Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಪರೀಕ್ಷೆ ಅಂದರೆ ಹೂವಿನ ಚೆಂಡೇ?

ಪರೀಕ್ಷೆ ಬಂದಿದೆ. ಮಕ್ಕಳಿಗೆ ಸತ್ವ ಪರೀಕ್ಷೆ, ಹೆತ್ತವರಿಗೆ ಅಗ್ನಿಪರೀಕ್ಷೆ.
ಮಕ್ಕಳ ಮುಖದಲ್ಲಿ ನಗು ಬತ್ತಿ ಹೋಗಿದೆ, ಹೆತ್ತವರ ಮುಖದಲ್ಲಿ ಆತಂಕ ಸುತ್ತಿಕೊಂಡಿದೆ. ಪರೀಕ್ಷೆ ಅನ್ನುವುದು ಮಕ್ಕಳ ಪಾಲಿಗೆ ನರಕ, ಹೆತ್ತವರ ಪಾಲಿಗೆ ಗಲ್ಲುಶಿಕ್ಷೆ. ದಿನಾಂಕ ನಿಗದಿಯಾಗಿದೆ. ಇನ್ನೊಂದು ತಿಂಗಳು ಎಲ್ಲರ ಮನೆಯಲ್ಲಿ ಟೀವಿಗೆ ರಜಾ ಘೋಷಿಸಲಾಗಿದೆ, ಮಕ್ಕಳ ಕಷ್ಟಕ್ಕೋಸ್ಕರ ಹೆತ್ತವರೂ ತ್ಯಾಗ ಮಾಡಲೇಬೇಕು, ಸುಖಕ್ಕೋಸ್ಕರ ತ್ಯಾಗ ಮಾಡುವುದಕ್ಕೆ ಇನ್ನೂ ಕಾಲಾವಕಾಶವಿದೆ. ಹಾಗಾಗಿ ಅವರೂ ಟೀವಿ ನೋಡುವಂತಿಲ್ಲ. ಅಮೃತವರ್ಷಿಣಿಯ ಗಟ್ಟಿಗಿತ್ತಿ ಅತ್ತೆ ತನ್ನನ್ನು ನೋಡುವವರಿಲ್ಲ ಎಂದು ಜೀವನದಲ್ಲಿ ಮೊದಲ ಬಾರಿ ಕಣ್ಣೀರು ಹಾಕುತ್ತಿದ್ದಾಳೆ, ಮಹಾಪರ್ವದ ಜಾಣ ಲಾಯರ್ ಮೊದಲ ಬಾರಿ ಕೇಸು ಸೋಲುವ ಹಾದಿಯಲ್ಲಿದ್ದಾರೆ. ಚಾನೆಲ್ಲುಗಳ ಹೆಡ್ಡುಗಳು ಟೀಆರ್ಪಿ ಬಿದ್ದು ಹೋಗುವುದು ಗ್ಯಾರಂಟಿ ಎಂದು ತಲೆಮೇಲೆ ಕೈ ಹೊತ್ತುಕೊಂಡಿದ್ದಾರೆ. ಸಿನೆಮಾ ಥಿಯೇಟರುಗಳು ಖಾಲಿಖಾಲಿ, ತಮ್ಮ ಸಿನೆಮಾ ಸೋತಿದ್ದಕ್ಕೆ ನಿರ್ಮಾಪಕರಿಗೆ ಒಳ್ಳೆಯ ಕಾರಣ ಸಿಗುತ್ತಿದೆ. ಏಷ್ಯಾ ಕಪ್ ಕ್ರಿಕೆಟ್ ನೋಡುವುದಕ್ಕೆ ಜನರೇ ಇಲ್ಲ. ಪರೀಕ್ಷೆ ಅಂದರೆ ತಮಾಷೆ ಅಲ್ಲ. ಅದು ಪ್ರಳಯದಂತೆ, ಅದರ ಹೊಡೆತಕ್ಕೆ ಜಗತ್ತೇ ಸ್ತಬ್ಧವಾಗುವುದು.

ಈಗ ಎಲ್ಲರ ಮನೆಗಳಲ್ಲಿ ರಾತ್ರಿಗಳು ದೀರ್ಘವಾಗಿರುತ್ತವೆ. ಪುಸ್ತಕ ತೆರೆದಿರಲೇಬೇಕು, ದೀಪ ಉರಿಯುತ್ತಿರಲೇಬೇಕು, ಪರೀಕ್ಷೆ ಟೈಮಲ್ಲಿ ಪವರ್ ಕಟ್ ಮಾಡುವುದಿಲ್ಲ ಅಂತ ಸರ್ಕಾರ ಆಶ್ವಾಸನೆ ನೀಡಿದೆ, ಎಲೆಕ್ಷನ್ ಅನ್ನುವ ಪರೀಕ್ಷೆಯಲ್ಲಿ ಗೆಲ್ಲುವುದಕ್ಕೆ ಇದು ಮುಂಗಡ ಬುಕ್ಕಿಂಗ್. ಕೋಚಿಂಗ್ ಕ್ಲಾಸುಗಳು ಓವರ್ ಟೈಮಲ್ಲಿ ನಡೆಯುತ್ತಿವೆ. ಟ್ಯೂಷನ್ ಹೇಳುವವರಿಗೂ ಇದು ಅಗ್ನಿಪರೀಕ್ಷೆಯೇ. ಅವರ ಕೋಚಿಂಗ್‌ನಲ್ಲಿ ಪಳಗಿದ ಮಕ್ಕಳು ಫಸ್ಟ್ ಕ್ಲಾಸಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ವರ್ಷದ ಬ್ಯುಸಿನೆಸ್ ಚೆನ್ನಾಗಿರುತ್ತದೆ.
ಮಕ್ಕಳ ಅಮ್ಮ ಪಕ್ಕದ ಮನೆಯಾಕೆಯ ಜೊತೆ ತನ್ನ ಕಷ್ಟಗಳನ್ನು ಹಂಚಿಕೊಳ್ಳುತ್ತಾಳೆ. ‘ನನ್ಮಗ ತುಂಬಾ ಜಾಣಾರೀ, ಆದರೆ ಏನು ಮಾಡೋದು, ಸ್ವಲ್ಪಾನೂ ಓದೋಲ್ಲ. ಅವನು ಸ್ವಲ್ಪ ಎಫರ್ಟ್ ಹಾಕಿದ್ರೆ ನೈಂಟಿ ಪರ್ಸೆಂಟು ತಗೋತಾನೆ. ಹಾಗಂತ ಅವನ ಕ್ಲಾಸ್ ಟೀಚರ್ರೇ ಹೇಳಿದ್ರು’.

ಪಕ್ಕದ ಮನೆಯಾಕೆಯೂ ಕೊರಗುತ್ತಾಳೆ. ‘ಪಾಪ, ನನ್ಮಗಳು ಹಗಲು ರಾತ್ರಿ ಕಷ್ಟಪಟ್ಟು ಓದ್ತಾಳೆ. ಏನು ಓದಿದ್ರೂ ತಲೆಗೆ ಹತ್ತೋಲ್ಲ. ಆದರೆ ಯಾವುದಾದರೂ ಹಿಂದಿ ಸಿನೆಮಾ ಹಾಡು ಒಂದ್ಸಾರಿ ಕೇಳಿದ್ರೆ ಸಾಕು, ಫುಲ್ ಬೈ ಹಾರ್ಟ್’. ಈಗಿನ ಕಾಲದ ಮಕ್ಕಳೇ ಹಾಗೆ. ಸ್ವಲ್ಪಾನೂ ಸೀರಿಯಸ್‌ನೆಸ್ಸೇ ಇಲ್ಲ ಎಂಬಲ್ಲಿಗೆ ಈ ಮಾತುಕತೆಗೆ ಉಪಸಂಹಾರ. ಪರೀಕ್ಷೆ ತಂದೊಡ್ಡುವ ಆಪತ್ತುಗಳು ಒಂದೆರಡಲ್ಲ. ಮಕ್ಕಳ ಕೈಗೆ ಕಂಪ್ಯೂಟರ್ ಮತ್ತು ಮೊಬೈಲ್ ಸಿಗದಂತೆ ಎಚ್ಚರಿಕೆ ವಹಿಸಬೇಕು, ಬೆಳ್ಳಂಬೆಳಿಗ್ಗೆ ಅಲಾರ್ಮ್‌ಗಿಂತ ಜೋರಾಗಿ ಹೆತ್ತವರು ಸೌಂಡ್ ಮಾಡಬೇಕು. ಕಣ್ಣುಜ್ಜಿಕೊಂಡು ತೂಕಡಿಸಿಕೊಂಡು ಓದುವ ಮಗಳಿಗೋ ಮಗನಿಗೋ ಮಾತಲ್ಲೇ ಮಂಗಳಾರತಿ ಎತ್ತಬೇಕು. ಮೂರು ಹೊತ್ತೂ ಓದು ಓದು ಓದು ಎಂದು ಕಿವಿ ಹಿಂಡುತ್ತಲೇ ಇರಬೇಕು. ಮನೆಯ ಯಜಮಾನ ಆಫೀಸಿಂದ ಬೇಗನೇ ಮನೆಗೆ ಬರಬೇಕು, ಕ್ಲಬ್ ಅಥವಾ ಬಾರ್ ಕಡೆ ಅಪ್ಪಿತಪ್ಪಿಯೂ ತಲೆಹಾಕಿ ಮಲಗುವ ಹಾಗಿಲ್ಲ. ಪರೀಕ್ಷೆಯೆಂಬ ಪಂದ್ಯದಲ್ಲಿ ಅವನು ಹನ್ನೆರಡನೆಯ ಆಟಗಾರನ ಥರ. ಆಡುವಂತಿಲ್ಲ, ಹಾಗಂತ ನೋಡದೇ ಇರುವಂತೆಯೂ ಇಲ್ಲ.

ಪರೀಕ್ಷೆ ಬಂತು ಅಂದರೆ ಮಕ್ಕಳ ಕುತ್ತಿಗೆಗೆ ಒತ್ತಾಯಪೂರ್ವಕ ವ್ಯಾಯಾಮ. ಒಂದ್ಸಾರಿ ಕತ್ತು ತಗ್ಗಿಸಿ ಪಠ್ಯದಲ್ಲಿರುವ ವಾಕ್ಯಗಳನ್ನು ಉರು ಹೊಡೆಯಬೇಕು, ಮತ್ತೆ ಕತ್ತೆತ್ತಿ ಅದನ್ನೇ ಮನನ ಮಾಡಿಕೊಳ್ಳಬೇಕು. ಅಕ್ಷರಗಳು ಪುಟಗಳಿಂದ ಜಿಗಿದು ಮಸ್ತಕದಲ್ಲಿ ಸ್ಥಾಪನೆಯಾಗಬೇಕು. ಅಷ್ಟಕ್ಕೂ ಪರೀಕ್ಷೆ ಅಂದರೆ ಏನು? ನಿಮ್ಮ ಮಕ್ಕಳ ಸ್ಮರಣಶಕ್ತಿಯನ್ನು ಪರೀಕ್ಷಿಸುವ ಒಂದು ಕಾರ್ಯಕ್ರಮವಾ ಅಥವಾ ನಿಮ್ಮ ಮಕ್ಕಳ ಬುದ್ಧಿಮತ್ತೆ (intelligence quotient) ಅಥವಾ IQ ಅನ್ನು ಪತ್ತೆ ಹಚ್ಚುವ ಮಾಪಕವಾ? ಎರಡೂ ಹೌದು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳು ಒಬ್ಬ ಹುಡುಗ ಬುದ್ಧಿವಂತನಾ ಅಥವಾ ದಡ್ಡನೋ ಅನ್ನುವುದನ್ನು ಪತ್ತೆ ಹಚ್ಚುವ ಪೊಲೀಸಿನಂತೆ ಕೆಲಸ ಮಾಡುತ್ತವೆ. ಸದ್ಯಕ್ಕೆ ಅದನ್ನು ಅರಿಯುವುದಕ್ಕೆ ಇರುವ ಸಾಧನ ಅದೊಂದೇ. ಮಕ್ಕಳ ಆತಂಕದ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ. ನಿಗದಿ ಪಡಿಸಿದ ಸಮಯದಲ್ಲಿ ಅವರೇನು ಗೀಚಿದ್ದಾರೆ ಅನ್ನುವುದರ ಮೇಲೆ ಅವರ ಹಣೆಬರಹ, ಭವಿಷ್ಯ ನಿರ್ಧಾರವಾಗುತ್ತದೆ. ಅಂತಿಮ ಪರೀಕ್ಷೆಗಳಿಗಿಂತ ಮೊದಲು ನಡೆಯುವ ಚಿಕ್ಕಪುಟ್ಟ ಟೆಸ್ಟ್‌ಗಳಲ್ಲಿ ಮಗು ಚೆನ್ನಾಗಿ ಸ್ಕೋರ್ ಮಾಡಿರಬಹುದು, ಆದರೆ ವಿಪರೀತ ಒತ್ತಡಕ್ಕೆ ಸಿಲುಕಿ ಕೊನೆ ಪರೀಕ್ಷೆಯಲ್ಲಿ ಸೋಲಬಹುದು. ಕೊನೆಗೆ ಉಳಿಯುವುದು ಕೊನೆಯ ಫಲಿತಾಂಶವೇ. ಅಲ್ಲಿ ಮಕ್ಕಳು ಗಳಿಸಿದ ಅಂಕಗಳ ಆಧಾರದ ಮೇಲೆ ಪ್ರತಿಷ್ಠಿತ ಕಾಲೇಜುಗಳಿಗೆ ಅರ್ಜಿ ಹಾಕಬಹುದು.
ವಾಸ್ತವದಲ್ಲಿ ನಿಮ್ಮ ಮಗು ನಿಜಕ್ಕೂ ಜಾಣೆಯೇ ಆಗಿರಬಹುದು, ಆತ ಅಥವಾ ಆಕೆಯೊಳಗೆ ಹತ್ತಾರು ಪ್ರತಿಭೆಗಳು ಬಚ್ಚಿಟ್ಟುಕೊಂಡಿರಬಹುದು. ಹಲವಾರು ಆಸಕ್ತಿಗಳು ಮನೆ ಮಾಡಿಕೊಂಡಿರಬಹುದು. ಆದರೆ ಪರೀಕ್ಷೆಯೊಂದೇ ಅವೆಲ್ಲವನ್ನೂ ಅಳೆಯುವ ಮಾಪಕ. ಬೇರೇನೇ ಕಾರಣ ಹೇಳಿದರೂ ಅದಕ್ಕೆ ಬೆಲೆಯಿರೋದಿಲ್ಲ. ಪರೀಕ್ಷೆಯಲ್ಲಿ ಗೆಲ್ಲುವುದು ಒಂದು ಕಲೆ, ನೀವದನ್ನು ಒಲಿಸಿಕೊಳ್ಳಬೇಕು. ಬೇರೆ ದಾರಿಯೇ ಇಲ್ಲ. ವಿಪರೀತ ಆತಂಕ ಮತ್ತು ಕಳಪೆ ಪ್ರಶ್ನೆಗಳು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸೋಲೋದಕ್ಕೆ ಮುಖ್ಯ ಕಾರಣ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಪರೀಕ್ಷೆಯಲ್ಲಿ ಗೆದ್ದ ಮಾತ್ರಕ್ಕೆ ಜೀವನದಲ್ಲೇ ಗೆದ್ದೆ ಅಂತ ಸಂಭ್ರಮಿಸುವ ಹಾಗಿಲ್ಲ. ಯಾಕೆಂದರೆ ಪರೀಕ್ಷೆಯ ಸಲುವಾಗಿ ನೀವು ನಿಮ್ಮೊಳಗೆ ತುಂಬಿಕೊಂಡ ಮಾಹಿತಿಗಳು ಮುಂದೆ ನೆನಪಿನ ಕೋಶದಲ್ಲಿರುವುದಿಲ್ಲ. ಪ್ರಬಂಧ, ಗ್ರೂಪ್ ಚಟುವಟಿಕೆಗಳು ಮತ್ತು ಕ್ಲಾಸಲ್ಲಿ ನಡೆಯುವ ಇತರೇ ಚಟುವಟಿಕೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಹೇಗಿದೆ ಅನ್ನೋದು ಕೂಡಾ ಭವಿಷ್ಯದಲ್ಲಿ ಮುಖ್ಯವಾಗುತ್ತವೆ. ಈಗೀಗ ಕಾಲೇಜುಗಳು ಕೂಡಾ ನೀವು ಗಳಿಸಿರುವ ಅಂಕಗಳನ್ನಷ್ಟೇ ನೋಡಿಕೊಂಡು ಸೀಟು ಕೊಡುವುದಿಲ್ಲ. ಒಟ್ಟಾರೆಯಾಗಿ ನಿಮ್ಮ ಐಕ್ಯೂ ಹೇಗಿದೆ ಅನ್ನೋದನ್ನೂ ನೋಡುತ್ತವೆ.

ನೆನಪಿರಲಿ, ನಿಜ ಬದುಕಲ್ಲಿ ನಾವು ಪರೀಕ್ಷೆಗಳನ್ನು ಬರೆಯುವುದಿಲ್ಲ. ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತೇವೆ. ನಮ್ಮ ಶಾಲೆಗಳು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆಯಾ ಅಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ನಿಮ್ಮ ನೆನಪಿನ ಶಕ್ತಿ ಹೇಗಿದೆ ಅನ್ನೋದನ್ನಷ್ಟೇ ಪರೀಕ್ಷೆಗಳು ಪರೀಕ್ಷೆ ಮಾಡುತ್ತವೆ. ಓದುವುದು, ಬರೆಯುವುದು ಮತ್ತು ಮರೆಯುವುದು. ಮತ್ತೆ ಹೊಸ ಸಬ್ಜೆಕ್ಟನ್ನು ಓದುವುದು, ಬರೆಯುವುದು, ಮರೆಯುವುದು. ನಮ್ಮ ಮಕ್ಕಳು ಮಾಡುತ್ತಿರುವುದು ಅದನ್ನೇ. ಅಷ್ಟಕ್ಕೂ ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ಇಷ್ಟೊಂದು ಮಾಹಿತಿಗಳನ್ನು ಮಿದುಳಿನಲ್ಲಿ ಕಾಪಾಡಿಕೊಳ್ಳುವ ಜರೂರತ್ತು ಇದೆಯಾ? ಸ್ಮಾರ್ಟ್ ಫೋನ್, ಐಪಾಡ್, ಟಾಬ್ಲೆಟ್ಟುಗಳು ಮತ್ತು ಲ್ಯಾಪ್ ಟಾಪುಗಳ ಈ ಕಾಲದಲ್ಲಿ ಬೆರಳ ತುದಿಯಲ್ಲಿ ಮಾಹಿತಿಗಳು ಸಿಗುತ್ತವೆ. ಹಾಗಾಗಿ ಎಲ್ಲವನ್ನೂ ಕಂಠಪಾಠ ಮಾಡುವ ಅಗತ್ಯವೇ ಇರುವುದಿಲ್ಲ. ಹೊಸ ಜಗತ್ತಿಗೆ ನಾವು ಮಕ್ಕಳನ್ನು ತಯಾರು ಮಾಡುವ ವಿಧಾನವೇ ಬದಲಾಗಬೇಕಾಗಿದೆ.

ಈ ನಿಟ್ಟಿನಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ ಮಾತುಗಳು ಇಂದಿಗೂ ಸಲ್ಲುತ್ತವೆ. ಇಲ್ಲಿ ಪ್ರತಿಯೊಬ್ಬರೂ ಜೀನಿಯಸ್ಸುಗಳೇ. ಆದರೆ ಒಂದು ಮೀನಿನ ಸಾಮರ್ಥ್ಯವನ್ನು ಅದಕ್ಕೆ ಮರ ಹತ್ತುವುದಕ್ಕೆ ಬರುತ್ತದೆಯೇ ಅನ್ನುವುದರ ಮೇಲೆ ನಿರ್ಧಾರ ಮಾಡುವುದಾದರೆ ಆ ಮೀನು ಜೀವನ ಪೂರ್ತಿ ತಾನೊಂದು ನಿಷ್ಪ್ರಯೋಜಕ ಪ್ರಾಣಿ ಎಂದು ಕೊರಗುತ್ತಲೇ ಕಾಲ ಕಳೆಯಬೇಕಾಗುತ್ತದೆ. ಅದೇ ರೀತಿ ಒಬ್ಬ ಹುಡುಗ ಅಥವಾ ಹುಡುಗಿ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ಅವರ ಅಸಲಿ ಪ್ರತಿಭೆಯನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿಲ್ಲ. ಒಂದು ಮಗುವಿನ ಬುದ್ಧಿಮತ್ತೆಯನ್ನು ತಿಳಿಯುವುದಕ್ಕೆ ಒಬ್ಬ ಟೀಚರ್ ಅಳವಡಿಸುವ ತತ್ವವನ್ನೇ ಆಕೆ ಎಲ್ಲಾ ಮಕ್ಕಳಿಗೂ ಅನ್ವಯಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ಮಗುವೂ ಭಿನ್ನ ಮತ್ತು ಅದರ ಕಲಿಕೆಯ ರೀತಿಯೂ ಭಿನ್ನ. ಹಾಗಾಗಿ ಎಲ್ಲಾ ಮಕ್ಕಳೂ ತಮ್ಮದೇ ಆದ ರೀತಿಯಲ್ಲಿ ಕಲಿಯುವುದಕ್ಕೆ ಸಾಧ್ಯವಿರುವಾಗ ಪರೀಕ್ಷೆಯೆಂಬ ಒಂದೇ ಹೊಂಡದಲ್ಲಿ ಅವರನ್ನು ಮುಳುಗಿಸಿ ಯಾರು ಮೊದಲು ಮೇಲೆ ಬರುತ್ತಾರೆ ಅಂತ ನೋಡುವುದೇ ತಪ್ಪು.

ಪರೀಕ್ಷೆ ಅನ್ನುವುದು ನಿಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸುತ್ತದೆ, ಬುದ್ಧಿಮತ್ತೆಯನ್ನಲ್ಲ. ನೆನಪಿನ ಶಕ್ತಿ ಆಧಾರದ ಮೇಲೆ ಉತ್ತರಿಸುವ ಈ ಪರೀಕ್ಷಾ ಪದ್ಧತಿ ಮುಂದೆ ನೌಕರಿ ಹುಡುಕುವಾಗ ಯಾವ ರೀತಿಯಲ್ಲೂ ಉಪಯೋಗಕ್ಕೆ ಬರುತ್ತದೆಯಾ? ಶಿಕ್ಷಣ ತಜ್ಞರು ಇಂಥಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಸಮಯ ಬಂದಿದೆ. ಅದೇ ರೀತಿ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡದೇ ಇರುವವರು ತಾವು failure ಎಂದು ಭಾವಿಸಬೇಕಾಗಿಲ್ಲ. ರಿಚರ್ಡ್ ಬ್ರಾನ್‌ಸನ್ ಮತ್ತು ವಿನ್‌ಸ್ಟನ್ ಚರ್ಚಿಲ್ ಪರೀಕ್ಷೆಯಲ್ಲಿ ಯಾವತ್ತೂ ಗೆದ್ದವರಲ್ಲ. ಆದರೆ ಜಗತ್ತನ್ನೇ ಗೆದ್ದರು. ಹಾಗಂತ ನಿಮ್ಮ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವ ಅಗತ್ಯವೇ ಇಲ್ಲ ಅಂದುಕೊಳ್ಳಬೇಡಿ. ಅನಗತ್ಯ ಒತ್ತಡ ಹೇರಬೇಡಿ ಅಷ್ಟೆ. ಗೆದ್ದರೆ ಪಾರಿತೋಷಕ, ಸೋತರೆ ಒಂದು ಸಾಂತ್ವನದ ಮುತ್ತು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books