Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಡ್ವಾಣಿ ಸೋಲಿಸಲು ಮೋದಿಗೆ ಸುಪಾರಿ ಕೊಟ್ಟಿತಾ ಆರೆಸ್ಸೆಸ್

ಬಿಜೆಪಿಯ ಭೀಷ್ಮ ಅನ್ನಿಸಿಕೊಂಡ ಲಾಲ್‌ಕೃಷ್ಣ ಅಡ್ವಾಣಿಯನ್ನು ಸೋಲಿಸಲು ಖುದ್ದು ನರೇಂದ್ರಮೋದಿ ಬಯಸಿದ್ದಾರಾ? ಹಾಗೆಂಬ ಅನುಮಾನ ಬಿಜೆಪಿ ಪಾಳಯದಿಂದಲೇ ಕೇಳತೊಡಗಿದೆ ಮತ್ತು ಇಂತಹ ಸಂಚಿನಲ್ಲಿ ಆರೆಸೆಸ್ಸ್ ಭಾಗಿಯಾಗಿದೆ ಎಂಬ ಮಾತು ತೇಲಿಕೊಂಡು ಬರುತ್ತಿದೆ. ಹಾಗೆ ನೋಡಿದರೆ ಅಡ್ವಾಣಿ ಈಗ ಹಳೇ ಅಡ್ವಾಣಿಯಲ್ಲ. ಅವರೀಗ ಮೃದು ಹಿಂದೂವಾದಿ. ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬಿಜೆಪಿಯ ಹಾರ್ಡ್‌ಕೋರ್ ಹಿಂದೂವಾದಿ ಎಂಬ ಹಣೆಪಟ್ಟಿ ಯಾರಿಗಾದರೂ ದಕ್ಕಲೇಬೇಕಿತ್ತು. ಸಹಜವಾಗಿ ಅಡ್ವಾಣಿ ಅದಕ್ಕೆ ಅರ್ಹರೂ ಆಗಿದ್ದರು. ಆದರೆ ಒಂದು ಪಕ್ಷವನ್ನು ಕಟ್ಟುವುದು ಬೇರೆ. ಒಂದು ದೇಶದ ಮುಖ್ಯಸ್ಥನಾಗುವುದು ಬೇರೆ. ಇದು ಲಾಲ್‌ಕೃಷ್ಣ ಅಡ್ವಾಣಿಗೆ ಅರ್ಥವಾಗಲು ಬಹುಕಾಲ ಬೇಕಾಗಲಿಲ್ಲ. ಹಾಗಂತಲೇ ಪಾಕಿಸ್ತಾನಕ್ಕೆ ಹೋದವರು, ನಾವೆಲ್ಲ ಮಹಮದಾಲಿ ಜಿನ್ನಾ ಬಗ್ಗೆ ತಪ್ಪು ತಿಳಿದುಕೊಂಡಿದ್ದೇವೆ ಎಂದು ಹೇಳಿದರು. ಅದರ ಬೆನ್ನ ಹಿಂದೆಯೇ ಮಹಮದಾಲಿ ಜಿನ್ನಾ ಒಬ್ಬ ಸೆಕ್ಯುಲರ್ ನಾಯಕ ಆಗಿದ್ದರು ಎಂದು ಹೇಳಿದರು. ಅವರ ಮಾತನ್ನು ಪಾಕಿಸ್ತಾನದ ಮತಾಂಧರು ಒಪ್ಪಿದರು. ಯಾಕೆಂದರೆ ಜಿನ್ನಾ ಧರ್ಮಾಂಧತೆಯನ್ನೂ ಆಫೀಮಿನ ಥರ ಬಳಸಿಕೊಂಡವನೇ ಹೊರತು ಖುದ್ದು ಆತನಿಗೆ ಧರ್ಮಾಂಧತೆಯಲ್ಲಿ ನಂಬಿಕೆ ಇರಲಿಲ್ಲ.
ಆದರೆ ಪಾಕಿಸ್ತಾನ ಎಂಬ ರಾಷ್ಟ್ರ ಕಾಲಗರ್ಭದಲ್ಲಿ ಜನಿಸಬೇಕು ಎಂಬ ಕಾರಣಕ್ಕಾಗಿ ಜಿನ್ನಾ ಏನೆಲ್ಲ ಮಾಡಿದರು ಎಂಬುದನ್ನು ಹೇಳುತ್ತಾ ಹೋದರೆ ಅದೊಂದು ಕತೆ. ಮೂಲತಃ ಅವರೇ ಒಬ್ಬ ಕಟ್ಟರ್ ಪಂಥೀಯ ಆಗಿರಲಿಲ್ಲ. ಅವರಿಗೆ ಪಾಕಿಸ್ತಾನ ಬೇಕಿತ್ತು ಅಷ್ಟೇ. ಅದೇನೇ ಇರಲಿ, ಇಂತಹ ಮಹಮದಾಲಿ ಜಿನ್ನಾ ಬಗ್ಗೆ ಯಾವಾಗ ಲಾಲ್‌ಕೃಷ್ಣ ಅಡ್ವಾಣಿಯವರು ಸೆಕ್ಯುಲರ್ ಎಂದು ಹೇಳಿದರೋ ಇದಾದ ನಂತರ ಅರ್ಧ ಶತಮಾನದಷ್ಟು ಸುದೀರ್ಘ ಬಾಂಧವ್ಯವನ್ನೂ ಆರೆಸ್ಸೆಸ್ ನಾಯಕರು ಮರೆತರು. ಅಡ್ವಾಣಿಗೆ ಏನೆಲ್ಲ ಶಿಕ್ಷೆ ಕೊಡಲು ಸಾಧ್ಯವೋ ಅದನ್ನೆಲ್ಲ ಕೊಟ್ಟರು. ಅಷ್ಟೇ ಆಗಿದ್ದರೆ ಬೇರೆ ಮಾತು. ಆದರೆ ಅವರಿಗೆ ಬೇಕಾಗಿದ್ದುದು ಕಟ್ಟರ್ ಹಿಂದೂ ಮತೀಯ ಧೋರಣೆಯ ನಾಯಕ. ವಾಜಪೇಯಿ ಇದ್ದಾಗ ವಾಜಪೇಯಿಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಯಾಕೆಂದರೆ ವಾಜಪೇಯಿ ಮೊದಲಿನಿಂದ ಇದ್ದುದೇ ಹಾಗೆ. ಆದರೆ ಲಾಲ್‌ಕೃಷ್ಣ ಅಡ್ವಾಣಿ ಹಾಗೆ ಇದ್ದವರಲ್ಲವಲ್ಲ. ಹೀಗಾಗಿ ಅಡ್ವಾಣಿ ಜಾಗಕ್ಕೆ ಬೇರೆಯವರನ್ನು ತಂದು ಕೂರಿಸಲು ಆರೆಸ್ಸೆಸ್ ವ್ಯವಸ್ಥಿತ ಹುನ್ನಾರ ನಡೆಸತೊಡಗಿತು. ಪಾಕಿಸ್ತಾನಕ್ಕೆ ಹೋಗಿ ಮಹಮದಾಲಿ ಜಿನ್ನಾ ಸೆಕ್ಯುಲರ್ ಅಂತ ಹೇಳಿ ಬಂದರೆ ಅದನ್ನು ಸಹಿಸಿಕೊಳ್ಳುವುದು ಹೇಗೆ ಮತ್ತು ಅಂತಹ ನಾಯಕ ಕಣ್ಣ ಮುಂದಿದ್ದರೆ ಬಿಜೆಪಿಯ ಭವಿಷ್ಯವೇನು, ಬಿಜೆಪಿಯ ಭವಿಷ್ಯವಿರುವುದೇ ಧರ್ಮದ ಆಧಾರದಲ್ಲಿ. ಅಂತಹ ಆಧಾರವೇ ಕಳಚಿ ಬಿದ್ದರೆ ಅದನ್ನು ಸಹಿಸಿಕೊಳ್ಳುವುದು ಹೇಗೆ ಹಾಗಂತಲೇ ಲಾಲ್‌ಕೃಷ್ಣ ಅಡ್ವಾಣಿಯನ್ನು ಕ್ರಮೇಣ ದೂರ ಇಡತೊಡಗಿದ ಆರೆಸ್ಸೆಸ್ ಒಂದು ಹಂತದಲ್ಲಿ ಅದನ್ನು ನೇರವಾಗಿ ಹೇಳಿಯೂ ಬಿಟ್ಟಿತು.

ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಥರದವರು ಇನ್ನು ಹಿಂದೆ ಸರಿಯಬೇಕು. ಯುವಕರಿಗೆ ದಾರಿ ಮಾಡಿಕೊಡಬೇಕು ಅಂತ ಆರೆಸ್ಸೆಸ್ ನಾಯಕರು ಹೇಳುವುದರ ಹಿಂದಿನ ಅರ್ಥ ಎಂತಹವರಿಗೂ ಅರ್ಥವಾಗುವಂತಿತ್ತು. ಹೇಗಿದ್ದರೂ ವಾಜಪೇಯಿ ನಿವೃತ್ತರಾಗಿದ್ದರು. ಉಳಿದಿದ್ದು ಬರೀ ಅಡ್ವಾಣಿ ಮಾತ್ರ. ಹಾಗಂತಲೇ ಅಡ್ವಾಣಿಗೆ ನೇರವಾಗಿ ತಾಗುವಂತೆ ಇಂತಹ ಮಾತುಗಳನ್ನು ಆರೆಸ್ಸೆಸ್ ಮುಖಂಡರು ಆಡಿದರು. ಆರೆಸ್ಸೆಸ್‌ನವರು ಬರೀ ಆಡಿದ್ದಷ್ಟೇ ಅಲ್ಲ, ಅಡ್ವಾಣಿಯ ಜಾಗಕ್ಕೆ ಸೂಟಬಲ್ ಕ್ಯಾಂಡಿಡೇಟ್ ಅನ್ನೂ ಹುಡುಕತೊಡಗಿದರು. ಅಂತಹವರ ಕಣ್ಣಿಗೆ ಕಾಣಿಸಿದ್ದು ನರೇಂದ್ರಮೋದಿ. ವಾಸ್ತವದಲ್ಲಿ ಗುಜರಾತಿಗಳು ಬಹು ಒಳ್ಳೆಯ ಬಿಜಿನೆಸ್‌ಮನ್‌ಗಳು. ಕುಸಿದು ಬಿದ್ದ ಗುಜರಾತ್‌ನ್ನೇ ಮೇಲೆಬ್ಬಿಸಿ ನಿಲ್ಲಿಸಿದವರು ಅವರು. ಅವರ ರಕ್ತದಲ್ಲೇ ವ್ಯಾಪಾರಿ ಗುಣವಿದೆ. ಅಂತಹ ಗುಣ ಹೊಂದಿದ್ದ ನರೇಂದ್ರಮೋದಿಗೆ ಮತ್ತೊಂದು ಗುಣವೂ ಇತ್ತು. ಈ ಗುಣ ಲಾಲ್‌ಕೃಷ್ಣ ಅಡ್ವಾಣಿಯನ್ನು ಮೀರಿಸುವಂತಿತ್ತು. ಅಡ್ವಾಣಿ ಮೃದು ಹಿಂದೂವಾದಿಯಾದರೆ ನರೇಂದ್ರಮೋದಿ ಕಟ್ಟರ್ ಹಿಂದೂವಾದಿಯಾಗಿದ್ದರು. ಆದರೆ ಅದೇ ಕಾಲಕ್ಕೆ ಅಭಿವೃದ್ಧಿಯ ಕುರಿತು ಪುಂಖಾನುಪುಂಖವಾಗಿ ಮಾತನಾಡಬಲ್ಲವರಾಗಿದ್ದರು.

ಅಷ್ಟೇ ಯಾಕೆ; ಗುಜರಾತ್‌ನಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದ ಆರೆಸ್ಸೆಸ್ ವ್ಯಕ್ತಿಗಳನ್ನೂ ದುಸೂರಾ ಮಾತನಾಡದೇ ಎತ್ತಂಗಡಿ ಮಾಡಿಸಿದ್ದರು. ಇಂತಹ ಗುಣವಿರುವ ವ್ಯಕ್ತಿ ತಾನೇ ಆರೆಸ್ಸೆಸ್‌ಗೆ ಬೇಕಿದ್ದುದು. ಹೇಳಿ ಕೇಳಿ ಮೋದಿ ಹಿಂದುಳಿದ ವರ್ಗದವರು. ಅಂತಹವರು ಮುಲಾಜೇ ಇಲ್ಲದೆ ಅಂಬಾನಿ ಟು ಅದಾನಿ ತನಕ ಬೇಕು ಬೇಕು ಎಂದ ಕೈಗಾರಿಕೋದ್ಯಮಿಗಳಿಗೆಲ್ಲ ಜಾಗ ಕೊಟ್ಟಿದ್ದರು. ನೀರು ಕೊಟ್ಟಿದ್ದರು. ಖಾಸಗಿ ವಲಯದಲ್ಲಿ ದಂಡಿಯಾಗಿ ವಿದ್ಯುತ್ ಉತ್ಪಾದಿಸಲು ಅನುಮತಿ ಕೊಟ್ಟರು. ಒಟ್ಟಿನಲ್ಲಿ ಗುಜರಾತ್ ಎಂದರೆ ಕೈಗಾರಿಕೋದ್ಯಮ ಸ್ಥಾಪನೆಗೆ ಅತ್ಯುತ್ತಮ ರಾಜ್ಯ ಎಂಬ ಅಭಿಪ್ರಾಯ ಮೂಡುವಂತೆ ಮಾಡಿಬಿಟ್ಟಿದ್ದರು. ಅಡ್ವಾಣಿಯನ್ನು ದೂರವಿಡಲು ಆರೆಸ್ಸೆಸ್‌ಗೆ ಇಷ್ಟು ಸಾಕಾಯಿತು. ಒಂದು ಕಡೆಯಿಂದ ಕಟ್ಟರ್ ಹಿಂದೂವಾದಿ ಮತ್ತೊಂದು ಕಡೆಯಿಂದ ಅಭಿವೃದ್ಧಿಯ ವಿಷಯದಲ್ಲಿ ಕನಸುಗಳನ್ನು ಮೂಡಿಸುವ ಕೆಪ್ಯಾಸಿಟಿ ಇರುವ ನಾಯಕ. ಆರೆಸ್ಸೆಸ್ ಸಂತೋಷದಿಂದ ಲಾಲ್‌ಕೃಷ್ಣ ಅಡ್ವಾಣಿಯವರ ಜಾಗಕ್ಕೆ ನರೇಂದ್ರಮೋದಿ ಅವರನ್ನು ತಂದು ಕೂರಿಸಿತು. ಇದಾದ ನಂತರ ಅಡ್ವಾಣಿ ಏನೇ ವಿರೋಧದ ಮಾತನಾಡಿದರೂ ಪ್ರಧಾನಿ ಹುದ್ದೆಯ ಅಭ್ಯರ್ಥಿ ಅಂತ ಘೋಷಿಸುವಂತೆ ಮಾಡಿತು.

ಒಂದು ಕಾಲದಲ್ಲಿ ಅಡ್ವಾಣಿಯೆಂದರೆ ತಮ್ಮ ರಾಜಕೀಯ ಗುರು. ಅವರಿಲ್ಲದ ನಮ್ಮ ರಾಜಕೀಯ ಜೀವನವನ್ನು ಊಹಿಸುವುದೇ ಕಷ್ಟ ಎನ್ನುತ್ತಿದ್ದವರೂ ನೋಡ ನೋಡುತ್ತಿದ್ದಂತೆಯೇ ನರೇಂದ್ರಮೋದಿ ಹಿಂಬಾಲಕರಾಗಿಬಿಟ್ಟರು. ಇಡೀ ಭಾರತವನ್ನು ಉದ್ಧಾರ ಮಾಡಲು ನರೇಂದ್ರಮೋದಿಗೆ ಮಾತ್ರ ಸಾಧ್ಯ ಎಂದು ಹೇಳತೊಡಗಿದರು. ಫೈನಲಿ, ಇಷ್ಟವಿದ್ದೋ, ಇಲ್ಲದೆಯೋ ಮೃದು ಹಿಂದೂವಾದಿಯಾದ ಅಡ್ವಾಣಿ ನೋಡ ನೋಡುತ್ತಿದ್ದಂತೆಯೇ ಸೈಡ್‌ಲೈನ್‌ಗೆ ಸರಿದರು. ಅವರು ಸೈಡ್‌ಲೈನ್‌ಗೆ ಹೋಗುವಂತೆ ಮಾಡಿದ್ದೇನೋ ನಿಜ. ಆದರೆ ರಾಜಕೀಯವಾಗಿ ಅವರನ್ನು ಸೈಡ್‌ಲೈನ್ ಮಾಡುವುದು ಅಷ್ಟು ಸುಲಭವಲ್ಲ. ಒಂದು ಸಂಘಟನೆಯಾದರೆ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ಸಂಘಟನೆಯೇ ಅಲ್ಲದೆ ತನ್ನದೇ ರಾಜಕೀಯ ಹಿತವನ್ನು ಕಾಪಾಡಿಕೊಳ್ಳುವ ಪಕ್ಷವಾದರೆ ಇವತ್ತು ಭಾರತೀಯ ರಾಜಕಾರಣದ ದಿಕ್ಕು ಹೋಗುತ್ತಿರುವುದೇ ಈ ದಿಸೆಯಲ್ಲಿ.

ಒಂದು ವೇಳೆ ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ಇನ್ನೂರು-ಇನ್ನೂರ ಇಪ್ಪತ್ತರ ಗಡಿ ದಾಟದೇ ಹೋದರೆ ಅನುಮಾನವೇ ಬೇಡ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಶಕ್ತಿಗಳು ಅನ್ನಿಸಿಕೊಂಡ ಕೆಲ ಪಕ್ಷಗಳ ನಾಯಕರು, ಅಡ್ವಾಣಿ ಪ್ರಧಾನಿ ಆಗುವುದಾದರೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳುತ್ತಾರೆ. ಹಾಗೆ ಹೇಳುವಂತಹ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಈ ವಾತಾವರಣವನ್ನು ಪ್ರಣಬ್ ಮುಖರ್ಜಿ ಅವರಂತಹ ನಾಯಕರೇ ಸೃಷ್ಟಿ ಮಾಡಿದ್ದಾರೆ ಎಂಬುದು ರಹಸ್ಯದ ವಿಷಯವೇನಲ್ಲ. ಅವರಿಗೀಗ ಅರ್ಜೆಂಟಾಗಿ ಕಾಂಗ್ರೆಸ್‌ನ ಹಿತ ಕಾಯಬೇಕು. ವೈಯಕ್ತಿಕ ನೆಲೆಯಲ್ಲಿ ಕಾಂಗ್ರೆಸ್ ಬಗ್ಗೆ ಅವರಿಗಿರುವ ಪ್ರೀತಿ ಅಷ್ಟಕ್ಕಷ್ಟೇ. ಪ್ರಧಾನಮಂತ್ರಿಯ ಹುದ್ದೆಗೇರಬೇಕಿದ್ದ ತಮ್ಮನ್ನು ಯಾವ ಕಾರಣಕ್ಕಾಗಿ ರಾಷ್ಟ್ರಪತಿ ಹುದ್ದೆಗೆ ತಂದು ಕೂರಿಸಲಾಯಿತು ಎಂಬುದನ್ನು ಅರಿಯದಷ್ಟು ದಡ್ಡರೇನಲ್ಲ ಪ್ರಣಬ್ ಮುಖರ್ಜಿ. ಅಂತಹವರಿಗೀಗ ರಾಹುಲ್‌ಗಾಂಧಿಯನ್ನು ಪ್ರಧಾನಿ ಮಾಡುವ ಸುಪಾರಿ ಕೊಡಲಾಗಿದೆಯಾದರೂ ಆಳದಲ್ಲಿ ಅವರ ಮನಸ್ಸು ಇರುವುದು ಲಾಲ್‌ಕೃಷ್ಣ ಅಡ್ವಾಣಿ ಮತ್ತು ಎನ್‌ಸಿಪಿಯ ಶರದ್ ಪವಾರ್ ಬಗ್ಗೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲು ನಲವತ್ತೋ, ಐವತ್ತೋ ಸೀಟುಗಳನ್ನು ಪಡೆಯಬೇಕಾದ ಅನಿವಾರ್ಯತೆ ಉಂಟಾದರೆ ನಿಸ್ಸಂಶಯವಾಗಿ ಪ್ರಣಬ್ ದಾ ಹೇಳುವ ನಲವತ್ತು, ಐವತ್ತು ಜನ ಅಡ್ವಾಣಿ ಪ್ರಧಾನಿಯಾಗುವುದಾದರೆ ನಮ್ಮ ಬೆಂಬಲ ಎನ್‌ಡಿಎಗೆ ಎಂದು ಹೇಳುತ್ತಾರೆ. ಆದರೆ ಹಾಗೆ ಹೇಳುವ ವಾತಾವರಣವನ್ನು ಸೃಷ್ಟಿಸಬೇಕು ಅಷ್ಟೇ. ಒಂದು ವೇಳೆ ಈ ವಾತಾವರಣ ಸೃಷ್ಟಿಯಾಗದೇ ಹೋದರೆ, ತೃತೀಯ ರಂಗ ಅಧಿಕಾರ ಹಿಡಿಯುವ ಅನಿವಾರ್ಯತೆ ಸೃಷ್ಟಿಯಾದರೆ ಶರದ್ ಪವಾರ್ ಅವರನ್ನು ತಂದು ಕೂರಿಸುವುದು ಪ್ರಣಬ್ ಬಯಕೆ. ಅದರಲ್ಲೂ ಮುಖ್ಯವಾಗಿ ಅವರಿಗೀಗ ಅರ್ಜೆಂಟಾಗಿ ಅಡ್ವಾಣಿ ಪ್ರಧಾನಿ ಆಗುವುದು ಬೇಕಿದೆ. ಇದರಿಂದ ಆಗುವ ಒಂದು ಅನುಕೂಲವೆಂದರೆ, ಒಂದು ಬಿಜೆಪಿ ಪಡಸಾಲೆಯಲ್ಲಿ ಓರ್ವ ಮೃದು ಹಿಂದೂವಾದಿ ಬಂದು ಕೂರುವಂತೆ ಮಾಡುವುದು. ಎರಡನೆಯದಾಗಿ ಅಡ್ವಾಣಿಯನ್ನು ಒಂದು ಸಲ ಪ್ರಧಾನಿ ಹುದ್ದೆಯಲ್ಲಿ ಕೂರಿಸಿ ಶಾಂತ ಭಾರತವನ್ನು ನೋಡುವುದು ಪ್ರಣಬ್ ಮುಖರ್ಜಿಯ ಇಚ್ಛೆ. ಅವರ ಈ ಇಚ್ಛೆ ಬಿಜೆಪಿಯ ನಾಯಕರಿಗೂ ಗೊತ್ತಿದೆ. ಆರೆಸ್ಸೆಸ್ ನಾಯಕರಿಗೂ ಗೊತ್ತಿದೆ. ಲಾಲ್‌ಕೃಷ್ಣ ಅಡ್ವಾಣಿ ಗೆದ್ದರೆ ತಾನೇ ಪ್ರಧಾನಿ ಆಗುವ ಮಾತು. ಅವರು ಸೋತು ಹೋಗುವಂತೆ ಮಾಡಿಬಿಟ್ಟರೇ, ಆಗ ಅವರು ಪ್ರಧಾನಿ ಹುದ್ದೆಯ ಮೇಲೆ ಟವಲ್ಲು ಹಾಕಲೂ ಸಾಧ್ಯವಿಲ್ಲ.

ಇದು ಅಡ್ವಾಣಿಗೂ ಗೊತ್ತು. ಹಾಗಂತಲೇ ಅವರು ಭೋಪಾಲ್‌ನಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ಅಡ್ವಾಣಿ ಎಂದರೆ ನನ್ನ ದೇವರು ಎಂದೇ ಹೇಳುತ್ತಿದ್ದವರು ಈಗ ಮುಲಾಜೇ ನೋಡದೆ: ಹಿಂದೆ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಿದ್ದರೋ ಅಲ್ಲಿಂದಲೇ ಸ್ಪರ್ಧಿಸಿ ಎಂದು ಕೈ ತೊಳೆದುಕೊಂಡು ಬಿಟ್ಟರು. ಹೇಳಿ ಕೇಳಿ ಅಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಇರುವುದು ಗುಜರಾತ್‌ನಲ್ಲಿಯೇ. ಅಂತಹ ನೆಲದಲ್ಲೇ ಅವರು ಸೋಲುವಂತೆ ಮಾಡಿಬಿಟ್ಟರೆ ನರೇಂದ್ರಮೋದಿಯ ರೂಟ್ ಕ್ಲಿಯರ್. ಹಾಗೆ ದಾರಿ ಸರಾಗವಾಗಲಿ ಎಂಬ ಕಾರಣಕ್ಕಾಗಿಯೇ ಗಾಂಧಿ ನಗರದಲ್ಲಿ ಅಡ್ವಾಣಿ ಸೋಲಿಗೆ ಅಗತ್ಯವಾದ ಕಾರ್ಯತಂತ್ರವನ್ನು ಹೆಣೆಯಲಾಗಿದೆ. ಇದನ್ನು ಅಡ್ವಾಣಿ ಒಪ್ಪದಿದ್ದರೂ, ಭೋಪಾಲ್ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದರೂ ಯಾರೂ ಕೇರ್ ಮಾಡಿಲ್ಲ. ಹೀಗಾಗಿ ಅಡ್ವಾಣಿ ತಮ್ಮ ಪ್ರಧಾನಿ ಹುದ್ದೆಯ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದರೆ ಗಾಂಧಿನಗರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ.

ಒಂದು ವೇಳೆ ಸ್ವಂತ ಪಕ್ಷದವರು ಆರೆಸ್ಸೆಸ್ ಜತೆ ಸೇರಿಸಿ ತಮ್ಮನ್ನು ಸೋಲಿಸಿದರೆ ಎಂಬ ಆತಂಕ ಅವರಿಗೂ ಇದೆ. ಜಾತ್ಯತೀತವಾಗಿ ಆಗಲು ಹೋಗಿ ಅಡ್ವಾಣಿ ಮೂಲೆ ಸೇರಬೇಕಾದ ಪರಿಸ್ಥಿತಿ ಇದು. ಈ ದೇಶದಲ್ಲಿ ಜಾತ್ಯತೀತರಾಗುವುದು ರಾಜಕಾರಣಿಗಳಿಗೆ ಕಷ್ಟವಿದೆ. ಅದರಲ್ಲೂ ಮುಖ್ಯವಾಗಿ ಅಡ್ವಾಣಿಯವರಂತಹ ಹಿರಿಯ ನಾಯಕರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ದಿಗಿಲಾಗುತ್ತದೆ. ಪ್ರಧಾನಿ ಹುದ್ದೆಯ ಪೈಪೋಟಿಯಲ್ಲಿ ಮೋದಿ ಹಿಂದೆ ಕಾರ್ಪೊರೇಟ್ ಡಾನುಗಳಿದ್ದಾರೆ. ಆದರೆ ಅಡ್ವಾಣಿ ಹಿಂದೆ ಇರುವ ಒಂದೇ ಅಸ್ತ್ರವೆಂದರೆ ಪ್ರಣಬ್ ಮುಖರ್ಜಿ. ಈ ಅಸ್ತ್ರ ಯಶಸ್ವಿಯಾಗುತ್ತದೋ, ಇಲ್ಲವೋ ಅದು ಬೇರೆ ಕತೆ. ಆದರೆ ಅಡ್ವಾಣಿಯನ್ನು ಮುಗಿಸಲು ಆರೆಸ್ಸೆಸ್ ಯತ್ನಿಸುತ್ತಿದ್ದರೆ, ತಲೆ ಎತ್ತಲು ಅಡ್ವಾಣಿ ಯತ್ನಿಸುತ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಹಲವು ಅಚ್ಚರಿಯ ಫಲಿತಾಂಶಗಳನ್ನು ಒಳಗೊಂಡಿರುತ್ತದೆ ಎಂಬುದು ನಿಜ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 April, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books