Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಪ್ರಧಾನಿ ಯಾರೆಂಬುದನ್ನು ತಿಳಿಯಲು ಹೆಚ್ಚು ಕಾಯಬೇಕಿಲ್ಲ.

ದೇಶದ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತರ ಸಿಗುತ್ತದೆ. ಇವತ್ತಿನ ಮಟ್ಟಿಗೆ ಸರ್ವೇಗಳು, ಸಮೀಕ್ಷೆಗಳು ಹೇಳುತ್ತಿರುವ ಪ್ರಕಾರ ಬಿಜೆಪಿ ಮುಖಂಡ ನರೇಂದ್ರಮೋದಿ ಅವರೇ ಪ್ರಧಾನಿ ಆಗಬೇಕು. ಈ ಭರವಸೆಯಿಂದಲೇ ಅವರು ದೇಶಾದ್ಯಂತ ಮೂರು ಲಕ್ಷ ಕಿಲೋ ಮೀಟರು ಸುತ್ತಿದ್ದಾರೆ. ವೈಯಕ್ತಿಕವಾಗಿ ಬಿಜೆಪಿ ಇನ್ನೂರಾ ಇಪ್ಪತ್ತರ ಗಡಿ ದಾಟಿದರೆ ಸಾಕು. ಉಳಿದ ಮಿತ್ರ ಪಕ್ಷಗಳು ಕೂಡಿ ಎನ್‌ಡಿಎ ಮೈತ್ರಿಕೂಟವನ್ನು ದಡ ಸೇರಿಸುತ್ತವೆ. ಮೋದಿಯನ್ನು ಪ್ರಧಾನಿ ಹುದ್ದೆಗೇರಿಸುತ್ತವೆ. ಆದರೆ ಬಿಜೆಪಿ ಇನ್ನೂರಾ ಇಪ್ಪತ್ತು ಸೀಟುಗಳನ್ನು ಗಳಿಸುತ್ತಾರಾ?ಎಂಬುದೇ ಪ್ರಶ್ನೆ. ನೋ ಡೌಟ್, ಮಾತುಗಾರಿಕೆಯ ವಿಷಯದಲ್ಲಿ ನರೇಂದ್ರಮೋದಿ ಉಳಿದ ಕ್ಯಾಂಡಿಡೇಟುಗಳಿಗಿಂತ ಹೆಚ್ಚು ಮನಸ್ಸು ಮುಟ್ಟಿದ್ದಾರೆ. ಅವರ ಬೆನ್ನ ಹಿಂದಿರುವ ಟೀಮು ಪ್ರತಿಯೊಂದಕ್ಕೂ ಉತ್ತರ ಸಜ್ಜು ಮಾಡುತ್ತಾ, ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಸಮಸ್ಯೆಗಳಿವೆ ಎಂದು ಪಟ್ಟಿ ಮಾಡುತ್ತಾ ನರೇಂದ್ರಮೋದಿಯನ್ನು ಗಣನೀಯ ಪ್ರಮಾಣದಲ್ಲಿ ಅಪ್‌ಡೇಟ್ ಮಾಡಿವೆ. ಹೀಗಾಗಿ ಅವರು ಪ್ರಧಾನಿಯಾಗಬಹುದು ಎಂದು ತುಂಬ ಜನ ನಿರೀಕ್ಷಿಸಿದ್ದಾರೆ.

ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‌ಗಾಂಧಿಯ ಜೊತೆ ಜೊತೆಗೇ ಪ್ರಿಯಾಂಕಾ ಗಾಂಧಿಯೂ ಕಣಕ್ಕಿಳಿದಿದ್ದರೆ ಕಾಂಗ್ರೆಸ್ ನೂರೈವತ್ತರ ಗಡಿ ದಾಟಬಹುದಿತ್ತು ಎನ್ನುವವರಿದ್ದಾರೆ. ತನ್ನ ಗಂಡ ರಾಬರ್ಟ್ ವಧೇರಾ ವಿರುದ್ಧ ಆರೋಪ ಬಂದ ನಂತರ ಆಕೆ ಬೀದಿಗಿಳಿದಳು. ಅದಕ್ಕೂ ಮೊದಲೇ ಆಕೆ ರಣರಂಗಕ್ಕಿಳಿದಿದ್ದರೆ ಆಟ ಬೇರೆ ಇರುತ್ತಿತ್ತು. ಆದರೆ ಆಕೆ ಮೊದಲೇ ರಣರಂಗಕ್ಕೆ ನುಗ್ಗಲಿಲ್ಲ. ಎಲ್ಲವನ್ನೂ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ನೋಡಿಕೊಳ್ಳುವ ಸ್ಥಿತಿ ಬಂತು. ಸೋನಿಯಾಗಾಂಧಿಯ ವಿಷಯದಲ್ಲಿ, ಆಕೆಯ ನಡವಳಿಕೆಯಲ್ಲಿ ಯಾವುದೇ ಲೋಪ ಹುಡುಕಲು ಸಾಧ್ಯವಾಗದಿದ್ದರೂ ಆಕೆ ಜನ ಮಾನಸವನ್ನು ಮುಟ್ಟಲು ಸಾಧ್ಯವೇ ಆಗುತ್ತಿಲ್ಲ. ಯಾಕೆಂದರೆ ಆಕೆಯ ಮಾತುಗಳು ಸಾಮಾನ್ಯ ಮತದಾರರಿಗೆ ಅರ್ಥವೇ ಆಗಿಲ್ಲ. ಇನ್ನು ರಾಹುಲ್‌ಗಾಂಧಿ ಓಕೆ ಅಂದರೂ ಆತ ಸದಾ ಕಾಲ ಅನ್ಯಮನಸ್ಕ. ಯಾರೋ ಹೊರಗಿನಿಂದ ಬಂದು ಮೈಕಿನ ಬಳಿ ದೂಡಿದಂತೆ, ಎಲ್ಲಿ ಮಾತನಾಡಿದರೂ ಸ್ಥಳೀಯ ಸಮಸ್ಯೆಗಳು ಮುಖ್ಯವೇ ಅಲ್ಲ ಎನ್ನುವಂತೆ ಆತ ನಡೆದುಕೊಂಡ ರೀತಿಯಿಂದ ಆತ ಕೂಡ ಹೇಳಿಕೊಳ್ಳುವ ಪ್ರಮಾಣದಲ್ಲಿ ಜನ ಮಾನಸ ಮುಟ್ಟಲಿಲ್ಲ.


ಉಳಿದಂತೆ ಚಿದಂಬರಂ ಥರದವರು ಯುದ್ಧ ಆರಂಭವಾಗುವುದಕ್ಕಿಂತ ಮೊದಲೇ ಓಡಿ ಹೋದರು. ಅವರೀಗ ಕರ್ನಾಟಕದಿಂದ ರಾಜ್ಯಸಭೆಗೆ ಹೋಗುವ ತವಕದಲ್ಲಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರ ನೆರವೂ ಕೇಳಿದ್ದಾರೆ. ದೇವೆಗೌಡರಿಗೆ ನೆರವು ಕೇಳಿದರೆ ಇಲ್ಲ ಎನ್ನುವುದು ಅಪರೂಪ. ಕಷ್ಟ ಕಾಲದಲ್ಲಿ ಜೆಡಿಎಸ್‌ಗೆ ನೆರವು ಕೊಟ್ಟರು ಅಂತ ತಮಿಳುನಾಡಿನ ಎಂ.ಎ.ಎಂ ರಾಮಸ್ವಾಮಿಯನ್ನು ಅವರು ರಾಜ್ಯಸಭೆಗೆ ಕಳಿಸಿಕೊಟ್ಟಿದ್ದು ಇತಿಹಾಸ. ಈ ಬಾರಿ ಏನು ಮಾಡುತ್ತಾರೋ ಕಾದು ನೋಡಬೇಕು. ಇದು ಚಿದಂಬರಂ ವಿಷಯವಾಯಿತು. ಇನ್ನು ಮನಮೋಹನ್‌ಸಿಂಗ್ ವಿಷಯಕ್ಕೆ ಬನ್ನಿ. ಅವರಿಗೆ ಯುದ್ಧಕ್ಕಿಳಿಯಲು ಅವಕಾಶವನ್ನೇ ನೀಡಲಿಲ್ಲ. ಅವರ ಕೈಗೆ ಕತ್ತಿ ಕೊಟ್ಟು ಝಳಪಿಸಿ ನೋಡಿ ಅಂತ ಯಾವತ್ತಾದರೂ ತಯಾರಿ ಕೊಟ್ಟಿದ್ದರೆ ಬೇರೆ ಮಾತು. ಅದನ್ನು ಬಿಟ್ಟು ಯುದ್ಧದ ಕತೆ ನಮಗೆ ಬಿಡಿ. ಆಡಳಿತ ಮಾಡುವುದನ್ನು ನೋಡಿಕೊಳ್ಳಿ ಎಂದ ಫಲವಾಗಿ ಅವರು ದೇಶ ಸುತ್ತಲಿಲ್ಲ. ಹೀಗಾಗಿ ಸಹಜವಾಗಿಯೇ ನರೇಂದ್ರಮೋದಿ ದೇಶದ ಪ್ರಧಾನಿಯಾಗಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಕೈಗಾರಿಕೋದ್ಯಮಿಗಳಂತೂ ಎಲ್ಲ ರೀತಿಯ ಸಹಕಾರ ನೀಡಿ ಕಾಯುತ್ತಿದ್ದಾರೆ. ಆದರೆ ಬಿಜೆಪಿಯಲ್ಲೇ ಒಂದು ಗುಂಪು ನರೇಂದ್ರಮೋದಿಯ ಕಾಲೆಳೆದು ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಪ್ರಧಾನಿ ಮಾಡಲು ಹವಣಿಸುತ್ತಿದೆ.

ಬಿಜೆಪಿ ಇನ್ನೂರಕ್ಕಿಂತ ಕಡಿಮೆ ಸೀಟುಗಳನ್ನು ಗೆದ್ದರೆ ಮಿತ್ರಪಕ್ಷಗಳ ಹಲವರು ವರಾತ ಎತ್ತಬಹುದು, ಬಿಜೆಪಿಯಲ್ಲಿರುವ ಹಲವರು ಅಡ್ವಾಣಿಯೇ ಪ್ರಧಾನಿ ಆಗಲಿ ಎನ್ನಬಹುದು. ಒಂದು ವೇಳೆ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ, ಎನ್‌ಡಿಎ ಮಿತ್ರರನ್ನೂ ಹೊರತುಪಡಿಸಿ ಬೇರೆ ಪಕ್ಷಗಳ ಬೆಂಬಲ ಕೋರುವ ಅನಿವಾರ್ಯತೆ ಬಂದರೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೇ ಕಣಕ್ಕಿಳಿಯಬಹುದು. ಯಾಕೆಂದರೆ ಇವತ್ತಿನ ಸ್ಥಿತಿಯಲ್ಲಿ ಮೋದಿಗೆ ಹೋಲಿಸಿದರೆ ಅಡ್ವಾಣಿ ಮೃದು ಹಿಂದೂವಾದಿ. ಹೀಗಾಗಿ ಮೋದಿ ಬದಲು ಅವರು ಪ್ರಧಾನಿಯಾದರೆ ಬೆಟರ್ರು ಎಂಬ ಭಾವನೆ ಹಲವರಲ್ಲಿದೆ. ಇದಕ್ಕಾಗಿ ಅಡ್ವಾಣಿ ಸೇರಿದಂತೆ ಬಿಜೆಪಿಯ ಹಲವರು ಮತ್ತು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿಲ್ಲದ ಕೆಲವರು ಸಮಯಕ್ಕಾಗಿ ಕಾಯುತ್ತಿದ್ದಾರೆ. ಪ್ರಧಾನಿ ಆಗಬೇಕಾದವರ ಪಟ್ಟಿಯಲ್ಲಿ ಅವರು ರಾಹುಲ್‌ಗಾಂಧಿ ಹೆಸರಿಟ್ಟುಕೊಂಡಿದ್ದರೂ ಆಳದಲ್ಲಿ ಅವರಿಗೆ ಅಡ್ವಾಣಿ ಅಥವಾ ಶರದ್ ಪವಾರ್ ಪ್ರಧಾನಿಯಾಗುವುದು ಬೇಕಾಗಿದೆ. ಆದರೆ ಅದಕ್ಕೆ ಕಾಲ ಪಕ್ವವಾಗಬೇಕು. ಮುಂದೇನು ಅನ್ನುವ ವಿಷಯ ನಿಕ್ಕಿಯಾಗಬೇಕು. ಹೀಗಾಗಿ ಅವರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮೋದಿ ಪ್ರಧಾನಿಯಾಗಬೇಕು ಎಂಬ ವಿಷಯದಲ್ಲಿ ಎಷ್ಟು ಜನರಿಗೆ ಕಾಳಜಿ ಇದೆಯೋ, ಅದಕ್ಕಿಂತ ಜಾಸ್ತಿ ಜನರಿಗೆ ಮೋದಿ ಪ್ರಧಾನಿ ಆಗಬಾರದು ಎಂಬ ಕಾಳಜಿಯೂ ಇದೆ. ಆದರೆ ಆ ಮತಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತವೆಯೇ ಎಂಬುದನ್ನು ಪ್ರಣಬ್ ಮುಖರ್ಜಿ ಕಾದು ನೋಡುತ್ತಿದ್ದಾರೆ.

ಅಂದಹಾಗೆ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ತುಂಬ ದಿನ ಕಾಯಬೇಕಿಲ್ಲ. ಆದರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ವಿಷಯದಲ್ಲಿ ಇನ್ನೂ ಗೊಂದಲ ಉಳಿದುಕೊಂಡಿರುವುದು ನಿಜ. ರಾಷ್ಟ್ರೀಯ ಪಕ್ಷಗಳ ಪೈಕಿ ಪ್ರಧಾನಿಯಾಗುವ ನೇರ ಆಕಾಂಕ್ಷೆ ಇರಿಸಿಕೊಂಡವರು ಮೋದಿ ಅವರೊಬ್ಬರೇ. ಆದರೂ ಎದುರಾಗುವ ರಾಜಕೀಯ ಸನ್ನಿವೇಶ ತಮಗೆ ಅಂತಹ ಅವಕಾಶ ಕಲ್ಪಿಸಿಕೊಡಬಹುದು ಎಂಬ ನಿರೀಕ್ಷೆ ಹಲ ರಾಜಕಾರಣಿಗಳಿಗಿದೆ. ಅದು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಇರಬಹುದು, ಬಿಹಾರದ ನಿತೀಶ್ ಕುಮಾರ್ ಇರಬಹುದು, ತಮಿಳ್ನಾಡಿನ ಜಯಲಲಿತಾ ಇರಬಹುದು, ಮಹಾರಾಷ್ಟ್ರದ ಶರದ್ ಪವಾರ್ ಇರಬಹುದು, ಫೈನಲಿ, ಕರ್ನಾಟಕದ ದೇವೆಗೌಡರಿಗೂ ಒಂದು ಸಲ ಪ್ರಧಾನಿಯಾಗಬಹುದು ಎಂಬ ನಿರೀಕ್ಷೆ ಇದೆ. ಮುಲಾಯಂ ಸಿಂಗ್ ಯಾದವ್ ಪ್ರಧಾನಿ ಆಗಬೇಕು ಎಂಬ ಕಾರಣಕ್ಕಾಗಿಯೇ ಮಗ ಅಖಿಲೇಶ್ ಯಾದವ್ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟ ಕಟ್ಟಿದರು.

ಒಂದು ವೇಳೆ ಅವರಿಗೆ ಪ್ರಧಾನಿ ಆಗುವ ಆಕಾಂಕ್ಷೆ ಇಲ್ಲವಾಗಿದ್ದರೆ ಅವರೇ ಮುಖ್ಯಮಂತ್ರಿಯಾಗಿ ಕೂರುತ್ತಿದ್ದರು. ಪ್ರಧಾನಿ ಆಗಬೇಕು ಎಂಬ ಕಾರಣದಿಂದಲೇ ಅವರು ಸಮಾಜವಾದಿ ಪಕ್ಷದ ನೆಲೆಯನ್ನು ಉತ್ತರ ಪ್ರದೇಶದ ವ್ಯಾಪ್ತಿಯ ಹೊರಗೆ ಬೆಳೆಸಲು ಯತ್ನಿಸಿದರು. ಬಿಹಾರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಮ್ಮ ಪಕ್ಷದ ನೆಲೆ ವಿಸ್ತರಿಸಲು ನೋಡಿದರು. ಆದರೆ ಅವರ ಕೈಲಿ ಅದು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದ ರಾಜಕಾರಣವೇ ಬೇರೆ. ಅದಕ್ಕೆ ಬಿಹಾರ ಸ್ವಲ್ಪ ಹೊಂದುತ್ತದಾದರೂ ಅಲ್ಲಿ ಆರ್‌ಜೆಡಿಯ ಲಾಲೂಪ್ರಸಾದ್ ಯಾದವ್ ಇವರ ರೀತಿಯಲ್ಲೇ ರಾಜಕಾರಣ ಮಾಡುವುದರಿಂದ ಸಮಾಜವಾದಿ ಪಕ್ಷಕ್ಕೆ ನೆಲೆ ಕಂಡುಕೊಳ್ಳಲು ಕಷ್ಟವಾಯಿತು. ಕರ್ನಾಟಕದ ವಿಷಯ ಬಿಡಿ. ಇಡೀ ರಾಜ್ಯಕ್ಕೆ ಒಪ್ಪಿತನಾಗುವಂತಹ ನಾಯಕನನ್ನು ಅವರು ಪಕ್ಷಕ್ಕೆ ಸೆಳೆದುಕೊಂಡಿದ್ದರೆ ಆಟ ಮಾಡಬಹುದಿತ್ತೇನೋ? ಆದರೆ ಹೋಗಿ ಹೋಗಿ ಚನ್ನಪಟ್ಟಣದ ಯೋಗೇಶ್‌ನಂತಹವನನ್ನು ಹಿಡಿದುಕೊಂಡು ಬಂದರು. ಒಂದು ಕ್ಷೇತ್ರದ ಜನರಿಗೆ ಸೀಮಿತನಾಗುವ ವ್ಯಕ್ತಿಯೇ ಬೇರೆ. ಮುಂದಿನ ಚುನಾವಣೆಯಲ್ಲಿ ಅವನು ಸೋತರೆ ಕ್ಯಾರೇ ಎನ್ನುವುದು ಕಷ್ಟ. ಹೀಗಿರುವಾಗ ಅಂತಹವರನ್ನು ರಾಜ್ಯದ ಜನ ನಾಯಕ ಎಂದು ಒಪ್ಪಿಕೊಳ್ಳುವುದು ಹೇಗೆ?

ಇದ್ದುದರಲ್ಲಿ ಈ ಹಿಂದೆ ಬಂಗಾರಪ್ಪನವರನ್ನು ಪಕ್ಷಕ್ಕೆ ಸೆಳೆದುಕೊಂಡಾಗ ಅದಕ್ಕೊಂದು ಖದರ್ರಾದರೂ ಇತ್ತು. ಯಾಕೆಂದರೆ ಬಂಗಾರಪ್ಪನವರಿಗೆ ಹಿಂದುಳಿದ ವರ್ಗಗಳ ಛಾಂಪಿಯನ್ ಎಂಬ ಹೆಸರಿತ್ತು. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಾರಿಗೆ ತಂದ ಆಶ್ರಯ, ಆರಾಧನಾದಂತಹ ಯೋಜನೆಗಳು ಇವತ್ತಿಗೂ ಇವೆ. ಅವರಿಗೆ ಇನ್ನೂ ಒಂದಷ್ಟು ವರ್ಷ ಕಡಿಮೆ ಇದ್ದಿದ್ದರೆ, ಅವರು ಬದುಕಿದ್ದಿದ್ದರೆ, ಅವರ ಜೊತೆಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳದೇ ಇದ್ದಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಅವರು ಬದುಕಿದ್ದಿದ್ದರೆ ಸಮಾಜವಾದಿ ಪಕ್ಷಕ್ಕೆ ಇಲ್ಲಿ ನೆಲೆಯಾದರೂ ಸಿಗುತ್ತಿತ್ತು. ಆದರೆ ವಿಧಾನಸಭೆಯಲ್ಲಿ ನಿಂತು ಅಂಗಿ- ಅಂಗಿ ಹರಿದುಕೊಂಡವರನ್ನು ಈ ಯೋಗೇಶ್ ಪಕ್ಷಕ್ಕೆ ಕರೆತಂದ, ಸಮಾವೇಶ ಮಾಡಿದ. ಆದರೆ ಎಲ್ಲವೂ ಗಾಳಿಯಲ್ಲಿ ತೇಲಿದಂತಾಗಿ ಕೊನೆಗೆ ಸಮಾಜವಾದಿ ಪಕ್ಷದ ನೆಲೆಯೇ ಕುಸಿದು ಬಿತ್ತು. ಹೀಗಾಗಿ ಮುಲಾಯಂಗಿರುವ ಎರಡು ದೊಡ್ಡ ಶಕ್ತಿಗಳು ಎಂದರೆ ಒಂದು, ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಗೆದ್ದು ಆಟವಾಡುವುದು. ಯಾರೇನೇ ಹೇಳಿದರೂ ತೃತೀಯ ರಂಗದ ಕನಸನ್ನು ಉಳಿಸಿದ ಕಾರಣಕ್ಕಾಗಿ ಮುಲಾಯಂಸಿಂಗ್ ಯಾದವ್ ಪ್ರಧಾನಿ ಕ್ಯಾಂಡಿಡೇಟ್ ಆಗಿ ಇವತ್ತಿನ ತನಕ ಉಳಿದುಕೊಂಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ತೃತೀಯ ರಂಗ ಸರ್ಕಾರ ರಚಿಸಿದರೆ ದೊಡ್ಡ ಪ್ರಮಾಣದ ದುಡ್ಡು ಹರಿಸುವ ಶಕ್ತಿ ಇರುವುದು ಅವರಿಗೆ. ಹೀಗಾಗಿ ಅವರು ಒಂದು ಕೈ ನೋಡಬಹುದು.

ಇದೇ ರೀತಿ ಮಹಾರಾಷ್ಟ್ರದ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಅವರಿಗೂ ಒಂದು ಛಾನ್ಸು ಸಿಗಬಹುದು. ಯಾಕೆಂದರೆ ಹೇಳಿ ಕೇಳಿ ಅವರ ಯುಗವೂ ಮುಗಿಯುತ್ತಾ ಬಂತು. ಇಡೀ ಪಕ್ಷವನ್ನು ಮಗಳ ಕೈಗೆ ನೀಡುವ ಸ್ಥಿತಿಗೆ ಅವರು ತಲುಪಿದ್ದಾರೆಂದರೆ ಅವರಿನ್ನೂ ಬಹಳ ದಿನ ರಾಜಕೀಯ ಮಾಡುವ ಸ್ಥಿತಿ ಇರುವುದಿಲ್ಲ. ಹೀಗಾಗಿ ಕಟ್ಟ ಕಡೆಯ ಬಾರಿ ಅವರು ತೃತೀಯ ರಂಗ ಮತ್ತು ಕಾಂಗ್ರೆಸ್ ಮಧ್ಯೆ ಸಂಬಂಧ ಏರ್ಪಡಿಸಿ ಪ್ರಧಾನಿ ಕ್ಯಾಂಡಿಡೇಟ್ ಆಗಲು ಯತ್ನಿಸುತ್ತಾರೆ. ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಬೆಂಬಲ ಕೊಡುತ್ತಾರೆ. ಹೀಗಾಗಿ ಅವರು ಒಂದು ಸುತ್ತು ಟ್ರೈ ಕೊಡಬಹುದು. ಇನ್ನು ಬಿಹಾರದ ನಿತೀಶ್ ಕುಮಾರ್ ಅವರಿಗೂ ರಾಷ್ಟ್ರ ರಾಜಕಾರಣದಲ್ಲಿ ಒಂದು ಕೈ ನೋಡುವ ಆಸಕ್ತಿ ಇದೆ. ಒಂದು ವೇಳೆ ಬಿಜೆಪಿ ಜೊತೆ ಕೈ ಜೋಡಿಸಿ ಹೆಚ್ಚಿನ ಸ್ಥಾನ ಗೆದ್ದರೂ ಬಿಜೆಪಿಯಲ್ಲಿ ಪ್ರಧಾನಿ ಕ್ಯಾಂಡಿಡೇಟು ಯಾರು ಅಂತ ಆಗಲೇ ತೀರ್ಮಾನವಾಗಿ ಹೋಗಿದೆ. ಹೀಗಿರುವಾಗ ಬಿಜೆಪಿಯಲ್ಲಿ ಇರುವುದು ಕಷ್ಟದ ಕೆಲಸ.


ಈ ಮಧ್ಯೆ ಅಲ್ಪಸಂಖ್ಯಾತರು ಈ ಸಲ ಏನೇ ಆಗಲಿ ಮೋದಿ ಮಾತ್ರ ಪ್ರಧಾನಿ ಆಗದಿರಲಿ ಎಂಬ ಕಾರಣಕ್ಕಾಗಿ ಬಿಜೆಪಿ ವಿರುದ್ಧ ಗೆಲ್ಲುವ ಕ್ಯಾಂಡಿಡೇಟ್ ಯಾರೋ ಅವರಿಗೆ ಮತ ಹಾಕಿದ್ದಾರೆ. ಇಂತಹ ಕಾಲಘಟ್ಟದಲ್ಲಿ ತಾವೇಕೆ ಅವರ ನಿಷ್ಠುರ ಕಟ್ಟಿಕೊಳ್ಳಬೇಕು ಎಂಬ ಕಾರಣಕ್ಕಾಗಿ ನಿತೀಶ್ ಕುಮಾರ್ ಮುಂಚಿತವಾಗಿಯೇ ಎನ್‌ಡಿಎ ಮೈತ್ರಿಕೂಟದಿಂದ ಕಳಚಿಕೊಂಡು ಬಿಟ್ಟರು. ನಾಳೆ ಅವರು ಪ್ರಧಾನಿಯಾಗುವ ಸನ್ನಿವೇಶವನ್ನು ತೃತೀಯ ರಂಗ ಕಟ್ಟಿಕೊಡಬಹುದು ಅಥವಾ ಕಟ್ಟಿಕೊಡದೇ ಇರಬಹುದು. ಏನೇ ಆದರೂ ಅವರಿಗೆ ಈ ದೇಶದ ಪ್ರಧಾನಿಯಾಗುವ ಮನಸ್ಥಿತಿಯಂತೂ ಇದೆ. ಹೀಗಾಗಿ ಅವರು ದೇಶದ ಪ್ರಧಾನಿಯಾಗಲು ಎಷ್ಟು ಸಾಧ್ಯವೋ, ಅಷ್ಟು ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಇನ್ನು ತಮಿಳ್ನಾಡಿನ ಜಯಲಲಿತಾ ಅವರಿಗೆ ತಮ್ಮ ರಾಜ್ಯದಲ್ಲಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆದ್ದು ಪ್ರಧಾನಿಯಾಗಬೇಕು ಎಂಬ ಆಸೆಯಿದೆ. ಹೀಗಾಗಿ ಅವರು ಕೂಡ ಯಾರಿಗೂ ಬೆಂಬಲ ಕೊಡುತ್ತಿಲ್ಲ. ತಮಿಳ್ನಾಡಿನಿಂದ ಇದುವರೆಗೆ ಒಬ್ಬರೂ ಪ್ರಧಾನಿ ಹುದ್ದೆಗೇರಿಲ್ಲ. ಈ ಬಾರಿ ತಾವು ಆ ಪ್ರಯತ್ನ ಮಾಡುವ ಮೂಲಕ ತಮ್ಮ ರಾಜಕೀಯ ಕಡುವೈರಿ ಡಿಎಂಕೆಯ ಕರುಣಾನಿಧಿಗೆ ಫೈನಲ್ ಉತ್ತರ ಕೊಡುವ ತವಕದಲ್ಲಿ ಅವರಿದ್ದಾರೆ.

ಜಯಲಲಿತಾರದು, ಕರುಣಾನಿಧಿಯದು ಒಂದು ರೀತಿಯಲ್ಲಿ ಹೆಗಡೆ, ದೇವೆಗೌಡ ಸಂಬಂಧವಿದ್ದಂತೆ. ಒಂದು ಸಲ ಪ್ರಧಾನಿ ಆದರೆ ತಾವು ಹೆಗಡೆಗಿಂತ ಮೇಲಿನ ಸ್ಥಾನಕ್ಕೆ ಹೋದ ಸಮಾಧಾನ ದೇವೆಗೌಡರಿಗೆ ಸಿಕ್ಕಿತ್ತು. ಇಂತಹ ಸಮಾಧಾನದಿಂದ ಅವರು ನಿರುಮ್ಮಳರಾದರೆ ಹೆಗಡೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟರು. ತಮಿಳ್ನಾಡಿನಲ್ಲೂ ಈಗ ಅದೇ ರೀತಿಯ ರಾಜಕೀಯ ನಡೆಯುತ್ತಿದೆ. ಸದ್ಯದ ಸ್ಥಿತಿಯಲ್ಲಿ ಕರುಣಾನಿಧಿ ಪ್ರಧಾನಿಯಾಗುವುದು ಕನಸಿನ ಮಾತು. ಅವರಿಗೆ ನೆಟ್ಟಗೆ ಎದ್ದು ನಡೆದಾಡಲೂ ಸಾಧ್ಯವಿಲ್ಲ. ಇಂತಹ ಕಾಲಘಟ್ಟದಲ್ಲಿ ತಾವು ಒಂದು ಸಲ ಪ್ರಧಾನಿ ಆದರೆ ಎಐಎಡಿಎಂಕೆ ನೆಲೆಯಲ್ಲಿ ಭದ್ರಪಡಿಸಿದಂತೆಯೂ ಆಯಿತು. ಅದೇ ಕಾಲಕ್ಕೆ ಕರುಣಾನಿಧಿಗೆ ಇಡೀ ಜೀವಮಾನಕ್ಕಾಗುವಷ್ಟು ಉತ್ತರವನ್ನು ಕೊಟ್ಟ ಹಾಗೂ ಆಯಿತು ಎಂಬುದು ಜಯಲಲಿತಾ ಭಾವನೆ. ಅದಕ್ಕಾಗಿ ಆಕೆ ಪ್ರಧಾನಿಯಾಗಲು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡಲು ತಯಾರಾಗಿದ್ದಾರೆ.

ನಾಳೆ ಸೋನಿಯಾ, ಮಮತಾ, ಜಯಲಲಿತಾ ಅವರಂತಹವರ ಮನಸ್ಸುಗಳು ಒಂದೆಡೆ ಕಲೆತು ಒಬ್ಬ ಮಹಿಳೆ ಪ್ರಧಾನಿಯಾಗಲಿ ಎಂಬ ಭಾವನೆ ಒಡಮೂಡಿದರೆ, ಅದಕ್ಕೆ ಪೂರಕವಾದ ಸನ್ನಿವೇಶ ನಿರ್ಮಾಣವಾಗುವುದಿಲ್ಲ ಎಂದು ಹೇಳುವುದು ಹೇಗೆ? ಇಂತಹ ಮುಂದಾಲೋಚನೆಯಿಂದ ಜಯಲಲಿತಾ ಮುನ್ನುಗ್ಗಿದ್ದಾರೆ. ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಇವರೆಲ್ಲ ಪ್ರಧಾನಿ ಕನಸು ಕಾಣುತ್ತಿರುವುದು ಬೇರೆ ವಿಷಯ. ಈ ಪಟ್ಟಿಯಲ್ಲಿ ನಮ್ಮ ದೇವೆಗೌಡರೂ ಇದ್ದಾರೆ. ಅವರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ತೃತೀಯರಂಗ ಒಗ್ಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದರೆ ಅನುಭವಿಗಳನ್ನು ಎದುರು ನೋಡುವ ಕೆಲಸ ನಡೆಯಬಹುದು. ಅಂತಹ ಸಂದರ್ಭದಲ್ಲಿ ನನಗೆ ಒಂದು ಛಾನ್ಸು ಸಿಕ್ಕರೂ ಸಿಗಬಹುದು ಎಂದು ಅವರು ಕಾಯುತ್ತಿದ್ದಾರೆ. ಆದರೆ ಅವರ ಪಕ್ಷ ಕರ್ನಾಟಕದಲ್ಲಿ ಐದು ಸ್ಥಾನ ಗೆಲ್ಲುವುದೂ ಕಷ್ಟ. ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಹೇಳುವುದೂ ಕಷ್ಟ. ಆದರೂ ಅವರು ಕನಸು ಕಾಣುತ್ತಿದ್ದಾರೆ. ಏನೇ ಇರಲಿ, ಒಟ್ಟಿನಲ್ಲಿ ಪ್ರಧಾನಿಯಾಗುವವರ ಹೆಸರಿನಲ್ಲಿ ಮೋದಿ ಹೆಸರು ಮೊದಲನೇ ಸ್ಥಾನದಲ್ಲಿ ಓಡುತ್ತಿದೆ. ಯಾರ‍್ಯಾರು ಓಡಿಸುತ್ತಿದ್ದಾರೆ ಎಂಬುದು ಬೇರೆ ಮಾತು.

ಉಳಿದಂತೆ ಭಾರತದ ಭಾಗ್ಯ ಬರೆಯುವ ಲಕ್ಕಿಗಾಗಿ ಮುಲಾಯಂಸಿಂಗ್ ಯಾದವ್, ನಿತೀಶ್ ಕುಮಾರ್, ಶರದ್ ಪವಾರ್, ಜಯಲಲಿತಾ, ದೇವೆಗೌಡ, ರಾಹುಲ್‌ಗಾಂಧಿ ಸೇರಿದಂತೆ ಹಲವರು ಕಾಯುತ್ತಿದ್ದಾರೆ. ಯಾರ ಹಣೆಯ ಮೇಲೆ ಅದೃಷ್ಟ ಬರೆದಿದೆಯೋ ಕಾದು ನೋಡಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books