Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಾಂಗ್ರೆಸ್ -ಬಿಜೆಪಿ ಬದಲಿಗೆ ತೃತೀಯ ರಂಗವೇ ಉತ್ತಮವಲ್ಲವೇ?

ತೃತೀಯ ರಂಗ ಮತ್ತೆ ತಲೆ ಎತ್ತಿ ನಿಂತಿದೆ. ಬಹಳ ಜನ ಈ ತೃತೀಯ ರಂಗದ ಅಸ್ತಿತ್ವದ ಬಗ್ಗೆ ಉದಾಸೀನವಾಗಿ ಮಾತನಾಡುತ್ತಿರುವುದು ಹೊಸ ಸಂಗತಿಯೇನಲ್ಲ. ಆದರೆ ಮೊನ್ನೆ ದೆಹಲಿಯಲ್ಲಿ ನಡೆದ ಹನ್ನೊಂದು ಪಕ್ಷಗಳ ಸಭೆ ತೃತೀಯ ರಂಗ ತಲೆ ಎತ್ತಿ ನಿಂತಿರುವುದನ್ನು ಖಚಿತಪಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಧರ್ಮ ರಾಜಕಾರಣ ಎಂಬುದು ಗೊತ್ತಿದ್ದರೆ ತೃತೀಯ ರಂಗ ಎಂಬುದು ಮೇಲೇಳುವ ಸಾಧ್ಯತೆ ಕಡಿಮೆಯಿತ್ತು. ಆದರೆ ಈಗಿನ ಕಾಂಗ್ರೆಸ್‌ಗೆ ಮತ್ತು ಬಿಜೆಪಿಗೆ ಧರ್ಮ ರಾಜಕಾರಣ ಎಂಬುದು ಅಪರಿಚಿತ ಶಬ್ದವಾಗಿರುವ ಕಾರಣದಿಂದಾಗಿ ತೃತೀಯ ರಂಗ ಮತ್ತೊಮ್ಮೆ ತಲೆ ಎತ್ತಿ ನಿಂತಿದೆ. ತೃತೀಯ ರಂಗ ಎಂಬುದು ದೇಶದ ರಾಜಕಾರಣಕ್ಕೆ ಕೊಡುವುದಕ್ಕಿಂತ ತನ್ನಲ್ಲೇ ಕಚ್ಚಾಡುವುದು ಜಾಸ್ತಿ ಎಂಬುದು ಗೊತ್ತಿರುವ ವಿಷಯವೇ.

ಆದರೆ ಇಂತಹ ಕಚ್ಚಾಟಕ್ಕೂ ಕಾರಣವಿದೆ. ತೃತೀಯ ರಂಗ ಅಂತ ನಾವೇನು ಹೇಳುತ್ತೇವೆ, ಈ ರಂಗದಲ್ಲಿರುವ ಬಹುತೇಕ ರಾಜ್ಯಗಳ ನಾಯಕರು ಮುಚ್ಚು ಮರೆಯಿಲ್ಲದೇ ನಡೆದುಕೊಂಡವರು. ಎಲ್ಲಿ ಮುಚ್ಚು ಮರೆ ಇರುವುದಿಲ್ಲವೋ ಅಲ್ಲಿ ಕಚ್ಚಾಟ ಸಹಜ. ಆದರೆ ಕಾಂಗ್ರೆಸ್‌ನಲ್ಲಿ ಮುಚ್ಚಾಟ ಜಾಸ್ತಿ. ಮುಖ ಚಿಟ್ಟು ಹೊಡೆಸುವಷ್ಟು ಮುಚ್ಚಾಟ ಎಂದರೂ ತಪ್ಪೇನಿಲ್ಲ. ಅಷ್ಟು ಮುಚ್ಚಾಟ ಇಲ್ಲದಿದ್ದರೆ ಮನಮೋಹನ್ ಸಿಂಗ್ ಅವರಂತಹ ಖ್ಯಾತ ಅರ್ಥಶಾಸ್ತ್ರಜ್ಞ ಥೇಟ್ ಪೆದ್ರು ಥರ ಕೂತುಕೊಳ್ಳುವ, ಕೈಲಾಗದ ಹೇಡಿ ಅನ್ನಿಸಿಕೊಂಡರೂ ಸುಮ್ಮನೆ ಕೂರುವ ಕೆಲಸ ಯಾಕೆ ಮಾಡಬೇಕಿತ್ತು? ಕಾರಣ ಸ್ಪಷ್ಟ. ಅಲ್ಲಿ ಮುಚ್ಚಾಟ ಜಾಸ್ತಿ. ಬಿಜೆಪಿಗೆ ಬಂದರೂ ಕತೆ ಅಷ್ಟೇ. ಆದರೆ ತೃತೀಯ ರಂಗದಲ್ಲಿ ಮುಚ್ಚಾಟ ಕಡಿಮೆ. ಏನೇ ಇದ್ದರೂ ಖುಲ್ಲಂ ಖುಲ್ಲಾ, ಮುಖಕ್ಕೇ ಹೇಳುವಷ್ಟು ಸ್ವಾತಂತ್ರ್ಯ. ಮೊಟ್ಟ ಮೊದಲು ಅಧಿಕಾರಕ್ಕೆ ಬಂದ ಜನತಾ ಪಕ್ಷದಿಂದ ಹಿಡಿದು ೧೯೯೬ರಲ್ಲಿ ಅಧಿಕಾರಕ್ಕೆ ಬಂದ ದೇವೆಗೌಡ ನೇತೃತ್ವದ ತೃತೀಯ ರಂಗ ಸರ್ಕಾರದ ತನಕ ಯಾವ ಘಟನೆಯನ್ನೇ ನೋಡಿ. ಅಲ್ಲಿ ಕಾಣುವುದು ಕಾಂಗ್ರೆಸ್‌ನ ಕುತ್ಸಿತ ಬುದ್ಧಿ.

ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ವಿರುದ್ಧ ದೇಶದ ಜನ ಮುಗಿಬಿದ್ದಾಗ ಅದನ್ನು ಎನ್‌ಕ್ಯಾಷ್ ಮಾಡಿಕೊಂಡಿದ್ದು ಜಯಪ್ರಕಾಶ್ ನಾರಾಯಣ್‌ರ ಸರ್ವೋದಯ ಚಳವಳಿ. ರಾಜಕೀಯವಾಗಿ ಅದನ್ನು ಎನ್‌ಕ್ಯಾಷ್ ಮಾಡಿಕೊಂಡಿದ್ದು ಜನತಾ ಪಕ್ಷ. ಇಂತಹ ಜನತಾಪಕ್ಷವನ್ನು ಒಡೆದಿದ್ದು ಇಂದಿರಾಗಾಂಧಿ. ಆಗ ಪ್ರಧಾನಿಯಾದವರು ಚೌಧರಿ ಚರಣ್‌ಸಿಂಗ್. ಅವರು ಪ್ರಧಾನಿಯಾಗಿದ್ದಷ್ಟೇ ಲೆಕ್ಕ. ಜನತಾಪರಿವಾರ ಒಡೆದು ಛಿದ್ರವಾಯಿತು. ಚರಣ್‌ಸಿಂಗ್ ಕೂಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಇದಾದ ನಂತರ ಜನತಾ ಪರಿವಾರ ತೃತೀಯ ರಂಗದ ರೂಪದಲ್ಲಿ ಎದ್ದು ಕಂಡಿದ್ದು ೧೯೮೯ರಲ್ಲಿ. ಆಗ ಕಾಂಗ್ರೆಸ್‌ನಿಂದ ಹೊರಬಂದ ಮಿಸ್ಟರ್ ಕ್ಲೀನ್ ಖ್ಯಾತಿಯ ವಿ.ಪಿ.ಸಿಂಗ್ ಪ್ರಧಾನಿ. ಆದರೆ ಬಿಜೆಪಿ ಜತೆಗಿನ ಕಿತ್ತಾಟದಿಂದ ಅದು ಮೇಲಕ್ಕೇಳಲಿಲ್ಲ. ಆನಂತರ ನೆಪ ಮಾತ್ರಕ್ಕೆ ಚಂದ್ರಶೇಖರ್ ಪ್ರಧಾನಿಯಾದರು.

ಇದಾದ ಐದು ವರ್ಷಗಳ ನಂತರ ದೇವೆಗೌಡರ ನೇತೃತ್ವದಲ್ಲೇ ತೃತೀಯ ರಂಗ ಮೇಲೆದ್ದು ನಿಂತಿತು. ಆಗೆಲ್ಲ ಬಹಳ ಕುತೂಹಲದಿಂದ ತೃತೀಯ ರಂಗಕ್ಕೆ ಬೆಂಬಲ ಕೊಟ್ಟ ಕಾಂಗ್ರೆಸ್ ಸ್ವಲ್ಪ ದಿನದಲ್ಲೇ ಕ್ಯಾತೆ ತೆಗೆಯಿತು. ಈ ದೇವೆಗೌಡ ಕಾಂಗ್ರೆಸ್ ಪಕ್ಷವನ್ನೇ ಒಡೆದು ಹಾಕಲು ಸಂಚು ಹೂಡಿದ್ದಾರೆ ಎಂಬುದರಿಂದ ಹಿಡಿದು ಹಲವು ಆಪಾದನೆಗಳನ್ನು ಮಾಡಲಾಯಿತು. ಪರಿಣಾಮವಾಗಿ ಹತ್ತು ತಿಂಗಳ ಕಾಲ ಒಳ್ಳೆಯ ಆಡಳಿತ ಕೊಟ್ಟರೂ ದೇವೆಗೌಡ ಆ ಜಾಗದಲ್ಲಿ ಬಹಳ ದಿನ ಕೂರಲಾಗಲಿಲ್ಲ. ಪ್ರಧಾನಿ ಪಟ್ಟದಿಂದಲೇ ಕೆಳಗಿಳಿಯಬೇಕಾಯಿತು. ಅವರನ್ನು ಕೆಳಗಿಳಿಸುವ ತನಕ ಸೀತಾರಾಂ ಕೇಸರಿ ಎಂಬ ಕಾಂಗ್ರೆಸ್ ಅಧ್ಯಕ್ಷ ತನ್ನ ಪಟ್ಟು ಬಿಡಲಿಲ್ಲ. ಇದಾದ ನಂತರ ಪ್ರಧಾನಿ ಪಟ್ಟಕ್ಕೇರಿದ ಇಂದ್ರಕುಮಾರ್ ಗುಜ್ರಾಲ್ ಕೂಡ ಬಹಳ ದಿನಗಳ ಕಾಲ ನೆಮ್ಮದಿಯಿಂದ ಕೂರಲು ಸಾಧ್ಯವಾಗಲಿಲ್ಲ. ಯಥಾಪ್ರಕಾರ ಕಾಂಗ್ರೆಸ್ ಒಂದು ಕಾರಣವನ್ನು ಹಿಡಿದುಕೊಂಡು ಕುಳಿತಿತ್ತು. ಇಂದ್ರಕುಮಾರ್ ಗುಜ್ರಾಲ್ ಅವರ ಸಂಪುಟದಲ್ಲಿ ಡಿಎಂಕೆ ಸದಸ್ಯರಿದ್ದಾರೆ. ಹೇಳಿ ಕೇಳಿ ಡಿಎಂಕೆ ಎಂದರೆ ಎಲ್‌ಟಿಟಿಇ ಸಂಘಟನೆಯ ಪರವಾದ ಪಕ್ಷವಲ್ಲವೇ? ಅಂತಹ ಪಕ್ಷದ ಸದಸ್ಯರನ್ನು ಹೇಗೆ ಜತೆಗಿಟ್ಟುಕೊಳ್ಳುತ್ತೀರಿ ಅಂತ ರೊಳ್ಳೆ ತೆಗೆಯಿತು.

ಇಂದ್ರಕುಮಾರ್ ಗುಜ್ರಾಲ್ ಅವರಾದರೂ ಹೇಗೆ ತಾನೇ ಇದನ್ನು ಒಪ್ಪಿಕೊಳ್ಳಲು ಸಾಧ್ಯ? ಮೊದಲನೆಯದಾಗಿ ಇದನ್ನೆಲ್ಲ ಸರ್ಕಾರ ರಚಿಸುವ ಮುನ್ನವೇ ಚಿಂತಿಸಬೇಕು. ಅಂತಹದ್ದರಲ್ಲಿ ಕಾಂಗ್ರೆಸ್ ಏಕಾಏಕಿಯಾಗಿ ರೊಳ್ಳೆ ತೆಗೆದರೆ ಅದನ್ನು ಒಪ್ಪುವುದು ಹೇಗೆ? ಆದರೆ ಕಾಂಗ್ರೆಸ್ ಇದನ್ನು ಒಪ್ಪಲಿಲ್ಲ. ನಮ್ಮ ಬೆಂಬಲ ಬೇಕೇ? ಹಾಗಿದ್ದರೆ ಮೊದಲ ಡಿಎಂಕೆ ಸದಸ್ಯರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿ ಎಂದು ಪಟ್ಟು ಹಿಡಿಯಿತು. ಆದರೆ ತೃತೀಯ ರಂಗದ ಕಚ್ಚಾಟ ಏನೇ ಇರಬಹುದು. ಆದರೆ ಮೈತ್ರಿ ಧರ್ಮ ಪಾಲಿಸುವಲ್ಲಿ ಅದರ ಗುಣ ದೊಡ್ಡದು. ಅದು ಡಿಎಂಕೆ ಕೈ ಬಿಡಲಿಲ್ಲ. ಒಂದು ಸಲ ಮೈತ್ರಿ ಧರ್ಮ ಮುರಿದರೆ ಪದೇಪದೇ ಮೈತ್ರಿ ಧರ್ಮ ಮುರಿಯಬೇಕಾಗುತ್ತದೆ ಎಂಬುದು ಅದಕ್ಕೆ ಗೊತ್ತಿತ್ತು. ಹೀಗಾಗಿ ಇಂದ್ರಕುಮಾರ್ ಗುಜ್ರಾಜ್ ಅಪ್ಪಿತಪ್ಪಿಯೂ ಡಿಎಂಕೆ ಪಕ್ಷವನ್ನು ಮೈ ಮೇಲೆ ಎಳೆದುಕೊಳ್ಳಲಿಲ್ಲ. ಯಾರನ್ನೂ ಕೈ ಬಿಡಲು ಒಪ್ಪಲಿಲ್ಲ. ಹೀಗಾಗಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಸನ್ನಿವೇಶ ನಿರ್ಮಾಣವಾಯಿತು.


ತೆಗೆದು, ಆರಿಸಿ, ಶೋಧಿಸಿ, ಏನೆಲ್ಲ ಮಾಡಿದರೂ ಎರಡು ವರ್ಷಗಳ ತೃತೀಯ ರಂಗ ಸರ್ಕಾರ ಉತ್ತಮವಾಗಿಯೇ ಇತ್ತು. ದೇವೆಗೌಡರು ಆಳಿದ ಹತ್ತು ತಿಂಗಳ ಕಾಲವೇ ಇರಬಹುದು, ನಂತರ ಬಂದ ಐ.ಕೆ.ಗುಜ್ರಾಲ್ ಅವರೇ ಇರಬಹುದು. ಒಟ್ಟಿಯಲ್ಲಿ ತೃತೀಯ ರಂಗದ ಆಳ್ವಿಕೆ ಉತ್ತಮವಾಗಿಯೇ ಇತ್ತು. ಆದರೆ ಕಾಂಗ್ರೆಸ್‌ನವರ ಬುದ್ಧಿ ತೃತೀಯ ರಂಗ ಸರ್ಕಾರ ಬಹುಕಾಲ ಬದುಕಲು ಬಿಡಲಿಲ್ಲ. ಈ ಬೆಳವಣಿಗೆಯೇ ದೇಶದಲ್ಲಿ ಎನ್‌ಡಿಎ ಆಳ್ವಿಕೆ ನಡೆಯಲು ಪೂರಕವಾದ ವಾತಾವರಣ ನಿರ್ಮಿಸಿತು. ಈಗ ಕಾಂಗ್ರೆಸ್‌ನವರು ಎಚ್ಚೆತ್ತುಕೊಂಡರೂ ಅದು ಪ್ರಾಮಾಣಿಕ ನಡವಳಿಕೆಯಲ್ಲ. ಒಂದು ವೇಳೆ ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟ ಬಂದು ಕೂತರೆ ತಾವೇನು ಮಾಡಲು ಸಾಧ್ಯ? ಇಂತಹ ಆತಂಕದ ನೆಲೆಯಲ್ಲಿ ಅವರು ತೃತೀಯ ರಂಗದ ಕಡೆ ನೋಡುತ್ತಿದ್ದಾರೆಯೇ ಹೊರತು ತೃತೀಯ ರಂಗ ಅಧಿಕಾರಕ್ಕೆ ಬಂದರೆ ಅದಕ್ಕೆ ಬೆಂಬಲ ನೀಡಬೇಕು, ಐದು ವರ್ಷಗಳ ಕಾಲ ಅದು ಉಳಿಯಲು ಸಹಕಾರ ನೀಡಬೇಕು ಅಂತ ಅವರು ಯೋಚಿಸುತ್ತಿಲ್ಲ.

ಇವತ್ತು ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಇರಬಹುದು, ಬಿಹಾರದ ನಿತೀಶ್‌ಕುಮಾರ್ ಇರಬಹುದು, ಕರ್ನಾಟಕದ ದೇವೆಗೌಡ ಇರಬಹುದು, ಪಶ್ಚಿಮ ಬಂಗಾಳದ ಕಮ್ಯುನಿಸ್ಟರಿರಬಹುದು, ಒಟ್ಟಿನಲ್ಲಿ ಈ ರಂಗ ನೂರೈವತ್ತಕ್ಕಿಂತ ಹೆಚ್ಚಿನ ಸೀಟುಗಳನ್ನು ಗಳಿಸುವ ಲಕ್ಷಣಗಳು ಸ್ಪಷ್ಟವಾಗಿವೆ. ಕಾಂಗ್ರೆಸ್ ಪಾಲಿಗೆ ಇದೇ ಆತಂಕ. ಒಂದು ವೇಳೆ ಗೆಲ್ಲದೇ ಇದ್ದರೆ ಅದೂ ಆತಂಕ. ಯಾಕೆಂದರೆ ತೃತೀಯ ರಂಗವೇನಾದರೂ ನೂರೈವತ್ತಕ್ಕಿಂತ ಹೆಚ್ಚು ಸೀಟು ಗೆಲ್ಲದಿದ್ದರೆ ತಮ್ಮ ಬೆಂಬಲವಿಲ್ಲದೆ ಸರ್ಕಾರ ರಚಿಸುವ ಸ್ಥಿತಿಯಲ್ಲೂ ಇರುವುದಿಲ್ಲ. ಹೀಗಾಗಿ ಇಷ್ಟವಿದ್ದೋ, ಇಲ್ಲದೆಯೋ ತೃತೀಯ ರಂಗದ ಅಸ್ತಿತ್ವವನ್ನು ಅದು ಒಪ್ಪಿಕೊಳ್ಳಲೇಬೇಕಾಗಿ ಬಂದಿದೆ. ಆದರೆ ಕಾಂಗ್ರೆಸ್ ಮಾಡಬೇಕಿರುವುದು ನಯವಂಚನೆಯ ರಾಜಕಾರಣವಲ್ಲ. ತೃತೀಯ ರಂಗ ಎಂಬುದು ಐದು ವರ್ಷಗಳ ಕಾಲ ಆಳ್ವಿಕೆ ನಡೆಸುವುದಕ್ಕೆ ಅದು ಸಹಕಾರ ನೀಡಬೇಕು.

ಒಂದು ವೇಳೆ ಆ ರೀತಿ ಸಹಕಾರ ನೀಡಿದರೆ ರಾಜ್ಯ ಮಟ್ಟಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗುತ್ತದೆ ಎಂದು ಅದು ಯೋಚಿಸಿದರೆ ಪರಿಸ್ಥಿತಿ ಕಷ್ಟಕರವಾಗುತ್ತದೆ. ಮತ್ತೆ ತೃತೀಯ ರಂಗದ ಉದ್ದೇಶ ಸೋಲುತ್ತದೆ. ಯಾವ ಕಾರಣಕ್ಕೂ ತೃತೀಯ ರಂಗದ ಉದ್ದೇಶ ಸೋಲಬಾರದು. ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ಮಾತ್ರ ಅಧಿಕಾರ ನಡೆಸಬೇಕು ಎಂಬ ಧೋರಣೆ ಕಾಂಗ್ರೆಸ್ ತಲೆಯಿಂದ ಹೊರಗೆ ಹೋಗಬೇಕು. ಎಲ್ಲಿಯವರೆಗೆ ಅದು ಹೋಗುವುದಿಲ್ಲವೋ ಅಲ್ಲಿಯವರೆಗೆ ಅದು ಆಟ ಆಡುತ್ತಲೇ ಇರುತ್ತದೆ. ಇವತ್ತು ಬಿಜೆಪಿಯ ಜತೆ ಕೈ ಜೋಡಿಸಿ ಕೆಲ ತಿಂಗಳ ಮಟ್ಟಗೆ ಆಡಳಿತ ನಡೆಸಿದ ಕೀರ್ತಿಯೂ ತೃತೀಯ ರಂಗಕ್ಕಿದೆ. ಆದರೆ ತನ್ನ ರಥ ಯಾತ್ರೆಗೆ ಅಡ್ಡಿ ಮಾಡಿತು ಎಂಬ ನೆಪವೊಡ್ಡಿ ಬಿಜೆಪಿ ತೃತೀಯ ರಂಗ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ವಾಪಸ್ ತೆಗೆದುಕೊಂಡಿತು. ಹೀಗೆ ಒಂದಲ್ಲ, ಒಂದು ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಪಕ್ಷಗಳು ತೃತೀಯ ರಂಗ ಎಂಬುದು ಅಸ್ತಿತ್ವದಲ್ಲಿರಬಾರದು ಎಂಬ ಲೆಕ್ಕಾಚಾರದಲ್ಲಿರುತ್ತವೆ. ತೃತೀಯ ರಂಗ ಈ ಬಾರಿ ಅದಕ್ಕೆ ಅವಕಾಶ ನೀಡಬಾರದು. ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ವಿಷಯದಲ್ಲಿ ಕಾಂಗ್ರೆಸ್ ಕೂಡ ಮುಂದಿದೆ. ಬಿಜೆಪಿ ಕೂಡ ಮುಂದಿದೆ. ಕಾಲ ಕಾಲಕ್ಕೆ ಈ ವಿಷಯದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ದೂರುತ್ತಾರೆ. ಎನ್‌ಡಿಎ ಅಧಿಕಾರದಲ್ಲಿದ್ದರೆ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ದೂರುತ್ತಾರೆ. ಹೀಗೆ ಪರಸ್ಪರ ದೂರುವ ವಿಷಯದಲ್ಲೇ ಉಭಯ ನಾಯಕರೂ ದಿನ ಕಳೆಯುತ್ತಾರೆ.

ಆದರೆ ವಾಸ್ತವದಲ್ಲಿ ಎರಡೂ ಪಕ್ಷಗಳು ಒಂದೇ. ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ವಿಷಯದಲ್ಲಿ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲೀ ಒಂದೇ ನಾಣ್ಯದ ಎರಡು ಮುಖಗಳು. ತೃತೀಯ ರಂಗ ಈ ಬಾರಿ ಅಂತಹ ಎಲ್ಲ ಅಡೆ ತಡೆಗಳನ್ನು ಮೀರಿ ಹೊರಹೊಮ್ಮಬೇಕು. ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುವ ಅನಿವಾರ್ಯತೆ ಬಿಜೆಪಿಗೆ ಇರಬಹುದು, ಕಾಂಗ್ರೆಸ್‌ಗೆ ಇರಬಹುದು, ಆದರೆ ತೃತೀಯ ರಂಗಕ್ಕೆ ಅಂತಹ ಅನಿವಾರ್ಯತೆ ಇಲ್ಲ. ಪ್ರಾದೇಶಿಕ ಅನಿವಾರ್ಯತೆಗಳು ಇರಬಹುದು, ಆದರೆ ಅದನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವ ಶಕ್ತಿ ಅದಕ್ಕೆ ಇದೆ. ಇಂತಹ ಶಕ್ತಿಯನ್ನು ಜತೆಗಿಟ್ಟುಕೊಂಡೇ ತೃತೀಯ ರಂಗ ತನ್ನ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಈ ದೇಶದ ಹಿತ ಕಾಯಲು ತೃತೀಯ ರಂಗದ ಅಸ್ತಿತ್ವ ಬಹುಮುಖ್ಯ ಎಂಬುದನ್ನು ಮರೆಯಬಾರದು. ಒಂದು ಕಾಲದಲ್ಲಿ ಜನತಾ ಪರಿವಾರವಾಗಿ ಮೆರೆದ ತೃತೀಯ ರಂಗ ಈ ಬಾರಿಯೂ ತಲೆ ಎತ್ತಿ ನಿಲ್ಲಲಿ. ಆ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಉತ್ತರ ನೀಡಲಿ. ಪರಸ್ಪರ ಕಚ್ಚಾಟವನ್ನೂ ಬದಿಗಿಟ್ಟುಕೊಂಡು ಮುನ್ನಡೆಯುವ ಶಕ್ತಿ ಅದಕ್ಕೆ ಬರಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books