Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಇದು ಯಾರು ಬರೆದ ತಾಳೆಗರಿ ಮತ್ತು ಸಿಕ್ಕಿದ್ದಾದರೂ ಎಂದು?

ಇದೊಂದು ನಾಡಿಗ್ರಂಥದ ಹಾಳೆ.
ಇದನ್ನು ಪುಸ್ತಕವೊಂದರಲ್ಲಿ ಪ್ರಕಟಿಸಲಾಗಿದೆ. “ಇದನ್ನು ಓದಿಕೊಳ್ಳಿ, ಅಷ್ಟು ಸಾಕು. ನಾನು ಪ್ರತ್ಯೇಕವಾಗಿ ಏನನ್ನೂ ಹೇಳಬೇಕಾಗಿಲ್ಲ. ನಿಮಗಿದು ಶನಿಮಹಾರ್ದೆಸೆ ಹಾಗೂ ಶನಿ ಭುಕ್ತಿ ನಡೆಯುತ್ತದೆ. ಚೆನ್ನಾಗಿಯೇ ಇರುತ್ತದೆ. ತೊಂದರೆಗಳು ಅಂತ ಏನೂ ಕಾಣಿಸುತ್ತಿಲ್ಲ. You will be fine" ಅಂದದ್ದು ಧಾರವಾಡದ ಡಾ.ಆನಂದ ಹಂದಿಗೋಳ. ಅವರು ವೃತ್ತಿಯಿಂದ ಮನೋವೈದ್ಯರು; ಸೈಕಿಯಾಟ್ರಿಸ್ಟ್. ಆದರೆ ವೃತ್ತಿಗಿಂತ ಪ್ರವೃತ್ತಿಯ ಕಡೆಗೇ ಗಮನ. ಅವರು ಜ್ಯೋತಿಷಿ. ತಿಂಗಳುಗಟ್ಟಲೆ, ವರ್ಷಗಟ್ಟಲೆ ಏಕಾಗ್ರತೆಯಿಂದ ಓದಿ, ಅಭ್ಯಸಿಸಿ ಜ್ಯೋತಿಷ್ಯ ಶಾಸ್ತ್ರ ಕಲಿತಿದ್ದಾರೆ. ಆನಂತರ ಒಂದು ಕಂಪ್ಯೂಟರ್ ತಂದಿಟ್ಟುಕೊಂಡು ಜಾತಕಗಳ ಅಧ್ಯಯನಕ್ಕೇ ಅಂತ ತಮ್ಮದೇ ಆದ ಒಂದು software ಸೃಷ್ಟಿಸಿಕೊಂಡಿದ್ದಾರೆ. ಅವರಿಗೂ ನಮ್ಮ ಮನೋವೈದ್ಯರಾದ ಡಾ.ಪಾಂಡುರಂಗಿ ಅವರಿಗೂ ಆತ್ಮೀಯತೆ ಇದೆ. “ನೋಡ್ರಿ ರವೀ, ನನಗೆ ಯೂನಿವರ್ಸಿಟಿಯ ಸೆನೆಟ್ ಸದಸ್ಯತ್ವ ಕೊಡುವ ಮಾತುಕತೆ ನಡೆದಿತ್ತು. ಅಂದಿನ ಸಚಿವರಾದ ಶಂಕರಮೂರ್ತಿಯವರು ಅಂತಿಮ ಆದೇಶದ ಪ್ರತಿಯನ್ನು ಕೂಡ ನನಗೆ ಕೊಟ್ಟಿದ್ದರು. ಇನ್ನೇನು ಸರಕಾರದ ಅಂತಿಮ ಆದೇಶ ಹೊರಡಬೇಕು; ಅಷ್ಟರಲ್ಲಿ ನಾನು ನಮ್ಮ ಡಾ.ಹಂದಿಗೋಳರನ್ನು ಫೋನಿನಲ್ಲಿ ಸಂಪರ್ಕಿಸಿದೆ. ನಮ್ಮಿಬ್ಬರವೂ ಇನಿಷಿಯಲ್ಸ್ ಒಂದೇ. ನಾನು ಡಾ.ಆನಂದ ಪಿ.ಪಾಂಡುರಂಗಿ, ಅವರು ಡಾ.ಆನಂದ ಪಿ.ಹಂದಿಗೋಳ. ಇಬ್ಬರೂ ವೃತ್ತಿಯಿಂದ ಸೈಕಿಯಾಟ್ರಿಸ್ಟ್‌ಗಳೇ. ನನಗಿಂತ ಅವರು ನಾಲ್ಕೈದು ವರ್ಷಗಳಿಗೆ ಹಿರಿಯರು. ಆದರೆ ಏಕವಚನದ ಸ್ನೇಹ. ಮಾತಿಗೊಮ್ಮೆ ಅವರು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹೇಳಿಕೊಳ್ತಾ ಇದ್ರು. ಆಗಲಿ, ಇದೊಂದು ಕೈ ನೋಡೇಬಿಡೋಣ ಅಂದುಕೊಂಡು “ಡಾ.ಹಂದಿಗೋಳ್, ನನಗೆ ಸೆನೆಟ್ ಸದಸ್ಯತ್ವ ಸಿಗ್ತದೋ ಇಲ್ವೋ? ನಿನ್ನ ರೀಡಿಂಗ್ ಏನು?" ಅಂತ ತಮಾಷೆಯ ದನಿಯಲ್ಲಿ ಕೇಳಿದೆ. ಹತ್ತು ನಿಮಿಷ ಬಿಟ್ಟು ಫೋನ್ ಮಾಡ್ತೀನಿ ಅಂದರು ಆತ. ಅದರಂತೆಯೇ ಫೋನ್ ಮಾಡಿ, “ಸೆನೆಟ್ ಸದಸ್ಯತ್ವ ಸಿಗೋ ಯೋಗ ಇಲ್ಲ" ಅಂದುಬಿಟ್ಟರು.

“ನಿನಗೆಲ್ಲೋ ಭ್ರಾಂತು. ನನ್ನ ಕೈಯಲ್ಲಿ ಮಂತ್ರಿಗಳ ಆರ್ಡರ್ ಇದೆ" ಅಂದೆ ನಾನು.
“ನೋಡಪ್ಪಾ, ನಿನ್ನ ಕೈಲಿ ಆರ್ಡರಿದೆಯೋ ಇಲ್ವೋ ಗೊತ್ತಿಲ್ಲ. ಆದರೆ ಈಗಷ್ಟೇ ನಿನ್ನ ಜಾತಕ ನೋಡಿದೆ. ಈ ಕೆಲಸ ಆಗೋದಿಲ್ಲ ಅಂತ ಸ್ಪಷ್ಟವಾಗಿ ನಿನ್ನ ಜಾತಕ ಹೇಳ್ತದ. ನಂಬಿದ್ರೆ ನಂಬು; ಬಿಟ್ಟರೆ ಬಿಡು" ಅಂದು ಫೋನಿಟ್ಟರು ಹಂದಿಗೋಳ.
“ರವೀ, ನೀವು ನಂಬಲಿಕ್ಕಿಲ್ಲ. ಸಂಬಂಧಪಟ್ಟ ಮಂತ್ರಿಗಳೇ ತಮ್ಮ ಸಹಿ ಹಾಕಿದ್ದರು. ಆದರೆ ultimately ಆ ಕೆಲಸ ಆಗಲಿಲ್ಲ. ಇದಕ್ಕೆ ಏನಂತೀರಿ? ನಿಮಗೆ ಗೊತ್ತಿದೆ. ನಾನು ವಿಪರೀತ ಮಡಿವಂತನಲ್ಲ. ದೇವರು-ದಿಂಡ್ರು ಇತ್ಯಾದಿಗಳೆಲ್ಲ ಮನೆಯ ಒಳಗೇ. ಹೊಸ್ತಿಲು ದಾಟಿದ ಮೇಲೆ ನನ್ನನ್ನ ಜಾತಿ-ಲಿಂಗ-ಬಡವ-ಶ್ರೀಮಂತ-ಉಹುಂ, ಇದ್ಯಾವುದೂ ಕಾಡೋದಿಲ್ಲ. I am just a docter. ಆದರೆ ನನ್ನ ಕೈಯಲ್ಲಿ ಮಂತ್ರಿಗಳು ಕೊಟ್ಟ ಆರ್ಡರ್ ಇತ್ತು. ಆದರೆ ಡಾ.ಹಂದಿಗೋಳ್, ಈ ಕೆಲಸ ಆಗೋದಿಲ್ಲ ಅಂದರು. ತಮಾಷೆ ಅಂದ್ರೆ ಆ ಕೆಲಸ ಆಗಲೇ ಇಲ್ಲ!" ಅಂದಿದ್ದರು ಡಾ.ಪಾಂಡುರಂಗಿ. Ofcourse, ಅವರು ಯಾವತ್ತಿಗೂ ರಾಜಕಾರಣ, ವ್ಯಕ್ತಿಪೂಜೆ, ಸನ್ಮಾನಗಳು, ಬಿರುದು ಬಾವಲಿ, ಅಧಿಕಾರ ಮುಂತಾದವುಗಳ ಬೆನ್ನತ್ತಿದವರಲ್ಲ. ಅದಕ್ಕಾಗಿಯೇ ಅವರು ನನಗೆ ಇಷ್ಟವಾಗುತ್ತಾರೆ. ಒಂದು ಮಾತಿನಲ್ಲಿ ಹೇಳುವುದಾದರೆ He is beyond those things. ಪ್ರಶಸ್ತಿಗಳು, ಗೌರವಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಒಮ್ಮೆ ನೀವು ಧಾರವಾಡದ ಮಿಷಿಗನ್ ಕಾಂಪೋಂಡಿನಲ್ಲಿರುವ ಅವರ ಮನೆಯನ್ನು ನೋಡಬೇಕು. ಹೆಜ್ಜೆ ಇಡಲು ಕೂಡ ಆಗದಷ್ಟು ಮಾನಸಿಕ ಸಮಸ್ಯೆ ಇರುವವರು ಅವರ ಇಡೀ ಕಾಂಪೋಂಡಿನ ತುಂಬ ಅವರಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. “ಅವರೇ ನನ್ನ ಪಾಲಿನ ದೇವರು" ಅಂತ ಸಾವಿರ ಸಲ ಹೇಳಿದ್ದಾರೆ ಡಾ.ಪಾಂಡುರಂಗಿ. ಒಂದು ಸಲ ಅಲ್ಲಿ ನೆರೆದ crowdನ ಒಂದು ಫೊಟೋ ತೆಗೆಯೋಣ ಅನ್ನಿಸಿ ಫೊಟೋ ತೆಗೆದೆ. ಆದರೆ ಪತ್ರಿಕೆಯಲ್ಲಿ ಪ್ರಕಟಿಸಲು ಧೈರ್ಯವಾಗಲಿಲ್ಲ. ಏಕೆಂದರೆ, ಅದು ಮನೋರೋಗಿಗಳ ಫೊಟೋ. ನೂರಾರು ಜನ ಅಲ್ಲಿದ್ದಾರೆ. ಇವತ್ತಿಗೂ ಮಾನಸಿಕ ಸಮಸ್ಯೆಗಳನ್ನು ವೈದ್ಯರಿಗೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಪತ್ರಿಕೆಯಲ್ಲಿ ಪ್ರಕಟಿಸಿ, ಆ ಮಂದಿಯ privacyಯನ್ನು ಹಾಳು ಮಾಡಲು ನನಗೇನು ಹಕ್ಕಿದೆ? ಬೆಳಿಗ್ಗೆ ಒಂಬತ್ತಕ್ಕೆ ನಾಷ್ಟಾ ಮುಗಿಸಿ ಅವರು ಮೆಟ್ಟಿಲಿಳಿದು ಹೋಗಿ ಕ್ಲಿನಿಕ್‌ನಲ್ಲಿ ಕುಳಿತರೆ ಮಧ್ಯೆ ಊಟಕ್ಕೆ ಅಂತ ಎದ್ದು ಬರುವುದು ನಾಲ್ಕು ಗಂಟೆಗೇ. ಎರಡು ತುತ್ತು ಊಟ ಮಾಡಿ ಮತ್ತೆ ಕ್ಲಿನಿಕ್‌ಗೆ ಹೋದರೆ ಕೊನೆಯ ರೋಗಿಯನ್ನು ನೋಡಿ ಕೈ ತೊಳೆದುಕೊಂಡು ಮನೆಗೆ ಬರುವುದು ತಡರಾತ್ರಿಯೇ. ನಿಜವಾದ ಅರ್ಥದಲ್ಲಿ ಅವರೊಬ್ಬ ಸಂತ. ಅದಿರಲಿ, ಅವರ ಜಾತಕ ನೋಡಿ ಅಷ್ಟೊಂದು ನಿಖರವಾಗಿ “ನೀವು ಸೆನೆಟ್ ಸದಸ್ಯ ಆಗೋದಿಲ್ಲ" ಅಂತ ಹೇಳಿದ ಡಾ.ಆನಂದ ಪಿ.ಹಂದಿಗೋಳರು ಯಾರು? ಎಲ್ಲಿರುತ್ತಾರೆ? ನಾನು ಪಾಂಡುರಂಗಿಯವರ ಬೆನ್ನುಬಿದ್ದೆ. “ಅದಕ್ಕೇನಂತೆ ಇಲ್ಲಿಂದ ಏಳೆಂಟು ನಿಮಿಷಗಳ driving distance. ಹೋಗಿ ಬರೋಣ ಬನ್ನಿ" ಅಂದರು ಡಾ.ಪಾಂಡುರಂಗಿ. ಸರಿ, ಹೊರಟೇಬಿಟ್ಟೆ. ನಮ್ಮ ಅಮ್ಮ ೧೯೫೮ರಲ್ಲಿ ನಾನು ಹುಟ್ಟಿದಾಗ ಬರೆಯಿಸಿದ ಪಕ್ಕಾ ಜಾತಕವೊಂದು ಆಫೀಸಿನಲ್ಲಿತ್ತು. ಅದನ್ನು mail ಮೂಲಕ ತರಿಸಿಕೊಂಡೆ. “ಜಾತಕ ಏನೂ ಬ್ಯಾಡ. ನೀವು ಹುಟ್ಟಿದ ತಾರೀಕು, ಇಸವಿ, ಊರು ಮತ್ತು ಹುಟ್ಟಿದ ಘಳಿಗೆ ಇಷ್ಟು ಹೇಳಿಬಿಡ್ರಿ ಸಾಕು" ಅಂದರು ಡಾ.ಹಂದಿಗೋಳ. ತಮಾಷೆಯೆಂದರೆ ನನಗೆ ನನ್ನ ಹುಟ್ಟಿದ ಘಳಿಗೆ ಯಾವುದೋ -ನೆನಪಿಲ್ಲ. ಆ ಜಾತಕವನ್ನು ನಾನು ಅವರಿವರಿಗೆ ತೋರಿಸುವುದೂ ಇಲ್ಲ. ಆಸಲು ನನ್ನ ಮಕ್ಕಳ ಜಾತಕಗಳನ್ನೇ ನಾನು ಬರೆಸಿಲ್ಲ. ಅದೇನಿದ್ದರೂ ಲಲಿತೆಯ ಡಿಪಾರ್ಟ್‌ಮೆಂಟು. ಆದರೆ ಆಫೀಸಿನಲ್ಲೊಂದು ಜಾತಕದ ಪ್ರತಿ ಇತ್ತಲ್ಲ? ನೆನಪಿತ್ತು. ತರಿಸಿಕೊಂಡು ಡಾ.ಹಂದಿಗೋಳ ಅವರ ಕೈಗೆ ಕೊಟ್ಟೆ. ಹತ್ತು ನಿಮಿಷ ಅವರು ಸುಮ್ಮನೆ ತಮ್ಮ ಕಂಪ್ಯೂಟರು ನೋಡುತ್ತಾ ಕುಳಿತರು.
“ಇದು ಶನಿ ಮಹಾರ್ದೆಸೆಯ ಕಾಲ. ನಾನು ಹೆಚ್ಚಿಗೆ ಏನೂ ಹೇಳೋದಿಲ್ಲ. ಆರೋಗ್ಯವೊಂದನ್ನು ಚೆನ್ನಾಗಿ ನೋಡಿಕೊಳ್ಳಿ" ಅಂದರು. “ಇದು ಸಾಡೇಸಾತ್ ಅಥವಾ ಏಳುರಾಟ ಶನಿ ಅಂತಾರಲ್ಲ, ಅದಾ?" ಕೇಳಿದೆ. “ಉಹುಂ, ಇದು ಶನಿ ಮಹಾರ್ದೆಸೆ. ಶನೇಶ್ವರ ಮಹಾರಾಜರು (I mean ಗ್ರಹ) ಈ ಸ್ಥಾನಕ್ಕೆ ಬಂದಾಗ ನಿಮ್ಮನ್ನು ಕಾಯಲೆಂದೇ, ಪೊರೆಯಲೆಂದೇ, ಒಳ್ಳೆಯದನ್ನು ಮಾಡಲೆಂದೇ ಬರುತ್ತಾರೆ.." ಅಂದವರೇ ಜಾತಕದ ವಿವರಗಳನ್ನು ಹೇಳತೊಡಗಿದರು.

ನಿಮಗೆ ಗೊತ್ತು; ದೇವರನ್ನು ನಾನು ನಂಬುವುದಿಲ್ಲ. ಆದರೆ ಒಂದು ಹಂತದಲ್ಲಿ ಎಂಥ ದುಃಸ್ಥಿತಿ ಬಂತೆಂದರೆ, ಊಟಕ್ಕೂ ಪರಿತಪಿಸುವಂತಾಗಿ ಬಿಟ್ಟಿತ್ತು. ಹುಬ್ಬಳ್ಳಿಯಲ್ಲಿ ನನ್ನ ಪ್ರೂಫ್‌ರೀಡರ್ ಆಗಿ ಬೆಂಗೇರಿ ಎಂಬುವವರೊಬ್ಬರು ಕೆಲಸ ಮಾಡುತ್ತಿದ್ದರು. ಅವರ ಕೈಗೆ ಇದೇ ಜಾತಕ ಕೊಟ್ಟು, “ಸ್ವಲ್ಪ ನೋಡ್ರಿ" ಅಂದಿದ್ದೆ. ಅವರೂ ಕೊಂಚ ಸ್ಟಡಿ ಮಾಡಿ ನನ್ನ ಮುಖವನ್ನೇ ದಿಟ್ಟಿಸಿ, “ಇವಾಗ ನಿಮಗ ಏಳುರಾಟ ಶನಿ ನಡದದ. ಸ್ವಲ್ಪ ಕಷ್ಟ" ಅಂದರು. “ಕಷ್ಟ ಅಂದರೆ?" ಕಡ್ಡಿ ಕೆದಕಿದೆ.

“ನೋಡ್ರೀ, ನಾನು ಹೆಚ್ಚಿಗೆ ಏನೂ ಹೇಳೋದಿಲ್ಲ. ನಿಮ್ಮ ಯಾವ ಪ್ರಯತ್ನವೂ ಈ ಕಾಲದಲ್ಲಿ ಫಲಿಸೋದಿಲ್ಲ, ನೀವು ಸಾಕಿದ ನಾಯಿಗೂ ಈ ಏಳುರಾಟ ಶನಿ ನಡೆಯೋ ಕಾಲದಾಗ ಒಳ್ಳೇದಾಗೋದಿಲ್ಲ" ಅಂದುಬಿಟ್ಟರು. ಅರೆ, ನಾನು ನಾಯಿ ಸಾಕಿರೋದು ಇವರಿಗೆ ಗೊತ್ತಾ? ಕುಟುಂಬದ ಕಥೆ ಬಿಡಿ: ಅದು ಬೀದಿಪಾಲಾಗೋದೊಂದು ಬಾಕಿ ಎಂಬಂತಾಗಿತ್ತು. ಲಲಿತೆ, ಆಗ ಸರ್ಕಾರಿ ಶಾಲಾ ಶಿಕ್ಷಕಿ. ಭಾವನಾ ಮತ್ತು ಕರ್ಣ ಅವಳೊಂದಿಗೆ ಬಳ್ಳಾರಿಯಲ್ಲಿ ಉಳಿದಿದ್ದರು. ನಾನು ಮನೆಬಿಟ್ಟವನು ಬೆಂಗಳೂರಿಗೆ ಮೊದಲು ಬಂದೆ. ಇಲ್ಲಿ ನಾನಾ ಫಜೀತಿ. ಇರಲಿಕ್ಕೆ ಜಾಗವೂ ಇಲ್ಲದೆ ಬಸ್‌ಸ್ಟ್ಯಾಂಡಿನ ಕಟ್ಟೆಯ ಮೇಲೆ ಮಲಗುತ್ತಿದ್ದುದು ಆಗಲೇ. ಇಲ್ಲಾದರೂ ನೆಲೆಗೊಂಡೆನಾ? ಉಹುಂ, ಸಂಯುಕ್ತ ಕರ್ನಾಟಕದ ನೌಕರಿ ಹಿಡಿದು, ಹುಬ್ಬಳ್ಳಿಗೆ ಹೋದೆ. ಬಳ್ಳಾರಿಯಿಂದ ಚೇತನಾಳನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದೆ. ಈ ಹುಡುಗ ಸೀನ ನಮ್ಮೊಂದಿಗೇ ಹುಬ್ಬಳ್ಳಿಗೆ ಬಂದ. ಎಂಥ ಹೀನಸ್ಥಿತಿ ಅಂದರೆ ಅತೀ ಅಗ್ಗದ ಸರ್ಕಾರಿ ಸರಾಯಿಯನ್ನು ಕೂಡ ಅಂಗಡಿಯವನಿಗೆ ಉದ್ರಿ ಹೇಳಿ ಕುಡಿಯುತ್ತಿದ್ದೆ. ಪರಮ ಕೊಳಕು ಸ್ಲಂಗಳಲ್ಲಿ ವಾಸ. ಆಗ ನನ್ನ ಸಹಾಯಕ್ಕಿದ್ದ ಸೀನ, ಅವನೂ ಖಾಯಿಲೆ ಬಿದ್ದ. ಆ ಏಳೂವರೆ ವರ್ಷದ ಪಡಿಪಾಟಲನ್ನು ವಿವರಿಸಿ ಬರೆದರೆ ಅದೇ ಒಂದು ಪುಸ್ತಕವಾದೀತು.

“ಏಳುರಾಟ ಶನಿಯ ಕಾಟ ಯಾವತ್ತಿಗೆ ಮುಗೀತದೆ?" ಎಂದು ಬೆಂಗೇರಿಯವರನ್ನೇ ಕೇಳಿದೆ.
“ಭಾಳ ಏನಿಲ್ಲ. ನಿಮಗೆ ಮೂವತ್ತಾರು ವರ್ಷ ಆದಮ್ಯಾಲ ಅವನೇ ಬಿಟ್ಟು ಹೋಗ್ತಾನೆ. ಅವನಿನ್ನೂ ಬಿಟ್ಟು ಹೋಗೋದಕ್ಕೆ ಮುಂಚೆಯೇ ನಿಮಗೆ ಕೆಲವನ್ನು ಕರುಣಿಸಲಾರಂಭಿಸ್ತಾನೆ. ನಿಮಗೂ ಅದು ಗೊತ್ತಾಗ್ತದ. ಶನಿಮಹಾರಾಜನ ವೈಶಿಷ್ಟ್ಯ ಅಂದರೆ, ತಾನು ಏನೇನನ್ನ ನಿಮ್ಮಿಂದ ಕಿತ್ತುಕೊಂಡನೋ ಅದನ್ನೆಲ್ಲ ವಾಪಸು ಕೊಟ್ಟು, ನೀವು ನಿರೀಕ್ಷಿಸಲಿಕ್ಕೆ ಆಗದೆ ಇರೋಷ್ಟು ಸೌಭಾಗ್ಯ ಕೊಟ್ಟು ಹೋಗ್ತಾನೆ" ಅಂದಿದ್ದರು.

ಯಾವುದನ್ನು ನಂಬಲಿ.
ಚೇತನಾಗೆ ಹಾಲು-ಊಟ, ನನಗೊಂದಿಷ್ಟು ಆಲ್ಕೋಹಾಲು ಪ್ರತಿನಿತ್ಯ ಒದಗಿದರೆ ಅಷ್ಟೇ ಸಾಕು. ಈ ಜಾತಕ-ಗೀತಕ ಕಟ್ಟಿಕೊಂಡು ನನಗೇನಾಗಬೇಕು? ಅಂದುಕೊಂಡು ಸುಮ್ಮನಾದೆ. ವಿಚಿತ್ರವೆಂದರೆ, ಏಳುರಾಟ ಶನಿ ಅಥವಾ ಸಾಡೇಸಾಥ್ ಅಂತೀವಲ್ಲ? ಅದರ ಆಗಮನ ಮತ್ತು ನಿರ್ಗಮನಗಳೆರಡೂ ನಮ್ಮ ಅವಗಾಹನೆಗೆ ಬರತೊಡಗುತ್ತವೆಯಂತೆ. ನನಗೆ ಅದ್ಯಾವುದೂ ಗೊತ್ತಿಲ್ಲ. ನನ್ನ ಅಮ್ಮನ ಸಾವು, ಇದ್ದ ಪ್ರಿಂಟಿಂಗ್ ಪ್ರೆಸ್ ಮಾರಿಕೊಂಡದ್ದು, ಇದ್ದ ಲೆಕ್ಚರರಿಕೆ ಕಳೆದುಕೊಂಡದ್ದು-ಇವೆಲ್ಲ ಶನಿಯ ಆಗಮನದ ಸೂಚನೆಗಳಾ? ಗೊತ್ತಿಲ್ಲ. ಆಗಿನ್ನೂ ಜ್ಯೋತಿಷಿ ಬೆಂಗೇರಿಯವರ ಪರಿಚಯ ಆಗಿರಲಿಲ್ಲ. ಆದರೆ ಶನಿಯ ನಿರ್ಗಮನದ ಕುರುಹುಗಳು ತುಂಬ ಸ್ಪಷ್ಟವಾಗಿದ್ದವು. ‘ಸಂಯುಕ್ತ ಕರ್ನಾಟಕ’ದ ಇತಿಹಾಸದಲ್ಲೇ ಒಂದು ವಿಷಯಕ್ಕೆ ನಾನು ಅಪರೂಪದವನಾದೆ. ಕೇವಲ ಎಂಟುನೂರು ರುಪಾಯಿಗಳಿಗೇ ಅಲ್ಲಿಗೆ ಸೇರಿದ್ದೆ. ಸೇರಿದ ಕೇವಲ ಒಂದು ತಿಂಗಳಲ್ಲಿ ಶಾಮರಾಯರು ನನ್ನ ನೌಕರಿ ಖಾಯಂ ಮಾಡಿ, ನನಗೆ ಮೂರುಸಾವಿರದ ಇನ್ನೂರು ರುಪಾಯಿ ಸಂಬಳ ಕೊಟ್ಟರು. ಮೊದಲು ಪತ್ರಿಕೆಯ ಸಾಪ್ತಾಹಿಕ ಪುರವಣಿಗೆ ಮುಖ್ಯಸ್ಥನನ್ನಾಗಿ ಮಾಡಿದರು. ಅದಾದ ಒಂದೆರಡು ವರ್ಷಗಳಲ್ಲೇ ನನಗೆ ‘ಕಸ್ತೂರಿ’ ಪತ್ರಿಕೆಯ ಸಂಪಾದಕತ್ವ ನೀಡಿದರು. ನೋಡ ನೋಡುತ್ತಿದ್ದಂತೆಯೇ ‘ಕರ್ಮವೀರ’ದ ಸಂಪಾದಕತ್ವ ವಹಿಸಿಕೊಟ್ಟರು. ಆ ಎರಡೂ ಪತ್ರಿಕೆಗಳ ವಯಸ್ಸು ಸರಿಯಾಗಿ ನನ್ನ ವಯಸ್ಸಿಗಿಂತ ದುಪ್ಪಟಾಗಿತ್ತು. ಅದ್ಯಾವ ನಂಬಿಕೆಯ ಮೇಲೆ ನನಗೆ ಅಷ್ಟು ಜವಾಬ್ದಾರಿಯುತ ಹುದ್ದೆಗಳನ್ನು ಕೊಟ್ಟರೋ? ಹಾಗೆ ಕೊಟ್ಟ ಕೆಲವೇ ದಿನಗಳಲ್ಲಿ ನನ್ನನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾ ಮಾಡಿ ಆಜ್ಞೆ ಹೊರಡಿಸಿದರು. ಅದೊಂದು ಕಾಲ ಇತ್ತಲ್ಲ? ನಾನು ಏನು ಮುಟ್ಟಿದರೂ ಅದು ಚಿನ್ನ. ಆದರೆ ನಿಜವಾದ ಚಿನ್ನದ ಮೇಲೆ ನಾನು ಕೈ ಇಟ್ಟಿದ್ದು, ೧೯೯೫ರಲ್ಲಿ. ನಾನು ‘ಹಾಯ್ ಬೆಂಗಳೂರ್!’ ಆರಂಭಿಸಿದೆ. ಅದು ನನ್ನ ಪಾಲಿನ ಕಲ್ಪವೃಕ್ಷವಾಗಿ ಹೋಯಿತು. ಆನಂತರ ನಾನು ಹಿಂತಿರುಗಿ ನೋಡಲೇ ಇಲ್ಲ. Real fortunate and pleasent years of my life. “ಶನಿಮಹಾರಾಜ ನಿರ್ಗಮಿಸುವಾಗ ನೀನು ಊಹಿಸದೆ ಇರುವುದನ್ನೆಲ್ಲಾ ನಿನಗೆ ಕೊಟ್ಟು ಹೋಗುತ್ತಾನೆ" ಅಂತ ಭವಿಷ್ಯ ನುಡಿದಿದ್ದ ಬೆಂಗೇರಿಯವರಿಗೆ ಫೋನ್ ಮಾಡಿ ‘thanx' ಹೇಳಲಾ ಅಂದುಕೊಂಡೆ. ಅಷ್ಟು ಹೊತ್ತಿಗೆ ಅವರು ನೌಕರಿ ಬಿಟ್ಟಿದ್ದರು. ಅಕ್ಷರಶಃ ನಾನು ಕೈಯಿಟ್ಟ ಪ್ರತೀ ವಿಷಯದಲ್ಲೂ ನನಗೆ ಗೆಲುವೇ ಆಯಿತು. ಪತ್ರಿಕೆ, ಕಾರು, ಮನೆಗಳು, ಮಕ್ಕಳ ಮದುವೆ, ಕರ್ಣನ ಇಂಗ್ಲಂಡ್ ವಿದ್ಯಾಭ್ಯಾಸ-ಏನೇನೆಲ್ಲ ಸರಾಗವಾಗಿ ಆಗಿ ಹೋಯಿತು. ದುಡಿದುದರ ದಣಿವು ಕೂಡ ಕಾಡಲಿಲ್ಲ.

“ಈಗ ಇದೆಂಥ ಶನಿಮಹಾರ್ದಸೆ?" ಅಂತ ಡಾ.ಹಂದಿಗೋಳರನ್ನು ಕೇಳಿದೆ.
“ಇದನ್ನ ಓದಿ ಬಿಡ್ರಿ ಸಾಕು" ಎಂದು ಕನ್ನಡದಲ್ಲಿ ಮುದ್ರಿತವಾದ ಮೂಲ ತಾಳೆಗರಿಯ ಎರಡು ಪುಟ ಓದಲು ಕೊಟ್ಟರು. ಅಂತೆಯೇ, ಏಳುರಾಟ ಶನಿಯೇ ಬೇರೆ, ಶನಿರ್ದೆಸೆಯೇ ಬೇರೆ ಅಂತಲೂ ವಿವರಿಸಿದರು. ನನಗೆ ಒಂದು ವಿಷಯ ಗೊತ್ತು: ನನ್ನ ಪಾಲಿಗೆ ಶನಿಮಹಾರಾಜ ರಾಶ್ಯಾಧಿಪತಿ. ಅಂದರೆ, ನನ್ನನ್ನು ಆಳುವುದೇ ಶನಿಮಹಾರಾಜ ಎಂಬ ಗ್ರಹ. ಇಂಗ್ಲಿಷಿನಲ್ಲಿ ಹೇಳುವುದಾದರೆ I am governed by ಶನಿಮಹಾರಾಜ. Lord saturn! ಈಗ ಶನಿಮಹಾರ್ದೆಸೆ ಅಂತಾರೆ. ಮತ್ತೆ ಏಳೂವರೆ ವರ್ಷಗಳ ಪೀಡನೆಯಾ? ಹಾಗಂತ ಕೇಳಿದೆ. "No. ಏಳುರಾಟ ಶನಿ ಮತ್ತು ಶನಿಮಹಾರ್ದೆಸೆ ಎರಡೂ ಬೇರೆ ಬೇರೆ. ಮೊದಲು ಇದನ್ನು ಓದಿಕೊಳ್ಳಿ" ಅಂತ ಆ ಎರಡು ಹಾಳೆ ಕೈಗಿತ್ತರು.

ನನಗೆ ಬೆಚ್ಚಿಬೀಳುವಂಥ ಆಶ್ಚರ್ಯವಾದದ್ದು ಆಗಲೇ.
“ನೀನು ಶೈವ ಕುಲದಲ್ಲಿ, ಅಂದರೆ ಶಿವನ ಕುಲದಲ್ಲಿ ಹುಟ್ಟಿದವನು. ನಿನ್ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ನಿನಗೆ ಕೆಲವು ಕಂಟಕಗಳು ಬಾಲ್ಯದಲ್ಲೇ ಬಂದು ಆಗಲೇ ಪರಿಹಾರವಾಗಿ ಹೋಗಿರುತ್ತವೆ. ನಿನಗೆ ಅಷ್ಟಾಗಿ ವಿದ್ಯಾಯೋಗವಿಲ್ಲ. ಆದರೆ ಕೆಲವು ರಸವಿದ್ಯೆಗಳು ಒಲಿಯುತ್ತವೆ. ನಿನ್ನ ವಯಸ್ಸಿನ ೧೮ರಿಂದ ಒಂದು ತೆರನಾದ positive ಬೆಳವಣಿಗೆಗಳಾಗುತ್ತವೆ. ನಿನ್ನ ೨೧ನೇ ವಯಸ್ಸಿನವರೆಗೆ ವಿದ್ಯಾಯೋಗವಿರುತ್ತದೆ. (ಆಗಲೇ ನಾನು ಎಂ.ಎ., ಮುಗಿಸಿದ್ದು) ಮುಂದೆ ೨೪ರಿಂದ ೨೬ರ ತನಕ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. (ಲೆಕ್ಚರರ್ ನೌಕರಿ ಸಿಕ್ಕಿದ್ದೇ ಆವಾಗ) ೩೦ನೆಯ ವಯಸ್ಸಿನಲ್ಲಿ ಹುಟ್ಟಿದ ಮನೆಬಿಟ್ಟು ದೂರ ಹೋಗುತ್ತೀಯ. (How true) ನಾನು ಬಳ್ಳಾರಿ ಬಿಟ್ಟು ವರ್ಷವದು. ನಿನ್ನ ೩೪ನೇ ವಯಸ್ಸಿನಲ್ಲಿ ಮತ್ತು ಆನಂತರ ನಿನಗೆ ಒಳ್ಳೆಯದಾಗುತ್ತದೆ. (ಆಗಲೇ ಕಸ್ತೂರಿ-ಕರ್ಮವೀರಗಳ ಸಂಪಾದಕನಾದದ್ದು) ನಿನ್ನ ೩೪ನೇ ವಯಸ್ಸಿನಲ್ಲಿ ಮತ್ತೆ ನಿನ್ನ ಸ್ಥಳ ಬದಲಾವಣೆಯಾಗುತ್ತದೆ. (Yes, ನನ್ನನ್ನು ಶಾಮರಾಯರು ಬೆಂಗಳೂರಿಗೆ ಟ್ರಾನ್ಸ್‌ಫರ್ ಮಾಡಿದರು) ಮುಂದೆ ೩೬ನೆಯ ವಯಸ್ಸಿನಲ್ಲಿ ನಿನ್ನ ಕೋರಿಕೆಯೇ ಇಲ್ಲದೆ, ನಿನ್ನ ಪಾಲಿಗೆ ಎಲ್ಲವೂ ಸುಖಮಯ ಹಾಗೂ ಫಲಪ್ರದವಾಗಿರುತ್ತದೆ. (Exactly) ಆಗಲೇ ನಾನು ‘ಹಾಯ್ ಬೆಂಗಳೂರ್!’ ಆರಂಭಿಸಿದ್ದು. ಅದೇ ನನ್ನ ಪಾಲಿಗೆ ಇವತ್ತಿಗೂ ಕಲ್ಪವೃಕ್ಷ. ಆದರೆ, ನಿನ್ನ ೫೫ನೆಯ ವಯಸ್ಸಿನಲ್ಲಿ ಕೆಲವಾರು ತೊಂದರೆಗಳಾಗುತ್ತವೆ.

ಕೆಲವಾ? My God. ಆ ಕಾಲದಲ್ಲೇ ನನ್ನ ಆರೋಗ್ಯ ಕೆಟ್ಟಿತು. ಹಿಂದೆಂದೂ ಕಾಣದ ರೀತಿಯಲ್ಲಿ ಕಷ್ಟಗಳು ಬಂದವು, ಅವಮಾನಗಳಾದವು, ಒಂದರ್ಥದಲ್ಲಿ ಸಾಡೇಸಾತಿಯ ದಿನಗಳೇ ಮತ್ತೆ ಬಂದವೇನೋ ಅಂತ ಅನ್ನಿಸಿದ್ದೂ ಉಂಟು. ಇದ್ದಕ್ಕಿದ್ದಂತೆ ಕೋಮಾಗೆ ಹೋದದ್ದು ಸಾಕಲ್ಲ? ಸತ್ತು ಸತ್ತು ಮತ್ತೆ ಬದುಕಿ ಬಂದೆ. ನನ್ನ ನಿಜವಾದ ನರಳಿಕೆಯ ದಿನಗಳವು. ಒಂದರ್ಥದಲ್ಲಿ ಮಾತು ಬಿದ್ದು ಹೋದವು. ನಾಲಿಗೆ ತಡವರಿಸತೊಡಗಿತು. Hand writingನ ಹಿಂಸೆಯನ್ನು ನಿಮ್ಮೆದುರಿಗೆ ಹೇಳಿಕೊಂಡಿಲ್ಲ. ನಂಬಿ, ನಾನು ಬರೆದದ್ದು ನನಗೇ ಅರ್ಥವಾಗುತ್ತಿರಲಿಲ್ಲ. ನಿಜಕ್ಕೂ ಮುತ್ತು ಪೋಣಿಸಿದಂತೆ ಕಾಣುತ್ತಿದ್ದ ನನ್ನ handd writing ಹೆದರಿಕೆಯಾಗುವಷ್ಟು ಕೆಟ್ಟು ಹೋಯಿತು. ನಾಲಗೆ ಅದಕ್ಕಿಂತ ಬರಬಾದ್ ಆಯಿತು. ಅರೆ, ನನಗಿರುವುದೇ ಎರಡು: ಮಾತು ಮತ್ತು ಬರವಣಿಗೆ. ಅವೆರಡೂ ಇಲ್ಲದಿದ್ದರೆ ಇನ್ನು ರವಿ ಬೆಳಗೆರೆ ಎಲ್ಲಿ ಉಳಿದಾನು? ಆಯ್ಕೊಂಡು ತಿನ್ನೋ ಕೋಳಿಯ ಕಾಲೇ ಮುರಿದಂತೆ! ಇಲ್ಲಿಗೆ ನನ್ನ ಬದುಕು ಮುಗಿಯಿತಾ ಅಂತಲೂ ಅಂದುಕೊಂಡೆ. ತೀರ ಆತ್ಮಹತ್ಯೆಯ ಯೋಚನೆ ಬರಲಿಲ್ಲವಾದರೂ, ನಾನು ಭಯಂಕರ ಹೆದರಿದ್ದೆ. ನನ್ನ ತಾಕತ್ತಿನ ಮೂಲದಲ್ಲಿರುವುದೇ ನನ್ನ ನೆನಪಿನ ಶಕ್ತಿ. ಆ ಶಕ್ತಿಯೂ ಹೊರಟು ಹೋಗಿತ್ತು. ಸುಮಾರು ಆರು ತಿಂಗಳ ಕಾಲಘಟ್ಟದಲ್ಲಿ ಏನೇನು ನಡೆದವು. ನನಗೆ ಅವ್ಯಾವೂ ನೆನಪಿಲ್ಲ. ಇನ್ನು ಬದುಕಿ ಏನು ಮಾಡಬೇಕು ಅನ್ನಿಸಿದ್ದೂ ನಿಜ.

ಕೈಯಲ್ಲಿ ಆ ತಾಳೆಗರಿಯ print outs ಇಟ್ಟುಕೊಂಡೇ ಡಾ.ಹಂದಿಗೋಳ ಮನೆಯಿಂದ ಹೊರಬಿದ್ದೆ. ನಿಜ, ಇದ್ಯಾವುದನ್ನೂ ನಾನು ನಂಬುವುದಿಲ್ಲ. “ಇವತ್ತು ಅದ್ಯಾವುದೋ ಹೋಮ ಮಾಡ್ತಿದೀನಿ. ನೀವು ಸುಮ್ಮನೆ, ಶಾಸ್ತ್ರಕ್ಕೆ ಎಂಬಂತೆ ಹೋಮದ ಸಂಕಲ್ಪಕ್ಕೆ ಕೂತುಕೊಳ್ಳಿ" ಅಂತ ನನ್ನ ಹೆಂಡತಿ ಪ್ರಾಣ ತಿನ್ನುತ್ತಿರುತ್ತಾಳೆ. “ಉಹುಂ, ಹೋಮದ ಬೆಂಕಿಯಲ್ಲಿ ಸಿಗರೇಟು ಬೇಕಾದರೆ ಹಚ್ಚಿಕೊಂಡು ಹೋಗ್ತೀನಿ. ಕೂಡು-ಗೀಡು ಅಂತೆಲ್ಲ ಅನ್ನಬೇಡ" ಅಂದುಬಿಡುತ್ತೇನೆ. ಆ ಮಟ್ಟದ ನಿರೀಶ್ವರವಾದಿ ನಾನು. ಆದರೆ ಕೈಲಿದ್ದ ತಾಳೆಗರಿ ಅದಕ್ಕೆ ತದ್ವಿರುದ್ಧವಾದುದೆಲ್ಲವನ್ನೂ ಹೇಳುತ್ತಿತ್ತು. ಅಷ್ಟೇ ಅಲ್ಲ, ಮುಂದೆ ನಾನು ೭೮ ವರ್ಷದವನಾದಾಗ ಏನೇನು ಸಂಭವಿಸುತ್ತದೋ ಅದನ್ನೂ ಇಷ್ಟೇ ಕರಾರುವಾಕ್ಕಾಗಿ ಹೇಳಿತ್ತು.

ನಿಜಕ್ಕೂ ಇದೆಲ್ಲವೂ ಸಾಧ್ಯವಾ? ಹೀಗೆಲ್ಲಾ ಆದೀತಾ? ಯಾರು ಬರೆದ, ಎಲ್ಲಿ ಸಿಕ್ಕ ತಾಳೆಗರಿ ಇದು. ವಾಪಸು ಬರುವಾಗ ಡಾ| ಆನಂದ ಪಾಂಡುರಂಗಿಯವರನ್ನು ಕೇಳಿದೆ: ‘ನಾವು ಡಾ.ಹಂದಿಗೋಳ ಅವರಿಗೆ ಯಾವುದೇ ಫೀ ಅಥವಾ ಕಾಣಿಕೆ ಕೊಡಲ್ಲಿಲ್ಲವಲ್ಲಾ?"
“ಅವರು ತೆಗೆದುಕೊಳ್ಳುವುದೂ ಇಲ್ಲ" ಎಂದು ನಕ್ಕರು ಡಾ.ಪಾಂಡುರಂಗಿ. ಆದರೆ ತುಂಬ ಹೊತ್ತಿನ ತನಕ ನಾನು ತಾಳೆಗರಿಯ ಗುಂಗಿನಲ್ಲೇ ಇದ್ದೆ. ಈಗಲೂ ನನಗೆ ಹೋಮ, ಜ್ಯೋತಿಷ್ಯ, ತಾಳೆಗರಿ ಮುಂತಾದವುಗಳ ಮೇಲೆ ನಂಬಿಕೆ ಬಂದಿಲ್ಲ. ಆದರೆ ತಾಳೆಗರಿ ಮತ್ತು ಡಾ.ಆನಂದ ಹಂದಿಗೋಳ ಅವರು ಆಡಿದ ಮಾತು? ನುಡಿದ ಭವಿಷ್ಯ? ನನ್ನನ್ನು ನಿಜಕ್ಕೂ ಗೊಂದಲಕ್ಕೆ ತಳ್ಳಿವೆ. Sorry.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books