’ ಅಂತ. ಅದು ಹನ್ನೊಂದು ದಿನಗಳ ಹಬ್ಬ. ಪ್ರತಿನಿತ್ಯ ಒಬ್ಬರು ತಪ್ಪಿದರೆ ಒಬ್ಬರ ಮನೆಯಲ್ಲಿ ಔತಣ. Actually, ಅದು ಬಡವರಿಗೆ ಊಟ ಕೊಡುವ ಪರಿಪಾಠದ ಹಬ್ಬ. ಜೊತೆಗೆ ಗೆಳೆಯರು, ನೆಂಟರಿಷ್ಟರನ್ನೂ ಊಟಕ್ಕೆ ಕರೆಯುವ ವಾಡಿಕೆ. ಅಕ್ಷರಶಃ ಆ ಗ್ಯಾರವೀ ಹಬ್ಬದ ಹನ್ನೊಂದೂ ದಿನಗಳಲ್ಲಿ ನಾನು ನಮ್ಮ ಮನೆಯಲ್ಲಿ ಊಟವನ್ನೇ ಮಾಡುತ್ತಿರಲಿಲ್ಲ. ಅದ್ಭುತವಾದ ಬಿರಿಯಾನಿ ಅಲ್ಲಿ ಕಾಯುತ್ತಿದ್ದರೆ, ಇಲ್ಲಿ ತಿಳಿಸಾರು, ಮಜ್ಜಿಗೆ ಅನ್ನ ಯಾರು ತಿಂತಾರೆ? “ಏಯ್, ಎ ಬೊಮ್ಮನ್ ಆಗಯಾ. ಇಸ್ಕೋ ಅಂದರ್ ನಹೀ ಬುಲಾನಾ... ಅಂದರ್ ಬುಲಾಯಾ ಬೋಲೆ ತೋ ಕಡಾಯ್ ಮೇ ಬೈಠ್ ಜಾಯೇಗಾ!" (ಏ, ಈ ಬ್ರಾಹ್ಮಣ ಬಂದ, ಅಡುಗೆ ಮನೆಯಲ್ಲಿ ಬಿಟ್ಕೋಬೇಡ. ಬಿಟ್ಟರೆ ಸೀದಾ ಹೋಗಿ ಬಿರಿಯಾನಿಯ ಕಡಾಯ್ ಅಥವಾ ಹಂಡೆಯಲ್ಲೇ ಕೂತು ಬಿಡ್ತಾನೆ) ಅಂತ ಆ ಮನೆಯ ಗಂಡಸರು ತಮಾಷೆ ಮಾಡುತ್ತಿದ್ದರು. ಅಂಥ ಗಾಢವಾದ ಸ್ನೇಹ ನನಗಿತ್ತು.

ನನಗೆ ಒಂದು ಅನುಮಾನ, ಈ ನೆರಿಗೆ ಲಂಗದ ಹುಡುಗಿಯೊಂದಿಗೆ affair ಆರಂಭವಾಗುವುದಕ್ಕೆ ಮುಂಚೆ ಒಬ್ಬ ಮುಸ್ಲಿಂ ಹುಡುಗಿಯ ಮೇಲೆ crush ಉಂಟಾಗಿತ್ತಾ? may be. ಅವಳು ಮಸ್‌ಜಿದ್ ಗಲ್ಲಿಯ ಹಿಂಬದಿಯಲ್ಲಿ ಅಮಲೀ ಬಾಗ್‌ನಲ್ಲಿ ವಾಸಕ್ಕಿದ್ದಳು. ಅವಳಿಗೆ ಮೂರು-ನಾಲ್ಕು ಪ್ರೇಮಪತ್ರಗಳನ್ನೂ ಬರೆದೆ. ಉಹುಂ, ಹುಡುಗಿ respond ಮಾಡಲಿಲ್ಲ. ಆದರೆ ನಾನು ಬೆನ್ನು ಬಿಡಬೇಕಲ್ಲ? ಪ್ರತಿನಿತ್ಯ ಅವಳ ಮನೆಯ-ಹೈಸ್ಕೂಲಿನ ದಾರಿಗುಂಟ ಪೆರೇಡ್ ಮಾಡುತ್ತಲೇ ಇದ್ದೆ. ಆಗ ಒಂದು ಯೋಚನೆ ಬಂತು: ನಾನು ಪ್ರೇಮಪತ್ರ ಬರೆದದ್ದೆಲ್ಲ ಕನ್ನಡದಲ್ಲಿ. ಅವಳಿಗೆ ಕನ್ನಡ ಬರುವುದಿಲ್ಲವೇನೋ? ಯಾಂವ ಬಲ್ಲ? ಹೀಗಾಗಿ romatic ಆದ moodನಲ್ಲಿ ಅವಳಿಗೆ ಉರ್ದುವಿನಲ್ಲಿ ಪತ್ರ ಬರೆದೆ. ನನಗೆ ಉರ್ದು ಲಿಪಿ ಬರುವುದಿಲ್ಲ. ಹತ್ತಾರು ಬಾರಿ ಕಲಿಯುವ ಪ್ರಯತ್ನ ಮಾಡಿದೆನಾದರೂ ಆ ಭಾಷೆ ಒಲಿಯಲಿಲ್ಲ. Well, ಉರ್ದು ಪತ್ರವನ್ನೇ ಹಿಂದಿಯಲ್ಲಿ ಬರೆಯೋಣ ಅಂದುಕೊಂಡು ಆ ಪ್ರಯತ್ನವನ್ನೂ ಮಾಡಿದೆ. ಮುಂದೆ ಕೆಲವು ದಿನಗಳಲ್ಲಿ ಗೊತ್ತಾಯಿತು: ಅವಳದ್ದು ಕನ್ನಡ ಮೀಡಿಯಂ! ಅಷ್ಟರಲ್ಲಿ ನೆರಿಗೆಯ ಲಂಗದ ಹುಡುಗಿ ನನ್ನನ್ನು ಇಡಿಯಾಗಿ ಆಕ್ರಮಿಸಿಕೊಂಡು ಬಿಟ್ಟಳು. ಆ ಮುಸ್ಲಿಂ ಹುಡುಗಿ ಎಲ್ಲಿಗೆ ಹೋದಳೋ, ಅವಳಿಗೆ ಮದುವೆಯಾಯಿತೋ-ಒಂದೂ ಗೊತ್ತಾಗಲಿಲ್ಲ. ಅವಳ ಹೆಸರು ಮತ್ತು ಆಗಾಗ ಸರಿದ ಬುರುಖಾ ಹಿಂದಿನ ಮುಖ ಮಾತ್ರ ಈಗ ನೆನಪಿವೆ. ನೆರಿಗೆ ಲಂಗದ ಹುಡುಗಿ ‘ಆ ಕಾಲಕ್ಕೆ’ ಅಂತ ಹೇಳುವುದಾದರೆ, ನಾನು ಅಂದುಕೊಂಡಿದ್ದಕ್ಕಿಂತ ಸುಲಭವಾಗಿಯೇ ನನಗೆ ಒಲಿದಳು. ಇವಳೇನೋ ಸಲೀಸಾಗಿ ಒಲಿದಳು. ಆದರೆ ಉರ್ದುವಿನಿಂದ ಬಿಡುಗಡೆ ಸಿಗಬೇಕಲ್ಲ? ಇವತ್ತಿಗೂ ಸಿಕ್ಕಿಲ್ಲ! ಬಳ್ಳಾರಿ ಅಥವಾ ಅಕ್ಕಪಕ್ಕದ ಊರುಗಳ ಮುಸಲ್ಮಾನರು ಮಾತನಾಡುವುದು ನಿಜಕ್ಕೂ ಉರ್ದು ಅಲ್ಲ: ಅದು ‘ದಖ್ಖನೀ’ ಭಾಷೆ ಅಂತ ಮುಂದೆ ನನಗೆ ಗೊತ್ತಾಯಿತು.

ಹಾಗಾದರೆ ಅಚ್ಚ ಉರ್ದು ಯಾವುದು? ಈ ಸಮಸ್ಯೆ ಇವತ್ತಿಗೂ ನನ್ನೊಬ್ಬನನ್ನೇ ಅಲ್ಲ: ಅನೇಕರನ್ನು ಕಾಡುತ್ತಿದೆ. ಕೆಲವರು ಲಖನೌದ ಉರ್ದು ಮಾತ್ರ ಸರಿಯಾದ ಶ್ರೇಷ್ಠ ಉರ್ದು ಅನ್ನುತ್ತಾರೆ. ಅಲ್ಲವೇ ಅಲ್ಲ, chaste ಉರ್ದು ಇರುವುದು ದಿಲ್ಲಿಯಲ್ಲಿ ಅನ್ನುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಮೊಟ್ಟಮೊದಲ ಗಜಲ್ ಬರೆಯಲ್ಪಟ್ಟದ್ದು ಇವೆರಡೂ ಊರುಗಳಲ್ಲಿ ಅಲ್ಲ: ಅದನ್ನು ಬಿಜಾಪುರದಲ್ಲಿ ಬರೆಯಲಾಯಿತು. ಅದಕ್ಕೆ ಕಾರಣವೂ ಇದೆ. ಬಿಜಾಪುರ, ಬೀದರ್, ಹೈದರಾಬಾದ್ ಮುಂತಾದ ಸೀಮೆಗಳ ಮೇಲೆ ಅಧಿಪತ್ಯ ಸಾಧಿಸಿದ ಮುಸಲ್ಮಾನರು ಮೂಲತಃ ಇರಾನ್‌ನಿಂದ ರಾಜ್ಯ ಅರಸುತ್ತಾ ಬಂದವರು. ಆ ಸುಲ್ತಾನರು ರಾಜ್ಯವನ್ನೇನೋ ಗೆದ್ದರು. ಉದಾಹರಣೆಗೆ ವಿಜಯನಗರದ ಅರಸರನ್ನು ಸೋಲಿಸಿದಂತೆ, ಅವರೂ ಮುಂಚೆಗಿದ್ದ ಸಣ್ಣಪುಟ್ಟ ಅರಸರನ್ನೂ, ಪಾಳೆಯಗಾರರನ್ನೂ ಸೋಲಿಸಿ ತಮ್ಮ ‘ಸಲ್ತನತ್’ ಅಡಳಿತ ಸ್ಥಾಪಿಸಿದರು. ಗೋಲ್ಕೊಂಡದ ಅರಸರು, ಬಹಮನಿಗಳು, ಆದಿಲ್‌ಶಾಹಿಗಳು-ಇವರೆಲ್ಲರೂ ಇರಾಣದಿಂದ ಸಾಮ್ರಾಜ್ಯಗಳನ್ನು ಸ್ಥಾಪಿಸುತ್ತಾ ಬಂದರು. ಕೇವಲ ರಾಜ್ಯ ಗೆದ್ದರೆ ಸಾಕೇ? ಆಡಳಿತ ನಡೆಸಬೇಕಲ್ಲ? ಅದಕ್ಕೇ ಒಂದು common language ಬೇಕು. ಪ್ರಜೆಗಳೆಲ್ಲ ಕನ್ನಡ-ತೆಲುಗು ಮಾತನಾಡುತ್ತಿದ್ದರು. ಅವರಿಗೆಲ್ಲ ಪರ್ಷಿಯನ್ ಭಾಷೆ ಕಲಿಸಲು ಹೊರಟರೆ ಅದು ಸಾಧ್ಯವಾಗದ ಮಾತು. ಹೀಗಾಗಿ ಒಂದು alternative ಭಾಷೆಯನ್ನು ರೂಢಿಗೆ ತರಬೇಕು. ಆ ಉದ್ದೇಶವಿಟ್ಟುಕೊಂಡು ಹೊರಟಾಗಲೇ ಈ ‘ದಖ್ಖನೀ’ ಭಾಷೆ ಹುಟ್ಟಿಕೊಂಡಿತು. ಅದು Deccan ಪ್ರಾಂತ್ಯವಾದ್ದರಿಂದ ಅದಕ್ಕೆ ‘ದಖ್ಖನೀ’ ಅಂತ ಹೆಸರಿಟ್ಟರು. ಅದು ರೂಢಿಗೆ ಬಂತು. ಇಷ್ಟಾಗಿ ಲಖನವೀ ಉರ್ದು, ಶುದ್ಧ ದಿಲ್ಲಿಯ ಉರ್ದುವಾದರೂ ಎಲ್ಲಿತ್ತು? Once again, ದಂಡೆತ್ತಿ ಬಂದು ಭಾರತೀಯ ಅರಸರನ್ನು ಸೋಲಿಸಿದ ಮೊಘಲ್ ದೊರೆಗಳು ಮಾಡಿದ್ದೂ ಅದನ್ನೇ. ಅವರು ಬೇರೆಯೇ ತೆರನಾದ ಉರ್ದು ರೂಪಿಸಿದರು. ಅದನ್ನು ಇವತ್ತಿಗೂ ‘ಬಾಜಾರೀ ಭಾಷಾ’ ಅಂತ ಕರೆಯುವವರೂ ಇದ್ದಾರೆ. ಮತ್ತೆ ಕೆಲವರು ಅದನ್ನು ‘ಲಷ್ಕರೀ’ ಭಾಷಾ ಅನ್ನುತ್ತಾರೆ. ಅಂದರೆ ಅದು ಎಲ್ಲಿಂದಲೋ readymade ಆಗಿ ಭಾರತಕ್ಕೆ ಬಂದ ಭಾಷೆಯಲ್ಲ. ಬಜಾರಿನಲ್ಲಿ ವ್ಯವಹರಿಸುವಾಗ ಅಥವಾ ಸೈನಿಕರೊಂದಿಗೆ ಮಾತನಾಡುವಾಗ ಬಾಬರ್, ಹುಮಾಯೂನ್, ಅಕ್ಬರ್, ಮುಂತಾದವರು ಕೊಂಚ ಪರ್ಷಿಯನ್, ಕೊಂಚ ಹಿಂದಿ, ಕೊಂಚ ಬಂಗಾಲಿ-ಹೀಗೆ ನಾನಾ ಭಾಷೆಗಳನ್ನು ಸೇರಿ ಬಾಜಾರಿನ ವ್ಯವಹಾರಕ್ಕಾಗಿ ಅಥವಾ ಸೈನಿಕರೊಂದಿಗೆ ಮಾತಾಡುವಾಗ ಒಂದು via media ಆಗಿ ಸೃಷ್ಟಿಯಾದ ರೀತಿಯಲ್ಲಿ ಹುಟ್ಟಿದುದೇ ಉರ್ದು. ಈ ಕೆಲಸವನ್ನು ದಕ್ಷಿಣ ಭಾರತವನ್ನು ಆಕ್ರಮಿಸಿಕೊಂಡ ಬಹಮನೀ ಅಥವಾ ಆದಿಲ್‌ಶಾಹಿಗಳು ಮುಂತಾದವರು ಸೇರಿಕೊಂಡು ಬಹುಪಾಲು ದಿಲ್ಲಿಯ ಉರ್ದುವನ್ನೇ ಹೋಲುವಂತಹ ದಖ್ಖನೀ ಭಾಷೆಯನ್ನು ಹುಟ್ಟು ಹಾಕಿದರು.

ನಮ್ಮ ಸಂಸ್ಕೃತದಂತೆ ಅಥವಾ ಪಾಲಿ ಭಾಷೆಯಂತೆ ಅಥವಾ ಬಂಗಾಲೀ ಅಥವಾ ಕನ್ನಡ, ತಮಿಳುಗಳಂತೆ ಉರ್ದು ಎಂಬುದು ನೂರಾರು-ಸಾವಿರಾರು ವರ್ಷಗಳ ಹಿಂದೆ ಇದೇ ನೆಲದಲ್ಲಿ ಹುಟ್ಟಿದ ಭಾಷೆಯಲ್ಲ. ಆ ಕಾಲದ ಅವಶ್ಯಕತೆಯಾಗಿ ಹುಟ್ಟಿಕೊಂಡದ್ದು. ಆದರೆ ಹಾಗೆ ಬಜಾರದಲ್ಲಿ ಅಥವಾ ಸೈನಿಕರ ಮಧ್ಯೆ (ಲಷ್ಕರೀ ಅಂದರೆ ಸೈನ್ಯದ ಭಾಷೆ) ಹುಟ್ಟಿಕೊಂಡ ಉರ್ದುವಿಗೆ ಯಾರಿಗೂ ಗೊತ್ತಾಗದೆ ಒಂದು ಮಾಧುರ್ಯ ಬಂದು ಸೇರಿಕೊಂಡುಬಿಟ್ಟಿತು. ಕೊಂಚ ಪರ್ಷಿಯನ್, ಕೊಂಚ ಹಿಂದಿ, ಕೊಂಚ ಬಂಗಾಲೀ, ಕೊಂಚ ಸಂಸ್ಕೃತ ಮುಂತಾದವುಗಳನ್ನು ತನ್ನ ಬೆಳವಣಿಗೆಗಾಗಿ ಬಳಸಿಕೊಂಡು ಸಮೃದ್ಧವಾದದ್ದೇ ಉರ್ದು! ಯಾರು ತಿರಸ್ಕರಿಸಿದರೂ ಸರಿಯೇ; ಉರ್ದು ಎಂಬುದು ತುಂಬ ಸುಂದರವಾದ ಭಾಷೆ. ಅದು cross breed ಮಗುವಿನಂತಹುದು. ನೀವು ಜಾತ್ಯಾತೀತ ರೀತಿಯಲ್ಲಿ ಮದುವೆಯಾದವರ ಮಕ್ಕಳನ್ನು ನೋಡಿ? ಅವು ವಿಭಿನ್ನ ಮತ್ತು ಪುಷ್ಕಳವಾಗಿ ಬೆಳೆಯುತ್ತಿರುವುದು ನಿಮಗೇ ಗೊತ್ತಾಗಿಬಿಡುತ್ತದೆ. ನನ್ನ ಮೊಮ್ಮಕ್ಕಳನ್ನು ನೋಡಿದಾಗ ಪ್ರತೀಸಲ ಈ ಮಾತು ನೆನಪಿಗೆ ಬರುತ್ತದೆ. ಆ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ, ರೂಪುರೇಷಕ್ಕೆ ಸಂಬಂಧಿಸಿದಂತೆ-ಉಳಿದ ಮಕ್ಕಳಿಗಿಂತ ಭಿನ್ನ ಮತ್ತು ಆರೋಗ್ಯವಂತರು.

ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಗುಲ್ಜಾರ್ ಸಾಹೇಬರನ್ನು ತುಂಬ ಜನ, ತುಂಬ ವರ್ಷಗಳಿಂದ ಮುಸಲ್ಮಾನರು ಅಂತ ತಿಳಿದುಕೊಂಡಿದ್ದಾರೆ. ಅದು ತಪ್ಪೂ ಅಲ್ಲ. ಆ ಹೆಸರು ಉಚ್ಚರಿಸುತ್ತಿದ್ದಂತೆಯೇ ಕೊಂಚ ಮುಸಲ್ಮಾನೀ ಗುಣ ಅದರಲ್ಲಿದೆ ಅನ್ನಿಸಿಬಿಡುತ್ತದೆ. ಆದರೆ ‘ಗುಲ್ಜಾರ್’ ಸಾಹೇಬರು ಪಕ್ಕಾ ಹಿಂದೂ ಮನೆತನದವರು. ಪಕ್ಕಾ ಜಾಠರು. ತಂದೆಯ ಹೆಸರು ಮಲ್ಕಾನ್ ಸಿಂಗ್. ಗುಲ್ಜಾರ್ ಸಾಹೇಬರ ಒರಿಜಿನಲ್ ಹೆಸರು ಸಂಪೂರನ್ ಸಿಂಗ್ ಕಾಲ್ರಾ. ಅವರ ಮನೆತನದ ಸರ್‌ನೇಮ್ ಕಾಲ್ರಾ. ಆ ಮನೆತನದಲ್ಲಿ ಯಾರಾದರೂ ಕವಿಯಾಗಿದ್ದರಾ? ಉಹುಂ, ಗುಲ್ಜಾರ್ ಸಾಹೇಬರಿಗೇ ಅದು ಗೊತ್ತಿಲ್ಲ. ಮನೆಯ ಭಾಷೆ ಪಂಜಾಬಿ. ಅವರು ಹುಟ್ಟಿದ್ದು ಪಾಕಿಸ್ತಾನದ ‘ದಿನ’ ಎಂಬ ಊರಿನಲ್ಲಿ; ಅದೀಗ ಪಾಕಿಸ್ತಾನದಲ್ಲಿದೆ. ಯಥಾಪ್ರಕಾರ, ಭಾರತ ಇಬ್ಭಾಗವಾದಾಗ ಲಕ್ಷಾಂತರ ಸಿಖ್ಖರು, ಹಿಂದೂಗಳು-ಮುಖ್ಯವಾಗಿ ಪಂಜಾಬಿಗಳು ಅಲ್ಲಿದ್ದ ಆಸ್ತಿಪಾಸ್ತಿ-ಗೆಳೆಯರು ಎಲ್ಲರನ್ನೂ ಅಲ್ಲೇ ಬಿಟ್ಟು ಭಾರತಕ್ಕೆ ಓಡಿ ಬಂದರು. ಗುಲ್ಜಾರ್‌ರ ತಂದೆ ಮಲ್ಕಾನ್ ಸಿಂಗ್ ಅವರೂ ಅದನ್ನೇ ಮಾಡಿದರು. ಪಾಕಿಸ್ತಾನದಲ್ಲಿ ಅವರಿಗೆ ಆಸ್ತಿಪಾಸ್ತಿ, ವ್ಯಾಪಾರ-ವ್ಯವಹಾರಗಳಿದ್ದವು. ಅಂದಿನ ಹಿಂದೂ-ಮುಸ್ಲಿಂ ಗಲಭೆಗಳಿಂದಾಗಿ ಅವರು ಬರಿಗೈಲೇ ಭಾರತಕ್ಕೆ ಬಂದರು. ಭಾರತಕ್ಕೆ ಬಂದ ಮೇಲೆ ಅವರು ಮಾಡಿದ ಕೆಲಸವೆಂದರೆ ಬಟ್ಟೆ ವ್ಯಾಪಾರ ಆರಂಭಿಸಿದ್ದು! ಅವರು ಒಬ್ಬರಾದ ಮೇಲೊಬ್ಬರಂತೆ ಮೂವರನ್ನು ಮದುವೆಯಾದರು. ಹುಟ್ಟಿದ ಕೆಲವೇ ದಿನಗಳಲ್ಲಿ ಗುಲ್ಜಾರ್ ತಾಯಿಯನ್ನು ಕಳೆದುಕೊಂಡರು. ಮಲ್ಕಾನ್ ಸಿಂಗ್ ಮೂರನೆಯ ಮದುವೆಯಾದರು. ಅವರಿಗೆ ಮನೆ ತುಂಬ ಮಕ್ಕಳು. ಇವರು ಎರಡನೇ ಹೆಂಡತಿಯ ಮಗ. ಮೂರನೆಯಾಕೆ ಇವರಿಗೆ ಮಲತಾಯಿ. ಆಕೆ ಪ್ರೀತಿಯಿಂದ ಇವರನ್ನು ನೋಡಿಕೊಳ್ಳಲಿಲ್ಲ. ಅಸಲು ಆ ಪುಟ್ಟ ಮನೆಯಲ್ಲಿ ಗುಲ್ಜಾರ್‌ರಿಗೆ ಮಲಗಲಿಕ್ಕೆ ಒಂದು ಜಾಗವನ್ನೂ ಆಕೆ ಕೊಡಲಿಲ್ಲ. ಒಂದು ಪುಟ್ಟ ಸ್ಟೋರ್ ರೂಮ್ ಇತ್ತು ಮನೆಯಲ್ಲಿ. ಗುಲ್ಜಾರ್‌ರಿಗೆ ಸಿಕ್ಕಿದ್ದು ಅದೊಂದೇ. ಮನೆಯಲಿ ಕರೆಂಟ್ ಕೂಡ ಇರಲಿಲ್ಲ. ಕಂದೀಲು ಬೆಳಕಿನಲ್ಲೇ ಓದುವ ಅನಿವಾರ್ಯತೆ. ಆದರೆ ಗುಲ್ಜಾರ್‌ರ ಪಾಲಿಗೆ ಅದೇ ವರವಾಯಿತು. ಅವರ ಮನೆಗೆ ಹತ್ತಿರದಲ್ಲೇ ಒಂದು ಸರ್ಕ್ಯುಲೇಶನ್ ಲೈಬ್ರರಿ ಇತ್ತು. ತಕ್ಷಣ ಅದಕ್ಕೆ ಗಂಟುಬಿದ್ದ ಗುಲ್ಜಾರ್, ಅವಲಕ್ಕಿ ಮುಕ್ಕುವಂತೆ ಅದರ ಪುಸ್ತಕಗಳನ್ನೆಲ್ಲ ಒಂದೇ ಗುಕ್ಕಿನಲ್ಲಿ ಮುಕ್ಕಿಬಿಟ್ಟರು. “ಇನ್ನು ನಿನಗೆ ಕೊಡಲಿಕ್ಕೆ ನನಗೆ ಬೇರೆ ಪುಸ್ತಕಗಳೇ ಇಲ್ಲ" ಅಂದುಬಿಟ್ಟ ಅಂಗಡಿಯವನು. ಓದುವ ಮಾತು ಒತ್ತಟ್ಟಿಗಿರಲಿ, ಗುಲ್ಜಾರ್ ಆ ಚಿಕ್ಕ ವಯಸ್ಸಿನಲ್ಲೇ ಬರೆಯಲಾರಂಭಿಸಿಬಿಟ್ಟಿದ್ದರು.

ಆ ಕಾಲಕ್ಕೆ, ಅಷ್ಟೇಕೆ ನಾವು ಹೈಸ್ಕೂಲಿಗೆ ಬರುವ ಹೊತ್ತಿಗೆ, ಶರತ್ಚಂದ್ರ, ಪ್ರೇಮ್‌ಚಂದ್, ಟ್ಯಾಗೋರ್, ಬಂಕಿಮಚಂದ್ರ ಮುಂತಾದವರನ್ನೆಲ್ಲ ಒಂದು ಗುಕ್ಕಿನಲ್ಲಿ ಓದಿ ಮುಗಿಸಿರುತ್ತಿದ್ದೆವು. Passion ಅಂತಾರೆ ಅದಕ್ಕೆ; ಕನ್ನಡದಲ್ಲಿ ಹೇಳುವುದಾದರೆ ಗೀಳು. ಅವರಿಗೆ ಓದುವ passion ಅದೆಷ್ಟು ದಾಹಿಯನ್ನಾಗಿ ಮಾಡಿತೆಂದರೆ ಮೂಲತಃ ಹಿಂದಿ, ಪಂಜಾಬಿ ಗೊತ್ತಿದ್ದ ಅವರು ಮೇಲೆ ಹೇಳಿದ ಮಹನೀಯರೆಲ್ಲರ ಕೃತಿಗಳ ಅನುವಾದಿತ ಕಾದಂಬರಿ-ಗೀತೆ ಮುಂತಾದವುಗಳನ್ನು ಓದಿ, “ಉಹುಂ, ಈ ತರ್ಜುಮೆ ನನಗೆ ಒಗ್ಗುವಂತಹುದಲ್ಲ" ಎಂದು ತೀರ್ಮಾನಿಸಿ, ಹುಡುಕಿಕೊಂಡು ಹೋಗಿ ಬಂಗಾಲೀ ಭಾಷೆ ಕಲಿತು ಬಂಗಾಳದ ಎಲ್ಲ ಸಾಹಿತ್ಯವನ್ನು ಬಂಗಾಲಿ ಭಾಷೆಯಲ್ಲೇ ಓದಿದರು! ನಿಮಗೆ ಆಶ್ಚರ್ಯವಾಗಬಹುದು, ನಾನು ಕಂಡಂತೆ ಹೀಗೆ ಬಂಗಾಲಿ ಕಲಿತು ಆ ಮಹನೀಯರ ಅಷ್ಟೂ ಕೃತಿಗಳನ್ನು ಓದಿದ ಕನ್ನಡಿಗರೆಂದರೆ, ನನ್ನ ಗುರುಗಳಾದ ಪಾ.ವೆಂ.ಆಚಾರ್ಯರು! ಗುಲ್ಜಾರ್ ವಿಷಯದಲ್ಲಿ ಹೇಳುವುದಾದರೆ ಅವರು ಪಂಜಾಬಿ, ಉರ್ದು, ಹಿಂದಿ, ಬಂಗಾಲೀ ಸೇರಿದಂತೆ ಅನೇಕ ಭಾಷೆ ಕಲಿತರು. ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೂ ಒಂದು ಕಥೆಯೇ. ಮೊದಲು ಮುಂಬೈಗೆ ಹೋದಾಗ ಅವರು ಹೊಟ್ಟೆಪಾಡಿಗಾಗಿ ಒಂದು ಗರಾಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ವಾಸ ಮಾಡುತ್ತಿದ್ದುದೆಲ್ಲ ಕೂವರ್ ಲಾಡ್ಜ್‌ನಲ್ಲಿ! ಅದರ ವಿಶೇಷತೆಯೆಂದರೆ, ಅವತ್ತಿನ ಕಾಲದ ಚಿತ್ರರಂಗದ ಅನೇಕರು ವಾಸ ಮಾಡುತ್ತಿದ್ದುದು ಅಲ್ಲೇ. ನಾವು ‘ಅಡ್ಡಾ’ ಅಂತೀವಲ್ಲ? ಅದೊಂದು ನಿಜವಾದ hut. ಅಲ್ಲಿ ಮಹಾಕವಿ ಸಾಹಿರ್ ಲೂಧಿಯಾನವಿ ಇದ್ದರು. ಕೃಷ್ಣ್ ಚಂದರ್, ನಟ ಓಂಪ್ರಕಾಶ್, ಜಾನ್‌ನಿಸಾರ್ ಅಖ್ತರ್, ಬಾಲ್‌ರಾಜ್ ಸಹನಿ, ಅಲಿ ಸರ್ದಾರ್ ಜಾಫ್ರಿ, ಮಜರೂಹ್ ಸುಲ್ತಾನ್‌ಪುರಿ ಮುಂತಾದವರೆಲ್ಲ ಇರುತ್ತಿದ್ದರು ಮತ್ತು ಕೆಲವರು ಬಂದು ಹೋಗುತ್ತಿದ್ದರು.

ಹೇಳಿದೆನಲ್ಲ? ದೇಹ ಗಟ್ಟಿಯಾಗಿ ಇರುವಂತೆ ನೋಡಿಕೊಳ್ಳುವುದು ದೊಡ್ಡ ಮಾತಲ್ಲ. ನಮ್ಮಲ್ಲಿ ಚಿಗುರೊಡೆದ passionನ ನಾವೇ ಸಾಕಿ ಬೆಳೆಸಬೇಕು. ಒಂದು ಗೀಳಿನ ಬೆನ್ನು ಹತ್ತಬೇಕು. ಅದಕ್ಕೆ ಸರಿಯಾದ ಗೀಳೂ ತಗುಲಿಕೊಳ್ಳಬೇಕು. ಕೇವಲ ಸ್ಟೋರ್ ರೂಮ್‌ನಲ್ಲಿ ಮಲಗಿ ಇಡೀ ಲೈಬ್ರರಿ ಖಾಲಿಯಾಗುವಂತೆ ಮುಕ್ಕಿದ ಗುಲ್ಜಾರ್ ಸಾಹೇಬರು, ಅಪ್ಪಿ-ತಪ್ಪಿಯೂ ಸಿನೆಮಾದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿರಲಿಲ್ಲ. ಅವರಿಗೆ ಮೊಟ್ಟ ಮೊದಲು ಒಲಿದಿದ್ದು ಸಣ್ಣಕತೆ. ನಾನು ಈತನಕ ಸುಮಾರು ಇಪ್ಪತ್ನಾಲ್ಕು ಕತೆ ಬರೆದಿದ್ದೇನೆ. ಅದೂ ಏನು, ನಾಲ್ಕಾರು ವರ್ಷಗಳ ಅವಧಿಯಲ್ಲಿ. ಇವತ್ತಿಗೂ ನನಗೆ ನನ್ನೆಲ್ಲ ಬರಹಗಳನ್ನು ಒಂದು ತೂಕಕ್ಕಿಟ್ಟರೆ ಅದನ್ನು ಮೀರಿ ತೂಗಬಲ್ಲ ವಜನ್-ಸಣ್ಣಕತೆಗಳೇ. ನನ್ನ ಪಾಲಿಗೆ ಸಣ್ಣಕತೆ ಎಂಬುದು ನನ್ನ ಇನ್ನೊಬ್ಬ ತಾಯಿ. ಕಾದಂಬರಿ, ಅಂಕಣ, ಬಿರುಸಾದ ಪತ್ರಿಕೋದ್ಯಮ, ವರದಿಗಳು, ಕ್ರೈಮ್ ಸಂಬಂಧಿ ಬರಹಗಳು, ಮನುಷ್ಯ ಸಂಬಂಧಿ ಕಥಾನಕಗಳು, ತರ್ಜುಮೆಗಳು-ಇವ್ಯಾವೂ ಸಣ್ಣಕತೆ ನೀಡಿದಷ್ಟು ಆನಂದವನ್ನು ಕೊಡುವುದಿಲ್ಲ. ಅದೃಷ್ಟದ ಸಂಗತಿಯೆಂದರೆ ಗುಲ್ಜಾರ್ ಸಾಹೇಬರಿಗೆ ಸಣ್ಣಕತೆಯ ಜೊತೆಗೆ ಕವಿತೆಯೂ ಒಲಿಯಿತು. ಆರಂಭದಲ್ಲಿ ಒಂದಷ್ಟು ಕವಿತೆ ಬರೆದೆ. ನನಗೇ ಅದು trash ಅನ್ನಿಸಿ ಎಲ್ಲವನ್ನೂ ಹರಿದು ಹಾಕಿದೆ. ನಾಟಕ ರಚನೆಗೆ ಕೈಯಿಟ್ಟೆ. ಮೊದಮೊದಲು ‘ಪರವಾಗಿಲ್ಲ’ ಎಂಬಂತೆ ಬರೆದೆನಾದರೂ ನನಗೇ ಅದು ಇಷ್ಟವಾಗಲಿಲ್ಲ. ನಿಜವಾಗ್ಯೂ ಒಲಿದದ್ದು prose. ಅದೊಂದೇ.

ಹಾಗೆ ಬರೆಯುವುದರ ಕಡೆಗೆ ಸೆಳೆತದಲ್ಲಿ ಸಿಕ್ಕಿಕೊಂಡ ಗುಲ್ಜಾರ್ ಅದಕ್ಕೆ ಸರಿಯಾದ ವಾತಾವರಣ ಸೃಷ್ಟಿ ಮಾಡಿಕೊಂಡರು. ಯೋಚಿಸಿ ನೋಡಿ, ನೀವು ಕೂಡ ನಿಮ್ಮ ಸೆಳೆತಕ್ಕೆ, ಗೀಳಿಗೆ ಬೇಕಾದಂತಹ ವಾತಾವರಣ ಸೃಷ್ಟಿ ಮಾಡಿಕೊಳ್ಳುತ್ತೀರಿ; ನಿಮಗೇ ಗೊತ್ತಿಲ್ಲದೆ. ಗುಲ್ಜಾರ್ ಸಾಹೇಬರು ಸಿನೆಮಾ ರಂಗಕ್ಕೆ ಕಾಲಿರಿಸಿದ್ದು ತೀರ accidental ಆಗಿ. ಮಹಾನ್ ನಿರ್ದೇಶಕ ಬಿಮಲ್‌ರಾಯ್‌ರನ್ನು ಅವರಿಗೆ ಪರಿಚಯ ಮಾಡಿಸಿದ್ದು, ಮತ್ತೊಬ್ಬ ಮಹಾಕವಿ ಶೈಲೇಂದ್ರ ಹಾಗೂ ಬಿಮಲ್‌ರಾಯ್‌ರ ಸಹಾಯಕ, ಅಸಿಸ್ಟೆಂಟ್ ಡೈರೆಕ್ಟರ್ ದೇಬುಸೇನ್. “ನಿನ್ನಂಥವರು ಕೆಲಸ ಮಾಡಬೇಕಾದ್ದು ಗರಾಜ್‌ನಲ್ಲಿ ಅಲ್ಲ. ನೀನು ನನ್ನೊಂದಿಗಿರಬೇಕು" ಅಂದರಂತೆ ಚಿತ್ರರಂಗದ ದಂತಕಥೆ ಅನ್ನಿಸಿಕೊಂಡ ಬಿಮಲ್‌ರಾಯ್.

ಆಗ ಹುಟ್ಟಿಕೊಂಡದ್ದೇ ಗುಲ್ಜಾರ್ ಅವರ ಅದ್ಭುತ ಕವಿತೆ, “ಮೇರಾ ಗೋರ ರಂಗ್ ಲೈಕೆ" ಹಾಗೆ ಚಿತ್ರರಂಗದ ಕವಿಯಾಗಿ ರೂಪುಗೊಂಡ ಗುಲ್ಜಾರ್ ಸಾಹೇಬರು ಇವತ್ತಿಗೂ ಕೈಯೊಳಗಿನ ಲೇಖನಿ ಕೆಳಗಿಟ್ಟಿಲ್ಲ. ಇದೆಲ್ಲಕ್ಕೂ ಕಾರಣ passion. ಯಾವುದೇ ತರಹದ ಗೀಳಾಗಬಹುದು. ಅದು ತಗುಲಿಕೊಂಡರೆ, ಅಂದುಕೊಂಡದ್ದನ್ನು ಶತಾಯಗತಾಯ ನಮ್ಮ ಕೈಲಿ ಮಾಡಿಸಿಯೇ ಮಾಡುತ್ತದೆ.
“ಒಂದೇ ಬೇಸರವೆಂದರೆ, ಇವನು ಕವಿಯಾಗುತ್ತಿದ್ದಾನೆ! ಅದಕ್ಕಿಂತ ಅಪಾಯ ಉಂಟೆ? ಅಣ್ಣ ತಮ್ಮಂದಿರ ಹಣ ಪೀಕುತ್ತಾನೆ. ಯಾವುದೋ ಧರ್ಮಛತ್ರದಲ್ಲಿ ಅನ್ನ ತಿಂದು ಮಲಗುತ್ತಾನೆ, ಅಷ್ಟೆ" ಅಂದಿದ್ದರಂತೆ ಗುಲ್ಜಾರ್‌ರ ತಂದೆ. ಇವತ್ತು ಕಾರಿದೆ, ಬಂಗಲೆಯಿದೆ, ಲೆಕ್ಕವಿಲ್ಲದಷ್ಟು ಅವಾರ್ಡ್‌ಗಳು ಬಂದಿವೆ. ನಾನಾ ದೇಶ ಸುತ್ತಿದ್ದೇನೆ. ಇದನ್ನೆಲ್ಲ ನೋಡುವುದಕ್ಕೆ ಮುಂಚೆಯೇ ನನ್ನ ತಂದೆ ತೀರಿಕೊಂಡರು ಅನ್ನುತ್ತಾರೆ ಗುಲ್ಜಾರ್.
ಈ ಬದುಕು ಹೀಗೇ ಮತ್ತೆ ಎಂಬುದು ಮಹಾಕವಿ ಗುಲ್ಜಾರ್ ಸಾಹೇಬರಿಗೆ ಗೊತ್ತಿರದೇ ಇರುತ್ತದಾ? I love him.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books