Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ರಾತ್ ಅಭೀ ಬಾಕಿ ಹೈ, ಬಾತ್ ಅಭೀ ಬಾಕಿ ಹೈ

ಬೇಕಾ?.. ಬೇಡ್ವಾ..?
ಬೆಂಗಳೂರಿನ ಪ್ರಜೆಗಳಿಗೆ ಯಾಕೋ ಇಂಥಾ ಚರ್ಚೆಗಳು ಇತ್ತೀಚೆಗೆ ಇಷ್ಟವಾಗುವುದಕ್ಕೆ ಶುರುವಾಗಿದೆ. ಡಬ್ಬಿಂಗ್ ಬೇಕಾ ಬೇಡ್ವಾ? ಎತ್ತಿನಹೊಳೆ ಯೋಜನೆ ಬೇಕಾ ಬೇಡ್ವಾ? ಎಂಬ ಗಂಭೀರ ಚರ್ಚೆಗಳಿಂದ ಶುರುವಾಗಿ, ರಕ್ಷಿತಾ ಮಂಡ್ಯದಲ್ಲಿ ಚುನಾವಣೆಗೆ ನಿಲ್ಲಬೇಕಾ ಬೇಡ್ವಾ? ರಮ್ಯಾ ನಟನೆ ಮುಂದುವರಿಸಬೇಕಾ ಬೇಡ್ವಾ ಎಂಬ ಸಿಲ್ಲಿ ಪ್ರಶ್ನೆಗಳ ತನಕ ಪ್ರತಿಯೊಂದು ಚರ್ಚೆಯಲ್ಲೂ ಜನ ಅತ್ಯುತ್ಸಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವುಗಳಿಗೆ ವೇದಿಕೆ ಒದಗಿಸುವುದಕ್ಕೆ ಫೇಸ್ ಬುಕ್, ಟ್ವಿಟರ್‌ಗಳಂಥಾ ಸಾಮಾಜಿಕ ತಾಣಗಳು ಮತ್ತು ಟೀವಿ ನ್ಯೂಸ್ ಛಾನೆಲ್ಲುಗಳು ತುದಿಗಾಲಲ್ಲಿ ಕಾಯುತ್ತಿವೆ. ಇಂಥಾ ಚರ್ಚೆಗೆ ಇತ್ತೀಚಿನ ಸೇರ್ಪಡೆಯೆಂದರೆ ಬೆಂಗಳೂರಲ್ಲಿ ನೈಟ್ ಲೈಫ್ ಇರಬೇಕಾ ಬೇಡ್ವಾ?

ಈ ಚರ್ಚೆಗೊಂದು ದೊಡ್ಡ ಇತಿಹಾಸವೇ ಇದೆ. ೧೯೯೨ರ ತನಕ ಬೆಂಗಳೂರಲ್ಲಿ ನೈಟ್ ಲೈಫು ರಂಗುರಂಗಾಗಿಯೇ ಇತ್ತು. ರಾತ್ರಿ ಎರಡು ಗಂಟೆಯ ತನಕ ರಸ್ತೆಗಳು ಗಿಜಿಗುಡುತ್ತಿದ್ದವು. ಸಂಜೆಯಾಗುತ್ತಿದ್ದಂತೆ ಪಬ್ ಸೇರುತ್ತಿದ್ದ ಕಾಲೇಜು ಓದುವ ಹುಡುಗ ಹುಡುಗಿಯರೆಲ್ಲಾ ಬಿಯರ್ ಹೀರಿ ಹೀರಿ ಥೇಟು ಬಿಯರ್ ಶೀಷೆಗಳಂತೆಯೇ ಕಾಣಿಸುತ್ತಿದ್ದರು. ೧೯೯೨ರಲ್ಲಿ ಕಾವೇರಿ ಗಲಭೆ ನಡೆಯಿತು ನೋಡಿ, ಆಗಲೇ ಸರ್ಕಾರ ಈ ರಾತ್ರಿ ಬದುಕಿಗೆ ಕಡಿವಾಣ ಹಾಕುವುದಕ್ಕೆ ನಿರ್ಧಾರ ಮಾಡಿತು. ೧೯೯೬ರಲ್ಲಿ ಅಂದರೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರಿನ ಎಲ್ಲಾ ಬಾರುಗಳು, ರೆಸ್ಟೋರೆಂಟುಗಳು ಹಾಗೂ ಇನ್ನಿತರೇ ಮನರಂಜನಾ ತಾಣಗಳು ರಾತ್ರಿ ಹನ್ನೊಂದಕ್ಕೆ ಮುಚ್ಚಬೇಕು ಎಂಬ ಆದೇಶ ಕಡ್ಡಾಯವಾಗಿ ಜಾರಿಗೆ ಬಂತು. ಹೀಗೆ ಒಂದು ಕಾಲದಲ್ಲಿ ಪಬ್ ಸಿಟಿ ಎಂಬ ನಾಮಾಂಕಿತವನ್ನು ಹೊಂದಿದ್ದ ಬೆಂಗಳೂರೆಂಬ ಉದ್ಯಾನನಗರಿ ಇತ್ತೀಚೆಗೆ ಗಬ್ಬುಸಿಟಿಯಾಗಿ ರೂಪಾಂತರಗೊಂಡಿದ್ದು ಇತಿಹಾಸ.
ಕಳೆದ ಹದಿನೆಂಟು ವರ್ಷಗಳಲ್ಲಿ ಬೆಂಗಳೂರು ವಿಪರೀತ ಅನ್ನುವಷ್ಟು ಬದಲಾಗಿದೆ, ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಹೊರವಲಯ ಎಂದು ಗುರುತಿಸಿಕೊಂಡಿದ್ದ ಹಳ್ಳಿಗಳೆಲ್ಲಾ ಬೆಂಗಳೂರೆಂಬ ಸಾಗರದಲ್ಲಿ ಲೀನವಾಗಿ ಬಿಎಂಪಿ ಅನ್ನುವುದು ಬಿಬಿಎಂಪಿ ಆಗಿದೆ. ನೂರಾರು ಹೊಸ ಖಾಯಿಲೆಗಳೂ, ಅಷ್ಟೇ ಸಂಖ್ಯೆಯಲ್ಲಿ ಹೊಸ ಆಸ್ಪತ್ರೆಗಳೂ ತಲೆಯೆತ್ತಿವೆ. ಹಲವಾರು ಐಟಿ ಕಂಪೆನಿಗಳು ಹುಟ್ಟಿಕೊಂಡಿದ್ದರಿಂದ ಹಾಗೂ ಈ ಕಂಪೆನಿಗಳು ರಾತ್ರಿ ಹೊತ್ತಲ್ಲೂ ಬ್ಯುಸಿಯಾಗಿರುವುದರಿಂದ ಇಲ್ಲಿ ದುಡಿಯುವ ಟೆಕ್ಕಿಗಳಿಗೆ ರಾತ್ರಿ ಹಗಲಿನ ನಡುವಿನ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಬೆಂಗಳೂರಿನ ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೋಗಿ ಬರುವವರ ಸಂಖ್ಯೆ ಹತ್ತು ಪಟ್ಟು ಜಾಸ್ತಿಯಾಗಿದೆ. ಬ್ಯಾಂಕುಗಳ ಔದಾರ್ಯದಿಂದಾಗಿ ಮಧ್ಯಮ ವರ್ಗದವರಿಗೂ ಕಾರುಗಳನ್ನು ಖರೀದಿಸುವ ಶಕ್ತಿ ಬಂದಿರುವುದರಿಂದ ರಸ್ತೆಗಳು ತುಂಬಿ ತುಳುಕಾಡುತ್ತಿವೆ. ಆದರೆ ಇವೆಲ್ಲವೂ ಒಂದು ಕಾಸ್ಮೋಪಾಲಿಟಿನ್ ಸಿಟಿ ಅನುಭವಿಸಲೇಬೇಕಾದ ಅನಿವಾರ್ಯ ಕರ್ಮಗಳು. ಬೆಂಗಳೂರು ಬೆಳೆಯುತ್ತಿರುವ ವೇಗವನ್ನು ಗಮನಿಸಿ, ಅದರಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸುವುದಕ್ಕೆ ನಮ್ಮ ಸರ್ಕಾರಗಳು ಯಾವತ್ತೂ ಸಜ್ಜಾಗಿರಲಿಲ್ಲ ಅನ್ನುವುದು ದುರಂತ.

ನೈಟ್ ಲೈಫನ್ನು ವಿಸ್ತರಿಸುವುದರಿಂದ ಇವೆಲ್ಲ ಸಮಸ್ಯೆಗಳೂ ಪರಿಹಾರವಾಗುತ್ತಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ಹೊಸ ಕಾನೂನೊಂದು ಚಾಲ್ತಿಗೆ ಬಂದಾಗ ಅದಕ್ಕೆ ಅದರದ್ದೇ ಆದ ಅನುಕೂಲಗಳೂ, ಅನಾನುಕೂಲಗಳೂ ಇದ್ದೇ ಇರುತ್ತವೆ. ದುಡಿಯುವ ಕೈಗಳಿಗೆ ಮತ್ತು ದುಡಿಸಿಕೊಳ್ಳುವ ಕಂಪೆನಿಗಳಿಗೆ ರಾತ್ರಿಯಿಡೀ ಕೆಲಸ ಮಾಡಲು ಅನುಮತಿ ಕೊಡುವ ಸರ್ಕಾರ ಹೊಟೇಲುಗಳು ಮಾತ್ರ ತೆರೆದಿರಬಾರದು ಅಂದರೆ ದುಡಿಯುವ ಮಂದಿ ಹೊಟ್ಟೆಗೇನು ತಿನ್ನಬೇಕು ಹೇಳಿ? ಅದೇ ರೀತಿ ಸರಿರಾತ್ರಿ ಹೊತ್ತಿಗೆ ರೈಲಲ್ಲೋ, ಬಸ್ಸಲ್ಲೋ ಬೆಂಗಳೂರಿಗೆ ಬಂದಿಳಿಯುವ ಪ್ರಯಾಣಿಕರು ಬೆಳಗಿನ ತನಕ ಉಪವಾಸ ಇರಬೇಕು ಅನ್ನೋದು ಯಾವ ನ್ಯಾಯ? ಪಂಚತಾರಾ ಹೊಟೇಲುಗಳಲ್ಲಿ ವಾಸ ಮಾಡುವ ಶ್ರೀಮಂತರಿಗೆ ದಿನದ ಇಪ್ಪನಾಲ್ಕು ಗಂಟೆಯೂ ಊಟ ತಿಂಡಿ ಸೌಲಭ್ಯ ಸಿಗುತ್ತದೆ. ಅಗತ್ಯ ಬಿದ್ದರೆ ರಾತ್ರಿ ಎರಡು ಗಂಟೆಗೂ ಅವರಿರುವ ಕೋಣೆಗೇ ಗುಂಡು ಸರಬರಾಜಾಗುತ್ತದೆ. ಬಡವರಿಗೆ ಮಾತ್ರ ಫುಟ್‌ಪಾತಲ್ಲಿ ಮಾರಾಟವಾಗುವ ಇಡ್ಲಿಯೂ ಸಿಗುವುದಿಲ್ಲ.

ಇವೆಲ್ಲ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಾಂಗ್ರೆಸ್ ಸರ್ಕಾರ ನಗರದ ರಾತ್ರಿ ಬದುಕನ್ನು ವಿಸ್ತರಿಸುವುದಕ್ಕೆ ಯೋಚಿಸುತ್ತಿದೆಯಾ? ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಗಮನಿಸಿದರೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಕಿರಣ್ ಮಜೂಂದಾರ್ ಮತ್ತು ಮೋಹನ್ ದಾಸ್ ಪೈ ಅವರಂಥಾ ಐಟಿ ಮಹನೀಯರು ಡೆಡ್‌ಲೈನನ್ನು ವಿಸ್ತರಿಸುವ ಬಗ್ಗೆ ಮನವಿ ಮಾಡಿರುವುದರಿಂದ ಈ ವಿಚಾರವನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿಗಳು ಯಾರ ಮಾತನ್ನು ಕೇಳುತ್ತಾರೆ ಅನ್ನುವುದು ಸ್ಪಷ್ಟವಾಗುತ್ತದೆ. ಬೆಂಗಳೂರಿನ ರಾತ್ರಿಗಳು ಎಷ್ಟು ದೀರ್ಘವಾಗಿರಬೇಕು ಅನ್ನುವುದನ್ನು ಬುದ್ಧಿಜೀವಿಗಳು, ಪರರಾಜ್ಯಗಳಿಂದ ಬಂದು ಇಲ್ಲಿ ನೆಲೆಯೂರಿರುವ ಸಿರಿವಂತರು ಮತ್ತು ಐಟಿ ಉದ್ಯೋಗಿಗಳು ನಿರ್ಧರಿಸುತ್ತಾರೆ ಅನ್ನುವುದೇ ಒಂದು ಕ್ರೂರ ವ್ಯಂಗ್ಯ. ಇದಕ್ಕಿಂತಲೂ ತಮಾಷೆಯಾಗಿರುವುದು ಪೇಜ್ ತ್ರೀ ಸಂಸ್ಕೃತಿಯನ್ನು ಮೈಗೆಲ್ಲಾ ಮೆತ್ತಿಕೊಂಡಿರುವ ಆಂಗ್ಲ ಪತ್ರಿಕೆಯೊಂದರ view. ‘ರಾತ್ರಿ ಹೊತ್ತಲ್ಲಿ ನಡೆಯುವ ಎಲ್ಲಾ ರೀತಿಯ ವ್ಯವಹಾರಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟರೆ ರಸ್ತೆಯಲ್ಲಿ ಓಡಾಡುವ ಜನರ ಸಂಚಾರವೂ ಜಾಸ್ತಿಯಾಗುತ್ತದೆ, ಹಾಗಾಗಿ ನಗರ ಸೇಫ್ ಆಗಿರುತ್ತದೆ. ಇದು ಸಾಧ್ಯವಾಗಬೇಕಾದರೆ ರಾತ್ರಿಯಿಡೀ ಬಸ್ಸುಗಳೂ ಓಡಾಡುವಂತಾಗಬೇಕು’. ಅದ್ಯಾವ ವ್ಯವಹಾರದ ಬಗ್ಗೆ ಆ ಪತ್ರಿಕೆಯ ಸಂಪಾದಕರು ಹೇಳುತ್ತಿದ್ದಾರೆಯೋ ಆ ಭಗವಂತನೇ ಬಲ್ಲ. ಬಹುಶಃ ಅವರ ಪ್ರಕಾರ ನೈಟ್ ಲೈಫ್ ಅಂದರೆ ಬಾರುಗಳು ಮಧ್ಯರಾತ್ರಿಯ ತನಕ ತೆರೆದಿರಬೇಕು ಮತ್ತು ಸಿರಿವಂತರ ಮಕ್ಕಳು ಗುಂಡು ಹಾಕಿ ಕುಣಿದಾಡಬೇಕು ಎಂದಿರಬೇಕು.

ಸಮಸ್ಯೆ ಇರುವುದು ಇಲ್ಲಿಯೇ. ನೈಟ್ ಲೈಫ್ ವಿಸ್ತರಣೆಯಿಂದಾಗುವ ಅನಾಹುತಗಳ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಪಸ್ವರ ಕೇಳಿಬಂದಿದೆ. ಈ ಹಿಂದಿದ್ದ ಪೊಲೀಸ್ ಕಮೀಷನರ್‌ಗಳು ಮಂಡಿಸಿದ್ದ ವಾದವನ್ನೇ ಈಗಿನ ಕಮೀಷನರ್ ಔರಾದ್ಕರ್ ಪುನರುಚ್ಚರಿಸಿದ್ದಾರೆ. ರಾತ್ರಿ ಒಂದೂವರೆ ತನಕ ಬಾರುಗಳು ತೆರೆದಿದ್ದರೆ ಅಪರಾಧಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ, ಕುಡಿದ ಮತ್ತಿನಲ್ಲಿ ಕೊಲೆ, ರಾಬರಿಯಂಥಾ ಪಾತಕಗಳು ಸಂಭವಿಸುತ್ತವೆ ಅಂದಿದ್ದಾರೆ. ಆದರೆ ಮುಂಬೈ, ದೆಹಲಿ, ಚೆನ್ನೈಗಳಂಥಾ ಮಹಾನಗರಿಗಳಲ್ಲಿ ನೈಟ್ ಲೈಫ್ ಜಾರಿಯಲ್ಲಿದೆಯಲ್ಲಾ ಅಂದರೆ ಕಮೀಷನರ್ ಸಾಹೇಬರು ನಮ್ಮಲ್ಲಿ ಅಲ್ಲಿರುವಷ್ಟು ಪೊಲೀಸರಿಲ್ಲ ಎಂದು ಅಂಕಿ-ಅಂಶಗಳನ್ನು ಒದಗಿಸುತ್ತಾರೆ. ಅವರೇ ಹೇಳುವ ಪ್ರಕಾರ ಬೆಂಗಳೂರಲ್ಲಿ ಸದ್ಯಕ್ಕಿರುವ ಪೊಲೀಸರ ಸಂಖ್ಯೆ ಹದಿನೈದು ಸಾವಿರ. ಆ ಪೈಕಿ ಮೂರು ಸಾವಿರ ಮಂದಿ ವಿವಿಐಪಿಗಳಿಗೆ ಸೆಕ್ಯುರಿಟಿಗಳಾಗಿ ಕಾಲಹರಣ ಮಾಡುತ್ತಿದ್ದಾರೆ. ಪೊಲೀಸರ ಸಂಖ್ಯೆಯನ್ನು ಜಾಸ್ತಿ ಮಾಡಬೇಕಾದ ಜವಾಬ್ದಾರಿ ಯಾರದ್ದು, ಸರ್ಕಾರದ್ದೇ ಅಲ್ಲವೇ?

೨೦೧೨ರಲ್ಲಿ ನ್ಯಾಷನಲ್ ಬ್ಯೂರೋ ಆಫ್ ಕ್ರೈಮ್ ರೆಕಾರ್ಡ್ಸ್ ನೀಡಿದ ಅಂಕಿ-ಅಂಶಗಳ ಪ್ರಕಾರ ಅತಿ ಹೆಚ್ಚು ಅಪರಾಧಗಳು ನಡೆಯುವ ಮಹಾನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನವಿದ್ದರೆ, ಬೆಂಗಳೂರಿಗೆ ಎರಡನೇ ಸ್ಥಾನ. ಕೊಲೆ, ಅತ್ಯಾಚಾರ ಮತ್ತು ಡಕಾಯಿತಿಗಳಲ್ಲೂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಹಾಗಾಗಿ ನೈಟ್ ಲೈಫ್ ಇಲ್ಲದೇ ಇದ್ದರೂ ಬೆಂಗಳೂರಲ್ಲಿ ಅಪರಾಧಗಳ ಸಂಖ್ಯೆ ಏನೂ ಕಡಿಮೆಯಾಗಿಲ್ಲ ಎಂದಾಯಿತು. ಅಲ್ಲಿಗೆ ಕಮೀಷನರ್ ಅವರ ವಾದ ಸುಳ್ಳಾಗುತ್ತದೆ. ಪೊಲೀಸರು ನೈಟ್ ಲೈಫನ್ನು ವಿರೋಧಿಸುವುದಕ್ಕೆ ಇನ್ನೂ ಒಂದು ಕಾರಣ ಇದೆ ಅನ್ನುತ್ತಾರೆ ಬಾರ್ ಮಾಲೀಕರು. ರಾತ್ರಿ ಹನ್ನೊಂದಕ್ಕೆ ಬಾಗಿಲು ಹಾಕಬೇಕು ಅನ್ನುವ ಕಾನೂನಿದ್ದರೂ ಹನ್ನೆರಡರ ತನಕ ವ್ಯಾಪಾರ ಮಾಡುವ ಹಲವಾರು ಬಾರುಗಳು ಬೆಂಗಳೂರಲ್ಲಿವೆ. ಈ ಹೆಚ್ಚುವರಿ ಒಂದು ಗಂಟೆಗೆ ಪೊಲೀಸರಿಗೆ ಹಫ್ತಾ ನೀಡಬೇಕು. ಈಗ ಅಧಿಕೃತವಾಗಿಯೇ ಬಾರುಗಳು ರಾತ್ರಿ ಒಂದೂವರೆ ತನಕ ತೆರೆದಿರಬಹುದು ಎಂದಾದಲ್ಲಿ ಪೊಲೀಸರ ಆದಾಯಕ್ಕೆ ಕತ್ತರಿ ಬೀಳುತ್ತದೆ.

ಪಕ್ಕಾ ವ್ಯಾವಹಾರಿಕ ದೃಷ್ಟಿಕೋನದಲ್ಲಿ ನೋಡುವುದಾದರೆ ನೈಟ್ ಲೈಫ್‌ನಿಂದಾಗಿ ಸರ್ಕಾರಕ್ಕೂ, ರೆಸ್ಟೋರೆಂಟುಗಳಿಗೂ ಸಾಕಷ್ಟು ಲಾಭವಿದೆ. ಹೊಟೇಲುಗಳಿಗೆ ವ್ಯಾಪಾರವಾದರೆ ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸ ತುಂಬುತ್ತದೆ. ಹಾಗಂತ ಮಧ್ಯಮವರ್ಗದ ಹೆಣ್ಮಕ್ಕಳ ಮುಂದೆ ಹೇಳಿ ನೋಡಿ, ಅವರು ಬೇರೆಯೇ ಕತೆ ಹೇಳುತ್ತಾರೆ. ಬಾರುಗಳಲ್ಲಿ ಜಾಸ್ತಿ ಹೊತ್ತು ದೀಪ ಉರಿದಷ್ಟೂ ಮನೆಯ ಒಲೆ ಉರಿಯುವ ಸಮಯ ಕಡಿಮೆಯಾಗುತ್ತದೆ. ಗಂಡನ ದುಡಿಮೆ ಮತ್ತು ಕಾಲ ಬಾರುಗಳಲ್ಲೇ ಕಳೆದು ಹೋದರೆ ಸಂಸಾರ ನಾಶವಾಗುತ್ತದೆ.
ನಾವು ಯೋಚಿಸಬೇಕಾಗಿರುವ ಇನ್ನೊಂದು ಸಂಗತಿಯೆಂದರೆ ರಾಜ್ಯ ಸರ್ಕಾರ ನೈಟ್ ಲೈಫ್ ವಿಸ್ತರಣೆಗೆ ಈ ಸಮಯದಲ್ಲೇ ಯಾಕೆ ಮುಂದಾಗಿದೆ ಅನ್ನುವುದನ್ನು. ಚುನಾವಣೆ ಹತ್ತಿರ ಬರುತ್ತಿದೆ, ಜನರನ್ನು ಓಲೈಸುವುದಕ್ಕೆ ಇಂಥಾ ಸ್ಕೀಮುಗಳು ನೆರವಾಗುತ್ತವೆ ಅನ್ನುವುದು ಸರ್ಕಾರಕ್ಕೆ ಗೊತ್ತಿದೆ. ಹಾಗಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದಕ್ಕೆ ಮುಂಚೆಯೇ ಈ ಕಾನೂನು ತಿದ್ದುಪಡಿಯನ್ನು ಮಾಡಿದರೆ ಅನುಕೂಲವಾದೀತು ಅನ್ನುವ ಲೆಕ್ಕಾಚಾರ ಅದರದು. ಸರ್ಕಾರದ ಚಿಂತನೆಯನ್ನು ಬಾರ್ ಅಂಡ್ ರೆಸ್ಟೋರೆಂಟುಗಳ ಮಾಲೀಕರು ಸಹಜವಾಗಿಯೇ ಸ್ವಾಗತಿಸಿದ್ದಾರೆ. ಅದು ಸಹಜ ಕೂಡಾ. ಆದರೆ ದರ್ಶಿನಿ ಹೊಟೇಲುಗಳಂಥಾ ಪಕ್ಕಾ ಸಸ್ಯಾಹಾರಿ ರೆಸ್ಟೋರೆಂಟುಗಳು ಹಿಂದೇಟು ಹಾಕುತ್ತಿವೆ. ಅವುಗಳಿಗೆ ಕಾರ್ಮಿಕರ ಸಮಸ್ಯೆ. ಬಾರುಗಳಲ್ಲಿ ಕಾರ್ಮಿಕರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಸಸ್ಯಾಹಾರಿ ರೆಸ್ಟೋರೆಂಟುಗಳಲ್ಲಿ ಈ ವ್ಯವಸ್ಥೆ ಇಲ್ಲ. ಹಾಗಾಗಿ ರಾತ್ರಿ ಹೊತ್ತಲ್ಲಿ ಊಟಕ್ಕಾಗಿ ಪರದಾಡುವವರು ಬಾರ್ ಅಂಡ್ ರೆಸ್ಟೋರೆಂಟಿಗೇ ಹೋಗಬೇಕಾದ ಪರಿಸ್ಥಿತಿ ಬರಬಹುದು.

ಇವೆಲ್ಲ ಪರ ವಿರೋಧಗಳ ನಡುವೆಯೇ ರಾಜ್ಯ ಸರ್ಕಾರ ಬೆಂಗಳೂರಿನ ರಾತ್ರಿಯ ಅವಧಿಯನ್ನು ಮುಂದೂಡುವುದಕ್ಕೆ ಬದ್ಧವಾಗಿದೆ. ಕುಡುಕರನ್ನು ಸದಾಕಾಲವೂ ಪೋಷಿಸಿಕೊಂಡು ಬಂದಿರುವ ಖ್ಯಾತಿಯನ್ನು ಬಗಲಲ್ಲಿಟ್ಟುಕೊಂಡಿರುವ ಬೆಂಗಳೂರು ‘ಮದ್ಯ’ರಾತ್ರಿಯ ಬದುಕಿಗೆ ಸಿದ್ಧವಾಗುತ್ತಿದೆ. ಇನ್ನು ಮುಂದೆ ಬೆಂಗಳೂರಿನ ರಾತ್ರಿಗಳು ಸುದೀರ್ಘವಾಗಿರುತ್ತವೆ. ರಾತ್ರಿ ಹತ್ತೂವರೆಗೆ ಕೊನೆಯ ಆರ್ಡರ್ ಹೇಳಿ ಹನ್ನೊಂದಕ್ಕೆ ಜಾಗ ಖಾಲಿ ಮಾಡಬೇಕಾಗಿದ್ದ ಕುಡುಕರು ಇನ್ನು ಮುಂದೆ ರಾತ್ರಿ ಒಂದೂ ಮೂವತ್ತರ ತನಕ ಬಾರ್‌ನಲ್ಲೇ ಠಿಕಾಣಿ ಹೂಡಬಹುದು. ಕಿವಿಗಡಚಿಕ್ಕುವ ಸಂಗೀತ, ಕಾಮಿನಿಯರ ಮಾದಕ ನೃತ್ಯ, ಭಗ್ನಪ್ರೇಮಿಗಳ ಆರ್ತನಾದ, ನಿರ್ಮಾನುಷವಾಗಿದ್ದ ರಸ್ತೆಗಳಲ್ಲಿ ಜನರ ನಡಿಗೆಯ ಸಪ್ಪಳ, ಡಬ್ಬಲ್ ಮೀಟರ್ ಮೇಲೆ ಐವತ್ತು ಕೊಡಿ ಎನ್ನುವ ಆಟೋ ಚಾಲಕರ ಚೌಕಾಸಿ, ರಸ್ತೆ ಬದಿಯಲ್ಲಿ ನಿಂತು ಗಿರಾಕಿಗಳಿಗೆ ಕಾಯುವ ಬೆಲೆವೆಣ್ಣಿನ ಕಣ್ಣಲ್ಲಿ ನಿರೀಕ್ಷೆ, ಮನೆಬಾಗಿಲಲ್ಲಿ ನಿಂತು ಗಂಡನ ದಾರಿ ಕಾಯುತ್ತಿರುವ ಹೆಂಡತಿಯ ಕಣ್ಣಲ್ಲಿ ಕಳವಳ...

ಮಹಾನಗರಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ತಪ್ಪಿಗೆ ಇವೆಲ್ಲ ದಂಡಗಳನ್ನು ತೆರಲೇಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books