Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬದುಕಲು ನನಗೆ ಉಳಿದಿರುವುದು ಬರೀ ನಲವತ್ನಾಲ್ಕು ವರ್ಷ ಅಷ್ಟೇ ಅಂದುಕೊಂಡು...

ಮಾರ್ಚ್ ೧೫ ಕಳೆಯಿತು.
ನನ್ನ ಮಟ್ಟಿಗೆ ಅದು eventful day. ಬರಬೇಕು ಅಂತ ನಾನು ಯಾರ‍್ಯಾರ ಬಗ್ಗೆ ಯೋಚಿಸಿದ್ದೆನೋ, ಅವರೆಲ್ಲ ಬಂದಿದ್ದರು. ಗೆಳೆಯರು, ಕುಟುಂಬದ ಅಷ್ಟೂ ಜನ, ಆತ್ಮೀಯ ಓದುಗರು-ಹೀಗೆ ಪ್ರಿಯರಾದವರೆಲ್ಲ ಬಂದರು. ಹೊಸೂರು ರಸ್ತೆಯಿಂದ ಅಷ್ಟೊಂದು ಜನ ಬಂದಾರೆಂದು ನಾನು ಅಂದುಕೊಂಡಿರಲಿಲ್ಲ. ಬೆಳಿಗ್ಗೆ ಎದ್ದು ಮನೆಯಿಂದ ಹೊರಟಾಗಲೇ ನಾನು ನನ್ನ ಫೊಟೋ ಇರುವ ಆ ಪರಿಯ flexಗಳನ್ನು ನೋಡಿದ್ದು. ಜನ್ಮದಿನದ ಶುಭಾಶಯಗಳು ಎಂಬ ಮಾತು: ನನ್ನ ಫೊಟೋಗಳು ಇತ್ಯಾದಿಗಳೆಲ್ಲವನ್ನೂ ಆವಾಗಲೇ ನಾನು ನೋಡಿದ್ದು. “ಇದ್ಯಾರು ಇಷ್ಟೆಲ್ಲ ಖರ್ಚು ಮಾಡಿ flex ಹಾಕಿಸಿದ್ದು" ಅಂತ ಕೇಳಿದೆ.
“ನಿಮ್ಮ ಓದುಗರು, ಗೆಳೆಯರು" ಅಂತಷ್ಟೆ ವಿವರಿಸಿದ ನನ್ನ ಮಗನಂತೆ ನಲವತ್ತೂ ಚಿಲ್ರೆ ವರ್ಷಗಳಿಂದ ಬದುಕುತ್ತಿರುವ ಶ್ರೀನಿವಾಸುಲು. ಅವನನ್ನು ‘ಸೀನ’ ಅಂತಲೇ ನಾವೆಲ್ಲ ಕರೆಯುತ್ತೇವೆ. ಇನ್ನುಳಿದವರ ಪಾಲಿಗೆ ಅವನು ಸೀನಣ್ಣ. ಒಂದರ್ಥದಲ್ಲಿ ಅವನು ನನ್ನ Man Friday.

ಹೀಗೆಲ್ಲ flexಗಳಲ್ಲಿ ರಾರಾಜಿಸುವುದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ. ನಾನು ಜನನಾಯಕನಲ್ಲ. ಶಾಸಕನಲ್ಲ. ಮಂತ್ರಿ ಅಲ್ಲ. ಅದೆಲ್ಲ ಆಗಬೇಕು ಅಂತ ನಾನು ನಿರೀಕ್ಷಿಸುವವನೂ ಅಲ್ಲ. ಯಾರಾದರೂ ‘ನಾನು ನಿನ್ನ ಅಭಿಮಾನಿ’ ಅಂದರೋ ನನಗೆ ಇರುಸುಮುರುಸಾಗುತ್ತದೆ. ‘ನನ್ನ ಓದುಗರು’ ಅಂತ ಹೇಳಿಕೊಳ್ಳಲಿಕ್ಕೆ ಹೆಮ್ಮೆ. ಯಾರ ಅಭಿಮಾನಿಯೂ ನಾನಲ್ಲ. ನನಗೆ ಯಾರಾದರೂ ‘ಅಭಿಮಾನಿ’ಗಳಾದರೆ ಅದು ನನಗೆ ಸಹ್ಯವೂ ಅಲ್ಲ. ಅದೆಲ್ಲ ಸಿನೆಮಾ ಪ್ರಪಂಚದ ಮಾತು. ರಾಜಕುಮಾರ್ ಎಷ್ಟು ಸರಳರಾಗಿದ್ದರು ಅಂದರೆ ಅವರು “ನನ್ನ ಅಭಿಮಾನಿ ದೇವರುಗಳು" ಅಂತಲೇ ಕಡೆತನಕ ಮಾತನಾಡಿದರು. ನಿಮಗೆ ಗೊತ್ತಿದೆ: ನಾನು ‘ಓದುಗ ದೊರೆ’ಗಳು ಅಂತಲೇ ಕಳೆದ ಹದಿನೆಂಟು ವರ್ಷ ನಿಮ್ಮನ್ನು ಕರೆದಿದ್ದೇನೆ.

ನಾನು ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ನನ್ನನ್ನು ಪೊರೆದಿದ್ದು ಡಾಕ್ಟರುಗಳು, ಆಸ್ಪತ್ರೆಯ ಸಿಬ್ಬಂದಿಯವರು ಮತ್ತು ನನ್ನ ಕುಟುಂಬದವರು. ಉಳಿದಂತೆ, ನಿಮ್ಮ, ನನ್ನ ಗೆಳೆಯರ ಆಶೀಸ್ಸು, ಹರಕೆ, ಪ್ರಾರ್ಥನೆಗಳು ನನ್ನನ್ನು ಮತ್ತೆ ಬದುಕಿಸಿದವು. ಈ ಹಿಂದೆಯೂ ಬರೆದಿದ್ದೇನೆ: “ನಂಗೆ ದೇವರ ಮೇಲೆ ನಂಬಿಕೆಯಿಲ್ಲ: ಆದರೆ ಮನುಷ್ಯನ, ಅದರಲ್ಲೂ ಆತ್ಮೀಯರ ಪ್ರಾರ್ಥನೆಗಳನ್ನು-ಖಂಡಿತಾ ನಂಬುತ್ತೇನೆ. ಏಕೆಂದರೆ, ಅವು ನಮ್ಮ ಹಿತ ಬಯಸುವವರ ಹೃದಯಗಳಿಂದ ಹೊರಹೊಮ್ಮಿದ ಹಾರೈಕೆ ಮತ್ತು ಆಶೀಸ್ಸುಗಳು. They come from human hearts. ಅಷ್ಟು ಸಾಕು.

ಈ ವಿಷಯ ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ನಾನು ಇದ್ದಕ್ಕಿದ್ದಂತೆ pre-coma ಹಂತಕ್ಕೆ ಹೋಗಿಬಿಟ್ಟೆ. ಕರೆದೊಯ್ದು ಬಿ.ಜಿ.ಎಸ್. ಆಸ್ಪತ್ರೆಗೆ ನನ್ನ ಕುಟುಂಬದವರೆಲ್ಲ ಬಂದು ಐ.ಸಿ.ಯು (ತುರ್ತು ನಿಗಾ ಘಟಕ)ಗೆ ಸೇರಿಸಿದರು. ಅವರು ಹಾಗೆ ಸೇರಿಸಿದ್ದು ನನಗೆ ನೆನಪಿದೆ. ಆನಂತರದ್ದು ಏನೇನೂ ನೆನಪಿಲ್ಲ. ಆ ಸಂದರ್ಭದಲ್ಲಿ ನನ್ನ ಕುಟುಂಬದವರು, ಗೆಳೆಯರು, ಆತ್ಮೀಯರು-ಉಹುಂ, ಕಡೆಗೆ ನನ್ನ ಪುಟ್ಟ ಮಗನನ್ನೂ ನಾನು ನೋಡಕೂಡದು, ನನ್ನ ಕಣ್ಣಿಗೆ ಅವರು ಬೀಳಕೂಡದು ಅಂತ ಡಾಕ್ಟರ್‌ಗಳ ತಂಡ ತಾಕೀತು ಮಾಡಿದ್ದರಂತೆ. ಅವರು ಹಾಕಿದ iron curtainನ ಹಿಂದೆ ನಾನು ದಿನಗಟ್ಟಲೆ ಮಲಗಿದ್ದೆ. ಎಷ್ಟು ದಿನ? ನನಗೆ ಗೊತ್ತಿಲ್ಲ. “ಅಪ್ಪಾ, ಒಂದೇ ಒಂದು ಸಲ ಅದ್ಹೇಗೋ ನೀವಿದ್ದ ICUಗೆ ನಾನು ನುಸುಳಿ ಬಿಟ್ಟೆ. ಆದರೆ ನಿಮ್ಮನ್ನು ನೋಡಿ ಅಕ್ಷರಶಃ ನಂಗೆ ಚೀತ್ಕಾರ ಮಾಡಿಬಿಡಬೇಕು ಅನ್ನಿಸಿತು. ನಿಮ್ಮ ನೆತ್ತಿಯಿಂದ ಹಿಡಿದು ಪಾದದ ತನಕ ಪೂರ್ತಿ ಹಳದಿಯಾಗಿತ್ತು ದೇಹ. I was scared" ಅಂತ ಯಾವಾಗಲೋ ಹೇಳಿದಳು ಭಾವನಾ. ಆ ಪರಿ ದೇಹ yellow ಆಗುವುದನ್ನು ನಾನು ಒಂದೆರಡು ಬಾರಿ ನೋಡಿದ್ದೆ. ಮೊದಲು ನನ್ನ ಗೆಳೆಯನೊಬ್ಬ ಹಾಗೆ ದೇಹಾದ್ಯಂತ ಹಳದಿಯಾಗಿ ಬಿಟ್ಟಿದ್ದ. ಆನಂತರ ನಾನು ನೋಡಿದ್ದು ರಾಜು ಅನಂತಸ್ವಾಮಿಯನ್ನ. ಅವನನ್ನು ನೋಡಿದ ದಿನ “ಈ ಹುಡುಗ ಎಂಥ ಕೆಲಸ ಮಾಡಿಕೊಂಡ. ಇವನಿನ್ನೂ ಜೀವಂತವಾಗಿ ಆಸ್ಪತ್ರೆಯಿಂದ ಹೊರ ಬರಲಾರ" ಅಂತ ಗೆಳೆಯರೊಬ್ಬರ ಮುಂದೆ ಹೇಳಿದ್ದೆ. ಹಾಗೇ ಆಯಿತು: ನನ್ನ ಇಬ್ಬರೂ ಗೆಳೆಯರು ಆಸ್ಪತ್ರೆಯಿಂದ ಜೀವಂತವಾಗಿ ಹೊರ ಬರಲೇ ಇಲ್ಲ. ಮೊದಲು ಕಣ್ಣಷ್ಟೆ ಹಳದಿಯಾಗುತ್ತವೆ. ಅದನ್ನು ಕಾಮಾಲೆ ಅಂದುಕೊಳ್ಳುತ್ತೇವೆ. ಹಳ್ಳಿಗಳಲ್ಲಿ ಎಂಥದೋ ಸೊಪ್ಪಿನ ರಸ ಮಾಡಿ ಅದರ ಹನಿಗಳನ್ನು ಕಣ್ಣಿಗೆ ಬಿಡುತ್ತಾರೆ. ಹೇಗಾಗುತ್ತದೋ ಗೊತ್ತಿಲ್ಲ: ಆ ಮಟ್ಟದ ಕಾಮಾಲೆ ವಾಸಿಯಾಗಿ ಬಿಡುತ್ತದೆ. ಹಾಗೆ ವಾಸಿಯಾಗಿ ರಿಕವರ್ ಆದ ಅನೇಕರನ್ನು ನಾನು ನೋಡಿದ್ದೇನೆ. ಅದು ಸಿಂಪಲ್ ಜಾಂಡೀಸ್. ಆದರೆ ನಮ್ಮ ಲಿವರ್ ಅಥವಾ ಯಕೃತ್ತು ಸಣ್ಣದಾಗಿ ಕೊಳೆಯತೊಡಗುತ್ತದೆ. ಅದು ಲಿವರ್ ಡಿಸೀಸ್‌ನ ಆರಂಭ. ನಾನು ಕೋಮಾಕ್ಕೆ ಹೋಗುವ ಮುನ್ನ ಇನ್ನೇನು ಲಿವರ್ ಡಿಸೀಸ್ ಆರಂಭವಾಗಬೇಕು ಅನ್ನುವಂಥ stageನಲ್ಲಿದ್ದೆ. ಒಮ್ಮೆ ಲಿವರ್ ಡಿಸೀಸ್ ಆರಂಭವಾದರೆ: ಹರೋ ಹರ. ಆ ಖಾಯಿಲೆ ಮನುಷ್ಯನನ್ನು ಕರೆದೊಯ್ಯಲಿಕ್ಕೇ ಬಂತು ಎಂದರ್ಥ.

ನಿಮಗೇ ಗೊತ್ತಿದೆ: ನಾನು ಬಾಲಗಂಗಾಧರ ಸ್ವಾಮಿಗಳನ್ನು ಅನೇಕ ಸಲ ಖಂಡಿಸಿ ಬರೆದಿದ್ದೇನೆ, ಗೇಲಿ ಮಾಡಿದ್ದೇನೆ, ಎಲ್ಲೋ ಒಂದೆರಡು ಕಡೆ ಅವರೊಂದಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡೂ ಇದ್ದೇನೆ. ಅಂಥ ಬಾಲಗಂಗಾಧರ ಸ್ವಾಮಿಗಳು ಎರಡೂವರೆ ವರ್ಷದ ಹಿಂದೆ ನಾನು ಅವರ BGS ಆಸ್ಪತ್ರೆಯಲ್ಲಿ ಒಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ಖುದ್ದಾಗಿ ಬಂದು ನನ್ನನ್ನು ಮಾತನಾಡಿಸಿದ್ದರು. ಅವರಿಗೆ ಆಗ ದಿನನಿತ್ಯ ಡಯಾಲಿಸಿಸ್ ನಡೆಯುತ್ತಿತ್ತು. ಅದೇ ಮಹಡಿಯ ಒಂದು ಕೋಣೆಯಲ್ಲಿ ನಾನಿದ್ದೆ. ಡಾಕ್ಟರುಗಳು “ರವಿ ಬೆಳಗೆರೆಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಅವರು ಇಲ್ಲೇ ಅಡ್ಮಿಟ್ ಆಗಿದ್ದಾರೆ" ಅಂತ ಹೇಳಿರಬೇಕು. ಡಯಾಲಿಸಿಸ್ ಮುಗಿಯುತ್ತಿದ್ದಂತೆಯೇ ಖುದ್ದಾಗಿ ಬಂದು ನನ್ನನ್ನು ಮಾತನಾಡಿಸಿದರು.

“ನಮ್ಮಿಂದ ಏನಾಗಬೇಕು?" ಅಂತ ಕೇಳಿದರು.
ನನಗೇನಾಗಬೇಕು? ಏನೂ ಇಲ್ಲ. ದುಡಿದ ಹಣ ಇದೆ. ನನ್ನ ವೈದ್ಯರಾದ ಡಾ.ರಮೇಶ್ ಮತ್ತು ಡಾ.ಟುಲಿಪ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. I am fine. ನಿಮ್ಮ ಪ್ರೀತಿಯೊಂದು ನನಗಿರಲಿ ಅಂದಿದ್ದೆ. ಸಾಮಾನ್ಯವಾಗಿ (ಎಲ್ಲರೂ ಅಲ್ಲ) ಪತ್ರಕರ್ತರು “ಕೊಂಚ ರಿಯಾಯಿತಿ ಕೊಡಿ" ಅಂತ ಕೇಳುತ್ತಾರೆ. ಮುಖ್ಯಮಂತ್ರಿ fundನಿಂದ ಒಂದಷ್ಟು ವೆಚ್ಚಕ್ಕಾಗಿ ಸಿಗುತ್ತೇನೋ ಅಂತ ನಿರೀಕ್ಷಿಸುತ್ತಾರೆ. ನನ್ನ ಜಾಯಮಾನ ಅಲ್ಲವೇ ಅಲ್ಲ ಅದು. ಖಾಯಿಲೆ ತಂದುಕೊಂಡಿದ್ದೇವೆ. ಅದಕ್ಕೆ ಕಂದಾಯ ನಾವೇ ಕಟ್ಟಬೇಕು ಎಂಬ ಸಿದ್ಧಾಂತ ನನ್ನದು. ಬಾಲಗಂಗಾಧರರಿಗೆ ಅದು ಮನವರಿಕೆಯಾಗಿತ್ತು. “ನಿಮಗೆ ಒಳ್ಳೆಯದಾಗಲಿ" ಅಂತಷ್ಟೆ ಹೇಳಿ ನಿರ್ಗಮಿಸಿದರು.

ಆದರೆ ಬಾಲಗಂಗಾಧರ ಸ್ವಾಮಿಗಳು ಒಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ ಅಂತ ನನಗೆ ಅರಿವಾದದ್ದು ಎರಡನೆಯ ಬಾರಿ pre-coma ಸ್ಥಿತಿಯಿಂದ ಬಚಾವಾದ ಮೇಲೆಯೇ. ಆ ಕೆಲಸ ಏನು ಗೊತ್ತೆ? ಅದು ಅವರೇ ನಿರ್ಮಿಸಿದ ಲಿವರ್ ಟೀಮ್. ನನ್ನನ್ನು ಅಕ್ಷರಶಃ ಸಾವಿನ ದವಡೆಯಿಂದ ಹೊರತಂದದ್ದೇ ಆ ಲಿವರ್ ಟೀಮ್‌ನ ವೈದ್ಯರು. ಆ ಪೈಕಿ ಪ್ರಮುಖರಾದವರೆಂದರೆ ಡಾ.ಕೈಸರ್, ಡಾ.ಸೋನಾಲ್ ಮತ್ತು ಡಾ.ಮ್ಯಾಥ್ಯೂ. ಇವರೆಲ್ಲರೂ organ transplantationನಲ್ಲಿ ದೊಡ್ಡ ಹೆಸರು ಮಾಡಿದವರು. ಸೋತು ಕೈಚೆಲ್ಲಿದ ಕಿಡ್ನಿ, ಬಲಹೀನವಾದ ಹೃದಯ, ತಕರಾರು ತೆಗೆದುಕೊಂಡು ಕೊಳೆಯುತ್ತಲೇ ಹೋಗುವ ಲಿವರ್ (ಯಕೃತ್ತು) ಮುಂತಾದವುಗಳನ್ನು ಬದಲಿಸಿ ಇನ್ಯಾರದೋ ಆರೋಗ್ಯವಂತ ದೇಹದ ಕಿಡ್ನಿ, ಲಿವರ್ ಮುಂತಾದವುಗಳ transplant ಮಾಡುವುದರಲ್ಲಿ ಈ ವೈದ್ಯರದು ಎತ್ತಿದ ಕೈ. ಇದಕ್ಕೆಲ್ಲ ತುಂಬ ಹಣ ಖರ್ಚಾಗುತ್ತದೆ. ಆ ಮಾತು ಹಾಗಿರಲಿ. ಆದರೆ sure shot! ಅವರು ಸುಲಭಕ್ಕೆ ಸೋಲುವವರಲ್ಲ. ಅಂತಹ ಮೂರು ಜನ ವೈದ್ಯರನ್ನೂ, ಇತರೆ ಸಿಬ್ಬಂದಿಯವರನ್ನೂ ಸೇರಿಸಿ ಬಾಲಗಂಗಾಧರರು ಒಂದು ‘ಲಿವರ್ ಟೀಮ್’ ಕಟ್ಟಿದ್ದಾರೆ. ಬೆಂಗಳೂರಿನ ಮಟ್ಟಿಗೆ ಲಿವರ್ ಡಿಸೀಸ್ ತಂದುಕೊಂಡವರ ಪಾಲಿಗೆ ಅವರೇ ದೇವರುಗಳು.

ವಿಶೇಷವೆಂದರೆ ರೋಗಿಯೊಬ್ಬನು ICUಗೆ ಅಡ್ಮಿಟ್ ಆದ ಮರುಕ್ಷಣ ಆತನ ಸುತ್ತ ಒಂದು iron curtain ಹಾಕಿಬಿಡುತ್ತಾರೆ. ಹೆಂಡತಿ ಮಕ್ಕಳನ್ನೂ ನೋಡಲು ಬಿಡುವುದಿಲ್ಲ. ಅದರ ಬದಲಿಗೆ ಪ್ರತೀದಿನ ಅವರು ರೋಗಿಯ ಕುಟುಂಬದವರನ್ನು ಕೂಡಿಸಿ ಕೌನ್ಸೆಲಿಂಗ್ ಮಾಡುತ್ತಾರೆ. “ನೋಡಿ, ನಿಮ್ಮ ಅಣ್ಣ-ತಮ್ಮ-ಗಂಡ etcಗಳಿಗೆ ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ನಾವಿಲ್ಲಿ ವಿವರಣೆ ನೀಡುತ್ತೇವೆ. ಇದಕ್ಕಿಂತ ಹೆಚ್ಚಿನದೇನನ್ನು ನಾವು ಮಾಡಲಾರೆವು. He si improving ಅಥವಾ He is not well ಅಂತ ಹೇಳ್ತೀವಿ" ಅನ್ನುತ್ತಾರೆ.
ಅವರು ನನ್ನ ಬಗ್ಗೆ ಲಲಿತೆ ಹಾಗೂ ಮಕ್ಕಳಿಗೆ ಹೇಳಿದ್ದೇನು ಗೊತ್ತೆ?

“ನೋಡೀ, ತುಂಬ ಆತಂಕದ ಸ್ಥಿತಿ ಇದು. ರವಿಯವರಿನ್ನೂ ಲಿವರ್ ಡಿಸೀಸ್ ಮಟ್ಟದ ಅಪಾಯಕ್ಕೆ ಒಳಗಾಗಿಲ್ಲ. ಆದರೆ ಹೆಪೆಟಿಕ್ ಸ್ಥಿತಿ ಮುಟ್ಟಿರುವುದು ಹೌದು. ಈ ಸಲದ ಮಾತಿಗೆ ಬರುವುದಾದರೆ ಅವರು ಬದುಕುಳಿಯುವ ಛಾನ್ಸ್ ೫೦:೫೦. ಅಕಸ್ಮಾತ್ ಏನಾದರೂ ಆದರೆ, ಅದಕ್ಕೆ ನೀವು ಸಿದ್ಧರಾಗಿರಿ. ಹಾಗೊಂದು ವೇಳೆ ಚೇತರಿಸಿಕೊಂಡರೆ ಅದು ನಿಮ್ಮ ಪುಣ್ಯ" ಅಂದುಬಿಟ್ಟಿದ್ದರು ಡಾ.ಕೈಸರ್ ಮತ್ತು ಡಾ.ಸೋನಾಲ್. ‘ಮತ್ತೇನಿಲ್ಲ, ನಿಮ್ಮ ಗಂಡ ಬದುಕೋದರ ಬಗ್ಗೆ ನಾವೇನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಬದುಕುವ ಛಾನ್ಸ್ ಫಿಫ್ಟಿ ಫಿಫ್ಟಿ’ ಅಂತ ನೇರವಾಗಿ ಡಾಕ್ಟರುಗಳು ಹೇಳಿದರೆ ಯಾವ ಹೆಣ್ಣುಮಗಳು ತಾನೇ ಧೈರ್ಯದಿಂದಿದ್ದಾಳು? ಆದರೆ ಲಲಿತಾ ಒಂದು ಮಾತು ಆಡಿದ್ದಳು.

“ಡಾಕ್ಟ್ರೇ, ನೀವು ದೇವರೇನಲ್ಲ. ಫಿಫ್ಟಿ ಅಂದಿರಲ್ಲ? ಅದು ವೈದ್ಯರಾದ ನಿಮ್ಮ ಕೈಲಿದೆ. ಉಳಿದ ಫಿಫ್ಟಿ ನಿಮ್ಮ ಕೈಲೂ ಇಲ್ಲ. ಅದನ್ನು ದೇವರಿಗೆ, ನನ್ನ ವಿಧಿಗೆ, ರವಿಯಲ್ಲಿರಬಹುದಾದ ತಬ್ಬಿಕೊಳ್ಳುವ ತಾಕತ್ತಿಗೆ ಬಿಟ್ಟುಬಿಡೋಣ. Do your best. ಚೇತರಿಸಿಕೊಂಡು ಎದ್ದು ಕುಳಿತನಾ? ಅದು ನಿಮ್ಮ ಚಿಕಿತ್ಸೆ ಫಲಿಸಿದ್ದಕ್ಕೆ ಸಿಕ್ಕ ಪ್ರತಿಫಲ. ಚೇತರಿಸಿಕೊಳ್ಳಲು ಆಗಲಿಲ್ವಾ? ನನ್ನ ಮಾಂಗಲ್ಯ.. ಅಷ್ಟೆ!" ಅಂದಳಂತೆ.
ನನಗೆ ಯಾವುದೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಆದರೆ ನಾನು ಕೋಮಾದಿಂದ ಹೊರಬಂದು ಮೊದಲ ಬಾರಿಗೆ ಕಣ್ಣು ಬಿಟ್ಟೆನಲ್ಲ? ಆಗ ಡಾ.ಸೋನಾಲ್ ಎದುರಿಗಿದ್ದರಂತೆ. ಒಂದೇ ಉಸುರಿನಲ್ಲಿ ಹೊರಕ್ಕೆ ಓಡಿ,
“ಮೇಡಂ, He survived" ಅಂತ ಲಲಿತೆಗೆ ಸುದ್ದಿ ಮುಟ್ಟಿಸಿದರಂತೆ. ಆದೂ ನನಗೆ ಗೊತ್ತಿಲ್ಲ. ಹಾಗೆ ಗೊತ್ತಿರದಿದ್ದುದು ಆ ಅನೇಕ ತಿಂಗಳುಗಳಲ್ಲಿ ಬಹಳ ಸಂಭವಿಸಿದವು. ಮೊನ್ನೆ ಫೇಸ್‌ಬುಕ್‌ನಲ್ಲಿ ಯಶೋಮತಿ ಬರೆದ ಚಿಕ್ಕದೊಂದು ಬರಹ ನನ್ನಲ್ಲಿ ದಿಗ್ಭ್ರಮೆ ಹುಟ್ಟಿಸಿತು. ಕೊನೆಯ ಮಗ ಹಿಮವಂತ್‌ನನ್ನು ಕರೆದುಕೊಂಡು ಯಶೋಮತಿ ಕುಕ್ಕೆ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಹೋಗಿದ್ದಾಳೆ. ಸರಿಯಾಗಿ ಆರು ವರ್ಷ ಕೂಡ ತುಂಬಿರಲಿಲ್ಲ ಅವನಿಗೆ. ಅವನಿಗೆ ತಣ್ಣೀರಿನಲ್ಲಿ ಸ್ನಾನ ಮಾಡಿಸಿ, ಪುಟ್ಟದೊಂದು ಪಂಚೆಯುಡಿಸಿ, “ಅಪ್ಪಂಗೆ ಒಳ್ಳೆಯದಾಗುವಂತೆ ಮಾಡಪ್ಪಾ" ಅಂತ ಅವನ ಕೈಲಿ ಪದೇ ಪದೇ ಅನ್ನಿಸಿ ದೇವಸ್ಥಾನದ ಸುತ್ತ ಉರುಳು ಸೇವೆ ಮಾಡಿಸಿದಳಂತೆ! ಫೇಸ್‌ಬುಕ್‌ನಲ್ಲಿ ಪ್ರಕಟವಾದ ಅವಳ ಬರಹದ ಸಾಲುಗಳನ್ನು ಮೊನ್ನೆಮೊನ್ನೆ ಓದಿದೆ. ನಿಜಕ್ಕೂ ಕಣ್ಣು ಹನಿಗೂಡಿದವು. ಆ ಪುಟ್ಟ ಮಗು ನನಗೋಸ್ಕರ ಉರುಳು ಸೇವೆ ಮಾಡಿತಾ? ಎಷ್ಟು ಕಷ್ಟವಾಗಿರಬೇಕು.

“ಅಂಥದ್ದೆಲ್ಲಾ ಯಾಕೆ ಮಾಡಿಸಿದೆ? ನನಗೇನೇ ದೇವರ ಅಸ್ತಿತ್ವದ ವಿಚಾರದಲ್ಲಿ ಅನುಮಾನವಿದೆ. ನನ್ನ ಮಗು ಯಾಕೆ ನರಳಬೇಕು?" ಅಂದೆ.
“ಮತ್ತೇನು ಮಾಡಲಿ ಹೇಳಿ? ಅವನನ್ನು ಕಟ್ಟಿಕೊಂಡು ಅದೆಷ್ಟು ಗುಡಿಗಳೂಂತ ಸುತ್ತಿದೆ. ನನಗೆ ಬೇರೆ ಯಾವ ಯೋಚನೆಯೂ ಬರಲಿಲ್ಲ. ofcourse, ನಿಮ್ಮ ಆರೋಗ್ಯದ ಬಗ್ಗೆ, ಚೇತರಿಸಿಕೊಳ್ಳುತ್ತಿರುವುದರ ಬಗ್ಗೆ ನನಗೆ ಆಗಾಗ ಚೇತನಾ ಮತ್ತು ಭಾವನಾ ಫೋನ್ ಮಾಡಿ ತಿಳಿಸುತ್ತಿದ್ದರು. They were so good to me. ಆದರೆ ನಾನು ಬಂದು ನಿಮ್ಮನ್ನು ನೋಡುವಂತಿರಲಿಲ್ಲ. ಅದು ವೈದ್ಯರ ಅಪ್ಪಣೆ. ಅಂಥ ಸಂದರ್ಭದಲ್ಲಿ ನನಗೆ ತೋಚಿದ್ದು ಭಗವಂತನೊಬ್ಬನೇ. ಒಂದೊಂದು ದೇವರಾ? ಒಂದೊಂದು ಹರಕೆಯಾ? ಯಾವುದೂ ಬಾಕಿ ಉಳಿಯಲಿಲ್ಲ. ಕಡೆಗೆ ಒಂದು ದಿನ ನೀವೇ ಫೋನ್ ಮಾಡಿ I am fine ಅಂದಿರಿ. ನನಗೆ ಜೀವ ಬಂದಂತಾಯಿತು. ಹರಕೆ ಹೊತ್ತ ಎಲ್ಲ ದೇವರುಗಳಿಗೂ ಕೈಮುಗಿದು ನಮಸ್ಕಾರ ಮಾಡಿದೆ. ಒಟ್ಟಿನಲ್ಲಿ ನೀವು ಬದುಕಿ ಬಂದಿರಲ್ಲ?" ಅಂದಳು ಯಶೋಮತಿ. ಮತ್ತೆ ಮಾತನಾಡಲಿಕ್ಕೆ ನನ್ನಲ್ಲಿ ಏನೂ ಉಳಿದಿರಲಿಲ್ಲ. ಹಿರಿಯ ಮಗ ಕರ್ಣ all the way ತಿರುಪತಿಗೆ ತಾನೇ ಡ್ರೈವ್ ಮಾಡಿಕೊಂಡು ಹೋಗಿ ಮುಡಿ ಕೊಟ್ಟು ಬಂದಿದ್ದ. ಮತ್ಯಾರ‍್ಯಾರು ಏನು ಮಾಡಿದರೋ-ನನಗೆ ಗೊತ್ತಿಲ್ಲ.

ಈ ವಿಷಯದ ಬಗ್ಗೆ ಮಾತನಾಡಲು ಕುಳಿತರೆ, ಸುಮ್ಮನೆ ಆ ಬಗ್ಗೆ ಯೋಚಿಸಿದರೂ ಸಾಕು; ನಾನು ಯಾರ‍್ಯಾರಿಗೆಲ್ಲ ಎಷ್ಟು ನೋವು ಕೊಟ್ಟೆ ಎಂಬ guilts ಕಾಡುತ್ತದೆ. ಎಲ್ಲೋ ದಾರಿಯಲ್ಲಿ ಸಿಕ್ಕವರು, ‘ನಿಮ್ಮ ಆರೋಗ್ಯ ಕೆಟ್ಟಾಗ ನಿಮಗೆ ಒಳ್ಳೆಯದಾಗಲಿ ಅಂತ ಕೇಳಿಕೊಂಡೆ’ ಅಂದಾಗ ಮತ್ತೆ ನಾನು ಭಾವುಕನಾಗುತ್ತೇನೆ. ನಿಜಕ್ಕೂ ಅದೊಂದು bad phase of the life. ಅದೇಕೆ ಹಾಗೆಲ್ಲ ಮಾಡಿಕೊಂಡೆನೋ? ತಪ್ಪೆಂದು ಗೊತ್ತಿದ್ದೇ ಯಾಕೆ ಅದನ್ನೆಲ್ಲ ಮಾಡಿದೆನೋ? ಉತ್ತರ ನನ್ನಲ್ಲಿಲ್ಲ. ಒಂದು ಮಾತ್ರ ಸತ್ಯ; ತೀರಾ ಪ್ರಾಣ ತೆಗೆದುಬಿಡುವಂಥ ಆ ದುರಭ್ಯಾಸದಿಂದ ಶಾಶ್ವತವಾಗಿ ಹೊರಬಂದಿದ್ದೇನೆ. ಫಕ್ಕನೆ ನೋಡಿದವರಿಗೆ “ರವಿ ಬೆಳಗೆರೆ ಇದೆಷ್ಟು ಬಲಹೀನವಾಗಿ ಹೋಗಿದ್ದಾರಲ್ಲ?" ಅನ್ನಿಸುವುದು ಸಹಜ. ಆದರೆ ನಾನು mentally, morally ಬಲಹೀನನಾಗಿಲ್ಲ. ದೇಹದ ತೂಕ ಕಡಿಮೆಯಾಗಿದೆ. That's fine. ವ್ಯಕ್ತಿತ್ವದ ತೂಕ ಕಡಿಮೆಯಾಗಿಲ್ಲವಲ್ಲ?

ನಿಧನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನsllep pattern ಮೊದಲಿನಂತಿಲ್ಲ. ತುಂಬ ತಡರಾತ್ರಿಯ ತನಕ ಎದ್ದಿರುತ್ತೇನೆ. ಏನೋ ಯೋಚಿಸುತ್ತಿರುತ್ತೇನೆ. ಬೇಗ ನಿದ್ರೆ ಹತ್ತುವುದಿಲ್ಲ. ಮಲಗಿದರೆ ಬೇಗ ಎಚ್ಚರವಾಗುವುದೂ ಇಲ್ಲ. ‘ಈpattern ಸರಿ ಮಾಡಿಕೊಳ್ಳಿ’ ಅಂತ ಡಾಕ್ಟರು ಹೇಳುತ್ತಿರುತ್ತಾರೆ. ವರ್ಷಗಟ್ಟಲೆ ತಡಮಾಡಿ ಮಲಗುವುದನ್ನು ರೂಢಿಸಿಕೊಂಡಿದ್ದೇನೆ. ಅದು ಸುಲಭಕ್ಕೆ ಬದಲಾಗುವುದಿಲ್ಲ. ನನ್ನ ಮೇಲೆ ಯಾವ ನಿದ್ರೆ ಮಾತ್ರೆಗಳೂ ಕೆಲಸ ಮಾಡುವುದಿಲ್ಲ. ಒಂದು ರಾಶಿ ಓದದಿದ್ದರೆ ಅಥವಾ ಬರೆಯದಿದ್ದರೆ ನನಗೆ ನಿದ್ರೆ ಬರುವುದಿಲ್ಲ. ಈ ಸಮಸ್ಯೆ ಯಾರಿಗೆ ಹೇಳಿಕೊಳ್ಳಲಿ?

ಬಿಡಿ, ಬರೀ ಅನಾರೋಗ್ಯ ಗೋಳನ್ನೇ ಬರೆದುಕೊಳ್ಳಬಾರದು. ಈ ಸಲದ ಹುಟ್ಟುಹಬ್ಬ ಚೆನ್ನಾಗಿ ಆಯಿತು. ಐವತ್ತಾರನೆಯದಿದು. ಬದುಕಲು ನನಗೆ ಉಳಿದಿರುವುದು ಬರೀ ನಲವತ್ತ ನಾಲ್ಕು ವರ್ಷ. ಹುಟ್ಟಿದೆ ಅಂತ್ಹೇಳಿ ಈ ತನಕ ಬದುಕಿದ್ದೇನೆ. ಐವತ್ತಾರು ಮೈಲಿಗಲ್ಲು ಸವೆಸಿದ್ದೇನೆ. ಐವತ್ತಾರು ಮುಗಿದಿದ್ದರಿಂದ ಐವತ್ತೇಳಕ್ಕೆ ಕಾಲಿಟ್ಟಿದ್ದೇನೆ. Nothing great about it. ಏನನ್ನೂ ಮಾಡದೆ ಹೋದರೂ ಮನುಷ್ಯನಿಗೆ ಆಗುವುದೇನು ಅಂದರೆ ವಯಸ್ಸು ಮಾತ್ರ.
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಎಷ್ಟೆಲ್ಲ ಮಂದಿ ಹಾರೈಸಿದಿರಿ. ನಿಮಗೆಲ್ಲ ಧನ್ಯವಾದಗಳು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books