Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮುಪ್ಪು ಬರಲಿ ಆದರೆ ಅದಕ್ಕೆ ಸಿದ್ಧರಾಗಿದ್ದು ಬಿಡೋಣ!

ಅದೊಂದು ಅಪರೂಪದ ಭೇಟಿ. ನಾನೇ ವಿನಂತಿಸಿದ್ದೆ. “ಅವರು ಖಂಡಿತವಾಗ್ಯೂ ಬರಲಿ" ಅಂದಿದ್ದರು ರಾಜಕುಮಾರ್. ಹೋಗುವ ಹೊತ್ತಿಗೆ ಅವರು ಸಿದ್ಧರಾಗಿಯೇ ಕುಳಿತಿದ್ದರು. ತುಂಬ ಶುಭ್ರವಾದ ಬಿಳೀ ಅಂಗಿ, ಬಿಳೀ ಪಂಚೆ. ನೋಡಲಿಕ್ಕೆ ರಾಜಕುಮಾರ್ ತುಂಬ ಸುಂದರ. ಕಣ್ಣುಗಳಲ್ಲಿ ಎಂಥದೋ ಅಮಾಯಕತೆ. ಆಗಿನ್ನೂ ಅವರಿಗೆ ಮೊಳಕಾಲಿನ ಸಮಸ್ಯೆ ತೀವ್ರವಾಗಿರಲಿಲ್ಲ. ಹಾಲ್‌ಗೆ ಕಾಲಿಟ್ಟ ತಕ್ಷಣ ಕೈ ಮುಗಿದು ಎದ್ದು ನಿಂತು “ಬನ್ನಿ ಬನ್ನಿ... ಎಷ್ಟು ಚೆನ್ನಾಗಿ ಬರೀತೀರಾ" ಅನ್ನುತ್ತಾ ಸ್ವಾಗತಿಸಿದರು. ಹಾಲ್‌ನಲ್ಲಿ ನಾವಿಬ್ಬರೇ ಇದ್ದೆವು. ಹೀಗೆಯೇ ಉಭಯ ಕುಶಲೋಪರಿ ಎಂಬಂತಹ ಮಾತು. “ನಿಮ್ಮನ್ನು ನೋಡಬೇಕಂತೆ" ಅಂತ ಅವರ ಸಹಾಯಕನೊಬ್ಬ ಒಳಬಂದು ಹೇಳಿದ. ಅದಕ್ಕೆ ರಾಜ್ ತಕ್ಷಣ ಸ್ಪಂದಿಸಿದರು. ಒಳ ಬಂದವರಿಬ್ಬರೂ ಮಧ್ಯ ವಯಸ್ಸು ದಾಟಿದವರೇ. ಆಗಲೂ ರಾಜ್ ಎದ್ದು ನಿಂತು ನಮಸ್ಕರಿಸಿ ಸ್ವಾಗತಿಸಿದರು. ಆ ಪೈಕಿ ಒಬ್ಬಾತ ಗದ್ಗದಿತ ದನಿಯಲ್ಲಿ,

“ಅಣ್ಣಾ, ನಾನು ಮೊನ್ನೆ ರಿಟೈರಾಗಿ ಬಿಟ್ಟೆ!" ಅಂದರು. ಬೇರೆಯವರಾಗಿದ್ದಿದ್ರೆ “ಹೌದಾ, ಪಾಪ" ಅನ್ನುತ್ತಿದ್ದರೇನೋ. ಆದರೆ ರಾಜ್,
“ಹೌದಾ, ಅದಕ್ಕೇ ನೋಡಿ, ಎಷ್ಟು ಚೆನ್ನಾಗಿ ಲವಲವಿಕೆಯಿಂದ, ಆರೋಗ್ಯವಂತರಾಗಿ ಕಾಣ್ತೀರಿ! ಒಳ್ಳೆಯದೇ ಆಯಿತು. ಈಗ ಆರಾಮಾಗಿದ್ದು ಬಿಡಿ" ಅಂದರು. ತಕ್ಷಣ ಎಂಥದ್ದೋ ಚೇತರಿಕೆ ತುಂಬಿ ಬಂದಂತಾಗಿ ಆತ,
“ಹೂಂ ಅಣ್ಣಾ, ಮನೆ ಕಟ್ಟಿಸೋಕೆ ಶುರು ಮಾಡಿದೀನಿ" ಅಂದುಬಿಟ್ಟ.
ಇದನ್ನು ನಾನು ಈ ಮೊದಲೇ ಬರೆದಿದ್ದೇನೆ. ಇಷ್ಟು ವರ್ಷಗಳಾದರೂ ಆ ದೃಶ್ಯ, ಆ ಮಾತು ನನ್ನ ನೆನಪಿನಿಂದ ಸರಿದು ಹೋಗಿಲ್ಲ. ಹೀಗೆ ಮಾತನಾಡಲಿಕ್ಕೆ ತುಂಬ ಓದಿಕೊಂಡವರೂ ಅಲ್ಲ. ಆದರೆ ಜನರೆದುರು ಏನನ್ನು, ಯಾವ ಸಂದರ್ಭದಲ್ಲಿ, ಹೇಗೆ ಮಾತನಾಡಬೇಕು ಎಂಬ ಕಾಮನ್‌ಸೆನ್ಸ್ ಅವರಲ್ಲಿ ತುಂಬ ಇತ್ತು. ಆ ಸಜ್ಜನಿಕೆಯೂ ಇತ್ತು. ಅದರಲ್ಲಿ ನಾಟಕವಿರುತ್ತಿರಲಿಲ್ಲ.
ಇವತ್ತೇಕೆ ಇದರ ನೆನಪಾಯಿತು ಅಂದರೆ, ನಾನು ರಿಟೈರ್‌ಮೆಂಟ್ ಬಗ್ಗೆ ಯೋಚಿಸುತ್ತಿದ್ದೆ.

ನಮಗದು ಗೊತ್ತೇ ಆಗುವುದಿಲ್ಲ. ನಿನ್ನೆ ಮೊನ್ನೆಯ ತರುಣ ನಾನು. ಆಗಲೇ ರಿಟೈರ್‌ಮೆಂಟಿಗೆ ಬಂದು ಬಿಟ್ಟೆನಾ? ಅಂತ ಸಹಜವಾಗಿಯೇ ಎಂಥವರಿಗೂ ಅನ್ನಿಸುತ್ತದೆ. ರಿಟೈರ್‌ಮೆಂಟ್ ಅನ್ನೋದು ಒಂದರ್ಥದಲ್ಲಿ ಅನೇಕರಿಗೆ ಒಂದು ತೆರನಾದ shock. ಅದನ್ನು ಎದುರಿಸಲಿಕ್ಕೆ ಹೆಚ್ಚಿನವರಿಗೆ ಆಗುವುದಿಲ್ಲ. ಒಬ್ಬ ರೈತ, ಅಂಗಡಿ ಹೊಂದಿರುವ ವ್ಯಾಪಾರಿ, ಬರಹಗಾರ ಮುಂತಾದ ವೃತ್ತಿಗಳಲ್ಲಿರುವವರಿಗೆ ಅಸಲು ರಿಟೈರ್‌ಮೆಂಟ್ ಇರುವುದೇ ಇಲ್ಲ. ತಾನು ಗೇಯ್ಮೆ ಮಾಡಿದ ತನ್ನದೇ ಜಮೀನಿಗೆ ನಡೆದು ಹೋಗುವ ತಾಕತ್ತಿರುವುದಿಲ್ಲ. ಆದರೆ ಅಂಥ ರೈತ ತನ್ನ ಮುಪ್ಪಾನೆ ಮುದಿತನದಲ್ಲೂ ಜಮೀನಿನ ಪಹಣಿಯಲ್ಲಿ ತನ್ನ ಹೆಸರು ತೆಗೆದು ಹಾಕಿದರೆ ಸಹಿಸುವುದಿಲ್ಲ. ಕಿರಾಣಿ ಅಂಗಡಿ ನಡೆಸುವ ಶೆಟ್ಟರ ಅಜ್ಜನನ್ನು ನೋಡಿ? ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರಿಗೆ ಮೊಮ್ಮಕ್ಕಳು ಬಂದರೂ ಜನಿವಾರಕ್ಕೆ ಕಟ್ಟಿಕೊಂಡ ಅಂಗಡಿಯ ಬೀಗದ ಕೈಯನ್ನು ಮಗನಿಗೆ ಬಿಚ್ಚಿ ಕೊಟ್ಟಿರುವುದಿಲ್ಲ. ಈ ತೆರನಾದ ವೃತ್ತಿಗಳಲ್ಲಿರುವವರಿಗೆ ರಿಟೈರ್‌ಮೆಂಟ್ ಇರುವುದೇ ಇಲ್ಲ. ಆದರೆ ವಯಸ್ಸು ಎಂಬುದು ಅನೇಕರನ್ನು ಕಾಡುತ್ತದೆ. ಹೈರಾಣ ಮಾಡುತ್ತದೆ. ಅಧೀರರನ್ನಾಗಿ ಮಾಡುತ್ತದೆ. ವಿಶೇಷವಾಗಿ ದೊಡ್ಡ ಹುದ್ದೆಯಲ್ಲಿದ್ದು ರಿಟೈರ್ ಆದ ಸರ್ಕಾರಿ ನೌಕರರಿಗೆ ರಿಟೈರ್‌ಮೆಂಟ್ ಎಂಬುದು ಬಹು ದೊಡ್ಡ ಆಘಾತವುಂಟು ಮಾಡುತ್ತದೆ. ಬರಹಗಾರರಿಗೂ, ಕಲಾವಿದರಿಗೂ ಈ ಕಾಟ ಕಾಡದೆ ಇರಲಾರದು. ಎಂಥ ಅದ್ಭುತ ಗಾಯಕಿ ಅನ್ನಿಸಿಕೊಂಡ ಲತಾ ಮಂಗೇಷ್ಕರ್, ಈಗ ಹಾಡಲು ನಿಂತರೆ-ಕೇಳುವುದೇ ಒಂದು ಶಾಪ. ಆಕೆಯ ತಂಗಿ ಆಶಾ ಭೋಸ್ಲೆಯದೂ ಇದೇ ಸಮಸ್ಯೆ. ಸಾಕಷ್ಟು ವಯಸ್ಸಾದ ಮೇಲೆ ಆ ಅಮೋಘ ಗಾಯಕ ಪಿ.ಬಿ.ಶ್ರೀನಿವಾಸ್ ಹಾಡಲು ನಿಂತರೆ, ನಿಜಕ್ಕೂ ಅದೊಂದು ಕೇಳುಗರ ಪಾಲಿಗೆ ಪನಿಷ್‌ಮೆಂಟ್ ಅಂತಲೇ ಅನ್ನಿಸುತ್ತಿತ್ತು. ಆ ತರಹದವರಿಗೆ ವಯಸ್ಸೇ ಒಂದು ತೆರನಾದ ಅಗೋಚರ ರಿಟೈರ್‌ಮೆಂಟನ್ನು ಕೊಟ್ಟುಬಿಡುತ್ತದೆ. ಬರಹಗಾರರದಿನ್ನೇನು? ವಯಸ್ಸಾಗುತ್ತಾ ಆಗುತ್ತಾ ನಾವು ಬರೆಯುವುದು ಇನ್ನು ಅಸಾಧ್ಯ, ಒಂದಕ್ಕೊಂದು ಸಂಬಂಧವೇ ಇಲ್ಲದೆ, incoherent ಆದೆ ಅನ್ನಿಸಿಬಿಡುತ್ತದೆ. ಈ ಶಾಪ ತಪ್ಪಿದ್ದೇ ಅಲ್ಲ. ಚಿರನೂತನ ಗಂಧರ್ವರಲ್ಲವಲ್ಲ ನಾವು. ನಿನ್ನೆಯ ತನಕ ಫಳಫಳ ಹೊಳೆಯುತ್ತಿದ್ದ ಕಣ್ಣು ಇತ್ತೀಚೆಗೆ ಯಾಕೋ ಬ್ಲರ್ ಆಗುತ್ತಿವೆ ಅನ್ನಿಸತೊಡಗುತ್ತದೆ. ಕಿವಿಗಳು ಮೊದಲಿನಷ್ಟು ಚುರುಕಾಗಿಲ್ಲ ಅನ್ನಿಸುತ್ತದೆ. ಯಾಕೆ ಹೀಗೆ ನೆನಪಿನ ಶಕ್ತಿ ಕ್ಷೀಣಿಸುತ್ತದೆ ಅಂದುಕೊಳ್ತೇವೆ. ಕಿವಿ ಮಂದವಾಗುತ್ತವೆ. ನಡಿಗೆ ತನ್ನ ಚುರುಕುತನ ಕಳೆದುಕೊಳ್ಳುತ್ತದೆ. ಕೈಕಾಲುಗಳಲ್ಲಿ ಎಂಥದೋ ಜೋಮು. “ಮಾರಾಯಾ, ಉಳಿದದ್ದು ಹಾಗಿರಲಿ. ನನ್ನ ಎರಡೂ ಅಂಗಾಲು ಚರ್ಮದ ರಟ್ಟಿನಂತಾಗಿಬಿಟ್ಟಿವೆ. ಎರಡರಲ್ಲೂ ಸೆನ್ಸೇಷನ್ ಹೋಗಿಬಿಟ್ಟಿದೆ" ಅಂದದ್ದು ನನ್ನ ದೊಡ್ಡ ಸೋದರ ಮಾವನ ಮಗ.

ಇದೆಲ್ಲ ನಮಗೂ ಆದರೆ ಗತಿಯೇನು?
ನಿಮ್ಮನ್ನು ಹೆದರಿಸುತ್ತಿಲ್ಲ. ಎಲ್ಲರ ಕತೆಯೂ ಹೆಚ್ಚು ಕಡಿಮೆ ಇದೇನೆ. ಕೆಲವರಿಗೆ ಮುಪ್ಪೆಂಬುದು ಲೇಟಾಗಿ ಬರುತ್ತದೆ. ಮತ್ತೆ ಕೆಲವರಿಗೆ ಬೇಗ ಬೇಗ. ಇಷ್ಟು ವರ್ಷ ಆಯಿತಲ್ಲ? ನೋಡಿ ಎಷ್ಟು ಗಟ್ಟಿಮುಟ್ಟಾಗಿದ್ದೇನೆ ಅಂದುಕೊಳ್ಳುತ್ತೇವೆ. ಆದರೆ ಡಾ.ಜವಳಿ ಹಿಂದೊಮ್ಮೆ ಅಂದದ್ದು ನೆನಪಾಗುತ್ತದೆ. “ವಯಸ್ಸಾದರೆ ಅದು ಒಂದೊಂದೇ symptoms ತೋರಗೊಡುವುದಿಲ್ಲ. ಆದರೆ ಅನೇಕ ಸಲ ಮುಪ್ಪು ಎಂಬುದು ಒಂದೇ ಸಲಕ್ಕೆ, ತುಂಬ ತೀವ್ರವಾಗಿ, ದಬದಬನೆ ಆವರಿಸಿಕೊಂಡು ಬಿಡುತ್ತದೆ. Be carefull" ಅಂದಿದ್ದರು. ಈಗ ಅವರ ಮಾತು ಅನೇಕರನ್ನು ನೋಡಿದಾಗ ಸತ್ಯ ಅನ್ನಿಸುತ್ತದೆ. ನನಗೆ ಮುಪ್ಪು ಬಂತಾ? ಚೆಕ್ ಮಾಡಿಕೊಳ್ಳುತ್ತಿರುತ್ತೇನೆ. ಆದರೆ ಬರಲಿರುವ ಮುಪ್ಪನ್ನು ಕುರಿತು ವಿಪರೀತ ಹೆದರಿಕೆ ಹುಟ್ಟಿಸಿಕೊಂಡರೆ ಅದೊಂದು ಖಾಯಿಲೆ. ಅದಕ್ಕೆ ಇಂಗ್ಲಿಷಿನಲ್ಲಿ ‘ಜೆರಂಟೋ ಫೋಬಿಯಾ’ ಅನ್ನುತ್ತಾರೆ. ಮುದಿಯಾಗುತ್ತಿದ್ದೇನಾ ಎಂಬ ಅಗೋಚರ ಭಯ.

ಅದಿರಲಿ, ವೃದ್ಧಾಪ್ಯವನ್ನು ಎದುರಿಸಲಿಕ್ಕೆ ಕೆಲವು ಸಿದ್ಧತೆಗಳನ್ನಾದರೂ ಮಾಡಿಕೊಳ್ಳಬೇಕಲ್ಲ? ಈ ಬಗ್ಗೆ ಕೆಲ ವರ್ಷಗಳ ಹಿಂದೆ ಖುಷ್ವಂತ್ ಸಿಂಗ್ ತುಂಬ ಚೆನ್ನಾಗಿ ಬರೆದಿದ್ದರು. ಅದರ ತಾತ್ಪರ್ಯವನ್ನು ನಾನು ಕನ್ನಡದಲ್ಲೂ ನಿಮಗಾಗಿ ಬರೆದಿದ್ದೆ.
ಆ ಮಾತು ಬಿಡಿ, ನನಗೆ ಅನ್ನಿಸಿದ ಕೆಲ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮೊದಲನೆಯದಾಗಿ, ನಿಮ್ಮ ದೇಹದ ರಿಫ್ಲೆಕ್ಸ್‌ಗಳು ಹೇಗಿವೆ ಅಂತ ಐವತ್ತು ದಾಟಿದ ನಂತರ ಆಗಾಗ ನೋಡಿಕೊಳ್ಳುತ್ತಿರಿ. ನಾನು ಕಾರ್ ಓಡಿಸುವುದನ್ನು ನಿಲ್ಲಿಸಿ ಹದಿಮೂರು ವರ್ಷಗಳಾಗಿವೆ. ಆದರೆ ಒಮ್ಮೊಮ್ಮೆ ಡ್ರೈವರ್‌ನನ್ನು ಪಕ್ಕಕ್ಕೆ ಕೂಡಿಸಿ ನಾನೇ ಓಡಿಸುತ್ತೇನೆ. ಆಗ ನಿಮ್ಮ ಕಾಲು, ಕೈ, ಕಣ್ಣು, ಜಡ್ಜ್‌ಮೆಂಟ್ ಇವೆಲ್ಲ ಕೆಲಸ ಮಾಡುತ್ತಿವೆಯಾ ಎಂಬುದು ಗೊತ್ತಾಗುತ್ತದೆ. ಡಯಾಬಿಟೀಸ್ ಇರುವವರು ಮೂರು ತಿಂಗಳಿಗೊಮ್ಮೆ ‘ಎಚ್.ಬಿ.ಎ.ಸಿ’ ಎಂಬ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಆರು ತಿಂಗಳಿಗೊಮ್ಮೆಯಾದರೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಊಟಕ್ಕೆ ಕುಳಿತಾಗ ಉಪ್ಪು-ತುಪ್ಪ, ಸಕ್ಕರೆ, ಮುಂತಾದ ಎಕ್ಸ್‌ಟ್ರಾ ವಸ್ತುಗಳನ್ನು ಹತ್ತಿರಕ್ಕೂ ಸೇರಿಸಬಾರದು. ಮುಟ್ಟು ನಿಲ್ಲುವ ವಯಸ್ಸು ಸಮೀಪಿಸಿದಾಗ ಮತ್ತು ಆ ನಂತರವೂ ಹೆಣ್ಣುಮಕ್ಕಳು ತಮ್ಮ ಸ್ತನವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಅವುಗಳಲ್ಲಿ ಗೆಡ್ಡೆಗಳಿವೆಯಾ? ಸ್ತನದ ತೊಟ್ಟಿನ ಸುತ್ತಲೂ ಚಿಕ್ಕ ಚಿಕ್ಕ ರಂಧ್ರಗಳಾಗಿ, ಅದು ಕಿತ್ತಳೆ ಸಿಪ್ಪೆಯಂತೆ ಕಾಣುತ್ತಿದೆಯಾ ಅಂತ ನೋಡಬೇಕು. ಕ್ಯಾನ್ಸರ್ ಪತ್ತೆಯಾಗುವುದು ಆಗಲೇ. ನಿಮ್ಮ ಜನ್ಮದಿನದಂದು ಬೇರೆ ಏನನ್ನಾದರೂ ಮಾಡಿಕೊಳ್ಳಿ. ಆದರೆ ಅವತ್ತು ನಿಮ್ಮ ಕಣ್ಣು, ಹಲ್ಲು, ಸಕ್ಕರೆ, ಬಿಪಿ ಇತ್ಯಾದಿಗಳನ್ನು ಚೆಕ್ ಮಾಡಿಸಲೇಬೇಕು. ಡಯಾಬಿಟೀಸ್ ಕಾಟಕ್ಕೆ ಸಿಕ್ಕವರಾದರೆ ಅವರು ರಾತ್ರಿ ಮಲಗುವಾಗ ತಮ್ಮ ಎರಡೂ ಪಾದಗಳನ್ನು ತುಂಬ ಸೂಕ್ಷ್ಮವಾಗಿ ನೋಡಿಕೊಂಡೇ ಮಲಗಬೇಕು. ಪಾದದಲ್ಲಿ ಒಡಕು, ಗಾಯ ಮುಂತಾದವು ಅನಾಹುತಕಾರಿ ಗ್ಯಾಂಗ್ರಿನ್‌ಗೆ ತಿರುಗಿಕೊಳ್ಳುತ್ತವೆ. ಅಪ್ಪ ಎಷ್ಟು ವರ್ಷ ಬದುಕಿದ್ದ? ಅಮ್ಮ? ಅಣ್ಣಂದಿರು? ಇವುಗಳನ್ನು ಆಗಾಗ ನೆನಪಿಸಿಕೊಳ್ಳಬೇಕು. ಏಕೆಂದರೆ ಕೆಲವರ ಮನೆಗಳಲ್ಲಿ ತುಂಬ ಚಿಕ್ಕ ಪ್ರಾಯಕ್ಕೆ ಸಾವುಗಳಾಗಿರುತ್ತವೆ. ಅದು ಅನುವಂಶಿಕವೂ ಹೌದು. ಮಾನಸಿಕ ಸಮಸ್ಯೆಗಳಿದ್ದರೆ, ತಕ್ಷಣಕ್ಕೆ ವೈದ್ಯರನ್ನು ಕಾಣಬೇಕು. ನಿಮಗೆ ಆಶ್ಚರ್ಯವಾಗಬಹುದು. ಇನ್ನೂ ಮೂವತ್ತು ದಾಟಿರುವುದಿಲ್ಲ. ಅಂಥವರಿಗೆ ಶೀಘ್ರಸ್ಖಲನದ ಸಮಸ್ಯೆ ಕಂಡು ಬರುತ್ತದೆ. ನೆನಪಿರಲಿ, ಇದು ಹೃದಯಾಘಾತದ ಸೂಚನೆ. ಇದೇನು, ಹೃದಯಕ್ಕೂ, ಸ್ಖಲನಕ್ಕೂ ಎಂಥ ಸಂಬಂಧ ಅಂತ ಅಂದುಕೊಳ್ಳಬಹುದು. ಗೊತ್ತಿರಲಿ, ಹೃದಯ ಮತ್ತು ಗುಪ್ತಾಂಗಗಳೆರಡಕ್ಕೂ ರಕ್ತವನ್ನು ಹೃದಯವೇ ಸಪ್ಲೈ ಮಾಡುತ್ತಿರುತ್ತದೆ. ಇಂಥ ಸರಳ ಸಂಗತಿಗಳು ಹಾಗೂ ಅವುಗಳ ತೀವ್ರತೆಯ ಕಡೆಗೆ ಗಮನವಿಡಲೇಬೇಕು. ‘ಏನೂಂತ ಗೊತ್ತಿರಲೇ ಇಲ್ಲ. ಸಡನ್ನಾಗಿ ಹಾರ್ಟ್ ಫೇಲ್ ಆಗಿ ಸತ್ತು ಹೋದರು’ ಅನ್ನುತ್ತಿರುತ್ತೇವೆ. ಆದರೆ ಇವತ್ತಿನ ಕಾಲಮಾನದಲ್ಲಿ ಹೃದಯಾಘಾತದಿಂದ ಕೇವಲ ಕೆಲವು ‘ಪೆದ್ದರು’ ಸಾಯುತ್ತಾರೆ. ಸರಿಯಾಗಿ ನಲವತ್ತು-ಐವತ್ತು ತಲುಪಿದವರು ಅಥವಾ ಅವರಿಗಿಂತ ಕೊಂಚ ಚಿಕ್ಕವರು ಆಗಾಗ್ಗೆ ಹೃದಯ ಸಂಬಂಧಿ ಚೆಕಪ್‌ಗಳನ್ನು ಮಾಡಿಸುತ್ತಿದ್ದರೆ ಹೃದಯಾಘಾತವೆಂಬ ಅನಿಷ್ಟ, ಅದು ಸಂಭವಿಸುವುದಕ್ಕೆ ಮುಂಚೆಯೇ warning ಕೊಡುತ್ತಿದೆಯೆಂಬುದು ಗೊತ್ತಾಗಿಬಿಡುತ್ತದೆ. ಆಗ ಸಲೀಸಾಗಿ ಅದರಿಂದ ತಪ್ಪಿಸಿಕೊಳ್ಳಬಹುದು.

ಇದರ ಮಧ್ಯೆ ನಿಮ್ಮ ಲೈಂಗಿಕತೆ, ಅದರಲ್ಲಿನ performance ಮೊದಲಿನಷ್ಟೆ ಸರಿಯಾಗಿ ಇದೆಯಾ ಎಂಬುದನ್ನು ನೀವೇ ಗೊತ್ತು ಮಾಡಿಕೊಳ್ಳುತ್ತಿರಬೇಕು. “ಅದಿನ್ನು ಮುಗಿಯಿತು" ಅಂತ ಅಂದುಕೊಳ್ಳಲೇಬೇಡಿ. ನಿಯಮಿತವಾಗಿ ಆ ಆಟದಲ್ಲಿ ತೊಡಗಿದ್ದರೆ ನಿಮ್ಮೊಳಗಿನ ಆಸೆ ಅಥವಾ desire ಮೊದಲಿನಂತೆಯೇ ನಿಮ್ಮಲ್ಲಿ ಉದ್ಭವಿಸುತ್ತದೆ. ಒಂದು ಸಲ ನಿಮ್ಮನ್ನು ನೀವೇ ಕೇಳಿಕೊಳ್ಳಿ; ನಾನು ಮೊದಲಿಗಿಂತ ವಿಪರೀತ ಹೆಚ್ಚಾಗಿ ಮಾತಾಡುತ್ತಿದ್ದೇನಾ? ಅದು ಕೂಡ ವೃದ್ಧಾಪ್ಯದ ಮುನ್ಸೂಚನೆಯೇ. ನಮ್ಮ ಊಟದ ಪ್ರಮಾಣ, ಸೆಕ್ಸ್ ಪ್ಯಾಟರ್ನ್, ನೆನಪಿನ ಶಕ್ತಿ, ಇತ್ಯಾದಿಗಳನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಲೇ ಇರಬೇಕು. ‘ಮೊದಲೆಲ್ಲ ಒಂದು ಸಿಟ್ಟಿಂಗ್‌ನಲ್ಲಿ ಆರು-ಎಂಟು ಪೆಗ್ ಕುಡಿಯುತ್ತಿದ್ದೆ. ಈಗ ಮೂರಕ್ಕೆ ಸಾಕು ಅನ್ನಿಸುತ್ತಿದೆ’ ಎಂಬುದು ನಿಮ್ಮ ತಕರಾರಾದರೆ, ಎರಡೂವರೆ ಪೆಗ್‌ಗೆ ಟೇಬಲ್ ಬಿಟ್ಟು ಎದ್ದು ಬಿಡಿ. “ನಿನ್ನ ಪರ್ಸನಾಲಿಟಿಗೆ ಇನ್ನೊಂದು ಪೆಗ್ ಸಾಧ್ಯವಿಲ್ಲವಾ" ಅಂತ ಗೆಳೆಯರು ಕೇಳಿದರೆ ಅವರು ನಿಮ್ಮ ಶತ್ರುಗಳೇ ಸರಿ ಅಂತ ನಿರ್ಧರಿಸಿ.

ಕೊಂಚ crude ಆಗಿ ಪಾಟೀಲ ಪುಟ್ಟಪ್ಪ ಒಂದು ಸಂಗತಿ ಹೇಳುತ್ತಿರುತ್ತಾರೆ: “ನೋಡು ತಮ್ಮಾ ನಿನ್ನ ಬುದ್ಧಿ, ನಿಮ್ಮ ಮುದ್ದಿ (ಊಟ) ಮತ್ತು ಲದ್ದಿ ಸರಿಯಾಗಿ ಇವೆಯಾ? ನೋಡಿಕೋ" ಅನ್ನುತ್ತಿರುತ್ತಾರೆ. ಸರಿಯಾದ ನಿರ್ಣಯ ತೆಗೆದುಕೊಳ್ಳಬಲ್ಲ ತಾಕತ್ತು ನಿನ್ನ ಬುದ್ಧಿಗೆ ಇದೆಯಾ? ಹೋಗಿ ಕುಳಿತ ತಕ್ಷಣ ವಿಸರ್ಜನೆ ಆಗುತ್ತಿದೆಯಾ? ಉಟ ಸರಿಯಾಗಿ ಮಾಡುತ್ತಿದ್ದೇನಾ? ಆಗಾಗ ಕೇಳಿಕೊಳ್ಳುತ್ತಿರಬೇಕು. ಇವು ಸರಿಯಾಗಿದ್ದರೆ ಯಾವ ಡಾಕ್ಟರೂ ಬೇಡ. ‘ಬುದ್ಧಿ, ಲದ್ದಿ, ಮುದ್ದಿ’ ಎಲ್ಲವೂ ಸರಿಯಾಗಿರಬೇಕು ಎಂಬುದು ಅವರ ಭಾಷ್ಯ.
ಬಿಡಿ, ಎಲ್ಲರಿಗೂ ಮುಪ್ಪು ಬಂದೇ ಬರುತ್ತದೆ. ಆಯುಷ್ಯವೆಂಬ ರೇಷನ್ ಕಣ್ಣಿಗೆ ಕಾಣುವುದಿಲ್ಲ. ಸ್ವಂತ ಮನೆ, ನಮ್ಮ ಅನ್ನಕ್ಕೆ ‘ದೇಹೀ’ ಅನ್ನಬಾರದು ಎಂಬಷ್ಟು ಹಣ, ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುವುದಕ್ಕೆ ಒಂದು ನಂಬಿದ ಜೀವ, ಮಕ್ಕಳೆಲ್ಲ ಸೆಟ್ಲ್ ಆಗಿದ್ದಾರೆ, ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ, ಶತ್ರುಗಳ ಗ್ರಾಫ್ ಅತಿರೇಕಕ್ಕೆ ಹೋಗಿಲ್ಲ, ಮೈಮುರಿದು ದುಡಿಯಬೇಕಾಗಿಲ್ಲ ಮತ್ತು ನನಗೆ ಅತಿರೇಕದ ಆಕಾಂಕ್ಷೆಗಳಿಲ್ಲ ಎಂಬ ಸ್ಥಿತಿಯಲ್ಲಿ ನಾವಿದ್ದರೆ ನಿಜಕ್ಕೂ ಮುಪ್ಪು ನಮ್ಮನ್ನು ಹೆದರಿಸಲಾರದು. ನನಗಿನ್ನೂ ಐವತ್ತೇಳು. ಒಂದು comfortable ರಿಟೈರ್‌ಮೆಂಟಿಗೆ ಸಿದ್ಧನಾಗಬೇಕಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books