Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬಿಲ್ಲಿನ ಹೆದೆ ಏರಿದ ಬಾಣ ಹೊಸ ಎತ್ತರಕ್ಕೆ ಚಿಮ್ಮಲೇ ಬೇಕಲ್ಲ?

ನೀವೆಲ್ಲ ಬಿಲ್ಲು-ಬಾಣದ ಆಟ ಆಡಿ ಎಷ್ಟು ವರ್ಷಗಳಾಗಿವೆಯೋ ಗೊತ್ತಿಲ್ಲ. ಆದರೆ ಅದನ್ನು ಮರೆತಿರಲಂತೂ ಸಾಧ್ಯವಿಲ್ಲ. ಕೆಲವು ಸಲ ಟೀವಿಗಳಲ್ಲಿ archery showಗಳು ಕಾಣಿಸಿಕೊಳ್ಳುತ್ತಿರುತ್ತವೆ. ದೊಡ್ಡ ಸಂಗತಿಯೇನನ್ನೂ ಹೇಳ ಹೊರಟಿಲ್ಲ ನಾನು. ನಿಮಗೂ ಇದೆಲ್ಲ ಗೊತ್ತು. ಬಿಲ್ಲು ಅಂದರೆ ಒಂದು ಬಿದಿರ ತುಂಡು. ಅದಕ್ಕೆ ನಾರು ಕಟ್ಟಿ ಹೆದೆ ಸಿದ್ಧಪಡಿಸಿರುತ್ತೇವೆ. ಆ ನಂತರ ಬಿಲ್ಲಿನ ನೂಲಿಗೆ ಬಾಣ ಫಿಕ್ಸ್ ಮಾಡುತ್ತೇವೆ. ಅಲ್ಲಿಗೆ ಅದು ಮುಗಿಯುವುದಿಲ್ಲ. ಬಾಣದ ಸಮೇತ ಹೆದೆಯ ನೂಲನ್ನು ಹಿಂದಕ್ಕೆ ಎಳೆದು ಆನಂತರ ಅದನ್ನು ಬಿಡುತ್ತೇವೆ. ಅಲ್ಲವೆ? ಹಿಂದಕ್ಕೆ ಬಿರುಸಾಗಿ ಎಳೆಯದಿದ್ದರೆ ಬಿಲ್ಲಿನಿಂದ ಬಾಣ ಶರವೇಗದಲ್ಲಿ ಚಿಮ್ಮುವುದಿಲ್ಲ. ಇದಷ್ಟೆ ನಿಮ್ಮ ಗಮನಕ್ಕೆ ತರಬೇಕಾದದ್ದು. ಉಳಿದದ್ದು ನಿಮಗೆ ಅರ್ಥವಾಗುತ್ತದೆ.

ಹೆದೆ ಮಾಡಿದ ಆ ಬಿಲ್ಲು ಬೇರೆಯಲ್ಲ: ನಮ್ಮ ಬದುಕು ಬೇರೆ ಅಲ್ಲ. ಕೆಲವೊಮ್ಮೆ ‘ಇನ್ನು ಈ ಜನ್ಮದಲ್ಲಿ ಬೇರೆ ಏನೂ ಸಂಭವಿಸದು. Life is dragging. ದಣಿದ ಮನುಷ್ಯನಂತಾಗಿ ಬಿಟ್ಟಿದ್ದೇನೆ. ನಿಜಕ್ಕೂ ದಣಿದಿದ್ದೇವೆ. ಎಲ್ಲಿಯ ಜೀವನೋತ್ಸಾಹ? ಇನ್ನೆಲ್ಲಿಯ ತಾಕತ್ತು? ಇನ್ನೆಲ್ಲಿಯ ಅರೋಗ್ಯ? ಈ ಸ್ಥಿತಿಯಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾ? ಉಹುಂ, ಇಲ್ಲಿಗೆ ಎಲ್ಲವೂ ಮುಗಿದು ಹೋಯ್ತು ಅನ್ನಿಸಿಬಿಡುತ್ತದೆ.

Exactly, ಬಿಲ್ಲಿನ ಹೆದೆಯ ನೂಲನ್ನೂ ನಾವು ಹಾಗೇ ಹಿಂದೆಳೆದಿರುತ್ತೇವೆ. ಹಾಗೆ ಬಲವಾಗಿ ಹಿಂದಕ್ಕೆ ಎಳೆದು ಕೈಲಿರುವ ಬಾಣವನ್ನು ನೂಲಿನ ಮೇಲಿನ ಹಿಡಿತ ಸಡಿಲಿಸದಿದ್ದರೆ ನಾವು ಹೂಡಿದ ಬಾಣವನ್ನು ಚಿಮ್ಮಿಸುವುದಾದರೂ ಹೇಗೆ, ಹೇಳಿ? ಇದೊಂದು ಚಿಕ್ಕ ಉದಾಹರಣೆ. ಮತ್ತು ಸೂಕ್ತವಾದ ಉದಾಹರಣೆ.
ಬದುಕು ಪ್ರತಿನಿತ್ಯವೂ ಸರಬರನೆ ಓಡುತ್ತಿರುವುದಿಲ್ಲ. ಎಂಥ ಅಥ್ಲೀಟ್ ಕೂಡ ಮೈಯೊಳಗಿನ ನೆಣ ನೆಲಕ್ಕಿಳಿದೇ ಹೋಯಿತೇನೋ ಎಂಬಂತೆ ಕಾಲೆಳೆಯುತ್ತ ನಡೆಯುವ ಸ್ಥಿತಿ ತಲುಪಿರುತ್ತಾನೆ. “ಏನು ಮಾಡ್ಲಿ ನೀವೇ ಹೇಳಿ. Nothing is happening. ಬದುಕು ಮುಂದಕ್ಕೆ ಸಾಗುತ್ತಲೇ ಇಲ್ಲ" ಎಂದು ಹುಡುಗಿಯೊಬ್ಬಳು ಕೇಳಿದಳು. ಅವಳಿಗೆ ಬಿಲ್ಲಿನದೇ ಉದಾಹರಣೆ ಕೊಟ್ಟೆ. ನೀನು ಹೂಡಿದ ಬಾಣವನ್ನು, ನೂಲಿನ ಸಮೇತ ಹಿಂದಕ್ಕೆ ಎಳೆದು ಬಲವಾಗಿ ಕೈಬಿಡದ ಹೊರತು, ಹೂಡಿದ ಬಾಣ ಮುಂದಕ್ಕೆ ಚಿಮ್ಮುವುದಿಲ್ಲ. ಬದುಕೂ ಅಷ್ಟೆ: ಅದು ವಿಪರೀತ drag ಆಗ್ತಾ ಇದೆ ಅಂದರೆ ಅರ್ಥ: ಬಿಲ್ಲಿನ ನೂಲನ್ನು ನೀನು ಹಿಂದಕ್ಕೆಳೆದು ಅದಕ್ಕೆ ಬಾಣ ಹೂಡುತ್ತಿದ್ದೀಯ ಅಂತಲೇ. ಹಿಂದಕ್ಕೆ ಎಳೆಯದಿದ್ದರೆ ಹೂಡಿದ ಬಾಣವನ್ನು ಆ ರಭಸದೊಂದಿಗೆ ಅದರ ಗುರಿಯತ್ತ ಚಿಮ್ಮಿಸುವುದು ಹೇಗೆ? ಒಂದು ವೈಫಲ್ಯ, ಒಂದು ನಿರಾಸೆ, ಒಂದು ತಿರಸ್ಕಾರ-ನಿನ್ನ ಬದುಕನ್ನು ಥಟ್ಟನೆ ನಿಲ್ಲಿಸಿ ಬಿಡುವುದಿಲ್ಲ. It pulls backward. ಆದರೆ ನಂಬಿ, ಹಾಗೆ ಹಿಂದಕ್ಕೆ ಬದುಕು ನಿಮ್ಮನ್ನು ಎಳೆಯುತ್ತದೆ ಅಂದರೆ, ಅದು ನಿಮ್ಮನ್ನು ಶರವೇಗದಿಂದ ಎಲ್ಲೋ, ನೀವು ನಿರೀಕ್ಷಿಸದೆ ಇರುವ ಯಾವುದೋ ಎತ್ತರಕ್ಕೆ ನಿಮ್ಮನ್ನು ತಲುಪಿಸಲಿದೆ. ಈ ಬಗ್ಗೆ ವಿಶ್ವಾಸ ಇಟ್ಟುಕೊಳ್ಳಿ. ನಾನೇನೋ ಉಪದೇಶ ಮಾಡುತ್ತಿಲ್ಲ. ನನ್ನ ಅನುಭವ ಹೇಳುತ್ತಿದ್ದೇನೆ.

Exactly, ನನ್ನನ್ನು ಈ ಬದುಕು ಅದೆಷ್ಟೋ ಸಲ ಹಾಗೆ treat ಮಾಡಿದೆ. ಹಿಂದಕ್ಕೆ ಜಗ್ಗಿದೆ. ವರ್ಷಗಟ್ಟಲೆ ‘ಹಿಂದಕ್ಕೇ’ ಜಗ್ಗಿದೆ. ಆಗೆಲ್ಲ, ನಿಮಗೆ ಅನ್ನಿಸಿದ ಹಾಗೆಯೇ ನನಗೂ ಅನ್ನಿಸಿದೆ. ಥಟ್ಟನೆ ನೌಕರಿ ಕಳೆದುಕೊಂಡೆ. ಅನೇಕರ ಮುಖದಲ್ಲಿ ಆಗ ಮಂದಹಾಸ. ‘ನೋಡು, ಹ್ಯಾಗೆ ಬೀದಿಪಾಲಾದ!’ ಎಂಬ ಮಾತು. Ofcourse, ಬೀದಿ ಪಾಲಾದದ್ದೂ ಉಂಟು. ಬೆಂಗಳೂರಿನಲ್ಲಿ ಒಬ್ಬನೇ ಇದ್ದಿದ್ದರೆ ಎರಡು ಹೊತ್ತಿನ ಊಟವನ್ನು ತಿಂದಾದರೂ ತಿಂದು ಬದುಕುತ್ತಿದ್ದೆ. ಆದರೆ ಲಲಿತೆಯನ್ನು ಮೊದಲು ಬಳ್ಳಾರಿ ಬಿಡಿಸಿದೆ. ಹುಬ್ಬಳ್ಳಿಯಲ್ಲಿ ಸಂಸಾರ ಹೂಡಿದೆ. ಇನ್ನೇನು ಇಲ್ಲೇ ನೆಲೆಗೊಂಡು ಬಿಡುತ್ತೇನೆ ಅಂದುಕೊಳ್ಳುವಷ್ಟರಲ್ಲಿ ಬದುಕು ನನ್ನನ್ನು ಬೆಂಗಳೂರಿಗೆ ಹೊತ್ತು ಹಾಕಿತು. ಸುಮ್ಮನಿದ್ದೆನಾ? ಹುಬ್ಬಳ್ಳಿಯಲ್ಲಿ ಕೊಂಚ ನೆಮ್ಮದಿಯಾಗಿ ಸರ್ಕಾರಿ ನೌಕರಿ ಮಾಡಿಕೊಂಡಿರುತ್ತಿದ್ದವಳನ್ನು ವರ್ಗಾ ಮಾಡಿಸಿ ಬೆಂಗಳೂರಿಗೆ ಮಕ್ಕಳ ಸಮೇತ ಒಂದು ಲಾರಿಯ ಕ್ಯಾಬಿನ್‌ನಲ್ಲಿ ಕೂಡಿಸಿಕೊಂಡು ಬಂದೆ. ಸರಿ, ಇನ್ನು ಬೆಂಗಳೂರಿನಲ್ಲಿ ನೆಲೆಸೋಣ ಅಂದುಕೊಂಡೆ. ನನಗೂ-ಶಾಮರಾಯರಿಗೂ ಶರಂಪರ ಜಗಳ ನಡೆದುಹೋಯಿತು. ನೌಕರಿ ಖಲಾಸ್!

ಬದುಕೆಂಬ ನೂಲು ಎಲ್ಲಿಂದೆಲ್ಲಿಗೆ ಜಗ್ಗಿತು ನೋಡಿ? ಮೂರು ಮಕ್ಕಳಿದ್ದ ತುಂಬು ಸಂಸಾರ ಅದು. ಅವಳೊಬ್ಬಳ ಸಂಬಳ ಬಿಟ್ಟರೆ ಬೇರೆ ಯಾವ ಆದಾಯವೂ ಇರಲಿಲ್ಲ. ನನಗೆ ಬರೀ ಸಿಗರೇಟಿಗೂ ಬರ. ಇಂಥ ಅನಿರೀಕ್ಷಿತಗಳು ಸಂಭವಿಸಿದಾಗ, ಕಲ್ಪಸಿಕೊಂಡೇ ಇರದಂತಹ ಹೊಡೆತಗಳು ಬಿದ್ದಾಗ ಸಹಜವಾಗಿಯೇ ವಿಷಣ್ಣರಾಗುತ್ತೇವೆ, “ಇಲ್ಲಿಗಿದು ಮುಗಿಯಿತು; ಸಿನೆಮಾ ಬಿಡ್ತು" ಅಂದುಕೊಳ್ಳುತ್ತೇವೆ.

ಸರಿಯಾಗಿ ಅಂಥ ಸಮಯದಲ್ಲೇ ನೀವು ಬಿಲ್ಲು-ಹೆದೆ-ಬಾಣಗಳನ್ನು ನೆನೆಸಿಕೊಳ್ಳಬೇಕು. ಹಿಂದಕ್ಕೆ ಎಳೆದಷ್ಟೂ, ವಿಪರೀತವಾಗಿ ಬದುಕು drag ಮಾಡಿದಷ್ಟೂ ಅದು ಈಗಲ್ಲ, ಇನ್ನೊಂದು ಕ್ಷಣದಲ್ಲಿ ನಮ್ಮನ್ನು ಅನೂಹ್ಯ ಎತ್ತರಕ್ಕೆ ಚಿಮ್ಮಿ ಅಲ್ಲೆಲ್ಲೋ ಕೂಡಿಸಲಿದೆ ಅಂತ ನಂಬಬೇಕು. ಆದರೆ, “ಆಯ್ತು ಬಿಡು, ಏನೇನೆಲ್ಲ ಆಗಬೇಕೋ, ಅದು ಆಗೇ ಆಗುತ್ತದೆ" ಅಂದುಕೊಂಡು ಸುಮ್ಮನಿದ್ದುಬಿಡಬೇಡಿ. ಹೊಸ ಎತ್ತರಗಳಿಗೆ ಚಿಮ್ಮಿ ಹೋಗಿ ಅಲ್ಲೆಲ್ಲೋ ಕೂಡುವ ಘಳಿಗೆಯನ್ನು ಸುಮ್ಮನೆ ಕಾಯುತ್ತಾ ಕೂತು ಬಿಡಬೇಡಿ.
ನೀವು ಕೇವಲ ಭಾರೀ ಬೇಡಿಕೆಯ ನಟ-ನಟಿಯರನ್ನು ನೋಡಿರುತ್ತೀರಿ, ಬದುಕಿದರೆ ಹಾಗೆ ಬದುಕಬೇಕು ನೋಡು ಅಂತ ಅಂದುಕೊಂಡಿರುತ್ತೀರಿ. ಯಾವತ್ತಾದರೂ ನೀವು ವಿಶ್ವವಿಜೇತ ಎಂಬ ಹೆಸರಿನ ನಟನೊಬ್ಬನ ಬಗ್ಗೆ ಯೋಚಿಸಿದ್ದೀರಾ? poor soul. ಆತ ನಟ ಉದಯಕುಮಾರನ ಮಗ. ಯಾವುದೋ ಆಸೆಯಿಂದ, ಏನೋ ಆಗಿಹೋಗುತ್ತದೆಂಬ ಆಸೆಯಿಂದ ಕಾಯುತ್ತ-ಕಾಯುತ್ತಲೇ ಗತಿಸಿಹೋದ. ಅಂಥ ನಟರು ಎಷ್ಟಿದ್ದಾರೋ? ಅವಕಾಶವೇ ಸಿಗದ ನಟ-ನಟಿಯರು, ನಿರ್ದೇಶಕರು, ಗಿರಾಕಿಯೇ ಬಾರದ ಬಚ್ಚ ಮೊಲೆಯ ಸೂಳೆಯರು, ಮುಪ್ಪಿನ ಕಾಲದ ಪಿಂಚಣಿ ಬಂದು ಕೈಗೆ ಸೇರೀತು ಎಂಬ ಆಸೆಯ ಮುದುಕ ಮುದುಕಿಯರು, ಇವತ್ತು ನನ್ನ ಗಂಡ ಹೇಗೋ ದುಡಿದು, ಏನೋ ಮಾಡಿ ಒಂದು ದಿನಕ್ಕಾಗುವಷ್ಟಾದರೂ ರೇಷನ್ ಮನೆಗೆ ತಂದಾನು ಅಂತ ಕಾಯ್ದು ಕುಳಿತಿರುವ ಗೃಹಿಣಿಯರು-ಇವರ ಬಗ್ಗೆಯೇನಾದರೂ ಯೋಚಿಸಿದ್ದೀರಾ?

ಹೋಲಿಸಿಕೊಂಡರೆ ಅವರಿಗಿಂತ ನೀವು-ನಿಮ್ಮ ಬದುಕು ಕಡಿಮೆ ದುರ್ಭರವಾಗಿದೆ ಅಲ್ಲವೇ? Feel that. ಹೆದೆಗೇರಿದ ಬಾಣ ಇವತ್ತಲ್ಲ ನಾಳೆ ಚಿಮ್ಮಿಯೇ ಚಿಮ್ಮುತ್ತದೆ. ಹಾಗೆ ಚಿಮ್ಮಿದಾಗ ನೀವು ಆ ಎತ್ತರದಲ್ಲಿ ಸ್ಥಿರವಾಗಿ ಬದುಕುವುದಕ್ಕೆ ಏನೇನು ಸಿದ್ಧತೆ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳಲಾರಂಭಿಸಿ. ಹೊಸ ಎತ್ತರ, ಹೊಸ ಬದುಕು ಅಂದ ಮಾತ್ರಕ್ಕೆ ಅದೇನೋ ಸಂತಸದ ತಾಣವಲ್ಲ. ಅಲ್ಲಿ ಬೇರೆಯದೇ ಸವಾಲುಗಳಿರುತ್ತವೆ. ತೀರ ಅನಿರೀಕ್ಷಿತವಾದ ಸಮಸ್ಯೆಗಳಿರುತ್ತವೆ. ಈ dragging period ಇದೆಯಲ್ಲಾ? ಅದು ನಿಮ್ಮ ಪಾಲಿಗೆ preparing period ಅಂದುಕೊಳ್ಳಿ. ನಿಮಗೆ ಯಾವುದು ಬರುವುದಿಲ್ಲವೋ ಅದನ್ನೆಲ್ಲ ಕಲಿಯಿರಿ. ಸೈಕ್ಲಿಂಗ್, ಜಾಗಿಂಗ್, ಈಜು, ಚಾರಣ, ಒಂದೆರಡು ಕಂಪ್ಯೂಟರು ಕೋರ್ಸು, ಚಿಕ್ಕಪುಟ್ಟ ಅಡ್ನಾಡಿ ನೌಕರಿಗಳು-ಹೀಗೆ ಏನೋ ಒಂದು ಮಾಡುತ್ತಿರಿ. Everything helps. ಅದರರ್ಥ, ಆ ಬಿಲ್ಲಿಸಿ ಚಿಮ್ಮುವ ವೇಗಕ್ಕೆ, ಅದರ ಕಂಪನಕ್ಕೆ, ಬಾಣ ಕೂಡ ಫಿಟ್ ಆಗಿರಬೇಕು ಅಂತ. Be that. ಯಾವ ಬಿಲ್ಲು ಎಷ್ಟು ಜಗ್ಗಿದರೂ ಬಾಣವನ್ನು ಅಲ್ಲೇ ಬಿಸುಟು ಹೋಗಿಬಿಡುವುದಿಲ್ಲ. Be confident.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books