Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಒಬ್ಬ ಅಜ್ಜ, ಒಬ್ಬ ಸೋದರಮಾವನನ್ನು ಕಳೆದುಕೊಂಡ ವಿಷ ಘಳಿಗೆಯಲ್ಲಿ

ಇಬ್ಬರು ಹಿರಿಯರು ನಾಪತ್ತೆ.
ಹೆಚ್ಚು ಕಡಿಮೆ ಒಂದು ವರ್ಷದಲ್ಲಿ. ಮೊನ್ನೆ ಮಾರ್ಚ್ ಇಪ್ಪತ್ಮೂರರಂದು ನನ್ನ ಸೋದರಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಪ್ಲ್ಯಾನೆಟ್‌ನಿಂದ ನಿರ್ಗಮಿಸಿ ಸರಿಯಾಗಿ ಒಂದು ವರ್ಷವಾಯಿತು. ತೀರಿಕೊಂಡಾಗ ಅವರಿಗೆ ತೊಂಬತ್ತೇಳು ವರ್ಷ. ಅದೇ ದಿನ ನಾನು ಕೋಮಾಕ್ಕೆ ಹೋದೆ. ಎದ್ದು ಬಂದದ್ದು ಯಾವಾಗಲೋ? ನನಗೆ ನೆನಪಿಲ್ಲ. ಅಸಲು ದೇವರನ್ನೇ ನಂಬದ ನಾನು ಮಾವನ ಚಿತೆಗೆ ಬೆಂಕಿಯಿಡುವ ಕೆಲವೇ ನಿಮಿಷಗಳ ಮುಂಚೆ ಬೆಳಗೆರೆಯ ನಾಪಿತನನ್ನು ಕರೆಸಿ ತಲೆ ಬೋಳಿಸಿಕೊಂಡೆ. “ನೀನು ಸತ್ತ ಮೇಲೆ ಏನು ಮಾಡಬೇಕು?" ಅಂತ ಕೆಲವು ತಿಂಗಳಿಗೆ ಮುಂಚೆ ಆತನನ್ನು ಕೇಳಿದ್ದೆ. “ಅದರಲ್ಲೇನಿದೆ? ಅನುಕೂಲದ ಮತ್ತು ಹತ್ತಿರದ ರುದ್ರಭೂಮಿಗೆ ಒಯ್ದು ನನ್ನನ್ನು ಸುಡು. ಕ್ರಿಮಿಟೋರಿಯಂ ಆದರೂ ಸರಿಯೇ. ಆಮೇಲೆ ಚೂರುಪಾರು ಬೂದಿ, ಅಸ್ಥಿ ಅಂತ ಉಳಿಯುತ್ತದಲ್ಲ? ಅದನ್ನು ಎಲ್ಲಿ ಬೇಕಾದರೂ ಬಿಸಾಕು. I have no issues" ಅಂದಿದ್ದ ಮಾವ. ಆದರೆ ನನಗೇ ಮನಸ್ಸು ಬರಲಿಲ್ಲ. ಮಾರ್ಚ್ ಇಪ್ಪತ್ಮೂರರಂದೇ ಬೆಳಗೆರೆಗೆ ಒಯ್ದೆ. ಬೆಳಗೆರೆ ಆತನ ಪಾಲಿಗೆ ಕರ್ಮಭೂಮಿ. ಆತ ಹುಟ್ಟಿದ್ದೂ ಅಲ್ಲೇ. ಅತಿ ಹೆಚ್ಚಿನ ಕಾಲ ಬದುಕಿದ್ದೂ ಅಲ್ಲೇ. ಹುಟ್ಟಿದ ಕಡೆಯೇ ಬದುಕು ಮುಕ್ತಾಯವಾಗಬೇಕು ಎಂಬುದು ಹಿರಿಯರ ನಂಬಿಕೆ. ನಿಮಗೆ ಅಚ್ಚರಿಯಾಗಬಹುದು. ಬೆಳಗೆರೆಯಲ್ಲೇ ನನ್ನ ತಾತ ಚಂದ್ರಶೇಖರ ಶಾಸ್ತ್ರಿಗಳು ಹುಟ್ಟಿದರು. ಅವರ ಕೊನೆಗಾಲದಲ್ಲಿ ಮಾವ ಸಮೀಪದ ಹೆಗ್ಗೆರೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಜೀವನದ ಹೆಚ್ಚಿನ ಕಾಲವನ್ನು ನನ್ನ ತಾಯಿ ಹಾಗೂ ನನ್ನೊಂದಿಗೆ ಕಳೆದ ತಾತ ಚಂದ್ರಶೇಖರ ಶಾಸ್ತ್ರಿಗಳು ಅದೇಕೆ ಹಟಕ್ಕೆ ಬಿದ್ದರೋ, ಗೊತ್ತಿಲ್ಲ. “ನಾನು ಕಿಟ್ಟಪ್ಪನಿರುವ ಊರಿಗೇ ಹೋಗ್ತೀನಿ" ಎಂದರು. ಒಲ್ಲದ ಮನಸ್ಸಿನಲ್ಲೇ ಅಮ್ಮ ಕಳಿಸಿಕೊಟ್ಟಿದ್ದಳು. ಹೀಗಾಗಿ ಅಜ್ಜ ಬೆಳಗೆರೆ ಸಮೀಪದ ಹೆಗ್ಗೆರೆ ಸೇರಿಕೊಂಡಿದ್ದ. ಅದೊಂದು ನಡುರಾತ್ರಿ ತಮ್ಮ ಮಗ ಕೃಷ್ಣ ಶಾಸ್ತ್ರಿಗಳನ್ನು ಎಬ್ಬಿಸಿ,

“ಕಿಟ್ಟಪ್ಪಾ... ನಡಿ ನಡಿ. ನಾನು ಈಗಿಂದೀಗಲೇ ಬೆಳಗೆರೆಗೆ ಹೋಗಬೇಕು" ಅಂತ ಹಟ ಮಾಡಿದ. ಅದೇನು ಬಸ್ಸು, ಟ್ಯಾಕ್ಸಿಗಳಿರುವ ಕಾಲವೇ? ಎತ್ತಿನಗಾಡಿ ಹೂಡಿಸಿ, ಅದರಲ್ಲಿ ಮೆತ್ತಗಿನ ಲೇಪು ಹಾಸಿ, ಅಜ್ಜನನ್ನು ಮಲಗಿಸಿ ಜೊತೆಗೆ ತಾನೂ ಕುಳಿತು ಆ ಸರಹೊತ್ತಿನಲ್ಲಿ ಬೆಳಗೆರೆಗೆ ಹೊರಟನಂತೆ ಮಾವ. ದಾರಿಯಲ್ಲಿ ಹುಲಿಕುಂಟೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿ ರಾಮಯ್ಯ ಮೇಷ್ಟ್ರು ಇದ್ದರು. ನಮ್ಮ ಕುಟುಂಬಕ್ಕೆ, ಅದರಲ್ಲೂ ಮಾವನಿಗೆ ತುಂಬ ಆತ್ಮೀಯರಾದವರು ಅವರು. ಚಕ್ಕಡಿಯ ಶಬ್ದ ಕೇಳಿ ಅವರು ಮತ್ತು ಅವರ ಪತ್ನಿ ಮನೆಯಿಂದ ಹೊರಬಂದರಂತೆ.
“ತಾತಾ, ಸ್ವಲ್ಪ ಹೊತ್ತು ಚಕ್ಕಡಿಯಿಂದ ಇಳಿದು ವಿಶ್ರಾಂತಿ ತೆಗೆದುಕೊಂಡು, ಚೂರು ಹಾಲು ಕುಡಿದು ಹೋಗೀರಂತೆ" ಅಂದರು ಮೇಷ್ಟ್ರ ಪತ್ನಿ.

“ಇಲ್ಲಮ್ಮೋ, ಇದು ನಿಲ್ಲೋ ಯಾತ್ರೆಯಲ್ಲ!" ಅಂದುಬಿಟ್ಟ ತಾತ.
ಆತನಿಗೆ ಸಾವು ಬರುತ್ತಿದೆಯೆಂಬ ಸೂಚನೆ ಇತ್ತಾ? premonition? ಗೊತ್ತಿಲ್ಲ. ಬೆಳಗೆರೆ ತಲುಪಿದ ತಕ್ಷಣ ಆತನನ್ನು ಎತ್ತಿಕೊಂಡು ಬಂದು ಪಡಸಾಲೆಯಲ್ಲಿ ಮಲಗಿಸಿದರು. “ಉಹುಂ, ಇಲ್ಲಿ ಅಲ್ಲ. ಅಗೋ ಆ ಮೂಲೆಯಲ್ಲಿ ಎಂದು ಹೇಳಿ ತಮಗೆ ಇಷ್ಟವಾಗದ ಜಾಗ ತೋರಿಸಿದರು. “ನಾನು ಹುಟ್ಟಿದ್ದು ಅಲ್ಲೇ. ಅಲ್ಲೇ ಪ್ರಾಣ ಬಿಡಬೇಕು" ಅಂದರಂತೆ ತಾತ.
ಇದು ವಯಸ್ಸಾದವರ ‘ಎರ್ರಿ’ (ಹುಚ್ಚು) ಅಂದುಕೊಂಡ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಬೆಳಕು ಹರಿಯುತ್ತಿದ್ದಂತೆಯೇ ಸೈಕಲ್ಲು ಹತ್ತಿ ಹೆಗ್ಗೆರೆಗೆ ಹೊರಟರು: ಅಲ್ಲಿ ಶಾಲೆಗೆ ರಜಾ ಚೀಟಿ ಕೊಡುವುದಿತ್ತು. ಆದರೆ ಹತ್ತು ಪೆಡಲು ತುಳಿಯುವುದರೊಳಗಾಗಿ ಹಳ್ಳಿಯವರ‍್ಯಾರೋ ಓಡಿ ಬಂದರು. ಶತಾಯ ಗತಾಯ ನೀವು ಹೋಗುವಂತಿಲ್ಲ. ಅಜ್ಜ ನಿಮ್ಮನ್ನು ಕರೆಯುತ್ತಿದ್ದಾರೆ. ಬೇಗ ಬನ್ನಿ ಅಂದರಂತೆ. ಇದು ‘ಎರ್ರಿ’ಯ ಇನ್ನೊಂದು ಆಟ ಅಂದುಕೊಂಡು ಶಾಸ್ತ್ರಿಗಳು ಬೆಳಗೆರೆಯ ಮನೆಗೆ ಹಿಂತಿರುಗಿದರು.


“ಬಂದೆಯೇನೋ ಕಿಟ್ಟಪ್ಪಾ. ನೋಡು, ನಾನು ಸತ್ತ ಮೇಲೆ ಇದಕ್ಕೆ ಬೆಂಕಿ ಇಟ್ಟುಬಿಡು, ಅಷ್ಟೆ. ಆಮೇಲೆ ಉತ್ತರ ಕ್ರಿಯೆಗಳು ಎಂದು ಗೊಡ್ಡು ಶಾಸ್ತ್ರಗಳನ್ನು ಹಚ್ಚಿಕೋಬೇಡ. ಹೇಗಿದ್ದರೂ ನೀನು ಆಗಾಗ ಯಾತ್ರೆಗೆ ಹೋಗುತ್ತಿರುತ್ತೀಯ. ಹಾಗೆ ಒಂದು ಸಾರಿ ಹರಿಹರಕ್ಕೋ, ಗೋಕರ್ಣಕ್ಕೋ ಹೋದಾಗ, ಎಲ್ಲಿಗೋ ನಿನ್ನ ಮನಬಂದಲ್ಲಿಗೆ ಹಗಿ, ನಿನ್ನ ಸ್ನೇಹಿತರೊಂದಿಗೆ ಸುತ್ತಾಡಿಕೊಂಡು ಬಾ. ಕೇಳಿದವರಿಗೆ ಅಲ್ಲ ದೂರದ ಮಹಾಪುಣ್ಯ ಕ್ಷೇತ್ರದಲ್ಲಿ ನಮ್ಮಪ್ಪನ ಉತ್ತರಕ್ರಿಯೆಗಳನ್ನು ಅದ್ಧೂರಿಯಾಗಿ ಮಾಡಿ ಬಂದೆ ಎಂದು ಹೇಳಿಬಿಡು. ನನಗೆ ಅದರಲ್ಲೆಲ್ಲಾ ನಂಬಿಕೆ ಇಲ್ಲ. ಅದೆಲ್ಲಾ ಪ್ರಪಂಚಕ್ಕೆ ಅಂಟಿಕೊಂಡವರ ಮೌಢ್ಯ. ಇದರ ಸಂಬಂಧ ಕಡಿದುಕೊಂಡವರಿಗೆ ಅದೆಲ್ಲಿ ಕುಚೋದ್ಯ. ಮಕ್ಕಳ ಆಟ ಅಷ್ಟೆ ಅಂದರು. ಅಂದಹಾಗೆ, ನಿನಗೆ ನೆನಪಿದೆಯೇ? ಒಂದು ಸಂಸ್ಕೃತ ಮಂತ್ರದ ಅರ್ಥ ಏನೆಂದು ಕೇಳಿದ್ದೆ:

“ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಂ.
ತಂ ತಮೇವೇತಿ ಕಾಂತೇಯ ಸದಾ ತದ್ಭಾವಭಾವಿತಃ"
“ಈ ಮಂತ್ರದ ಅರ್ಥ ಕೇಳಿದ್ದೆ. ಇದು ಹೇಳುವ ಅರ್ಥವಲ್ಲ" ಅಂದುಬಿಟ್ಟಿದ್ದೆ ನಾನು. ಈಗ ನೋಡು ಇದರ ಅರ್ಥವನ್ನು ಎಂದು ಅಜ್ಜ ಕಣ್ಣುಮುಚ್ಚಿದರಂತೆ. ಆಮೇಲೆ ಅಜ್ಜ ಕಣ್ಣು ತೆರೆಯಲಿಲ್ಲ. ಮುಖ ಪ್ರಶಾಂತವಾಗಿತ್ತು. ಕೊಂಚ ಹೊತ್ತಿನ ನಂತರ ಒಂದು ಉದ್ಗಾರ. ‘ಶಿವ ಶಿವ ಶಿವ’ ಅಂದರು. ಅವರ ತಲೆ ಪಕ್ಕಕ್ಕೆ ವಾಲಿತು ಎಂಬುದನ್ನು ನನ್ನ ಮಾವ ಕಿಟ್ಟಪ್ಪ ಅನೇಕ ಸಲ ನನ್ನ ಮುಂದೆ ವಿವರಿಸಿದ್ದರು. ಆ ಮಂತ್ರದ ಅರ್ಥವೇನು ಅಂತ ಕೇಳಿದೆ. ಅದೇ ಉತ್ತರ.

“ಇದು ಹೇಳುವ, ವಿವರಿಸುವ ಮಂತ್ರವಲ್ಲ. ಅನುಭವಿಸಬೇಕು ಅಷ್ಟೆ" ಅಂದಿದ್ದ ನನ್ನ ಮಾವ. ಯಾರಾದರೂ ಸಂಸ್ಕೃತ ಪಂಡಿತರನ್ನು ಕೇಳಿದರೆ ಈ ಮಂತ್ರದ ಅರ್ಥ ಗೊತ್ತಾಗಲೂಬಹುದು. ಅದು ವಿದಾಯವಾ? ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಉತ್ಸಾಹವೂ ನನ್ನಲ್ಲಿ ಇಲ್ಲ. ಕೊನೆ ಘಳಿಗೆಯಲ್ಲಿ ಉದ್ಗರಿಸುವ ಮಂತ್ರವೇ ಆಗಿದ್ದಲ್ಲಿ, ಅದರ ಅರ್ಥ ತಿಳಿದುಕೊಳ್ಳಲು ನನಗಿನ್ನೂ ನಲವತ್ಮೂರು ವರ್ಷಗಳಷ್ಟು ಟೈಮಿದೆ. ನನ್ನ ಅಜ್ಜ ಜನಿವಾರ ತ್ಯಜಿಸಿದ. ನನ್ನ ಮಾವ ತ್ಯಜಿಸಿದ. ಆತ ಮತ್ತು ಅವರ ತಂದೆ ಯಾವತ್ತೂ ದೇವರ ಮುಂದೆ ನಿಲ್ಲಲಿಲ್ಲ. ಕೈ ಮುಗಿಯಲಿಲ್ಲ. ಬ್ರಾಹ್ಮಣರಂತೆ ಎಂದಿಗೂ ವರ್ತಿಸಲಿಲ್ಲ. They were not religious. ಆದರೆ They were philosophical. ನಾನು? ನಂಗೆ ಗೊತ್ತಿಲ್ಲ. ಪ್ರಾಪಂಚಿಕವಾದ ಅನೇಕ ಸಂಗತಿಗಳಲ್ಲಿ ನನಗೆ ಆಸಕ್ತಿ ಇದೆ. ಚಟಗಳಿವೆ. ಸೆಳೆತವಿದೆ. ಲೋಲುಪತೆ ಇದೆ. ಆಸೆಗಳಿವೆ. ಇವ್ಯಾವೂ ನನ್ನ ಮಾವ ಮತ್ತು ತಾತನಿಗೆ ಇರಲಿಲ್ಲ. ಮಾವ ಬೆಳಗೆರೆಯಲ್ಲೇ ಸಾಯಬೇಕು ಎಂದು ಹಟ ಮಾಡಲಿಲ್ಲ. ‘ಪವಾಡ’ ಎಂಬಂತಹುದು ಯಾವುದೂ ಆತನ ಜೀವನ ಕಾಲದ ಅಂತ್ಯದಲ್ಲಿ ಘಟಿಸಲಿಲ್ಲ. “ನೋಡು ಹ್ಯಾಗೆ ಸತ್ತ? ಬೆಂಕಿ ಕೊಡೋರು ಯಾರಿದ್ದಾರೆ? ತಲೆ ಬೋಳಿಸಿಕೊಂಡು ಕರ್ಮಗಳನ್ನು ಮಾಡೋಕೆ ಯಾರಿದ್ದಾರೆ? ಯಾತರ ಬಾಳು ಬಾಳಿದ" ಎಂಬ ಕುಹಕದ ಮಾತನ್ನು ಬೆಳಗೆರೆಯಲ್ಲಿರುವ ನನ್ನ ದಾಯಾದಿಯೊಬ್ಬ ನನ್ನ ಕಿವಿಗೆ ಬೀಳಲೆಂದೇ ಆಡಿದ. ಅವನಿಗೆ ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದೆ. ಆ ಮಾತು ಬೇರೆ. ಆದರೆ ತೀರ ಕೊಳ್ಳಿ ಇಡುವ ಘಳಿಗೆಯಲ್ಲಿ “ಎಂಥ ಸಾವು ಸತ್ತ ನೋಡು" ಅಂತ ಅವನಂದಿದ್ದು ಯಾಕೋ ಮನಸ್ಸಿಗೆ ಘಾಸಿಯುಂಟು ಮಾಡಿತು. ಇಷ್ಟಾಗಿ, ನಾನು ಕಳೆದುಕೊಳ್ಳುವುದೇನಿದೆ: ಕೂದಲೇ ತಾನೆ? “ನನ್ನ ತಲೆ ಬೋಳಿಸಿ" ಅಂದವನೇ ಮಣೆಯೊಂದರ ಮೇಲೆ ಕುಳಿತು ತಲೆ ಬಾಗಿಸಿದೆ. ಅಷ್ಟೆ, ಒಂದು ಮಂತ್ರ ಇಲ್ಲ. ಆಮೇಲೂ ಉಚ್ಛರಿಸಲಿಲ್ಲ. ಮಂತ್ರಗಳ ನಿರರ್ಥಕತೆ ನನಗೆ ಅರ್ಥವಾದದ್ದು, ನಾನು ಅಘೋರಿಗಳೊಂದಿಗೆ ಅಲೆದ ಚಿಕ್ಕ ಅವಧಿಯ ದಿನಗಳಲ್ಲೇ. ಇವತ್ತಿಗೂ ನನಗವು ನಿರರ್ಥಕ ಅನ್ನಿಸುತ್ತವೆ.

ಈ ಹಿಂದೆ ಹೇಳಿದ್ದೀನಲ್ಲ? ನನಗೆ ೧೯೬೯ ಜೂನ್ ೯ರಂದು ನನ್ನ ಅಮ್ಮ ರಾಯದುರ್ಗವೆಂಬ ಊರಿನಲ್ಲಿ ಉಪನಯನ ಮಾಡಿದಳು. ನಾನು ಸುಮಾರು ೧೯೭೬ರಲ್ಲಿ ಹಿಮಾಲಯದ ಇಳಿಜಾರಿನಲ್ಲಿ ಜನಿವಾರ ಹರಿದು ಗಂಗೆಗೆ ಹಾಕಿದೆ. ಆದರೆ ಆಶ್ಚರ್ಯ ನೋಡಿ; ಆ ಅವಧಿಯಲ್ಲಿ ನಾನು ಕಲಿತ ಯಾವ ಮಂತ್ರವೂ ಮರೆವಾಗಿಲ್ಲ. ಈ ಕ್ಷಣಕ್ಕೂ ನೀವು ಎದುರಿಗೆ ನಿಂತು ‘ಶುರು’ ಎಂದ ತಕ್ಷಣ ಆರಾಮಾಗಿ ಕುಳಿತು ಇಡೀ ಸಂಧ್ಯಾವಂದನೆಯನ್ನು ಮಾಡಿ ತೋರಿಸಬಲ್ಲೆ. ಗಾಯತ್ರಿ ಮಂತ್ರ ಇವತ್ತಿಗೂ ಬಾಯಿಪಾಠ. ಗೆಳೆಯ ಉಮಾಪತಿ “ನಿನ್ನದು elephantine memory" ಅನ್ನುತ್ತಾನೆ. ಆನೆ ಗಾತ್ರದ ನೆನಪಿನ ಶಕ್ತಿ. ತುಂಬ ಸುಳ್ಳು ಹೇಳುವವರಿಗೆ ಅಗಾಧವಾದ ನೆನಪಿನ ಶಕ್ತಿ ಇರಬೇಕು ಅನ್ನುತ್ತಾರೆ. ನಾನು ಸುಳ್ಳು ಹೇಳಬೇಕಾಗಿಲ್ಲ. ನನಗೆ ನೆನಪಿನ ಶಕ್ತಿ ಎಂಬುದು ಒಂದರ್ಥದಲ್ಲಿ ವರ. ಅದು ಶಾಪವೂ ಹೌದು. ಒಳಗೇ ಒದ್ದಾಡುತ್ತೇನೆ; ಯಾವುದನ್ನೂ ಮರೆಯಲಾಗದೆ. ನನ್ನ ಸುಖ, ನನ್ನ ಸಂತೋಷ, ಆವರಿಸಿದ ದುಃಖ, ಕೈಜಾರಿ ಹೋದ ಕನಸು, ಪಟ್ಟ ತೃಪ್ತಿ, ಅನುಭವಿಸಿದ ಅವಮಾನ, ಎದುರಿಸಿದ ಯುದ್ಧ- ಉಹುಂ ಯಾವುದನ್ನೂ ಮರೆಯಲಾರೆ. ಇದಕ್ಕೆಲ್ಲಾ ಕಾರಣರಾದ ಯಾರನ್ನೂ ಮರೆಯಲಾರೆ. “ನೀವು ಅದೆಲ್ಲವನ್ನೂ ಹ್ಯಾಗೆ ನೆನಪಿಟ್ಟುಕೊಳ್ತೀರಿ?" ಅಂತ ಕೆಲವರು ಕೇಳುತ್ತಾರೆ. ಅದಕ್ಕೆ ನನಗೆ memory powerನ ಸಹಾಯ ಬೇಕಿಲ್ಲ. ಮೊದಲ ಭೇಟಿಯಲ್ಲಿ ಅವಳು ಯಾವ ಬಣ್ಣದ ಸೀರೆ ಉಟ್ಟಿದ್ದಳು ಅಂತ ಕೇಳುತ್ತೀರಾ? yes, ನನಗೆ ನೆನಪಿರುತ್ತದೆ. ಯಾವುದು ಬೇಡವೋ ಅದನ್ನು ಮನಸ್ಸು ತಂತಾನೇ ಮರೆಯುತ್ತದೆ. unwanted data ತಂತಾನೇ ಡಿಲೀಟ್ ಆಗಿ ಹೋಗುತ್ತದೆ. ನನ್ನ ಪಾಲಿಗೆ ಇದು ಬುದ್ಧಿ ಗುಣ. ಈ ಗುಣ ನನ್ನ ಮಾವನಿಗೂ ಇತ್ತು. ನಿನ್ನೆ ರಾತ್ರಿ ಏನು ಊಟ ಮಾಡಿದೆ? ನನಗೆ ನೆನಪಿರುವುದಿಲ್ಲ. ಆದರೆ ಮೂವತ್ತೈದು ವರ್ಷಗಳ ಹಿಂದೆ ವಿದುರಾಶ್ವತ್ಥದಲ್ಲಿ ಆ ಅದ್ಭುತ ಮರದ ಕೆಳಗೆ ಯಾರೊಂದಿಗೆ ಕುಳಿತಿದ್ದೆ; ಏನು ಮಾತನಾಡಿದೆ ಎಂಬುದನ್ನು ಈಗ ಸ್ವಲ್ಪ ಹೊತ್ತಿಗೆ ಮುನ್ನವಷ್ಟೇ ಅಲ್ಲಿಂದ ಎದ್ದು ಬಂದೆನೇನೋ ಎಂಬಂತೆ ವಿವರಿಸಬಲ್ಲೆ. ಮೊನ್ನೆ ಕೆಲವು ದಿನಗಳ ಕಾಲ ನಾನು ಕೋಮಾದಲ್ಲಿದ್ದು, ಸಾವಿನ ಕದ ತಟ್ಟಿ ಈಚೆಗೆ ಬಂದೆನಲ್ಲ? ಅವಷ್ಟು ದಿನ, ಅವಷ್ಟು ತಿಂಗಳು ಏನು ನಡೆಯಿತು ಎಂಬುದು ಮಾತ್ರ ಒಂಚೂರೂ ನೆನಪಿಲ್ಲ. ಅದೊಂದು patch ನೆನಪಿನಿಂದ ಅಳಿಸಿಹೋಗಿದೆ. “ಏನೇನಾಯಿತು ಹೇಳಿ?" ಅಂತ ಆ ದಿನಗಳಲ್ಲಿ ನನ್ನ ಜೊತೆಗಿದ್ದವರನ್ನುಕೇಳಿ ತಿಳಿದುಕೊಳ್ಳಬೇಕು. ಆ ಹಂತದಲ್ಲಿ ಸಾಮಾನ್ಯವಾಗಿ ಒಂದಷ್ಟು memory loss ಆಗುತ್ತದಂತೆ. ಅದು ಬಿಟ್ಟರೆ ನಾನು ಜೀವನದಲ್ಲಿ ಏನನ್ನೂ ಮರೆತಿಲ್ಲ. ನಾನು ಮರೆಯುವವನೂ ಅಲ್ಲ.

ಅಂದಹಾಗೆ ಮಾರ್ಚ್ ೨೦, ೨೦೧೪ರಂದು ಸರ್ದಾರ್ ಖುಷ್ವಂತ್‌ಸಿಂಗ್ ಈ planetನಿಂದ ನಿರ್ಗಮಿಸಿದರು. ಅವರದು King size life. ಶ್ರೀಮಂತಿಕೆ, ಅಗಾಧವಾದ ಓದು, ಆತ್ಮವಿಶ್ವಾಸ, ಎಲ್ಲ ಆಸೆಗಳ ಮಧ್ಯೆಯೇ ಒಂದು ನೈರಾಶ್ಯ, ನಿರಾಸೆಗಳ ನಡುವೆಯೇ ಒಂಚೂರು ಚಾಪಲ್ಯ, ವಿದ್ವತ್ತು, ಅಸಹನೆ, ಹೊಟ್ಟೆಕಿಚ್ಚು, ಲೋಲುಪತೆ, ಸಿದ್ಧಾಂತ, ವೇದಾಂತ, ಜಾತಿಹೀನತೆಯ ನಡುವೆಯೇ ಒಂದು ವೇದಾಂತ, ನೋವು, ಕೀರ್ತಿ, ಅಪಕೀರ್ತಿ, ಭುಜಕಟ್ಟು, ಕಿರೀಟ, ಪರಮ ಕೊಳಕು ಅಭ್ಯಾಸಗಳು, ಅಂಥವೇ ಸಾಂಗತ್ಯಗಳು, ಅಪಾರವಾದ knowledgeನ ದಾಹ, ಕೊಂಚ ಸಣ್ಣತನ, ವಿಪರೀತ ಜಿಪುಣತನ, ಎಂಥದ್ದೋ ಔದಾರ್ಯ, ಒಳಗೇ ಅಗ್ಗಿಷ್ಟಿಕೆಯಂತೆ ಉರಿಯುತ್ತಿದ್ದ ಆತ್ಮೀಯ ದುಃಖ ಇವೆಲ್ಲವೂ ಸೇರಿದರೆ ಒಬ್ಬ ಖುಷ್ವಂತ್. ನಾನು ಅವತ್ತಿಗೂ-ಯಾವೊತ್ತಿಗೂ ಅವರನ್ನೇ ಪರಮಗುರು ಅಂತ ಭಾವಿಸಿದವನು. ಅವರು ತಮ್ಮನ್ನು dirty old man of Delhi ಅಂತ ಕರೆದುಕೊಂಡರು. ಆ ಕೊಳಕುತನವೂ ನಂಗಿಷ್ಟ. ಅದರೊಳಗಿನ ಪರಿಶುಭ್ರತೆಯೂ ನನಗೆ ಇಷ್ಟ. ವಯಸ್ಸಾಗುತ್ತಾ ಆಗುತ್ತಾ ಅವರು ಒಂದರ್ಥದಲ್ಲಿ ಮಗುವಿನಂತಾಗಿ ಹೋಗಿದ್ದರು. ಕೊನೆತನಕ ಅವರಿಗೆ ತಮ್ಮ ಹುಟ್ಟೂರಾದ ‘ಹಡಾಲಿ’ಯ ಬಗ್ಗೆ ಪ್ರೀತಿಯಿತ್ತು. ಈಗ ಅದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್‌ಗೋಧಾ ಜಿಲ್ಲೆಯಲ್ಲಿದೆ. ಅವರಿಗೆ ಪಾಕಿಸ್ತಾನದಲ್ಲಿ ಅಪಾರ ಸಂಖ್ಯೆಯ ಗೆಳೆಯ ಗೆಳತಿಯರಿದ್ದರು. ಅವರು ಸಾಕಷ್ಟು ಸಲ ಪಾಕಿಸ್ತಾನಕ್ಕೆ ಹೋಗಿಬಂದರು. ಮೊದಲು ವಿದೇಶಾಂಗ ಮಂತ್ರಿಗಳ ಕಚೇರಿಯಲ್ಲಿ diplomat ಆಗಿ ನೌಕರಿ ಮಾಡಿದ್ದರಿಂದ ಒಂದು ಪಾಕಿಸ್ತಾನವೇಕೆ; ನಾನಾ ದೇಶಗಳಿಗೆ ಹೋಗಿ ಬಂದಿದ್ದರು. ಶ್ರೀಮಂತಿಕೆಯೆಂಬುದು ಅವರಿಗೆ ಜನ್ಮೇಪಿ ಬಂದದ್ದು. ದೊಡ್ಡ ಕಾಂಟ್ರಾಕ್ಟರ್ ಶೋಭ ಸಿಂಗ್, ಅವರ ತಂದೆ. ಆದರೆ ದಿಲ್ಲಿಯ ನಪುಂಸಕ ಅಥವಾ ಹಿಜಡಾಗಳಲ್ಲೂ ಅವರಿಗೆ ಸ್ನೇಹಿತರಿದ್ದರು. ಅವರು ವಿಪರೀತ ಶಿಸ್ತಿನ ಪಾಬಂದಿ. ಆದ್ದರಿಂದಲೇ ಅವರ ಮನಸ್ಸು ಅರಾಜಕ. ಅವರನ್ನು ಸಿಖ್ ಧರ್ಮ ಯಾವತ್ತೂ ಹಣೆಯ ವಿಭೂತಿಯಂತೆ ಮೆತ್ತಿಕೊಳ್ಳಲಿಲ್ಲ. ಆದರೆ ಸಿಖ್ ಧರ್ಮದ ಇತಿಹಾಸವನ್ನು ಕರಾರುವಾಕ್ಕಾಗಿ ಬರೆದರು. ಜಾತಿಗೆಟ್ಟರೂ ಅವರು ಸಿಖ್ ಉಡುಪು, ಗಡ್ಡ, ಪಟಕಾ ತ್ಯಜಿಸಲಿಲ್ಲ. ಅವರ ಪಾಲಿಗೆ ಅದು ತನ್ನ ಐಡೆಂಟಿಟಿ. ಸಿಖ್ಖರನ್ನು ಬೈದರು. ಗೇಲಿ ಮಾಡಿದರು. ಅವರ ಮಾರಣಹೋಮವಾದಾಗ ಕಣ್ಣೀರಿಟ್ಟರು. ಭಾರತ ಕೊಟ್ಟ ಪದ್ಮಭೂಷಣ ಪ್ರಶಸ್ತಿಯನ್ನು ಆಕೆಯ ಮುಖಕ್ಕೆ ಬಿಸಾಡಿ, “Indira Gandhi is a stupid woman" ಎಂದು ತಮ್ಮ ಅಸಹನೆಯನ್ನು ಹೊರ ಹಾಕಿದರು. ಅದೇ ಇಂದಿರಾರನ್ನು ಸಿಖ್ಖರು ಕೊಂದಾಗ “ಛೆ, ಯಾವ ಮಟ್ಟಕ್ಕೆ ಇಳಿದುಬಿಟ್ಟರು ಸಿಖ್ಖರು?" ಎಂದು ಚಡಪಡಿಸಿದರು. ಅವರ ಚಿಂತನೆಗೆ ಒಂದು ಲಯವಿತ್ತು. ಅದಕ್ಕೆ ತದ್ವಿರುದ್ಧವಾಗಿ ವಿರೋಧಾಭಾಸವೂ ಇತ್ತು. “ನನಗಾಗಲೇ ತೊಂಬತ್ತೆಂಟು; ಒಂದು ಸಮಾಧಾನದ ಸಂಗತಿಯೆಂದರೆ ನನ್ನ ಅಂಡು ತೊಳೆಯಲು ಯಾವುದೇ ನರ್ಸ್‌ಗಳ ಸಹಾಯವನ್ನು ನಾನು ತೆಗೆದುಕೊಳ್ಳುತ್ತಿಲ್ಲ.I am fine" ಎಂದು ಬರೆದಿದ್ದರು ಖುಷ್ವಂತ್.


ನಿಮಗೊಂದು ತಮಾಷೆಯ ಪ್ರಸಂಗ ಹೇಳುತ್ತೇನೆ ಕೇಳಿ. ಅದೊಂದು ಸಂಜೆ ನಾನು ಒಂದು ಬಾಟಲಿ ಸ್ಕಾಚ್ ವಿಸ್ಕಿ ಮತ್ತು ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿ ಅಪರೂಪಕ್ಕೆ ಸಿಗುವ ಬಟರ್ ಫ್ರೂಟ್ ತೆಗೆದುಕೊಂಡು, ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡ ಪ್ರಕಾರ ಅವರ ಮನೆಗೆ ಹೋದೆ. ಆಶ್ಚರ್ಯವೆಂದರೆ ಆ ಹೊತ್ತಿಗಾಗಲೇ ಬೆಂಗಳೂರಿನ ಗೆಳತಿಯೊಬ್ಬಳು ಅವರ ಮನೆಯಲ್ಲಿದ್ದಳು. ಅವರಿಬ್ಬರ ಮಧ್ಯೆ ಎಂಥದೋ ಮಾತು. ಆಕೆ ಸ್ತನಪಾನ, ಅಂದರೆ ಎದೆಯ ಹಾಲಿನ ಬಗ್ಗೆ, ಅದೆಷ್ಟು ಮುಖ್ಯ ಎಂಬುದರ ಬಗ್ಗೆ ಒಂದು ಪುಟ್ಟ ಪುಸ್ತಕ ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟಳು. ಆಕೆಯೇ ಬರೆದ ಪುಸ್ತಕವದು. ಕೊಂಚ ಹೊತ್ತು ಮಾತನಾಡಿದ ನಂತರ “ಚಲೋ, ಬುಡ್ಢೇಕೋ ನೀಂದ್ ಆಗಯಾ ಹೈ" (ಮುದುಕನಿಗೆ ನಿದ್ರೆ ಬರತೊಡಗಿದೆ, ನೀವು ಹೊರಡಿ) ಅಂದು ಸಭೆಯನ್ನು ಬರಖಾಸ್ತು ಮಾಡಿದ ಖುಷ್ವಂತ್ ಸಿಂಗ್ ಒಂದು ಪುಟ್ಟ ಚೇಷ್ಟೆ ಮಾಡಿದರು. ನಿಧಾನವಾಗಿ ಆ ಗೆಳತಿಯನ್ನು ಕೈ ಹಿಡಿದು, ಹತ್ತಿರಕ್ಕೆ ತೆಗೆದುಕೊಂಡು ಎರಡೂ ಕೆನ್ನೆಗಳಿಗೆ ಲೊಚಲೊಚನೆ ಮುತ್ತು ಕೊಟ್ಟುಬಿಟ್ಟರು. ಗೆಳತಿಗೆ ಸತ್ತು ಹೋಗುವಂಥ ನಾಚಿಕೆ. ಆದರೆ ಅಂಥ ವಯೋವೃದ್ಧರನ್ನು don't do this ಅನ್ನುವುದು ಹೇಗೆ? ಆ ರಾತ್ರಿ ಹಾಗೆ ಮುಗಿದಿತ್ತು. ಕೆಲವು ತಿಂಗಳ ಹಿಂದೆ ನಾನು ಆಕೆಯ ಮನೆಗೆ ಹೋದೆ. ಮನೆಯ show caseನಲ್ಲಿ ಒಂದು ಪೋಸ್ಟ್ ಕಾರ್ಡ್ ಬಿದ್ದಿತ್ತು. “ಇದೇನಿದು ಹೀಗೆ ಬಿಸಾಕಿದ್ದೀಯ? ಖುಷ್ವಂತ್ ಬರೆದ ಪತ್ರವಲ್ಲವೇ? ಇದನ್ನುenlarge ಮಾಡಿ, laminate ಮಾಡಿಸಿ ಗೋಡೆಗೆ ತೂಗು ಹಾಕಬೇಕಿತ್ತು" ಅಂದೆ. ಮುಖ ಸಿಂಡರಿಸಿದ ಆಕೆ,
“ಅದೊಂದು ಬೇರೆ ಕೇಡು, ನೋಡು ನಿನ್ನ ಪರಮಗುರು ಏನು ಬರೆದಿದ್ದಾನೆ ಅದರಲ್ಲಿ" ಅಂದಳು.
ನೋಡಿದೆ. ಜೋರಾಗಿ ನಗತೊಡಗಿದೆ.

“ಮೈ ಡಿಯರ್, ನನಗೆ ಸ್ತನಪಾನದ ಬಗ್ಗೆ ಅಷ್ಟೆಲ್ಲ ಗೊತ್ತಿಲ್ಲ; ಆದರೆ ಸ್ತನಗಳ ಬಗ್ಗೆ ಗೊತ್ತು. ಅವುಗಳಲ್ಲಿ ಚಿಕ್ಕವು, ಕಸುಗಾಯಿಯಂತಹವು, ಮಾವಿನ ಹಣ್ಣಿನಂಥವು, ಉಬುಕಿ ಬಂದಂಥವು, ಮುಖವೆತ್ತಿ ನಿಂತ ಹಾಗಿರುವವು, ಜೋಲಾಡುವಂಥವು, ಎದೆಯ ಮೇಲೆಲ್ಲ ಹರಡಿದಂತಿರುವಂಥವು, ಇಳಿ ಬಿದ್ದಂಥವು-ಎಲ್ಲ ತರಹದ ಮೊಲೆಗಳೂ ಇಷ್ಟ. ತುಂಬ ಇಷ್ಟ" ಎಂದು ಅವರೇ ಕೈಯ್ಯಾರೆ ಬರೆದು ಅಂಚೆ ಡಬ್ಬಿಗೆ ಹಾಕಿದ್ದರು. ಮೊದಲೇ ನನ್ನ ಗೆಳತಿ ವಿಪರೀತ ಮಡಿವಂತಳು. ಸ್ತನಪಾನದ ಅನುಕೂಲಗಳನ್ನು ಪ್ರತಿ ತಾಯಿಗೂ ತಿಳಿಸುವಂತಹ religious zeal ಇರುವಾಕೆ. ಅಂಥ ಮಡಿವಂತಳಿಗೆ ಈ ತೆರನಾದ ಮೊಲೆಗಳ ವರ್ಣನೆ ಮಾಡುವಂಥ ಪತ್ರ ಬರೆದುಬಿಡೋದೇ, ಅಜ್ಜ?


yes, ಅವರಲ್ಲಿ ಆ ಥರದ ನಿರುಪದ್ರವಿ ಪೋಲಿತನ ಇತ್ತು. ಆದ್ದರಿಂದಲೇ ಅವರು ಅಷ್ಟು ದೀರ್ಘಕಾಲ ಅಷ್ಟು ಸಂತೋಷದಿಂದ ಬದುಕಿದರು. ಅದನ್ನೇ ಬರೆದರು. ಸಾಯುವುದಕ್ಕೆ ಕೆಲವೇ ದಿನಗಳಿಗೆ ಮುಂಚೆಯೂ ಅವರೊಂದು ಕಾದಂಬರಿ ಬರೆದರು. ನೀವು ಓದಲೇಬೇಕಾದ ಮತ್ತು ಗಮನಿಸಲೇಬೇಕಾದ ಒಂದು ಕೃತಿಯೆಂದರೆ, ‘Delhi, a novel’. ವಿಪರೀತ ಬರೆಯುತ್ತಿದ್ದ ಮತ್ತು ಸಾಯುವ ತನಕ ಕಂಪ್ಯೂಟರು, ಟೈಪ್‌ರೈಟರು ಮುಟ್ಟದೆ ಕೈ ಬರಹದಲ್ಲೇ ಬರೆಯುತ್ತಿದ್ದ ಖುಷ್ವಂತ್ ಅಷ್ಟಿಷ್ಟಲ್ಲ; ಅಗಾಧವಾಗಿ, ಓತಪ್ರೋತವಾಗಿ ಬರೆದರು. ಆದರೆ ‘Delhi’ ಕಾದಂಬರಿ ಬರೆಯಲು ಅವರು ತೆಗೆದುಕೊಂಡಿದ್ದು ಪೂರ್ತಿ ಇಪ್ಪತ್ತು ವರ್ಷ! He was religious about his writing. ದೇವರ ಮೇಲೆ ಹೂವು ತಪ್ಪಿದರೂ, ಅವರ ಬೆಳಗಿನ ಜಾವದ ಬರವಣಿಗೆ ತಪ್ಪುತ್ತಿರಲಿಲ್ಲ. ಸಾಯಂಕಾಲದ ಸ್ಕಾಚ್ ತಪ್ಪುತ್ತಿರಲಿಲ್ಲ. ನನ್ನ ಬಗ್ಗೆ ಅವರಿಗೆ ಪ್ರೀತಿಯಿತ್ತು. ಎಲ್ಲ ಕಿರಿಯರ ಬಗ್ಗೆಯೂ ಅದಿರುತ್ತಿತ್ತು. ನನ್ನ ಇನ್ನೊಬ್ಬ ಗೆಳತಿ ತಾನು ಮನೆ ಕಟ್ಟುತ್ತೇನೆಂದು ಹೊರಟಾಗ ದಿಲ್ಲಿಯಿಂದ ಅವಳಿಗೆ ಇಪ್ಪತ್ತೈದು ಸಾವಿರ ರುಪಾಯಿ ಕಳಿಸಿ;This is out of love ಎಂದು ಪೋಸ್ಟ್ ಕಾರ್ಡ್ ಬರೆದಿದ್ದರು. ಅಂಥ ಔದಾರ್ಯವಿತ್ತು. ಈ ಕಾದಂಬರಿ ನನಗೆ ಕೊಡಿ, translateಮಾಡ್ತೀನಿ ಅಂದರೆ ಮುಲಾಜಿಲ್ಲದೆ,

“ಪೈಸಾ ಕಿತ್ನಾ ದೇತಾಹೈ?" ಅಂದಿದ್ದರು. ಆ ಲೋಭಿ ಗುಣವೂ ಇತ್ತು. ಖುಷ್ವಂತ್‌ರನ್ನು ‘ಇವರು ಹೀಗೇ’ ಎಂದು frame ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಇನ್ನೇನು ತೊಂಬತ್ತೆಂಟು ತೊಂಬತ್ತೊಂಬತ್ತಾಗುತ್ತಾ ಬಂತು, ಕಡೆಯ ಬಾರಿಗೆ ಒಮ್ಮೆ ನೋಡಿ ಬರೋಣ ಅನ್ನಿಸಿ ನವೆಂಬರ್ ಇಪ್ಪತ್ತೈದರಂದು (ಕಳೆದ ವರ್ಷ) ದಿಲ್ಲಿಗೆ ಹೋದಾಗ ಅವರ ಮನೆ ನಂಬರಿಗೆ ಪೋನು ಮಾಡಿದ್ದೆ. ‘ಖಂಡಿತ ಬರಬೇಡಿ. ಅವರು ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿಲ್ಲ’ ಅಂದಿದ್ದ ಅವರ ಸಹಾಯಕ. ಅದೊಂದು ತೆರನಾದ ಕೋಮಾ. ಅವರು ಚೇತರಿಸಿಕೊಳ್ಳಲೇ ಇಲ್ಲ. ಯಾವ ನಿದ್ರೆಯಲ್ಲಿದ್ದಾಗ ಸಾವು ಕದ್ದೊಯ್ದಿತೋ ಗೊತ್ತಿಲ್ಲ. ಅವರ ವ್ಯಕ್ತಿತ್ವ, ಬರವಣಿಗೆ, ವರ್ತನೆ, ನಗೆ, ಹಾಸ್ಯ, ಪೋಲಿತನ-ಇವೆಲ್ಲವನ್ನೂ ಯಾವ ಸಾವೆಂಬ ಸಾವು ಕೊಂಡೊಯ್ಯಲು ಸಾಧ್ಯ? He was with us.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books