Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ರಾಜ ಬದಲಾದರೂ ರಾಗಿ ಬೀಸುವ ಕಾಯಕ ತಪ್ಪುವುದಿಲ್ಲ ಅಲ್ಲವೇ?

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೊನೆಗೂ ದೇಶದ ಅಧಿಕಾರ ಸೂತ್ರ ಹಿಡಿಯುವಲ್ಲಿ ಸಫಲವಾಗಿದೆ. ಒಂದು ದೃಷ್ಟಿಯಿಂದ ಬಿಜೆಪಿಗೇ ಆಡಳಿತ ನಡೆಸಲು ಸ್ವಯಂಬಲ ಸಿಕ್ಕಿದ್ದು ಒಳ್ಳೆಯದಾಯಿತು. ಎಲ್ಲಿಯವರೆಗೆ ನಮಗೆ ಸ್ವಯಂಬಲ ಸಿಗುವುದಿಲ್ಲವೋ, ಅಲ್ಲಿಯವರೆಗೂ ನಾವು ಮಿತ್ರ ಪಕ್ಷಗಳ ತಾಳಕ್ಕೆ ಹೆಜ್ಜೆ ಹಾಕಬೇಕಾಗುತ್ತದೆ. ನಮ್ಮ ಅಜೆಂಡಾಗಳನ್ನು ಅಂತಹ ಸಂದರ್ಭದಲ್ಲಿ ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎಂದು ಅದು ಹೇಳುತ್ತಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಇರಬಹುದು. ಕಾಶ್ಮೀರದಲ್ಲಿ ಸಮಾನ ನಾಗರೀಕ ನೀತಿ ಸಂಹಿತೆಯನ್ನು ತರುವುದಿರಬಹುದು. ಹೀಗೆ ಹಲವು ಅಜೆಂಡಾಗಳು ಬಿಜೆಪಿಗೆ ಇವೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಪಿತೃ ಆರೆಸ್ಸೆಸ್‌ಗೆ ಇದೆ. ಈಗ ಸ್ವಯಂಬಲವೇ ಇರುವುದರಿಂದ ಬಿಜೆಪಿ ಮಿತ್ರ ಪಕ್ಷಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತದೆಯೇ ಅಥವಾ ಮುಂಚೆ ನಮಗೆ ಸ್ವಯಂಬಲ ಬರುವ ಕುರಿತು ಅನುಮಾನವಿತ್ತು. ಹೀಗಾಗಿ ನಾವು ಈಗಲೂ ಮಿತ್ರ ಪಕ್ಷಗಳ ಮಾತು ಕೇಳಿಯೇ ಮುನ್ನಡೆಯಬೇಕು ಎಂಬ ಮಾತು ವ್ಯಕ್ತವಾಗುತ್ತದೋ ಗೊತ್ತಿಲ್ಲ.

ಆದರೆ ಒಂದಂತೂ ನಿಜ. ಸ್ವಯಂಬಲದ ಮೇಲೆ ಅಧಿಕಾರ ನಡೆಸಲು ಬಿಜೆಪಿಗೆ ಶಕ್ತಿ ಸಿಕ್ಕಿದೆ. ೧೯೮೪ರಲ್ಲಿ ರಾಜೀವ್‌ಗಾಂಧಿಗೆ ಅಂತಹ ಒಂದು ಅವಕಾಶ ಸಿಕ್ಕಿತ್ತು. ಇಂದಿರಾಗಾಂಧಿ ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದಾಗ ಅನುಕಂಪದ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿ ಅದು ಸ್ವಯಂಬಲದ ಮೇಲೆ ಅಧಿಕಾರ ಸೂತ್ರ ಹಿಡಿದಿತ್ತು. ಒಂದು ದೃಷ್ಟಿಯಿಂದ ಯಾವುದೇ ಪಕ್ಷ ಅಧಿಕಾರ ನಡೆಸಲು ಸ್ವಯಂಬಲ ಬೇಕು. ಆಗ ತನಗಿಚ್ಛೆ ಬಂದ ರೀತಿಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅದು ಜಾರಿಗೆ ತರಬಹುದು. ಅಂದಹಾಗೆ ಈಗ ಜನ ಕೊಟ್ಟ ಬಹುಮತದ ಗುಂಗಿನಲ್ಲಿ ಬಿಜೆಪಿ ಮೈ ಮರೆತರೆ ಗಂಡಾಂತರ ಗ್ಯಾರಂಟಿ. ದೇಶದ ಜನ ಯಾವ ರೀತಿ ಮೋದಿ ವಿಷಯದಲ್ಲಿ ನಂಬಿಕೆ ಹೊಂದಿದ್ದಾರೆ ಎಂದರೆ ರಜನೀಕಾಂತ್ ಅವರನ್ನು ತೆರೆಯ ಮೇಲೆ ಯಾವ ರೀತಿ ನೋಡಲು ಬಯಸುತ್ತಾರೋ, ಅದೇ ರೀತಿ ಒರಿಜಿನಲ್ಲಾಗಿ ಮೋದಿಯನ್ನು ನೋಡಲು ಅವರು ಬಯಸುತ್ತಾರೆ.

ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಬೇಕು. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಬೇಕು. ರೈತರ ಭೂಮಿ ಬೇಕಾಬಿಟ್ಟಿ ಪರಭಾರೆಯಾಗಬಾರದು. ದಿನದ ಇಪ್ಪತ್ನಾಲ್ಕು ಗಂಟೆ ಕರೆಂಟು ಸಿಗಬೇಕು. ಇಡೀ ದಿನ ಕುಡಿಯಲು ನೀರು ಸಿಗಬೇಕು. ಹೀಗೆ ನರೇಂದ್ರ ಮೋದಿ ವಿಷಯದಲ್ಲಿ ಜನ ಇಟ್ಟಿರುವ ನಂಬಿಕೆಯ ಗಾತ್ರ ಸಣ್ಣದಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆಗಳು ಕಾರಣ ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಒಪೆಕ್ ರಾಷ್ಟ್ರಗಳಿರಬಹುದು, ಅಮೆರಿಕಾ, ರಷ್ಯಾ ಇರಬಹುದು ಒಟ್ಟಿನಲ್ಲಿ ತೈಲದ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಧರಿಸಲು ಒಂದು ಜಾಲವೇ ಇದೆ. ಈ ಜಾಲ ಬಯಸಿದಂತೆ ತೈಲದ ಬೆಲೆ ಹೆಚ್ಚಾಗುತ್ತದೆ, ಕಡಿಮೆಯಾಗುತ್ತದೆ. ಆದರೆ ಸಾಮಾನ್ಯ ಜನ ಇದ್ಯಾವುದನ್ನೂ ಗಮನಿಸುವುದಿಲ್ಲ. ಗುಜರಾತ್‌ನಲ್ಲಿ ಇಪ್ಪತ್ನಾಲ್ಕು ಗಂಟೆ ಕಾಲ ವಿದ್ಯುತ್ ಕೊಡಲಾಗುತ್ತಿದೆ. ಅಲ್ಲಿ ಕರೆಂಟೇ ಹೋಗುವುದಿಲ್ಲ. ಇಲ್ಲೂ ಹಾಗೇ ಮಾಡಿ ಎನ್ನುತ್ತಾರೆ. ಆದರೆ ಗುಜರಾತ್‌ನ ಬಹುಭಾಗ ವಿದ್ಯುತ್‌ನ್ನು ಖಾಸಗಿಯವರು ಪೂರೈಸುತ್ತಾರೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ನಿಮಗೆ ಒಂದು ಉದಾಹರಣೆ ಹೇಳುತ್ತೇನೆ. ಗುಜರಾತ್‌ನಲ್ಲಿ ಅಂಬಾನಿ ಥರವೇ ಬೆಳೆಯುತ್ತಿರುವ ಗೌತಮ್ ಅದಾನಿ ಎಂಬ ವ್ಯಾಪಾರಿ ಇದ್ದಾನೆ. ಆತ ಕೇವಲ ಗುಜರಾತ್ ಒಂದರಲ್ಲೇ ಆರು ಸಾವಿರ ಮೆಗಾವ್ಯಾಟ್ ಕರೆಂಟ್ ಉತ್ಪಾದನೆ ಮಾಡುತ್ತಾನೆ. ಈ ಪೈಕಿ ಬಹಳಷ್ಟು ವಿದ್ಯುತ್‌ನ್ನು ಗುಜರಾತ್ ಸರ್ಕಾರಕ್ಕೆ ಮಾರುತ್ತಾನೆ. ಈತನ ಜಾಗ ಯಾವ ಪರಿ ಹರಡಿದೆ ಎಂದರೆ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈತನ ವಿದ್ಯುತ್ ಜಾಲ ಹಬ್ಬಿದೆ. ಬಂದರುಗಳು ಈತನ ಕೈಯಲ್ಲಿ ಒಂದೊಂದಾಗಿ ಬಂದು ಕೂರುತ್ತಿವೆ. ಆಸ್ಟ್ರೇಲಿಯಾದಲ್ಲಿ ಎರಡು ಭಾರೀ ಪ್ರಮಾಣದ ಕಲ್ಲಿದ್ದಲು ಗಣಿಗಳನ್ನು ಹೊಂದಿದ್ದಾನೆ. ಈತ ಕೈ ಕೊಟ್ಟ ದಿನ ಗುಜರಾತ್, ಮಹಾರಾಷ್ಟ್ರದಂತಹ ಸರ್ಕಾರಗಳು ಥರಗುಟ್ಟುತ್ತವೆ. ಕರ್ನಾಟಕದ ಒಟ್ಟಾರೆ ವಿದ್ಯುತ್ ಬೇಡಿಕೆ ಪ್ರಮಾಣ ಒಂಬತ್ತು ಸಾವಿರ ಮೆಗಾವ್ಯಾಟ್ ಎಂಬುದನ್ನು ನೆನಪಿಡಿ. ಅಂತಹದರಲ್ಲಿ ಅದಾನಿ ಕೇವಲ ಗುಜರಾತ್ ಒಂದರಲ್ಲೇ ಆರು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಾನೆ. ಮಹಾರಾಷ್ಟ್ರದಲ್ಲಿ ಮೂರು ಸಾವಿರ ಮೆಗಾವ್ಯಾಟ್‌ಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದಿಸುತ್ತಾನೆ. ಮುಂದಿನ ಕೆಲ ವರ್ಷಗಳಲ್ಲಿ ತಾನು ಉತ್ಪಾದಿಸುವ ವಿದ್ಯುತ್ ಪ್ರಮಾಣ ಟೋಟಲಿ ಇಪ್ಪತ್ತು ಸಾವಿರ ಮೆಗಾವ್ಯಾಟ್‌ಗೆ ಏರಬೇಕು ಎಂಬ ಯೋಚನೆ ಈತನದು.

ಒಂದು ಸಲ ನೀವು ವಿದ್ಯುತ್ ಅನ್ನು ಹೊರದೇಶಗಳಿಂದ ಆಮದು ಮಾಡುವುದು, ರಫ್ತು ಮಾಡುವುದರ ಮೇಲೆ ದೊಡ್ಡ ನಿಯಂತ್ರಣ ಹೊಂದಿಬಿಟ್ಟರೆ ಸರ್ಕಾರಗಳು ಆತನನ್ನು ನಂಬಿ ಜೀವನ ಮಾಡುವುದು ಅನಿವಾರ್ಯ. ಇದು ಒಬ್ಬ ಅದಾನಿಯ ಕತೆಯಾಯಿತು. ಅಂಬಾನಿಗೆ ಯುಪಿಎ ಸರ್ಕಾರದಿಂದ ಕೊಡುಗೆ ಸಿಗಲಿಲ್ಲ ಎಂದೇನಲ್ಲ. ಪೂರ್ವ ಗೋದಾವರಿಯಲ್ಲಿ ಸಿಕ್ಕ ಬಹುದೊಡ್ಡ ತೈಲ ನಿಕ್ಷೇಪದ ಯಜಮಾನಿಕೆ ನೋಡಿಕೊಳ್ಳಿ ಎಂದು ಅವರಿಗೆ ಬಿಟ್ಟು ಕೊಡುವ ಕೆಲಸವಾಗಿದೆ. ತೈಲ ಬೆಲೆ ಹೆಚ್ಚಳವಾಗುವುದರಲ್ಲಿ ಅಂಬಾನಿಯ ಹಿತಾಸಕ್ತಿಯೂ ಅಡಗಿದೆ. ಹೀಗಾಗಿ ಬರಲಿರುವ ದಿನಗಳು ಶ್ರೀರಾಮನ ದಿನಗಳು ಎಂದು ಭಾವಿಸಬಾರದು. ಅದೇ ರೀತಿ ಜನರ ನಿರೀಕ್ಷೆಯ ಭಾರ ಯಾವ ರೀತಿ ಇದೆ ಎಂಬುದನ್ನು ಮೋದಿಯೂ ಅರಿತುಕೊಳ್ಳಬೇಕು. ಸಾಮಾನ್ಯ ಜನ ಮಾತ್ರವಲ್ಲ, ಟ್ರಾನ್ಸ್‌ನಲ್ಲಿರುವ ಜನರೂ ಒಬ್ಬ ವ್ಯಕ್ತಿಯನ್ನು ಎಷ್ಟು ಬೇಗ ಪ್ರೀತಿಸುತ್ತಾರೋ, ಅಷ್ಟೇ ಬೇಗ ದ್ವೇಷಿಸುತ್ತಾರೆ.

ಈ ಹಿಂದೆ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ವಾಜಪೇಯಿ ಅವರಂತಹ ಮುತ್ಸದ್ದಿ ದೇಶವನ್ನು ಆಳುತ್ತಿದ್ದರು. ಅವರ ಕಾಲದಲ್ಲೂ ಶವಪೆಟ್ಟಿಗೆ ಹಗರಣದಿಂದ ಹಿಡಿದು ಕಂದಹಾರ್ ವಿಮಾನ ಅಪಹರಣ ಪ್ರಕರಣದ ತನಕ ಹತ್ತಾರು ಹಗರಣಗಳು, ವಿವಾದಗಳು ನಡೆದವು. ಆದರೆ ಅವು ಜನರ ಮನಸ್ಸಿನಲ್ಲಿ ಈಗ ನೆಲೆಯಾಗಿರುವುದಿಲ್ಲ. ಅವರಿಗೆ ತಕ್ಷಣದ ಸಮಸ್ಯೆಗೆ ಪರಿಹಾರ ಬೇಕು. ಇಪ್ಪತ್ನಾಲ್ಕು ಗಂಟೆ ಕಾಲ ವಿದ್ಯುತ್, ನೀರು ಬೇಕು. ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಯಬೇಕು. ಪೆಟ್ರೋಲ್, ಡೀಸೆಲ್ ಬೆಲೆ ಇಳಿಯಬೇಕು. ಅವರ ಈ ಆಸೆಗಳೇನಿವೆಯೋ ಅದನ್ನೆಲ್ಲ ನರೇಂದ್ರ ಮೋದಿ ಬೇಗನೆ ಈಡೇರಿಸಿಬಿಡಬೇಕು. ಒಂದು ವೇಳೆ ಅವರು ಈಡೇರಿಸಲು ವಿಳಂಬ ಮಾಡಿದರು ಎಂದಿಟ್ಟುಕೊಳ್ಳಿ. ಯಾರು ಫೇಸ್‌ಬುಕ್ ಮೂಲಕ, ಟ್ವಿಟರ್ ಮೂಲಕ ಮೋದಿಯನ್ನು ಯರ್ರಾ ಮರ್ರಾ ಹೊಗಳಿದ್ದರೋ ಅವರೇ ಯಕ್ಕಾಮಕ್ಕಾ ಟೀಕಿಸತೊಡಗುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಮನಸ್ಥಿತಿ ಹೇಗಾಗಿದೆ ಎಂದರೆ ಅವರಿಗೆ ಪ್ರಜಾಪ್ರಭುತ್ವದ ಎಲ್ಲ ಸವಲತ್ತುಗಳು ಬೇಕು. ಆದರೆ ಅದನ್ನು ಈಡೇರಿಸಲು ಒಬ್ಬ ಸರ್ವಾಧಿಕಾರಿ ಬೇಕು. ಆದರೆ ಜನ ನೆನಪಿನಲ್ಲಿಡಬೇಕು. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರ ಒಂದೇ ಕಡೆ ಇರುವುದು ಕಷ್ಟ. ಸರ್ವಾಧಿಕಾರಿಯಾದವನು ಯಾರ ವಿಶ್ವಾಸವನ್ನೂ ಬಯಸದೇ ತನಗೆ ತೋಚಿದಂತೆ ಮುನ್ನುಗ್ಗುತ್ತಾನೆ. ಹೆಚ್ಚೆಂದರೆ ಆತನ ಸರ್ವಾಧಿಕಾರವನ್ನು ಪೋಷಿಸುವ ಕೆಲವು ಜನರನ್ನು ಅಕ್ಕಪಕ್ಕ ಇಟ್ಟುಕೊಳ್ಳಬಹುದು. ಆದರೆ ಆತ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದುಕೊಳ್ಳುವುದು ಕಷ್ಟ. ನರೇಂದ್ರ ಮೋದಿ ಅವರಿಂದಲೂ ಇದನ್ನು ನಿರೀಕ್ಷಿಸುವುದು ಕಷ್ಟ. ಯಾಕೆಂದರೆ ಅವರೀಗ ಸರ್ವಾಧಿಕಾರಿಯ ಗೆಟಪ್ಪು ಧರಿಸಲು ಮತದಾರರೇ ಅವಕಾಶ ಮಾಡಿಕೊಟ್ಟಿದ್ದಾರೆ. ಸಹಜವಾಗಿಯೇ ಇದು ನೆರೆದೇಶಗಳ ಜತೆ ಯುದ್ಧಕ್ಕೂ ಅವಕಾಶ ಮಾಡಿಕೊಡಬಹುದು. ಹೇಳಿ ಕೇಳಿ ಗುಜರಾತ್‌ನ ಮನಸ್ಸಿನಲ್ಲೇ ಒಂದು ಆಕ್ರೋಶವಿದೆ. ಹನ್ನೆರಡನೇ ಶತಮಾನದಿಂದಲೂ ವಿದೇಶಿ ದಾಳಿಕೋರರಿಂದ ಘಾಸಿ ಅನುಭವಿಸಿದ ರಾಜ್ಯ ಅದು. ಹೀಗಾಗಿ ಅದು ಪಾಕಿಸ್ತಾನದ ಮೇಲೆ ಒಂದು ಯುದ್ಧವಾಗಬೇಕು. ಅದು ಎಂದೆಂದೂ ಮರೆಯದಂತಹ ಪಾಠ ಕಲಿಸಬೇಕು ಎಂಬುದು ಗುಜರಾತಿಗಳ ಮನಸ್ಥಿತಿಯಾಗಿರುತ್ತದೆ.
ಇದೇ ರೀತಿ ಗುಜರಾತಿ ವ್ಯವಹಾರಿಗಳಿಗೆ ಕೇವಲ ಗುಜರಾತ್, ಮಹಾರಾಷ್ಟ್ರ ಮಾತ್ರವಲ್ಲ, ಇಡೀ ದೇಶದ ತುಂಬ ಪಸರಿಸಿಕೊಳ್ಳುವ ಆಕಾಂಕ್ಷೆ ಇದೆ. ಆದರೆ ಸುಖಾಸುಮ್ಮನೆ ಪಸರಿಸಿಕೊಳ್ಳಲು ಸಾಧ್ಯವಿಲ್ಲವಲ್ಲ. ಹೀಗಾಗಿ ಮೋದಿಯನ್ನು ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಬಯಸುತ್ತಾರೆ. ಭೂ ಸುಧಾರಣಾ ಕಾನೂನನ್ನೇ ಬದಲಿಸಲು ಬಯಸುತ್ತಾರೆ. ಇದು ಕೂಡ ಮೋದಿ ಮೇಲಿರುವ ಒತ್ತಡ ಎಂಬುದನ್ನು ಮರೆಯಬೇಡಿ. ಒಂದು ಸಲ ಈ ದೇಶ ಸಮಾಜವಾದಿ ಧೋರಣೆಯನ್ನು ಮರೆತು ಬಂಡವಾಳಶಾಹಿ ಧೋರಣೆಯನ್ನೇ ಸಂಪೂರ್ಣವಾಗಿ ಅಳವಡಿಸಿಕೊಂಡರೆ ಬಡ ಜನ ಬದುಕುವುದು ಇನ್ನಷ್ಟು ಕಷ್ಟವಾಗುತ್ತದೆ. ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಉತ್ತಮ ಆರ್ಥಿಕ ನೀತಿಯನ್ನು ಮೊದಲ ಅವಧಿಯಲ್ಲಿ ತೋರಿತಾದರೂ ತದನಂತರದ ದಿನಗಳಲ್ಲಿ ಜನ ದುಡಿಯುವುದೇಕೆ ಎಂಬ ಮನಸ್ಥಿತಿ ಹೊಂದುವಂತೆ ಮಾಡಿತು. ನಾಳೆ ಕೈಗಾರಿಕೆಗಳನ್ನು ಮಿತಿಮೀರಿ ಬೆಳೆಸಿ, ಕೃಷಿ ವ್ಯವಸ್ಥೆಯನ್ನು ಹಾಳು ಮಾಡಿದರೂ ಆಗುವ ಪರಿಣಾಮ ಅದೇ. ತಿನ್ನುವ ಅಕ್ಕಿ, ಗೋಧಿಯನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಬರುತ್ತದೆ.

ಈ ಹಿಂದೆ ತಿನ್ನುವ ಅಕ್ಕಿಗೆ, ಗೋಧಿಗೂ ಬೇರೆ ರಾಷ್ಟ್ರಗಳ ಎದುರು ಕೈ ಚಾಚುವ ಸ್ಥಿತಿ ಇತ್ತು. ಒಂದು ಸಲ ದೇಶ ತುಂಬ ಸಂಕಷ್ಟ ಎದುರಿಸುತ್ತಿದೆ. ನಮಗೆ ಅಕ್ಕಿ ಕೊಡಿ, ಗೋಧಿ ಕೊಡಿ ಎಂದು ಅಂದಿನ ಪ್ರಧಾನಿ ನೆಹರೂ ಅಮೆರಿಕಾವನ್ನು ಕೇಳಿದ್ದರು. ಆದರೆ ಅಮೆರಿಕಾದ ಅಂದಿನ ಅಧ್ಯಕ್ಷರು ನೆಹರೂ ಅವರ ಕಾಗದವನ್ನು ತಮ್ಮ ಮೇಜಿನ ಮೇಲಿಟ್ಟುಕೊಂಡು ಸುಮ್ಮನೆ ಕೂತರೇ ಹೊರತು ಅಕ್ಕಿ, ಗೋಧಿಯನ್ನು ಕೊಡಲಿಲ್ಲ. ಹೀಗಾಗಿ ನೆಹರೂ ಅವರ ಬೇಡಿಕೆಗೆ ಸ್ಪಂದಿಸಿದ ಚೀನಾ ಐದು ಸಾವಿರ ಟನ್ ಅಕ್ಕಿಯನ್ನು ನಮಗೆ ರವಾನಿಸಿತು. ಅದೇ ರೀತಿ ರಷ್ಯಾ ನಮಗೆ ಒಂದು ಹಡಗಿನ ತುಂಬ ಗೋಧಿಯನ್ನು ಕಳಿಸಿತು. ಮುಂದೆ ವಿಯೆಟ್ನಾಂ ಮೇಲೆ ಅಮೆರಿಕಾ ಸಾರಿದ ಯುದ್ಧದ ಬಗ್ಗೆ ಭಾರತ ಒಂದು ಟೀಕೆ ಮಾಡಿತು ನೋಡಿ. ಆಗ ಭಾರತವನ್ನು ತುಚ್ಛವಾಗಿ ನೋಡಿದ ಅಮೆರಿಕಾದ ಅಧ್ಯಕ್ಷ ಲಿಂಡನ್ ಜಾನ್ಸನ್, ಒಂದು ಭಿಕ್ಷುಕ ರಾಷ್ಟ್ರಕ್ಕೆ ಇಷ್ಟೊಂದು ದುರಹಂಕಾರವೇ? ನೋ, ಅವರಿಗೆ ಏನೂ ಕೊಡಬೇಡಿ ಎಂದುಬಿಟ್ಟ. ಆಗ ಇಂದಿರಾ ಶುರು ಮಾಡಿದ್ದು ಹಸಿರು ಕ್ರಾಂತಿ. ಇದರ ಫಲವಾಗಿ ನಾವೆಲ್ಲ ನಮ್ಮ ದೇಶದಲ್ಲೇ ಅಕ್ಕಿ, ಗೋಧಿ ಉತ್ಪಾದಿಸಿ ಸಂಗ್ರಹಿಸಿಟ್ಟುಕೊಳ್ಳುವಂತಾಯಿತು. ಇದರರ್ಥ, ಒಂದು ಸರ್ಕಾರಕ್ಕೆ ಸಮಾಜವಾದಿ ಧೋರಣೆ ಇರಬೇಕೇ ಹೊರತು ಸಾರಾಸಗಟಾಗಿ ಬಂಡವಾಳಶಾಹಿ ಧೋರಣೆ ಇರಬಾರದು.

ಭಾರತದ ದುರಂತವೆಂದರೆ ಮೋದಿ ಈ ದೇಶದ ಪ್ರಧಾನಿಯಾದ ಮೇಲೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಕೈಗಾರಿಕೋದ್ಯಮಿಗಳು ಸಾಲುಗಟ್ಟಿ ನಿಂತಿದ್ದಾರೆ. ಅದೇ ಕಾಲಕ್ಕೆ ಜನ ಸಾಮಾನ್ಯರೂ ದಿನನಿತ್ಯದ ಬದುಕು ಸರಾಗವಾಗಿ ನಡೆಯುತ್ತದೆ ಎಂಬ ಕನಸಿಟ್ಟುಕೊಂಡಿದ್ದಾರೆ. ಏಕಕಾಲಕ್ಕೆ ಸಮಾಜವಾದಿ ಕನಸು ಮತ್ತು ಬಂಡವಾಳಶಾಹಿ ಕನಸನ್ನು ಈಡೇರಿಸುವ ಜವಾಬ್ದಾರಿ ಈಗ ನರೇಂದ್ರ ಮೋದಿ ಅವರ ಹೆಗಲಿಗೇರಿದೆ. ಹೀಗಾಗಿ ಅವರದು ಈಗ ತಂತಿಯ ಮೇಲಿನ ನಡಿಗೆ. ಇವೆರಡರ ಮಧ್ಯೆ ಅವರು ಸಂಘ ಪರಿವಾರದ ಅಜೆಂಡಾಗಳನ್ನೂ ಜಾರಿಗೆ ತರಬೇಕಾದ ಸ್ಥಿತಿಯಿದೆ. ಅದೆಂದರೆ, ಸ್ವಯಂಬಲ ಇರುವುದರಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಬೇಕು. ಹೇಳಿ ಕೇಳಿ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮುಲಾಯಂ, ಮಾಯಾವತಿಯನ್ನು ಬಗ್ಗು ಬಡಿದ ಜನ ಎಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿಗೆ ಕೊಟ್ಟಿದ್ದಾರೆ. ಹೀಗೆ ಎಪ್ಪತ್ತು ಸೀಟುಗಳನ್ನು ಕೊಡುವುದರ ಹಿಂದೆ ಯಾವ್ಯಾವ ಅಭಿಪ್ರಾಯಗಳಿರುತ್ತವೆ ಎನ್ನುವುದು ರಹಸ್ಯವಲ್ಲ. ಅದನ್ನು ಕೈ ಬಿಡಲು ಸಂಘ ಪರಿವಾರವೂ ಸಿದ್ಧವಿರುವುದಿಲ್ಲ. ಆದ್ದರಿಂದ ಮೋದಿಯ ಮೇಲೆ ಅತಿ ನಿರೀಕ್ಷೆಯ ಭಾರವಿದೆ.

ಹಾಗೆ ನೋಡಿದರೆ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಸ್ವಯಂಬಲ ದೊರೆತಾಗಲೂ ಇಷ್ಟು ಪ್ರಮಾಣದ ನಿರೀಕ್ಷೆ ಇರಲಿಲ್ಲ. ಆದರೆ ದೇಶದಲ್ಲಿ ದೂರ ಸಂಪರ್ಕ ಕ್ರಾಂತಿ ಮಾಡಲು ಅವರಿಗೆ ಸ್ಯಾಮ್ ಪಿತ್ರೋಡಾ ಅವರಂತಹವರು ಸಹಾಯ ಮಾಡಿದರು. ಈಗ ನರೇಂದ್ರ ಮೋದಿಯೂ ಉತ್ತಮ ಪ್ರಧಾನಿ ಆಗಬೇಕು ಎಂಬುದು ನಮ್ಮೆಲ್ಲರ ನಿರೀಕ್ಷೆ. ಆದರೆ ನಮ್ಮ ದೃಷ್ಟಿಯಲ್ಲಿ ಉತ್ತಮ ಪ್ರಧಾನಿ ಎಂದರೆ ಯಾವ ಭಾವನೆ ಇರುತ್ತದೋ, ಅದು ಕೈಗಾರಿಕೋದ್ಯಮಿಗಳ ದೃಷ್ಟಿಯಲ್ಲಿ, ವ್ಯವಹಾರಸ್ಥರ ದೃಷ್ಟಿಯಲ್ಲಿ ಬೇರೆ ಇರುತ್ತದೆ. ಇವೆರಡೂ ಅಭಿಪ್ರಾಯಗಳು ಪರಸ್ಪರ ಘಟಿಸುವಂತಹವು. ಈಗ ಅದನ್ನು ಮೋದಿ ಬಗೆಹರಿಸಬೇಕು. ಸದ್ಯದ ಸ್ಥಿತಿಯಲ್ಲೇನೋ ಕಾಂಗ್ರೆಸ್‌ನ ಸ್ಥಿತಿ ಅತ್ಯಂತ ಹೀನಾಯ ಎನ್ನಿಸಬಹುದು. ಆದರೆ ಮುಂದಿನ ಆರು ತಿಂಗಳಲ್ಲಿ ಮೋದಿ ನಡೆಯನ್ನು ಆ ಪಕ್ಷ ಮಾತ್ರವಲ್ಲ, ಪ್ರಾದೇಶಿಕ ಪಕ್ಷಗಳೂ ಎಚ್ಚರಿಕೆಯಿಂದ ಗಮನಿಸುತ್ತಿರುತ್ತವೆ. ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಮಾಡಿದ ಭಾಷಣ ಏನು? ಅದರಲ್ಲಿ ಈಡೇರಿಕೆಯಾದ ಅಂಶವೆಷ್ಟು? ಈಡೇರಿಕೆಯಾಗದ ಅಂಶವೆಷ್ಟು? ಎಂಬುದನ್ನು ಗಮನಿಸುತ್ತಲೇ ಇರುತ್ತದೆ. ಆದರೆ ಈ ಎಲ್ಲದರ ಕುರಿತು ಜನ ಸಾಮಾನ್ಯರು ಎಚ್ಚರದಲ್ಲಿರಬೇಕು ಎಂದು ಮಾತ್ರ ನಾನು ಹೇಳಲಿಚ್ಛಿಸುತ್ತೇನೆ.
ಇದನ್ನು ಮುಕ್ತಾಯ ಮಾಡುವಾಗ ಒಂದು ಕತೆ ಜ್ಞಾಪಕಕ್ಕೆ ಬರುತ್ತದೆ. ಇದನ್ನು ಯಾರು ಹೇಳಿದ್ದೋ ಗೊತ್ತಿಲ್ಲ. ಆದರೆ ಇದು ವ್ಯಾಪಕವಾಗಿ ಹರಡಿದ ಕತೆ. ಈ ಕತೆಯಲ್ಲಿ ಎರಡು ಊರುಗಳಿರುತ್ತವೆ. ಈ ಎರಡು ಊರುಗಳ ಮಧ್ಯೆ ಓಡಾಟಕ್ಕೆ ಸೇತುವೆ ಇರುವುದಿಲ್ಲ. ಹೀಗಾಗಿ ಅಲ್ಲಿ ಒಂದು ದೋಣಿಯನ್ನು ಬಳಸಿಕೊಳ್ಳಲಾಗುತ್ತದೆ. ಆ ದೋಣಿಯಲ್ಲಿ ದಾಟಲು ಎಂಟಾಣೆ ದರ ನಿಗದಿ ಮಾಡಲಾಗುತ್ತದೆ. ಆಗ ಜನ ಗೊಣಗುತ್ತಾರೆ. ದೋಣಿಗೇನು ಪೆಟ್ರೋಲು ಬೇಕಾ? ಡೀಸೆಲು ಬೇಕಾ? ಹಾಕುವುದು ಹುಟ್ಟು. ಇಷ್ಟಾದರೂ ಎಂಟಾಣೆ ಕೊಡಬೇಕು ಎಂದು ಅನೇಕರು ಗೊಣಗುತ್ತಾರೆ. ಕೊನೆಗೊಂದು ದಿನ ಎಂಟಾಣೆ ಇಸಕೊಳ್ಳುವ ದೋಣಿಯವನಿಗೆ ಗೇಟ್‌ಪಾಸ್ ಕೊಟ್ಟು ಹೊಸಬನನ್ನು ಕರೆಸಿಕೊಳ್ಳುತ್ತಾರೆ. ಆದರೆ ನಾಲ್ಕು ದಿನ ಸುಮ್ಮನಿರುವ ಅವನು ದೋಣಿಯಲ್ಲಿ ಪ್ರಯಾಣಿಸಲು ಹನ್ನೆರಡಾಣೆ ಬೆಲೆ ನಿಗದಿ ಮಾಡುತ್ತಾನೆ. ಆಗ ಜನರಿಗೆ ಸಿಟ್ಟು ಬರುತ್ತದೆ. ಹಿಂದಿನವನೇ ವಾಸಿ ಇದ್ದ. ಕೇವಲ ಎಂಟಾಣೆ ಇಸಕೊಳ್ಳುತ್ತಿದ್ದ. ಆದರೆ ಇವನು ಹನ್ನೆರಡಾಣೆ ಮಾಡಿದ್ದಾನೆ. ಇವನಿಗೂ ಗೇಟ್‌ಪಾಸ್ ಕೊಡಬೇಕು ಎಂದು ತೀರ್ಮಾನಿಸುತ್ತಾರೆ. ಕೊನೆಗೊಂದು ದಿನ ಅದೂ ಜಾರಿಯಾಗುತ್ತದೆ. ಅವನ ಜಾಗದಲ್ಲಿ ಮತ್ತೋರ್ವ ಹೊಸಬ ಬರುತ್ತಾನೆ. ಆದರೆ ಆತ ಸ್ವಲ್ಪ ದಿನ ಕಳೆಯುವುದಲ್ಲಿ ದೋಣಿ ಪ್ರಯಾಣದ ಶುಲ್ಕವನ್ನು ಒಂದು ರುಪಾಯಿಗೆ ಏರಿಸುತ್ತಾನೆ. ಆಗ ಜನರಿಗೆ ಅರ್ಥವಾಗುತ್ತದೆ. ಯಾರೇ ಬಂದರೂ ಖರ್ಚಿನ ಬಾಬ್ತು ಕಡಿಮೆಯಾಗುವುದಿಲ್ಲ. ಹೀಗಾಗಿ ದುಡ್ಡು ಕೊಡಲು ಅಗತ್ಯವಾಗುವಂತೆ ನಾವು ದುಡಿಯಬೇಕೇ ಹೊರತು ಬೇರೆಯವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ.
ಇವತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಿಂದ ಹೋದ ಕೂಡಲೇ ಇನ್ನು ಮುಂದೆ ಬರುವುದು ರಾಮರಾಜ್ಯ ಎಂದು ಜನ ಅಂದುಕೊಂಡಿದ್ದಾರೆ. ಆದರೆ ನಮ್ಮ ಹಿರಿಯರಿಗೆ ಗೊತ್ತಿತ್ತು. ಯಾರೇ ಅರಸನಾದರೂ ರಾಗಿ ಬೀಸುವುದು ತಪ್ಪುವುದಿಲ್ಲ ಎಂಬುದು ಅರ್ಥವಾಗುತ್ತಿತ್ತು. ಈಗಿನವರಿಗೂ ಅದು ಅರ್ಥವಾಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಕಾಲ ಕಳೆಯಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books