Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ತುಂತುರೂ... ಅಲ್ಲಿ ನೀರ ಹಾಡು ಎಂಬಂಥ ಕವಿತೆ ಬರೆದ ಹುಡುಗನ ಬಗ್ಗೆ

ಈ ತಮ್ಮ ಅದೆಲ್ಲಿದ್ದನೋ ಇಷ್ಟು ದಿನ? ತೀರ ಅಂದುಕೊಳ್ಳದ ಸಂದರ್ಭದಲ್ಲಿ, ರೀತಿಯಲ್ಲಿ ಫಕ್ಕನೆ ಸಿಕ್ಕಿಬಿಟ್ಟ: ಕಳೆದು ಹೋದ ತಮ್ಮ ಮತ್ತೆ ಅಚಾನಕ್ಕಾಗಿ ಸಿಕ್ಕಂತೆ.
ಅವನ ಹೆಸರು ಕೆ.ಕಲ್ಯಾಣ್.
ನನಗೆ ಸಿನೆಮಾದವರೊಂದಿಗೆ ಒಂದಲ್ಲ ಒಂದು ರೀತಿಯ ಒಡನಾಟವಿದೆ. ಅದರಲ್ಲಿ ಆತ್ಮೀಯತೆ ಇದೆ. ಸಿಡುಕಿದೆ, ಸಂತಸವಿದೆ, ಬೇಸರವಿದೆ. ನಂಜು ಮಾತ್ರ ಯಾರೊಂದಿಗೂ ಇಲ್ಲ. ಒಮ್ಮೊಮ್ಮೆ ಶರಂಪರ ಜಗಳವಾಡಿಬಿಡುತ್ತೇನೆ. ಇಲ್ಲಿಗೆ ಮುಗೀತ್, ಇವನ ನಂಬರನ್ನೇ ಮೊಬೈಲ್‌ನ contactನಿಂದ delete ಮಾಡಿಬಿಡೋಣ ಅಂದುಕೊಳ್ಳುತ್ತೇನೆ. ಆದರೆ ಮರುದಿನವೇ ಆತ ಸಿಕ್ಕುಬಿಡುತ್ತಾನೆ. ಅದೇ ನಿಷ್ಕಳಂಕ ನಗೆ. ‘ಜಗಳ ಯಾವಾಗ ಆಗಿತ್ತು ರವೀ’ ಅಂತ ಅಕ್ಕರೆಯಿಂದ ಹೆಗಲ ಮೇಲೆ ಕೈ ಹಾಕುತ್ತಾನೆ. ಅಷ್ಟು ಸಾಕು; ನಾನು ಬೋಲ್ಡ್, ಸಹಜೀವನ ಕಿರಿಕ್ಕುಗಳಿಲ್ಲದೆ ಮುಂದುವರೆಯುತ್ತದೆ.

ಒಂದು ಉದಾಹರಣೆ ಕೊಡ್ತೀನಿ ನೋಡಿ. ಮೊನ್ನೆ “ಜನಶ್ರೀ" ಛಾನಲ್‌ನ ಬರ್ತ್‌ಡೇಗೆ ರವಿಚಂದ್ರನ್ ಬಂದಿದ್ದ. ನಮ್ಮ ಪತ್ರಿಕೆಯಲ್ಲಿ ಒಂದಷ್ಟು ವರ್ಷಗಳ ಹಿಂದೆ ಆತನ ಮನಸ್ಸಿಗೆ ಕೊಂಚ ನೋವಾಗುವಂತೆ ಬರೆದಿದ್ದೆ. ಉಹುಂ, ನಾವು ಆ ಕುರಿತು ಮಾತಾಡಲೇ ಇಲ್ಲ. ಅದಕ್ಕೂ ಮುಂಚೆ ರವಿಚಂದ್ರನ್‌ನ ನಾನು ನನ್ನ ‘ಹಿಮಾಗ್ನಿ’ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಕರೆದಿದ್ದೆ. ನನ್ನ ಮಗ ಕರ್ಣನೇ ರವಿಚಂದ್ರನ್ ಮನೆಗೆ ಹೋಗಿ ಕರೆದುಕೊಂಡು ಬಂದ. ಆಗ ವಿಪರೀತ ಗಡಿಬಿಡಿ. ಅನೇಕ ಅತಿಥಿಗಳಿದ್ದರು. ಯಾವುದನ್ನೂ ಸರಿಯಾಗಿ ಮಾತನಾಡಲಾಗಲಿಲ್ಲ. ಕೊಂಚ ಹೊತ್ತಿಗೆ ಶುದ್ಧ ಬುಲ್‌ಡೋಜರ್‌ನಂತೆ ಅಂಬರೀಷ್ ಆ ವೇದಿಕೆಗೆ ಬಂದ. ಇನ್ನೆಲ್ಲಿಯ ಪರ್ಸನಲ್ ಮಾತು? ಪಕ್ಕದಲ್ಲೇ ನಮ್ಮ ಕಂಬಾರರು ಇದ್ದರು. ನನ್ನ ಸೋದರಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳಿದ್ದರು. ಕೊಂಚ ಹೊತ್ತಷ್ಟೇ ಇದ್ದು ಪುಸ್ತಕ ಬಿಡುಗಡೆ ಮಾಡಿಕೊಟ್ಟು ರವಿಚಂದ್ರನ್ ಹೊರಟುಹೋದ. ಅಯ್ಯೋ, ಈ ಗೆಳೆಯನೊಂದಿಗೆ ಇನ್ನಷ್ಟು ಮಾತನಾಡಬಹುದಿತ್ತಲ್ಲಾ ಅಂದುಕೊಂಡೆ. ಆ ಅವಕಾಶ ‘ಜನಶ್ರೀ’ ವಾಹಿನಿಯ ಬರ್ತ್‌ಡೇಯಂದು ಸಿಕ್ಕಿತು. ರವಿಚಂದ್ರನ್ ಕೇಕ್ ಕಟ್ ಮಾಡಿದ. ಆನಂತರ ಆತನ ‘ಕ್ರೇಜಿಸ್ಟಾರ್’ ಚಿತ್ರದ promotional shooting ಇತ್ತು. ಆಗ ಪಕ್ಕದಲ್ಲೇ ನಾನು ಕುಳಿತಿದ್ದೆ. ಆನಂತರ ರವಿಯನ್ನು ನನ್ನ ಛೇಂಬರಿಗೆ ಕರೆದುಕೊಂಡು ಬಂದು ಕುಳಿತೆ. ಮಾತಿಗೇನು ಕಡಿಮೆ? ನಿರುಮ್ಮಳವಾಗಿ ಹರಟಿದೆವು. ನನಗೆ ಗೊತ್ತಿದ್ದ ಮಟ್ಟಿಗೆ ರವಿಚಂದ್ರನ್ ಸಿಗರೇಟು ಸೇದುವುದಿಲ್ಲ. ಆದರೆ ಈ ಮಧ್ಯೆ ಕುಡಿಯತೊಡಗಿದ್ದಾನಂತೆ ಅಂತ ಯಾರೋ ಅಂದಿದ್ದರು. ‘ಹೌದಾ ರವೀ?’ ಎಂದು ನೇರವಾಗಿಯೇ ಕೇಳಿಬಿಟ್ಟೆ. Not at all. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆಯೂ ಕುಡಿಯುತ್ತಿರಲಿಲ್ಲ. ಈಗಲೂ ಕುಡಿಯುವುದಿಲ್ಲ. ಮುಂದೆಯೂ ಕುಡಿಯುವುದಿಲ್ಲ. ಯಾಕೋ ಅವೆರಡು ಚಟಗಳು ನನ್ನ ಹತ್ತಿರಕ್ಕೆ ಬರಲೇ ಇಲ್ಲ ಅಂದ. ಮಾತಿನಲ್ಲಿ ಆತನಿಗೆ ಮುಚ್ಚುಮರೆ ಇಲ್ಲ.

‘flirt ಮಾಡ್ತೀಯಾ?’ ಅಂತ ಕೇಳಿದೆ.
‘Yes, I flirt with pictures’ ಎಂದು ಗಟ್ಟಿಯಾಗಿ ನಕ್ಕ.
ಫ್ಲರ್ಟ್ ಮಾಡೋದು ಅಂದರೆ ಕೇವಲ ಹೆಂಗಸರೊಂದಿಗೆ, ಹುಡುಗಿಯರೊಂದಿಗೆ ಫ್ಲರ್ಟ್ ಮಾಡೋದು ಅಂತ ಅಲ್ಲ. ನಮ್ಮ ideaಗಳೊಂದಿಗೆ, ಕನಸುಗಳೊಂದಿಗೆ, ಕಲ್ಪನೆಗಳೊಂದಿಗೆ flirt ಮಾಡೋದು ಒಳ್ಳೆಯದೂ ಹೌದು, ಅದು ಆರೋಗ್ಯವಂತ ಹಾಗೂ ಕ್ರಿಯಾಶೀಲ ಅಭ್ಯಾಸವೂ ಹೌದು. ಹೆಂಗಸರೊಂದಿಗೆ flirt ಮಾಡಿದರೆ ಸುಖವಿರುತ್ತದೆ ನಿಜ. ಆದರೆ ಟೈಮು? ಎನರ್ಜಿ? ದುಡ್ಡು? ಅದು ಅಷ್ಟಿಷ್ಟು ಕಳೆದು ಸುಮ್ಮನಾಗುವಂತಹ ಚಟವಲ್ಲ, time consuming. ಆದರೆ ನಮ್ಮ, ಅಂದರೆ ನಾವು ಮಾಡಿದ ಸಿನೆಮಾಗಳೊಂದಿಗೆ, ನಮ್ಮ ಬರಹಗಳೊಂದಿಗೆ, ಉಳಿದೆಲ್ಲ ಕ್ರಿಯೇಟಿವ್ ಸಂಗತಿಗಳೊಂದಿಗೆ flirt ಮಾಡುತ್ತೀವಲ್ಲಾ? ಅದರಲ್ಲಿ ಟೈಮೂ ಸೇರಿದಂತೆ ಏನನ್ನೂ ಕಳೆದುಕೊಳ್ಳುವ ಅಪಾಯವಿಲ್ಲ. ರವಿಚಂದ್ರನ್ ಅಂದದ್ದಕ್ಕೆ ನನ್ನ ಸಮ್ಮತಿ ಇತ್ತು. He is a master dreamer. ರವಿ ಕೆಲಸ ಬಿಟ್ಟು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವನೇ ಅಲ್ಲ. ರವಿಚಂದ್ರನ್ ಬಗ್ಗೆ ನನಗೆ ಒಂದೇ ಒಂದು ಅಸಮಾಧಾನವಿದೆ. ಅದೇನೆಂದರೆ, ಒಂದು ಸಿನೆಮಾಕ್ಕೆ ಸಂಬಂಧಿಸಿದ ಎಲ್ಲವನ್ನೂ ನಾನೇ ಮಾಡ್ತೀನಿ ಅಂತ ಹೊರಡುತ್ತಾನೆ. ಹಾಡು ನಾನೇ ಬರೆಯುತ್ತೇನೆ, ನನ್ನದೇ ಸಂಗೀತ, ನಾನೇ ನಿರ್ದೇಶಿಸುತ್ತೇನೆ, ಕೆಮೆರಾ ಎಲ್ಲಿಡಬೇಕು ಅನ್ನುವುದರಿಂದ ಹಿಡಿದು ಇದರ ಆರಂಭ, ಮಧ್ಯಂತರ, ಮುಕ್ತಾಯ ಎಲ್ಲವೂ, ಎಲ್ಲವನ್ನೂ ನಾನು ನಿಯಂತ್ರಿಸಬೇಕು ಎಂದು ಹೊರಡುತ್ತಾನೆ. That's risky. ‘ಕ್ರೇಜಿಸ್ಟಾರ್’ಗೆ ಹಂಸಲೇಖ ಒಂದಷ್ಟು ಹಾಡು ಬರೆದರು ಅಂದ. I was happy.

ನಿಜ, ಪತ್ರಿಕೋದ್ಯಮದಲ್ಲಿ ನಾನು ಯಾವ ಕೆಲಸವನ್ನಾದರೂ ಮಾಡಬಲ್ಲೆ. ಗತಕಾಲದ ಮೊಳೆ ಜೋಡಿಸುವ ಪದ್ಧತಿಯಿಂದ ಹಿಡಿದು, ಪ್ರಿಂಟಾಗಿ ಬಂದ ಪ್ರತಿಗಳನ್ನು ತಟ್ಟಿ, ಸಮನ್ವಯಗೊಳಿಸಿ (ಇದನ್ನು ಜಾಗಿಂಗ್ ಅಂತಾ ಪತ್ರಿಕಾ ಭಾಷೆಯಲ್ಲಿ), ಬಸ್ಸಿಗೆ ಪ್ರತಿಗಳ ಬಂಡಲುಗಳನ್ನು ಎತ್ತಿ ಹಾಕುವ ತನಕ ನನಗೆ ಬರುವುದಿಲ್ಲ ಅಂತ ಯಾವುದೂ ಇಲ್ಲ. ಆದರೆ ನಂಬಿ, ಅಪ್ಪಿತಪ್ಪಿಯೂ ನಾನು ಕಂಪ್ಯೂಟರಿಗೆ ಕೈ ಮುಟ್ಟಿಸುವುದಿಲ್ಲ. ಅದಕ್ಕೆ ಅಂತ ನನಗೆ ಕಲೀಗ್ಸ್ ಇದ್ದಾರೆ. ಒಬ್ಬೊಬ್ಬರಿಗೂ ಒಂದು ಕೆಲಸ ಕಲಿಸಿ, ಕೆಲಸ ಆನಿಸಿ ನಾನು ಕೇವಲ ಬರೆಯುವುದನ್ನಷ್ಟೇ ಉಳಿಸಿಕೊಂಡಿದ್ದೇನೆ. ಏಕೆಂದರೆ ಇಡೀ ಬಂಡೆ ನನ್ನದು, ನಿಜ. ಅದರ ಕೊರಕಲುಗಳಿಗೆ ನಾನೇಕೆ ಕೈ ಹಾಕಲಿ? ಅದಕ್ಕೆ ಬೇರೆಯೇ ಜನ ಇದ್ದಾರಲ್ಲ? ಅವರಿಗೆ ಆ ಕೆಲಸ ಕೊಟ್ಟು,superwise ಮಾಡಿ ನಾನು ನೇಪಥ್ಯಕ್ಕೆ ಸರಿಯುತ್ತೇನೆ. ಕೆಲಸ ಸರಿಯಾಗಿ ಆಗಲಿಲ್ಲವಾ? ಯಾರಿಗೆ ಕೆಲಸ ಒಪ್ಪಿಸಿದ್ದೆನೋ ಅವರನ್ನು ಕರೆದು, ತಿದ್ದಿ, ಕೆಲವೊಮ್ಮೆ ಗದರಿಸಿ ಹೇಳುವ ಸ್ವಾತಂತ್ರ್ಯ ನನಗೆ ಇದ್ದೇ ಇದೆ. ಇದನ್ನೇ ಅಲ್ಲವಾ micro management ಅನ್ನೋದು? ರವಿಚಂದ್ರನ್‌ಗೆ ಅದು ಗೊತ್ತಿಲ್ಲವಾ? ನಾ ಕಾಣೆ. ಗೊತ್ತು ಮಾಡಿಕೊಂಡರೆ he can be more creative and more focussed.

ನಿಮಗೆ ಈ ವಿಷಯವೂ ಗೊತ್ತು. ಮೊದಲು ಪತ್ರಿಕೆ ಮಾಡಿದೆ. ರೇಡಿಯೋಗೆ ಮಾತಾಡಿದೆ. ಸಿ.ಡಿ ಮಾಡಿದೆ. ಸಿನೆಮಾ ಮಾಡಿದೆ. ದೈತ್ಯಾಕಾರಕ್ಕೆ ಬೆಳೆದು ನಿಂತಿರುವ ಒಂದು ಚೆಂದನೆಯ ಶಾಲೆ ಮಾಡಿದೆ. ಪುಸ್ತಕದ ಅಂಗಡಿ ಮಾಡಿದೆ. ಟೀವಿಯಲ್ಲಿ ಕಾಣಿಸಿಕೊಂಡೆ. ಈಗಲೂ ಕಾಣಿಸಿಕೊಳ್ಳುತ್ತಿದ್ದೇನೆ. ಇದೆಲ್ಲ ಗಮನಿಸಿ ನೋಡಿ. ಪ್ರತಿಯೊಂದು ಅಕ್ಷರ ಜಗತ್ತಿಗೆ ಸಂಬಂಧಿಸಿದಂಥವೇ. ಕಳೆದ ಹದಿನೆಂಟು ಇಪ್ಪತ್ತು ವರ್ಷಗಳಲ್ಲಿ ಸುಮಾರು ಎಪ್ಪತ್ತೈದು ಪುಸ್ತಕ ಬರೆದೆ. once again , ನಾನು ಏನೇ ಮಾಡಿದರೂ ಅದು ಅಕ್ಷರ ಲೋಕಕ್ಕೆ ಸಂಬಂಧಿಸಿರುವಂತಹುದೇ ಆಗಿರುತ್ತದೆ. ಅದು ಬಿಟ್ಟು, ರಿಯಲ್ ಎಸ್ಟೇಟ್ ಮಾಡಲಾ? bar ತೆರೆಯಲಾ? ಹೋಲ್‌ಸೆಲ್ ಲಿಕ್ಕರ್ ಗೋದಾಮು ತೆಗೆಯಲಾ? ಉಹುಂ, ಅದ್ಯಾವುದೂ ನನ್ನ ಜಾಯಮಾನವಲ್ಲ. ಮೈನಿಂಗ್ ಮಾಡುವುದು ಒತ್ತಟ್ಟಿಗಿರಲಿ; ನೀವೇ ಇಟ್ಟುಕೊಟ್ಟ ಒಂದು ಬೀಡಿ ಅಂಗಡಿಯನ್ನು ಸಂಭಾಳಿಸುವ ಯೋಗ್ಯತೆ ನನಗಿಲ್ಲ. ಯಾವುದನ್ನು ಮಾಡಿದರೆ ನಾನು ಗೆಲ್ಲಬಲ್ಲೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಬೇರೆ ಅಗೋಚರ ಹುತ್ತದೊಳಕ್ಕೆ ನಾನೇಕೆ ಕೈ ಹಾಕಲಿ? ಹೀಗಾಗಿ ನಾನು ಸುಖಿ. ನಾನು ತೃಪ್ತ. ನಮ್ಮ ನಮ್ಮ ಪಿಚ್, ನಮ್ಮ ಎರೇನಾ ಯಾವುದು ಅಂತ ಗುರುತಿಸಿಕೊಂಡು ಆ ನಿಶ್ಚಿತ ಬಯಲಿನಲ್ಲಿ ಉಳಲಿಕ್ಕೆ ಆರಂಭಿಸಿಬಿಟ್ಟರೆ, ಅದೇ ನಮ್ಮ ಮೊದಲನೆಯ ಗೆಲುವು. ರವಿಚಂದ್ರನ್‌ನಂತಹ ಕ್ರಿಯಾಶೀಲ ವ್ಯಕ್ತಿಗೆ ಈ ಪುಟ್ಟ ಮಾತು ಅರ್ಥವಾಗಿಬಿಟ್ಟರೆ ಆತ ಗೆಲ್ಲುವ ಗೆಲುವೇ ಬೇರೆ.

ಅದಿರಲಿ, ಈ ಸಲ ಫೆಬ್ರವರಿ ಹದಿನಾಲ್ಕಕ್ಕೆ ಇಬ್ಬರು ಶುದ್ಧ ಪ್ರೇಮ ಕವಿಗಳನ್ನು ಸಿನೆಮಾ ಪ್ರಪಂಚದಿಂದ ಆಯ್ದು ಕರೆಸಿ, ಪ್ರೇಮಿಗಳಿಗಾಗಿ ಒಂದು ಪ್ರೋಗ್ರಾಂ ಮಾಡೋಣವಾ ಅಂದೆ. ‘ಜನಶ್ರೀ’ಯಲ್ಲಿ ಭಯಂಕರ ಉತ್ಸಾಹಿ, ಕ್ರಿಯಾಶೀಲ ಹುಡುಗ ಹುಡುಗಿಯರಿದ್ದಾರೆ. ಅಲ್ಲಿ ಸಿನೆಮಾ ವಿಭಾಗ ನೋಡಿಕೊಳ್ಳಲಿಕ್ಕೆ ತುಂಬ ಸಹನಶೀಲ ಮತ್ತು ನಿಚ್ಚಳ ಮನಸ್ಸಿನ ಮುರಳಿ ಇದ್ದಾನೆ. ನಾನು ಆತನಿಗೆ ಈ ವಿಷಯ ಹೇಳುತ್ತಿದ್ದಂತೆಯೇ ಇಬ್ಬರು ಪ್ರೇಮಕವಿಗಳನ್ನು ಕರೆದುಕೊಂಡು ಬಂದೇ ಬಿಟ್ಟ. ಒಬ್ಬ ಕೆ.ಕಲ್ಯಾಣ್; ಇನ್ನೊಬ್ಬ ಕವಿರಾಜ್.

ನನಗೊಂದು ಚಟ ಮೊದಲಿನಿಂದಲೂ ಇದೆ. ಹೊಸ ಹಾಡು ಕೇಳಿದರೆ, ಅದರ ಕವಿಯ ಹೆಸರು, ವಿಳಾಸ, ಅವರ ಫೋನ್ ನಂಬರು ಎಲ್ಲವನ್ನೂ ತಿಳಿದುಕೊಂಡು ಅವತ್ತೇ ಆ ಕವಿ ಮಿತ್ರರಿಗೆ ಪೋನು ಮಾಡಿ, ‘ಈ ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಾ’ ಅಂತ greet ಮಾಡುತ್ತೇನೆ. ಪತ್ರಿಕೆಗಳಲ್ಲಿ ಒಂದು ಚೆಂದನೆಯ ವರದಿ ಬಂದಾಗಲೂ ಆ ವರದಿಗಾರನಿಗೆ ಅಥವಾ ಅಂಕಣಕಾರರಿಗೆ ಇದೇ ರೀತಿ ಪೋನ್ ಮಾಡಿ ಅಭಿನಂದನೆ ತಿಳಿಸುತ್ತೇನೆ. ಅದಕ್ಕೆ ಅವರ ವಯಸ್ಸು, ಜಾತಿ, ಊರು ಇತ್ಯಾದಿಗಳಿಗೂ ಸಂಬಂಧವೇ ಇಲ್ಲ. ಒಂದು ಸಲ ಕವಿರಾಜ್‌ಗೆ ಹಾಗೆ ಫೋನು ಮಾಡಿ, ಆತ ಬರೆದ ಹಾಡೊಂದರ ಬಗ್ಗೆ ಮಾತನಾಡಿದ್ದೆ. ಕಲ್ಯಾಣ್‌ಗೆ, ಯೋಗರಾಜ್ ಭಟ್ಟರಿಗೆ, ಹಿರಿಯ ಕವಿ ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರಿಗೆ, ರತ್ನಮಾಲಾಗೆ ಅದೆಷ್ಟು ಫೋನು ಮಾಡಿ ತಲೆ ತಿಂದಿದ್ದೇನೋ-ಅವರೇ ಲೆಕ್ಕ ಇಡಬೇಕು.

ಅವತ್ತು ಕಲ್ಯಾಣ್ ಮತ್ತು ಕವಿರಾಜ್‌ರನ್ನು ಕೂಡಿಸಿಕೊಂಡು ಒಂದು ವ್ಯಾಲಂಟೈನ್ ಪ್ರೋಗ್ರಾಂ ಮಾಡಿದೆ. ಅದಕ್ಕೆ ಮುಂಚಿನ ದಿನ ಚೇತನಾ ತೀರ್ಥಹಳ್ಳಿ ಅವರ ನೇತೃತ್ವದಲ್ಲಿ, ಅಧ್ಯಕ್ಷತೆಯಲ್ಲಿ facebook ಕವಿಗಳದೊಂದು ಪುಟ್ಟ ಕವಿಗೋಷ್ಠಿ ಮಾಡಿದ್ದೆ. ಎರಡೂ ತುಂಬ ಒಳ್ಳೆಯ ರೀತಿಯಲ್ಲಿ ರಿಸೀವ್ ಆಗಿದ್ದವು. ವಿಚಿತ್ರವೆಂದರೆ ಕವಿರಾಜ್ ಮತ್ತು ಕೆ.ಕಲ್ಯಾಣ್‌ರನ್ನು ಕರೆಸಿ ಮಾತನಾಡಿಸೋಣ ಅಂತ ಅಂದುಕೊಂಡರೆ, ಅವರಿಬ್ಬರೂ ಶೋ ಆರಂಭವಾಗುತ್ತಿದ್ದಂತೆಯೇ ನನಗೊಂದು ಪುಟ್ಟ ಸನ್ಮಾನ ಮಾಡಿದರು.
“ಯಾಕ್ ಮಾಡ್ತಿದೀವಿ ಗೊತ್ತಾ ಸರ್? ನಾವು ಬರೆದ ಎಲ್ಲ ಸಿನೆಮಾ ಹಾಡುಗಳೂ ನಿಮ್ಮ ಆವತ್ತಿನ ಲವ್‌ಲವಿಕೆಯಿಂದ ಪ್ರೇರಣೆ ಪಡೆದಂಥವು ಅಂತ ಕೆಮೆರಾದ ಮುಂದೆಯೇ ಹೇಳಿದರು. ನನಗೆ ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗಲಿಲ್ಲ. show ನಡೆಯುತ್ತಿದ್ದಾಗ ಯಾವುದೇ ಸಿದ್ಧತೆ ಮಾಡಿಕೊಂಡಿರದಿದ್ದ ನಾನು ಅನಾಯಾಸವಾಗಿ ನನ್ನ ಮೆಚ್ಚಿನ ಕವಿ ಗುಲ್ಜಾರ್‌ರ ನೆನಪು ತೆಗೆದೆ. ತಕ್ಷಣ ಕೆ.ಕಲ್ಯಾಣ್‌ಗೆ ಏನೋ ಹೊಳೆಯಿತು. ಅವರು ಹಿಂದಿ-ಉರ್ದು ಭಾಷೆಗಳ ಗುಲ್ಜಾರ್, ಆದರೆ ನೀವು ಕನ್ನಡದ ಪಾಲಿಗೆ ‘ದಿಲ್ದಾರ್’ ಅಂದ ಕೆ. ಕಲ್ಯಾಣ್ ನನಗೊಂದು ಹೊಸ ಕಾವ್ಯನಾಮವನ್ನೇ ದೇಣಿಗೆಯಾಗಿ ಕೊಟ್ಟುಬಿಟ್ಟ. I was thrilled. ಈ ಮುಂಚೆಯೇ ನಾನು ಕಾವ್ಯನಾಮಗಳನ್ನು ಇಟ್ಟುಕೊಂಡಿದ್ದುಂಟು. ಉರ್ದುವಿನಲ್ಲಿ ಕವಿತೆ-ಶಾಯರಿ ಬರೆಯೋಣ ಅಂದುಕೊಂಡ ದಿನಗಳಲ್ಲಿ ನಾನು ‘ಟೂಟಾ ಜಾಮ್’ ಅಂತ ಹೆಸರಿಟ್ಟುಕೊಂಡೆ. ಟೂಟಾ ಜಾಮ್ ಅಂದರೆ ಒಡೆದು ಬಿದ್ದ ಮಧುಪಾತ್ರೆ. ತೆಲುಗಿನ ನನ್ನ ಮೆಚ್ಚಿನ ಕವಿಯೊಬ್ಬರ ಕಾವ್ಯನಾಮ ಕದ್ದು ಕನ್ನಡದಲ್ಲಿ ನಾನು ಕೆಲವಾರು ಕತೆಗಳನ್ನು ಬರೆದೆ. ಆಗ ನನ್ನ ಕಾವ್ಯನಾಮ ‘ಮಹಾಸ್ವಪ್ನ’. ಪತ್ರಿಕೆ ಶುರುವಾದ ಮೇಲಿನ ಮಾತು ಬಿಡಿ: ಗುಮ್ಮಯ್ಯ, ಗೂರ‍್ಲಯ್ಯ ಅಂತೆಲ್ಲ ಹೆಸರಿಟ್ಟುಕೊಂಡು ಅನೇಕ ಪುಟಗಳನ್ನೇ ತುಂಬಿಸಿದೆ. ‘ಆರ್.ಬಿ’ ಎಂಬುದು ಕೂಡ ಹಾಗೇ ಹುಟ್ಟಿದ ಕಾವ್ಯನಾಮ.

ಪ್ರೋಗ್ರಾಂ ಚೆನ್ನಾಗಿ ಮೂಡಿ ಬಂತು. ‘ಕವಿರಾಜ್-ಕಲ್ಯಾಣ್ ಇವತ್ತು ಹಾಗೇ ಮನೆಗೆ ಹೋಗಬೇಡಿ. Spend an evening with me ಅಂದವನೇ ‘ಹಾಯ್ ಬೆಂಗಳೂರ್!’ ಕಚೇರಿಗೆ ಎತ್ತಾಕಿಕೊಂಡು ಬಂದೆ. ನನ್ನ ಕಾರಿನಲ್ಲಿ ಕಲ್ಯಾಣ್ ನನ್ನ ಪಕ್ಕ ಕುಳಿತಿದ್ದ. ಕವಿರಾಜ್ ತನ್ನ ಕಾರಿನಲ್ಲಿ ಹಿಂಬಾಲಿಸುತ್ತಿದ್ದ. ಕಾರಿನಲ್ಲಿ ಹೋಗುತ್ತಿದ್ದಾಗ ಕಲ್ಯಾಣ್‌ಗೆ ಒಂದು ಫೋನ್ ಬಂತು. ನನಗೆ ತಮಿಳು ಬರುವುದಿಲ್ಲ. ಅರ್ಥವಾಗುತ್ತದೆ. ಕಲ್ಯಾಣ್ ಯಾರೊಂದಿಗೋ ತುಂಬ ಆತ್ಮೀಯವಾಗಿ ಮಾತನಾಡುತ್ತಿದ್ದ. ಆ ಸಂಭಾಷಣೆ ಮುಗಿಯುತ್ತಿದ್ದಂತೆಯೇ, ಫೋನ್ ಮಾಡಿದ್ದು ಯಾರು ಅಂತ ಕೇಳಿದೆ. “ಸರ್, ಇದು ಎಸ್.ಜಾನಕಿ ಅಮ್ಮ ಅವರದು. ಇವತ್ತು ಬೆಂಗಳೂರಿಗೆ ಬಂದರಂತೆ. ಏನೋ ವಾತ್ಸಲ್ಯ ನನ್ನ ಮೇಲೆ. ನೆನಪಾಗಿ ಫೋನ್ ಮಾಡಿದ್ದರು" ಅಂದ.

ಆ ತಕ್ಷಣ ನಾನು ಕಲ್ಯಾಣ್‌ಗೆ ಗಂಟುಬಿದ್ದೆ. “ನಾನು ಎಸ್.ಜಾನಕಿ ಅವರ ಆರಾಧಕ. ಆಕೆಗೀಗ ಎಪ್ಪತ್ತೆಂಟು ವರ್ಷ. ಆದರೆ ಕಂಠಕ್ಕೆ ಮುಪ್ಪು ಬಂದಿಲ್ಲ. ನಾನವರನ್ನು meet ಮಾಡಲೇಬೇಕು" ಅಂದೆ. ಕಾಕತಾಳೀಯವೆಂಬಂತೆ ಮಾರನೆಯ ದಿನವೇ ‘ಜನಶ್ರೀ’ ಬರ್ತ್‌ಡೇ. ಅವರು ಛಾನಲ್‌ಗೆ ಶುಭಕೋರಿ ಒಂದು ಮಾತಾಡಿದರೂ ಸಾಕು. ಒಂದೇ ಒಂದು bite. ನಂಗೆ ಬೇಕೇ ಬೇಕು" ಅಂತ ಹಟಕ್ಕೆ ಬಿದ್ದೆ. ಕಲ್ಯಾಣ್ ಅದೇನು ಸರ್ಕಸ್ ಮಾಡಿದನೋ ಗೊತ್ತಿಲ್ಲ. ಬೆಳಿಗ್ಗೆ ಹತ್ತು ಗಂಟೆಗೆ ನಮ್ಮ ಅಪಾಯಿಂಟ್‌ಮೆಂಟ್ ಫಿಕ್ಸಾಗಿ ಹೋಯಿತು. ಹೇಳದೆ ಕೇಳದೆ ಒಮ್ಮೆಲೆ ಕೆಮೆರಾ ಎದುರಿಗೆ ಇಟ್ಟುಬಿಟ್ಟರೆ ಎಂಥವರಿಗೂ ಕಿರಿಕಿರಿಯಾಗುತ್ತದೆ. ಹೀಗಾಗಿ ಕೆಮೆರಾ ತಂಡವನ್ನು ಹೊರಗೆ ನಿಲ್ಲಿಸಿಯೇ ನಾನು-ಕಲ್ಯಾಣ್ ಮತ್ತು ‘ಜನಶ್ರೀ’ ವಾಹಿನಿಯ ಮೀನಾರನ್ನು ಕರೆದುಕೊಂಡು ಜಾನಕಿ ಅವರಿದ್ದ ಮನೆಯೊಳಕ್ಕೆ ಹೋದೆ.

“ನೋಡಿ, ನೀವೆಲ್ಲಾ ಬರ‍್ತೀರಿ. ಕೆಲವರು ಜೊತೆಗೆ ನಿಂತು ಫೊಟೋ ತೆಗೆಸಿಕೊಳ್ತಾರೆ. ಅವರಿಗೆ ಜಾನಕಿಯ ಸರಿಯಾದ ಚಿತ್ರ ಸಿಗಬೇಕು. ನಾನು ನೈಟಿ ಹಾಕ್ಕೊಂಡು ಮನೇಲಿರ್ತೀನಿ. ಹಾಗೆಲ್ಲ ಫೊಟೋಗಳಲ್ಲಿ ಕಾಣಿಸಿಕೊಳ್ಳಕೂಡದು. ಆದ್ದರಿಂದಲೇ ಇವತ್ತು ಬೇಗ ಎದ್ದು ಸ್ನಾನ ಮಾಡಿ, ನನಗೆ ತುಂಬ ಇಷ್ಟವಾದ ಕಾಟನ್ ಸೀರೆ ಉಟ್ಟುಕೊಂಡು ಕುಳಿತಿದ್ದೇನೆ" ಅಂದರು ಜಾನಕಿ.
ನೀವೂ ನೋಡಿರುತ್ತೀರಿ. ಎಂಥ ಸಭ್ಯ, ಮಾತೃಮೂರ್ತಿ ಅದು. ಬಿಳೀ ಕಾಟನ್‌ಸೀರೆ, ಹಣೆಗೆ ವಿಭೂತಿ ಇಟ್ಟುಕೊಂಡು ಅಕ್ಷರಶಃ ಸರಸ್ವತೀ ದೇವಿ ಕೂತಂತೆ ಕೂತಿದ್ದರು ಆಕೆ. ನಾನು ನಮಸ್ಕರಿಸಿದೆ. ಒಂದಷ್ಟು ಮಾತುಕತೆ ಆದ ಮೇಲೆ “ಅಮ್ಮಾ, ನಮ್ಮ ‘ಜನಶ್ರೀ’ಗೆ ನಾಳೆ ಬರ್ತ್‌ಡೇ. ನಿಮ್ಮ ಅಭ್ಯಂತರವಿರದಿದ್ರೆ ಕೆಮೆರಾದವರನ್ನ ಒಳಕ್ಕೆ ಕರೀತೇನೆ. ಒಂದೇ ಒಂದು ಸಾಲಿನ ಶುಭಾಶಯ ಹೇಳಿಬಿಡಿ ಅಮ್ಮಾ... please" ಅಂದೆ. ಆಕೆ ಒಂದೇ ವಿನಂತಿಗೆ ಮಣಿಯುತ್ತಾರೆ ಅಂದುಕೊಂಡಿರಲಿಲ್ಲ. “ನೀವು-ಕಲ್ಯಾಣ್ ನನಗೆ ಮಕ್ಕಳಿದ್ದ ಹಾಗೆ. ನೀವು ಕೇಳುತ್ತಿದ್ದೀರಿ ಅಂದರೆ ಇಲ್ಲ ಅನ್ನೋಕಾಗುತ್ತಾ? ಕೆಮೆರಾದವರನ್ನು ಕರೀರಿ. ಒಂದೇ ಒಂದು ಶುಭಾಶಯದ ಮಾತು ಹೇಳಿಬಿಡ್ತೀನಿ" ಅಂದರು. ಉಳಿದದ್ದನ್ನು ಸಂಭಾಳಿಸಿದ್ದು ಈ ತಮ್ಮನಂಥ ಹುಡುಗ ಕೆ.ಕಲ್ಯಾಣ್. ಒಂದೇ ಒಂದು ಶುಭಾಶಯದ ಮಾತು ಹೇಳಿಬಿಡಿ ಅಂದಿದ್ದೆ ನಾನು. ಅದು ಜಾನಕಿಯವರಿಗೂ, ನಮಗೂ ಗೊತ್ತೇ ಆಗದಂತೆ ಬರೋಬ್ಬರಿ ನಲವತ್ತು ನಿಮಿಷಗಳ ಅತಿ ಸುಂದರ ಇಂಟರ್‌ವ್ಯೂ ಆಗಿ ಹೋಯಿತು. ಅವರಿಗೆ ಅವತ್ತು ಕೆಮ್ಮು, ಗಂಟಲು ಕಟ್ಟಿಕೊಂಡಿತ್ತು. ಶತಾಯ ಗತಾಯ ನಾನು ಹಾಡುವುದಿಲ್ಲ ಅಂತ ಕುಳಿತಿದ್ದ ಜಾನಕಿ ಅಮ್ಮಾ, ಅದೇ ಕುಸಿದ ಗಂಟಲಲ್ಲಿ ಮಾತಿನ ಜೊತೆ ಜೊತೆಯಲ್ಲೇ ಹಾಡಿದರು. ಯಾವುದೇ ಪ್ರಿಟೆಂಷನ್ಸ್ ಇಲ್ಲದ ಸರಾಗ ಗೀತಮಾಲಿಕೆ ಆಕೆ. ಒಂದು ಕಮ್ಯಾಂಡ್ ಕೊಟ್ಟ ಕೂಡಲೆ ಆ ಹಾಡು ಹಾಡುವಂತಹ ಜೀವಂತ I pod.
ನಿಜಕ್ಕೂ ಆ ಸಂದರ್ಶನ ಅದ್ಭುತವಾಗಿತ್ತು. ಅದನ್ನು ಮುಗಿಸಿ ಹೊರಡೋಣವೆಂದರೆ ಆಕೆಗೂ ಕಳಿಸಲು ಮನಸ್ಸಿಲ್ಲ. ನಾವೂ ಬೇಗ ಎದ್ದು ಹೋಗುವವರಲ್ಲ. ಕಾಲ ಹೇಗೆ ಕಳಿಯಿತೋ ಗೊತ್ತಾಗಲೇ ಇಲ್ಲ. ಎಂಥ ತಿಳಿ ಮನಸ್ಸಿನ ಹೆಣ್ಣು ಮಗಳು ಆಕೆ ಅಂದರೆ, ತಮ್ಮ ಮಗನ ಡಿವೋರ್ಸ್‌ನಿಂದ ಹಿಡಿದು ತಾವು ಕಳೆದುಕೊಂಡ ಹಣದ ತನಕ ಎಲ್ಲೂ- ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಮಾತನಾಡಿದರು. ಅವರ ಸೊಸೆ ಇನ್ಯಾವುದೋ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡಳು. “ಆಯ್ತು, ನನ್ನ ಮಗನಿಗೆ ಡಿವೋರ್ಸ್ ಕೊಟ್ಟು ಹೋಗು ಅಂದರೆ, ಅದಕ್ಕೆ ಇಂತಿಷ್ಟು ಕೋಟಿ ಕೊಡಿ ಅಂತ ಕುಳಿತು ಬಿಟ್ಟಳು. ಎಲ್ಲಿಂದ ತರಲಿ ರವೀ ಅಷ್ಟು ಹಣ? ಕಡೆಗೆ ನಾನೇ ಪ್ರೀತಿಯಿಂದ ಕಟ್ಟಿಕೊಂಡಿದ್ದ ಮನೆ ಮಾರಿ, ಆ ಹುಡುಗಿ ಕೇಳಿದಷ್ಟೂ ಕೊಟ್ಟು ನಮಸ್ಕಾರ ಅಂದೆ" ಎಂದರು ಜಾನಕಿ ಅಮ್ಮ. ಕಣ್ಣಲ್ಲಿ ಒಂದು ತೆರೆ ನೀರು. ಈ ಇಳಿಗಾಲದಲ್ಲಿ ಯಾರಿಗೂ ಅಂಥ ಕಹಿ ಅನುಭವ ಆಗಬಾರದು. ಅದರಲ್ಲೂ ಎಸ್.ಜಾನಕಿ ಅವರಂಥ ಆತ್ಮಾಭಿಮಾನಿಗೆ. ನಿಮಗೆ ಗೊತ್ತಿರಲಿ: ತುಂಬ ತಡವಾಗಿ ಆಕೆಗೆ ಗೌರವ ಡಾಕ್ಟರೇಟ್ ಸಿಕ್ಕಿತು. ಅದಕ್ಕಿಂತ ತಡವಾಗಿ ಪದ್ಮ ಪ್ರಶಸ್ತಿ ಬಂತು. ಬಂದಾಗ ಜಾನಕಿ ಅಮ್ಮ ಅಂದದ್ದಿಷ್ಟು: “ಈ ವಯಸ್ಸಿನಲ್ಲಿ ನಿಮ್ಮ ಪದ್ಮ ಪ್ರಶಸ್ತಿ ತಗೊಂಡು ಏನು ಮಾಡಲಿ? ನಾನು ಡಾಕ್ಟರೇಟ್ ಪದವಿ ಸಿಕ್ಕಾಗಲೂ ಡಾ.ಜಾನಕಿ ಅಂತ ಹೇಳಿಕೊಳ್ಳಲಿಲ್ಲ. ನೀವು ಪ್ರಶಸ್ತಿ ಕೊಡುವುದಕ್ಕೆ ತುಂಬ ಮುಂಚೆಯೇ ನನ್ನ ಶೋತೃಗಳು ನನಗೆ ಅತಿದೊಡ್ಡ ಪ್ರಶಸ್ತಿ ಕೊಟ್ಟಿದ್ದಾರೆ. ಅವತ್ತಿಗೂ ಇವತ್ತಿಗೂ ಜಾನಕಿ ಅಂದರೆ ನಾನೇ. ನಾನು ಎಸ್.ಜಾನಕಿ! ನಿಮ್ಮ ಪದ್ಮ ಪ್ರಶಸ್ತಿ ನನಗೆ ಬೇಡ!" ಅದು ನಿಜಕ್ಕೂ ಒಬ್ಬ ಕ್ರಿಯಾಶೀಲ ವ್ಯಕ್ತಿ ಆಡಬಹುದಾದ, ಆಡಲೇಬೇಕಾದ ಮಾತು.

ಅಷ್ಟರಲ್ಲಿ ಜಾನಕಿಯವರು ಉಳಿದುಕೊಂಡಿದ್ದ ಆ ಮನೆಯವರು, ಬಹುಶಃ ಜಾನಕಿ ಅವರ ಸಂಬಂಧಿಕರಿರಬಹುದು: ಅವರು ಎಲ್ಲರಿಗೂ ಚಹಾ ತಂದರು. “ನನಗೆ ಸಕ್ಕರೆ ಹಾಕಬೇಡಿ. ಷುಗರ್ ಫ್ರೀ ಮಾತ್ರೆ ಇದೆಯಲ್ಲ? ಅದನ್ನೂ ಹಾಕಬೇಡಿ. ಬೇರೇನನ್ನೂ ಹಾಕದೆ ಸರಳವಾಗಿ ಒಂದು ಚಪ್ಪೆ ಚಹ ಮಾಡಿಕೊಡಿ" ಅಂದ ಕಲ್ಯಾಣ್.
ಹಿಂತಿರುಗುವ ಹಾದಿಯಲ್ಲಿ “ನಿಂಗೆ ಡಯಾಬಿಟೀಸ್ ಬಂದು ಎಷ್ಟು ವರ್ಷ ಆಯಿತು!" ಅಂತ ಕೇಳಿದೆ ಕಲ್ಯಾಣ್‌ನನ್ನ.
“ಯಾವ ಷುಗರ್ರೂ ಇಲ್ಲ ಸರ್. ಅದೊಮ್ಮೆ ಖಾಯಿಲೆಯಿಂದ ಚೇತರಿಸಿಕೊಂಡು ಎದ್ದು ಕುಳಿತ ನನ್ನ ಅಮ್ಮನಿಗೆ, ನನ್ನ ಅತ್ತಿಗೆ ಸಕ್ಕರೆಯಿಲ್ಲದ ಚಹಾ ತಂದುಕೊಟ್ಟರು. ನನ್ನ ಅಮ್ಮ ಅದೇಕೋ ಮುಖ ಕಿವುಚಿಕೊಂಡರು. ಆ ಕ್ಷಣದಲ್ಲಿ ಮನೆಯವರಿಗೆ ನನ್ನ ನಿರ್ಧಾರ ಹೇಳಿದೆ. ಶಪಥ ತಂತಾನೆ ಬಾಯಿಗೆ ಬಂದಿತ್ತು.
“ನನ್ನ ಅಮ್ಮ ಕುಡಿಯಲಾಗದ, ತಿನ್ನಲಾಗದ ಸಕ್ಕರೆ ಇನ್ನು ಈ ಜನ್ಮದಲ್ಲಿ ನನಗೂ ಬೇಡ..." ಅಂದುಬಿಟ್ಟೆ. ಅವತ್ತಿನಿಂದ ನಾನು ಯಾವುದೇ ತರಹದ ಸಿಹಿ ತಿನ್ನುತ್ತಿಲ್ಲ. ಕಾಫಿ-ಟೀಗೂ ಹಾಕಿಸಿಕೊಳ್ಳುವುದಿಲ್ಲ. ತೀರ ಪ್ರಸಾದ ಅಂತ ಯಾರಾದರೂ ತಂದುಕೊಟ್ಟರೆ ಇಲ್ಲ ಅನ್ನಲಾಗದೆ ಒಂದು ಚಿಟಿಕೆಯಷ್ಟು ಬಾಯಿಗೆ ಹಾಕಿಕೊಂಡು, ಆ ಕ್ಷಣದಲ್ಲಿ ಅಮ್ಮನಿಗೆ sorry ಸಲ್ಲಿಸುತ್ತೇನೆ" ಅಂದ ಕಲ್ಯಾಣ್. ನಮ್ಮಿಬ್ಬರ ಕಣ್ಣೂ ಒದ್ದೆಯಾಗಿದ್ದವು. ಅಂಥದೊಂದು ಪ್ರೀತಿ, ಭಾವುಕತೆ, ಅದರ ಉತ್ಕಟತೆ ಇಲ್ಲದಿದ್ದರೆ ಕಲ್ಯಾಣ್ ಅಷ್ಟು ಸೊಗಸಾದ ಹಾಡು ಬರೆದು, ಹರಿದ ಚಾಪೆಯ ಮೇಲೆ ಕುಳಿತು ಸಂಗೀತ ಸಂಯೋಜನೆ ಮಾಡಿ ‘ತುಂತುರೂ ಅಲ್ಲಿ ನೀರ ಹಾಡು" ಎಂಬಂಥ ಮಧುರ ಸೃಷ್ಟಿಯನ್ನು ಕೋಟ್ಯಂತರ ಕನ್ನಡಿಗರಿಗೆ ಕಲ್ಯಾಣ್ ಕೊಡಲು ಸಾಧ್ಯವಾಗುತ್ತಿತ್ತೆ? I love the boy.
ಅದೊಂದು ಮರೆಯಲಾಗದ ದಿನ ನನ್ನ ಪಾಲಿಗೆ.
ಅಷ್ಟು ಸಾಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books