Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಚುನಾವಣಾ ಲೆಕ್ಕಾಚಾರದ ಮಧ್ಯೆ ಡಲ್ಲು ಹೊಡೆಯಿತು ಅಧಿವೇಶನ!

ರಾಜ್ಯ ವಿಧಾನಮಂಡಲದ ಅಧಿವೇಶನ ಮುಕ್ತಾಯವಾಗುತ್ತಿದೆ. ಈ ಬಾರಿಯ ವಿಧಾನಮಂಡಲ ಅಧಿವೇಶನ ನೀರಸವಾಗಿತ್ತು ಎಂಬುದು ಸ್ಪಷ್ಟ. ಇದಕ್ಕಿರುವ ಕಾರಣವೂ ಸ್ಟಷ್ಟ. ಮುಂಬರುವ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೆಚ್ಚು ಸೀಟು ಗೆಲ್ಲಬೇಕು ಎಂಬ ನಿರೀಕ್ಷೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರರಲ್ಲೂ ಇದೆ. ಕನಿಷ್ಠ ಆರರಿಂದ ಏಳು ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ, ದೆಹಲಿ ಮಟ್ಟದಲ್ಲಿ ತೃತೀಯ ರಂಗ ನಿರ್ಣಾಯಕ ಪಾತ್ರ ವಹಿಸಿದರೆ ತಾವು ಮೇಲೇಳುವುದು ಖಚಿತ ಎಂಬ ಭಾವನೆ ದೇವೆಗೌಡರಲ್ಲಿದೆ. ಇದಕ್ಕಾಗಿ ಅವರು ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡುತ್ತಿದ್ದಾರೆ. ತೃತೀಯ ರಂಗ ದೊಡ್ಡ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆಯಾದರೂ ಕರ್ನಾಟಕದ ಪಡಸಾಲೆಯಲ್ಲಿ ಅದು ಆರರಿಂದ ಏಳು ಸ್ಥಾನಗಳನ್ನು ಗೆಲ್ಲುವಷ್ಟು ಪ್ರಬಲವಾಗಿಲ್ಲ. ಇಷ್ಟೆಲ್ಲದರ ನಡುವೆಯೂ ದೇವೆಗೌಡರಿಗೆ ರಾಷ್ಟ್ರ ರಾಜಕೀಯದಲ್ಲಿ ದೊರಕಬೇಕಾದಷ್ಟು ಪ್ರಾತಿನಿಧ್ಯ ಅವರ ಹಿರಿತನದ ಕಾರಣದಿಂದಲೇ ಸಿಗುತ್ತಿದೆ. ಈ ಹಿರಿತನದ ಕಾರಣದಿಂದ ದೇವೆಗೌಡರು ಕೂಡ ಕಮ್ಯುನಿಸ್ಟರ ಮನಸ್ಸನ್ನು ಗೆಲ್ಲತೊಡಗಿದ್ದಾರೆ. ಮತ್ತು ಯಾವ ಕಮ್ಯುನಿಸ್ಟರು ದೇವೆಗೌಡರನ್ನು ದೂರುತ್ತಿದ್ದರೋ, ಅದೇ ಕಮ್ಯುನಿಸ್ಟರು ದೇವೆಗೌಡರನ್ನು ಓಲೈಸತೊಡಗಿದ್ದಾರೆ.

ಇದು ತೃತೀಯ ರಂಗ ಮೇಲೆದ್ದರೆ ದೇವೆಗೌಡರಿಗೆ ಸಿಗುವ ಪ್ರಾತಿನಿಧ್ಯದ ಪ್ರಮಾಣ ಹೆಚ್ಚಾಗುತ್ತದೆ ಎಂಬುದರ ದ್ಯೋತಕ. ಮುಂದಿನ ದಿನಗಳಲ್ಲಿ ತಮಗೆ ಸಿಗುವ ಪ್ರಾತಿನಿಧ್ಯದ ಕುರಿತು ಕುತೂಹಲಿಯಾಗಿರುವ ದೇವೆಗೌಡರು ಸಹಜವಾಗಿಯೇ ಕರ್ನಾಟಕದ ಪಡಸಾಲೆಯಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ಹರಸಾಹಸ ಮಾಡುತ್ತಿದ್ದಾರೆ. ಯಾಕೆಂದರೆ ಹೆಚ್ಚು ಹೆಚ್ಚು ಸೀಟುಗಳನ್ನು ಗೆದ್ದಷ್ಟು ಅವರಿಗೆ ಗೌರವ ಹೆಚ್ಚಲ್ಲವೇ? ಇದನ್ನು ಗಮನದಲ್ಲಿಟ್ಟುಕೊಂಡು ದೇವೆಗೌಡರು ಲೋಕಸಭಾ ಚುನಾವಣೆಯ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಸರ್ವೇ ರಿಪೋರ್ಟುಗಳು ಜೆಡಿಎಸ್ ಎರಡು ಸ್ಥಾನ ಗೆಲ್ಲಬಹುದು ಎಂದು ಹೇಳಿದ್ದರೂ ಅವರ ಗಮನ ಅತ್ತ ಕಡೆಗಿಲ್ಲ. ಬದಲಿಗೆ, ಆರು ಅಥವಾ ಏಳು ಸ್ಥಾನಗಳನ್ನು ಗೆಲ್ಲುವ ಕಡೆ ಅವರ ಗುರಿ ಇದೆ. ಇದು ದೇವೆಗೌಡರ ಸ್ಥಿತಿ ಆದರೆ ಕಾಂಗ್ರೆಸ್‌ನ ಸ್ಥಿತಿಯೇ ಬೇರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಕೆಜೆಪಿಯ ಕಡೆಗೆ ಓಡಿಸಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಲಾಭ ತಂದುಕೊಟ್ಟಿತ್ತು. ಯಡಿಯೂರಪ್ಪನವರು ಒಂಬತ್ತೂವರೆ ಪರ್ಸೆಂಟು ಮತಗಳನ್ನು ಕಿತ್ತು ಹಾಕುವ ಮೂಲಕ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಯ ಕಡೆ ಸುಳಿಯದಂತೆ ನೋಡಿಕೊಂಡಿದ್ದರು. ಒಂದು ವೇಳೆ ಯಡಿಯೂರಪ್ಪನವರೇನಾದರೂ ಬಿಜೆಪಿ ಜತೆ ಸಖ್ಯ ಉಳಿಸಿಕೊಂಡು ಚುನಾವಣೆಗೆ ಹೋಗಿದ್ದರೆ ಅನುಮಾನವೇ ಬೇಡ. ಬಿಜೆಪಿ ಶೇಕಡಾ ನಲವತ್ತರಷ್ಟು ಮತಗಳನ್ನು ಗಳಿಸುತ್ತಿತ್ತು.

ಈ ನಲವತ್ತರಷ್ಟು ಮತಗಳು ಸಹಜವಾಗಿ ಬಿಜೆಪಿ ಎಂಬತ್ತರಿಂದ ಎಂಬತ್ತೈದು ಸೀಟುಗಳನ್ನು ಗೆಲ್ಲಲು ದಾರಿ ಮಾಡಿಕೊಡುತ್ತಿತ್ತು. ಒಂದು ವೇಳೆ ಬಿಜೆಪಿ ಈ ಮಟ್ಟಿನ ಯಶಸ್ಸು ಗಳಿಸಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬರಲು ದಾರಿ ಸುಗಮವಾಗುತ್ತಿತ್ತು. ಯಾಕೆಂದರೆ ಬಿಜೆಪಿ ಏನಾದರೂ ಎಂಬತ್ತು, ಎಂಬತ್ತೈದು ಸೀಟು ಗಳಿಸಿದ್ದರೆ ಜೆಡಿಎಸ್ ತಾನು ಗಳಿಸುವ ಸೀಟುಗಳ ಆಧಾರದ ಮೇಲೆ ನಲವತ್ತರಿಂದ ಐವತ್ತು ಸೀಟುಗಳನ್ನು ಗೆಲ್ಲಲು ಸಾಧ್ಯವಿತ್ತು. ಇಷ್ಟರ ಮಟ್ಟಿನ ಫಲಿತಾಂಶ ಬಂದಿದ್ದರೆ ಯಾವುದೇ ಮುಲಾಜಿಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ರಚಿಸಲು ಸಾಧ್ಯವಾಗುತ್ತಿತ್ತು. ಆದರೆ ಇಂತಹ ಬೆಳವಣಿಗೆ ನಡೆಯಲು ಕಾಂಗ್ರೆಸ್ ಹೈಕಮಾಂಡ್ ಬಿಡಲಿಲ್ಲ. ಅಕ್ರಮ ಗಣಿಗಾರಿಕೆಯ ನೆಪವನ್ನು ಮುಂದಿಟ್ಟುಕೊಂಡು ಯಡಿಯೂರಪ್ಪನವರಿಗೆ ಸಿಬಿಐ ಗುಮ್ಮ ತೋರಿಸಿತು. ಕೆಜೆಪಿಯ ಕಡೆ ಓಡಿಸಿತು. ಮುಂದೆ ನಡೆದಿದ್ದು ಇತಿಹಾಸ.

ಆದರೆ ಈಗ ಇತಿಹಾಸ ಬದಲಾಗಿದೆ. ಸಿಬಿಐ ಗುಮ್ಮನಿಗೆ ಹೆದರದೆ ಯಡಿಯೂರಪ್ಪ ಬಿಜೆಪಿ ಕಡೆ ಮತ್ತೆ ವಾಲಿಕೊಂಡಿದ್ದಾರೆ. ಆ ಮೂಲಕ ಕರ್ನಾಟಕದ ಪಡಸಾಲೆಯಲ್ಲಿ ಹನ್ನೆರಡರಿಂದ ಹದಿನೈದು ಸೀಟುಗಳನ್ನು ಗೆಲ್ಲುವ ಅವಕಾಶ ಬಿಜೆಪಿಯ ಮುಂದೆ ತೆರೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ಪಾಲಿಗೆ ಇದೇ ತಲೆನೋವು. ಯಾಕೆಂದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಅಪಾರ ನಿರೀಕ್ಷೆ ಇಟ್ಟುಕೊಂಡಿರುವುದು ಕರ್ನಾಟಕದ ಮೇಲೆ. ಕನಿಷ್ಠ ಪಕ್ಷ ಇಪ್ಪತ್ತು ಸೀಟುಗಳು ತನಗೆ ಲಭ್ಯವಾಗಲಿವೆ ಎಂಬ ನಿರೀಕ್ಷೆ ಆ ಪಕ್ಷಕ್ಕಿದೆ. ಆದರೆ ಯಡಿಯೂರಪ್ಪನವರು ಬಿಜೆಪಿ ಪಡಸಾಲೆಗೆ ಹೊಕ್ಕಾಗಿನಿಂದ ಆಟ ಬದಲಾಗಿದೆ. ಕಾಂಗ್ರೆಸ್ ಹನ್ನೆರಡರಿಂದ ಹದಿನಾಲ್ಕು ಸೀಟುಗಳನ್ನು ಗೆದ್ದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾಂಗ್ರೆಸ್ ಪಾಲಿಗೆ ಸದ್ಯದ ತಲೆನೋವು. ಮುಂಚಿನಿಂದಲೂ ಈ ಸರ್ಕಾರ ಅಹಿಂದ ವರ್ಗಗಳ ಸರ್ಕಾರ ಎಂಬ ಭಾವನೆಯನ್ನು ಪ್ರತಿಬಿಂಬಿಸುವ ಯತ್ನ ಮಾಡಿದ್ದರೂ ದಲಿತರಲ್ಲಿ ಎಡಗೈ ಸಮುದಾಯದವರು, ಕಾಂಗ್ರೆಸ್ ಜತೆಗಿಲ್ಲ. ಬಲಿಷ್ಠ ವರ್ಗದವರೂ ಕಾಂಗ್ರೆಸ್ ಜತೆಗಿಲ್ಲ. ಹೀಗಾಗಿ ಹನ್ನೆರಡರಿಂದ ಹದಿನಾಲ್ಕು ಸೀಟುಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇದ್ದರೂ ಆ ನಿರೀಕ್ಷೆಗೆ ಪರಿಪೂರ್ಣತೆ ಎಂಬುದು ದಕ್ಕಿಲ್ಲ.

ಹೀಗಾಗಿ ಕಾಂಗ್ರೆಸ್ ಪಾಲಿಗೆ ತಲೆನೋವು ಶುರುವಾಗಿದೆ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಿ ದಲಿತರಲ್ಲಿ ಬಲಗೈ ಗುಂಪಿನವರನ್ನಾದರೂ ಎಳೆದುಕೊಳ್ಳೋಣ ಎಂದರೆ ಅದಕ್ಕೂ ಹೈಕಮಾಂಡ್‌ಗೆ ಬೇಕಾದ ವಾತಾವರಣ ಇಲ್ಲ. ಕಾರಣ ಕೇಳಿದರೆ ಸಿದ್ಧರಾಮಯ್ಯ ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಪರ್ಯಾಯ ಶಕ್ತಿ ಕೇಂದ್ರವೊಂದು ತನ್ನ ಮಗ್ಗುಲಲ್ಲೇ ಕೂರುವುದು ಅವರಿಗೆ ಬೇಕಾಗಿಲ್ಲ. ಹೀಗಾಗಿ ಅವರು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸಲು ತಯಾರಿಲ್ಲ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸದಿದ್ದರೆ ದಲಿತರಲ್ಲಿ ಬಲಗೈ ಸಮುದಾಯದವರೂ ಕಾಂಗ್ರೆಸ್‌ನ್ನು ನಂಬುವ ಸ್ಥಿತಿಯಿಲ್ಲ. ಎಡಗೈ ಸಮುದಾಯದವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರೂ ಒಂದು ರೀತಿಯ ಗೊಂದಲ ಅವರಲ್ಲಿದ್ದುದು ನಿಜ. ಯಾಕೆಂದರೆ ಆ ಹೊತ್ತಿಗಾಗಲೇ ಬಿಜೆಪಿ ಎರಡು ಹೋಳಾಗಿತ್ತು. ಸಾಲದೆಂಬಂತೆ ಕಾಂಗ್ರೆಸ್ ಮುಂಚೂಣಿಯಲ್ಲಿ ದಲಿತ ನಾಯಕರಿದ್ದರು. ಹೀಗಾಗಿ ಒಂದು ಸಲ ದಲಿತ ನಾಯಕರು ಚುನಾವಣೆಯಲ್ಲಿ ಗೆಲ್ಲಬಹುದು, ಮುಖ್ಯಮಂತ್ರಿ ಹುದ್ದೆಯನ್ನು ಏರಬಹುದು ಎಂಬ ನಂಬಿಕೆ ಎಡಗೈ ಸಮುದಾಯದಲ್ಲಿತ್ತು.

ಆದರೆ ಅವರ ನಂಬಿಕೆಯೂ ಹುಸಿಯಾಗಿದೆ. ಸಾಲದೆಂಬಂತೆ ಎರಡು ಹೋಳಾಗಿದ್ದ ಬಿಜೆಪಿ ಕೂಡ ಒಂದಾಗಿದೆ. ಹೀಗಾಗಿ ಎಡಗೈ ಮತದಾರರು ಬಿಜೆಪಿಯ ತೆಕ್ಕೆಯೊಳಗೆ ಹೋಗುವ ಸ್ಥಿತಿಯಲ್ಲಿದ್ದಾರೆ. ಬಲಗೈನವರು ಕಾಂಗ್ರೆಸ್ ಪಕ್ಷವನ್ನು ಪರಿಪೂರ್ಣವಾಗಿ ನಂಬುವ ಸ್ಥಿತಿಯಲ್ಲಿಲ್ಲ. ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ? ಇದು ಕಾಂಗ್ರೆಸ್‌ನ ಆತಂಕ. ಬಡ ಮಧ್ಯಮ ವರ್ಗದವರಿಗಾಗಿ ಅನ್ನಭಾಗ್ಯದಂತಹ ಯೋಜನೆಗಳನ್ನು, ಅಹಿಂದ ವರ್ಗದವರಿಗಾಗಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು ಬೇರೆ ಮಾತು. ಆದರೆ ಇಂತಹ ಯೋಜನೆಗಳ ಮೂಲಕ ಇಪ್ಪತ್ತರಷ್ಟು ಸೀಟುಗಳನ್ನು ಗೆಲ್ಲಲು ಅದಕ್ಕೆ ಸಾಧ್ಯವೇ? ಇಲ್ಲ ಎಂಬ ಭಾವನೆ ದಿನ ಕಳೆದಂತೆ ದಟ್ಟವಾಗುತ್ತಿದೆ. ಹಾಗೆ ನೋಡಿದರೆ ಒಂದು ಆತ್ಮವಿಶ್ವಾಸದ ಅಲೆ ಅಂತಿರುವುದು ಬಿಜೆಪಿ ಪಡಸಾಲೆಯಲ್ಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅದು ಹತ್ತೊಂಬತ್ತು ಸೀಟುಗಳನ್ನು ಗೆದ್ದುದು ಹೌದಾದರೂ, ಈ ಬಾರಿ ಹನ್ನೆರಡರಿಂದ ಹದಿನೈದು ಸೀಟುಗಳನ್ನು ಗೆಲ್ಲುವ ಆತ್ಮವಿಶ್ವಾಸ ಅದರಲ್ಲಿದೆ.

ಮುಂದಿನ ದಿನಗಳಲ್ಲಿ ಅದರ ಆತ್ಮವಿಶ್ವಾಸದ ಅಲೆ ಹೆಚ್ಚುತ್ತಾ ಹೋಗಲಿದೆ ಎಂಬುದಕ್ಕೆ ಕಾರಣವೂ ಇದೆ. ಅದೆಂದರೆ ನರೇಂದ್ರ ಮೋದಿ. ಗುಜರಾತ್‌ನ ಮುಖ್ಯಮಂತ್ರಿಯಾದ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರಮೋದಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಹೀಗೆ ಬರುವ ಮೂಲಕ ಅವರು ಮೂಡಿಸಿದಷ್ಟು ಆತ್ಮವಿಶ್ವಾಸವನ್ನು ಸೋನಿಯಾ ಅಥವಾ ರಾಹುಲ್ ಮೂಡಿಸುತ್ತಿಲ್ಲ. ಈ ಅಂಶವೂ ರಾಜ್ಯ ಕಾಂಗ್ರೆಸ್‌ಗೆ ತಲೆ ನೋವಾಗಿದೆ. ಸಾಲದು ಎಂದರೆ ರಾಜ್ಯ ಕಾಂಗ್ರೆಸ್‌ನ ಹಲ ನಾಯಕರು ಪರಿಪೂರ್ಣ ರೀತಿಯ ಬೆಂಬಲ ನೀಡುತ್ತಿಲ್ಲ. ಈ ಅಂಶವೂ ರಾಜ್ಯ ಕಾಂಗ್ರೆಸ್ ಪಾಲಿಗೆ ತಲೆ ನೋವಾಗಿ ಪರಿಣಮಿಸಿದೆ. ಇದು ಬಿಜೆಪಿಗೂ ಗೊತ್ತು. ಹೀಗೆ ನರೇಂದ್ರಮೋದಿ ರಾಜ್ಯಕ್ಕೆ ಮೇಲಿನಿಂದ ಮೇಲೆ ಬರುತ್ತಿದ್ದರೆ ಅದು ಬಿಜೆಪಿ ಪಾಲಿಗೆ ಪ್ಲಸ್ ಆಗುವುದಷ್ಟೇ ಅಲ್ಲ, ಹದಿನೈದರಷ್ಟು ಸೀಟುಗಳನ್ನು ನಿರಾಯಾಸವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಅದರಲ್ಲಿದೆ.

ಹೀಗೆ ಒಂದೊಂದು ಪಕ್ಷದಲ್ಲೂ ಲೋಕಸಭಾ ಚುನಾವಣೆಯ ವಿಷಯದಲ್ಲಿ ತನ್ನದೇ ಆದ ಲೆಕ್ಕಾಚಾರ ಇರುವುದರಿಂದ, ಹಾಲಿ ವಿಧಾನಸಭಾ ಅಧಿವೇಶನದ ಬಗ್ಗೆ ಅವು ಹೇಳಿಕೊಳ್ಳುವಷ್ಟು ಉತ್ಸುಕತೆ ತೋರಲಿಲ್ಲ. ಸಕ್ರಿಯವಾಗಿ ಪಾಲ್ಗೊಳ್ಳಲೂ ಇಲ್ಲ. ಇದು ಬಿಜೆಪಿ ಅಂತಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪಡಸಾಲೆಯಲ್ಲೂ ಇರುವ ವಾತಾವರಣ. ಎಲ್ಲರಿಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕು. ಆದರೆ ಇರುವ ಮಾರ್ಗವೇನು? ಅನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಹೀಗೆ ಗೊತ್ತಿಲ್ಲ ಅಂತ ಸುಮ್ಮನಿರಲೂ ಸಾಧ್ಯವಿಲ್ಲವಲ್ಲ? ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳೂ ಗೆಲುವಿಗಾಗಿ ತಮ್ಮಿಂದ ಸಾಧ್ಯವಿರುವುದನ್ನು ಮಾಡುತ್ತಿವೆ. ಜೆಡಿಎಸ್ ಪಕ್ಷ ಸರ್ವೇಗಳ ಅಂದಾಜನ್ನು ಮೀರಿ ಆರರಂದು ಏಳು ಸ್ಥಾನಗಳನ್ನು ಪಡೆಯಲು ಯತ್ನಿಸುತ್ತಿದೆ. ಕಾರಣ, ದೆಹಲಿ ಮಟ್ಟದಲ್ಲಿ ಅದಕ್ಕೆ ಸಿಗಬಹುದಾದ ಪ್ರಾತಿನಿಧ್ಯ. ಇನ್ನು ಕಾಂಗ್ರೆಸ್ ಕೂಡ ಸರ್ವೇ ಲೆಕ್ಕಾಚಾರಗಳನ್ನು ಮೀರಿ ಹದಿನೇಳರಿಂದ ಹದಿನೆಂಟು ಸೀಟುಗಳನ್ನು ಗೆಲ್ಲಲು ಯತ್ನಿಸುತ್ತಿದೆ. ಯಾಕೆಂದರೆ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಾವಿದ್ದ ಪದವಿಯಲ್ಲೇ ಮುಂದುವರಿಯುವ ನಿರೀಕ್ಷೆ.

ಇನ್ನು ಬಿಜೆಪಿಗೆ ಹನ್ನೆರಡರಿಂದ ಹದಿನೈದು ಸ್ಥಾನಗಳನ್ನು ಗೆದ್ದರೂ ಸಾಕು, ನರೇಂದ್ರಮೋದಿ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸುವ ಬಯಕೆ. ಹೀಗೆ ಪ್ರತಿಯೊಂದು ರಾಜಕೀಯ ಪಕ್ಷಗಳೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿರುವ ಪರಿಣಾಮವಾಗಿ ಪ್ರಸಕ್ತ ವಿಧಾನಮಂಡಲ ಅಧಿವೇಶನ ಸಪ್ಪೆಯಾಗಿ ಮುಗಿಯುತ್ತಿದೆ. ಒಂದು ಅಧಿವೇಶನ ಸಪ್ಪೆಯಾಗಿ ಮುಗಿಯುತ್ತಿದೆ ಎಂದರೆ ಅದಕ್ಕಿರುವ ಕಾರಣ ಸ್ಪಷ್ಟ. ಅದೆಂದರೆ ಲೋಕಸಭಾ ಚುನಾವಣೆ. ಮುಂದೆ ಏನೇನಾಗುತ್ತದೋ? ಕಾದು ನೋಡಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books