Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬೇಕಿತ್ತು ಬಹಳ ವರ್ಷಗಳಿಂದ ಬಾಕಿಯಿದ್ದ ಒಂದು ನಾಗರನಿದ್ರೆ

ಈಗ ಎದ್ದೆ ನಾಗರ ನಿದ್ರೆ ಮುಗಿಸಿ.
ಅದನ್ನು ನಾನು ನಾಗರ ನಿದ್ರೆ ಅಂತೀನಿ. ಮಧ್ಯಾಹ್ನದ ಚಿಕ್ಕ nap. ಇತ್ತೀಚೆಗೆ ಅದನ್ನು ಬಿಟ್ಟಿದ್ದೆ. ಏಕೆಂದರೆ, ಮಧ್ಯಾಹ್ನ ಮಲಗಿದರೆ ದಪ್ಪವಾಗ್ತೀಯ ಎಂದಿದ್ದರು ಯಾರೋ. ಎರಡನೆಯ ಕಾರಣವೆಂದರೆ ಮಧ್ಯಾಹ್ನದ ನಿದ್ರೆ ಅಭ್ಯಾಸವಾದರೆ ರಾತ್ರಿ ನಿದ್ದೆ ಬೇಗ ಬರುತ್ತಿರಲಿಲ್ಲ. ಮೂರನೆಯದೆಂದರೆ, ಸಿನೆಮಾ. Shooting ಬೆಳಿಗ್ಗೆ ಆರಂಭವಾದಾಗ ಮುಖ fresh ಆಗಿರುತ್ತದೆ. ಮಧ್ಯಾಹ್ನ ಸ್ವಲ್ಪೇ ಹೊತ್ತು ಮಲಗಿದರೂ ಮುಖ ಕೊಂಚ ಊದಿಕೊಳ್ಳುತ್ತದೆ. ಅದನ್ನು facial edema ಅಂತಾರೆ. ಬೆಳಿಗ್ಗೆ fresh ಆದ ಮುಖದಲ್ಲಿ ನಟಿಸಿ, ಅದೇ ದೃಶ್ಯ ಕೊಂಚ ಹೊತ್ತಿಗೆ ಊದಿದ ಮುಖದಲ್ಲಿ ನಟಿಸಿದರೆ ಪ್ರೇಕ್ಷಕನಿಗೆ ಆಭಾಸವೆನ್ನಿಸುತ್ತದೆ. ಹೀಗಾಗಿ ‘ಅಣ್ಣಾ, ಮಧ್ಯಾಹ್ನ ಮಲಗಬೇಡಿ’ ಅನ್ನುತ್ತಿದ್ದರು ನಿರ್ದೇಶಕರು. ಹೀಗಾಗಿ ಆರಂಭದಲ್ಲಿ ಕೊಂಚ ತೂಕಡಿಕೆ, ಕಿರಿಕಿರಿ ಕಾಣಿಸಿಕೊಂಡರೂ ಕೆಲವೇ ದಿನಗಳಲ್ಲಿ ಅದು ಬಿಟ್ಟು ಹೋಯಿತು. ಮಧ್ಯಾಹ್ನದ ಆ ಚಿಕ್ಕ ನಿದ್ರೆಯನ್ನು ನಾನು second good morning ಅನ್ನುತ್ತಿದ್ದೆ. ಹೆಚ್ಚೇನಲ್ಲ, ಬರೀ ನಲವತ್ತು ನಿಮಿಷಗಳ ಪುಟ್ಟ ನಿದ್ರೆ. Siesta.

ಅದನ್ನು ಬಿಟ್ಟ ಮೇಲೆ ನನಗೆ ಏನೂ ನಷ್ಟವಾಗಲಿಲ್ಲ. ರಾತ್ರಿ ನಾಲ್ಕು ತಾಸು ಮಲಗುತ್ತೇನೆ. ಎದ್ದ ಹತ್ತು ನಿಮಿಷ ಒಂದಾದ ಮೇಲೊಂದು ಕಾಫಿ. ಧಾರಾಳ ಸಿಗರೇಟು. ಆನಂತರ ಇದ್ದೇ ಇದೆಯಲ್ಲ ಪ್ರಾತಃಕಾಯಕ. ನಿನ್ನೆ ಸೇವಿಸಿದ್ದು, ಇವತ್ತು ವಿಸರ್ಜಿತವಾಗಬೇಕು. Toiletಗೆ ‘ಕನ್ನಡ ಪ್ರಭ’ ಒಯ್ಯುತ್ತೇನೆ. ಅದರೊಂದಿಗಿನದು ನನ್ನ ದೈಹಿಕ ಸಂಬಂಧ. ಓದದಿದ್ದರೆ ಸುಖ ವಿಸರ್ಜನೆಯಾಗುವುದಿಲ್ಲ. ಓದಿ, ವಿಸರ್ಜನಾ ಶುದ್ಧಿ ಮುಗಿಸಿ ‘ಕನ್ನಡ ಪ್ರಭ’ವನ್ನು ಅಲ್ಲೇ ಬಿಟ್ಟು ಎದ್ದು ಬರುತ್ತೇನೆ. ಸೋಪು-ಸಂಗೀತ ಬೆರೆತ ಕಾಯಕ. ನನ್ನ ಸ್ನಾನದ ಕ್ಯೂಬಿಕಲ್‌ನಲ್ಲಿ ಸಂಗೀತ ಕೇಳಿಸಿಕೊಳ್ಳಲಿಕ್ಕೆ ಆಗುವಂತಹ ಅನುಕೂಲ ಮಾಡಿಕೊಂಡಿದ್ದೇನೆ. ಗಜಲು, FM, ಕೆಲವೊಮ್ಮೆ ಸುಪ್ರಭಾತ-ಹೀಗೆ ಏನಾದರೂ ಸರಿ, ಸಂಗೀತ ಕಿವಿಗೆ ಬೀಳುತ್ತಿದ್ದರೆ ಷವರ್‌ನ ಅಡಿಯ ಸ್ನಾನ-ಧನ್ಯ ಧನ್ಯ.

ಆನಂತರದ್ದೇನಿದೆ? ಸತ್ಯನಾರಾಯಣ.... ನಿತ್ಯ ಪಾರಾಯಣ. ಓದು, ಬರಹ, ತಿಂಡಿ, ಸೂಟು, ಬೂಟು-‘ಜನಶ್ರೀ’ಗೆ ಓಟ. ಅಲ್ಲಿಗೆ ಹೋದ ಮೇಲೆ ಬೀಳುವ ಕೆಲಸದ ಒತ್ತಡವೇ ಬೇರೆ. ಮಾತು, ವ್ಯವಹಾರ, show, ಅತಿಥಿಗಳು, ಸಿಬ್ಬಂದಿಯವರೊಂದಿಗೆ ಚರ್ಚೆ-ಹೀಗೆ. ಇಳಿ ಸಂಜೆ ಹೊತ್ತಿಗೆ ಮತ್ತೆ ‘ಹಾಯ್ ಬೆಂಗಳೂರ್!’ ಮಡಿಲು, ಎಲ್ಲ ಸಿಬ್ಬಂದಿ ಹೋದ ನಂತರವೂ ಒಬ್ಬನೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಉದಯ ಮರಕಿಣಿ. ಅವನು ಬೆಳಿಗ್ಗೆ ತಡವಾಗಿ ಬರುತ್ತಾನೆ. ಏಕೆಂದರೆ, ಬನಶಂಕರಿಗೆ ಅವನು ಸಹಕಾರ ನಗರದಿಂದ ಬಂದು ತಲುಪಲು ಅರ್ಧ ದಿನವೇ ಬೇಕು. ಇಳಿ ಸಂಜೆಯ ನಂತರ ಹೆಚ್ಚಿನ ಟ್ರಾಫಿಕ್ ಇರುವುದಿಲ್ಲ. ಹೀಗಾಗಿ ಹೊರಡುವುದು ಲೇಟು. ಅವನಿಗೊಂದು ಅರ್ಧ ಕಪ್ಪು ಖಡಕ್ ಚಹ ಮಾಡಿಕೊಟ್ಟು, ಪ್ರಾಣಾಪಾಯವಿಲ್ಲವೆಂದು ಖಚಿತಪಡಿಸಲು ನಾನೂ ಅದರಲ್ಲಿ ಅರ್ಧ ಕುಡಿದು ಹಗುರವಾಗಿ ಎರಡು ಸಿಗರೇಟು ಸುಟ್ಟು ಪತ್ರಿಕೆಯ ಮುಂದಿನ ಸಂಚಿಕೆಗೆ ಏನು ಬರೆಯಬೇಕು, ‘ಓ ಮನಸೇ’ ಸಂಚಿಕೆಯ ಸ್ವರೂಪ ಹೇಗಿರಬೇಕು ಎಂದು ಚರ್ಚಿಸಿ ಹದಿನೈದು ನಿಮಿಷ ಕಳೆಯುತ್ತೇವೆ. ಆಮೇಲೆ ಬರೆಯಲು ಕೂಡುತ್ತೇನೆ.

ಮೊನ್ನೆ ಹಾಗೆ ಬರೆಯಲು ಕುಳಿತಾಗ ಯಾಕೋ ವಿಪರೀತ ಬಳಲಿಕೆ. ಮನಸಿನಲ್ಲಿ ಏನೋ ಖಲ್‌ಬಲಿ. ಕೈಗಳಲ್ಲಿ ನಡುಕ. Hand writing ನನಗೇ ಅರ್ಥವಾಗದಷ್ಟು ವಕ್ರ. ಸರಿಯಾಗಿ ಕೂಡಲೂ ಆಗದೆಂಬಂತಹ ಸ್ಥಿತಿ. ತಕ್ಷಣ ವೈದ್ಯರನ್ನು ಕರೆಸಲಾ? ಆಸ್ಪತ್ರೆಗೆ admit ಆಗಲಾ? ಯೋಚಿಸಿ ಮಗನಿಗೆ ಫೋನ್ ಮಾಡೋಣವೆಂದು ಮೊಬೈಲು ಕೈಗೆತ್ತಿಕೊಳ್ಳುವಷ್ಟರಲ್ಲಿ ನೆನಪಾದವರು ಧಾರವಾಡದ ನನ್ನ ಅಣ್ಣ ಡಾ.ಆನಂದ ಪಾಂಡುರಂಗಿ. ಆದರೆ ಅವರಿಗೆ ಈ ಹೊತ್ತಿನಲ್ಲಿ disturb ಆಗೋದು ಬೇಡವೆಂದುಕೊಂಡು ಅವರ ಮಗ ಡಾ. ಆದಿತ್ಯ ಪಾಂಡುರಂಗಿಯ ನಂಬರು ಹುಡುಕಿ ಅದುಮಿದೆ. ಅವನು ನನ್ನ ಮಗನ ಓರಗೆಯವನು. ನಾವೆಲ್ಲ ‘ಮನೂ’ ಅಂತಲೇ ಅವನನ್ನು ಕರೆಯೋದು. “ಮನೂ ಯಾಕೋ ಹಿಂಗೆ ಮನಸಿಗೆ ಖಲ್‌ಬಲಿ ಆಗಲಿಕ್ಕ ಹತ್ಯಾದ. ದೈಹಿಕವಾಗಿ ವಿಪರೀತ ಸುಸ್ತು. ಅಡ್ಮಿಟ್ ಆಗಲು ಮನಸು ಒಪ್ಪುತ್ತಿಲ್ಲ. ನೀನು ಈಗಲೇ ಬಸ್ಸು ಹಿಡಿ. ಬೆಳಿಗ್ಗೆ ಹೊತ್ತಿಗೆ ಇಲ್ಲಿರು. ನೀನು ಬರುವ ಹೊತ್ತಿಗೆ ಬದುಕಿ ಉಳಿದಿದ್ದರೆ ಅಷ್ಟೇ ಪುಣ್ಯ" ಅನ್ನುವಷ್ಟರಲ್ಲಿ ಯಾಕೋ ಬಿಕ್ಕಳಿಕೆ.

ಅವನು ಧಾರವಾಡದಿಂದ ಬರಬೇಕು. ಬದಲಿಗೆ ಬೆಂಗಳೂರಿನಲ್ಲೇ ನನಗೆ ಪರಿಚಯವಿರುವ ಡಾಕ್ಟರುಗಳಿದ್ದಾರೆ. ಆಸ್ಪತ್ರೆಗಳ ಸಾಲೇ ಇದೆ. ಆದರೆ ಆಸ್ಪತ್ರೆಗಳೆಂದರೆ ಹಿಂಸೆ. ರೇಜಿಗೆ. ಹೋದ ತಕ್ಷಣ ಅಂಗಾತ ಮಲಗಿಸಿ drips ಹಚ್ಚಿ ಬಿಡುತ್ತಾರೆ. ನೂರು ತರಹದ ಚೆಕಪ್ಪುಗಳು. ಎಕ್ಸ್‌ರೇಗಳು. Scanಗಳು. ಆರು ತಿಂಗಳಲ್ಲಿ ಅನುಭವಿಸಿದ ಯಾತನೆ ನನ್ನನ್ನು ನಿಜಕ್ಕೂ ಹೈರಾಣ ಮಾಡಿದೆ. ಹೀಗಾಗಿ admit ಆಗಲು ಒಲ್ಲೆ. ಸತ್ತರೆ, ಇಲ್ಲೇ ‘ಹಾಯ್ ಬೆಂಗಳೂರ್!’ ಆಫೀಸಿನ ನನ್ನ ಏಕಾಂಗಿ ಕೋಣೆಯ ಮೂಲೆಯಲ್ಲಿ ಅಮ್ಮನ photo ನೋಡುತ್ತ ಸತ್ತು ಬಿಡುತ್ತೇನೆ. ಯಾವುದೋ ಆಸ್ಪತ್ರೆಯಲ್ಲಿ ಗೋಣು ಚೆಲ್ಲುವುದಕ್ಕಿಂತ ಸುಖ. ನಂಗೊತ್ತು, ನನ್ನ ‘ಹಾಯ್ ಬೆಂಗಳೂರ್!’ ಛೇಂಬರು, ನನ್ನ ಶಕ್ತಿಪೀಠವೂ ಹೌದು, ನನ್ನ ಸಮಾಧಿಯೂ ಹೌದು.

ಮನೂಗೆ phone ಮಾಡಿದ ಮೇಲೆ ಒಂದಷ್ಟು ಬರೆದೆ. ಸಮಾಧಾನವೆನ್ನಿಸಲಿಲ್ಲ. ಏನೋ ಓದಿದೆ. ಸಣ್ಣಗೆ ನಿದ್ರೆ ಆವರಿಸಿಕೊಂಡಿತು. ಏಳುವ ಹೊತ್ತಿಗೆ ಒಂಬತ್ತು. ಎದ್ದು ಸಿಗರೇಟು ಹಚ್ಚಿ ಸರಿಯಾಗಿ ಕಣ್ಣು ಬಿಟ್ಟರೆ ಎದುರಿಗೆ ಮನು ಕುಳಿತಿದ್ದು ಕಾಣಿಸಿತು. “ಆಗಾಳೇ (ಆಗಲೇ) ಬಂದೆರೀ ಅಂಕಲ್. ನೀವು ಮಲ್ಕೊಂಡಿದ್ರಿ. ಮನೀಗೆ ಹೋಗಿ ಸ್ನಾನ ಮಾಡಿ ಲಲ್ತಾ ಆಂಟಿ ಮಾಡಿಕೊಟ್ಟ ತಿಂಡಿ ತಿಂದು ಬಂದೆ. ನೀವು ಎದ್ದು ಕೂಡಿರಿ..." ಅಂದ.

“ನೋಡು, ನಂಗೆ ಹಿಂಗೆಲ್ಲಾ ಆಗಲಿಕ್ಕೆ ಹತ್ಯಾದ..." ಎಂದೆ.
“ಈ ಹದಿನೈದು ದಿನದಾಗ ಏನೇನು ಮಾಡ್ತಿದ್ರಿ, ಅದನ್ನ ಹೇಳ್ರಿ" ಅಂದ.
ನೋಡು ಮನೂ, ಮೊದಲು ಬಳ್ಳಾರಿ ಜಿಲ್ಲೆಯ BMM ಕಾರ್ಖಾನೆಯ ವಿರುದ್ಧ ಸಾವಿರಾರು ರೈತರನ್ನು ಕಟ್ಟಿಕೊಂಡು ಪಾದಯಾತ್ರೆ ಮಾಡಿದೆ. ಅದರ ಪರಿಣಾಮವೂ ಆಗತೊಡಗಿದೆ. I am happy. ಅದಾದ ಮೇಲೆ ‘ವೀರಪ್ಪನ್ ನಾಡಿನಲ್ಲಿ ಜನಶ್ರೀ ಅಭಿಯಾನ’ ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡೆ. ಮನೂ, ಅದು ಗೋಪಿನಾಥಂ ಗ್ರಾಮ. ವೀರಪ್ಪನ್‌ನ ಹುಟ್ಟೂರು. ಅದೆಷ್ಟು ಸಲ ಅಲ್ಲಿಗೆ ಹೋಗಿದ್ದೇನೋ ನೆನಪಿಲ್ಲ. ಅಲ್ಲೇ ನಿಷ್ಠಾವಂತ DFO ಶ್ರೀನಿವಾಸ್ ಇದ್ದರು. ಅವರನ್ನು ನಂಬಿಸಿ ಹತ್ತಿರದ ಹಳ್ಳಕ್ಕೆ ಕರೆಸಿ, ಶರಣಾಗುವುದಾಗಿ ಹೇಳಿ ಬರ್ಬರವಾಗಿ ರುಂಡ ಕತ್ತರಿಸಿ ಕೊಂದ ವೀರಪ್ಪನ್. ಅಂಥ ಶ್ರೀನಿವಾಸ್ ಕಟ್ಟಿಸಿದ ಮಾರಿಯಮ್ಮನ ಗುಡಿಗೆ ಹೋಗಿ ಅಲ್ಲಿರುವ ಆಳೆತ್ತರದ ಶ್ರೀನಿವಾಸ್ ಫೊಟೋಗೆ ನಮಸ್ಕರಿಸಿ ಪಾದಯಾತ್ರೆಯ ಎರಡನೇ ಸುತ್ತು ಆರಂಭಿಸಿದೆ.

ಮನೂ, ಒಂದು ಕಾಲಕ್ಕೆ ಈ ನಾಡಿನಲ್ಲಿ ವೀರಪ್ಪನ್ ಅಟ್ಟಹಾಸ ಮೆರೆಯುತ್ತಿದ್ದ. ಮೊದ ಮೊದಲಿಗೆ ಹಳ್ಳಿಗರಿಗೆ ತೊಂದರೆ ಕೊಡುತ್ತಿರಲಿಲ್ಲ. ಅಲ್ಲಿ ಪಣ್ಣಿಕುಲ ಕ್ಷತ್ರಿಯರಿದ್ದಾರೆ. ಅಂದರೆ ವೀರಪ್ಪನ್‌ನ ಜಾತಿಯವರಾದ ಪಡಿಯಾಚ್ಚಿ ಗೌಂಡರ್‌ಗಳು. ಗಿರಿಜನರಿದ್ದಾರೆ. ಬೆಸ್ತರಿದ್ದಾರೆ. ಸೋಲಿಗರಿದ್ದಾರೆ. ಹರಿಜನರಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಒಂದರ್ಥದಲ್ಲಿ ಅವರಿಗೆ ಹೆಡ್ ಕ್ವಾರ್ಟರ್ಸ್. ಅಲ್ಲಿಂದ ಗೋಪಿನಾಥಂಗೆ ಬಂದರೆ ಅದು ಗ್ರಾಮಪಂಚಾಯಿತಿ ಕೇಂದ್ರ. ಅಲ್ಲಿ ಮಾತ್ರ ಶಾಲೆಯಿದೆ. ಬಿಟ್ಟರೆ ಸುತ್ತಲೂ ಅನೇಕ ‘ಪೋಡು’ಗಳಿವೆ. ಪೋಡು ಅಂದರೆ ನಾವು ‘ಹಾಡಿ’ಗಳು ಅಂತೀವಲ್ಲ? ಹಾಗೆ. ಒಂದೊಂದರಲ್ಲಿ ಐವತ್ತು-ಅರವತ್ತು ಗುಡಿಸಲುಗಳಿವೆ. ಬಿಲೀವ್ ಮಿ ಮನೂ, ಅನೇಕ ಪೋಡುಗಳಿಗೆ ಹೋದೆ. ಒಂದಕ್ಕೂ ಕರೆಂಟಿಲ್ಲ. ಎಲ್ಲೂ ಒಂದು ಶಾಲೆಯಿಲ್ಲ. ಮಕ್ಕಳು ಖಾಯಿಲೆ ಬಿದ್ದರೆ ಆಸ್ಪತ್ರೆಯಿಲ್ಲ. ಕೆಲವಕ್ಕೆ ರಸ್ತೆಗಳೇ ಇಲ್ಲ. ಅಲ್ಲಿ ಯಾರೂ ಉಳುಮೆ ಮಾಡುವಂತಿಲ್ಲ. ಏಕೆಂದರೆ, ಆ ಪೋಡುಗಳು ‘ರಕ್ಷಿತ ಅರಣ್ಯ ಪ್ರದೇಶದ’ ಒಳಗಿವೆ. ಅಲ್ಲಿನ ಜನಕ್ಕೆ ಹಾಲು ಗೊತ್ತಿಲ್ಲ. ಏಕೆಂದರೆ, ಅಲ್ಲಿ ದನ ಕಟ್ಟುವಂತಿಲ್ಲ. ಸಾಕು ಪ್ರಾಣಿ, ಅಂದರೆ ಹಸು-ದನ ಮುಂತಾದವನ್ನು ಮೇಯಿಸಲು ಕಾಡೊಳಕ್ಕೆ ಬಿಟ್ಟರೆ ಅವುಗಳಿಗೆ ಬರುವ ಕಾಲುಬಾಯಿಯಂತಹ ರೋಗಗಳು ಹುಲಿ, ಚಿರತೆ, ಚಿಗರೆ ಮುಂತಾದವುಗಳಿಗೆ ಹರಡುತ್ತದೆ. ಹೀಗಾಗಿ ಅಲ್ಲಿ ಹಸುಗಳಿಲ್ಲ. ಇನ್ನೆಲ್ಲಿಯ ಹಾಲು? ಒಂದೇ ಫೆಸಿಲಿಟಿ ಅಂದರೆ ಅಲ್ಲಿನ ಜನ ಕುರಿ-ಮೇಕೆ ಮೇಯಿಸಿಕೊಳ್ಳಬಹುದು. ಅವರ ಪೋಡುಗಳಿಗೆ ಪ್ರೋಕ್ಷಣೆ ಮಾಡುತ್ತ ಹರಿಯುವ ಕಾವೇರಿಯಲ್ಲಿ ಮೀನು ಹಿಡಿಯಬಹುದು. ಕುರಿ ಮತ್ತು ಮೀನು ನಂಬಿಕೊಂಡು ಬದುಕಬೇಕಷ್ಟೆ. ಅಲ್ಲಿ ಮನೆ ಕಟ್ಟುವಂತಿಲ್ಲ. ಎಲ್ಲವೂ ಹುಲ್ಲಿನ, ತಡಿಕೆಯ ಗುಡಿಸಲುಗಳೇ. ಮನೂ, ಅದು ಡೆಸಿಡಿಯಸ್ ಕಾಡು. ಅಂದರೆ ನಿಯಮಿತವಾಗಿ ಒಣಗಿ ಎಲೆಯುದುರಿ ಬೆತ್ತಲಾಗುವ ಕಾಡು. ಅಲ್ಲಿ ಒಂದು ಗಾಳಿ ಕಾಲ ಆರಂಭವಾದರೆ ಅದು ಭಯಾನಕ. ಇಡೀ ಗುಡಿಸಲೇ ಹಾರಿ ಹೋಗುತ್ತದೆ. ಅರಣ್ಯ ನಿಯಮದ ಪ್ರಕಾರ ಮನೆ ಕಟ್ಟುವಂತಿಲ್ಲ. Well, ಕಡೇ ಪಕ್ಷ ಇರುವ ಗುಡಿಸಲುಗಳಿಗೆ ತಾತ್ಕಾಲಿಕವಾದ sheet ಹೊದಿಸಿಕೊಳ್ಳಲು ಅನುಮತಿ ನೀಡಬಹುದಲ್ಲವೆ?

ಮನೂ, ಒಂದು ಹಾಡಿಯಲ್ಲಿ ಕುಳಿತು ಹುಡುಗಿಯೊಬ್ಬಳನ್ನು ಮಾತನಾಡಿಸಿದೆ. “ಹೆಸರು ಪ್ರಿಯಾಂಕಾ. ಆರನೇ ಕ್ಲಾಸು. ಬೆಳಿಗ್ಗೆ ಎದ್ದು ಬಸ್ಸಿನಲ್ಲೋ, ಹಾಲಿನ ವ್ಯಾನಿನಲ್ಲೋ, ಟೆಂಪೋದಲ್ಲೋ ಹನ್ನೆರಡು ಕಿಲೋ ಮೀಟರು ದೂರದ ಗೋಪಿನಾಥಂಗೆ ಹೋಗಬೇಕು. ಶಾಲೆ ಮುಗಿಸಿ ಹಿಂತಿರುಗಿ ಸಂಜೆ ಏಳು ಗಂಟೆಯಾಗಿರುತ್ತದೆ. ಹಾಡಿಯಲ್ಲಿ ಕರೆಂಟೇ ಇಲ್ಲ. ಓದುವುದು ಎಲ್ಲಿ ಸಾಧ್ಯ? ನಾನು ಡಾಕ್ಟರಾಗಬೇಕು ಸಾರ್..." ಅಂದಳು. ಕಣ್ಣಲ್ಲಿ ನೀರಿದ್ದವು.

ಆರನೇ ಕ್ಲಾಸಿನ ಪ್ರಿಯಾಂಕಾ ಐದನೇ ಕ್ಲಾಸಿನ ತನಕ ಗೋಪಿನಾಥಂನಲ್ಲಿ ತಮಿಳು ಮೀಡಿಯಂನಲ್ಲಿ ಓದಿದ್ದಾಳೆ. ಈಗ ಕನ್ನಡ ಮೀಡಿಯಂ ಶಾಲೆ. ಅವಳಿಗೆ ಹೈಸ್ಕೂಲು ಬೇಕು ಅಂದರೆ ಮಲೆ ಮಹದೇಶ್ವರ ಬೆಟ್ಟಕ್ಕೆ, ಅಂದರೆ ಗೋಪಿನಾಥಂನಿಂದ ಮತ್ತೆ ಮುಂದಕ್ಕೆ ಹತ್ತೊಂಬತ್ತು ಕಿಲೋಮೀಟರು ಪ್ರಯಾಣಿಸಬೇಕು. “ಆಯ್ತು ಮಗಳೇ ಡಾಕ್ಟರಾಗಲು ಇಷ್ಟ ಅಂತೀಯ. ಅದಕ್ಕೆ ಓದಬೇಕಲ್ಲ? ನಿಂಗೆ ಕಾಲೇಜು ಎಲ್ಲಿದೆ? ಗೊತ್ತಾ?" ಅಂದೆ. ಅಮಾಯಕ, ಅಬೋಧ ಕಣ್ಣುಗಳನ್ನು ಅರಳಿಸಿ “ಕೊಳ್ಳೇಗಾಲದಲ್ಲಿದೆ" ಅಂದಳು.
ನೋಡು ಮನೂ, ಅವಳ ಪೋಡಿನ ಹೆಸರು ಚೆಂಬುಟ್ಟಿ ಪಟ್ಟಿ. ಅಲ್ಲಿಂದ ಗೋಪಿನಾಥಂ ಹನ್ನೆರಡು ಕಿಲೋಮೀಟರು. ಗೋಪಿನಾಥಂನಿಂದ ಮಲೆ ಮಹದೇಶ್ವರ ಬೆಟ್ಟ ಹತ್ತೊಂಬತ್ತು ಕಿಲೋಮೀಟರು. ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ಎಪ್ಪತ್ತೆರಡು ಕಿಲೋಮೀಟರು. ಇಷ್ಟಾಗಿ ನೂರಾ ಆರು ಕಿಲೋಮೀಟರು ಬಂದರೂ ಕೊಳ್ಳೇಗಾಲದಲ್ಲಿ ಮೆಡಿಕಲ್ ಕಾಲೇಜ್ ಇಲ್ಲ ಎಂಬುದು ಆ ಅಬೋಧ ಕಣ್ಣುಗಳ ಪ್ರಿಯಾಂಕಾಗೆ ಗೊತ್ತಿಲ್ಲ. What a pity! ಇವೆಲ್ಲ ಸರಿಯಾಗುವುದು ಎಂದಿಗಾದರೂ ಸಾಧ್ಯವಾ?

ಹಾಗೆಯೇ ನಡೆಯುತ್ತ ನಡೆಯುತ್ತ ಹೊಗೇನಕಲ್ ಬಳಿಯ ಇನ್ನೊಂದು ಪೋಡಿಗೆ ಬಂದೆ. ಅಲ್ಲಿಯ ಸಂಪೂರ್ಣ ಬದುಕೇ ಹೊಗೇನಕಲ್ ಫಾಲ್ಸ್. ಇನ್ನೂರು ಅಂಬಿಗರು ಫಾಲ್ಸ್ ಪಕ್ಕದ ಪೋಡಿನಲ್ಲಿ ಜೀವಿಸುತ್ತಾರೆ. ಅವರೆಲ್ಲರ ಸಮ್ಮುಖದಲ್ಲೇ ಅಸಿಸ್ಟೆಂಟ್ ಕಮೀಶನರ್ ಬಾಬು ಅವರು ಬಂದು ಅಲ್ಲಿಂದಲೇ ಕೆಲವರಿಗೆ ವಿಧವಾ ವೇತನ ನೀಡಿದರು. ಕೆಲವರಿಗೆ ವೃದ್ಧಾಪ್ಯ ವೇತನ ನೀಡಿದರು. ಅದೇ ಹಾಡಿಯ ಒಬ್ಬ ಹೆಣ್ಣು ಮಗಳು ತನ್ನ ಮಗನನ್ನು ಎತ್ತಿಕೊಂಡು ಬಂದಳು. ಅವನಿಗೆ ಹದಿಮೂರು ವರ್ಷ. ಬುದ್ಧಿ, ದೇಹ ಎರಡೂ ಸ್ವಾಧೀನದಲ್ಲಿಲ್ಲ. ಸುಮ್ಮನೆ ಕೈಚಾಚಿ ಮಗುವನ್ನು ಎತ್ತಿಕೊಂಡೆ. ಮೂರು ವರ್ಷದ ಮಗುವನ್ನೆತ್ತಿಕೊಂಡಂತೆನಿಸಿತ್ತು; ಅಷ್ಟೇ ಭಾರ. ಆ ತಕ್ಷಣ ಅಸಿಸ್ಟೆಂಟ್ ಕಮೀಶನರ್ ಬಾಬು ಅವರು ಆ ಮಗುವಿಗೆ ಒಂದು ಸಾವಿರದ ಇನ್ನೂರು ರುಪಾಯಿಗಳ ಮಾಸಾಶನ ಘೋಷಿಸಿ,“ಈ ಹಣ ಮಗುವಿನ ತಾಯಿಯ ಕೈಗೇ ತಲುಪುವ ವ್ಯವಸ್ಥೆ ಮಾಡುತ್ತೇನೆ" ಅಂದರು. ಆ ಕೆಲಸ ಎರಡು ದಿನಗಳಲ್ಲಿ ಆಗಿಯೂ ಹೋಯಿತು.
ಮನೂ, ಎಲ್ಲರಿಗೂ ಹೇಳಿದ್ದನ್ನೇ ನಿನಗೂ ಹೇಳ್ತೀನಿ ಕೇಳು. ಈಗಾಗಲೇ ಐವತ್ತೈದು ವರ್ಷ ಬದುಕಿದ್ದಾಯಿತು. ಉಳಿದಿರುವುದು ಬರೀ ನಲವತ್ತೈದು ವರ್ಷ. ಈ ತನಕ ನಂದಾಯಿತು, ಹೆಂಡತಿ ಮಕ್ಕಳದ್ದಾಯಿತು, ಮೊಮ್ಮಕ್ಕಳದಾಯಿತು. ಇನ್ನು ಸಮಾಜಕ್ಕೆ ಕೈಲಾದುದನ್ನು ಹಿಂದಿರುಗಿಸುವ ಸಮಯ, ಇಂಥ ಹೊತ್ತಿನಲ್ಲಿ ಇದೇನು ಕಿರಿಕಿರಿ ಅಂದೆ.

ಮನೂ, ಫಕ್ಕನೆ ಇನ್ನೊಂದು ವಿಷಯ ನೆನಪಾಯಿತು. ವೀರಪ್ಪನ್ ನಾಡಿನಲ್ಲಿ ಜನಶ್ರೀ ಅಭಿಯಾನದ ಕೊನೆಯ ಹಂತವಾಗಿ ನಾನು ತಲುಪಿದ್ದು ಆಲಂಬಾಡಿ ಪೋಡು. ಅಲ್ಲಿ ಬೆಳಕೇ ಇಲ್ಲ. ಒಂದು ಗುಡಿಸಲ ಮುಂದೆ ಕತ್ತಲಲ್ಲೇ ಹಗ್ಗದ ಮಂಚ ಹಾಕಿದರು. ಒಂದ್ಯಾರೋ ಅಜ್ಜಿ ಬಂದು ಕಾಲಿನ ಬೂಟು ಬಿಚ್ಚಿದಳು. ತಣ್ಣನೆಯ ನೀರಿನಿಂದ ಕಾಲು ತೊಳೆಸಿದಳು. ಆನಂತರ ತಾನೇ ಮುಖ ತೊಳೆಸಿದಳು. ಸೆರಗಿನ ತುದಿಯಲ್ಲಿ ಮುಖ, ಮೂಗು ಎಲ್ಲ ಒರೆಸಿ, ಮೈಗೆ ತಣ್ಣನೆಯ ನೀರು ತಟ್ಟಿದಳು. ಇಡೀ ದೇಹ ತಣ್ಣಗಾದಂತಾಯಿತು. ತನ್ನ ಮುರುಕು ಗುಡಿಸಲಲ್ಲಿ ಮಾಡಿದ ಜೋಳದ ಮುದ್ದೆ, ಮೀನು ಸಾರು ತಂದು ‘ಸಾಪಾಟು ಚಾಮೀ’ (ಊಟ ಮಾಡು ಸ್ವಾಮೀ) ಅಂತೇನೋ ಅಂದಳು. ಮೀನು ಸಾರಿನಲ್ಲಿ ಮುದ್ದೆ ಅದ್ದಿ ಬಾಯಿಗಿಟ್ಟುಕೊಂಡೆ ನೋಡು; ಅಮೃತ! ಆ ತಾಯಿ ಯಾರೆಂಬುದೂ ನನಗೆ ತಿಳಿಯದು. ಹೊಟ್ಟೆ ತುಂಬ ಉಂಡೆ. “ತೂಂಗು ತೂಂಗು" ಅಂತೇನೋ ಅಂದಳು. ಮಲಗು ಎಂಬುದರ ಅರ್ಥ. ಮಲಗಿದರೆ ತನ್ನದೇ ಹರಕು ದುಪ್ಪಟಿ ಹೊದಿಸಿದಳು. ನನಗೆ ಅದ್ಯಾವುದೂ ಹೆಚ್ಚಿನದೆನ್ನಿಸಲಿಲ್ಲ. ದುಪ್ಪಟಿ ಹೊದ್ದು ಮಲಗಿದವನ ಕಿವಿಗೆ ಹತ್ತಿರವಾಗಿ ಬಂದು ಒಂದು ಜೋಗುಳ ಹಾಡಿದಳು ನೋಡು? ಕೆಲವೇ ಸೆಕೆಂಡುಗಳಲ್ಲಿ ನನಗೆ ನಿದ್ರೆ.

ನನಗೆ ಆಲಂಬಾಡಿಯಲ್ಲೇ ಅವತ್ತು ವಾಸ. ಬೆಳಿಗ್ಗೆ ಎದ್ದರೆ ಆಕಾಶದಲ್ಲಿ ಎಳೆಯ ಸೂರ್ಯ. ಬದುಕು ಧನ್ಯವಾಗಿ ಹೋಯಿತು ಅಂದುಕೊಂಡೆ. ಹೀಗಿದೆ ನೋಡು ಮನೂ ದಿನಚರಿ ಅಂದೆ.
“ಇಲ್ರೀ ಅಂಕಲ್, all this is fine. ಆದರೆ ನಿಮ್ಮ ವಯಸ್ಸಿಗೆ ಇಷ್ಟೆಲ್ಲ ಶ್ರಮ ಭರಿಸೋದು ಸಾಧ್ಯವಿಲ್ಲ. ಏಳ್ರೀ, ಧಾರವಾಡಕ್ಕೆ ಹೋಗೋಣ. ನಾಕು ದಿನ ಮನ್ಯಾಗೆ ಆರಾಮಿರ್ರಿ. ಎಲ್ಲಾ test ಅಲ್ಲೇ ಮಾಡ್ತೀನಿ, ಮೊದಲು you should sleep well" ಅಂದ.
ಅದನ್ನೇ ಹೇಳಿದ್ದು, ಇವತ್ತಿನ ನಾಗರನಿದ್ರೆ ಆಯಿತು ಅಂತ. I am fine. ಮಾಡಿದ ಪ್ರತಿ testನಲ್ಲೂ ಪಾಸು, ಆರೋಗ್ಯ ಅದ್ಭುತವಾಗಿದೆ. ಸಿಗರೇಟೊಂದು ಕಡಿಮೆ ಮಾಡಿ ಅಂತ test ಮಾಡಿದ ಡಾ.ಧುಳೆಪ್ಪನವರ್, ಡಾ.ಗಿರೀಶ್, ಡಾ.ದಂಡಿನ್ ಎಲ್ಲರೂ ಅಂದರು. “ಸರಿ, ನೀವು ಹೊರಡಿ" ಎಂದು ನಮಸ್ಕರಿಸಿ, ಅವರು ಹೋದ ಮರುಕ್ಷಣ ಸಿಗರೇಟಿಗೆ ಬೆಂಕಿ ಕೊಟ್ಟೆ.
ಡಾ.ಆನಂದ ಪಾಂಡುರಂಗಿ ಅವರು ನಗುತ್ತಿದ್ದರು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books