Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕುಟುಕು ಕಾರ್ಯಾಚರಣೆಯ ಹಿಂದಿನ ಕಟುಕ ಮನಸ್ಸು

ಒಂದು ಹಿತವಾದ ಮುಸ್ಸಂಜೆಯಲ್ಲಿ ನಾನು ಮತ್ತು ಗೆಳೆಯರೊಬ್ಬರು ಪ್ರೆಸ್ ಕ್ಲಬ್ಬಲ್ಲಿ ಮಾತಾಡುತ್ತಾ ಕುಳಿತಿದ್ದೆವು. ನಮಗಿಂತ ಆರಡಿ ದೂರದ ಟೇಬಲ್ಲಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇನ್ನೊಬ್ಬ ವ್ಯಕ್ತಿ ಕುಳಿತಿದ್ದರು. ಇನ್ಸ್‌ಪೆಕ್ಟರ್ ಕೈಯಲ್ಲಿ ಅರ್ಧ ತುಂಬಿದ ವಿಸ್ಕಿ ಗ್ಲಾಸಿತ್ತು. ಸ್ವಲ್ಪ ಹೊತ್ತಿನ ನಂತರ ಆತನ ಜೊತೆಗಿದ್ದ ವ್ಯಕ್ತಿ ಜೇಬಿಂದ ಒಂದು ಲಕೋಟೆ ತೆಗೆದು ಟೇಬಲ್ ಮೇಲಿಟ್ಟರು. ಇನ್ಸ್‌ಪೆಕ್ಟರ್ ದೇಶಾವರಿ ನಗೆ ಚೆಲ್ಲುತ್ತಾ ಲಕೋಟೆ ಬಿಚ್ಚಿದರು, ತಕ್ಷಣ ಆ ವ್ಯಕ್ತಿ ವಾಪಸ್ ಬರ್ತೀನಿ ಅನ್ನುವ ಥರ ಸಂಜ್ಞೆ ಮಾಡಿ ಟೇಬಲ್ ಖಾಲಿ ಮಾಡಿದರು. ಅದಾಗಿ ಒಂದೇ ನಿಮಿಷಕ್ಕೆ ಇಬ್ಬರು ಕೆಮೆರಾಮನ್‌ಗಳು ಪ್ರತ್ಯಕ್ಷರಾದರು. ಲಕೋಟೆಯಿಂದ ಹೊರಬಂದ ಐನೂರರ ನೋಟುಗಳನ್ನು ಮತ್ತು ಅವುಗಳನ್ನು ಎಣಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು, ಅವರ ಕೆಮೆರಾಗಳು ಪ್ರಕರ ಬೆಳಕನ್ನು ಹೊಮ್ಮಿಸುತ್ತಾ ಸೆರೆಹಿಡಿದವು. ತಬ್ಬಿಬ್ಬಾದ ಅಧಿಕಾರಿ ಆ ನೋಟುಗಳನ್ನು ಮತ್ತು ವಿಸ್ಕಿ ಗ್ಲಾಸನ್ನು ಟೇಬಲ್ ಮೇಲಿಟ್ಟು ದುರ್ದಾನ ತೆಗೆದುಕೊಂಡವನಂತೆ ಸರಸರ ಹೊರಟುಹೋದ. ಕೆಮೆರಾಗಳು ಶರವೇಗದಲ್ಲಿ ಅವನನ್ನು ಹಿಂಬಾಲಿಸಿದವು.

ಐದೇ ನಿಮಿಷಗಳಲ್ಲಿ ನಡೆದು ಹೋದ ಈ ಪ್ರಹಸನವನ್ನು ನಾನು ಅಚ್ಚರಿ ಮತ್ತು ಆಘಾತದಿಂದ ನೋಡುತ್ತಲೇ ಇದ್ದೆ. ‘ಸ್ಟಿಂಗ್ ಆಪರೇಷನ್ ನಡೀತಿದೆ’ ಗೆಳೆಯ ಪಿಸುಗುಟ್ಟಿದ. ‘ಇದಕ್ಕೆಲ್ಲಾ ಕ್ಲಬ್ಬಲ್ಲಿ ಅವಕಾಶ ಮಾಡಿಕೊಡಬಾರದು, ನಾನು ಮೆನೇಜರ್‌ಗೆ ಈಗಲೇ ಕಂಪ್ಲೇಂಟ್ ಕೊಡ್ತೀನಿ’ ಅಂತ ಎದ್ದು ನಿಂತ.
‘ಕಂಪ್ಲೇಂಟ್ ಆಮೇಲೆ ಕೊಡುವಿಯಂತೆ. ಮೊದಲು ಇಲ್ಲೇನಾಗುತ್ತಿದೆ ಅನ್ನೋದನ್ನು ಹೇಳು’ ಎಂದೆ
‘ಇನ್ಸ್‌ಪೆಕ್ಟರ್ ಜೊತೆ ಮೊದಲು ಕುಳಿತಿದ್ನಲ್ವಾ, ಅವನು ಚಾನೆಲ್ಲು ರಿಪೋರ್ಟರ್. ಆತನ ಶರ್ಟಲ್ಲಿ ಗುಂಡಿ ರೂಪದಲ್ಲಿ ಒಂದು ಕೆಮೆರಾ ಇರುತ್ತೆ. ಅವನು ಇನ್ಯಾರದೋ ಹೆಸರಲ್ಲಿ ಇನ್ಸ್‌ಪೆಕ್ಟರ್‌ಗೆ ಲಂಚ ಕೊಡುವುದಕ್ಕೆ ಬಂದಿದ್ದ ಅನಿಸುತ್ತೆ. ಇನ್ಸ್‌ಪೆಕ್ಟರ್ ಸಲೀಸಾಗಿ ಟ್ರಾಪ್ ಆಗಿಬಿಟ್ಟ. ಆದರೆ ಆ ಮಿನಿ ಕೆಮೆರಾ ಇದ್ಯಲ್ವಾ, ಅದು ಭಯಂಕರ ಪವರ್‌ಫುಲ್. ಬರೀ ದೃಶ್ಯವನ್ನಷ್ಟೇ ಅಲ್ಲ, ಮಾತನ್ನೂ ಕ್ಯಾಪ್ಚರ್ ಮಾಡುತ್ತೆ. ಯಾರಿಗೆ ಗೊತ್ತು, ಇಷ್ಟೊತ್ತು ನಾವು ಮಾತಾಡಿರುವುದು ಕೂಡಾ ಅದರಲ್ಲಿ ರೆಕಾರ್ಡ್ ಆಗಿರಬಹುದು’ ಅಂತ ಬೆದರಿಸಿದ. ನಂಗೂ ಒಂದು ಕ್ಷಣ ಕೊಂಚ ಇರಿಸುಮುರಿಸಾಯಿತು. ನಾವಿಬ್ಬರೂ ಇಷ್ಟೊತ್ತು ಏನೆಲ್ಲಾ ಮಾತಾಡಿರಬಹುದು ಅಂತ ರಿವೈಂಡ್ ಮಾಡುತ್ತಾ ಕುಳಿತೆ. ಅಬ್ಬಬ್ಬಾ ಅಂದರೆ ಒಂದಿಬ್ಬರನ್ನು ಬೈದಿರಬಹುದು, ಅವರ‍್ಯಾರೂ ಅಂತ ದೊಡ್ಡ ಮನುಷ್ಯರೇನಲ್ಲ, ಹಾಗಾಗಿ ಭವಿಷ್ಯದಲ್ಲಿ ಅವರಿಂದ ನಮಗಂಥಾ ಅಪಾಯವೇನೂ ಆಗಲಾರದು ಅಂತ ಸಮಾಧಾನ ಮಾಡಿಕೊಂಡೆ. ಆದರೂ ಇನ್ಯಾರನ್ನೋ ಬಲೆಗೆ ಬೀಳಿಸುವ ಹವಣಿಕೆಯಲ್ಲಿ ನಮ್ಮ ಏಕಾಂತಕ್ಕೆ ಅನುಮತಿಯಿಲ್ಲದೇ ದಾಳಿಯಿಟ್ಟ ಚಾನೆಲ್ಲು ವರದಿಗಾರನ ಮೇಲೆ ವಿಪರೀತ ಸಿಟ್ಟು ಬಂತು.

‘ನೀನು ಹೇಳಿದ್ದು ನಿಜ. ಇಂಥಾದ್ದೆಲ್ಲಾ ಪ್ರೆಸ್ ಕ್ಲಬ್ಬಲ್ಲಿ ನಡೆಯಬಾರದು. ಇದು ಬಹಳ ಪವಿತ್ರವಾದ ಜಾಗ, ಇಡೀ ದಿನ ಕೆಲಸ ಮಾಡಿ ಸ್ವಲ್ಪ ರಿಲಾಕ್ಸ್ ಮಾಡೋಣ ಅಂತ ನಾವಿಲ್ಲಿ ಬಂದರೆ ಇದೇನಿದು ರಗಳೆ’ ಅಂತ ನಾನೂ ರೇಗಿದೆ. ಗೆಳೆಯ ಮೆನೇಜರ್‌ಗೆ ಕಂಪ್ಲೇಂಟ್ ಕೊಡುತ್ತೇನೆ ಅಂತ ಮತ್ತೆ ಎದ್ದು ನಿಂತ. ಹೋಗುವ ಮುಂಚೆ ಒಂದು ಪ್ರಕಟಣೆಯನ್ನೂ ನೀಡಿದ. ‘ನಾಳೆ ಇದೊಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಆಗುತ್ತೆ ನೋಡ್ತಾ ಇರು. ಯಾಕೆಂದರೆ ಆ ಪೊಲೀಸ್ ಅಧಿಕಾರಿ ಭಯಂಕರ ಕರಪ್ಟ್. ತಿಂಗಳಿಗೆ ಕಡಿಮೆ ಅಂದರೂ ಒಂದು ಕೋಟಿ ಆದಾಯ ಇದೆ ಅವನಿಗೆ’ ಅಂತೆಲ್ಲಾ ಅವನ ಚಾರಿತ್ರ್ಯವಧೆ ಶುರು ಮಾಡುವುದಕ್ಕೆ ಶುರು ಇಟ್ಟುಕೊಂಡ. ನಮ್ಮ ಕಣ್ಣ ಮುಂದೆಯೇ ನಡೆದ ಈ ಪ್ರಹಸನ ಟೀವಿಯಲ್ಲಿ ಯಾವ ರೀತಿ ಪ್ರಸಾರವಾಗಬಹುದು ಅನ್ನುವ ಕುತೂಹಲ ನನಗೂ ಇತ್ತು. ಮಾರನೇ ದಿನ ಪೂರ್ತಿಯಾಗಿ ಆ ಚಾನೆಲ್ಲನ್ನು ನೋಡುತ್ತಾ ಕುಳಿತೆ. ವಿಚಿತ್ರವೆಂದರೆ ಆ ಸುದ್ದಿ ಪ್ರಸಾರ ಆಗಲೇ ಇಲ್ಲ. ಒಂದು ವಾರ ಕಾದರೂ ಆ ಭ್ರಷ್ಟ ಆಫೀಸರ್ ಮುಖವಾಗಲಿ, ಸ್ಟಿಂಗ್ ಆಪರೇಷನ್ ಆಗಲಿ ನಾಪತ್ತೆ. ನಾನು ಗೆಳೆಯನಿಗೆ ಫೋನ್ ಮಾಡಿ ಕೇಳಿದೆ. ಆತ ನಿರ್ಲಿಪ್ತನಾಗಿ ಹೇಳಿದ. ‘ಆ ರಿಪೋರ್ಟರ್ ಮತ್ತೆ ಇನ್ಸ್‌ಪೆಕ್ಟರ್ ಏನೋ ಡೀಲ್ ಮಾಡಿಕೊಂಡು ಆ ಕೇಸು ಮುಚ್ಚಿ ಹಾಕಿರುತ್ತಾರೆ ಬಿಡು’ ಎಂಬಲ್ಲಿಗೆ ಸ್ಟಿಂಗ್ ಆಪರೇಷನ್ನಿನ ಇನ್ನೊಂದು ಮುಖದ ದರ್ಶನವಾಯಿತು.

ಈ ಆಧುನಿಕ ಉಪಕರಣಗಳು, ಗ್ಯಾಡ್ಜೆಟ್ಟುಗಳು ನಮ್ಮ ಬದುಕನ್ನು ಇನ್ನಷ್ಟು ಹಸನುಗೊಳಿಸುವ ಭರವಸೆಯೊಂದಿಗೆ ಲಗ್ಗೆಯಿಟ್ಟು ಕೊನೆಗೆ ನಮ್ಮನ್ನು ಹೇಗೆ ನಾಶಗೊಳಿಸುತ್ತವೆ ಅನ್ನುವುದಕ್ಕೆ ಇದೊಂದು ಉದಾಹರಣೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಇನ್ನಿತರ ಅವ್ಯವಹಾರಗಳನ್ನು ಬಯಲುಗೊಳಿಸುವುದಕ್ಕೋಸ್ಕರ ಚಲಾವಣೆಗೆ ಬಂದ ಸ್ಟಿಂಗ್ ಆಪರೇಷನ್‌ನಂಥಾ ಅದ್ಭುತ ಕಲ್ಪನೆ ಲಂಚ ಸುಲಿಯುವುದಕ್ಕೇ ಬಳಕೆಯಾಗುತ್ತಿರುವ ಅಸ್ತ್ರವಾಗುತ್ತಿದೆ. ನಿಮಗೆ ನೆನಪಿರಬಹುದು, ಸ್ಟಿಂಗ್ ಆಪರೇಷನ್ ಅನ್ನುವ ಪದ ನಮ್ಮ ದೇಶದಲ್ಲಿ ಮೊದಲು ಜನಪ್ರಿಯವಾಗಿದ್ದು ತೆಹಲ್ಕಾ ಪತ್ರಿಕೆಯಿಂದ. ೨೦೦೦-೨೦೦೧ನೇ ಇಸ್ವಿಯ ಮಧ್ಯೆ ಒಟ್ಟು ಎಂಟು ತಿಂಗಳ ಕಾಲ ತೆಹಲ್ಕಾದ ಇಬ್ಬರು ವರದಿಗಾರರು ಡಿಫೆನ್ಸ್ ಡೀಲ್ ಕುದುರಿಸುವ ಏಜೆಂಟುಗಳ ವೇಷದಲ್ಲಿ ಆಗಿನ ಬಿಜೆಪಿ ರಾಜಕಾರಣಿಗಳ ಬೆನ್ನು ಬಿದ್ದಿದ್ದರು. ಇವರಿಗೆ ಕಾಂಟ್ರಾಕ್ಟ್ ಕೊಡಿಸುವ ಆಶ್ವಾಸನೆ ನೀಡಿದ ಆಗಿನ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅದಕ್ಕೆ ಪ್ರತಿಯಾಗಿ ಕೋಟ್ಯಂತರ ರುಪಾಯಿ ಕೇಳಿದ್ದರು. ಒಂದು ಲಕ್ಷ ಮುಂಗಡ ಹಣವನ್ನು ಅವರು ಸ್ವೀಕರಿಸುವುದನ್ನು ವರದಿಗಾರರು ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದು ತೆಹಲ್ಕಾ ವೆಬ್‌ಸೈಟಲ್ಲಿ ಆ ಫೊಟೋಗಳನ್ನು ಪ್ರಕಟಿಸಿದರು. ಇದು ಆಗಿನ ಕಾಲಕ್ಕೆ ತೀವ್ರ ಸಂಚಲನ ಮೂಡಿಸಿದ ಹಗರಣ. ಈ ಸ್ಟಿಂಗ್ ಆಪರೇಷನ್ನಿಗೆ ತೆಹಲ್ಕಾ ಇಟ್ಟ ಹೆಸರು ‘ಆಪರೇಷನ್ ವೆಸ್ಟೆಂಡ್’. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಅಡಿಯಲ್ಲಿ ಬಂಗಾರು ಅವರನ್ನು ಬಂಧಿಸಲಾಯಿತು, ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಸಜೆಯೂ ಆಯಿತು. ಈ ಒಂದು ಹಗರಣದಿಂದಾಗಿ ಬಂಗಾರು ಅವರ ರಾಜಕೀಯ ಬದುಕು ನಾಶವಾಗಿ ಹೋಯಿತು. ತೆಹಲ್ಕಾದ ಸಂಪಾದಕ ತರುಣ್ ತೇಜ್‌ಪಾಲ್ ದೇಶದ ಕಣ್ಣಲ್ಲಿ ಹೀರೋ ಆದರು.


ವಿಪರ್ಯಾಸ ನೋಡಿ, ಈಗ ಅದೇ ತರುಣ್ ತೇಜಪಾಲ್ ತನ್ನ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಕಂಬಿ ಎಣಿಸುತ್ತಿದ್ದಾರೆ. ಆವತ್ತಿನ ನಾಯಕ ಇವತ್ತಿನ ಖಳನಾಯಕ. ತೇಜಪಾಲ್ ಜೈಲು ಸೇರಿದ ಕೆಲವೇ ದಿನಗಳಲ್ಲಿ ಬಂಗಾರು ತೀರಿಕೊಂಡರು. ಎಂಬಲ್ಲಿಗೆ ಬಿಜೆಪಿ ಮಾಡಿದ ಪಾಪಗಳೆಲ್ಲವೂ ತೊಳೆದುಹೋದವು.

ಅಷ್ಟಕ್ಕೂ ಸ್ಟಿಂಗ್ ಅನ್ನುವುದು ಮಾಧ್ಯಮದ ಅನ್ವೇಷಣೆಯಲ್ಲ, ಎಪ್ಪತ್ತರ ದಶಕದಲ್ಲಿ ಪೊಲೀಸರು ಭ್ರಷ್ಟರನ್ನು ಬಲೆಗೆ ಬೀಳಿಸುವುದಕ್ಕೆ ಕಂಡುಹಿಡಿದ ವಿಧಾನವಿದು. ೧೯೭೩ನೇ ಇಸ್ವಿಯಲ್ಲೇ ಸ್ಟಿಂಗ್ ಅನ್ನುವ ಸಿನೆಮಾ ಒಂದು ತೆರೆ ಕಂಡಿತ್ತು. ಇದರಲ್ಲಿ ರಾಬರ್ಟ್ ರೆಡ್ ಫೋರ್ಡ್, ಪೌಲ್ ನ್ಯೂಮನ್ ನಟಿಸಿದ್ದರು. ಅಲ್ಲಿಂದೀಚೆಗೆ ಇದೇ ವಸ್ತುವನ್ನಿಟ್ಟುಕೊಂಡು ಹಲವಾರು ರಿಯಾಲಿಟಿ ಶೋಗಳು ಪ್ರಸಾರವಾಗಿವೆ. ತಮಾಷೆಯೆಂದರೆ ಪೊಲೀಸರು ಮಾಡುತ್ತಿದ್ದ ಸ್ಟಿಂಗ್ ಆಪರೇಷನ್ನನ್ನು ಇಂದು ಮಾಧ್ಯಮದವರು ಪೊಲೀಸರ ಮೇಲೆ ಮಾಡುತ್ತಿದ್ದಾರೆ. ಅಷ್ಟೇ ಯಾಕೆ, ಯಾರು ಯಾರನ್ನು ಬೇಕಾದರೂ ಇಂಥಾ ಕುಟುಕು ಕಾರ್ಯಾಚರಣೆಯಲ್ಲಿ ಸಿಲುಕಿಸಬಹುದು. ನಿಮಗೆ ಪಕ್ಕದ ಮನೆಯವನ ಮೇಲೆ ದ್ವೇಷವಿದ್ದರೆ ಅವನನ್ನೂ ಸ್ಟಿಂಗ್ ಮಾಡಬಹುದು. ನಿಮ್ಮ ಹತ್ತಿರ ಒಂದು ಪುಟ್ಟ ಕೆಮೆರಾ ಇದ್ದರೆ ಸಾಕು. ಒಂದು ಕಾಲದಲ್ಲಿ ತನ್ನ ಮೂತಿ ಮೇಲೆ ಮುಸುಕು ಹಾಕಿಕೊಂಡು ಮುಂದಿದ್ದ ನೂರಾರು ಹೈಸ್ಕೂಲ್ ವಿದ್ಯಾರ್ಥಿಗಳ ಸೆಂಡ್ ಅಪ್ ಪಾರ್ಟಿಯ ಫೊಟೋ ತೆಗೆಯುತ್ತಿದ್ದ ಕೆಮೆರಾ ಈಗ ಅಣುರೂಪಕ್ಕೆ ಬಂದಿದೆ. ಶರ್ಟ್‌ನ ಗುಂಡಿಯಾಗಿ, ಪೆನ್ನಾಗಿ, ಡೈರಿಯಾಗಿ, ಉಂಗುರವಾಗಿ ಹೀಗೆ ದೇವರಂತೆ ನಾನಾ ಅವತಾರಗಳಲ್ಲಿ ಲಭ್ಯವಾಗುತ್ತಿದೆ. ನಿಂಗೋಸ್ಕರ ಪ್ರಾಣವನ್ನೇ ಕೊಡುತ್ತೇನೆ ಅನ್ನುವ ಪ್ರೇಮಿಯೇ, ತನ್ನ ಸಂಗಾತಿಯ ಅರೆಬೆತ್ತಲೆ ಫೊಟೋ ತೆಗೆದು ಫೇಸ್ ಬುಕ್ಕಲ್ಲೋ, ಯೂ ಟ್ಯೂಬಲ್ಲೋ ಅಪ್ಲೋಡ್ ಮಾಡುತ್ತಾನೆ ಅಥವಾ ಹಾಗೆ ಮಾಡುತ್ತೇನೆ ಅಂತ ಬ್ಲಾಕ್‌ಮೇಲ್ ಮಾಡುತ್ತಾನೆ. ಮೊಬೈಲ್‌ನಲ್ಲೇ ತೆಗೆದ ರಾಸಲೀಲೆಯ ದೃಶ್ಯಗಳು ಸೀಡಿ ರೂಪದಲ್ಲಿ ಹೊರಬಂದು ಹುಡುಗಿಯ ಮಾನ ಹರಾಜಾಗಿ, ಅವಳು ಆತ್ಮಹತ್ಯೆಗೆ ಶರಣಾಗುತ್ತಾಳೆ. ವಿಂಧ್ಯಾ ಎಂಬ ನಟಿಯ ಕೇಸ್ ಇದಕ್ಕಿಂಥ ಭಿನ್ನವೇನಲ್ಲ.


ಸ್ಟಿಂಗ್ ಆಪರೇಷನ್ ನೆಪದಲ್ಲಿ ಐವತ್ತು ರುಪಾಯಿ ಲಂಚ ಕೇಳುವ ಪೇದೆ ಕೆಲಸ ಕಳಕೊಳ್ಳುತ್ತಾನೆ, ಕೋಟ್ಯಂತರ ರುಪಾಯಿ ತಿನ್ನುವ ರಾಜಕಾರಣಿ ಆರಾಮಾಗಿರುತ್ತಾನೆ. ಯಾವುದೋ ಲಾಡ್ಜಿಂಗಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಬಗ್ಗೆ ಸ್ಟಿಂಗ್ ಆಪರೇಷನ್ ನಡೆಯುತ್ತದೆ, ಅದು ಪ್ರಸಾರವಾದ ಮಾರನೇ ದಿನವೇ ಲಾಡ್ಜಿಂಗ್ ಮೇಲೆ ದಾಳಿಯಾಗುತ್ತದೆ, ಅಲ್ಲಿದ್ದ ಹೆಣ್ಮಕ್ಕಳು ಸೆರೆಯಾಗುತ್ತಾರೆ. ಮಾರನೇ ದಿನವೇ ಅವರು ಹೊರಗೆ ಬಂದು ಮತ್ತೆ ವ್ಯಾಪಾರದಲ್ಲಿ ನಿರತರಾಗುತ್ತಾರೆ. ಅದು ಸುದ್ದಿಯಾಗುವುದಿಲ್ಲ. ರಾಮದಾಸರಂಥವರ ಪ್ರೇಮಪುರಾಣ ಸ್ಟಿಂಗ್ ಮೂಲಕ ಹೊರಗೆ ಬಂದು ಜನರಿಗೆ ಪುಕ್ಕಟೆ ರಂಜನೆ ದೊರೆಯುತ್ತದೆ. ಇನ್ನೊಂದೆಡೆ ಆತನ ಜೊತೆ ಸಲ್ಲಾಪ ಮಾಡುವ ಅವಳೆಂಥವಳಿರಬೇಕು ಅನ್ನುತ್ತಾ ಆಕೆಯ ಚಾರಿತ್ರ್ಯ ಹರಣದ ಕಾರ್ಯಕ್ರಮ ನಡೆಯುತ್ತದೆ. ಇನ್ಯಾರೋ ನಿಮ್ಮನ್ನು ಸ್ಟಿಂಗ್ ಆಪರೇಷನ್ ಮಾಡಿದ ಕೆಸೆಟ್ ನಮ್ಮ ಕೈಲಿದೆ ಅಂತ ಫೋನ್ ಮಾಡಿ ದುಡ್ಡು ಕೀಳುತ್ತಾರೆ. ಹಾಗಾಗಿ ಎಲ್ಲರೂ ಈಗ ಸ್ಕಿಝೋಫ್ರೇನಿಯಾ ಖಾಯಿಲೆ ಬಡಿದವರಂತೆ ಅತ್ತಿತ್ತ ನೋಡುತ್ತಾ ಮಾತಾಡಬೇಕಾಗಿದೆ, ಪದೇಪದೇ ಹಿಂದೆ ತಿರುಗಿ ನೋಡುತ್ತಾ ನಡೆಯಬೇಕಾಗಿದೆ. ನಮ್ಮನ್ನು ಯಾರೋ ಹಿಂಬಾಲಿಸುತ್ತಾರೆ ಅನ್ನೋ ಭೀತಿ!

ರಾಜಕಾರಣಿಗಳಿಗೆ, ಭ್ರಷ್ಟ ಉದ್ಯಮಿಗಳಿಗೆ ಇಂಥಾದ್ದೊಂದು ಭಯ ಇರಬೇಕು ನಿಜ. ಆದರೆ ಆ ಭಯವೇ ಇನ್ನೊಬ್ಬರ ಬಂಡವಾಳವಾಗುವ ವ್ಯವಸ್ಥೆ ಅಸಹ್ಯ ಹುಟ್ಟಿಸುತ್ತದೆ. ಕೊನೆಗೆ ಸ್ಟಿಂಗ್ ಆಪರೇಷನ್ ಉದ್ದೇಶ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಾಗುವಲ್ಲಿಗೆ ಸೀಮಿತವಾಗುತ್ತದೆ. ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್, ಅವನ ಅಳಿಯ ಮೇಯಪ್ಪನ್ ಅಂಥವರನ್ನು ಯಾವ ಸ್ಟಿಂಗ್ ಕೂಡಾ ಅಲ್ಲಾಡಿಸುವುದಿಲ್ಲ. ಆದರೆ ಯಾರದೋ ತಪ್ಪಿಗೆ ಸ್ಟಿಂಗ್ ಕೆಮೆರಾದಿಂದ ಕುಟುಕಿಸಿಕೊಂಡ ಪಾಪದ ಹುಡುಗಿಯ ಆರ್ತನಾದ, ಗೋರಿಯ ಒಳಗೆ ಸದ್ದು ಮಾಡುತ್ತಲೇ ಇರುತ್ತದೆ. ಆಪರೇಷನ್ ಸಕ್ಸೆಸ್ ಅಂತ ಚಾನೆಲ್ಲಿನ ಕ್ರೈಮ್ ರಿಪೋರ್ಟರ್ ಕಿರುಚುತ್ತಾನೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books