Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕೊಟ್ಟ ಕುದುರೆಯ ಏರಲರಿಯದವನು ಅಂದಾಗ ನೆನಪಾದ ಕೇಜ್ರಿವಾಲ್!

ಕೊಟ್ಟ ಕುದುರೆಯ ಏರಲರಿಯದವನು ವೀರನೂ ಅಲ್ಲ, ಧೀರನೂ ಅಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪದೆಪದೇ ಈ ಮಾತನ್ನು ಆಡುತ್ತಿದ್ದರು. ಸಿದ್ಧರಾಮಯ್ಯನವರೂ ಈ ಮಾತನ್ನು ಆಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಕಂಡರೆ ನನಗೆ ಪದೆಪದೇ ನನಗೆ ಈ ಮಾತು ನೆನಪಿಗೆ ಬರುತ್ತದೆ. ಯಾವತ್ತೂ ರಾಜಕೀಯ ಮತ್ತು ಹೋರಾಟಕ್ಕೆ ಭಿನ್ನ ಭಿನ್ನ ಆಯಾಮಗಳಿರುತ್ತವೆ. ಹೋರಾಟ ತನ್ನಲ್ಲಿ ಎಲ್ಲವನ್ನೂ ಅಡಗಿಸಿಕೊಳ್ಳಬಲ್ಲದು. ಪ್ರತಿಯೊಂದು ಬೇಡಿಕೆಯನ್ನೂ ನ್ಯಾಯಯುತಗೊಳಿಸಬಲ್ಲದು. ಆದರೆ ರಾಜಕೀಯ ಹಾಗಲ್ಲ. ಅದು ಪ್ರತಿಯೊಂದು ವಿಷಯವನ್ನು ಅರಗಿಸಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಬೇಡಿಕೆಯನ್ನು ಈಡೇರಿಸುವಾಗಲೂ ಹತ್ತು ಬಾರಿ ಯೋಚನೆ ಮಾಡಬೇಕಾಗುತ್ತದೆ. ಹೋರಾಟಕ್ಕೂ, ರಾಜಕೀಯಕ್ಕೂ ಇರುವ ವ್ಯತ್ಯಾಸ ಅದು.

ಇವತ್ತು ನನಗೆ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಉತ್ತಮವಾಗಿ ಕಾಣುತ್ತಿದೆ. ಅದಕ್ಕೆ ಕಾರಣ, ಅದು ಅತ್ಯುತ್ತಮ ಸರ್ಕಾರವಾಗಿತ್ತು ಎಂದಲ್ಲ. ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಅದಕ್ಕಿಂತ ಕೆಟ್ಟ ಸರ್ಕಾರ ಎಂಬ ಕಾರಣಕ್ಕಾಗಿ ಅದು ನಮಗೆ ಉತ್ತಮವಾಗಿ ಕಾಣುತ್ತಿದೆ. ಗುಜರಾತ್‌ನಲ್ಲಿ ಮಕ್ಕಳಿಗೆ ಉದ್ಯೋಗ ಕೊಡುತ್ತಿರುವ ಮೋದಿ ನಮಗೆ ಅತ್ಯುತ್ತಮವಾಗಿ ಕಾಣುತ್ತಿದ್ದಾರೆ. ಆದರೆ ಇವರು ಅಧಿಕಾರಕ್ಕೆ ಬರಲಿ ನೋಡಿ. ಒಂದೆರಡು ವರ್ಷ ಕಳೆಯುವುದರಲ್ಲಿ ಹಿಂದಿದ್ದ ಸರ್ಕಾರವೇ ವಾಸಿ ಅನ್ನತೊಡಗುತ್ತೇವೆ. ಯಾಕೆಂದರೆ ಜಾಗತೀಕರಣದ ಈ ಕಾಲಘಟ್ಟದಲ್ಲಿ ಪ್ರತಿಯೊಂದು ವಿದ್ಯಮಾನಗಳೂ ಅಂತಾರಾಷ್ಟ್ರೀಯ ಸಂಬಂಧಕ್ಕೆ ತಳುಕು ಹಾಕಿಕೊಂಡಿರುತ್ತವೆ. ಪೆಟ್ರೋಲ್ ಬೆಲೆ ಏರಿಕೆ ಆದರೆ ಅದಕ್ಕೆ ಕೇವಲ ಯುಪಿಎ ಸರ್ಕಾರ ಕಾರಣವಾಗಿರುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಗಳು ಅದಕ್ಕೆ ಕಾರಣವಾಗಿರುತ್ತವೆ. ತೈಲ ಬೆಲೆಯನ್ನು ಹೆಚ್ಚಿಸಬೇಕೆಂದು ಅಪೆಕ್ ದೇಶಗಳೋ, ಅಮೆರಿಕವೋ, ರಷ್ಯಾವೋ ನಿರ್ಧರಿಸಿದರೆ ಅದಕ್ಕೆ ನಾವು ಬೆಲೆ ತೆರಬೇಕಾಗುತ್ತದೆ. ಈ ಅಂಶಗಳೆಲ್ಲ ಸಾಮಾನ್ಯ ಜನರಿಗೆ ಕಾಣುವುದಿಲ್ಲ. ಅವರಿಗೆ ತಕ್ಷಣ ಕಣ್ಣಿಗೆ ಕಾಣುವುದು ಯುಪಿಎ ಸರ್ಕಾರ. ಅವರು ಅಧಿಕಾರದಲ್ಲಿ ಇರುವುದಕ್ಕೆ ತಾನೇ ತೈಲ ಬೆಲೆ ಹೆಚ್ಚಾಗಿರುವುದು? ಹೀಗಾಗಿ ಅವರೇ ಎಲ್ಲದಕ್ಕೂ ಮೂಲ ಕಾರಣ ಎಂದು ಬಿಡುತ್ತೇವೆ.

ಅದು ಪೂರ್ತಿ ಜನರ ತಪ್ಪೇ ಅಂತ ನೋಡಿದರೆ ಹಾಗೂ ಅಲ್ಲ. ಒಂದು ಸರ್ಕಾರ ಪಾರದರ್ಶಕವಾಗಿದ್ದಾಗ, ಪ್ರತಿಯೊಂದು ವ್ಯವಹಾರದಲ್ಲೂ ಶುದ್ಧವಾಗಿದ್ದಾಗ ಜನರಿಗೆ ಸತ್ಯ ಹೇಳುವ ಎಲ್ಲ ಮಾರ್ಗಗಳನ್ನು ತೆರೆದಿಟ್ಟುಕೊಳ್ಳಬೇಕು. ಆದರೆ ಸರ್ಕಾರದಲ್ಲಿ ಬಂದು ಸೇರುವ ಬಹುತೇಕರಿಗೆ ತಮ್ಮದೇ ಅಜೆಂಡಾಗಳಿರುತ್ತವೆ. ಪ್ರಧಾನಿ ಮನಮೋಹನ್‌ಸಿಂಗ್ ಭ್ರಷ್ಟ ಅಲ್ಲದೇ ಇರಬಹುದು. ಆದರೆ ಅವರ ಸಂಪುಟದಲ್ಲಿರುವವರೆಲ್ಲ ಸಭ್ಯರು ಅಂತ ಹೇಳಲು ಸಾಧ್ಯವಿಲ್ಲ. ಅವರಿಗೂ ಒಂದೊಂದು ಅಜೆಂಡಾಗಳಿರುತ್ತವೆ. ಉದ್ಯಮಿಗಳನ್ನು ರಕ್ಷಿಸುವ, ಬಹುರಾಷ್ಟ್ರೀಯ ಕಂಪನಿಗಳನ್ನು ರಕ್ಷಿಸುವ, ಹೀಗೆ ಒಂದೊಂದು ಕಾರಣಕ್ಕಾಗಿ ತಮ್ಮದೇ ಅಜೆಂಡಾ ಇಟ್ಟುಕೊಂಡ ಮಂತ್ರಿಗಳು, ಸಂಸದರ ದಂಡು ಇರುತ್ತದೆ. ಇವರೆಲ್ಲ ಸೇರಿ ಒಂದು ಸರ್ಕಾರ ಪಾರದರ್ಶಕವಾಗಿರದಂತೆ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಆಧಾರ್ ಕಾರ್ಡನ್ನೇ ತೆಗೆದುಕೊಳ್ಳಿ. ಇಲ್ಲಿ ಶೋಭಾ ಕರಂದ್ಲಾಜೆ ಮತ್ತು ಹರೀಶ್‌ಗೌಡರಂತಹವರು ಸೇರಿ ದಿ ಬೆಸ್ಟು ಅನ್ನುವಂತಹ ಪ್ಲಾನು ಮಾಡಿದ್ದರು. ಅರೇ ಒಂದು ಕರೆಂಟು ಬಿಲ್ ತನ್ನಿ. ಒಂದು ಗ್ಯಾಸ್ ತಗೊಂಡು ಹೋಗಿ ಎಂಬ ಪದ್ಧತಿ ಅದು. ಯಾರೂ ಗ್ಯಾಸಿಗಾಗಿ ಮನೆ ಕಟ್ಟಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲವಲ್ಲ?

ಅಂತಹ ಸಾಮಾನ್ಯ ಜ್ಞಾನದ ಕೆಲಸವನ್ನು ಈ ಕಾಂಗ್ರೆಸ್‌ನವರು ದೇಶ ಕಟ್ಟುವ ಕೆಲಸ ಅನ್ನುವಂತೆ ಮಾಡಲು ಹೋದರು. ಮೂರೂವರೆ ಸಾವಿರ ಕೋಟಿ ರುಪಾಯಿಗಳನ್ನು ಖರ್ಚು ಮಾಡಿದರು. ಫೈನಲಿ, ಇಲ್ಲ, ನಾವು ನಿಮಗೆ ಕೊಡುವುದು ಒಂಬತ್ತು ಸಿಲಿಂಡರೂ ಅಲ್ಲ, ಸಿಲಿಂಡರ್ ಪಡೆಯಲು ಆಧಾರ್ ಕಾರ್ಡೂ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ಅರೇ, ಒಬ್ಬ ಮನುಷ್ಯನಿಗೆ ಒಂದು ನಂಬರ್ ಕೊಡಬೇಕಪ್ಪ. ಅದಕ್ಕೆ ಆಧಾರ್ ಕಾರ್ಡೇ ಯಾಕೆ ಬೇಕು. ಒಂದು ರೇಷನ್ ಕಾರ್ಡ್ ಸಾಕಲ್ಲವಾ? ಪ್ರತಿಯೊಂದು ರಾಜ್ಯಗಳಿಗೆ ಹೊಣೆಗಾರಿಕೆ ನೀಡಿ ಇದು ನಿಮ್ಮ ಕೆಲಸ ಅಂದಿದ್ದರೆ ಎಲ್ಲ ರಾಜ್ಯಗಳೂ ಮಾಡುತ್ತಿದ್ದವು. ಅದನ್ನು ಬಿಟ್ಟು ಊರ ಮದುವೆಗೆಲ್ಲ ನಮ್ಮದೇ ಪೌರೋಹಿತ್ಯ ಎಂಬಂತೆ ಮಾಡಲು ಹೋಗಿ ಆ ಕಡೆ ಆಧಾರ್ ಕಾರ್ಡ್ ಕತೆಯೂ ಉದ್ಧಾರವಾಗಲಿಲ್ಲ. ಈ ಕಡೆ ಅದರಿಂದ ಉದ್ಭವವಾದ ಗೊಂದಲವನ್ನು ತಡೆಯಲೂ ಆಗಲಿಲ್ಲ. ಹೇಳುತ್ತಾ ಹೋದರೆ ಉದ್ದಕ್ಕೂ ಯುಪಿಎ ಸರ್ಕಾರದ್ದೂ ಇದೇ ಕತೆ.

ಉದ್ಧಾರವಾಗುವ ಒಂದು ಕಲ್ಪನೆ ಇರುವ ದೇಶ ತನ್ನ ದೇಶವಾಸಿಗಳಿಗೆ ಕೈ ತುಂಬ ಕೆಲಸ ಕೊಡಬೇಕು. ಹಾಗೆ ಮಾಡುವ ಬದಲು ಅವರನ್ನು ಸೋಮಾರಿಗಳನ್ನಾಗಿ ಮಾಡಿದರೆ ದೇಶ ಕಟ್ಟುವವರು ಯಾರು? ಯುಪಿಎ ಸರ್ಕಾರ ಬಂದು ಕಟ್ಟುತ್ತದಾ? ಇಲ್ಲ, ಉದ್ಯಮಿಗಳು ಬಂದು ಕಟ್ಟುತ್ತಾರಾ? ಹೀಗೆ ದೇಶ ಕಟ್ಟುವ ಯೋಜನೆಗಳನ್ನು ರೂಪಿಸಿ, ಜನರ ಕೈಗೆ ಕೆಲಸ ಕೊಟ್ಟಿದ್ದರೆ ಅಭಿವೃದ್ಧಿಯ ಕನಸುಗಳು ಹುಟ್ಟುತ್ತಿದ್ದವು. ಯಾರೂ ಹಸಿವಿನಿಂದಿರಬಾರದು ನಿಜ. ಆದರೆ ಕೈ ಕಾಲು ಗಟ್ಟಿಯಿರುವ ಯಾರೂ ಮನೆಯಲ್ಲಿ ಕೂತು ದಿನ ಕಳೆಯಬಾರದು ಎಂಬುದೂ ಒಂದು ಸರ್ಕಾರಕ್ಕೆ ಗೊತ್ತಿರಬೇಕು. ಅದನ್ನು ಬಿಟ್ಟು ಕೈ ಕಾಲು ಗಟ್ಟಿಯಿರುವವರೂ ಕೆಲಸಕ್ಕೆ ಹೋಗದಂತೆ ಮಾಡಿ ಯಾವ ಪರಿ ಅವರನ್ನು ಸೋಮಾರಿಗಳನ್ನಾಗಿಸಲಾಗಿದೆ ಎಂದರೆ ನೂರಾ ಇಪ್ಪತ್ತೈದು ಕೋಟಿ ಜನರಿದ್ದೇವಲ್ಲ? ಹೋಗಿ ಹಳ್ಳಿಗಾಡಿನ ಕಡೆ ನೋಡಿ, ಕೆಲಸಕ್ಕೆ ಜನ ಸಿಗುವುದಿಲ್ಲ. ಸಿಗುವ ಜನರ ಕೈ ಕಾಲು ಹಿಡಿಯಬೇಕು.

ಯಾಕೆಂದರೆ ಹಸಿವು ಇದ್ದರೆ ತಾನೇ ಕೆಲಸಕ್ಕೆ ಹೋಗುವುದು. ಎಲ್ಲರೂ ಕೂತ ಜಾಗದಲ್ಲೇ ದುಡ್ಡು ದುಡಿಯಬೇಕು ಎಂಬ ಕನಸನ್ನು ಸೃಷ್ಟಿಸುವುದು ಒಂದು ಸರ್ಕಾರದ ಗುರಿಯಾಗಬಾರದು. ಆಗ ದೇಶದ ತುಂಬ ದರೋಡೆಕೋರರು ಸೃಷ್ಟಿಯಾಗುತ್ತಾರೆ. ಈ ಮಾತನ್ನು ನಾನು ಯಾರೋ ಒಬ್ಬರಿಗೆ ಅನ್ವಯ ಮಾಡಿ ಹೇಳುತ್ತಿಲ್ಲ. ಲಕ್ಷಾಂತರ ಕೋಟಿ ರುಪಾಯಿ ಟೋಪಿ ಹಾಕಿ ಓಡಿ ಹೋಗುತ್ತಾನಲ್ಲ ಉದ್ಯಮಿ ಅವನಿಗೆ ಏನು ಶಿಕ್ಷೆ ಕೊಡುತ್ತೀರಿ? ಅಬ್ಬಬ್ಬ ಎಂದರೆ ಒಂದು ಬ್ಲಾಕ್‌ಲಿಸ್ಟು. ಆ ಬ್ಲಾಕ್‌ಲಿಸ್ಟು ತಗೊಂಡು ಏನಾಗಬೇಕು? ಆತ ತನ್ನ ಹೆಸರು ಬ್ಲಾಕ್‌ಲಿಸ್ಟ್‌ಗೆ ಸೇರಿದರೆ ಮತ್ತೊಬ್ಬರ ಹೆಸರಿನಲ್ಲಿ ಕಂಪನಿ ತೆರೆದು ಮೋಸ ಮಾಡಲು ಹಾತೊರೆಯುತ್ತಾನೆ. ಮೋಸಗಾರರು ಯಾಕೆ ಹೆಚ್ಚುತ್ತಾರೆ ಎಂದರೆ ಒಂದು ಸರ್ಕಾರದ ನೀತಿಯೇ ಮೋಸಗಾರರ ಪರ ಇರುವಾಗ ಎಲ್ಲ ಕಡೆಯೂ ಮೋಸಗಾರರೇ ಹುಟ್ಟುತ್ತಾರೆ.


ಇವತ್ತು ಒಂದು ರುಪಾಯಿಗೆ ಕೆಜಿಯಂತೆ ಅಕ್ಕಿ ಕೊಡುತ್ತಾರೆ. ಮುಕ್ಕಾಲು ಪಾಲು ಜನ ಈ ಅಕ್ಕಿಯನ್ನು ಪಡೆಯುತ್ತಾರೆ. ಮತ್ತು ಈ ಪೈಕಿ ಅರ್ಧಕ್ಕಿಂತ ಹೆಚ್ಚು ಜನ ಈ ಅಕ್ಕಿಯನ್ನು ಮಾರಿಕೊಳ್ಳುತ್ತಾರೆ. ಯಾರಾದರೂ ಇದರ ಬಗ್ಗೆ ಮಾತನಾಡಿದರೆ ಸಾಕು. ಸಿದ್ಧರಾಮಯ್ಯನವರಿಂದ ಹಿಡಿದು ಎಲ್ಲರೂ ಬಾಯಿ ತುಂಬ ಬೈಯ್ಯುವವರೇ. ಹಸಿದವನ ಕಷ್ಟ ಅರಿಯಲಾರದವರು ಇಂತಹ ಮಾತನಾಡುತ್ತಾರೆ ಎಂಬಂತಹ ಕಟು ಧೋರಣೆ. ಅಲ್ರೀ, ನೀವು ಕೊಡುವ ಅಕ್ಕಿಯನ್ನು ಅರ್ಧಕ್ಕರ್ಧ ಜನ ಮಾರಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ? ನಮ್ಮ ವ್ಯವಸ್ಥೆಯಲ್ಲೇ ಏನಾದರೂ ಒಂದು ದೋಷವಿರಬೇಕಲ್ಲ? ಇದು ಕೇವಲ ಅನ್ನಭಾಗ್ಯ ಯೋಜನೆಯ ಮಾತಾಯಿತು. ಇದೇ ರೀತಿ ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯೂ ಒಂದು ದಿನ ಈ ದೇಶದ ಮುಂದೆ ಗಂಡಾಂತರವನ್ನು ತರುತ್ತದೆಯೇ ಹೊರತು ಬೇರೇನನ್ನೂ ಅಲ್ಲ. ಹೀಗೆ ಒಂದು ರುಪಾಯಿಗೆ ಅಕ್ಕಿ ಕೊಡುತ್ತಾ, ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಗಳನ್ನು ಮುಚ್ಚಿಡುತ್ತಾ, ಕುಟುಂಬ ಯೋಜನೆಯನ್ನಂತೂ ಮರೆತೇ ಹೋಗಿರುವ ನಾವು ಈ ದೇಶವನ್ನು ಕಟ್ಟುವುದು ಹೇಗೆ?

ಇವತ್ತು ಒಂದು ರುಪಾಯಿಗೆ ಸರ್ಕಾರವೇ ಕೆಜಿ ಅಕ್ಕಿ ಕೊಡುತ್ತದೆ ಎಂದರೆ ವರ್ಷಕ್ಕೆ ಮುನ್ನೂರಾ ಅರವತ್ತು ರುಪಾಯಿ ಕೊಟ್ಟರೆ ಸಾಕು. ನಾವಾದರೂ ಯಾಕೆ ಭತ್ತ ಬೆಳೆಯಬೇಕು ಎಂದು ರೈತ ಯೋಚಿಸುತ್ತಾನೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಗೂ, ಬೆಳೆಯುತ್ತಿರುವ ಆಹಾರ ಧಾನ್ಯಗಳ ಪ್ರಮಾಣಕ್ಕೂ ಇರುವ ಹೋಲಿಕೆ ಎಷ್ಟು ಜಾಸ್ತಿಯಾಗುತ್ತಿದೆ ಎಂಬುದನ್ನು ಗಮನಿಸಿ ನೋಡಿ. ಒಂದಲ್ಲ ಒಂದು ದಿನ ನಾವು ಅಕ್ಕಿಗಾಗಿ, ಗೋಧಿಗಾಗಿ ಇನ್ನಿತರ ಧಾನ್ಯಗಳಿಗಾಗಿ ಬೇರೆ ದೇಶಗಳ ಕಡೆ ನೋಡುವ ಸ್ಥಿತಿ ಬಂದೇ ಬರುತ್ತದೆ. ಇದು ಒಂದು ದೇಶವನ್ನು ಕಟ್ಟುವ ಪರಿಯಲ್ಲ. ದೇಶವನ್ನು ಕಟ್ಟುವವರು ಸತ್ಯವನ್ನು ಹೇಳುವ ತಾಕತ್ತು ಹೊಂದಿರಬೇಕು. ಇವತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಷ್ಟಾಗಿದೆ. ಇದಕ್ಕಾಗಿ ನಾವು ನಮ್ಮ ಖಜಾನೆಯಿಂದ ಇಂತಿಷ್ಟು ಅಂತ ದುಡ್ಡು ತೆರಬೇಕು ಎಂದು ಹೇಳುವ ಶಕ್ತಿ ನಮ್ಮ ಸರ್ಕಾರಕ್ಕಿರಬೇಕು. ಆಗ ಜನರಿಗೆ ಸತ್ಯ ಗೊತ್ತಾಗುತ್ತದೆ. ಕಾಳ ಸಂತೆಯಲ್ಲಿ ಅಡುಗೆ ಅನಿಲ ಮಾರಾಟವಾಗುತ್ತಿರುವುದು ನಿಜ. ಆದರೆ ಇದನ್ನು ಆಧಾರ್ ಕಾರ್ಡ್ ಮೂಲಕ ತಡೆಯಲು ಸಾಧ್ಯವೇ? ಕದಿಯುವವನು ಬೇರೊಂದು ರೂಪದಲ್ಲಿ ಕದಿಯುತ್ತಾನೆ. ಆದರೆ ಇದಕ್ಕಾಗಿ ಜನ ಸಾಮಾನ್ಯರಿಗೆ ಕಿರಿ ಕಿರಿ ಉಂಟು ಮಾಡುವ ಕೆಲಸ ಯಾಕೆ ಬೇಕು? ಸುಖಾಸುಮ್ಮನೆ ಮೂರೂವರೆ ಸಾವಿರ ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ಅರವತ್ತು ಕೋಟಿ ಜನರಿಗೆ ಆಧಾರ್ ಕಾರ್ಡ್ ಕೊಟ್ಟೆವೆಂದರೆ ಸಾಲದು. ಈ ಆಧಾರ್ ಕಾರ್ಡ್‌ನಿಂದ ಏನು ಪ್ರಯೋಜನವಾಯಿತು ಎಂಬುದು ತುಂಬ ಮುಖ್ಯ.

ಹೀಗೆ ನೋಡುತ್ತಾ ಹೋದರೆ ಹತ್ತು ವರ್ಷ ಕಾಲ ದೇಶವನ್ನು ಆಳಿದ ಕೇಂದ್ರದ ಯುಪಿಎ ಸರ್ಕಾರ ಜನರಿಗೆ ಬೋರು ಹೊಡೆಸಿದೆ. ಇವರು ಮೇಲೆದ್ದು ಹೋದರೆ ಸಾಕಪ್ಪ ಅನ್ನಿಸಿದೆ. ಇವರು ಮೇಲೆದ್ದು ಹೋದರೆ ಸಾಕಪ್ಪ ಎಂದು ಜನರು ಅನ್ನುತ್ತಿರುವ ಕಾರಣಕ್ಕೆ ಎನ್‌ಡಿಎ ಮೈತ್ರಿಕೂಟದವರು ಬಂದು ಕೂರುವುದು ನಾವೇ ಎಂದು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಇರುವುದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗಿಂತ ಉತ್ತಮ ನಾಯಕರು ಅವೆರಡೂ ಪಕ್ಷಕ್ಕಿಂತ ಬೇರೆ ಪಕ್ಷಗಳಲ್ಲಿದ್ದಾರೆ. ಕಮ್ಯುನಿಸ್ಟರು ಹಟ ಹಿಡಿದು ಕೂರದಿದ್ದರೆ ದೇಶದ ಕಾರ್ಮಿಕರ ಬಹುತೇಕ ಹಣ ಇವತ್ತು ಷೇರು ಮಾರುಕಟ್ಟೆಯಲ್ಲಿ ಬಿದ್ದು ಸರ್ವ ನಾಶವಾಗಿ ಹೋಗುತ್ತಿತ್ತು. ಕೇಂದ್ರದ ಯುಪಿಎ ಸರ್ಕಾರದ ಈ ಕೆಲಸವನ್ನು ತಡೆಗಟ್ಟಿದ್ದಕ್ಕಾಗಿ ನಾವು ಕಮ್ಯುನಿಸ್ಟರನ್ನು ಅಭಿನಂದಿಸಲೇಬೇಕು. ಅವರಿಲ್ಲದೇ ಹೋಗಿದ್ದರೆ ಈ ದೇಶದ ಬಹುಸಂಖ್ಯಾತ ಜನರ ದುಡ್ಡು ನೀರಲ್ಲಿ ಹೋಮವಾಗಿ ಬಹುಕಾಲವೇ ಆಗಿ ಬಿಡುತ್ತಿತ್ತು. ಯಾವುದೇ ಸರ್ಕಾರ ಬರಲಿ, ಅವಕ್ಕೆ ಮೊದಲು ಮುಖ್ಯವಾಗಬೇಕಿರುವುದು ಈ ದೇಶದ ಬಡ-ಮಧ್ಯಮ ವರ್ಗದ ಜನರ ಹಿತಾಸಕ್ತಿ. ಅವರ ಹಿತಾಸಕ್ತಿಯನ್ನು ಕೊಲೆ ಮಾಡಿ ಶ್ರೀಮಂತರನ್ನು ಉದ್ಧಾರ ಮಾಡುವುದು ಒಳ್ಳೆಯ ಸರ್ಕಾರವಲ್ಲ.

ಇವತ್ತು ಭಾರೀ ಹಾಹಾಕಾರ ಎಬ್ಬಿಸುತ್ತಿರುವ ಮೋದಿ ಕೂಡ ಒಬ್ಬ ಉದ್ಯಮಪತಿಗಳ ದಾಳ ಎಂಬುದನ್ನು ನಾವು ಮರೆಯಬಾರದು. ಇಂತಹವನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿಜವಾದ ಸಜ್ಜನರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು. ಯಾರೋ ಉದ್ಯಮಪತಿಯ ಹಿತ ರಕ್ಷಿಸುವವರು, ಸುಳ್ಳು ಹೇಳುವವರು ಬಂದು ಕುಳಿತರೆ ಮತ್ತೆ ದೇಶದ ಗತಿ ಕೆಳಗೆ ಇಳಿಯುತ್ತದೆಯೇ ಹೊರತು ಮೇಲಕ್ಕೇರುವುದಿಲ್ಲ. ಹೀಗಾಗಿ ಈ ಸಲ ಮತ ಹಾಕಲು ಹೋದಾಗ ಸಜ್ಜನರನ್ನು ಆಯ್ಕೆ ಮಾಡಿ. ದುರಾಸೆ ಜಾಸ್ತಿ ಇರುವವರನ್ನು ಆಯ್ಕೆ ಮಾಡಬೇಡಿ. ದುರಾಸೆ ಹೆಚ್ಚಿರುವವರು ಅಧಿಕಾರಕ್ಕೆ ಬಂದರೆ ಮತ್ತಷ್ಟು ದುರಾಸೆ ತುಂಬಿಕೊಂಡು ದೇಶವನ್ನು ಕೊಳ್ಳೆ ಹೊಡೆಯಲು ಹೋಗುತ್ತಾರೆ. ಆದರೆ ದುರಾಸೆ ಕಡಿಮೆ ಇರುವವರು ಜನರ ಹಿತ ಕಾಪಾಡುತ್ತಾರೆ. ಅಂತಹವರನ್ನು ಆಯ್ಕೆ ಮಾಡಿ. ಅರವಿಂದ ಕೇಜ್ರಿವಾಲ್ ಥರದವರು ಉತ್ತಮ ಸಂಘಟಕರು ಮತ್ತು ಜನ ನಾಯಕರೇ ಹೊರತು ಜನರ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಶಕ್ತರಲ್ಲ. ಆದರೆ ಅಂತಹವರೂ ಇರಬೇಕು. ಸದಾ ಕಾಲ ಜನರನ್ನು ಎಚ್ಚರಿಸಲು ಮತ್ತು ಹೋರಾಟದ ಕಣಕ್ಕೆ ಇಳಿಯುವಂತೆ ಮಾಡಲು ಅಂತಹವರಿರಬೇಕು. ಅಂತಹವರು ಇಂತಹ ಹೋರಾಟಕ್ಕೆ ಸೀಮಿತರಾಗಿ, ಕೆಲಸ ಮಾಡುವವರು ಅಧಿಕಾರಕ್ಕೆ ಬರುವಂತಾಗಬೇಕು. ಹಾಗಾಗಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books