Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹಿರಿಯರನ್ನು ಗೌರವಿಸದ ಸಮಾಜದಲ್ಲಿ ಬದುಕುವುದು ಅಂದರೆ...

ಒಬ್ಬ ಅಜ್ಜ ತನ್ನ ಮೊಮ್ಮಗನನ್ನು ಪ್ರೀತಿಯಿಂದ ‘ಸೂ.. ಮಗನೇ’ ಎಂದು ಬೈಯ್ಯುತ್ತಾನೆ. ನಮ್ಮ ಹಳ್ಳಿಗಳಲ್ಲಿ ಇದು ಸರ್ವೇಸಾಮಾನ್ಯ. ಮೊಮ್ಮಗನೂ, ಅವನ ತಾಯಿಯೂ ಅದೊಂದು ತಮಾಷೆ ಅನ್ನುವಂತೆ ನಕ್ಕು ಸುಮ್ಮನಾಗುತ್ತಾರೆ. ಅದಕ್ಕೆ ಬದಲಾಗಿ ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ಅಜ್ಜನ ಮೇಲೇರಿ ಹೋದರೆ ಏನಾಗುತ್ತಿತ್ತು? ಒಂದು ಸಂಬಂಧದ ಎಳೆ ಶಾಶ್ವತವಾಗಿ ಕಡಿದು ಹೋಗುತ್ತಿತ್ತು. ನಮ್ಮ ಸಂಪ್ರದಾಯದಲ್ಲಿ ಹಿರಿಯರಿಗೆ ಅಂಥಾದ್ದೊಂದು ಅಧಿಕಾರವನ್ನು ಸಮಾಜ ನೀಡಿದೆ. ಅದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಇಂಥಾ ಬೈಗುಳಪದವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ, ಅದರ ಹಿಂದಿರುವ ಕಾಳಜಿಯನ್ನಷ್ಟೇ ಗಮನಿಸುತ್ತಾರೆ. ಒಂದು ಹಿರಿಯ ಜೀವ ಮನೆಯಲ್ಲಿದ್ದರೆ ನಿಮಗೆ ಬೇರೆ ನಿಘಂಟು ಬೇಕಾಗಿಲ್ಲ. ನಿಮ್ಮ ತಪ್ಪುಗಳನ್ನು ತಿದ್ದುವುದಕ್ಕೆ, ಒಪ್ಪುಗಳನ್ನು ಮೆಚ್ಚುವುದಕ್ಕೆ, ನಿಮ್ಮನ್ನೊಬ್ಬ ಸನ್ನಡತೆಯ ಮನುಷ್ಯನನ್ನಾಗಿ ರೂಪಿಸುವುದಕ್ಕೆ ಅಂಥವರಿರಬೇಕು. ಅವರ ಬೈಗುಳವನ್ನೇ ಆಶೀರ್ವಾದ ಎಂಬಂತೆ ಸ್ವೀಕರಿಸುವ ಆರೋಗ್ಯಕರ ಮನಸ್ಸು ನಮ್ಮಲ್ಲಿರಬೇಕು.
ಅಫ್‌ಕೋರ್ಸ್, ಮನುಷ್ಯನಿಗೆ ವಯಸ್ಸಾಗುತ್ತಾ ಹೋಗುತ್ತಿದ್ದಂತೆಯೇ ಮಾತು ಜಾಸ್ತಿಯಾಗುತ್ತದೆ. ಅದಕ್ಕೆ ಕಾರಣ ಅವನ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಾ ಹೋಗುವುದು. ತನ್ನ ದೈಹಿಕ ಅಶಕ್ತಿಯನ್ನು ನಿವಾರಿಸುವುದಕ್ಕೆ ಆತ ಮಾತಿನ ಮೊರೆ ಹೋಗುತ್ತಾನೆ. ಕೆಲವೊಮ್ಮೆ ಚಿಕ್ಕಪುಟ್ಟ ಸಂಗತಿಗಳೂ ಆತನಿಗೆ ಕಿರಿಕಿರಿ ಉಂಟು ಮಾಡುತ್ತವೆ. ಆಗ ಕೆಲವೊಂದು ಅಪಸವ್ಯಗಳು ನಡೆದುಹೋಗುತ್ತವೆ. ಬಾಯ್ತಪ್ಪಿನಿಂದ, ಮುಂಗೋಪದಿಂದ, ಅಸಹಾಯಕತೆಯಿಂದ, ಹತಾಶೆಯಿಂದ ಮಾತು ಹದ ಮೀರುತ್ತದೆ. ಅದನ್ನು ಕ್ಷಮಿಸುವಷ್ಟು ಅಥವಾ ನಿರ್ಲಕ್ಷ್ಯಿಸುವಷ್ಟು ಔದಾರ್ಯ ನಮ್ಮ ಸಮಾಜಕ್ಕಿರಬೇಕು. ಅವರ ವಯಸ್ಸಿಗಾದರೂ ಬೆಲೆ ಕೊಡ್ರಯ್ಯಾ ಅನ್ನುವ ಮಾತನ್ನು ನೀವು ಆಗಾಗ ಕೇಳಿರುತ್ತೀರಿ. ವಾಸ್ತವದಲ್ಲಿ ಅದು ವಯಸ್ಸಿಗಷ್ಟೇ ಕೊಡುವ ಬೆಲೆಯಾಗಿರುವುದಿಲ್ಲ, ವಯಸ್ಸಿನ ಹಿಂದಿರುವ ಜೀವನಾನುಭವಕ್ಕೆ ಕೊಡಬೇಕಾದ ಬೆಲೆಯೂ ಆಗಿರುತ್ತದೆ.

ನಾನು ಯಾವುದರ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇನೆ ಅನ್ನುವುದು ನಿಮಗೀಗ ಅರ್ಥವಾಗಿರಬಹುದು. ಮೊನ್ನೆ ಮೈಸೂರಲ್ಲಿ ಮಾಸ್ಟರ್ ಹಿರಣ್ಣಯ್ಯ ಬಾಯ್ತಪ್ಪಿ ಆಡಿದ ಒಂದು ಮಾತು ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತು. ಅದನ್ನೇ ನೆಪ ಮಾಡಿಕೊಂಡು ಒಬ್ಬ ಜನಪ್ರತಿನಿಧಿ ಮತ್ತು ಆತನ ಬೆಂಬಲಿಗರು ಇಡೀ ಸಮಾರಂಭವನ್ನೇ ಹಾಳುಗೆಡವಿದರು. ಸನ್ಮಾನ ಸ್ವೀಕಾರಕ್ಕೆ ಹೋಗಿದ್ದ ಹಿರಣ್ಣಯ್ಯನವರು ಅವಮಾನ ಹೊತ್ತುಕೊಂಡು ವಾಪಾಸ್ ಬಂದರು. ಹಾಗೆ ನೋಡಿದರೆ ಇಂಥ ಸನ್ಮಾನಗಳು ಮತ್ತು ಅವಮಾನಗಳು ಅವರಿಗೆ ಹೊಸದೇನಲ್ಲ. ಲಂಚಾವತಾರ, ಭ್ರಷ್ಟಾಚಾರದಂಥ ನಾಟಕಗಳನ್ನು ಆಡುತ್ತಿದ್ದ ಕಾಲದಲ್ಲಿ ಹಿರಣ್ಣಯ್ಯನವರನ್ನು ಬಾಯಿಗೆ ಬಂದಹಾಗೆ ಬೈಯುತ್ತಿದ್ದವರಿದ್ದರು. ಇವರಿಂದ ಬೈಸಿಕೊಳ್ಳುತ್ತಿದ್ದವರ ಸಂಖ್ಯೆ ಅದಕ್ಕಿಂತ ಜಾಸ್ತಿಯಿತ್ತು. ಆದರೆ ತನ್ನ ಎಂಭತ್ತೊಂದನೆಯ ವಯಸ್ಸಲ್ಲಿ ಇಂಥಾದ್ದೊಂದು ಅವಮಾನವನ್ನು ಸಹಿಸಿಕೊಳ್ಳುವುದಿದೆಯಲ್ಲಾ, He does not deserve this.

ಅಷ್ಟಕ್ಕೂ ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ ನಡೆದದ್ದೇನು? ಹಿರಣ್ಣಯ್ಯ ತಮ್ಮ ಎಂದಿನ ಶೈಲಿಯಲ್ಲಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾತಿನ ಮಧ್ಯೆ ಸೋನಿಯಾ, ಸಿದ್ದರಾಮಯ್ಯನವರೂ ಬಂದು ಹೋದರು. ಬೆಲೆಯೇರಿಕೆ ಬಗ್ಗೆ ಪ್ರಸ್ತಾಪ ಮಾಡುತ್ತಾ “ಚುನಾವಣೆಗೆ ಮುಂಚೆ ಜನರ ಕೈಕಾಲು ಹಿಡಿಯುತ್ತಿದ್ದ ಸಿದ್ದರಾಮಯ್ಯ ಈಗ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ" ಎಂದರು. ತಲೆ ಒಡೆಯುತ್ತಿದ್ದಾರೆ ಅನ್ನುವ ಬದಲು ಬಾಯ್ತಪ್ಪಿ ತಲೆ ಹಿಡಿಯುತ್ತಿದ್ದಾರೆ ಎಂದು ಅವರು ಹೇಳಿದರು ಎಂಬ ವಾದವೂ ಇದೆ. ಅದೇನೇ ಇರಲಿ, ತಲೆಹಿಡುಕ ಅನ್ನುವ ಮಾತು ಯಾರಿಗೂ ಪಥ್ಯವಾಗುವುದಿಲ್ಲ ಹಾಗೂ ಒಬ್ಬ ಮುಖ್ಯಮಂತ್ರಿಯ ಬಗ್ಗೆ ಇಂಥಾ ಮಾತು ಬಳಸಿದ್ದು ತಪ್ಪು. ಹಾಗಂತ ಹಿರಣ್ಣಯ್ಯನವರೇ ಒಪ್ಪಿಕೊಂಡಿದ್ದಾರೆ ಕೂಡಾ. ಆದರೆ ಆಮೇಲೆ ಅಲ್ಲಿ ನಡೆದದ್ದು ಮಾತ್ರ ಅಕ್ಷಮ್ಯ ಅಪರಾಧ. ಎಂಎಲ್‌ಎ ಸೋಮಶೇಖರ್ ತನ್ನ ಹಿಂಬಾಲಕರೊಂದಿಗೆ ಸಭಾಂಗಣಕ್ಕೆ ನುಗ್ಗಿ ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದರು. ಹಿರಣ್ಣಯ್ಯ ಕ್ಷಮೆ ಕೇಳಿದರೂ ಸಿದ್ದರಾಮಯ್ಯನವರ ಬೆಂಬಲಿಗರ ಮನಸ್ಸು ಕರಗಲಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಬಲವಂತ ಮಾಡಿದರು. ಅಲ್ಲಿಂದ ನೇರವಾಗಿ ಸಿದ್ದರಾಮಯ್ಯನವರ ಮನೆಗೇ ತೆರಳಿದ ಹಿರಣ್ಣಯ್ಯ ಅಲ್ಲಿ ಮತ್ತೊಮ್ಮೆ ಕ್ಷಮೆ ಕೇಳಿದರು. ಮುಖ್ಯಮಂತ್ರಿಗಳು ಉದಾರ ಮನಸ್ಸಿನಿಂದ ಅವರನ್ನು ಕ್ಷಮಿಸಿದರು!


ನೆಟ್ಟಗೆ ನಾಲ್ಕು ಹೆಜ್ಜೆ ಹಾಕುವುದಕ್ಕೇ ಕಷ್ಟಪಡುವ ಹಿರಣ್ಣಯ್ಯನವರು ಮುಖ್ಯಮಂತ್ರಿಗಳ ಮನೆಯ ಮೆಟ್ಟಿಲನ್ನು ಕಷ್ಟಪಟ್ಟು ಏರುವ ದೃಶ್ಯ, ಅಲ್ಲಿಂದ ಹೊರಬಂದು ಬೆಂಬಲಿಗರ ಧಿಕ್ಕಾರಗಳ ಘೋಷಣೆ ನಡುವೆ ಕಾರನ್ನು ಏರುವ ದೃಶ್ಯಗಳು ಟೀವಿ ಚಾನೆಲ್ಲುಗಳಲ್ಲಿ ಪದೇಪದೇ ಪ್ರಸಾರವಾದವು. ಅದನ್ನು ನೋಡಿದಾಗ ಮನಸ್ಸಿಗೆ ಯಾಕೋ ಚುರ್ ಅನಿಸಿತು. ಒಂದು ಕಾಲದಲ್ಲಿ ಭ್ರಷ್ಟ ರಾಜಕಾರಣಿಗಳನ್ನು ಯದ್ವಾತದ್ವಾ ಟೀಕಿಸುತ್ತಾ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಹಿರಣ್ಣಯ್ಯ ಇವರೇನಾ ಎಂದು ಅನಿಸಿತು. ಅದೊಂದು ದೈನೇಸಿ ಸ್ಥಿತಿ. ದೈಹಿಕವಾಗಿ ಮೊದಲೇ ಕುಗ್ಗಿ ಹೋಗಿದ್ದ ಮಾಸ್ಟರ್ ಈಗ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಎಂಭತ್ತೊಂದು ವಯಸ್ಸಿನ ಹಿರಿಯ ವ್ಯಕ್ತಿ ಬಾಯ್ತಪ್ಪಿ ಆಡಿದ ಮಾತನ್ನು ಅರಗಿಸಿಕೊಳ್ಳಲಾಗದಷ್ಟು ಸಮಾಜ ಬದಲಾಗಿದೆಯೆಂದರೆ ನಾನು ಮಾತನಾಡುವ ಅವಶ್ಯಕತೆ ಇಲ್ಲ -ಹಾಗಂತ ಹಿರಣ್ಣಯ್ಯವರೇ ಹೇಳಿದ್ದನ್ನು ದಿನಪತ್ರಿಕೆಯೊಂದರಲ್ಲಿ ಓದಿದೆ. ನಿಜ, ಹಿರಣ್ಣಯ್ಯ ತಪ್ಪಾಗಿ ಮಾತಾಡಿದ್ದಾರೆ, ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ವಯಸ್ಸಾಗಿರುವುದರಿಂದ ಬಾಯ್ತಪ್ಪಿ ಏನೋ ಅಂದುಬಿಟ್ಟೆ ಅನ್ನುವ ಪಶ್ಚಾತ್ತಾಪವೂ ಅವರ ಕ್ಷಮೆ ಯಾಚನೆಯಲ್ಲಿತ್ತು. ಆದರೆ ಅವರ ಮಾತಿಗೆ ರಾಜಕೀಯ ಬಣ್ಣ ಬಳಿಯುವುದು, ಜಾತಿಯ ಹೆಸರೆತ್ತಿ ಅವರನ್ನು ವಾಚಾಮಗೋಚರವಾಗಿ ನಿಂದಿಸುವುದು, ಕಾಂಗ್ರೆಸ್ ಪಕ್ಷಕ್ಕಾಗಲಿ ಸಿದ್ದರಾಮಯ್ಯನವರ ಬೆಂಬಲಿಗರಿಗಾಗಲಿ ಶೋಭಿಸುವುದಿಲ್ಲ.

ರಂಗಭೂಮಿಯಲ್ಲಿ ಹಿರಣ್ಣಯ್ಯನವರದು ೬೮ ವರ್ಷಗಳ ಅನುಭವ. ಪಕ್ಷ, ಜಾತಿಯ ಮುಖ ನೋಡದೇ ಕರ್ನಾಟಕದ ಎಲ್ಲಾ ಮುಖ್ಯಮಂತ್ರಿಗಳನ್ನು ವೇದಿಕೆಯಲ್ಲಿ ನಿಂತು ಟೀಕಿಸಿದವರು ಅವರು. ಅಂದಿನ ರಾಜಕಾರಣಿಗಳು ಮತ್ತು ಜನರು ಅದನ್ನು ಅದೇ ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಿದ್ದರು. ಆದರೆ ಈಗ ಜಾತಿಯ ಮಾತು ಕೇಳಿ ಬರುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸಬೇಕಾದ ಒಬ್ಬ ಜನಪ್ರತಿನಿಧಿಯೇ ಮೇಜು ಕುರ್ಚಿಗಳನ್ನು ಮುರಿದು ಹಾಕಿದ್ದು, ತನ್ನ ಬೆಂಬಲಿಗರನ್ನು ದಾಂಧಲೆಗೆ ಹುರಿದುಂಬಿಸಿದ್ದು ಯಾರಿಗೂ ತಪ್ಪಾಗಿ ಕಾಣಿಸುವುದಿಲ್ಲ. ಹಿರಿಯರೊಬ್ಬರು ಬಾಯ್ತಪ್ಪಿ ಆಡಿದ ಮಾತೇ ಹೆಚ್ಚು ಸುದ್ದಿಯಾಗುತ್ತದೆ. ಯಾಕೆಂದರೆ ಅಧಿಕಾರದಲ್ಲಿರುವವರಿಗೆ ಆ ಅನುಕೂಲ ಇರುತ್ತದೆ. ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆವು ಅನ್ನುವ ಅಹಂಕಾರವೂ ಇರುತ್ತದೆ.

ಸಿದ್ದರಾಮಯ್ಯ ಕೂಡಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿ ವಿರುದ್ದ ಹೀನಾಯ ಪದಗಳನ್ನು ಬಳಸಿದ್ದರು. ಬಾಯ್ತಪ್ಪಿ ಅಲ್ಲ, ಉದ್ದೇಶಪೂರ್ವಕವಾಗಿಯೇ ನರಹರ, ನರಹಂತಕ, ಹಿಟ್ಲರ್, ಕಟುಕ ಎಂದೆಲ್ಲಾ ನಿಂದಿಸಿದ್ದರು. ಆ ಬಗ್ಗೆ ಅವರೇನೂ ಕ್ಷಮೆ ಕೇಳಲಿಲ್ಲ. ಅವರದೇ ಪಕ್ಷದ ಅಧ್ಯಕ್ಷ ಪರಮೇಶ್ವರ್ “ದೇವೆಗೌಡರು ಸಾಯುವುದಕ್ಕೆ ನಾನು ಕಾಯುತ್ತಿದ್ದೇನೆ" ಎಂಬ ಹೇಳಿಕೆ ನೀಡಿದ್ದರು. ಒಂದು ಸಾಲಿನ ವಿಷಾದದೊಂದಿಗೆ ಆ ವಿವಾದ ತಣ್ಣಗಾಯಿತು. ಯಾಕೆಂದರೆ ಅವರು ಹಿರಣ್ಣಯ್ಯ ಅಲ್ಲದೇ ಇದ್ದುದರಿಂದ ಮತ್ತು ಅಧಿಕಾರವೂ ಕೈಯಲ್ಲಿದ್ದುದರಿಂದ ಯಾರೇನೂ ಮಾಡುವುದಕ್ಕಾಗಲಿಲ್ಲ.

ಸಿದ್ದರಾಮಯ್ಯ ಭ್ರಷ್ಟರಲ್ಲ ನಿಜ, ಆದರೆ ಒಬ್ಬ ನಾಯಕನಾಗಿ ತನ್ನ ಬೆಂಬಲಿಗರನ್ನು ಹತೋಟಿಯಲ್ಲಿಟ್ಟುಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದೆ. ಆ ಕೆಲಸವನ್ನು ಅವರು ಸರಿಯಾಗಿ ನಿಭಾಯಿಸಲಿಲ್ಲ. ಹಿರಣ್ಣಯ್ಯನರ ಮೇಲೆ ಏರಿಹೋಗುತ್ತಿದ್ದ ತನ್ನ ಬೆಂಬಲಿಗರನ್ನು ಸಮಾಧಾನ ಮಾಡುವ ಬದಲಾಗಿ ಬೈದು ಕೂರಿಸಬಹುದಾಗಿತ್ತು. ಅವರು ಹಿರಣ್ಣಯ್ಯನವರನ್ನು ಕಾರಲ್ಲಿ ಕೂರಿಸಿ ಬೀಳ್ಕೊಟ್ಟ ದೃಶ್ಯ ಹೇಗಿತ್ತೆಂದರೆ, ಹಾದಿಯಲ್ಲಿ ಹೋಗುವವನಿಗೆ ಕಪಾಳಕ್ಕೆ ಹೊಡೆದು ತನ್ನದೇ ಖರ್ಚಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಂತಿತ್ತು.


ಇನ್ನು ಮುಂದೆ ತಾನು ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಿರಣ್ಣಯ್ಯ ಹೇಳಿದ್ದಾರೆ. ಮಾತನ್ನೇ ನಂಬಿಕೊಂಡು, ಅದನ್ನೇ ಅಸ್ತ್ರವಾಗಿಸಿಕೊಂಡು ಬದುಕಿದ ಹಿರಿಯ ಕಲಾವಿದನಿಗೆ ಇದಕ್ಕಿಂತ ಘೋರ ಶಿಕ್ಷೆ ಇನ್ನೊಂದು ಇರಲಾರದು. ೬೮ ವರ್ಷಗಳ ಕಾಲ ನಿರಂತರವಾಗಿ ಮಾತಾಡುತ್ತಲೇ ಇದ್ದ ಹಿರಿಯ ಚೇತನದ ಬಾಯಿ ಮುಚ್ಚಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಬಸ್ಸು ದರ, ಟೋಲ್ ದರ, ವಿದ್ಯುತ್ ದರ ಇತ್ಯಾದಿಗಳ ಮೂಲಕ ಜನರ ಬೆನ್ನಿಗೆ ಬರೆ ಹಾಕಿರುವ ಸಿದ್ದರಾಮಯ್ಯನವರ ಸಾಧನೆಯ ಕಿರೀಟಕ್ಕೆ ಇದು ಮತ್ತೊಂದು ತುರಾಯಿ.

ಇದಂತೂ ಬಾಯ್ತಪ್ಪಿ ಹೇಳಿದ ಮಾತಲ್ಲ, ಸತ್ಯ ಕಣ್ಣ ಮುಂದೆಯೇ ಇದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books