Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂಥ ನಂಬಿಕೆಗಳಿಗೆ ಸಂಬಂಧದ ಆರೋಪ ಹೊರಿಸುವುದೇಕೆ?

ಇನ್ನೇನು ಕೆಲವೇ ದಿನ; ನನ್ನ ಪುಟ್ಟ ಗೆಳತಿಯೊಬ್ಬಳ ಮದುವೆ ಇದೆ. ನಾನು ಸಾಮಾನ್ಯವಾಗಿ ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವುದಿಲ್ಲವೆಂಬುದು ನಿಮಗೇ ಗೊತ್ತು. ಅಲ್ಲಿ ಸಂಭ್ರಮವಿರುತ್ತದೆ. crowd ಇರುತ್ತದೆ. ನಾನೊಬ್ಬ ಹೋಗದೆ ಇದ್ದರೆ ಅಂಥ ಕೊರತೆಯೇನೂ ಆಗುವುದಿಲ್ಲ. ಆದರೆ ದುಃಖಿತರ ಮನೆಗೆ, ಅವರು ಕರೆಯದಿದ್ದರೂ ಹೋಗುತ್ತೇನೆ. ಹೆಚ್ಚು ಮಾತನಾಡದಿರಬಹುದು. ನೋವಿನಲ್ಲಿರುವ ಜೀವಿಯ ಪಕ್ಕದಲ್ಲಿ ಸುಮ್ಮನೆ ಒಂದಷ್ಟು ಹೊತ್ತು ಕುಳಿತಿದ್ದು ಎದ್ದು ಬರುತ್ತೇನೆ. ಸಾಕು. ಅದೇ ಸಾಂತ್ವನ. ನಾವು ಯಾರ ದುಃಖವನ್ನೂ ಶಾಶ್ವತವಾಗಿ ಅಳಿಸಿ ಹಾಕಲಾಗುವುದಿಲ್ಲ. ಆದರೆ ನಮ್ಮ ಉಪಸ್ಥಿತಿ ಕೊಂಚ ಮಟ್ಟಿಗೆ ಅವರ ನೋವನ್ನು ‘ತಮಣಿ’ ಮಾಡುತ್ತದೆ. ಸುಖದಲ್ಲಿದ್ದಾಗ ಅವರಿಗೆ ನಮ್ಮ ನೆನಪೂ ಆಗದಿರಬಹುದು.No problemr. ಆದರೆ ದುಃಖ, ನಿರಾಸೆ, ಒಂಟಿತನಗಳು ಎಂಥವರಲ್ಲೂ ಒಂದು ಆಸೆ ಮೂಡಿಸುತ್ತವೆ. ‘ಅವನು ಬರಬೇಕು. ಬಂದಿದ್ದಿದ್ದರೆ ಕೊಂಚ ಮನಸಿಗೆ ನಿರಾಳವಾದೀತು’ ಅಂತ ನಿಜಕ್ಕೂ ಅವರಿಗೆ ಅನ್ನಿಸುತ್ತದೆ. ಅದಕ್ಕಾಗಿ ನಾನು ಖುದ್ದಾಗಿ ಹೋಗುತ್ತೇನೆ. ಪತ್ರ ಬರೆಯುತ್ತೇನೆ, ತೀರಾ ಸಾಧ್ಯವಾಗದೇ ಇದ್ದರೆ “I share your grief" ಅಂತ ಒಂದು ಸಾಲನ್ನಾದರೂ ಅವರಿಗೆ ಮುಟ್ಟಿಸುತ್ತೇನೆ.

ಯಾಕೆಂದರೆ, ನಾವು ಯಾರನ್ನೋ ಮನಸ್ಸಿನೊಳಗೆ ಇಟ್ಟುಕೊಂಡೇ ನಿರಾಳವಾಗಿ ಬದುಕುತ್ತಿರುತ್ತೇವೆ. ‘ಅವನಿದ್ದಾನೆ ಬಿಡು’ ಅಥವಾ ‘ಅವಳಿದ್ದಾಳೆ ಬಿಡು’ ಎಂಬ ಪುಟ್ಟ ಸೆಂಟೆನ್ಸು ನಿಮ್ಮನ್ನು ಹಾಗೆ ನಿರಾಳವಾಗಿರುವಂತೆ ಪ್ರೋತ್ಸಾಹಿಸುತ್ತಿರುತ್ತದೆ.That's true also. ತೀರಾ ತೊಂದರೆಯಾದರೆ, ತಲೆ ಹೋಗುವಂಥ ಪರಿಸ್ಥಿತಿ ಬಂದರೆ, ‘ಅವನಿದ್ದಾನೆ ಬಿಡು’ ಅಂತ ನಮಗೇ ಗೊತ್ತಿಲ್ಲದೆ ನಮ್ಮ ಮನಸ್ಸು ನಂಬಿಕೊಂಡು ಬಿಟ್ಟಿರುತ್ತದೆ. ಇದು ಕೇವಲ ನನ್ನ-ನಿಮ್ಮ ಪ್ರಶ್ನೆಯಲ್ಲ. ಜಗತ್ತಿನ ಪ್ರತಿ ಜೀವವೂ ಈ ತೆರನಾದ ನಂಬಿಕೆಯಿಂದ ಮುಂದಕ್ಕೆ ಕಾಲೆಳೆಯುತ್ತಿರುತ್ತದೆ. ಇದು ಅಷ್ಟು ಸಲೀಸಾಗಿ ಸೈಂಟಿಫಿಕ್ ಆಗಿ ವಿವರಿಸುವಂತಹುದಲ್ಲ. It happens, ಅಷ್ಟೇ. ಕೆಲವು ಸಲ ಸೂತ್ರ-ಸಂಬಂಧ ಇಲ್ಲದೆಯೇ, ಒಬ್ಬರಿಗೊಬ್ಬರು ನೋಡದೆಯೇ ಒಂದು ತೆರನಾದ ನಂಬಿಕೆಯ ಭಾವ ಪ್ರತಿಯೊಬ್ಬರಲ್ಲೂ ಮೂಡಿಬಿಟ್ಟಿರುತ್ತದೆ. ಈ ಕಾನ್ಫಿಡೆನ್ಸು ಸರಕಾರದ ಪರಿಧಿಯಲ್ಲಿ ಮೂಡಲಾರದು. ವಯಸ್ಸಾದರೇನಂತೆ, ಹೇಗೂ ವೃದ್ಧಾಪ್ಯ ವೇತನ ಸಿಗುತ್ತದೆ ಅಂತ ನಾವಂದುಕೊಳ್ಳುವುದಿಲ್ಲ.Ofcourse, ನನ್ನ ಬ್ಯಾಂಕ್ ಬ್ಯಾಲೆನ್ಸ್ ಇಷ್ಟಿದೆ, ಅದು ನನ್ನ ನಿಸ್ಸಹಾಯಕ ದಿನಗಳಲ್ಲಿ ನನ್ನ ಕೈ ಹಿಡಿಯುತ್ತದೆ ಎಂದು ನಂಬುವುದು ಬೇರೆ. ದುಡ್ಡು ಎಷ್ಟೇ ಇರಲಿ; ಒಬ್ಬ ವ್ಯಕ್ತಿಯ ಮೇಲೆ ಮೂಡುವ ನಂಬಿಕೆಯನ್ನು ಅದು ಮೀರಲಾರದು.
ನನ್ನ ಪುಟ್ಟ ಗೆಳತಿಯ ಮದುವೆಯ ಬಗ್ಗೆ ಏಕೆ ಬರೆದೆ ಅಂದರೆ, ಅವಳು ನನ್ನ ತುಂಬ ಫ್ರೆಂಡ್ ಅಲ್ಲ. ಲೆಕ್ಕ ಹಾಕಿದರೆ ಆರೇಳು ಸಲ ಭೇಟಿಯಾಗಿದ್ದೇವೆ. ಸುಮಾರು ಇಪ್ಪತ್ತೈದು ಸಲ ಪೋನ್‌ನಲ್ಲಿ ಮಾತನಾಡಿದ್ದೇವೆ. ಆಕೆ ನನ್ನ ವಿಪರೀತದ depressed ಕ್ಷಣಗಳಲ್ಲಿ ನನ್ನನ್ನು ಎಲ್ಲೋ ಕುಳಿತುಕೊಂಡೇ ಒಂದು ಸಮಾಧಾನದ ಮಾತು ಅಂದಿದ್ದಾಳೆ. ಕೆಲವು ಸಲ ಎಚ್ಚರಿಸಿದ್ದಾಳೆ. ಬೈದಿದ್ದಾಳೆ. ಅವಳು ಖಿನ್ನಳಾದಾಗ ನಾನು ನಿಜವಾದ ಮುತುವರ್ಜಿ ವಹಿಸಿ ಅವಳಿಗೆ ಸಾಂತ್ವನ ಹೇಳಿದ್ದೇನೆ. ಕೊಂಚ ನಗುವಂತೆ ಮಾಡಿದ್ದೇನೆ. ಅವಳ ಭಾವಕ್ಕೆ, ದುಃಖ, ಬೇಸರಿಕೆಗಳಿಗೆ ಹೆಗಲಾಗಿದ್ದೇನೆ.

ಅಷ್ಟು ಸಾಕಲ್ಲವೇ? ಅದಕ್ಕೆ ಸಂಬಂಧದ ಹಣೆಪಟ್ಟಿ ಹಚ್ಚಬಾರದು. ‘ಸಂಬಂಧಗಳಿವೆ’ ಅಂತ ಖಂಡಿತವಾಗ್ಯೂ ಆಪಾದಿಸಬಾರದು. ‘ಹಾಥ್ ಸೆ ಛೂಕೆ ಇಸ್ ರಿಷ್ತೋಂಕಾ ಇಲ್‌ಜಾಮ್ ನ ದೋ’ ಕೈಯಲ್ಲಿ ಮುಟ್ಟಿ, ತಾಕಿ ಇದಕ್ಕೆ ಸಂಬಂಧವೆಂಬ ಆರೋಪ ಹೊರಿಸಬೇಡ ಅಂತ ಬರೆದವರು ಶ್ರೇಷ್ಠ ಕವಿ ಗುಲ್ಜಾರ್. He is right. ಯಾವುದೇ ಸಂಬಂಧಕ್ಕೆ ‘ಇದು ಇಂತಹುದೇ’ ಅಂತ ನಾವು ಹೆಸರಿಡಬಾರದು. ಹಾಗೆ ಹೆಸರಿಟ್ಟ ಮರುಕ್ಷಣ ನಾವು ಯಥಾಪ್ರಕಾರದ frameಗೆ ಒಳಪಟ್ಟು ಬಿಡುತ್ತೇವೆ.

ಈ ಬಗ್ಗೆ ನಿಮಗೂ ಒಂದಷ್ಟು ಗೊತ್ತು. ನನ್ನ ಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳು ನನಗೊಂದು ಪೈಸೆ ಕೊಡಲಿಲ್ಲ. ‘ಇವನು ನನ್ನ ಸೋದರಳಿಯ ಕಣ್ರೀ’ ಅಂತ ಹೇಳಿಕೊಳ್ಳಲಿಲ್ಲ. ಎಲ್ಲರ ಮಧ್ಯೆ ಇರುವಾಗ ‘ನೀವು’ ಅನ್ನುತ್ತಿದ್ದೆ. ಇಬ್ಬರೇ ಇರುವಾಗ ‘ಓ ಮಾಮಾ.. ಯಾವಾಗ ಬಂದೆ’ ಎಂಬ ಏಕವಚನ. ನಿಜ, ಆತ ಖಾಯಿಲೆ ಬಿದ್ದಾಗ ಹಟಕ್ಕೆ ಬಿದ್ದು, ಎಳೆದು ತಂದು ನನ್ನ ಮನೆಯಲ್ಲಿ ತುಂಬ ದಿನ ಇಟ್ಟುಕೊಂಡೆ. Ofcourse, ಆತನನ್ನು ಮಗುವಿನಂತೆ ನೋಡಿಕೊಂಡವಳು ಲಲಿತೆ. ಆಕೆ ಮಾವನಿಗೆ ಏನಾಗಬೇಕು? ಒಂದು ವಯಸ್ಸಾ, ಒಂದು ಜಾತಿಯಾ, ಓರಗೆಯಾ, ರಕ್ತ ಸಂಬಂಧಿಯಾ, ಒಂದು ಊರಾ, ಒಂದು tasteಗೆ ಸೇರಿದವರಾ? Nothing. ನಾನು ಅಂತಿದ್ದೆ ಎಂಬ ಕಾರಣಕ್ಕೆ ಅವಳೂ ‘ಮಾಮಾ’ ಅನ್ನುತ್ತಿದ್ದಳು. ಆದರೆ ಕಡೆಯುಸಿರಿನ ತನಕ ಮಗುವಿನಂತೆ ಆತನನ್ನು ನೋಡಿಕೊಂಡಳು. ನಾನೇ ಕೊಂಚ ಪಡಪೋಶಿ. ‘ಮಾವನಿಗೆ ಏನಾಗುತ್ತೆ ಬಿಡು’ ಅಂತ ಅಂದುಕೊಂಡೇ ದಿನ ನೂಕಿದವನು. ಆದರೆ ಆತ ತೀರಿಕೊಂಡ ಅಂದ ತಕ್ಷಣ ‘ಇನ್ನೇನು ಗತಿ? ನಾನು ಒಬ್ಬಂಟಿಗನಾಗಿ ಹೋದೆ. ಇವತ್ತಿನಿಂದ ನಾನು ಅನಾಥ’ ಎಂಬ ಭಾವ ನನ್ನನ್ನು ಮೋಡದಂತೆ ಆವರಿಸಿಕೊಂಡುಬಿಟ್ಟಿತು. ಈ ಕ್ಷಣಕ್ಕೂ ಆ ಭಾವ ಹೋಗಿಯೇ ಇಲ್ಲ. ನನಗೆ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಎಲ್ಲಾ ಇದ್ದಾರೆ. ಆದರೂ ಇದೊಂದು ಭಾವ, ನನ್ನ ಅಮ್ಮನ ನಿರ್ಗಮನದ ಘಳಿಗೆಯಲ್ಲಿ ಆವರಿಸಿಕೊಂಡಿತ್ತಲ್ಲ? ಅದು ಈ ಕ್ಷಣಕ್ಕೂ ನನ್ನಿಂದ ಬೇರೆಯಾಗಿಲ್ಲ.
ಇದು ಯಾಕೆ ನನಗೆ ತೀವ್ರವಾಗಿ ಅನ್ನಿಸುತ್ತದೆ ಅಂದರೆ, ‘ಓ ಮನಸೇ..’ ಪತ್ರಿಕೆಯ ‘ಸಮಾಧಾನ’ ಅಂಕಣಕ್ಕೆ ಓದುಗರು ಪತ್ರ ಬರೆಯುತ್ತಾರಲ್ಲ; ಅವುಗಳನ್ನು ಓದಿ, ಉತ್ತರ ಬರೆಯುತ್ತೀನಲ್ಲ-ಅದರಿಂದಾಗಿ ಅನ್ನಿಸುತ್ತದೆ. I am scared. ಕೆಲವರು ಎಂತೆಂಥ ಆಂತರಿಕ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಅಂದರೆ-ಅವರಿಗೆ ನಿಜಕ್ಕೂ ‘ಸಮಾಧಾನ’ ಹೇಳುವ ತಾಕತ್ತು ನನ್ನಲ್ಲಿ ಇದೆಯಾ? ಯಾಕಿಷ್ಟು ನಂಬುತ್ತಾರೆ? ಎಂತೆಂಥ ಘೋರ ಹಾಗೂ ಪರ್ಸನಲ್ ಆದ ಸಂಗತಿಗಳನ್ನು ನನಗೆ ಹೇಳುತ್ತಾರೆ! ನನಗೇ ಯಾಕೆ ಹೇಳಿಕೊಳ್ಳುತ್ತಾರೆ? ಪ್ರಜಾವಾಣಿ ಸಂಪಾದಕರಿಗೆ, ಸಂಜೆವಾಣಿ ನಡೆಸುವವರಿಗೆ ಇಂಥ ಪತ್ರಗಳು ಬರುವುದಿಲ್ಲ. ನನಗೇ ಯಾಕೆ ಬರುತ್ತವೆ? ಅದು ನನ್ನನ್ನು ನಿಜಕ್ಕೂ ಹೆದರಿಸುತ್ತದೆ. ಅವರು ಯಾರು? ಯಾವ ಊರು? ಯಾವ ಜಾತಿ? ಯಾವ ಬಣ್ಣ? ಅವರ ವಯಸ್ಸೆಷ್ಟು? ಉಹುಂ, ಯಾವುದೂ ನನಗೆ ಗೊತ್ತಿರುವುದಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ನಾನು ಮಾಡುವುದಿಲ್ಲ. ಅದರೆಡೆಗೆ ಒಂದು impersonal ಆದ ನಿರ್ಭಾವುಕತೆ ಹೊಂದಿರುತ್ತೇನೆ. ಬರೆಯುವಾಗ, ಅವರ ಸಮಸ್ಯೆಗೆ ‘ಸಮಾಧಾನ’ ಹೇಳುವಾಗ ಒಂದಕ್ಷರ ಜಾಸ್ತಿ, ಒಂದು ಸೆಂಟೆನ್ಸ್ ಕಡಿಮೆ ಆಗದಂತೆ ಎಚ್ಚರ ವಹಿಸಿ, ಅಳೆದು-ತೂಗಿ ಬರೆಯುತ್ತೇನೆ. ನೋಡಲು ನಿಂತರೆ, ಅವರ‍್ಯಾರೂ ನನ್ನ ಸಂಬಂಧಿಕರಲ್ಲ; ಸ್ನೇಹಿತರಲ್ಲ. ಅಸಲಿಗೆ ಅವರನ್ನು ನಾನು ನೋಡಿಯೂ ಇಲ್ಲ. ನೋಡುವುದೂ ಇಲ್ಲವೇನೋ? ‘ಆದರೆ ಅವನಿದ್ದಾನೆ ಬಿಡು’ ಎಂಬ confidence ಅನ್ನು ನನಗೂ ಗೊತ್ತಿಲ್ಲದೆ ನಾನು ನೀಡಿ ಬಿಟ್ಟಿರುತ್ತೇನೆ, ಸಿರ್ಫ್ ಬರವಣಿಗೆಯ ಮೂಲಕ.

ಫ್ರೆಂಡ್ಸ್, ಈ ಕೆಲಸ-ಈ ಪಾತ್ರದ ನಿರ್ವಹಣೆ ನೀವೂ ಮಾಡಿರುತ್ತೀರಿ, atleast, ಕೆಲವರಿಗೆ ಸಂಬಂಧಿಸಿದಂತೆ. ನಿಮ್ಮ ತಂದೆ ತಾಯಿಗೆ, ಅಕ್ಕ ತಂಗಿಗೆ, ಅತ್ತಿಗೆಗೆ, ಅಣ್ಣತಮ್ಮಂದಿರಿಗೆ, ಗೆಳೆಯರಿಗೆ, ಪರಿಚಿತರಿಗೆ ಅಥವಾ ಪರಿಚಯವೇ ಇಲ್ಲದವರಿಗೆ ಈ ತೆರನಾದ ಒಂದು ಕಾನ್ಫಿಡೆನ್ಸ್ ಕಲ್ಪಿಸಿಕೊಟ್ಟುಬಿಟ್ಟಿರುತ್ತೀರಿ. ಅದು ಪ್ರಾಯಶಃ ನಿಮಗೂ ಗೊತ್ತಿರಲಾರದು. ಅಮ್ಮ ತೀರಿಕೊಂಡಾಗ “ಈ ಸಂಕಟದ ಸಮಯದಲ್ಲಿ ಅವಳು ಜೊತೆ ಗಿರಬೇಕಿತ್ತು ಅಥವಾ ಇಲ್ಲಿ ಅವನಿರಬೇಕಿತ್ತು’ ಅಂತ ನಿಮಗನ್ನಿಸುತ್ತದಲ್ಲಾ? ಹಾಗೆಯೇ ಅವರಿಗೂ ಅವರ ಸಂಕಷ್ಟದ ಘಳಿಗೆಯಲ್ಲಿ ನಿಮ್ಮ ಬಗ್ಗೆ ಅವರಿಗೂ ಅನ್ನಿಸಬಹುದು. ಇದಕ್ಕೆ ತುಂಬ logical ಆದ, ತಾರ್ಕಿಕವಾದ ವಿವರ ಇರುವುದಿಲ್ಲ. ನಿಮ್ಮ ಒಂದು ಮಾತು, ಅದಕ್ಕಿಂತ ಮುಖ್ಯವಾಗಿ ನಿಮ್ಮ ಒಂದು role, ಅದನ್ನು ನೀವು ಮಾಡಿದ ರೀತಿ, ನಿಮ್ಮ ಕಣ್ಣು, ನೀವು ಹುಟ್ಟಿಸುವ ಒಂದು ನಂಬಿಕೆ-ಇದೆಲ್ಲ ಅವರಲ್ಲಿ ಅಂತಹ ಭಾವನೆ ಮೂಡಿಸಿ ಬಿಟ್ಟಿರುತ್ತದೆ. ‘ಓ.. ಇವನ್ನು ನನ್ನ ಸಂಕಷ್ಟಕ್ಕೆ ಆಗುತ್ತಾನೆ. ಖಂಡಿತ ಆಗ್ತಾನೆಬಿಡು’ ಎಂಬ ಭಾವ ಅವರಲ್ಲಿ ಮೂಡಿಸಿರುತ್ತದೆ.

Never disappoint them. ನಂಬಿಕೆಯನ್ನು ಹುಸಿಗೊಳಿಸುವುದಿದೆಯಲ್ಲ? ಅದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ. ಅದು breach of trust. ಖಂಡಿತ ಆ ಕೆಲಸ ಮಾಡಬೇಡಿ. ಅದಕ್ಕೆ ಕ್ಷಮೆ ಇಲ್ಲ-ಕೇಳಿದ ಕೂಡಲೆ ಇಷ್ಟು ಲಕ್ಷ ತೆಗೆದುಕೊಟ್ಟುಬಿಡುತ್ತಾನೆ ಅಂತ ಯಾರಾದರೂ ಅಂದುಕೊಂಡರೆ ಅದು foolish. ಆದರೆ ನರಳಿಕೆಯ ಘಳಿಗೆಯಲ್ಲಿ ‘ಅವನಿರುತ್ತಾನೆ’ ಎಂಬ ನಂಬಿಕೆ ಇದೆಯಲ್ಲ? ಆ ತೆರನಾದುದನ್ನು ಯಾವತ್ತು ಮಾಡಬೇಡಿ. ಈ ಜಗತ್ತು ನಡೆಯುತ್ತಿರುವುದೇ ಅಂತಹ ನಂಬಿಕೆಯ ಊರುಗೋಲನ್ನು ಹಿಡಿದು. ಅದನ್ನು ಮುರಿದುಬಿಡಬೇಡಿ. please. ಅದಕ್ಕಿಂತ ದೊಡ್ಡ ಪಾಪವಿಲ್ಲ.

ನಂಗೊತ್ತು: ಒಂದಷ್ಟು ಜೀವಿಗಳು ನನ್ನನ್ನು ಇದೇ ತೆರನಾಗಿ ನಂಬಿಕೊಂಡಿರುತ್ತಾರೆ. ನನ್ನ ವರ್ತನೆಯಲ್ಲಿ, ಮಾತಿನಲ್ಲಿ, ಬರಹಗಳಲ್ಲಿ ಅವರು ಇಂತಹ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಅಥವಾ ಬೆಳೆಸಿಕೊಂಡಿರುತ್ತಾರೆ. ಅವರಿಗೆ ನಿರಾಸೆಯಾಗಬಾರದು. ದ್ರೋಹವಾಗಬಾರದು ಎನ್ನುವಂತಹ ರೀತಿಯಲ್ಲಿ ನಾನು ವರ್ತಿಸುತ್ತಿರುತ್ತೇನೆ. ಅನೇಕ ಸಲ ಅವರು ನನ್ನನ್ನು, ನಾನು ಅವರನ್ನು ನೋಡಿಯೂ ಇರುವುದಿಲ್ಲ. ಆದರೆ ‘ನೋಡೂ, ನಾನು ಹೀಗೇ. ನನ್ನಿಂದ ನಿನಗೆ ದೊರೆಯಬಹುದಾದದ್ದು ಇಷ್ಟೇ’ ಅಂತ ತುಂಬ ಸೂಕ್ಷ್ಮವಾಗಿ ಅವರಿಗೆ ತಿಳಿಸಿರುತ್ತೇನೆ.To be safe. ಅದನ್ನು ತಿಳಿಸಿದ ಮೇಲೆ ಅವರ ನಿರೀಕ್ಷೆಗೆ ತಕ್ಕಂತೆ ವರ್ತಿಸುತ್ತೇನೆ: Nothing more nothing less. ಇಂತಹ ಪಾತ್ರವನ್ನು ಪತ್ರಕರ್ತನಾದ ನಾನೊಬ್ಬನೇ ನಿರ್ವಹಿಸುವುದಿಲ್ಲ. ನಾನು-ನೀವೆಲ್ಲರೂ ನಿರ್ವಹಿಸಬೇಕು. ಅದೇನೇ ತಲೆ ಬಿದ್ದು ಹೋಗಲಿ: ಆ ಕ್ಷಣಕ್ಕೆ ನಾವು ಅವರಿಗೆ ಆಗಲೇಬೇಕು.ಅದಕ್ಕಿಂತ ಶ್ರೇಷ್ಠ ಜೀವನ ಇನ್ನೊಂದಿರಲಾರದು. Be clear. ಅವರು ವಿಪರೀತ ಆಸೆ, ಆಶಯ ಬೆಳೆಸಿಕೊಳ್ಳಲು ಅವಕಾಶಕೊಡದೆ ‘ನಾನು ಇಷ್ಟು ಮಾತ್ರ ಮಾಡಬಲ್ಲೆ’ ಎಂಬುದನ್ನು ಮೊದಲೇ ನಿಮ್ಮ ವರ್ತನೆಯ ಮೂಲಕ ಅವರಿಗೆ ತಿಳಿಯಪಡಿಸಿ. ಇಷ್ಟರ ಮೇಲೆ ಅವರಿಷ್ಟ.

ಇದನ್ನೆಲ್ಲ ಯಾಕೆ ಹೇಳಿದೆ ಅಂದರೆ, ಮದುವೆಯಾಗಲಿರುವ ಆ ಪುಟ್ಟ ಗೆಳತಿ “ರವೀ, ನಾವು ನಾಲ್ಕೈದು ಜನ ಆ ರಿಜಿಸ್ಟ್ರಾರ್ ಆಫೀಸಿನಲ್ಲಿ ಹಾಜರಿರುತ್ತೇವೆ. ನೀವು ಬರಬೇಕು. ನಿಮ್ಮ ಕರ್ತವ್ಯವಿಷ್ಟೆ-ನೀವು ನಮ್ಮ ಮದುವೆಯ papersಗೆ ಸಾಕ್ಷಿಯಾಗಿ ಸಹಿ ಮಾಡಬೇಕು. ಬೇರೇನೂ ನಿರೀಕ್ಷೆ ನನಗಿಲ್ಲ" ಅಂದಳು. ಅವತ್ತು ತಲೆ ಬಿದ್ದು ಹೋಗಲಿ: ಅಲ್ಲಿ ನಾನಿರುತ್ತೇನೆ. ಮತ್ತೇನನ್ನಾದರೂ ನಾವು ಕಳೆದುಕೊಳ್ಳಬಹುದು: ನಂಬಿಕೆಯನ್ನಲ್ಲ. ಆಕೆಗೆ ಒಂದರ್ಥದಲ್ಲಿ ನಾನು God father. ಆಕೆ ನನ್ನ ಮಗಳಾ? ಹಾಗಂತ ನಾನೇಕೆ ಸಂಬಂಧದ ಅಪವಾದ ಹೊರಿಸಲಿ? ನನ್ನ ಜವಾಬ್ದಾರಿ ನನ್ನದು. ಏನಂತೀರಿ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books