Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಒಬ್ಬ ಬುದ್ಧಿವಂತ ಮತ್ತು ಚೆಂದನೆಯ ಹುಡುಗಿ ಜಾಯಲ್‌ಳ ಮದುವೆಗೆ ಸಾಕ್ಷಿಯಾಗಿ...

ಅದು ಶುರುವಾದದ್ದು ಹೀಗೆ.
ಫೇಸ್‌ಬುಕ್‌ನಲ್ಲಿ ನನಗೊಂದು ಮೆಸೇಜ್ ಇತ್ತು; ಫೇಸ್‌ಬುಕ್ ಬಗ್ಗೆಯೇ. “ಇದೊಂದು ತೆರನಾದ ನಾರ್ಸಿಸಿಸಮ್ ಅಲ್ವೆ? My office, My car, My dog, My bull, My shit! ಎಲ್ಲವೂ ಆತ್ಮರತಿಯ ಸ್ಟೇಟಸ್‌ಗಳೇ. ಅದು ಬಿಟ್ಟರೆ, ಅವನೇನು ಮಾಡುತ್ತಿದ್ದಾನೆ? ಇವಳ ಗೆಳೆಯ ಯಾರು? ಸಿಂಗಲ್ಲಾ? ರಿಲೇಷನ್‌ಷಿಪ್‌ನಲ್ಲಿದ್ದಾಳಾ? ಎಂಬಂತಹ ಕೆಲಸಕ್ಕೆ ಬಾರದ ಕುತೂಹಲ. ಇಷ್ಟರ ಹೊರತು ಮತ್ತೇನಿದೆ ರವಿ ಸರ್?" ಎಂದು ಹುಡುಗಿಯೊಬ್ಬಳು ಮೆಸೇಜ್ ಕಳಿಸಿದ್ದಳು. “Exactly, ನನಗೂ ಹಾಗೆ ಅನ್ಸುತ್ತೆ. ಅದೊಂದು ರೀತಿ ಸಾರ್ವಜನಿಕ ಮೂತ್ರಾಲಯದಂಥ ಸೋಷಿಯಲ್ ನೆಟ್‌ವರ್ಕ್. ಕೆಲವು ಸಲ ಒಳ್ಳೆಯದೂ ಆಗುತ್ತೆ. ಯಾವತ್ತೋ ಕಳೆದು ಹೋದ ಗೆಳೆಯ, ಮುನಿಸಿಕೊಂಡ ಗೆಳತಿ, ನಮ್ಮದೇ ಅಭಿಪ್ರಾಯಗಳಿರುವ ಹೊಸ ಮಿತ್ರ, ನಾವಿನ್ನೂ ಓದದೇ ಇರುವ ಪುಸ್ತಕ, ನೋಡದಿರುವ ದೇಶ-ಊರು ಸಿಗುತ್ತವೆ. ಗಂಭೀರವಾದ ಚರ್ಚೆ ಮುಂತಾದವು ಕೂಡ ಸಾಧ್ಯ. ಆದರೆ ಅದೊಂದು ವ್ಯಸನ. ಭಯಂಕರ ಚಟ. ಗಂಟೆಗೊಮ್ಮೆ ಮುಟ್ಟಿ ನೋಡಬೇಕು ಎಂಬಂತಹ ಅಡಿಕ್ಷನ್ ಕೂಡ. ಫೇಸ್‌ಬುಕ್‌ನಲ್ಲಿ ನಮಗೆ ಯಾವುದು ಮುಖ್ಯವೋ, ನಮ್ಮ ಕುತೂಹಲಕ್ಕೆ ಯಾವುದು ಅರ್ಹವೋ ಅದನ್ನಷ್ಟೇ ಚೆಕ್ ಮಾಡಿ, ಸಾರ್ವಜನಿಕ ಮೂತ್ರಿಯಿಂದ ಹೊರಬಂದ ಹಾಗೆ, ನಮ್ಮ ಮಟ್ಟಿಗೆ ‘ರಿಲೀವ್ಡ್’ ಎಂಬ ಭಾವ ಬಂದ ಕೂಡಲೇ ಅಲ್ಲಿಂದ ಹೊರಬಿದ್ದು ಬಿಡಬೇಕು. ವಿಪರೀತ ಇನ್ವಾಲ್ವ್ ಆದರೆ ನಮ್ಮ ಸಮಯ, ನೆಮ್ಮದಿ ಎಲ್ಲವೂ ಹಾಳು. ಇದೆಲ್ಲ ಸರೀ, ನೀನ್ಯಾಕೆ ‘ರವಿ ಸರ್’ ಅಂತೀಯ? ‘ಸರ್’ ಎಂಬುದು ಬಿರುದು. ಅದು ಬೇಕು ಅಂದರೆ ಇಂಗ್ಲಂಡಿನಲ್ಲಿ ಕನಿಷ್ಟ ಪಕ್ಷ ಒಂದು ನೂರು ಎಕರೆ ಜಮೀನಿರಬೇಕು. ನನ್ನ ಹೆಣ ಹುಗಿಯಲಿಕ್ಕೂ ಅಲ್ಲಿ ತಟುಗು ನೆಲವಿಲ್ಲ. Be in touch" ಎಂದು ಪ್ರತಿಕ್ರಿಯಿಸಿದೆ.

ಹಾಗೆ ಆಕಸ್ಮಿಕವಾಗಿ ಪರಿಚಯವಾದವರು ಜಾಯಲ್. ಜಾಯಲ್ ಎಂಬುದನ್ನು ಅವಳು Jael ಅಂತ ಬರೆಯುತ್ತಾಳೆ. ಅದೊಂದು ಹಿಬ್ರ್ಯೂ ಹೆಸರು. ಹಿಬ್ರ್ಯೂ ಎಂಬುದು ಯಹೂದಿಗಳ ಮೂಲ ಭಾಷೆ. ಕರೆಯುವಾಗ ಮಾತ್ರ ಜಾಯಲ್ ಅನ್ನಬೇಕು. ಹಾಗಂತ ಅವಳೇ ಹೇಳಿದ್ದಳು. ಪೂರ್ತಿ ಹೆಸರು ಜಾಯಲ್ ವರ್ಮಾ. ತಂದೆ ಆಂಧ್ರದ ರಾಯಲ್ ಸೀಮೆಯವರು. ತಾಯಿ ಏಸುಪುತ್ರಿ. ಮಹಿಳಾ ಕಲ್ಯಾಣ ಇಲಾಖೆಯಲ್ಲಿ ದೊಡ್ಡ ಹುದ್ದೆ ತಲುಪಿ ಇತ್ತೀಚೆಗೆ ನಿವೃತ್ತರಾದ ಅಧಿಕಾರಿ. ಅವಶ್ಯಕತೆಗಿಂತ ಹೆಚ್ಚು ಪ್ರಾಮಾಣಿಕರು. Brutally honest. ಒಂದು ದಿನಕ್ಕೂ ಒಂದು ಪೈಸೆ ಲಂಚ ತೆಗೆದುಕೊಂಡವರಲ್ಲ. ಅಷ್ಟೇ ಸರಳ ಮತ್ತು ಅದ್ಭುತ ಓದುಗಾರ್ತಿ. ಇವತ್ತಿಗೂ ಪುಟಗಟ್ಟಲೆ ಓದುತ್ತಾರೆ. ಜಾಯಲ್ ಹೊರತು ಪಡಿಸಿದರೆ ಅವರ ಪ್ರಪಂಚದಲ್ಲಿರುವುದು ಪುಸ್ತಕಗಳೇ. ಯಾವುದೋ ಕಾರಣಕ್ಕೆ ಅವರು ಮತ್ತು ಅವರ ಪತಿ ಅನೇಕ ವರ್ಷಗಳ ಹಿಂದೆ ಬೇರೆಯಾಗಿದ್ದಾರೆ. ನಿನ್ನೆ ಮೊನ್ನೆಯ ತನಕ ಅವರ ಸುದ್ದಿಯೇ ಇರಲಿಲ್ಲ. ಇತ್ತೀಚೆಗೆ ಅವರು ಎಲ್ಲಿದ್ದಾರೆಂಬುದನ್ನು ಪತ್ತೆ ಮಾಡಿದವಳು ಜಾಯಲ್. ಆದರೆ ಅವರನ್ನು ಇವಳೇ ಇನ್ನೂ ನೋಡಿಲ್ಲ. ಒಂದರ್ಥದಲ್ಲಿ ಏಸುಪುತ್ರಿ ಸಿಂಗಲ್ ಪೇರೆಂಟ್. ಅಮ್ಮ-ಮಗಳ ಮಧ್ಯೆ ಅವಿನಾಭಾವ ಪ್ರೀತಿ ಇದೆ. ಸ್ನೇಹವಿದೆ. ಸಹಜವಾಗಿಯೇ ಸಣ್ಣಪುಟ್ಟ ಜಗಳಗಳಿವೆ. ‘ರವೀ, ನೀನು ಚೆನ್ನಾಗಿರಬೇಕಪ್ಪಾ’ ಎಂದು ಎಷ್ಟು ಪ್ರೀತಿಯಿಂದ ಹೇಳುತ್ತಾರೋ, ಅಷ್ಟೇ ಪ್ರೀತಿಯಿಂದ ‘ಇವಳಿಗೊಂದು ಮದುವೆ ಅಂತ ಆಗಿಬಿಟ್ಟರೆ ಸಾಕು’ ಅನ್ನುತ್ತಿರುತ್ತಾರೆ. ಅವರಿಬ್ಬರ ಕುಟುಂಬಕ್ಕೆ ನಾನು ಹೇಗೆ ಆತ್ಮೀಯನಾದೆನೋ? ಗೊತ್ತಿಲ್ಲ.

ಜಾಯಲ್ ಎಂಥ ಪಾದರಸದಂತಹ ಹುಡುಗಿ ಎಂಬುದು ಪರಿಚಯವಾದ ಕೆಲವೇ ದಿನಗಳಲ್ಲಿ ಗೊತ್ತಾಗಿತ್ತು. ನೋಡಲಿಕ್ಕೆ ಜಾಯಲ್ ಅಪರೂಪದ ಸೌಂದರ್ಯವತಿ. ಅವಳ ಇಂಗ್ಲಿಷ್ ಅದ್ಭುತ. “ಕನ್ನಡದಲ್ಲಿ ಮಾತನಾಡೇ" ಅಂದರೆ ಶುದ್ಧ ಹಾಸನ ಸೀಮೆಯ ಕನ್ನಡವನ್ನು ಮಾತನಾಡುತ್ತಾಳೆ. ಅವಳಿಗೆ ಓದು-ಬರಹಗಳು ತಾಯಿಯ ಕಡೆಯಿಂದ ಅನುವಂಶಿಕವಾಗಿ ಬಂದಿವೆ. ಅದ್ಭುತವಾಗಿ ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಾಳೆ. ಅವಳ ಗದ್ಯದಲ್ಲಿ ಸಂಗೀತವಿದೆ. ತನ್ನನ್ನು ತಾನು ತುಂಬ ಪ್ರೀತಿಸಿಕೊಳ್ಳುತ್ತಾಳೆ. ಆದ್ದರಿಂದಲೇ ಅವಳು intense ಆಗಿ ಬರೆಯುತ್ತಾಳೆ. ಸ್ವಭಾವತಃ ಮರ್ಜಿ ಮುಲಾಜುಗಳಿಲ್ಲದ, ಕೆಲವೊಮ್ಮೆ ಅರೋಗೆಂಟ್ ಅಂತಲೂ ಅನ್ನಿಸುವಂತಹ ನಿಲುವು. ಇಷ್ಟಾಗಿ ಅವಳು ಓದಿದ್ದು ಮಾಸ್ ಕಮ್ಯುನಿಕೇಶನ್; ಅಂದರೆ ಪತ್ರಿಕೋದ್ಯಮ. ಆದರೆ ಗೆಳೆಯ-ಗೆಳತಿಯರೊಂದಿಗೆ ಸೇರಿ ವಿಚಿತ್ರವೆನ್ನಿಸುವಂತಹ ಜಿದ್ದಿಗೆ ಬಿದ್ದು ಬ್ಯಾಂಕ್ ಅಧಿಕಾರಿಯಾದಳು. ಅಜಮಾಸು HDFC ಬ್ಯಾಂಕಿನ ಆಗುಹೋಗುಗಳಿಗೆ ಜವಾಬ್ದಾರಳಾಗುವಂತಹ ಹುದ್ದೆಗೆ ತಲುಪಿಕೊಂಡಳು. ಆ ಕೆಲಸ ಕೆಲವೇ ದಿನಗಳಲ್ಲಿ ಅವಳಿಗೆ ಬೋರು ಹೊಡೆಯಿತು. ಅವಳಿಗೆ ನಿತ್ಯ ನೂತನವಾದಂತಹ ಬದುಕು ಬೇಕು. ಮೂಟೆಗಟ್ಟಲೆ ಸಂಬಳ ಧಿಕ್ಕರಿಸಿ ಯಾವುದೋ ಫ್ರೆಂಚ್ ಕಂಪೆನಿ ಸೇರಿಕೊಂಡಳು. “ಇದೂ ಬೋರು ರವೀ, ನಾನು ಯಾವುದಾದರೂ ಟಿವಿ ಛಾನಲ್‌ಗೆ ಆಂಕರ್ ಆಗಿ ಸೇರಿಕೊಳ್ಳಲಾ? ನೋಡಲಿಕ್ಕೂ ಚೆನ್ನಾಗಿದ್ದೇನೆ. ಕನ್ನಡವನ್ನು ಚೆನ್ನಾಗಿಯೇ ಮಾತಾಡುತ್ತೇನೆ" ಅಂದವಳು, ಸರಿಯಾಗಿ ತಲೆಗೆ ಎಣ್ಣೆಯೂ ಇಲ್ಲದಂತಹ, ಇನ್ನೂ ಶುರುವೇ ಆಗದಿರುವ ಛಾನೆಲ್ ಒಂದರ ಸಂದರ್ಶನಕ್ಕೂ ಹೋಗಿ ಬಂದಳು. “Stupid! ಇಂಥದ್ದನ್ನೆಲ್ಲ ಮಾಡಬೇಡ. ಕೈಲಿರೋ ನೌಕರಿ ಬಿಡಬೇಡ. ಇದೆಂಥ ಹುಚ್ಚಾಟ ನಿನ್ನದು" ಅಂತ ಗದರಿಸಿದ ಮೇಲೆ ಸುಮ್ಮನಾದಳು. ಅದಾದರೂ ಎಷ್ಟು ದಿನವೋ? ದೇವರು ಬಲ್ಲ.

ಹಾಗೆ ತುಂಬ ಸರಳವಾಗಿ ಆರಂಭವಾದ ನನ್ನ-ಅವಳ ಮತ್ತು ಅವಳ ತಾಯಿಯ ಮೈತ್ರಿ ಈಗ ಎರಡು ವರ್ಷ ದಾಟಿದೆ. ಒಂದು ನಂಟೂ ಬೆಳೆದಿದೆ. ಅವಳ ತಾಯಿಗೆ ನನ್ನ ಅತಿ ಹಳೆಯ ಗೆಳತಿ ಮೀನಾ ಮೈಸೂರು ತುಂಬಾ ಆತ್ಮೀಯರು. ಹೀಗೆ, ಹತ್ತಿರದವರಾಗಲಿಕ್ಕೆ ಏನೇನೋ ಕಾರಣಗಳು. ತಾಯಿ-ಮಗಳಿಬ್ಬರಿಗೂ ಇರುವ ನದಾಹ, ಮಾನವೀಯ ಅನುಕಂಪಗಳು ಹಾಗೂ ಪರಿಶುದ್ಧ ಬದುಕು ನನಗೆ ಇಷ್ಟವಾದವು. ಕೆಲವು ತಿಂಗಳ ಹಿಂದೆ, ‘ನಾನು ಮದುವೆಯಾಗಬೇಕೆಂದಿದ್ದೇನೆ’ ಎಂಬ ಮಾತು ಜಾಯಲ್ ಬಾಯಿಂದಲೇ ಬಂತು. ಹುಡುಗನೊಬ್ಬನನ್ನು ಪ್ರೀತಿಸಿದ ಹುಡುಗಿ ಸಂಕೋಚದಿಂದಲೇ ಅಪ್ಪನ ಮುಂದೆ ಬಾಯಿ ಬಿಡುತ್ತಾಳಲ್ಲ? ಹಾಗೆ. ನಾನು ಹುಡುಗನ ಪೂರ್ವಾಪರ ತಿಳಿದುಕೊಂಡೆ. ಅವನೂ ಜಾತಿಯಿಂದ ಕ್ರಿಶ್ಚಿಯನ್. ಸಾಫ್ಟ್‌ವೇರ್ ಇಂಜಿನಿಯರ್. ಬುಲೆಟ್ ಓಡಿಸುವ, ಮ್ಯಾರಥಾನ್ ರೇಸ್‌ಗಳಿಗೆ ಹೋಗುವ, ದುರಭ್ಯಾಸಗಳಿಲ್ಲದ, ಆದರೆ ಕೊಂಚ ಸಂಕೋಚ ತೋರ್ಪಡಿಸುವ ರೋಶನ್ ನಿಜಕ್ಕೂ ಒಳ್ಳೆಯ ಹುಡುಗ. ಅವಳೇ ಒಮ್ಮೆ ಅವನನ್ನು ಕರೆದುಕೊಂಡು ಬಂದಳು. ‘ಇವನನ್ನು ಮದ್ವೆ ಆಗ್ಲಾ ರವೀ?’ ಅಂತ ಕೇಳಿದಳು. “Why not?" ಅಂದೆ. “ಆದರೆ ನನ್ನ ರಿಜಿಸ್ಟರ‍್ಡ್ ಮದುವೆಗೆ ನೀವೇ ಸಹಿ ಹಾಕಬೇಕು" ಅಂತ ಗಂಟು ಬಿದ್ದಳು. ತುಂಬ ಸಂತೋಷವಾಯಿತು. “ಮದುವೆ is going to be damn simple. ನಾನು-ನನ್ನ ಅಮ್ಮ, ಅವನು-ಅವರಮ್ಮ, ಅವನ ತಂಗಿ, ಇಬ್ರು ಫ್ರೆಂಡ್ಸ್ ಮತ್ತು ಮೀನಾ ಮೈಸೂರು-ಅಷ್ಟೆ. ಸಹಿ ಮಾಡೋದಕ್ಕೆ ನೀವು ಬರ್ತೀರಿ. ಇನ್ನೇನು ಬೇಕು?" ಅಂದಳು ಜಾಯಲ್.

ನಾನು ಅಂತಹ ಮದುವೆಗಳನ್ನು ಎಷ್ಟೇ ಕೆಲಸವಿದ್ರೂ ತಪ್ಪಿಸುವುದಿಲ್ಲ. ಅಂತರ ಜಾತೀಯ ವಿವಾಹಗಳು, ಅಂತರ್‌ಧರ್ಮೀಯ ವಿವಾಹಗಳು, ಎಲ್ಲರನ್ನೂ ಎದುರು ಹಾಕಿಕೊಂಡು ಆಗುವಂಥ ವಿವಾಹಗಳು-ಇಂಥವಕ್ಕೆ ಹೋಗೇ ಹೋಗ್ತೀನಿ. ನನ್ನ ಕೈಯಲ್ಲಿಯೇ ನೂರಾರು ಮದುವೆಗಳಾಗಿವೆ. ತುಂಬಿದ ಹಂದರದ ಮದುವೆ, ವಿಜೃಂಭಣೆಯ ಮದುವೆ ಇತ್ಯಾದಿಗಳಿರುತ್ತವಲ್ಲ? ಅಲ್ಲಿಗೆ ಹೋಗದಿದ್ದರೂ ನಡೆಯುತ್ತದೆ. ನಾನೊಬ್ಬನು ಹೋಗಲಿಲ್ಲ ಎಂಬ ಕಾರಣಕ್ಕೆ ಆ ಮದುವೆಗಳು ನಿಂತು ಹೋಗುವುದಿಲ್ಲ. ಕಳೆಗುಂದುವುದೂ ಇಲ್ಲ. ಆದರೆ ಇಂಥ ಆದರ್ಶಯುತ ಮದುವೆಗಳಿಗೆ ನಾನೊಬ್ಬ ಹೋಗದೆ ಇದ್ದರೆ ಕರೆದವರಿಗೆ ಮತ್ತು ನನ್ನಂಥವನ ಆಸರೆಯನ್ನೇ ನೆಚ್ಚಿಕೊಂಡ ಹುಡುಗ-ಹುಡುಗಿಗೆ ತುಂಬ ಹಳಹಳಿ, ಬೇಸರ ಆಗುತ್ತವೆ. They will be dissopointed. ಈ ತೆರನಾದ ರಿಜಿಸ್ಟರ‍್ಡ್ ವಿವಾಹಗಳಿಗೆ ಅದೆಷ್ಟು ಸಲ ವಿಟ್‌ನೆಸ್ ಆಗಿ ಸಹಿ ಮಾಡಿದ್ದೇನೋ, ಅವೆಷ್ಟು ಬೈಗುಳ ತಿಂದಿದ್ದೇನೋ -ಎಣಿಸಬೇಕಷ್ಟೆ. ನಿಮಗೇ ಗೊತ್ತಿರುವಂತೆ, ಶಿವಮೊಗ್ಗದ ಅಶ್ವಿನಿ ಮತ್ತು ಇರ್ಫಾನ್ ಮದುವೆ ನನ್ನನ್ನು ಹೈಕೋರ್ಟ್ ಮೆಟ್ಟಿಲು ಹತ್ತಿ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿತ್ತು. “ಒಳ್ಳೆ ಬ್ರಾಹ್ಮಣರ ಮನೆಯ ಹುಡುಗೀನ ತೀರಾ ಒಯ್ದು ಸಾಬರ ಮನೆಗೆ ಸೇರಿಸಿದೆಯಲ್ಲಯ್ಯಾ" ಅಂತ ಪರಿಚಿತರೆಲ್ಲರೂ ಬೈದರು. Fine, ಒಳ್ಳೆಯದಾಗುತ್ತೆ ಅಂದರೆ ಬೈಗುಳಗಳಿಗೂ ಸ್ವಾಗತ. ಆದರೆ ಕೇವಲ ಮದುವೆ ಮಾಡುವುದರೊಂದಿಗೆ ಜವಾಬ್ದಾರಿ ಮುಗಿಯುವುದಿಲ್ಲವಲ್ಲ?

ಅಶ್ವಿನಿ ಮತ್ತು ಇರ್ಫಾನ್‌ರ ಮದುವೆಯಾಗಿ ಸುಮಾರು ಮೂರ‍್ನಾಲ್ಕು ವರ್ಷಗಳಾದವು. ಮೊನ್ನೆ ನನ್ನ ಭಾವಮೈದುನನ ಮಗಳು ಸ್ವಾತಿಯೂ ಶಿವಮೊಗ್ಗದಲ್ಲಿ ಮದುವೆಯಾದಳು, ಆ ಮದುವೆಗೆ ಹೋದವನು ಆ ರಾತ್ರಿ ಶಿವಮೊಗ್ಗದಲ್ಲೇ ಉಳಿದೆ. ಬೆಳಗ್ಗೆ ಎದ್ದವನಿಗೆ ಎಂಥದೋ ಜೂಗರಿಕೆ. ಸರಿಯಾಗಿ ನಿದ್ರೆ ಆಗಿರಲಿಲ್ಲ. ಆದರೆ ಶತಾಯಗತಾಯ ನಾನು ಧಾರವಾಡಕ್ಕೆ ಹೋಗಲೇಬೇಕಿತ್ತು. ನನ್ನ ಡಾಕ್ಟರು ನನಗೆ ಗಡುವು ಕೊಟ್ಟಿದ್ದರು. ಅರೆ ನಿದ್ರೆಯಲ್ಲೇ ಎದ್ದು, ಕಾರಿನ ಹಿಂದಿನ ಸೀಟಿನಲ್ಲಿ ಮುದುರಿ ಮಲಗಿಕೊಂಡೆ. ಅದೇಕೆ ಹಾಗನ್ನಿಸಿತೋ ಗೊತ್ತಿಲ್ಲ; ಒಂದು ಕಡೆ ಸರಕ್ಕನೆ ಎದ್ದು ಕುಳಿತು, “ಇದು ಎ.ಎ. ಸರ್ಕಲ್ ಅಲ್ವಾ" ಅಂದೆ. “ಹೌದು" ಎಂದ ಸೀನ. ಇರ್ಫಾನ್‌ನ ಅಂಗಡಿ ಅಲ್ಲೇ ಇದೆ. ಕೊಂಚ ನಿಲ್ಲಿಸು ಅಂದೆ. ಸರ್ಕಲ್ಲಿಗೆ ತುಂಬ ಹತ್ತಿರದಲ್ಲೇ ಇದೆ ಅವನ shoe ಅಂಗಡಿ. ಹೋದೆ ನೋಡಿ? ಅವನ ತಂದೆ ಬಷೀರ್ ಭಾಯ್ ಅನಾಮತ್ತು ತಬ್ಬಿಕೊಂಡು ಸ್ವಾಗತಿಸಿದರು. ಇರ್ಫಾನ್‌ನ ಸಂಭ್ರಮಕ್ಕೆ ಪಾರವೇ ಇಲ್ಲ. ಆ ಹೊತ್ತಿಗೆ ಸರಿಯಾಗಿ ಮಗುವನ್ನೆತ್ತಿಕೊಂಡು ಅವಳೂ ಬಂದಳು; ಅಶ್ವಿನಿ. ಆ ಮನೆಯಲ್ಲಿ ಅವಳನ್ನು ಫಾತೀಮಾ ಅಂತ ಕರೆಯುತ್ತಾರೆ. ತುಂಬ ಲಕ್ಷಣವಂತ ಹಾಗೂ ವಿಪರೀತ ಭಾವೋದ್ವೇಗದ ಹುಡುಗಿ ಅಶ್ವಿನಿ. “ಅದೆಲ್ಲ ಗೊತ್ತಿಲ್ಲ; ಮನೆಗೆ ಬಂದು ಊಟ ಮಾಡಿಕೊಂಡೇ ಹೋಗಬೇಕು" ಅಂತ ಹಟ ಹಿಡಿದಳು. ನನ್ನ ಮಕ್ಕಳು ನನ್ನ ಮೇಲೆ ಚಲಾಯಿಸುವ ಪ್ರೀತಿ ಅಧಿಕಾರಗಳನ್ನು ಅವಳೂ ಚಲಾಯಿಸುತ್ತಾಳೆ. ಮರುಮಾತಿಲ್ಲದೆ ಮನೆಗೆ ಹೋದೆ. ಇದ್ದಷ್ಟೂ ಹೊತ್ತು ಅವಳನ್ನೇ ಗಮನಿಸಿದೆ. ಕಳೆದ ಬಾರಿ ಹೋದಾಗ ಕೊಂಚ ತಡವರಿಸುತ್ತಿದ್ದವಳು ಈ ಬಾರಿ ಉರ್ದುವಿನಲ್ಲಿ ನಿಚ್ಚಳ. ಆ ಮನೆಗೆ ಖಾಸಾ ಮುಸ್ಲಿಂ ಹುಡುಗಿ ಸೊಸೆಯಾಗಿ ಹೋಗಿದ್ದರೂ ಅಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಳೋ ಇಲ್ಲವೋ; ಅಷ್ಟು ವೈನಾಗಿ ಈ ಹುಡುಗಿ ಹೊಂದಿಕೊಂಡಿದ್ದಾಳೆ. ಅವಳ ಮಗು ‘ಮನ್ನಾ’ ಮೂರು ವರ್ಷದ್ದು. ಅದು ‘ನಾನೂ’ (ತಾತ) ಅನ್ನುತ್ತಾ ಬಂದು ತೊಡೆಯ ಮೇಲಕ್ಕೆ ಹತ್ತಿತ್ತು. ಕಾಕತಾಳೀಯವೆಂದರೆ, ನಾನು ಹೋದ ದಿನವೇ ಅಶ್ವಿನಿಯ ಹುಟ್ಟುಹಬ್ಬ. ಸೀನನನ್ನು ಓಡಿಸಿ ಒಂದು ಲಕ್ಷಣವಾದ ಸೀರೆ ಮತ್ತು ಅವಳಿಗೆ ಒಪ್ಪುವಂಥ ಚೂಡಿದಾರ್ ತರಿಸಿದೆ. “ನೋಡಿದೆಯಾ, ನನ್ನ ಅಪ್ಪ ನಂಗೆ ಯಾವುದಕ್ಕೂ ಕಡಿಮೆ ಮಾಡಲ್ಲ" ಅಂತ ಇರ್ಫಾನ್‌ನನ್ನು ಛೇಡಿಸಿದಳು ಅಶ್ವಿನಿ. ಇನ್ನು ಐದು ವರ್ಷ ನಡೆದಾಡಿದರೂ ಸವೆಯದಷ್ಟು ಬೂಟು-ಚಪ್ಪಲಿ ಕಾರಿಗೆ ತುಂಬಿಸಿದ ಇರ್ಫಾನ್. ಆ ಹುಡುಗಿಯ ಮೇಲೆ ನನಗೆ ಎಂಥದೋ ಮಮಕಾರ. ತಾಯಿ-ತಂದೆ, ತಮ್ಮ, ಬಂಧು-ಬಳಗ ಎಲ್ಲರನ್ನೂ ಬಿಟ್ಟು ಆ ಮನೆಯಿಂದ ಬರಿಗೈಲಿ ನಡೆದು ಬಂದ ಹುಡುಗಿ ಅಶ್ವಿನಿ. ಅವಳ ಪಾಲಿಗೆ ತವರು ಅಂದರೆ ನಾನೇ. ವಿಪರೀತ ಹಚ್ಚಿಕೊಂಡಿರುವ ಜೀವ. ಆಗ ಆರೆಸ್ಸೆಸ್ಸೂ ಸೇರಿದಂತೆ ಇಡೀ ಸಂಘಪರಿವಾರ ಆ ಮದುವೆಯನ್ನು ಅನೂರ್ಜಿತಗೊಳಿಸಬೇಕು ಎಂದು ಹರಸಾಹಸ ಮಾಡಿತ್ತು. ಅವಳು ಗರ್ಭವತಿಯಾಗಿದ್ದರೂ ಸರಿಯೇ, ವಾಪಾಸು ತಂದು ಗರ್ಭಪಾತ ಮಾಡಿಸಿ, ಹಿಂದೂಗಳಲ್ಲೇ ಒಬ್ಬನನ್ನು ನೋಡಿ, ಅವಳಿಗೆ ಕಟ್ಟುತ್ತೇವೆ ಎಂಬ ಮಾತನ್ನು ಅವಳ ಹತ್ತಿರದವರು ಆಡಿದ್ದರು. ಕೇವಲ ಜಾತಿ-ಧರ್ಮಗಳಿಗಾಗಿ ಮನುಷ್ಯರು ಈ ಪರಿ ಕೆಟ್ಟವರಾಗುತ್ತಾರಾ? ಅನ್ನಿಸಿತ್ತು. “ಅಶ್ವಿನಿ ಮನೋರೋಗಿ. ಅವಳಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ಮನೋಶಕ್ತಿ ಇಲ್ಲ" ಎಂದು ತಗಾದೆ ಹೂಡಿ ಹೈಕೋರ್ಟಿಗೆ ಸಂಘಪರಿವಾರದ ವಕೀಲರೊಬ್ಬರು ಕೇಸು ಹಾಕಿದ್ದರು. ಕೋರ್ಟು ನನ್ನನ್ನು ಕಟಕಟೆಗೆ ಕರೆದಿತ್ತು. ಆ ಹಂತದಲ್ಲಿ ಈ ನಿಷ್ಪಾಪಿ ಹುಡುಗರನ್ನು ಕೊಂದೇ ಬಿಡುತ್ತಾರಾ ಎಂಬ ಆತಂಕ ನನ್ನನ್ನು ಕಾಡಿತ್ತು. “ನನ್ನಯ ಹುಡುಗರನ್ನು ಅವರ ರಕ್ಷಣೆಗೆ ಕಳಿಸಲಾ?" ಅಂತ ರೌಡಿ ತನ್ವೀರ್ ಕೇಳಿದ್ದ. ನನ್ನ ಮಕ್ಕಳನ್ನು ನಾನು ರಕ್ಷಿಸೋದಕ್ಕೆ ರೌಡಿಗಳ ಸಹಾಯ ಬೇಕಾ? ಅಂದುಕೊಂಡವನೇ ಕಿಸೆಗೆ ರಿವಾಲ್ವರು ತುಂಬಿಕೊಂಡು ನನ್ನದೇ ಕಾರಿನಲ್ಲಿ ಆ ಮಕ್ಕಳನ್ನು ಕರೆದುಕೊಂಡು ಕೋರ್ಟಿಗೆ ಹೋಗಿದ್ದೆ. ಆನಂತರ ಇರ್ಫಾನ್ ಮತ್ತು ಅಶ್ವಿನಿ ನಮ್ಮ ಮನೆಯಲ್ಲೇ ತಿಂಗಳುಗಟ್ಟಲೆ ಉಳಿದಿದ್ದರು. ಇರ್ಫಾನ್ ಮದುವೆಯ ನಂತರದ ‘ಖಾರದ ಊಟ’-ವಲೀಮಾ ನಮ್ಮ ಕಚೇರಿಯಲ್ಲೇ ಆಯಿತು. ಹುಡುಗಿ ಬಸಿರಾದಳು. ಆ ಸುದ್ದಿಯನ್ನು ಅಶ್ವಿನಿ ನನಗೇ ಮೊದಲು ಹೇಳಿದ್ದಳು. ಅವಳ ಹೆರಿಗೆ, ಮಗುವಿನ ನಾಮಕರಣ ಎಲ್ಲವೂ ನನ್ನ ಸಮಕ್ಷಮದಲ್ಲೇ ಆದವು. ಅಶ್ವಿನಿ ಕೂಡ ನೂರಕ್ಕೆ ನೂರರಷ್ಟು ಆ ಮನೆಗೆ ಹೊಂದಿಕೊಂಡಳು. “ಅವರೇನೇ ಕರೆದುಕೊಳ್ಳಲಿ. ಫಾತೀಮಾ ಅಂತಾರೆ. ಅನ್ನಲಿ. ನೀವು ಮಾತ್ರ ನನ್ನನ್ನು ನಿಮ್ಮ ಮಗಳು ಅಂದುಕೊಂಡು ಅಶ್ವಿನೀ ಅಂತಲೇ ಕರೆಯಿರಿ" ಅಂದಿದ್ದಳು ಹುಡುಗಿ. ಅವಳ ಅತ್ತೆ-ಮಾವನಿಗೆ ನನ್ನ ಮಾತೆಂದರೆ ವೇದವಾಕ್ಯ. ಹೆಸರಿಗೆ ಅವರು ಇಸ್ಲಾಮೀಯರು. ಆದರೆ ಒಳ್ಳೆಯತನ, ಸಂಸ್ಕಾರ, ಪ್ರೀತ್ಯಾದರಗಳ ವಿಷಯಕ್ಕೆ ಬಂದರೆ ಅವರಷ್ಟು ಪ್ರಾಂಜಲ ಮನಸ್ಸಿನವರು ನಿಜಕ್ಕೂ ಅಪರೂಪ. ಅವತ್ತು ಅವರ ಮನೆಯಲ್ಲೇ ಊಟ ಮುಗಿಸಿ ಧಾರವಾಡಕ್ಕೆ ಹೋದೆ.

ಜಾಯಲ್ ಮದುವೆಗೆ ಅಷ್ಟೆಲ್ಲ ಸೀನ್ ಇರಲಿಲ್ಲ. ಹೆಚ್ಚೆಂದರೆ, ಅರ್ಧ ಗಂಟೆಯಲ್ಲಿ ಮುಗಿದು ಹೋದ ಅತಿ ಸರಳ ವಿವಾಹ. ಅಲ್ಲೇ ಹೆಬ್ಬಾಳದ ಆಚೆಗಿರುವ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ದಂಪತಿಗಳನ್ನು ಸೇರಿ ನಾವಿದ್ದುದು ಎಂಟೇ ಜನ. ಮದುವೆ ಮುಗಿಸಿಕೊಂಡವರೇ ದಂಪತಿಗಳನ್ನು ಕರೆದುಕೊಂಡು ಊರಾಚೆಗಿನ ‘ಗೋಲ್ಡನ್ ಪಾಮ್’ ರೆಸಾರ್ಟಿಗೆ ಹೋದೆವು. ಮೊದಲು ಅದು ನಟ ಸಂಜಯ್ ಖಾನ್‌ನ ಒಡೆತನದಲ್ಲಿತ್ತು. ಈಗ್ಗೆ ಮೂರು ವರ್ಷದ ಹಿಂದೆ ಅದನ್ನಾತ ಮಾರಿದನಂತೆ. ಅಲ್ಲೊಂದು ಊಟ. ಎಲ್ಲವೂ ಎಷ್ಟು ಸರಳ ಮತ್ತು ಅನಾಯಾಸವಾಗಿ ಮುಗಿದು ಹೋದವೆಂದರೆ, ಇಷ್ಟು ಸಣ್ಣ ವಿಷಯಕ್ಕೆ ನಾವು ಕೆಲವು ಸಲ ಏನೆಲ್ಲ ವಿಪರೀತ ಮಾಡಿ, ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಶರಂಪರ ಜಗಳಗಳನ್ನು ಮಾಡಿ, ಎಲ್ಲ ಮಾಡಿದರೂ ಬೀಗರ ಉಪಚಾರದಲ್ಲಿ ಅದೇನೋ ಆಗಬೇಕಿತ್ತು-ಅದಾಗಲಿಲ್ಲ ಅಂತ ಅನ್ನಿಸಿಕೊಂಡು ಯಾಕೆ ಫಜೀತಿಗೊಳಗಾಗುತ್ತೇವೆಯೋ ಅನ್ನಿಸಿದ್ದು ಖರೆ.

“Joy, ಇನ್ನುಳಿದದ್ದು ನಿಮಗೆ ಬಿಟ್ಟಿದ್ದು. ಮೊದಲ ಮೂರು ದಿನವಂತೂ ನಾನು ನಿನಗೆ ಫೋನ್ ಕೂಡ ಮಾಡುವುದಿಲ್ಲ. Have a wonderful time. ಏನಾದರೂ ಅಗತ್ಯವಿದ್ದರೆ SMS ಮಾಡು" ಅಂತ ಹೇಳಿಯೇ ಬಂದೆ. ಮಹಾತುಂಟಿಯ ಕಣ್ಗಳಲ್ಲಿ ಹೊಳಪು-ಸಂಕೋಚ. ಮದುವೆಗೆ ಮುಂಚೆಯೇ ಜಾಯಲ್ ಮತ್ತು ರೋಶನ್ ಒಂದು ಒಪ್ಪಂದಕ್ಕೆ ಬಂದಿದ್ದರು. ನಾಲ್ಕು ಬೆಡ್‌ರೂಮ್‌ಗಳಿರುವ ಒಂದು ಮನೆ ನೋಡಿದ್ದಾರೆ. ಅದರಲ್ಲಿ ಜಾಯಲ್, ರೋಶನ್, ಅವರಿಬ್ಬರ ಇಬ್ಬರು ಅಮ್ಮಂದಿರು ಮತ್ತು ಜಾಯಲ್‌ಳ ನಾಯಿ-ಇಷ್ಟೇ ಜನ. ಹುಡುಗರಿಬ್ಬರೂ ದುಡಿಯುತ್ತಾರೆ. ಇಬ್ಬರ ಯೋಚನೆ, ಅಭಿರುಚಿ, ಅಭ್ಯಾಸಗಳೂ ಒಂದೇ ತೆರನಾಗಿವೆ. am sure. ಇದು ನೂರು ಕಾಲ ಬಾಳುವ ಸರಳ ಮದುವೆ. ಅದು ಎಷ್ಟೇ ಸರಳವಾಗಿ ಆಗಲಿ, ಇಬ್ಬರದೂ ಬದುಕು ಮಾತ್ರ ವಿಜೃಂಭಣೆಯಿಂದ ಕೂಡಿರಬೇಕು. “ಪರಸ್ಪರರಲ್ಲಿ ಪ್ರೀತಿ, ನಂಬುಗೆ, ಬದ್ಧತೆ, ಆತ್ಮೀಯತೆಗಳು ಸದಾ ಇರಲಿ" ಅಂತ ವಿಶ್ ಮಾಡಿ ಮನೆಗೆ ಬಂದಾಗ ಆಗಲೇ ಸಂಜೆ ಆರು ಗಂಟೆ.

ಹಾಗೆ ಹಿಂತಿರುಗಿ ಬಂದವನಿಗೆ ಫಕ್ಕನೆ ನೆನಪಾದವರು ಇಸ್ರೇಲ್‌ನ ಆಲಿವ್ ರೀಗೋ ಮತ್ತು ಅದಿ ಅಮುರ್. ಆಲಿವ್ ಅಪ್ಪಟ ಭಾರತೀಯ. ಅವಳು ಶುದ್ಧ ಯಹೂದಿ. ಅವರ ದೇಶದಲ್ಲಿ ಯಹೂದಿಗಳು ಕ್ರಿಶ್ಚಿಯನ್‌ರನ್ನು ಮದುವೆಯಾದರೆ ಆ ಮದುವೆ ಊರ್ಜಿತವಲ್ಲ. Jewಗಳ ಸಂಪ್ರದಾಯಗಳು ತುಂಬ ಕಟ್ಟುನಿಟ್ಟು ಮತ್ತು ಕಠೋರ. ಇವನು, ದಕ್ಷಿಣ ಕನ್ನಡದ ಶುದ್ಧ ಕ್ರೈಸ್ತ ಹುಡುಗ. ತಾನು ಯಹೂದಿ ಧರ್ಮಕ್ಕೆ convert ಆಗಲು ಒಲ್ಲ. ಅಲ್ಲಿಗೆ ನಾನು ಹೋಗುವ ಹೊತ್ತಿಗಾಗಲೇ ಹುಡುಗಿ ಅದಿ ಮೂರು ತಿಂಗಳ ಗರ್ಭವತಿ. ಅವರು ಸೈಪ್ರಸ್‌ಗೆ ಹೋಗಿ, ಅಲ್ಲಿನ ಧಾರ್ಮಿಕ ಸಂಘಟನೆಯ ಆಶ್ರಯದಲ್ಲಿ ಮದುವೆಯಾದರೆ ಮಾತ್ರ ಇಸ್ರೇಲ್‌ನಲ್ಲಿ ಆ ಮದುವೆ ಊರ್ಜಿತ. ಸೈಪ್ರಸ್‌ಗೆ ಅವರಿಬ್ಬರೇ ಹೋದರೆ ಸಾಲದು. ಹುಡುಗಿಯ ಪರವಾಗಿ ಒಬ್ಬ God father ಬೇಕು. “Fine, ಅದಕ್ಕೆಂದೇ ನಾನು ಸೈಪ್ರಸ್‌ಗೆ ಬರ‍್ತೀನಿ" ಅಂದಿದ್ದೆ. ಪಾಪ, ಆ ದಂಪತಿಗಳಿಗೆ ತಕ್ಷಣಕ್ಕೆ ದುಡ್ಡು ಹೊಂಚಲು ಎಲ್ಲಿ ಸಾಧ್ಯವಾಗಬೇಕು? ಈ ತನಕ ಮದುವೆಯೇ ಆಗದೆ, they are living together, ಮದುವೆಗಾಗಿ ಬದುಕು ಕಾಯುತ್ತದಾ? ಆಲಿವ್ ಮತ್ತು ಅದೀಗೆ ಒಂದು ಮಗು ಆಗಿದೆ. ಎಲ್ಲ ಸರಿ ಹೋಗಿ, ದುಡ್ಡು ಕಾಸು ಕೂಡಿದರೆ ಅವರು ಸೈಪ್ರಸ್‌ಗೆ ಹೊರಟಾರು. ನಾನೂ ಇಲ್ಲಿಂದ ಹೊರಡಬೇಕು.

ಇದೆಲ್ಲ ಜನ್ಮಜನ್ಮಾಂತರದ ಅನುಬಂಧವಾ? ನನಗೆ ಅದರಲ್ಲಿ ನಂಬಿಕೆ ಇಲ್ಲ. ಕೇವಲ ಮಾನವೀಯತೆ, ಪ್ರೀತಿ, ಅನುರಾಗ ಮತ್ತು ಮನುಷ್ಯನ ಪ್ರಾರ್ಥನೆಗಳನ್ನು ನಾನು ನಂಬುತ್ತೇನೆ. ಅಷ್ಟು ಸಾಕು. ಜಾತಿ, ಧರ್ಮ, ಕಾನೂನು, ದುಡ್ಡು, ಅಂತಸ್ತು-ಇವು ನಮ್ಮ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸಲಾರವು.

ನನಗೆ ಇವುಗಳಲ್ಲೆಲ್ಲ ಭಾಗಿಯಾಗುವಾಗ, ಸಾಕ್ಷಿಯಾಗುವಾಗ ಎಷ್ಟೋ ವರ್ಷಗಳ ಹಿಂದೆ ಅಮ್ಮ ಅಂದ ಮಾತು ನೆನಪಾಗುತ್ತದೆ. ಅವತ್ತು ಬಳ್ಳಾರಿಯ ಮನೆಯಲ್ಲಿ ಅಮ್ಮ-ನಾನು ಒಂದು ಮುರುಕು ಬ್ಲ್ಯಾಕ್ ಅಂಡ್ ವೈಟ್ ಟೀವಿಯಲ್ಲಿ, ‘ಕವಿರತ್ನ ಕಾಳಿದಾಸ’ ಸಿನೆಮಾ ನೋಡುತ್ತಾ ಕುಳಿತಿದ್ದೆವು. ರಾಜ್‌ಕುಮಾರ್ ಕಾಳಿಕಾಂಬೆಯ ಸ್ತೋತ್ರವನ್ನು ರಾಗಬದ್ಧವಾಗಿ ಹೇಳುತ್ತಿದ್ದರು. “ನೋಡೋ, ಯಾವುದೋ ಮೂಲೆಯಾದ ಗಾಜನೂರಿನವನಂತೆ, ಜಾತಿಯಿಂದ ಈಡಿಗನಂತೆ, ಆದರೆ ಎಷ್ಟು ಕರಾರುವಾಕ್ಕಾಗಿ ಶಂಕರಾಚಾರ್ಯರು ಬರೆದ ಶ್ಲೋಕವನ್ನು ರಸಬದ್ಧವಾಗಿ, ಸಾಹಿತ್ಯಬದ್ಧವಾಗಿ ಹಾಡುತ್ತಿದ್ದಾನೆ. ಸಂಸ್ಕೃತ, ಭಾಷೆ, ಸಂಸ್ಕಾರ ಮುಂತಾದವುಗಳು ಯಾವ ಜಾತಿಗೂ ಸೇರಿದಂಥವಲ್ಲಪ್ಪಾ" ಅಂದಿದ್ದಳು ಅಮ್ಮ.

ಆ ಹೊತ್ತಿಗಾಗಲೇ ನಾನು ಜಾತಿ-ಧರ್ಮಗಳ ಬೇಲಿ ದಾಟಿ ನಿಂತಿದ್ದೆ. ಇವತ್ತು ಕ್ರೈಸ್ತರಾದ ಜಾಯಲ್, ರೋಶನ್, ಆಲಿವ್-ಅದಿ, ಇತ್ತೀಚೆಗೆ ಮದುವೆಯಾದ ನನ್ನ ಸೋದರ ಸೊಸೆ ಸ್ವಾತಿ-ಅವಳ ಗಂಡ ಆದರ್ಶ್, ಅಶ್ವಿನಿ-ಇರ್ಫಾನ್, ಕೆಲವೇ ವರ್ಷಗಳ ಹಿಂದೆ ನಮ್ಮ ಕಚೇರಿಯಲ್ಲೇ ಮದುವೆಯಾದ ಹುಮೇರಾ-ಸಿದ್ಧಾರ್ಥ್ ಮುಂತಾದವರೆಲ್ಲ ನೆನಪಾಗಿ ಯಾಕೋ ಮನಸ್ಸಿಗೆ ಆನಂದ.
ನಿಮ್ಮೊಂದಿಗೆ ಹಂಚಿಕೊಂಡೆ. ಅಷ್ಟೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books