Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ರಿಲ್ಯಾಕ್ಸ್ ಆಗಲಿಕ್ಕೆ ನಾವು ಮಕ್ಕಳಿಗೆ ಏನೂ ಮಾಡೋದೇ ಇಲ್ಲ, ಅಲ್ವಾ?

“ಶಾಲೆಯಲ್ಲಿ ಹೋಳಿ ಆಡಬಾರದು! ನಾಳೆ ಬರುವಾಗ ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬರಬೇಕು." ಹಾಗಂತ ಶಾಲೆಯಲ್ಲಿ ಶಿಕ್ಷಕಿಯರು ಹೇಳಿದರೆಂಬ ಒಂದೇ ಕಾರಣಕ್ಕೆ ಇಬ್ಬರು ಹೆಣ್ಣು ಮಕ್ಕಳು, ಇನ್ನೂ ಹೈಸ್ಕೂಲು ದಾಟದವರು ಎಂಥದೋ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿಯನ್ನು ಓದಿ ನಿನ್ನೆಯ ದಿನಪತ್ರಿಕೆಯನ್ನು ಮುಚ್ಚಿಟ್ಟೆ. ಅದೇ ವಿಷಯ ಮಾತನಾಡಲು ಶೀಲಕ್ಕ ನನ್ನ ಕಚೇರಿಗೆ ಬಂದಳು.
“ಯಾಕೆ ಹೀಗಾಗುತ್ತೆ ರವೀ?" ಅಂದಳು.

ಮಕ್ಕಳು ಯಾರೋ, ಯಾವ ಸ್ಕೂಲಿನವರೋ, ಅವರ ತಂದೆ ತಾಯಿ ಯಾರೋ-ಒಂದೂ ಗೊತ್ತಿಲ್ಲ. ಶೀಲಕ್ಕನನ್ನು ಮತ್ತು ನನ್ನನ್ನು ಆವರಿಸಿಕೊಂಡ ಸಂಗತಿಯೆಂದರೆ, ‘ಮಕ್ಕಳನ್ನು ಹೇಗೆ ಬೆಳೆಸಬೇಕು’ ಎಂಬ ಸಂಗತಿ. ಇಬ್ಬರಿಗೂ ಏಕಕಾಲಕ್ಕೆ ತೋಚಿದ್ದೆಂದರೆ,
“ಇದು ನೆಗೆಟಿವ್ ಎನರ್ಜಿ"

ಆ ಮಕ್ಕಳದು ಆತ್ಮವೆಂದರೆ ಏನು ಅಂತಲೇ ಗೊತ್ತಿಲ್ಲದ ವಯಸ್ಸು. ಇನ್ನು ಆತ್ಮಹತ್ಯೆಯ ಕುರಿತು ಅವರು ಯೋಚಿಸಿಯಾದರಾದರೂ ಹೇಗೆ?
ಆಮೇಲೆ ತುಂಬ ಹೊತ್ತು ನಾನು-ಶೀಲಕ್ಕ ಕುಳಿತು ಮಾತನಾಡಿದೆವು. ಅವರ ಸುತ್ತ ಏನನ್ನು ನೋಡಿದರೂ, ಯಾವತ್ತು ನೋಡಿದರೂ ನೆಗೆಟಿವ್ ಆದ ಸಂಗತಿಗಳೇ ತುಂಬಿಕೊಂಡಿರುತ್ತವೆ. ಇಡೀ ಸಮಾಜ ಅಂಥದೊಂದು ನೆಗೆಟಿವ್ ಸಂದೇಶವನ್ನು ಆ ಮಕ್ಕಳಿಗೆ ತಲುಪಿಸುತ್ತಾ ಹೋಗುತ್ತದೆ. ನೀನು ಈ ವರ್ಷ ಇಷ್ಟು ಮಾರ್ಕು ತರಲೇ ಬೇಕು ಎಂಬ ಒತ್ತಡ ಅಪ್ಪ-ಅಮ್ಮಂದಿರದು. “ಹೀಗೆಲ್ಲ ಕಡಿಮೆ ಮಾರ್ಕ್ಸ್ ತಂದರೆ, ನೀನು ಮನೆಗೇ ಬರಬೇಡ. ಮನೆಬಿಟ್ಟು ಎಲ್ಲಾದರೂ ಹೋಗಿ ಬಿಡು" ಅನ್ನುವ ಅಮ್ಮ. “ಅಷ್ಟೆಲ್ಲ ಫೀ ಕಟ್ಟಿ ನಿನ್ನನ್ನು ಓದಿಸ್ತಿದೀನಿ. ಹೀಗೆ ಕಡಿಮೆ ಮಾರ್ಕ್ಸ್ ತಂದುಕೊಂಡರೆ ಹೇಗೆ?" ಅನ್ನುವ ಅಪ್ಪ. ಅದೇ ತರಹದ ಮಾತನಾಡುವ ಶಿಕ್ಷಕ-ಶಿಕ್ಷಕಿಯರು. ಈ ಮಾತುಗಳು ಸಹಜವಾಗಿಯೇ ಮಕ್ಕಳ ಮೇಲೆ ಒಂದು ತೆರನಾದ ಪ್ರೆಷರ್ (ಒತ್ತಡ) ಮೂಡಿಸುತ್ತವೆ.

That's. ಮಕ್ಕಳ ಮಾತು ಒತ್ತಟ್ಟಿಗಿರಲಿ: ನಮ್ಮ ಮೇಲೂ ದಿನನಿತ್ಯ ನಾನಾ ತರಹದ ಪ್ರೆಷರ್‌ಗಳು ಬೀಳುತ್ತಿರುತ್ತವೆ. ಒಂದರ್ಥದಲ್ಲಿ, ಅಂಥ ಒತ್ತಡಗಳೇ ನಮ್ಮಲ್ಲಿ ಹುರುಪು ತುಂಬಿ ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತವೆ. We work well under pressure. ಆದರೆ ಬೀಳುವ ಪ್ರೆಷರ್ ಯಾವತ್ತಿಗೂ ನಿಮ್ಮನ್ನು stressಗೆ ಈಡಾಗುವಂತೆ ಮಾಡಬಾರದು. ಚೆನ್ನಾಗಿ ಗಮನಿಸಿ. ಪ್ರೆಷರ್ ಮತ್ತು stress-ಎರಡೂ ಬೇರೆ ಬೇರೆ ಸಂಗತಿಗಳು. ಇನ್ನಷ್ಟು ಬಿರುಸಾಗಿ ಓಡಿದರೆ ರೈಲು ಸಿಕ್ಕೇ ಬಿಡುತ್ತೆ ಅಂದಾಗ-ಅದು ಪ್ರೆಷರ್. ಅದರಡಿಗೆ ಸಿಕ್ಕ ನಾವು ನಿಜಕ್ಕೂ ಬಿರುಸಾಗಿ ಓಡಿ ಬಿಡುತ್ತೇವೆ. ಒಂದರ್ಥದಲ್ಲಿ ಅದು positive ಆದ ಪ್ರೆಷರ್. ಆದರೆ ಇನ್ನೂ ಈಜು ಕಲಿಯದ ಹುಡುಗನನ್ನು ತುಂಬಿ ಹರಿಯುವ ಈ ಭರಪೂರ ಹೊಳೆಯನ್ನು ನೀನು ಈಜಿ ಅತ್ತಲಿನ ದಡ ತಲುಪಲೇಬೇಕು ಅಂದಕೂಡಲೆ ಅದು stress ಆಗಿ ಬದಲಾಗುತ್ತದೆ. ಇದು ಮುಖ್ಯ ಸಮಸ್ಯೆ.
ಈ ತೆರನಾದ stressಗೆ ಸಿಲುಕಿದ ಮಗು, ತನಗೇ ಗೊತ್ತಿಲ್ಲದೆ stressನಿಂದ ಬಚಾವಾಗುವ ಮಾರ್ಗ ಹುಡುಕಿಕೊಳ್ಳುತ್ತದೆ. ಕೆಲವು ಮಕ್ಕಳು ಥಟ್ಟನೆ ಮನೆಬಿಟ್ಟು ಓಡಿ ಬಿಡುತ್ತಾರೆ. ಹಿರಿಯರ ಸಿಂಪಥಿ ಗಿಟ್ಟಿಸಲು ಎಂಥದೋ ಖಾಯಿಲೆಯಾಗಿದೆ ಅಂತ ರಗಳೆ ತೆಗೆಯುತ್ತಾರೆ. ಶಾಲೆಗೆ ಅಂತ ಹೋದ ಮಗು ಅಲ್ಲಿ ಕ್ಲಾಸಿಗೇ ಹೋಗಿರುವುದಿಲ್ಲ. ಚಕ್ಕರ್ ಹಾಕಿರುತ್ತದೆ. ಮನೆಗೆ ಬಂದರೆ ಅಪ್ಪ-ಅಮ್ಮ ಹೇರುವ ಒತ್ತಡ. ಶಾಲೆಯಲ್ಲಿ ಟೀಚರುಗಳ ಒತ್ತಡ. ಅಕ್ಕಪಕ್ಕದಲ್ಲಿ ನೋಡಿದರೆ ಇವೆರಡಕ್ಕಿಂತ ಅಧ್ವಾನದ negative ವಾತಾವರಣ.. ಇಲ್ಲಿಂದ ಹೊರಕ್ಕೆ ನಡೆದುಬಿಟ್ಟರೆ, ಇವೆಲ್ಲವುಗಳಿಂದ ಬಚಾವಾಗಿಬಿಟ್ಟರೆ ಅಷ್ಟೇ ಸಾಕು ಎಂಬಂತಹ ಮನೋಸ್ಥಿತಿಗೆ ಬಂದುಬಿಡುತ್ತದೆ ಮಗು.

ಆ ಸ್ಥಿತಿಯಲ್ಲಿ ಒಂದು ಮಗು ಹೇಗೆ ರಿಯಾಕ್ಟ್ ಮಾಡುತ್ತದೆ ಎಂಬುದು ಖಂಡಿತ ನಮಗೆ ಅರ್ಥವಾಗುವುದಿಲ್ಲ. ಅದು ಏನನ್ನಾದರೂ ಮಾಡಬಹುದು. ನಂಗೆ ಹೊಟ್ಟೆ ನೋವು ಅನ್ನಬಹುದು. ‘ಇವತ್ತು ಶಾಲೆಗೆ ರಜೆ’ ಅಂತ ಸುಳ್ಳು ಹೇಳಬಹುದು. ಮನೆ ಬಿಟ್ಟು ಓಡಿ ಹೋಗಬಹುದು. ಆದರೆ ಓಡಿ ಹೋದ ಮಗುವಿಗೆ ಬದುಕುವ ದಾರಿಯಾದರೂ ಎಲ್ಲಿ ಸಿಗುತ್ತೆ? ಅದು ಏನನ್ನಾದರೂ ದುಡಿದೀತು ಹೇಗೆ? ಕೆಲವು ದಿನಗಳ ನಂತರ ಆ ಮಗು ಮನೆಗೇ ಹಿಂತಿರುಗುತ್ತದೆ. ‘ಎಲ್ಲಿಗೆ ಹೋಗಿದ್ದೆ?’ ಅಂತ ಅಮ್ಮ ಕೇಳುತ್ತಾರಲ್ಲ?
ಅದಕ್ಕೆ ಒಂದು ಪಕ್ಕಾ ಆನ್ಸರ್ ರೆಡಿ ಮಾಡಿಕೊಂಡೇ ಆ ಮಗು ಹಿಂತಿರುಗಿರುತ್ತದೆ.
“ಆವತ್ತು ನಾನು ಶಾಲೆಯಿಂದ ಬರುವಾಗ ಯಾರೋ ಮುಸುಕು ಹಾಕಿಕೊಂಡು ಬಂದು, ಒಂದು ಕಾರಿನೊಳಕ್ಕೆ ನನ್ನನ್ನು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಒಯ್ದರು. ನಾನು ಅವರಿಗೆ ಯಾಮಾರಿಸಿ ವಾಪಾಸು ಬಂದೆ" ಅನ್ನುತ್ತದೆ.

ಬಿಲೀವ್ ಮಿ, ಯಾವುದೇ ಮಗು, ‘ಮುಸುಕುಧಾರಿಗಳು’ ಅಂತಲೋ, ‘ನನ್ನ ಕಣ್ಣಿಗೆ ಬಟ್ಟೆ ಕಟ್ಟಿದ್ದರು’ ಅಂತಲೋ ಹೇಳಿದರೆ ಅದೊಂದು ಪಕ್ಕಾ ನಾಟಕ. ಆ ಮಗು stress ಭರಿಸಲಾಗದೆ ತಾನೇ ನಾಪತ್ತೆಯಾಗಿರುತ್ತದೆ. ಹೊರಗಿನ ಬದುಕನ್ನು ಆ ಪುಟ್ಟ ಜೀವ ಭರಿಸಲಾಗದು. ಅದೂ ದೊಡ್ಡಮಟ್ಟದ stressಗೆ ಕಾರಣವಾಗುತ್ತದೆ. ಹೊರಗೆಲ್ಲಿಯೂ ಬದುಕಲಾಗದಿದ್ದಾಗ, ಅದು ಮನೆಗೆ ಹಿಂತಿರುಗುತ್ತದೆ. ಆಗ ಇನ್ನೊಂದು ತೆರನಾದ stressಗೆ ಒಳಗಾಗುತ್ತದೆ. ಅಪ್ಪ-ಅಮ್ಮನಿಗೆ ಅಥವಾ ಪೊಲೀಸರಿಗೆ ಉತ್ತರ ಹೇಳಬೇಕಲ್ಲ? ಹೀಗಾಗಿ ಬಾಯಿಗೆ ಸಿಕ್ಕ, ಮನಸ್ಸಿಗೆ ತೋಚಿದ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತದೆ. ಒಂದು ಸುಳ್ಳನ್ನು ಮುಚ್ಚಿಡುವುದಕ್ಕೆ ನೂರು ಸುಳ್ಳು ಹೇಳುತ್ತದೆ. ಅದೇನೇ ಹೇಳಿದರೂ ಅದಕ್ಕಾದ, ಅದು ಒಳಗಾದ stress ಎಂತಹುದು ಅಂತ ನಮಗೆ ಗೊತ್ತೇ ಆಗುವುದಿಲ್ಲ. ತಾನು ಹೇಳುತ್ತಿರುವುದು ಸುಳ್ಳು ಅಂತ ಅಪ್ಪ-ಅಮ್ಮ ಅಥವಾ ಪೊಲೀಸರಿಗೆ ಗೊತ್ತಾಗಿಬಿಟ್ಟರೆ ಆ ಮಗುವು ತನ್ನನ್ನು ಬಚಾಯಿಸಿಕೊಳ್ಳುವುದಕ್ಕಾಗಿ ಮತ್ತಷ್ಟು stressಗೆ ಒಳಗಾಗಿಬಿಡುತ್ತದೆ.

ಇಷ್ಟೇ ಆಗಿದ್ದರೆ ನಾವು ಮರೆತುಬಿಡಬಹುದು. ಆದರೆ ಹೆಣ್ಣುಮಗುವಿನ ವಿಷಯದಲ್ಲಿ ಹೀಗಾಗುವುದಿಲ್ಲ. ಆ ಮಗುವಿಗೆ ಅಪ್ಪ-ಅಮ್ಮನನ್ನು ಬಿಟ್ಟು ಓಡಿ ಹೋಗಿ, ಹೊರಗೆ ಎಲ್ಲೋ ಬದುಕಿಕೊಳ್ಳುತ್ತೇನೆ ಎಂಬಂಥ ಹುಂಬ ಧೈರ್ಯವಿರುವುದಿಲ್ಲ. ಹೀಗಾಗಿ ತಕ್ಷಣಕ್ಕೆ ಆ ಮಗು ಆತ್ಮಹತ್ಯೆ ಮಾಡಿಕೊಂಡುಬಿಡಬೇಕು ಅಂತ ಯೋಚಿಸುತ್ತದೆ. ಅದು ನಿಜಕ್ಕೂ ಕಳವಳಕಾರಿ. ಅಂಥ ಮಗು ಒಬ್ಬಂಟಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ತೋರಿಸುವುದಿಲ್ಲ. ತನ್ನದೇ ಮನಸ್ಥಿತಿಯ ಇನ್ನೊಬ್ಬ ಹುಡುಗಿಯನ್ನು ಜೊತೆ ಮಾಡಿಕೊಳ್ಳುತ್ತದೆ. ಗೊತ್ತಿರಲಿ, ಆತ್ಮಹತ್ಯೆಯ ಯೋಚನೆ ಉಳಿದೆಲ್ಲ ರೋಗಗಳಿಗಿಂತ ವೇಗವಾಗಿ ಪಸರಿಸಿಕೊಳ್ಳುವ ಅಂಟು ರೋಗ. ಹಾಸ್ಟೆಲಿನಲ್ಲಿ ಒಂದು ಮಗು ಆತ್ಮಹತ್ಯೆ ಮಾಡಿಕೊಂಡಿತು ಎಂದು ಗೊತ್ತಾದರೆ ಅದೇ ಹಾಸ್ಟೆಲಿನ ಇನ್ನೊಂದು ಮಗು ತನಗೇ ಗೊತ್ತಿಲ್ಲದೆ ಆತ್ಮಹತ್ಯೆ ಎಂಬ ಸುಲಭದ ದಾರಿಯಲ್ಲಿ ನಡೆದುಬಿಡುತ್ತದೆ. “ಇಬ್ಬರಿಗೂ ಹೀಗೇ ಆಗಿದೆಯಲ್ಲಾ? ಹಾಗಾದರೆ ಇಬ್ಬರೂ ಸತ್ತುಬಿಡೋಣ" ಎಂದು ಮಕ್ಕಳು ಮಾತನಾಡಿಕೊಳ್ಳುತ್ತವೆ. ಆ ಕೆಲಸ ಮಾಡಿಯೂ ಬಿಡುತ್ತವೆ.

ಇವೆಲ್ಲವೂ stressನ ಪರಿಣಾಮಗಳೇ. ಹೇಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೇಳುವ ಪ್ರಶ್ನೆಯೇ ಇಲ್ಲ. ಮಕ್ಕಳು ಟೀವಿ ನೋಡುತ್ತವೆ. ಸಿನೆಮಾ ನೋಡುತ್ತವೆ. “ಹೀಗೆ ಕಡಿಮೆ ಮಾರ್ಕ್ ತರೋದರ ಬದಲು ಸತ್ತಾದರೂ ಹೋಗು" ಎಂಬ ಮಾತು ಕೇಳಿರುತ್ತವೆ. ಅವುಗಳಿಗೆ ನೇಣು, ನೀರಿಗೆ ಬೀಳುವುದು, ಸುಟ್ಟುಕೊಳ್ಳುವುದು-ಹೀಗೆ ನಾನಾ ದಾರಿಗಳು ತೋಚಿಬಿಡುತ್ತವೆ. ಅದರ ಪರಿಣಾಮವೇನು ಅಂತ ಯೋಚಿಸುವುದೂ ಇಲ್ಲ.

ನಾವೂ ಇದೇ ಸಮಾಜದಲ್ಲಿ ಬೆಳೆದವರಲ್ಲವೆ? ನಮಗೂ ಇಂಥದೇ ಪ್ರೆಷರ್‌ಗಳು ಇದ್ದುವಲ್ಲವೆ? ನಮಗಾದದ್ದೇ ಇವರಿಗೂ ಆಗ್ತಿದೆ, ಅಷ್ಟೇ ಅಲ್ವಾ? ಅಪ್ಪ ಹೊಡೆಯುತ್ತಿದ್ದ, ಶಾಲೇಲಿ ಮೇಷ್ಟ್ರುಗಳು ಹೊಡೀತಿದ್ರು-ಇಷ್ಟು ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಂಡು ಬಿಡೋದಾ ಅಂತಾ ನಾವು ಕೇಳಬಹುದು. ಆದರೆ ನಮಗೆ ಮರೆತು ಹೋಗಿದೆ: ಆ ಪ್ರೆಷರ್‌ಗಳಿಗೆ ತಕ್ಕದಾಗಿ ನಮಗೆ relax ಆಗಲಿಕ್ಕೆ ಸಾವಿರ ದಾರಿಗಳಿರುತ್ತಿದ್ದವು. ಆಟ, ಈಜು, ಸಿನೆಮಾ, ಅಜ್ಜಿ ಮನೆ-ಹೀಗೆ ನಮಗೇ ಗೊತ್ತಿಲ್ಲದಂತೆ ನಾವು relax ಆಗಿಬಿಡುತ್ತಿದ್ದೆವು. ಪ್ರೆಷರ್ ತಡೆಯುವುದಕ್ಕೆ ಆಗಿದ್ದ shock absorbers ಈಗಿಲ್ಲ. ಎದ್ದ ಕೂಡಲೇ ಶಾಲೆ, ಶಾಲೆ ಮುಗಿದರೆ ಟ್ಯೂಷನ್, ಆಮೇಲೆ ಹೆಣಭಾರದ ಹೋಮ್‌ವರ್ಕ್! ಇಡೀ ದಿನ ಕೊಂಚವೂ ಬದಲಾಗದ tight schedule ಇರುವಾಗ ಆ ಮಗು ರಿಲ್ಯಾಕ್ಸ್ ಆಗುವುದು ಎಲ್ಲಿ ಮತ್ತು ಹೇಗೆ? ಎಷ್ಟು ಚಿಕ್ಕ ವಯಸ್ಸಿಗೇ ನಾವು ಮಕ್ಕಳನ್ನು ಶಾಲೆಗೆ, ಟ್ಯೂಷನ್‌ಗೆ ಸೇರಿಸುತ್ತೇವೆ. ಆಲೋಚಿಸಿ.

ಇದೆಲ್ಲಕ್ಕೆ ಕಾರಣ, ಇವತ್ತಿನ ಶಿಕ್ಷಣ ಪದ್ಧತಿ. ಅದೆಲ್ಲ ಗೊತ್ತಿಲ್ಲ, ಇಷ್ಟು ಮಾರ್ಕ್ ತರಲೇಬೇಕು ಎಂಬ ದಾದಾಗಿರಿ ಪೋಷಕರದು. ಇಡೀ ಶಿಕ್ಷಣವೇ ‘exam oriented’ ಅಥವಾ ‘marks oriented’ ಆಗಿಬಿಟ್ಟಿದೆ.
ನಿಜ ಹೇಳಬೇಕೆಂದರೆ ಅದು child oriented ಆಗಿರಬೇಕಲ್ಲವಾ?
ಹಾಗೆ ಆಗಿಯೇ ಇಲ್ಲ. ನಾವು ಹೇರುವ ಪ್ರೆಷರ್ ಆ ಮಗುವಿನ ಪಾಲಿಗೆ stress ಆಗಿ ಬದಲಾಗುತ್ತಿದೆ ಎಂಬುದನ್ನು ನಾವು ಗಮನಿಸುವುದೇ ಇಲ್ಲ
ಇದು ನಿಜಕ್ಕೂ ತಪ್ಪು. ಏನಂತೀರಿ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books