Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಕ್ಷರಶಃ ನನ್ನ ಪ್ರಾಣಕಾಯ್ದ ಅಕ್ಕರೆಯ ಮಿತ್ರ ಸುಬ್ಬಣ್ಣ ನೆನಪಾಗುತ್ತಾರೆ!

To doctor with love.

ಅದೇಕೋ ಬೆಳಿಗ್ಗೆ ಎದ್ದ ಕೂಡಲೆ ನೆನಪಾದವರು ಅವರು: ಡಾ.ವೆಂಕಟ ಸುಬ್ಬರಾವ್. ಅವರು ನನ್ನ ಮಿತ್ರರು, ಹಿತೈಷಿ, ಆತ್ಮೀಯರು, ನನ್ನ ಪಾಲಿನ ಧನ್ವಂತರಿ. ‘ಪತ್ರಿಕೆ’ ೧೯೯೫ರಲ್ಲಿ ಆರಂಭಗೊಂಡಾಗ ಕೆಲವು ದಿನ ಅವರ ಕಚೇರಿ (?) ನನ್ನ ಬಾಡಿಗೆ ಮನೆಯ ಮೋಟರ್ ಸೈಕಲ್ ಗರಾಜ್‌ನಲ್ಲಿತ್ತು. ಆನಂತರ ವಿದ್ಯಾಪೀಠ ಸರ್ಕಲ್ ಬಳಿ ಒಂದು ಪುಟ್ಟ ಮಳಿಗೆ ಸೇರಿಕೊಂಡೆವು. ಕಚೇರಿಯಲ್ಲಿ ಇರುತ್ತಿದ್ದುದು ನಾನು, ನಿವೇದಿತಾ ಮತ್ತು ಸಂತೋಷ್. ಅದೊಂದು ದಿನ ಫೋನ್ ಬಂತು. ಅದಿನ್ನೂ ಮೊಬೈಲ್‌ಗಳ ಕಾಲವಲ್ಲವಲ್ಲ? ಫೋನೆತ್ತಿಕೊಂಡು ‘ಯಾರು?’ ಅಂದೆ.

“ನಾನು ಡಾ.ವೆಂಕಟ ಸುಬ್ಬರಾವ್ ಅಂತ. General practitioner. ನಿಮ್ಮ ಬರಹಗಳನ್ನ ‘ಕಸ್ತೂರಿ’ಯಲ್ಲಿ ಓದುತ್ತಿದ್ದೆ. ಆಮೇಲೆ ‘ಕರ್ಮವೀರ’ಕ್ಕೆ ಬಂದಿರಿ. I followed you. ಇದ್ದಕ್ಕಿದ್ದಂತೆ ಈಗ್ಗೆ ಮೂರು ವಾರದ ಹಿಂದೆ ‘ಹಾಯ್ ಬೆಂಗಳೂರ್!’ ಎಂಬ ವಿಚಿತ್ರ ಹೆಸರಿನ ಕಪ್ಪು-ಬಿಳಿ ಪತ್ರಿಕೆ ಬುಕ್ ಸ್ಟಾಲ್‌ನಲ್ಲಿ ಕಾಣಿಸಿತು. ಅದರ ಮೇಲೆ ‘ರವಿ ಬೆಳಗೆರೆ ಸಾರಥ್ಯದಲ್ಲಿ...’ ಅಂತ ಬರೆದದ್ದು ಓದಿ ಫಕ್ಕನೆ ಕೈಗೆತ್ತಿಕೊಂಡೆ. ನಿಮಗೆ ಆಶ್ಚರ್ಯವಾಗಬಹುದು. ಆವತ್ತಿಗೆ ಎರಡು ದಿನದ ಆಚೆಗೆ ನನ್ನ ಮದುವೆಯಿತ್ತು. ಮದುವೆಯಾದ ಮರುದಿನವೇ ನನ್ನ ಹೆಂಡತಿಗೆ ಹೇಳಿದೆ, “ನೋಡು ಇವನು ತುಂಬ ಚೆನ್ನಾಗಿ ಬರೀತಾನೆ" ಅಂತ. ಇವತ್ತೂ ಪತ್ರಿಕೆ ತಗೊಂಡೆ. ನಿಮ್ಮ ಟೆಲಿಫೋನ್ ನಂಬರ್ ಕಾಣಿಸಿತು, ಫೋನ್ ಮಾಡಿದೆ" ಅಂದರು.

“That's fine. ನನ್ನ ಮಾವನ ಹೆಸರೇ ಇಟ್ಟುಕೊಂಡಿದ್ದೀರಿ. ಚೆನ್ನಾಗಿ ಮಾತಾಡ್ತೀರಿ. ನಿಮ್ಮ ಅಭಿಮಾನಕ್ಕೆ ಋಣಿ. ಒಮ್ಮೆ ಆಫೀಸಿಗೆ ಬಂದು ಹೋಗಿ" ಅಂದೆ. ಸಾಮಾನ್ಯವಾಗಿ ನಾನು ಮಂತ್ರಿ ಮಾಗಧರನ್ನು ಕಚೇರಿಗೆ ಕರೆಯುವುದಿಲ್ಲ. ಅವರ ಕಚೇರಿಗಳಿಗೆ ದಮ್ಮಯ್ಯ ಗುಡ್ಡೆ ಹಾಕಿದರೂ ಹೋಗುವುದಿಲ್ಲ. ಆದರೆ ಯಾರೇ ಓದುಗರು ಅಭಿಮಾನದಿಂದ ಮಾತನಾಡಿದರೂ ಕಚೇರಿಗೆ ಬನ್ನಿ ಅನ್ನುತ್ತೇನೆ. ಬಂದರೆ ತಟಗು ಕಾಫಿ, ಅವರಿಗೆ ಅಭ್ಯಾಸವಿದ್ದರೆ ನಂಗೊಂದು-ಅವರಿಗೊಂದು ಸಿಗರೇಟು. ಅವತ್ತಿಗೆ ಡಾ.ವೆಂಕಟ ಸುಬ್ಬರಾವ್ ಕೇವಲ ಒಬ್ಬ ಎಂ.ಬಿ.ಬಿ.ಎಸ್ ಮಾಡಿಕೊಂಡು, ಸಿ.ವಿ.ರಾಮನ್ ನಗರದಲ್ಲಿ ಒಳ್ಳೆಯ ಪ್ರಾಕ್ಟೀಸ್ ಇಟ್ಟುಕೊಂಡಿದ್ದ ಸಂಭಾವಿತ ವೈದ್ಯರು. ಬೆಂಗಳೂರಿನಲ್ಲಿ ವೈದ್ಯರಿಗೇನು ಕಡಿಮೆ? ರೋಗಿಗಳಿಗಿಂತ ವೈದ್ಯರೇ ಹೆಚ್ಚು ಎಂಬಂತಿದ್ದಾರೆ.

ಆದರೆ ಒಂದು ದಿನ ಡಾ.ರಾವ್ ಕಚೇರಿಗೆ ಬಂದರು. ಅರ್ಧ ಕಪ್ ಕಾಫಿ ಮುಗಿಯುವುದರೊಳಗಾಗಿ ಗೊತ್ತಾಗಿ ಹೋಯಿತು: ಇದು ನಮ್ಮ ಅಕೌಂಟಿನ ಆಸಾಮಿ. ಆರೋಗ್ಯವೊಂದನ್ನು ಬಿಟ್ಟು ಸಂಗೀತ, ಸಿನೆಮಾ, ಸಾಹಿತ್ಯ, ಮನೋ ವಿಜ್ಞಾನ-ಹೀಗೆ ಹಾಳು ಮೂಳು ನೂರೆಂಟು ಮಾತಾಡಿದೆವು. ಅದರಲ್ಲಿ ನನಗೆ ತುಂಬ ಹಿಡಿಸಿದ್ದು ಮನೋ ವಿಜ್ಞಾನದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಹಿಡಿತ. ಅಲ್ಲ ಡಾಕ್ಟ್ರೇ, ಸೈಕಿಯಾಟ್ರಿ ಬಗ್ಗೆ ಇಷ್ಟೆಲ್ಲ ಫ್ಯಾಷನೇಟ್ ಆಗಿ ಮಾತನಾಡೋ ನೀವು ಬರೀ MBBS ಮಾಡಿಕೊಂಡು ಕುಳಿತರೆ ಹೇಗೆ. ಇನ್ನೂ ಚಿಕ್ಕ ವಯಸ್ಸು. ಸೈಕಿಯಾಟ್ರಿಯಲ್ಲಿ ಎಂ.ಡಿ. ಅಥವಾ ಎಂ.ಎಸ್ ಥರದ್ದನ್ನೇಕೆ ಮಾಡಬಾರದು? you will be successful ಅಂದೆ. ಡಾಕ್ಟರು ನಕ್ಕರು. ಅವರ ತಂದೆ ಕೂಡ ಬಹುಶಃ ಡಾಕ್ಟರಾಗಿದ್ದವರು. ಕ್ಯಾನ್ಸರಿಗೆ ಆಹುತಿಯಾದರು. ಓದಿಸಿದ್ದು ಬಹುಶಃ ಸೋದರ ಮಾವ. ಇವರ ಒಬ್ಬ ಸೋದರ ಸೈಂಟಿಸ್ಟ್ ಆದರು. ಇವರದು ಎಂ.ಬಿ.ಬಿ.ಎಸ್ ದಾಟಲಿಲ್ಲ.

“ಆದ್ರೆ ರವಿ ಸರ್, ಒಂದಲ್ಲ ಒಂದು ದಿನ ಮಾಡೇ ಮಾಡ್ತೀನಿ. ಆದರೆ ಭಾರತದಲ್ಲಿ ಅಲ್ಲ: some where else" ಅಂದರು. ಎಸೆಸೆಲ್ಸಿ ಪಾಸಾದ ಹುಡುಗ “ಮುಂದೆ ನಾನು ಐಎಎಸ್ ಆಫೀಸರ್ ಆಗ್ತೀನಿ" ಅಂದ್ರೆ ಯಾವ ಭಾವ ಮೂಡುತ್ತದೋ, ಅಂಥದೇ ಭಾವ ಮೂಡಿತ್ತು. ಅದಾದ ಮೇಲೆ ಡಾ.ರಾವ್ ಆಗಾಗ ಬರುತ್ತಿದ್ದರು. ಯಥಾಪ್ರಕಾರ ನಿರಂತರ ಹರವೆಯ ಬಾತಾಖಾನಿ. ಈ ಮಧ್ಯೆ ಅವರು ಹಾಡುತ್ತಾರೆಂಬುದು ನನಗೆ, ಡಯಾಬಿಟೀಸು ನನಗೆ ಇದೆಯೆಂಬುದು ಅವರಿಗೆ ಗೊತ್ತಾಯಿತು. ಮತ್ತಿನ್ನೇನು ಬೇಕು ಬಾಂಧವ್ಯ ಬೆಸೆಯಲಿಕ್ಕೆ? ಅವರು ಕಿಶೋರ್ ಕುಮಾರ್‌ನ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಿದ್ದರು. ನನ್ನ ಡಯಾಬಿಟೀಸು ಅವರ ಆರೋಹಣಕ್ಕೆ ತಕ್ಕಂತೆ ಏರುತ್ತಿತ್ತು. ಒಂದು ದಿನ ತೋಳಿಗೆ ಕಾರಿನ ಟ್ಯೂಬ್‌ನಂತಹುದೊಂದನ್ನು ಸುತ್ತಿ ಪುಸ್ಸ ಪುಸ್ಸನೆ ಬಿ.ಪಿ ನೋಡಿ “ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗೋ ಲಕ್ಷಣಗಳಿವೆ. ಇನ್ನು ಮೇಲೆ ನೀವು ನಿಮ್ಮ ಆರೋಗ್ಯದ ಉಸ್ತುವಾರಿಯನ್ನು ನನ್ನ ಕೈಗೆ ಬಿಡಬೇಕು. please, ಹಟ ಮಾಡಬೇಡಿ" ಅಂದರು.

ಚಲೋ... ಮಂಜೂರ್ ಹೈ. ಗೆಳೆಯರ ಕೈಗೆ ಜೀವ ಕೊಡುವುದರಲ್ಲಿ ತಪ್ಪೇನಿದೆ? ಅವತ್ತೇ ಅವರ ಕೈಗೆ ನನ್ನ health file ಕೊಟ್ಟೆ. ಅದಕ್ಕಿಂತ ಹೆಚ್ಚಾಗಿ ಅವರಿಂದ ನಾನು ತುಂಬ ಪಡೆದೆ. ಮಾತಿಗೆ ಕುಳಿತಾಗ ಅವರಿಗೆ ಏನೋ ಹೊಳೆಯುತ್ತಿತ್ತು: ಒಂದು ಸರಳವಾದ one liner. ‘ಹೆಂಗಸೆಂದರೆ ಏನು? ಅದು ಎರಡು ಯುದ್ಧಗಳ ನಂತರದ ಅಲ್ಪ ವಿರಾಮದ ಮೋಜು ಅಂದನಂತೆ ಸರ್ ನೆಪೋಲಿಯನ್’ ಅನ್ನುತ್ತಿದ್ದರು. ಅಲ್ಲೇ ಇದ್ದ ಒಂದು pad ಎಳೆದುಕೊಂಡು ಅದರಲ್ಲಿ ಅವರು ಹೇಳಿದ ಸಾಲು ಗೀಚಿಕೊಂಡು ನನ್ನೆದುರಿಗಿರುತ್ತಿದ್ದ ದೇವರ ಸಂಪುಟದಂತಹ ಒಂದು ಡಬ್ಬಿಯಲ್ಲಿ ಹಾಕಿಡುತ್ತಿದ್ದೆ. ಯಾವತ್ತೋ ಒಂದು ದಿನ ಆ ಚೀಟಿಗಳ ಪೈಕಿ ಒಂದನ್ನು ಕೈಗೆತ್ತಿಕೊಂಡರೆ, ಅದು ಆ ವಾರದ ‘ಬಾಟಮ್ ಐಟಮ್’ನ ಸ್ವರೂಪ ಪಡೆದು ಬಿಡುತ್ತಿತ್ತು. ಅವರೊಂಥರಾ tail twister. ಬಾಲ ಚಿಗುಟಿದರೆ ಸಾಕು ಯುದ್ಧ ಕುದುರೆಗೆ ಮಾಘ ವೇಗ. ಅಂಥ ಸ್ನೇಹಗಳು ಸಿಗುವುದು ಅಪರೂಪ. ಡಾ. ವೆಂಕಟ ಸುಬ್ಬರಾವ್ ಅಂತಹ ಗೆಳೆಯರಲ್ಲಿ ಒಬ್ಬರಾಗಿದ್ದರು.


ಆರೋಗ್ಯದ ವಿಷಯಕ್ಕೆ ಬಂದರೆ, ಅವರೇ ನನ್ನ ಪಾಲಿಗೆ ‘ಓಂ ಪ್ರಥಮ’. ಮೊದಲು ಅಲ್ಲೆಲ್ಲೋ ಸಿ.ವಿ.ರಾಮನ್ ನಗರದಲ್ಲಿ ಕ್ಲಿನಿಕ್ಕು-ಮನೆ ಮಾಡಿಕೊಂಡಿದ್ದ ಅವರು ಆನಂತರ ಪದ್ಮನಾಭನಗರಕ್ಕೆ shift ಆದರು. ಅದಕ್ಕೆ ಮೂರು ಸೆಳೆತಗಳಿದ್ದವು. ಮೊದಲನೆಯದು, ಅವರ ಪತ್ನಿಯ ತವರು ಮನೆ ಪದ್ಮನಾಭನಗರದಲ್ಲಿತ್ತು. ಎರಡನೆಯ ಸೆಳೆತ ನಾನು. ಮೂರನೆಯದು ‘ಪ್ರಾರ್ಥನಾ’. ಒಂದೇ ಒಂದು ಯೋಚನೆ ಮಾಡದೆ ಅವರ ಮಗಳು ನಾಗಶ್ರೀ ಹಾಗೂ ಮಗ ಕಾರ್ತಿಕ್‌ನನ್ನು ಶೀಲಕ್ಕನ ಕೈಗೆ ಒಪ್ಪಿಸಿ ನಿರುಮ್ಮಳರಾದರು. ಪ್ರಾಕ್ಟೀಸಿನ ಬಗ್ಗೆ ಅವರಿಗೆ ಚಿಂತೆಯೇ ಇರಲಿಲ್ಲ. ಮರದ ಕೆಳಗೆ ಕುಳಿತು ಒಂದು ಸ್ಟೆಥ್ ಕೊರಳಿಗೆ ನೇತು ಹಾಕಿಕೊಂಡರೆ ಸಾಕು, ಎಲ್ಲಿಂದಲೋ ಬಂದು ಸಾಲಾಗಿ ರೋಗಿಗಳು ನಿಲ್ಲುತ್ತಾರೆ ಎಂಬ ವಿಶ್ವಾಸ ಅವರಿಗಿತ್ತು. ಅದು ನನಗೂ ಇತ್ತು. ಡಾ.ರಾವ್ ಅವರಿಗೆ ‘ಸರ್, ಯಾಕೋ ಗಂಟಲು ನೋವು’ ಅಂತ ಹೇಳಿ ಬಿಟ್ಟರೆ ಸಾಕು ಮೊದಲು ಒಂದು ಚಿಟಿಕೆ ಉಪ್ಪು-ಬಿಸಿನೀರು ಬೆರೆಸಿ ಗಾರ್ಗಲ್ ಮಾಡಿ ಅಂತ ಸಲಹೆ ಕೊಟ್ಟು ತಮ್ಮ ಅನುಭವ ಹಾಗೂ ಅಧ್ಯಯನದ ಚೌಕಟ್ಟಿನಲ್ಲಿ ಇರುವುದನ್ನೆಲ್ಲ ಬಸಿದು ಮನನ ಮಾಡಿಕೊಂಡು, ಅದೆಲ್ಲ ತರಹದ ಚಿಕಿತ್ಸೆ ನೀಡಿ “ಯಾವುದಕ್ಕೂ ಇರಲಿ ಸರ್, ಒಂದು ಸಲ ಗಂಟಲು ಚಿಕಿತ್ಸೆಯ ಸುಪ್ರಸಿದ್ಧ ವೈದ್ಯ ಡಾ.ನಳಿನೇಶ್ ಅವರನ್ನು ಕಂಡು ಬಂದು ಬಿಡೋಣ ಬನ್ನಿ" ಎಂದು ಹಟ ಮಾಡಿ ಶತಾಯ ಗತಾಯ ಎಳೆದೊಯ್ಯುತ್ತಿದ್ದರು. ಡಾ.ನಳಿನೇಶ್‌ರೊಂದಿಗೆ ಅಪಾಯಿಟ್‌ಮೆಂಟ್ ಅವರೇ ತೆಗೆದುಕೊಂಡಿರುತ್ತಿದ್ದರು. ಎಲ್ಲಾ ಪರೀಕ್ಷೆ ಮಾಡಿ ಕಡೆಗೆ, “ಡಾಕ್ಟ್ರೇ ಇದು simple throat infection" ಅಂದವರೇ ಡಾ.ನಳಿನೇಶ್ ಒಂದು ಪ್ರಿಸ್ಕ್ರಿಪ್ಷನ್ ಬರೆದು ಕೊಡುತ್ತಿದ್ದರು. ಬಿಚ್ಚಿ ನೋಡಿದರೆ ಡಾ. ವೆಂಕಟ ಸುಬ್ಬರಾವ್ ಮೊಟ್ಟ ಮೊದಲನೆಯ ದಿನ ನನಗೆ ಬರೆದು ಕೊಟ್ಟ ಪ್ರಿಸ್ಕ್ರಿಪ್ಷನ್‌ನ ಯಥಾವತ್ ಅದಾಗಿರುತ್ತಿತ್ತು.

“ನೋಡಿ, ಸುಮ್ಮನೆ ಅಲೆಸಿದಿರಿ ನೀವು. ನಿಮ್ಮ ಡಯಾಗ್ನಸಿಸ್ ಸರಿ ಇರುತ್ತೆ, ಅದರ ಬಗ್ಗೆ ನನಗೆ ನಂಬಿಕೆ ಇದೆ" ಅನ್ನುತ್ತಿದ್ದೆ.
“ಹಾಗಲ್ಲ ಸರ್, ನಿಮ್ಮ ಆರೋಗ್ಯ ನನಗೆ ಮುಖ್ಯ" ಅನ್ನುತ್ತಿದ್ದರು. ಹಾಗೆ ಅವರು ನನ್ನನ್ನು ಅವೆಷ್ಟು ನಿಷ್ಣಾತ ವೈದ್ಯರ ಬಳಿಗೆ ಕರೆದೊಯ್ದರೋ? ನೆನಪಿಗಿಲ್ಲ. ನಾನೊಬ್ಬನೇ ಅಂತ ಅಲ್ಲ: ನನ್ನ ಹೆಂಡತಿ-ಮಕ್ಕಳು, ನಮ್ಮ ಆಫೀಸಿನ ಸಮಸ್ತ ಸಿಬ್ಬಂದಿ, ಶಾಲೆಯ ಸಿಬ್ಬಂದಿ, ಶಾಲೆಯ ಮಕ್ಕಳು, ಮುಖ್ಯವಾಗಿ ಟಿ.ಎನ್.ಸೀತಾರಾಂ, ಸೂರಿ ಮುಂತಾದ ಗೆಳೆಯರಿಗೆಲ್ಲ ಅವರೇ ವೈದ್ಯೋ ನಾರಾಯಣೋ ಹರಿ: ಒಂದು ಸಲ ನಮ್ಮ ಚೇತನಾ ಇದ್ದಕ್ಕಿದ್ದಂತೆ ವಿಪರೀತ ಹೊಟ್ಟೆ ನೋವು ಎಂದು almost ಕಿರುಚುತ್ತಾ ನಿವೇದಿತಾಳ ಮನೆಗೆ ಹೋಗಿ ಮಲಗಿಬಿಟ್ಟಳು. ನಾನು ಗಾಬರಿಯಾಗಿ “ಸುಬ್ಬಣ್ಣಾ" ಅಂದೆ. ಓಡಿ ಬಂದವರೇ, “nothing to worry sir, ಇದು ಗಾಲ್ ಬ್ಲಾಡರ್‌ನಲ್ಲಿ stone ಆಗಿದೆ. ನೀವು ಹೋಗಿ ಆರಾಮಾಗಿ ಬರೀರಿ. ಮಗೂನ ನೆಮ್ಮದಿಯಾಗಿ ಮನೆ ತಲುಪಿಸುವ ಜವಾಬ್ದಾರಿ ನನ್ನದು" ಅಂದವರೇ ಗಾಲ್ ಬ್ಲಾಡರ್‌ನಿಂದ ಕಲ್ಲು-ಕಸ ಎಲ್ಲ ತೆಗೆಸಿ ತಮ್ಮ ಮಗಳಿಗಿಂತ ಹೆಚ್ಚಿನ ಪ್ರೀತಿ ತೋರಿಸಿ ತಂದು ಮನೆಯಲ್ಲಿ ಬಿಟ್ಟಿದ್ದರು.

ನಿಮಗೆ ಗೊತ್ತು: ನಾನು ಪದೇಪದೆ ಖಾಯಿಲೆ ಬಿದ್ದು ‘ಫೀ’ ಅಂತ ಅಳುತ್ತಾ ಮಲಗುವ ಜಾಯಮಾನದವನಲ್ಲ. ಆದರೆ ಸುಮಾರು ಹದಿನಾರು ವರ್ಷದ ನನ್ನ ಅಶಿಸ್ತಿನ ಜೀವನದಲ್ಲಿ ಯಾವ ಖಾಯಿಲೆಯೂ ಅತಿರೇಕಕ್ಕೆ ಹೋಗದಂತೆ ನೋಡಿಕೊಂಡವರು ಡಾ.ಸುಬ್ಬಣ್ಣ. ಅವರನ್ನು ನಾವೆಲ್ಲ ಡಾ.ಸುಬ್ಬಣ್ಣ ಅಂತಲೇ ಕರೆಯುತ್ತಿದ್ದೆವು. ಅವರು ಹೆಚ್ಚಾಗಿ ಕುಡಿಯುತ್ತಿರಲಿಲ್ಲ. ಆದರೆ ಸ್ವಲ್ಪ ಕುಡಿದರೂ ಕುದುರೆ ಏರಿ ಬಿಡುತ್ತಿದ್ದರು. ಕೆಲವೊಮ್ಮೆ ಅವರ ಅತಿರೇಕಗಳನ್ನು ಕಂಡಾಗ ಎದುರಾ ಎದುರು ಬಯ್ಯುತ್ತಿದ್ದೆ. “ನೀವಿನ್ನು ಇಲ್ಲಿಗೆ ಬರಬೇಡಿ" ಅನ್ನುತ್ತಿದ್ದೆ. ಜಗಳ ಮಾಡುತ್ತಿದ್ದೆ. ಬೆಳಿಗ್ಗೆ ಎದ್ದು “ಸಾರ್..." ಅಂತ ಅವರದೊಂದು ಫೋನು. “ಎಲ್ಲಿ ಡಾಕ್ಟ್ರೇ ಸಿಗಲೇ ಇಲ್ಲಾ?" ಅಂತ ನನ್ನ ತುಂಟ ನಗೆ. ನಮ್ಮಿಬ್ಬರ ಗೋಷ್ಠಿ-ದೋಸ್ತಿಗಳ ಮಜಾ ಇರುತ್ತಿದ್ದುದೇ ಹಾಗೆ: ಗಂಡಸರಿಗೇ ಹೊಟ್ಟೆಕಿಚ್ಚು ಮೂಡುವ ಹಾಗೆ. ಹಾಡುತ್ತಾ, ಮಾತನಾಡುತ್ತಾ, ನಗುತ್ತಾ, ಯಾವುದೋ ಪುಸ್ತಕದ ಒಂದು ಸಾಲು ಹಿಡಿದು ಅದನ್ನು ಮಂಥಿಸುತ್ತಾ, ಫಕ್ಕನೆ ಕಣ್ಣೀರಾಗುತ್ತಾ, ಹಿಂದಿಯಿಂದ ತೆಲುಗು ಸಿನೆಮಾ ಹಾಡುಗಳಿಗೆ ಹೊರಳುತ್ತಾ... ಒಂದಾ ಎರಡಾ? ಅದು ಭ್ರಾಮಕ, ಭಾವುಕ ಕ್ಷಣಗಳು.

ನಿಮ್ಮಲ್ಲಿ ಮುಚ್ಚಿಡುವುದೇನಿದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ನಾನು ಗ್ಲಾಸು ಕೈಗೆತ್ತಿಕೊಂಡು ಬಿಟ್ಟಿದ್ದೆ. ‘ತಡದ ಮಳಿ ಜಡಿದು ಬರ‍್ತದೆ’ ಅಂತಾರೆ ನಮ್ಮ ಕಡೆ. ಅನೇಕ ವರ್ಷ ಅದುಮಿಟ್ಟ ಆಲ್ಕೋಹಾಲ್ ದರಿದ್ರ ಹಾಲಾಹಲದಂತೆ ಉಕ್ಕಿ ನನ್ನನ್ನು ಈ ಲೋಕಕ್ಕೆ ಸಂಬಂಧವೇ ಇಲ್ಲದವನು ಎಂಬಂತೆ ಆಗಿ ಹೋದೆ. ಎಲ್ಲಕ್ಕಿಂತ ಭಯಾನಕ ಹೊಡೆತವೆಂದರೆ ನನ್ನ ಮಾವ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಸಾವು. ಅವತ್ತು ನಿಜಕ್ಕೂ ತಬ್ಬಲಿಯಾಗಿ ಬಿಟ್ಟೆ ಅನ್ನಿಸಿತು. “ನೋಡು ಮುದುಕ ಹ್ಯಾಗೆ ಸತ್ತ? ಕೊಳ್ಳಿ ಇಡೋ ವಾರಸುದಾರರು ಯಾರಿದ್ದಾರೆ?" ಅಂತ ಯಾರೋ ಕುಹಕವಾಡಿದರು. ತಕ್ಷಣ ಬೆಳಗೆರೆಯ ಒಬ್ಬ ನಾಪಿತನನ್ನು ಕರೆಸಿ ತಲೆ ಬೋಳಿಸಿಕೊಂಡೆ. ಮನಸಿನಲ್ಲಿ ಖಲ್‌ಬಲಿ. ಹೋಗಿ ಚಿತೆಗೆ ಬೆಂಕಿ ಕೊಟ್ಟೆ. ಆಮೇಲೆ ಏನನ್ನಿಸಿತೋ? ಹೆಂಡತಿ ಮಕ್ಕಳಿಗೆ ಬೇರೆ ಕಾರಿನಲ್ಲಿ ಬರಲು ಹೇಳಿ ನನ್ನ ಕಾರಿನಲ್ಲಿ ಒಬ್ಬನೇ ಬಂದೆ. ದರಿದ್ರ ದ್ರವ ಕುಡಿಯುತ್ತಲೇ ಬಂದೆ. ಬಂದವನೇ ಮಲಗಲು ಯತ್ನಿಸಿದೆ. “ಸುಬ್ಬಣ್ಣನ್ನ ಕರೆಸಿ" ಅಂದೆ. ಅವರು ನನ್ನ ಪರಿಸ್ಥಿತಿ ಕಂಡು ಕಳವಳಗೊಂಡು ತಕ್ಷಣ ಬೆಂಗಳೂರ್ ಹಾಸ್ಪಿಟಲ್‌ಗೆ ಸೇರಿಸಿದರು. ಮೂಗಿಗೆ ಟ್ಯೂಬು, ಕೈಗೆಲ್ಲ ಸೂಜಿ, ಗ್ಲೂಕೋಸು, ಮೂತ್ರಕ್ಕೊಂದು ಟ್ಯೂಬು. ಥತ್, ದರಿದ್ರ ಸ್ಥಿತಿ. ರಾತ್ರೋರಾತ್ರಿ ಎದ್ದು ಸೆಕ್ಯೂರಿಟಿ ಗಾರ್ಡ್‌ಗೆ ಟಪಕಾಯಿಸಿ ಬೆಂಗಳೂರ್ ಹಾಸ್ಪಿಟಲ್‌ನಿಂದ ಓಡಿ ಬಿಟ್ಟೆ. ಯಾರ ಕೈಗೂ ಸಿಗದಂಥ ಜಾಗದಲ್ಲಿ ಬಂದು ಮಲಗಿಬಿಟ್ಟೆ. ಆದರೆ ಬೆಳಿಗ್ಗೆ ನನ್ನನ್ನು ಮೊದಲು ಪತ್ತೆ ಮಾಡಿದ್ದೇ ಡಾ.ವೆಂಕಟ ಸುಬ್ಬರಾವ್ ಮತ್ತು ಕರ್ಣ. ಹಿಂದಿನ ರಾತ್ರಿ ವಾರ್ಡಿನ ಮುಂದೆ ಬೆಂಚೊಂದರ ಮೇಲೆ ಶೀಲಕ್ಕ ಮತ್ತು ನಿವೇದಿತಾ ಕುಳಿತಿದ್ದರಂತೆ. “ಶೀಲಾ, ನೀನು ಕೂತಿರೋ ಬೆಂಚ್‌ನ ಮಡಚಿಡು, ದಾರಿಗೆ ಅಡ್ಡವಾಗುತ್ತೆ" ಅಂದೆನಂತೆ.

“o.k sir, ನೀವು pre-coma stageನಲ್ಲಿದೀರಿ, let's go" ಅಂದವರೇ ಡಾ.ರಾವ್ ಮತ್ತು ಕರ್ಣ ನನ್ನನ್ನು ಅಕ್ಷರಶಃ bundle ಮಾಡಿ ಅಭಯ ಆಸ್ಪತ್ರೆಗೆ ಕರೆದೊಯ್ದರೆ “ಈ ಸ್ಥಿತಿಯಲ್ಲಿ ಇವರನ್ನು ಇಟ್ಟುಕೊಳ್ಳಲು ಆಗೋದಿಲ್ಲ. ತುಂಬ ಹೆಸರಿರೋ ವ್ಯಕ್ತಿ. ಏನಾದರೂ ಹೆಚ್ಚು ಕಡಿಮೆಯಾದರೆ ನಾಳೆ ನಮಗೇ ಕಷ್ಟ. ಇಟ್ಟುಕೊಳ್ಳಲೇ ಬೇಕು ಅಂದ್ರೆ ಅವರ ದೇಹಸ್ಥಿತಿಯನ್ನು ಚೆನ್ನಾಗಿ, ಮೊದಲಿಂದಲೂ ಬಲ್ಲ ಒಬ್ಬ ವೈದ್ಯರು ಜೊತೆಗಿರಬೇಕು" ಅಂತ ಅಭಯ ಆಸ್ಪತ್ರೆಯವರು ಅಂದಾಗ ಅಕ್ಷರಶಃ ಡಾ.ವೆಂಕಟ ಸುಬ್ಬರಾಯರು ನನ್ನ ಪಕ್ಕದ ಕೋಣೆಯಲ್ಲೇ ತಾವೂ ‘admit’ ಆಗಿಬಿಟ್ಟರು. ಒಂದು ಕ್ಷಣ ಬಿಟ್ಟು ಕದಲಲಿಲ್ಲ. ತಾಯಿಯಂತೆ ಕಾಯ್ದರು. ‘ಅಭಯ’ದಲ್ಲೂ ಪರಿಸ್ಥಿತಿ ಹಾಗೇ ಮುಂದುವರೆದಾಗ ಡಾಕ್ಟರುಗಳು ಕೈ ಚೆಲ್ಲಿದರು. ಉಳಿದಿರುವ ಒಂದೇ ಆಸ್ಪತ್ರೆ ಅಂದರೆ BGS. ಅದು ಬಾಲಗಂಗಾಧರ ಸ್ವಾಮಿಗಳದು. ಅಲ್ಲಿ ಒಂದಷ್ಟು ಜನ ವೈದ್ಯರ team ಇದೆ. ಅದರ ಹೆಸರೇ ಲಿವರ್ ಟೀಮ್. ಡಾ.ಕೈಸರ್, ಡಾ.ಸೊನಾಲ್, ಡಾ.ಮ್ಯಾಥ್ಯೂ ಅದರ ಪ್ರಮುಖರು. “Only they can save Ravi Belagere" ಅಂದರು.

‘ಅಭಯ’ದಿಂದ BGSಗೆ ಸಾಗಿಸಿದ್ದೇ ಒಂದು ರಂಪಾಟ. ಆ ಹೊತ್ತಿಗೆ ನಾನು ಅರ್ಧtubeಗಳನ್ನೂ, ಸೂಜಿಗಳನ್ನೂ ಕಿತ್ತು ಬಿಸಾಡಿದ್ದೆ. “ಸುಬ್ಬಣ್ಣಾ, ಉಳಿದದ್ದನ್ನೂ ತೆಗಿ. ಬಳ್ಳಾರಿಯಿಂದ ಬೆಂಗಳೂರಿಗೆ ಈ ಸ್ಥಿತೀಲಿ ಕರ‍್ಕೊಂಡು ಬರ‍್ತಿದೀರೇನು?" ಓತಪ್ರೋತ ಬಯ್ಯತೊಡಗಿದೆ. ಅಲ್ಲಿ BGS ನಲ್ಲಿ ಮತ್ತೆ ತಪ್ಪಿಸಿಕೊಳ್ಳುವ ಹುನ್ನಾರ. ಇನ್ನೇನು comeಗೆ ಹೋಗುವ ಮುನ್ನಿನ ಆ pre-coma ಸ್ಥಿತಿ ಹೇಗಿತ್ತು ಅಂದರೆ, ಭಯಂಕರ ನಟನೆ, ನೆಪ, ಸುಳ್ಳು, ದಾದಾಗಿರಿ-yes, ಎಲ್ಲ ಮಾಡಿದೆ. BGSನ ಸೆಕ್ಯೂರಿಟಿಯವರು ನನ್ನನ್ನು ಹಿಡಿದಿಡಲು ಹೆಣಗಾಡಿಬಿಟ್ಟರು. ಆದರೆ ಡಾ.ಸೊನಾಲ್‌ರೊಂದಿಗೆ ಬಂದ ಸುಬ್ಬಣ್ಣ “ಮಿಸ್ಟರ್ ರವೀ, ಪ್ಲೀಸ್ ಒಳಗೆ ಬನ್ನಿ" ಅಂದ ಕೂಡಲೆ ಆಜ್ಞಾನುಕಾರಿಯಂತೆ ನಡೆದು ಹೋಗಿ ಮಂಚದ ಮೇಲೆ ಅಂಗಾತ ಮಲಗಿಬಿಟ್ಟೆ. Finish. ಅದು ಕೋಮಾ. ಆಮೇಲೆ ಏನಾಯಿತು? ನನಗೆ ನೆನಪಿಲ್ಲ. ಕೆಲವು ತಿಂಗಳುಗಳ ಅವಧಿಯಲ್ಲಿ ಏನು ನಡೆಯಿತು? ಅದು ನನಗೆ ನೆನಪಿಲ್ಲ.
ಆಗ ನನ್ನ ಸುತ್ತ ಒಂದು ಕಬ್ಬಿಣದ ಕರ್ಟನ್ ಹಾಕಿ ಹೊರ ಜಗತ್ತಿಗೆ ಏನೂ ಗೊತ್ತಾಗದಂತೆ ಕಾಯ್ದದ್ದು ನನ್ನ ಮನೆಯವರು ಹಾಗೂ ಡಾ.ವೆಂಕಟ ಸುಬ್ಬರಾವ್. ಈ ಮಧ್ಯೆ ಅವರ ಬದುಕಿನಲ್ಲೂ ಮಹತ್ತರ ಬದಲಾವಣೆಗಳಾಗಿದ್ದವು. ಮಗಳು ನಾಗಶ್ರೀ ಶಾಲೆಯಲ್ಲಿ topper ಅನ್ನಿಸಿಕೊಂಡು ಹೊರಬಿದ್ದಿದ್ದಳು. ಡಾ.ರಾವ್ ಅವರಿಗೆ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪಾಲುದಾರಿಕೆ ಸಿಕ್ಕಿತ್ತು. ದೊಡ್ಡ ಹುದ್ದೆ. ಆದರೆ ಈ creative ಜನಕ್ಕೆ ದಿನಕ್ಕೊಂದು ಹುಳು ಕಡಿಯುತ್ತದಲ್ಲ? ಅದಕ್ಕೇನು ಮಾಡಬೇಕು?

“ಸರ್, ಹದಿನೈದು ವರ್ಷದ ಹಿಂದೆ ಸೈಕಿಯಾಟ್ರಿಯಲ್ಲಿ ಒಂದು ಎಂ.ಎಸ್. ಥರದ್ದನ್ನು ಮಾಡಿ ಅಂದಿರಲ್ಲ? yes. ನಿನ್ನೆ ಕೆನಡಾಕ್ಕೆ ವೀಸಾ ಬಂತು. ಒಬ್ಬನೇ ಅಲ್ಲ,entire familyಗೆ ವೀಸಾ ಬಂದಿದೆ. ಅಲ್ಲಿ ಹೋಗಿ ಕೆಲಸ ಹುಡುಕಿಕೊಳ್ಳಬೇಕು. ಜೊತೆಗೆ ಓದಬೇಕು. ನನ್ನ ಮನೆಯಾಕೆಗೂ ಕೆಲಸ ಸಿಗಬಹುದು. ಮಕ್ಕಳನ್ನು ಅಲ್ಲೇ ಕಾಲೇಜಿಗೆ-ಶಾಲೆಗೆ ಸೇರಿಸ್ತೇನೆ" ಅಂದರು.
“Fool you are" ಎಂದೇ ಬೈದೆ. ಹೋಗೋದಾದರೆ ಒಬ್ಬರೇ ಹೋಗಿ. ಮೊದಲು ಕೊಂಚ settle ಆಗಿ ಆಮೇಲೆ ಹೆಂಡತಿ ಮಕ್ಕಳನ್ನು ಕರೆಸಿಕೊಳ್ಳಿ" ಅಂದೆ. ಅವರಿಗಾಗಲೇ ನಲವತ್ತೈದು ದಾಟಿದೆ. ಇಲ್ಲಿ ಎಲ್ಲ ಸರಿ ಇರುವಾಗ ಇವರಿಗೆ ಇದೇನು ಹುಳ ಕಡಿಯಿತು ಎಂಬ ವಾದ ನನ್ನದು. ಆದರೆ ಡಾ.ರಾವ್ ನಿರ್ಧರಿಸಿದ್ದರು. ಕೆನಡಾಕ್ಕೆ ಹೋಗಲೇ ಬೇಕು! ಸರಿ, ಹೊರಟರು.
“ಚಿಠ್ಠೀ ನ ಕೊಯೀ ಸಂದೇಸ್
ಜಾನೇ ಓ ಕೌನ್ ಸಾ ದೇಸ್
ಜಹಾಂ ತುಮ್ ಚಲೇ ಗಯೇ..."
ಎಂಬಂತೆ ಹೋದಾಗಿನಿಂದ ಒಂದು ಫೋನ್, ಒಂದು mail, ಒಂದು SMS ಉಹುಂ, ಯಾವುದೂ ಇಲ್ಲ. ಆದರೆ ಕೆನಡಾದಲ್ಲಿ ಕ್ರಮೇಣ ನೆಲೆಗೊಳ್ಳುತ್ತಿದ್ದಾರೆ ಎಂಬ ಅಸ್ಪಷ್ಟ ಮಾಹಿತಿ ಸಿಗುತ್ತಿದೆ. ಅವರಿಗೆ ಒಳ್ಳೆಯದಾಗಲಿ. ನನ್ನ ಪ್ರಾಣ ಕಾಯ್ದವರು ಆತ. ನಿಮಗೆ ನಿರಂತರವಾಗಿ ‘ಜನರಲ್ ಚೆಕ್ ಅಪ್’ ಮಾಡಿದವರು. ಅವರು ಮತ್ತೆ ಬರೆಯಲಿ ಎಂಬುದು ನನ್ನ ಆಸೆ.
ನಿಮ್ಮದೂ ಅದೇ ಆಗಿರಲಿ. ಸುಬ್ಬಣ್ಣನಿಗೆ ಸುಖ, ನೆಮ್ಮದಿ ಹಾರೈಸುತ್ತೇನೆ: My dear doctor... with love.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books