Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಶುದ್ಧ ವ್ಯಾಪಾರಿ ಬುದ್ಧಿಯ ಮೋದಿ ಪ್ರಧಾನಿಯಾದರೆ ಲಾಭ ಯಾರಿಗೆ?

ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ರಣಾಂಗಣಕ್ಕೆ ರಂಗು ಬರತೊಡಗಿದೆ. ನರೇಂದ್ರಮೋದಿಯನ್ನು ಪ್ರಧಾನಿ ಮಾಡುವುದೇ ತಮ್ಮ ಕನಸು ಎಂಬಂತೆ ಬಿಜೆಪಿಯವರು ಮಾತನಾಡುತ್ತಿದ್ದರೂ ಆಳದಲ್ಲಿ ತಮ್ಮ ವೈಯಕ್ತಿಕ ಲಾಭದ ಮೇಲೆ ಎಲ್ಲರಿಗೂ ಕಣ್ಣಿದೆ. ಈ ಮಾತನ್ನು ಬರೀ ಬಿಜೆಪಿಯವರಿಗೆ ಮಾತ್ರವಲ್ಲ, ಕಾಂಗ್ರೆಸ್‌ನವರಿಗೆ, ಜೆಡಿಎಸ್‌ನವರಿಗೂ ಹಲವು ಕಾರಣಗಳಿಂದ ಅನ್ವಯವಾಗುತ್ತದೆ. ಉದಾಹರಣೆಗೆ ಬಿಜೆಪಿಯನ್ನೇ ತೆಗೆದುಕೊಳ್ಳಿ. ಯಡಿಯೂರಪ್ಪನವರಿಂದ ಹಿಡಿದು ಅನಂತಕುಮಾರ್ ತನಕ ಎಲ್ಲರೂ ನರೇಂದ್ರಮೋದಿಯ ಹೆಸರು ಹೇಳುತ್ತಿದ್ದಾರೆ. ಒಂದು ಸಲ ಅವರನ್ನು ಪ್ರಧಾನಿ ಮಾಡುವುದೇ ತಮ್ಮ ಕನಸು ಎಂದು ಹೇಳುತ್ತಿದ್ದಾರೆ. ಹೋಗಲಿ, ನರೇಂದ್ರಮೋದಿ ಗುಜರಾತ್‌ನಲ್ಲಿ ಮಾಡಿರುವುದೇನು ಅಂತ ನೋಡಿದರೆ ಅವರದು ಶುದ್ಧ ವ್ಯಾಪಾರಿ ಬುದ್ಧಿ. ಅಂಬಾನಿಗಳಿಂದ ಹಿಡಿದು ಅದಾನಿಗಳ ತನಕ ಯಾರೆಂದರೆ ಅವರಿಗೆ ಭೂಮಿ ಕೊಟ್ಟಿದ್ದಾರೆ. ಗುಜರಾತ್‌ನ ನೆಲದಲ್ಲಿ ಭೂಮಿ, ವಿದ್ಯುತ್ ಪಡೆದ ಅಂಬಾನಿಗಳಿಂದ ಹಿಡಿದು ಹಲವರು ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ.

ನರೇಂದ್ರಮೋದಿ ಈ ದೇಶದ ಪ್ರಧಾನಿಯಾದರೆ ಈ ದೇಶವನ್ನು ಉದ್ಯಮಸ್ನೇಹಿ ದೇಶವನ್ನಾಗಿ ಮಾಡುತ್ತಾರೆಯೇ ಹೊರತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಈ ದೇಶವನ್ನು ಕಟ್ಟುತ್ತಾರೆ ಎಂಬುದಕ್ಕೆ ಕುರುಹುಗಳು ಸಿಗುತ್ತಿಲ್ಲ. ಓದುವ ಮಕ್ಕಳಿಗೆ ಉದ್ಯೋಗ ಬೇಕು, ಹೀಗಾಗಿ ಯುವ ಸಮುದಾಯವೂ ನರೇಂದ್ರಮೋದಿಗೆ ಜೈ ಅನ್ನತೊಡಗಿದೆ. ಮೋದಿ ಒಳ್ಳೆಯ ಆಡಳಿತಗಾರ ನಿಜ. ಆದರೆ ಅವರ ಆಡಳಿತದಲ್ಲಿ ಸಾಮಾಜಿಕ ನ್ಯಾಯದ ದೃಷ್ಟಿಕೋನವೂ ಬೇಕು. ಇರುವ ಭೂಮಿಯನ್ನು ಉದ್ಯಮಿಗಳಿಗೆ ಕೊಟ್ಟರೆ ನಾಳೆ ತಿನ್ನುವ ಅನ್ನಕ್ಕೂ ತತ್ವಾರ ಅನ್ನುವ ಸ್ಥಿತಿ ಸೃಷ್ಟಿಯಾಗುತ್ತದೆ. ಕರ್ನಾಟಕದಿಂದ ಹಿಡಿದು ತಮಿಳುನಾಡಿನ ತನಕ ಬಹುತೇಕ ರಾಜ್ಯಗಳಿಗೆ ಅಮ್ಮಾ ಹೋಟೆಲ್, ಅಪ್ಪಾ ಹೋಟೆಲ್‌ಗಳನ್ನು ತೆಗೆಯುವ ತವಕದಲ್ಲಿವೆಯೇ ಹೊರತು ನಾಡಿನ ಜನರ ಕೈಗೆ ಕೆಲಸ ಕೊಡುವ ಸ್ಥಿತಿಯಲ್ಲಿಲ್ಲ. ಒಂದು ರುಪಾಯಿಗೆ ಅಕ್ಕಿ ಎಷ್ಟು ದಿನ ಅಂತ ಕೊಡಲು ಸಾಧ್ಯ? ಇಡೀ ವರ್ಷಕ್ಕೆ ಬೇಕಾಗುವ ಅಕ್ಕಿ ಮುನ್ನೂರಾ ಅರವತ್ತು ರುಪಾಯಿಗಳಿಗೆ ಸಿಗುತ್ತದೆ ಅಂತಾದರೆ ನಾಳೆ ಹೊಲ ಉಳುವ ರೈತನೂ ಹೊಲ ಉಳುವ ಕೆಲಸ ಬಿಟ್ಟು ಬಿಡುತ್ತಾನೆ.

ಕಾಂಗ್ರೆಸ್‌ನವರು ಒಂದು ಕಡೆಯಿಂದ ದುಡಿಯುವ ರೈತನನ್ನೂ ಸೋಮಾರಿ ಮಾಡುವ ಕೆಲಸಕ್ಕೆ ಕೈ ಹಾಕಿದರೆ ನಾಳೆ ನರೇಂದ್ರಮೋದಿ ಅವರಂತಹವರಿಗೆ ಈ ರೈತರ ಭೂಮಿಯನ್ನು ಉದ್ಯಮಿಗಳಿಗೆ ಕೊಟ್ಟು ಹಾಕುವುದು ಸುಲಭದ ಕೆಲಸ. ಈಗಾಗಲೇ ಗುಜರಾತ್‌ನಲ್ಲಿ ಇಪ್ಪತ್ತು ಸಾವಿರ ಮೆಗಾವ್ಯಾಟ್ ವಿದ್ಯುತ್ ಖಾಸಗಿ ವಲಯದಲ್ಲಿ ಉತ್ಪಾದನೆಯಾಗುತ್ತಿದೆ ಎಂಬುದೇ ಅದರ ಖಾಸಗೀಕರಣ ಯಾವ ಮಟ್ಟದಲ್ಲಿ ನಡೆದಿದೆ ಎಂಬುದಕ್ಕೆ ಸಾಕ್ಷಿ. ಇಂತಹ ಪರಿಸ್ಥಿತಿ ಇರುವಾಗ ಕಾಂಗ್ರೆಸ್ ಪಕ್ಷದವರು ದುಡಿಯುವ ಸ್ಥಿತಿಯನ್ನು ತೆಗೆದು ಹಾಕಿಬಿಟ್ಟರೆ ಕೇಳಬೇಕೇ? ಆದರೆ ನಮ್ಮ ಯಡಿಯೂರಪ್ಪ, ಅನಂತಕುಮಾರ್ ಅವರೆಲ್ಲ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನರೇಂದ್ರಮೋದಿ ಬಂದು ಕೂರಲಿ ಎಂಬುದಕ್ಕಿಂತ ಅವರ ಹೆಸರಿನಲ್ಲಿ ಬಂದು ಕೂರುವುದು ಬಹಳ ಮುಖ್ಯ. ಮೊನ್ನೆ ಮೊನ್ನೆಯ ತನಕ ಅಡ್ವಾಣಿ ಪರಮಾಪ್ತರಾಗಿದ್ದ ಅನಂತಕುಮಾರ್ ಅವರು ಇದೀಗ ನರೇಂದ್ರಮೋದಿ ಜತೆಗೆ ಆಪ್ತವಾಗಿರುವ ಫೊಟೋಗಳು ರಾರಾಜಿಸತೊಡಗಿವೆ. ನೋಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು. ಅಷ್ಟರ ಮಟ್ಟಿಗೆ ನರೇಂದ್ರಮೋದಿ ಮತ್ತು ಅನಂತಕುಮಾರ್ ಅವರು ಪರಮಾಪ್ತರಂತೆ ಗೋಚರವಾಗತೊಡಗಿದ್ದಾರೆ. ವಾಸ್ತವವಾಗಿ ಅನಂತಕುಮಾರ್ ಅವರು ನರೇಂದ್ರಮೋದಿ ಅವರಿಗೆ ಈಗ ಬೇಕಾದವರೂ ಹೌದು. ಯಾಕೆಂದರೆ ಲಾಲ್‌ಕೃಷ್ಣ ಅಡ್ವಾಣಿ ಕೂಡ ಮೋದಿ ವಿಷಯದಲ್ಲಿ ಕೂಲ್ ಕೂಲ್ ಆಗುವಂತೆ ಮಾಡಿದ್ದಾರೆ. ಕಾರಣ ಅವರಿಗೀಗ ಅರ್ಜೆಂಟಾಗಿ ದೆಹಲಿ ಗದ್ದುಗೆಯ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದು ಕೂರಬೇಕು. ಹೀಗೆ ಬಂದು ಕೂರುವ ಸರ್ಕಾರದಲ್ಲಿ ಅವರು ಪ್ರಭಾವಿ ಮಂತ್ರಿಯಾಗಿ ಕಂಗೊಳಿಸಬೇಕು.

ಯಡಿಯೂರಪ್ಪನವರಿಗೂ ಅಷ್ಟೇ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಏನು ಮಾಡಬೇಕೋ ತಿಳಿಯದೆ ಸುಮ್ಮನೆ ಕರ್ನಾಟಕ ಜನತಾ ಪಕ್ಷದ ಮಡಿಲು ಸೇರಿದ್ದರು. ಒಂದು ವೇಳೆ ಅವರು ಕರ್ನಾಟಕ ಜನತಾ ಪಕ್ಷದ ಮಡಿಲು ಸೇರದೇ ಇದ್ದಿದ್ದರೆ ಜೈಲಿಗೆ ಹೋಗುತ್ತಿದ್ದರು. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಅವರು ಜೈಲಿಗೆ ಹೋಗುವುದರಲ್ಲಿ ಅನುಮಾನವೇ ಇರಲಿಲ್ಲ. ಹೀಗಾಗಿ ದುಸೂರಾ ದಾರಿ ಇಲ್ಲದೇ ಬಿಜೆಪಿಯನ್ನು ಬೈದುಕೊಳ್ಳುತ್ತಾ ಕೆಜೆಪಿಗೆ ಸೇರ್ಪಡೆಯಾದರು. ಅಷ್ಟೇ ಅಲ್ಲ, ಶೇಕಡಾ ಒಂಬತ್ತೂವರೆ ಪರ್ಸೆಂಟಿನಷ್ಟು ಮತಗಳನ್ನು ಸೆಳೆದರು. ಅವರು ಈ ಪ್ರಮಾಣದ ಮತಗಳನ್ನು ಸೆಳೆದಿದ್ದೇ ತಡ, ಬಿಜೆಪಿ ಮತ್ತು ಜೆಡಿಎಸ್ ಸೇರಿ ಪರಸ್ಪರ ಮೈತ್ರಿ ಸರ್ಕಾರವನ್ನು ರಚಿಸುವ ಸ್ಥಿತಿ ಮಂಕಾಗಿ ಹೋಯಿತು. ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂತು. ಒಂದು ವೇಳೆ ಯಡಿಯೂರಪ್ಪನವರನ್ನು ಕಾಂಗ್ರೆಸ್ ಪಕ್ಷದವರು ಒತ್ತಾಯದಿಂದ ಕೆಜೆಪಿಗೆ ಕಳಿಸದೇ ಹೋಗಿದ್ದರೆ ಅನುಮಾನವೇ ಇಲ್ಲ. ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಲಕ್ಷಣಗಳು ಇರಲೇ ಇಲ್ಲ.

ಆದರೆ ಈಗ ಹಾಗಲ್ಲ, ಜೈಲಿಗೆ ಕಳಿಸಲು ಹೋದರೆ ಕಾಂಗ್ರೆಸ್‌ನವರಿಗೇ ಗಂಡಾಂತರ. ಅವರದೇನಿದ್ದರೂ ಈಗ ಆಟದ ವರಸೆ ಬೇರೆ. ತೃತೀಯ ರಂಗ ಏನಾದರೂ ಕಳೆ ಕಟ್ಟದೇ ಹೋದರೆ ಅವರು ಮೂಲೆಗುಂಪಾಗುವುದು ನಿಶ್ಚಿತ. ಹೀಗಾಗಿ ಯಡಿಯೂರಪ್ಪ ಕೂಡ ಭಂಡತನದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜೈಲಿಗೆ ಕಳಿಸುವುದಾದರೆ ಕಳಿಸಿ ಎಂಬುದು ಅವರ ಹಟ. ಆದರೆ ಕಾಂಗ್ರೆಸ್‌ನವರು ಅಂತಹ ಮೊಂಡಾಟಕ್ಕೆ ರೆಡಿ ಇಲ್ಲ. ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿ ಮೈಮೇಲೆ ಎಳೆದುಕೊಳ್ಳಲು ಅವರು ತಯಾರಿಲ್ಲ. ಯಡಿಯೂರಪ್ಪನವರಿಗೇನೋ ಸದ್ಯಕ್ಕೆ ನರೇಂದ್ರಮೋದಿ ಬಂದು ಬಿಡುತ್ತಾರೆ, ಪ್ರಧಾನಿ ಹುದ್ದೆಯ ಮೇಲೆ ಬಂದು ಕೂರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಅವರು ಒಂದು ನಂಬಿಕೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ಬಿಜೆಪಿ ಬರದಿದ್ದರೂ ತೃತೀಯ ರಂಗ ಬರುತ್ತದೆ ಎಂಬ ನಂಬಿಕೆ.

ತೃತೀಯ ರಂಗ ಬಂದರೂ ಓಕೆ, ಆದರೂ ರಿಸ್ಕು ಯಾಕೆ? ಹೀಗಾಗಿಯೇ ಅವರು ನರೇಂದ್ರಮೋದಿ ಅವರು ಪ್ರಧಾನಿಯಾಗುವುದೇ ನನ್ನ ಏಕೈಕ ಕನಸು ಎನ್ನುತ್ತಿದ್ದಾರೆ. ಹೀಗೆ ಯಾವ ಕಡೆಯಿಂದ ಯಾವ ಕಡೆಗೆ ನೋಡಿದರೂ ಎಲ್ಲರಿಗೂ ನರೇಂದ್ರಮೋದಿಯೇ ಪ್ರಧಾನಿ ಆಗಲಿ ಎಂಬ ಬಯಕೆ. ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಿರುವ ಡಿ.ವಿ.ಸದಾನಂದಗೌಡರಿಗೂ ಅದೇ ಕನಸು.ಒಂದು ವೇಳೆ ನರೇಂದ್ರಮೋದಿ ಪ್ರಧಾನಿಯಾಗಿಬಿಟ್ಟರೆ ತಮ್ಮನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ. ಯಾಕೆಂದರೆ ಅವರಿಗೀಗ ಕರ್ನಾಟಕದಲ್ಲಿ ಅನುಭವಿಸುವುದನ್ನು ಅನುಭವಿಸಿದ್ದಾಗಿದೆ. ಮುಖ್ಯಮಂತ್ರಿ, ಬಿಜೆಪಿಯ ಅಧ್ಯಕ್ಷ ಸ್ಥಾನ, ಮತ್ತೀಗ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ. ಹೀಗೆ ಬಹುತೇಕ ಎಲ್ಲ ಸ್ಥಾನಗಳನ್ನು ಅವರು ಅನುಭವಿಸಿ ಆಗಿದೆ. ಹೀಗಾಗಿ ಅವರೂ ಕೇಂದ್ರದಲ್ಲಿ ಒಂದು ಕೈ ನೋಡಲು ಹೊರಟಿದ್ದಾರೆ.

ಹೀಗೆ ನೋಡುತ್ತಾ ಹೋದರೆ ಎಲ್ಲರಿಗೂ ಕೇಂದ್ರದಲ್ಲಿ ಮಂತ್ರಿಯಾಗುವ ಬಯಕೆಯೇ ವಿನಾ ನರೇಂದ್ರಮೋದಿ ಎಂಬುದು ಇಮ್ಮೆಟಿರಿಯಲ್ಲು. ಇದು ಬಿಜೆಪಿಯ ಸ್ಥಿತಿ ಆದರೆ ಕಾಂಗ್ರೆಸ್‌ನ ಸ್ಥಿತಿಯೇ ಬೇರೆ. ಹೇಳಿ ಕೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆ ಹಲವರಿಗೆ ಬಂದುಬಿಟ್ಟಿದೆ. ಮುಂದಿನ ದಿನಗಳಲ್ಲಿ ಸಿದ್ಧರಾಮಯ್ಯನವರಿಗೆ ಸವಾಲಾಗಲಿರುವ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕರಿಗೆ ಗೊತ್ತಿದೆ. ದಿಲ್ಲಿಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆ. ಇಲ್ಲಿಯ ತನಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ. ಆದರೆ ಮುಂದಿನ ಚುನಾವಣೆಯ ನಂತರ ಏನು ಗತಿ? ಈ ಪ್ರಶ್ನೆಯನ್ನು ಮುಂದಿಟ್ಟರೆ ಸಹಜವಾಗಿಯೇ ಸಿದ್ಧರಾಮಯ್ಯನವರಿಗೆ ಗಂಡಾಂತರದ ಸನ್ನಿವೇಶ ಎದುರಾಗುತ್ತದೆ.

ಯಾಕೆಂದರೆ ಮುಂದಿನ ದಿನಗಳಲ್ಲಿ ಖರ್ಗೆ ನಿರುದ್ಯೋಗಿಯಾಗುವುದು ನಿಜ. ಕೇವಲ ಎಂ.ಪಿ. ಆಗಿರುವುದಕ್ಕಿಂತ ಬೋರ್ ವಿಷಯ ಬೇರೆ ಯಾವುದಿದೆ? ಹೀಗಾಗಿ ಸಹಜವಾಗಿ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಹೊರಡುತ್ತಾರೆ. ಇದು ಸಿದ್ಧರಾಮಯ್ಯನವರಿಗೂ ಗೊತ್ತು. ಹೇಳಿ ಕೇಳಿ ಅವರು ಪರಮೇಶ್ವರ್‌ಗೆ ಗುನ್ನ ಹಾಕಿದ್ದಾರೆ. ಉಪಮುಖ್ಯಮಂತ್ರಿಯೂ ಆಗದಂತೆ ನೋಡಿಕೊಳ್ಳತೊಡಗಿದ್ದಾರೆ. ಅವರಿಗೀಗ ಅರ್ಜೆಂಟಾಗಿ ಕನಿಷ್ಠ ಹದಿನೈದರಿಂದ ಹದಿನೆಂಟು ಸ್ಥಾನಗಳಲ್ಲಿ ಗೆಲ್ಲುವ ಬಯಕೆ. ತಾವು ಉಳಿದುಕೊಳ್ಳುವ ಚಿಂತೆ. ಹೀಗಾಗಿ ಅವರು ಹೆಚ್ಚಿನ ಸಂಖ್ಯೆಯ ಎಂಪಿ ಸೀಟುಗಳನ್ನು ಗೆಲ್ಲಲು ಬಯಸಿದ್ದಾರೆ. ಇನ್ನು ದೇವೆಗೌಡರನ್ನು ತೆಗೆದುಕೊಳ್ಳಿ. ಅವರಿಗೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಬಲ ಸಿಗುತ್ತದೋ ಅದು ಬೇರೆ ವಿಷಯ. ಆದರೆ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗ ದೊಡ್ಡ ಮಟ್ಟದಲ್ಲಿ ತಲೆ ಎತ್ತುವ ಲಕ್ಷಣಗಳಂತೂ ಇವೆ. ತೃತೀಯ ರಂಗ ತಲೆ ಎತ್ತಿದರೆ ದೇವೆಗೌಡರು ಉನ್ನತ ಹುದ್ದೆಗೇರುವುದೂ ನಿಜ. ಅವರಿಗಿರುವುದೂ ಅಷ್ಟೇ ಚಿಂತೆ. ದೆಹಲಿ ಮಟ್ಟದಲ್ಲಿ ಅವರೀಗ ಮೇಲ್ಮಟ್ಟದ ಹುದ್ದೆಗೇರಬೇಕು. ಅದಕ್ಕೂ ಮುನ್ನ ಕರ್ನಾಟಕದ ಪಡಸಾಲೆಯಲ್ಲಿ ಅವರ ಪಕ್ಷ ನಾಲ್ಕೈದು ಸೀಟುಗಳನ್ನು ಗೆಲ್ಲಬೇಕು. ಹೀಗಾಗಿ ಅವರು ರಾಜ್ಯದ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಗಮನ ಹರಿಸಿದ್ದಾರೆ. ಕುಮಾರಸ್ವಾಮಿಯ ಕೈಯಿಂದ ಜಾತ್ಯತೀತ ಜನತಾದಳವನ್ನು ತಮ್ಮ ಹಿಡಿತಕ್ಕೆ ತೆಗೆದುಡಿದ್ದಾರೆ.

ಹೀಗೆ ಯಾವ ಕಡೆಯಿಂದ ನೋಡಿದರೂ ಲೋಕಸಭಾ ಚುನಾವಣೆಯಿಂದ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವವರ ಸಂಖ್ಯೆ ದೊಡ್ಡದಿದೆ. ಅದು ಕಾಂಗ್ರೆಸ್‌ನವರಿರಲಿ, ಬಿಜೆಪಿಯವರಿರಲಿ, ಜೆಡಿಎಸ್‌ನವರಿರಲಿ, ಎಲ್ಲರೂ ತಮ್ಮ ತಮ್ಮ ಲೆಕ್ಕಾಚಾರಗಳಲ್ಲಿ ತಲ್ಲೀನರಾಗಿದ್ದಾರೆ. ಅದು ಸೋಲಿನ ಲೆಕ್ಕಾಚಾರ ಇರಬಹುದು, ಗೆಲುವಿನ ಲೆಕ್ಕಾಚಾರ ಇರಬಹುದು, ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹಲವು ಕಾರಣಗಳಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಯಾರ ಲೆಕ್ಕಾಚಾರ ಯಶಸ್ವಿಯಾಗುತ್ತದೋ? ಯಾರ ಲೆಕ್ಕಾಚಾರ ಹುಸಿಯಾಗುತ್ತದೋ? ಅದು ಬೇರೆ ಮಾತು. ಒಟ್ಟಿನಲ್ಲಿ ಅವರವರ ಲೆಕ್ಕಾಚಾರವಂತೂ ಸಾಗಿಯೇ ಇದೆ. ಲೋಕಸಭಾ ಚುನಾವಣೆ ಮುಗಿದ ನಂತರ ಹೊಸ ಆಟಕ್ಕೆ ವೇದಿಕೆ ಅಣಿಯಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books