Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಫೇಸ್‌ಬುಕ್ ಎಂಬ ಮುಖೇಡಿಗಳ ಸಾಮ್ರಾಜ್ಯ

ನಿಮಗೆ ಕೈ ಕೆರೀತಾ ಇದೆಯಾ? ಯಾರೊಂದಿಗಾದರೂ ಜಗಳ ಆಡಬೇಕು ಅನ್ನುವ ಹುಮ್ಮಸ್ಸು ಉಕ್ಕಿ ಹರೀತಿದ್ಯಾ? ವಿನಾಕಾರಣ ಇನ್ನೊಬ್ಬರ ತೇಜೋವಧೆ ಮಾಡಿ ತಮಾಷೆ ನೋಡೋಣ ಎಂದು ಅನಿಸುತ್ತಿದೆಯಾ ಅಥವಾ ಮಾಡೋದಕ್ಕೆ ಏನೂ ಕೆಲಸವಿಲ್ಲವಾ?
ಹಾಗಿದ್ದರೆ ತಡ ಯಾಕೆ? ಫೇಸ್‌ಬುಕ್ಕಿಗೆ ಹೋಗಿ. ನಿಮ್ಮ ಸ್ಟೇಟಸ್‌ನಲ್ಲಿ ಯಾರ ಮೇಲಾದರೂ ಒಂದು ಕಲ್ಲು ಒಗೆಯಿರಿ. ನಿಮ್ಮ ಒಂದು ಕಲ್ಲಿಗೆ ಪ್ರತಿಯಾಗಿ ಆ ಕಡೆಯಿಂದ ಹತ್ತು ಕಲ್ಲುಗಳು ವಾಪಸ್ ಬರುತ್ತವೆ. ಇಬ್ಬರ ಜಗಳಕ್ಕೆ ಮೂರನೆಯವನು, ನಾಲ್ಕನೆಯವನು, ಐದನೆಯವನು ಕೊನೆಗೆ ನೂರಾರು ಜನ ಸೇರಿಕೊಂಡು ಅದೊಂದು ದೊಡ್ಡ ಯುದ್ಧದ ಸ್ವರೂಪ ಪಡೆದುಕೊಳ್ಳುತ್ತದೆ. ನಿಮಗೆ ಗುರುತು ಪರಿಚಯ ಇಲ್ಲದೇ ಇರುವವರು, ಹೆಸರೇ ಕೇಳದ ಅನಾಮಿಕರು ಈ ಜಗಳದಲ್ಲಿ ಸೇರಿಕೊಳ್ಳುತ್ತಾರೆ. ಆರಂಭದಲ್ಲಿ ಸೈದ್ಧಾಂತಿಕ ವಾಗ್ವಾದದ ರೂಪದಲ್ಲಿದ್ದ ಸಮರ ಕೊನೆಗೆ ವೈಯಕ್ತಿಕ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಒಬ್ಬಾತ ‘ಬಾಯಿ ಮುಚ್ಕೊಂಡಿರಯ್ಯಾ, ನಿಂದೇನೂಂತ ನಂಗೊತ್ತಿಲ್ವಾ’ ಅನ್ನುತ್ತಾನೆ, ಮತ್ತೊಬ್ಬಾಕೆ ‘ಶಟಪ್, ಯೂ ಈಡಿಯಟ್’ ಅನ್ನುತ್ತಾಳೆ, ಇನ್ನೊಬ್ಬ ‘ನಿಮ್ಮಂಥವರಿಂದಲೇ ಈ ದೇಶ ಹಾಳಾಗಿರೋದು’ ಅನ್ನುವ ತೀರ್ಪು ಕೊಡುತ್ತಾನೆ. ಲೈಕುಗಳ ಸುರಿಮಳೆ, ಕಾಮೆಂಟುಗಳ ಬಿರುಮಳೆಯಲ್ಲಿ ಫೇಸ್‌ಬುಕ್ ಅನ್ನುವ ಕುರುಕ್ಷೇತ್ರ ತೊಯ್ದು ತೊಪ್ಪೆಯಾಗುತ್ತದೆ. ಯಾವುದೋ ಒಂದು ಹಂತದಲ್ಲಿ ನೀವು ಈ ಜಗಳದಿಂದ ದೂರ ಸರಿದರೂ ಮಿಕ್ಕವರು ಮುಂದುವರಿಸುತ್ತಾರೆ. ಕೊನೆಗೆ ಯಾರು ಸೋತರು, ಯಾರು ಗೆದ್ದರು ಅನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ, ಒಂದು ದಿನ ರಂಜನೀಯವಾಗಿ ಕಳೆದುಹೋಯಿತಲ್ಲ ಅನ್ನುವ ಸಂತೃಪ್ತ ಭಾವವೇ ಮುಖ್ಯ. ನಿಮ್ಮ ಒಂದು ತರಲೆ ವಾಕ್ಯ ಸೃಷ್ಟಿಸಿದ ಕೋಲಾಹಲಗಳನ್ನು ನೋಡಿ ನೀವೇ ಕಕ್ಕಾಬಿಕ್ಕಿಯಾಗುತ್ತೀರಿ.

ತರಲೆ ಬೇಡ, ಯಾವುದಾದರೂ ಗಂಭೀರ ವಿಚಾರದ ಬಗ್ಗೆ ಮಾತಾಡೋಣ ಅನ್ನುವ ಇರಾದೆ ನಿಮಗಿದ್ದರೆ ಕನ್ನಡ ಸಾಹಿತ್ಯಲೋಕ ಅಥವಾ ರಾಜಕೀಯ ಸನ್ನಿವೇಶದ ಬಗ್ಗೆ ಒಂದು ಸ್ಟೇಟಸ್ ಹಾಕಿ ನೋಡಿ. ಆಗಲೂ ಅದೇ ಮಂದಿ ಅತ್ಯುತ್ಸಾಹದಿಂದ ಕಾಮೆಂಟುಗಳನ್ನು ಒಗೆಯುವುದಕ್ಕೆ ಶುರು ಮಾಡುತ್ತಾರೆ. ನೀವು ಯಾರು, ನಿಮ್ಮೂರು ಯಾವುದು, ನಿಮ್ಮ ಜಾತಿ, ಧರ್ಮ ಯಾವುದು, ನೀವು ಗಂಡೋ ಹೆಣ್ಣೋ, ಸಾಹಿತ್ಯದಲ್ಲಾದರೆ ನೀವು ಯಾವ ಗುಂಪಿಗೆ ಸೇರಿದವರು, ಇತ್ಯಾದಿ ಸಂಗತಿಗಳೂ ಈ ಜಗಳದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಗಳ ತುಂಬಾ ಇಂಟರೆಸ್ಟಿಂಗ್ ಆಗಿದ್ದರೆ ಒಂದು ವಾರದ ತನಕ ನಡೆಯುವುದೂ ಉಂಟು. ಕನ್ನಡ ಸಿನೆಮಾಗಳೇ ಒಂದು ವಾರ ಓಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಫೇಸ್‌ಬುಕ್ ಚರ್ಚೆಗಳ ಈ ಸಾಧನೆ ಮೆಚ್ಚತಕ್ಕದ್ದೇ ಸರಿ.

ಈ ಮಾತಿಗೆ ಡಬ್ಬಿಂಗ್ ಜಗಳವನ್ನೇ ಉದಾಹರಣೆಯನ್ನಾಗಿ ನೀಡಬಹುದು. ಕನ್ನಡ ಚಿತ್ರರಂಗದಲ್ಲಿ ಪರಭಾಷೆಯ ಚಿತ್ರಗಳ ಡಬ್ಬಿಂಗ್‌ಗೆ ಅವಕಾಶ ನೀಡಬೇಕೇ ಬೇಡ್ವೇ ಅನ್ನುವುದು ಪ್ರಶ್ನೆ. ಡಬ್ಬಿಂಗ್ ಪರ ಮಾತಾಡಿದವರಿಗೆ ಕನ್ನಡ ದ್ರೋಹಿಗಳ ಪಟ್ಟ ಕಟ್ಟಲಾಯಿತು. ಡಬ್ಬಿಂಗ್ ತಮ್ಮ ಆಜನ್ಮಸಿದ್ಧ ಹಕ್ಕು ಎಂದು ಎದುರಾಳಿ ಗುಂಪು ಕೂಗಾಡಿತು. ಡಬ್ಬಿಂಗ್ ಇರಲಿ ಅನ್ನುವವರ ಎದೆ ಮೇಲೆ ನನ್ನ ಕಾಲು ಎಂದು ಜಗ್ಗೇಶ್ ಘರ್ಜಿಸಿದಕ್ಕೆ ಪ್ರತಿಯಾಗಿ ಎಲ್ಲಿದೆ ಆ ಕಾಲು ಎಂದು ನೂರು ಜನರು ಫೇಸ್‌ಬುಕ್ಕಲ್ಲಿ ಪ್ರಶ್ನಿಸಿದರು. ಇನ್ನೇನು ಫೇಸ್‌ಬುಕ್ಕಲ್ಲಿ ರಕ್ತಕ್ರಾಂತಿಯೇ ಆಗಿಹೋಗುತ್ತದೆ ಎಂದು ಅಂದುಕೊಳ್ಳುವಷ್ಟರಲ್ಲಿ ಆ ವಿವಾದವೇ ತಣ್ಣಗಾಯಿತು. ಫೇಸ್‌ಬುಕ್ ವೀರರು ಹೊಸ ಇಶ್ಯೂಗಾಗಿ ಹುಡುಕಾಡುವುದಕ್ಕೆ ಶುರು ಮಾಡಿದರು.

ಇಶ್ಯೂ ಆಧಾರಿತ ಚರ್ಚೆಗಳಿಗಿಂತ, ವ್ಯಕ್ತಿ ಕೇಂದ್ರೀಕೃತ ಚರ್ಚೆಗಳೇ ಫೇಸ್‌ಬುಕ್ ಸದಸ್ಯರಿಗೆ ಹೆಚ್ಚು ಸಂತೋಷ ಕೊಡುತ್ತವೆ. ಯಾಕೆಂದರೆ ತಮ್ಮ ಬತ್ತಳಿಕೆಯಲ್ಲಿರುವ ಬೈಗುಳ ಪದಗಳನ್ನೆಲ್ಲಾ ಬಳಸುವುದಕ್ಕೆ ಇಲ್ಲೊಂದು ಸುವರ್ಣಾವಕಾಶ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಅನಂತಮೂರ್ತಿಯವರು ಒಂದ್ಸಾರಿ ಕೆಮ್ಮಿದರೂ ಸಾಕು, ಅವರ ವಿರುದ್ಧ ನಿಂದನೆಗಳ ಮಳೆ ಸುರಿಯುತ್ತದೆ. ಸಿದ್ದರಾಮಯ್ಯನವರನ್ನು ಮೆಚ್ಚಿಸುವುದಕ್ಕೆ ಅನಂತಮೂರ್ತಿ ಕೆಮ್ಮಿದರು ಅಂತ ಯಾರೋ ಬರೆಯಬಹುದು, ಭೈರಪ್ಪನವರಂಥಾ ಕೋಮುವಾದಿಗಳಿಗಿಂತ ಈ ಕೆಮ್ಮುವಾದಿ ಎಷ್ಟೋ ವಾಸಿ ಅಂತ ಮತ್ತೊಬ್ಬ ಬರೆಯಬಹುದು. ಮೋದಿಯ ಜನಪ್ರಿಯತೆ ಬಗ್ಗೆ ಅನಂತಮೂರ್ತಿಯವರಿಗೆ ಇರುವ ಹೊಟ್ಟೆಕಿಚ್ಚೇ ಕೆಮ್ಮಿನ ರೂಪದಲ್ಲಿ ಹೊರಬಂದಿದೆ ಅಂತ ಇನ್ಯಾರೋ ಸಂಶೋಧನೆ ಮಾಡಬಹುದು. ಈ ಮೂರು ಅಭಿಪ್ರಾಯಗಳನ್ನು ಓದದೆಯೇ ಲೈಕ್ ಬಟನ್ ಒತ್ತುವ ಸಾವಿರಾರು ಜನರು ಇರುವುದರಿಂದ ಈ ಕೆಮ್ಮಿನ ಚರ್ಚೆ ಹಿಟ್ ಆಗುತ್ತದೆ.

ಕಳೆದ ಒಂದು ತಿಂಗಳಿಂದ ಫೇಸ್‌ಬುಕ್ಕಲ್ಲಿ ಅತಿಹೆಚ್ಚು ಟೀಕೆ ಮತ್ತು ಮೆಚ್ಚುಗೆ ಗಳಿಸಿದ ವ್ಯಕ್ತಿಯೆಂದರೆ ನರೇಂದ್ರಮೋದಿ. ಅತ್ಯಂತ ಗೇಲಿಗೊಳಗಾದ ವ್ಯಕ್ತಿಯೆಂದರೆ ರಾಹುಲ್ ಗಾಂಧಿ ಎಂಬಲ್ಲಿಗೆ ಬೀದಿಯಲ್ಲಿ ನಡೆಯುತ್ತಿದ್ದ ಬಿಜೆಪಿ-ಕಾಂಗ್ರೆಸ್ ಜಗಳ ಫೇಸ್‌ಬುಕ್ಕಿನ ಗೋಡೆಗೆ ಬಂದು ರಾಡಿ ಮಾಡುತ್ತಿದೆ ಎಂದಾಯಿತು. ಕವಯತ್ರಿಗಳ ಜಗಳ ಇನ್ನೂ ತಮಾಷೆಯಾಗಿರುತ್ತದೆ. ಎ ಎಂಬ ಕವಿ ಬರೆದ ಸ್ಟೇಟಸ್‌ಗೆ ನೂರಾರು ಲೈಕ್‌ಗಳು ಬೀಳುವುದಕ್ಕೆ ಲಿಂಗಾಧಾರಿತ ರಾಜಕೀಯವೇ ಕಾರಣ ಎಂದು ಇನ್ನೊಬ್ಬಾಕೆ ಬರೆಯುತ್ತಾರೆ. ತಕ್ಷಣ ಆಕೆಯ ಪರ ಮತ್ತು ವಿರುದ್ಧವಾಗಿ ಎರಡು ಗುಂಪುಗಳು ಕಚ್ಚಾಡುವುದಕ್ಕೆ ಶುರು ಮಾಡುತ್ತವೆ. ಕನ್ನಡ ಸೀರಿಯಲ್ಲುಗಳ ಸಂಭಾಷಣೆಯನ್ನು ನಾಚಿಸುವ ಪದಪ್ರಯೋಗಗಳು ನಡೆಯುತ್ತವೆ. ಕವಿ ತನ್ನ ರೂಪ ಕಳಕೊಳ್ಳುತ್ತಾಳೆ, ಕವಿತೆ ರೂಪಕವಿಲ್ಲದೇ ವಾಚ್ಯವಾಗುತ್ತದೆ.

ಫೇಸ್‌ಬುಕ್ಕಲ್ಲಿ ಜಾತ್ಯತೀತರೂ ಇದ್ದಾರೆ. ಗೋಹತ್ಯೆ, ಮೋದಿ ಮತ್ತು ಹಿಂದುತ್ವ ಅವರ ಮೆಚ್ಚಿನ ವಿಷಯಗಳು. ಚರ್ಚೆ ಯಾವುದೇ ಇದ್ದರೂ ಅಂಬೇಡ್ಕರ್ ಅವರನ್ನು ಎಳೆದು ತರುವ ಚಾಕಚಕ್ಯತೆ ಅವರಲ್ಲಿದೆ. ಪೇಜಾವರ ಸ್ವಾಮೀಜಿಗಳದ್ದು ಗೆಸ್ಟ್ ಅಪಿಯರೆನ್ಸು, ಗೃಹಸಚಿವರು ವಿಲನ್ನು, ಹೀಗೇ ಸಂಬಂಧವಿಲ್ಲದಿರುವವರೆಲ್ಲಾ ಫೇಸ್‌ಬುಕ್ಕಲ್ಲಿ ಬಂದುಹೋಗುತ್ತಾರೆ. ಕೆಲವರಿಗೆ ಕವಿತೆಗಳನ್ನು ಬರೆಯುವ ಚಟ. ಒಂದು ದಿನದಲ್ಲಿ ಕನಿಷ್ಠ ಇಪ್ಪತ್ತೈದು ಕವಿತೆಗಳನ್ನಾದರೂ ಫೇಸ್‌ಬುಕ್ಕಲ್ಲಿ ಛಾಪಿಸಬೇಕು ಎಂದು ಶಪಥ ಮಾಡಿದಂತೆ ಬರೆಯುವವರಿದ್ದಾರೆ. ಅವರನ್ನಾದರೂ ಕ್ಷಮಿಸಬಹುದು, ಆದರೆ ಇದೇ ಪಕ್ಷಕ್ಕೆ ವೋಟು ಕೊಡಿ ಎಂದು ಒತ್ತಾಯ ಮಾಡುವವರನ್ನು ಸಹಿಸಿಕೊಳ್ಳುವುದು ಕಷ್ಟ. ಅವರನ್ನು ತಕ್ಷಣವೇ ಅನ್‌ಫ್ರೆಂಡ್ ಮಾಡುವುದು ವಾಸಿ. ಅದೆಂಥದ್ದೋ ಸುಡುಗಾಡು ಗೇಮ್ ಆಡಿ ಎಂದು ರಿಕ್ವೆಸ್ಟ್ ಕಳಿಸುವವರದ್ದು ಇನ್ನೊಂದು ಗುಂಪು. ಹೆಣ್ಮಕ್ಕಳ ಫೊಟೋ ಕಂಡ ಕೂಡಲೇ ಸೂಪರ್ ಎಂದು ಬರೆಯುವ ರಸಿಕರದ್ದು ಮತ್ತೊಂದು ಪಂಗಡ. ಐಯಾಮ್ ಫೀಲಿಂಗ್ ಸ್ಯಾಡ್ ಎಂದು ಹೆಣ್ಮಗಳೊಬ್ಬಳು ಬರೆದರೆ, ವೈ ಮಾಮ್, ಏನಾಯ್ತು, ಛೆಛೆ, ಎಂದು ನೂರಾರು ಕಾಮೆಂಟುಗಳು ಬಂದು ಬೀಳುತ್ತವೆ.

ಅಷ್ಟಕ್ಕೂ ಫೇಸ್‌ಬುಕ್ಕನ್ನು ಬಳಸುವುದು ಹೇಗೆ ಅನ್ನುವ ಬಗ್ಗೆ ನಮ್ಮಲ್ಲಿ ಯಾರಿಗೂ ಸ್ಪಷ್ಟ ಕಲ್ಪನೆಯಿಲ್ಲ. ಪತ್ರಿಕೆಗಳಿಗೆ ಲೇಖನ ಕಳಿಸಿ ತಿರಸ್ಕೃತಗೊಂಡಿರುವವರಿಗೆ ಇದೊಂದು ಒಳ್ಳೇ ವೇದಿಕೆ ಮಾರಾಯ್ರೇ ಅಂತ ಒಬ್ಬರು ಹೇಳುತ್ತಿದ್ದರು. ಈಗ ಅವರ ಎಲ್ಲಾ ಲೇಖನಗಳು ಫೇಸ್‌ಬುಕ್ಕಲ್ಲಿ ಪ್ರಕಟವಾಗುತ್ತವೆ. ಹುಟ್ಟುಹಬ್ಬಕ್ಕೊಂದು ಫೊಟೋ, ಮದುವೆ ಫಿಕ್ಸ್ ಆಯಿತು ಎಂದು ಸಾರುವುದಕ್ಕೆ ಒಂದು ಸ್ಟೇಟಸ್, ತಾನು ಫಾರಿನ್ನಿಗೆ ಹೋಗುತ್ತಿದ್ದೇನೆ ಎಂದು ಅನೌನ್ಸ್ ಮಾಡುವುದಕ್ಕೆ, ಹೊಸ ಕಾರು ತಗೊಂಡಿದ್ದಕ್ಕೆ...
ಫೇಸ್‌ಬುಕ್ಕನ್ನು ದಿನಕ್ಕೊಂದು ಬಾರಿ ನೋಡುವುದು ಕೆಟ್ಟ ಅಭ್ಯಾಸವೇನಲ್ಲ. ಯಾಕೆಂದರೆ ಎಂದೋ ಎಲ್ಲೋ ಕಳೆದುಹೋದ ಮಿತ್ರನೊಬ್ಬ ಅಲ್ಲಿ ಸಿಗಬಹುದು, ಯಾವುದಾದರೂ ಒಳ್ಳೇ ಪುಸ್ತಕ ಬೇಕು ಎಂದಾದರೆ ಯಾರೋ ಮಾಹಿತಿ ಕೊಡಬಹುದು, ನಾಲ್ಕೈದು ಆಸಕ್ತರು ಸೇರಿಕೊಂಡು ಯಾವುದೋ ರಂಗಪ್ರಯೋಗ ಮಾಡುತ್ತಿದ್ದರೆ ಅದರ ಬಗ್ಗೆ ಮಾಹಿತಿ ಸಿಗಬಹುದು, ಒಂದೊಳ್ಳೇ ಸಿನೆಮಾ ಬಗ್ಗೆ ವಿಮರ್ಶೆಗಳನ್ನು ಓದಬಹುದು, ಕೆಲವು ಅಪರೂಪದ ವಿಡಿಯೋಗಳನ್ನು ನೋಡಬಹುದು. ಅಂಥವರ ತಳಿ ಕಡಿಮೆಯಿದೆ ಅನ್ನುವುದೇ ದುರಂತ.

ನೆನಪಿರಲಿ, ಇದು ಮುಖೇಡಿಗಳ ಸಾಮ್ರಾಜ್ಯ. ಎದುರು ನಿಂತು ವಾದಿಸುವ ಧೈರ್ಯ ಇಲ್ಲದೇ ಇರುವವರು ಫೇಸ್‌ಬುಕ್ಕಲ್ಲಿ ನಿಮ್ಮನ್ನು ತಡವಿಕೊಳ್ಳುತ್ತಾರೆ. ತಮ್ಮಂತೆಯೇ ಕೀಳರಿಮೆಯಿಂದ ಬಳಲುತ್ತಿರುವ ಪ್ರಜೆಗಳನ್ನು ಸೇರಿಸಿಕೊಂಡು ಯಾರ ಮೇಲೋ ಯುದ್ಧ ಸಾರುತ್ತಾರೆ. ಭೈರಪ್ಪ ಮತ್ತು ಅನಂತಮೂರ್ತಿಯವರು ಸುಮ್ಮನಿದ್ದರೂ ಅವರಿಬ್ಬರ ಮಧ್ಯೆ ಜಗಳ ತಂದಿಡುವ ಸಾಮರ್ಥ್ಯ ಇವರಿಗಿದೆ. ನಿಮ್ಮ ಏಕಾಂತದೊಳಗೆ ನಿಮ್ಮ ಅನುಮತಿಯಿಲ್ಲದೇ ನುಗ್ಗುವ ಕೊಳಕರೂ ಇಲ್ಲಿದ್ದಾರೆ. ಅವರೆಲ್ಲರನ್ನೂ ಅನ್‌ಫ್ರೆಂಡ್ ಮಾಡಿ. ಏನಾದರೂ ಬರೆಯಲೇಬೇಕು ಎಂದು ಅನಿಸಿದರೆ ಹತ್ತು ಸಾಲುಗಳ ಒಳಗೆ ಅಚ್ಚುಕಟ್ಟಾಗಿ ನಿಮ್ಮ ಅಭಿಪ್ರಾಯವನ್ನು ಬರೆದುಬಿಡಿ. ಅದು ಒಂದೊಳ್ಳೇ ಚರ್ಚೆಗೆ ನಾಂದಿಯಾದರೆ ಸಂತೋಷಪಡಿ.

ಮತ್ತು ಫೇಸ್‌ಬುಕ್ಕನ್ನು ಆಫ್ ಮಾಡಿ, ಬೇರೆ ಯಾವುದಾದರೂ ಒಳ್ಳೆಯ ಪುಸ್ತಕ ಓದಿ. ಪಕ್ಕದ ಮನೆಯಲ್ಲೇನಾಗುತ್ತಿದೆ ಅಂತ ಸದಾ ಇಣುಕಿ ನೋಡುವುದು ಸಭ್ಯತೆಯ ಲಕ್ಷಣವಲ್ಲ!

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books