Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮತ್ತೆ ರುದ್ರಪ್ರಯಾಗದ ಆ ಇಳಿಜಾರಿನಲ್ಲಿ ಕಾರು ನಿಲ್ಲಿಸಿ ಹಾಡು ಕೇಳುವಾಸೆ

ಭೂಲೀ ಹುಯಿ ಯಾದೋಂ
ಇತನಾ ನ ಸತಾವೋ
ಅಬ್ ಚೈನ್ ಸೆ ರೆಹನೇ ದೋ
ಮೇರೇ ಪಾಸ್ ನ ಆವೋ.....
ಯಾವ ನೋವಿನ ದನಿ? ಯಾವ ಎದೆಯಾಳದ ಆರ್ತನಾದ? ಎಂಥ ಗಾಢವಾದ ನಿಟ್ಟುಸಿರು? ಅವತ್ತು ನನ್ನನ್ನು ಈ ಹಾಡು ಯಾಕೆ ಆ ಪರಿ ಕಲುಕಿ ಹಾಕಿತ್ತು? ಸಣ್ಣಗೆ ಸುರಿಯುತ್ತಿದ್ದ ಸೋನೆ ಮಳೆ. ಹೆಗಲ ಮೇಲೆ ತೊಯ್ದ ಶಾಲು. ಮೂಳೆ ನೆಕ್ಕುವ ಚಳಿಯ ಪರಿವೆಯೂ ಇಲ್ಲದವನಂತೆ ನಾನು ರುದ್ರಪ್ರಯಾಗವೆಂಬ ಆ ಹಿಮಾಲಯದ ಊರಿನ ಇಳಿಜಾರಿನಲ್ಲಿ ನಿಂತಿದ್ದೆ. ಕಾರಿನ ಸ್ಟೀರಿಯೋದಿಂದ ಆ ಮಧ್ಯರಾತ್ರಿಯಲ್ಲಿ ಮುಖೇಶನ ಹಾಡು ಕೇಳಿ ಬರುತ್ತಿತ್ತು. ಅಗ್ಗದ ಸಾರಾಯಿಯಂತಹ ಠರ್ರಾ ಕುಡಿದಿದ್ದ ಆ ಟ್ಯಾಕ್ಸಿಯ ಡ್ರೈವರ್ ಅದೇಕೆ ಆ ಕೆಸೆಟ್ ಹಾಕಿಕೊಂಡಿದ್ದನೋ ಗೊತ್ತಿಲ್ಲ. ನಾನು ತುಂಬ ವ್ಯಾಕುಲಗೊಂಡಿದ್ದೆ. ದೇವರು ನನಗೆ ಸಿಕ್ಕಿರಲಿಲ್ಲ. ಸನ್ಯಾಸ ತಿರಸ್ಕರಿಸಿತ್ತು. ತಿಂಗಳುಗಟ್ಟಲೆ ಶ್ರಮಪಟ್ಟು, ಹೊಟೇಲಿನಲ್ಲಿ ಕೆಲಸ ಮಾಡಿ, ಒಂದೊಂದು ರುಪಾಯಿ ಕೂಡಿಟ್ಟು, ಹರಿದ್ವಾರದಲ್ಲಿ ಜೊತೆಯಾದ ಸ್ವೀಡನ್‌ನ ಇಂಜಿನೀರ್ ಕ್ರುತ್‌ನೊಂದಿಗೆ ದೊಡ್ಡ ಹುರುಪು ಹೊತ್ತು ಹಿಮಾಲಯದ ನೆತ್ತಿಯ ಸನಿಹಕ್ಕೆ ಹತ್ತಿ ಹೋಗಿದ್ದೆ. ನನಗೆ ಹತ್ತೊಂಬತ್ತು ವರ್ಷವಿದ್ದವೇನೋ ಆವಾಗ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿಯನ್ನು ಕಳೆದುಕೊಂಡಿದ್ದೆ. ಅಲ್ಲಿಗೆ ಜೀವನವೇ ಮುಗಿದು ಹೋಯಿತು ಅನ್ನಿಸಿತ್ತು. ಗಾಯಗೊಂಡ ಎದೆ ಹೊತ್ತು, ಭೈರಪ್ಪನವರ ‘ನಿರಾಕರಣ’ ಕಾದಂಬರಿ ಓದಿ ಹಿಮಾಲಯಕ್ಕೆ ಓಡಿ ಹೋಗಿದ್ದೆ. ಸನ್ಯಾಸ ನನ್ನ ಪಾಲಿಗೆ ಅವತ್ತಿನ ದೊಡ್ಡ ಆಕರ್ಷಣೆಯಾಗಿತ್ತು. “ಆದರೆ ಇದು ನಿನಗ ದಕ್ಕೂದಿಲ್ಲ ತಮ್ಮಾ..." ಅಂದಿದ್ದರು ನನ್ನ ಗುರುಗಳು. ಎರಡನೆಯ ಬಾರಿಗೆ ಎದೆಯೊಡೆದಿತ್ತು. ಪ್ರೀತಿಯಲ್ಲಿ ಗಾಯಗೊಂಡವನಿಗೆ ಸನ್ಯಾಸದಲ್ಲಿ ಆಶ್ರಯ ದೊರೆಯಬಹುದು ಅನ್ನಿಸಿದ್ದು, ಅದೂ ಸುಳ್ಳಾಗಿತ್ತು. ಅತ್ಯಂತ ತರ್ಕಬದ್ಧವಾಗಿಯೇ ನಾನು ದೇವರ ಅಸ್ತಿತ್ವದಲ್ಲಿ ವಿಶ್ವಾಸ ಕಳೆದುಕೊಂಡಿದ್ದೆ.

ನನಗಿನ್ನು ಬೇರೆ ದಾರಿಯಿರಲಿಲ್ಲ. ಬೀಳು ಬಿದ್ದ ಬದುಕನ್ನು ಎದುರಿಸಲೇಬೇಕು, ಒಬ್ಬಂಟಿಯಾಗಿ. ಮತ್ತೆ ಬಳ್ಳಾರಿಗೆ ಹಿಂತಿರುಗಬೇಕು. ಅದು ಮೈತುಂಬ ನನ್ನ ಪ್ರೇಮದ ನೆನಪುಗಳನ್ನು ನಿಲ್ಲಿಸಿಕೊಂಡಿದ್ದ ವಿಷಾದ ನಗರಿ. ಮತ್ತೆ ನಾನು ಹರಿದ್ವಾರದ ಹೊಟೇಲಿನ ಕೆಲಸಕ್ಕೇ ಹಿಂತಿರುಗಬಹುದಿತ್ತು. ಆದರೆ ಬಳ್ಳಾರಿಯಲ್ಲಿ ಅಮ್ಮ ಇದ್ದಳು. ಅವಳಿಗೆ ನಾನು ಬಿಟ್ಟರೆ ಬೇರೆ ಇದ್ದರಾದರೂ ಯಾರು? ‘ಸರಿ, ನಾನು ಹಿಮದ ಬೆಟ್ಟವಿಳಿದು ಹೋಗುತ್ತೇನೆ’ ಅಂತ ಗುರುಗಳಿಗೆ ಹೇಳಿದೆ. ಮನುಷ್ಯರ ಕಾಲಿಗೆ ಶ್ರದ್ಧೆಯಿಂದ ನಮಸ್ಕರಿಸಿದ್ದು ಅದೇ ಕೊನೆಯಿರಬೇಕು. ಅದು ಹಿಮಕಂದರದ ನಡುವೆ ಇರುವ ಬದರೀನಾಥ್ ಮುಚ್ಚಿ ಹೋಗುವ ಸಮಯ. ಆ ನಂತರ ಅಲ್ಲಿ ವಿಪರೀತವಾದ ಮಂಜು ಸುರಿಯುತ್ತದೆ. ಮನುಷ್ಯರು ಹಾಗಿರಲಿ, ಹಕ್ಕಿಗಳೂ ಅಲ್ಲಿ ವಾಸಿಸುವುದಿಲ್ಲ. ಹನ್ನೆರಡು ತಿಂಗಳೂ ಅಲ್ಲಿ ವಾಸಿಸುವ ಬೆರಳೆಣಿಕೆಯ ಮಂದಿಯಿರುತ್ತಾರೆ. ಅವರನ್ನು ಬಾರಾಮಾಸಿಗಳೆನ್ನುತ್ತಾರೆ. ಬಾರಾಮಾಸಿಯಾಗಲಿಕ್ಕೆ ತುಂಬ ಸಾಧನೆ ಬೇಕು. ಸಾಧನೆಯ ಮೊದಲ ಮೆಟ್ಟಿಲೇ ನನ್ನನ್ನು ನಿರಾಕರಿಸಿತ್ತು. ಇನ್ನು ನಾನಲ್ಲಿದ್ದು ಏನು ಮಾಡಲಿ? ವಾಪಸು ಬರಲಿಕ್ಕೆ ಅಲ್ಲಿಂದ ಬಸ್ಸು, ರೈಲುಗಳಿಲ್ಲ. ಯಾತ್ರಿಕರ‍್ಯಾರಾದರೂ ಬಸ್ಸು ಮಾಡಿಕೊಂಡು ಬಂದಿದ್ದರೆ ಅವರೊಂದಿಗೆ ಆ ಬಸ್ಸಿನಲ್ಲಿ ಹಿಂದಿರುಗಬೇಕು. ಆದರೆ ಬಂದಿದ್ದ ಯಾತ್ರಿಗಳ ಕಟ್ಟಕಡೆಯ ಬಸ್ಸೂ ಇಳಿದು ಹೋಗಿತ್ತು. ನನಗೆ ಉಳಿದಿದ್ದು ಮಿಲಿಟರಿ ಟ್ರಕ್‌ಗಳದೊಂದೇ option. ಸೈನಿಕರ ಕೈಕಾಲು ಹಿಡಿದು ಕಡೆಗೂ ಬದರೀನಾಥ್‌ನಿಂದ ಹೊರಟೆ. ಹಿಮಾಲಯದ ನೆತ್ತಿಯಿಂದ ನೆಲದೆಡೆಗೆ, ಸಮತಟ್ಟಿನೆಡೆಗೆ ಇಳಿಯುತ್ತಿದ್ದರೆ ಆಕಾಶದಿಂದ ಅಧಃಪಾತಾಳಕ್ಕೆ ಇಳಿಯುತ್ತಿದ್ದೇನೆ ಅನ್ನಿಸುತ್ತಿತ್ತು. ಮುಖದ ಮೇಲೆ ಸೋಲಿನ, ಅವಮಾನದ ಗೀಚು. ಉಮ್ಮಳಿಸಿ ಬರುವ ದುಃಖ. ಮಿಲಿಟರಿ ಟ್ರಕ್‌ನಲ್ಲಿ ಕುಳಿತ ನಾನು ಕಾವಿ ಲುಂಗಿ ಮತ್ತು ಕಾವಿಯ ಜುಬ್ಬ ಧರಿಸಿದ್ದೆ. ಹೆಗಲ ಮೇಲೆ ಒಂದು ತೆಳ್ಳನೆಯ ಶಾಲು ಇತ್ತು. ಕಾಲಲ್ಲಿ ಯಾತ್ರಿಕರ‍್ಯಾರೋ ಕೊಟ್ಟ ಚಪ್ಪಲಿ. ಕಿಸೆಯಲ್ಲಿ ಒಂದಷ್ಟು ಹಣ. ಆ ರಸ್ತೆಯಲ್ಲಿ ರಾತ್ರಿ ಹೊತ್ತು ವಾಹನಗಳು ಸಂಚರಿಸುವುದಿಲ್ಲ. ರುದ್ರಪ್ರಯಾಗದ ತನಕ ಕರೆದುಕೊಂಡು ಬಂದ ಮಿಲಿಟರಿಯವರು ಅಲ್ಲಿ ನನ್ನನ್ನು ‘ಉತರೋ’ ಎಂದು ಆದೇಶಿಸಿ ಟ್ರಕ್‌ನಿಂದ ಇಳಿಸಿದ್ದರು.

ಮುಂದಕ್ಕೆ ಹೇಗೆ? ರುದ್ರಪ್ರಯಾಗದ ಮೇಲೆ ಬಹಳ ಬೇಗನೆ ಇರುಳು ಕವಿಯುತ್ತದೆ. ಅಲ್ಲೇ ಯಾವುದಾದರೂ ಗುಡಿಯಲ್ಲಿ, ಮಠದಲ್ಲಿ, ಭಿಕ್ಷುಕರ-ಸನ್ಯಾಸಿಗಳ ಮಧ್ಯೆ ಮಲಗಿಕೊಂಡು ಬೆಳಗ್ಗೆ ಎದ್ದು ಹರಿದ್ವಾರ ಸೇರಿಕೊಳ್ಳಲು ದಾರಿ ಹುಡುಕೋಣವಾ ಅಂದುಕೊಂಡೆ. ಆದರೆ ಭಿಕ್ಷುಕರ ಮಧ್ಯೆ ಮಲಗುವುದು ತುಂಬ ಕಷ್ಟ. ವಿಪರೀತ ವಾಸನೆ, ಕೊಳಕು. ಅವರಿಗೆ ನಾನಾ ಖಾಯಿಲೆಗಳು. ಹಾಗೇ ರುದ್ರಪ್ರಯಾಗದ ಅಂಕುಡೊಂಕಿನ ರಸ್ತೆಗಳಲ್ಲಿ ಅಲೆದು ಕಾಲ ಕಳೆದೆ. ಅಷ್ಟರಲ್ಲಿ ರಸ್ತೆ ಬದಿ ನಿಂತಿದ್ದ ಆ ಕಾರು ಕಾಣಿಸಿತು. ಸಣ್ಣಗೆ ಮಳೆ. ಹೋಗಿ ಕಾರಿನ ಬದಿಯಲ್ಲಿ ನಿಂತೆ. ಒಳಗೆ ಡ್ರೈವರನೊಬ್ಬನೇ ಇದ್ದ. ಉತ್ತರ ಭಾರತದಲ್ಲಿ ಅದೊಂದು ನಿಯಮ: ಹಾಕಿಕೊಂಡವನ ವಯಸ್ಸು ಯಾವುದೇ ಇರಲಿ, ಕಾವಿ ಹಾಕಿಕೊಂಡರೆ ಸಾಕು; ಅವನನ್ನು ‘ಬಾಬ್ಬ’ ಅನ್ನುತ್ತಾರೆ. ಆದರಿಸುತ್ತಾರೆ. ಭಿಕ್ಷೆ ಕೊಡುತ್ತಾರೆ. ಕಡೆಯ ಪಕ್ಷ ಈ ಡ್ರೈವರ್ ನನಗೆ ಅರ್ಧರಾತ್ರಿಯ ಮಟ್ಟಿಗೆ ತನ್ನ ಕಾರಿನಲ್ಲಿ ಕುಳಿತುಕೊಳ್ಳಲು ಜಾಗ ಕೊಟ್ಟಾನೆಯೇ? ಅದೇ ಆಸೆಯಿಂದ ಕಾರಿನ ಪಕ್ಕದಲ್ಲಿ ಹೋಗಿ ನಿಂತೆ. ಆಗಲೇ ನನಗೆ ಕೇಳಿಸಿದ್ದು, ಮುಖೇಶನ ಕರುಳು ಕೊರೆಯುವ ಹಾಡು. “ಅಬ್ ಚೈನ್ ಸೆ ರೆಹನೇ ದೊ ಮೇರೇ ಪಾಸ್ ನ ಆವೋ..."

ನೆನಪುಗಳೇ, ಹತ್ತಿರಕ್ಕೆ ಬರಬೇಡಿ. ನನ್ನನ್ನು ನೆಮ್ಮದಿಯಾಗಿರಲು ಬಿಡಿ ಎಂದು ಕೈ ಮುಗಿದು ವಿನಂತಿಸುತ್ತಿದ್ದ ಮುಖೇಶ್. ಆ ಹಾಡು ನನಗೋಸ್ಕರ ಹಾಡುತ್ತಿದ್ದಾನೇನೋ ಅನ್ನಿಸುತ್ತಿತ್ತು. ಜಗತ್ತಿನ ನೋವನ್ನೆಲ್ಲ ಕೊರಳಿಗೆ ಇಳಿಸಿಕೊಂಡು ಇನ್ನಿಲ್ಲದ ಆರ್ದ್ರತೆಯಿಂದ ಮುಖೇಶ್ ಹಾಡುತ್ತಿದ್ದ. ನನ್ನ ಕಣ್ಣಲ್ಲಿ ಸುಮ್ಮನೆ ನೀರು ಹರಿದು ಹೋಗುತ್ತಿದ್ದವು. ಅಮ್ಮ ಮೇಲಿಂದ ಮೇಲೆ ನೆನಪಾಗುತ್ತಿದ್ದಳು. ಅವಳನ್ನು ನೋಡದೆ ತಿಂಗಳುಗಳೇ ಆಗಿದ್ದವು. ಅಸಲು ಬದುಕಿದ್ದಾಳೋ ಇಲ್ಲವೋ? ಅಮ್ಮನಿಗೇನಾದರೂ ಆಗಿ ಬಿಟ್ಟಿದ್ದರೆ? ಮನಸು ತಳಮಳಿಸುತ್ತಿತ್ತು. ಮಳೆಯಲ್ಲಿ ನಿಂತಿದ್ದ ನನ್ನನ್ನು ನೋಡಿ ಡ್ರೈವರನಿಗೆ ಕರುಣೆ ಬಂದಿರಬೇಕು. “ಅಂದರ್ ಆವೋ ಬಾಬ್ಬ" ಎಂದು ಕರೆದ. ಕುಡಿಯಲು ಠರ್ರಾ ಕೊಟ್ಟ. ಅಗ್ಗದ ಸಿಗರೇಟು ಕೊಟ್ಟ. ನಾನು ಸಿಗರೇಟು ಸೇದಿ ಎಷ್ಟೋ ದಿನಗಳಾಗಿದ್ದವು. ಮೂರನೇ ಕ್ಲಾಸು ಓದುವಾಗ ಸಿಗರೇಟಿನ ರುಚಿ ನೋಡಿದವನು ನಾನು. ಆಮೇಲೆ ಸುಮಾರು ೧೯೬೯ರಿಂದ ಇವತ್ತಿನ ತನಕ ನಿರಂತರವಾಗಿ ಸೇದುತ್ತಲೇ ಇದ್ದೇನೆ. ಮಧ್ಯದಲ್ಲಿ, ಬದರೀನಾಥದಲ್ಲಿದ್ದಾಗ ಸೇದದೆ ಇದ್ದುದು ಬಿಟ್ಟರೆ ತುಂಬ ದೀರ್ಘಕಾಲ ನಾನದನ್ನು ಬಿಟ್ಟೇ ಇಲ್ಲ. ಡ್ರೈವರ್ ಕೊಟ್ಟ ಸಿಗರೇಟಿನ ಜುರುಕಿ ಎಳೆಯುತ್ತಿದ್ದಂತೆಯೇ ತಲೆ ದಿಮ್ಮೆನ್ನತೊಡಗಿತು. ಅವನನ್ನು ವಿನಂತಿಸಿ, ಮತ್ತೆ ಮತ್ತೆ ಮುಖೇಶನ ಅದೇ ಹಾಡನ್ನು ಕೇಳಿದೆ. ಅದೇಕೋ ಏನೋ ಆ ರಾತ್ರಿ ನನ್ನ ಸ್ಮೃತಿಪಟಲದ ಮೇಲೆ engrave ಮಾಡಿದಂತೆ ಉಳಿದು ಹೋಗಿದೆ.

ಮುಂದೆ ನಾನು ಬಳ್ಳಾರಿಗೆ ಬಂದೆ. ಲಲಿತಳ ಸ್ನೇಹ ದೃಢಗೊಳ್ಳತೊಡಗಿದ ಕಾಲವದು. ನನಗೆ ಲಲಿತಳ ಆಸರೆ ಬೇಕಾಗಿತ್ತೆಂಬುದು ನಿಜವಾದರೂ ಅವಳು ನನ್ನನ್ನು ಇನ್ನಿಲ್ಲದಷ್ಟು devoted ಆಗಿ ಪ್ರೀತಿಸತೊಡಗಿದ್ದಳು. ಹಸಿರು ನೆರಿಗೆ ಲಂಗದ ಹುಡುಗಿ ಆಗಲೇ ಮದುವೆಯಾಗಿ, ಅವಳು ಗರ್ಭವತಿ. ಬಳ್ಳಾರಿಗೆ ಹಿಂತಿರುಗಿದ ಹೊಸತರಲ್ಲಿ ನಾನು ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದೆ. ನಾವು ಭೇಟಿಯಾಗುತ್ತಿದ್ದ ಜಾಗೆಗಳಿಗೆ ಮತ್ತೆ ಮತ್ತೆ ಹೋಗುತ್ತಿದ್ದೆ. ಒಬ್ಬನೇ ಕುಳಿತು ಅಳುತ್ತಿದ್ದೆ. ದೇವರಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟದ್ದು ಬಿಟ್ಟರೆ ಹಿಮಾಲಯದ ಯಾತ್ರೆ ನನ್ನನ್ನು ಎಳ್ಳಷ್ಟೂ ಬದಲಿಸಿರಲಿಲ್ಲ. ವಿಪರೀತ ಕೋಪಿಷ್ಟನಾಗಿದ್ದೆ. ನನ್ನ ಕೋಪವನ್ನು ಉಳಿದೆಲ್ಲರಿಗಿಂತ ಹೆಚ್ಚಾಗಿ ಭರಿಸಿದವಳು ಲಲಿತೆ. ಕೈಗೆ ಏನು ಸಿಕ್ಕರೆ ಅದನ್ನು ಅವಳ ಮುಖಕ್ಕೆ ಎಸೆಯುತ್ತಿದ್ದೆ. ಎಲ್ಲವನ್ನೂ ದೇವರಂತೆ ಭರಿಸಿದಳು. ನನ್ನ ನೋವು ಮರೆಯಲಿ ಅಂತ ನನಗೊಂದು tape racorder ತಂದುಕೊಟ್ಟಳು. ಆ ನಂತರವೇ ನನಗೆ ಮುಖೇಶ್‌ನ ಹುಚ್ಚು ಹಿಡಿದದ್ದು. ಆ ಕಾಲಕ್ಕೆ ನನ್ನಲ್ಲಿ ಮುಖೇಶನ ಹಾಡುಗಳೇ ತುಂಬಿದ್ದ ಹದಿನಾರು ಕೆಸೆಟ್‌ಗಳಿದ್ದವು.

ಮುಖೇಶ್ ಬಗ್ಗೆ ನಿಮಗೊಂದಿಷ್ಟು ಹೇಳಬೇಕು. ಆತನಿಗೆ The man wiht golden voice ಎಂಬ ಬಿರುದಿತ್ತು. ಆತನ ನಿಜವಾದ ಹೆಸರು ಜೋರಾವರ್ ಚಂದ್ ಮಾಥುರ್ ಅಂತ. ದಿಲ್ಲಿಯಲ್ಲಿ ಜುಲೈ ಇಪ್ಪತ್ತೆರಡು ೧೯೨೩ರಂದು ಮಧ್ಯಮ ವರ್ಗದ ಮಾಮೂಲು ಕುಟುಂಬದಲ್ಲಿ ಹುಟ್ಟಿದ ಆತ ಕೇವಲ ಹತ್ತನೇ ತರಗತಿಯವರೆಗೆ ಓದಿದ್ದ. ಅಷ್ಟಕ್ಕೇ ಆತನಿಗೆ ಪಿ.ಡಬ್ಲ್ಯೂ.ಡಿಯಲ್ಲಿ ಸರ್ವೇಯರ್ ಕೆಲಸ ಸಿಕ್ಕಿತ್ತು. ಆದರೆ ಮನಸಿನಲ್ಲಿ ಪಾದರಸದಂತೆ ಕದಲುತ್ತಿದ್ದುದು ನಟಿಸುವ ಮತ್ತು ಹಾಡುವ ಹುಚ್ಚು. ಏಳು ತಿಂಗಳು ನೌಕರಿ ಮಾಡುವುದರೊಳಗಾಗಿ ಸಾಕುಸಾಕಾಗಿ ಹೋಗುತ್ತಿತ್ತು. ಭಾರತದ ಮಹಾನ್ ಗಾಯಕ ಕುಂದನಲಾಲ್ ಸೈಗಲ್ ಅಂದರೆ ಮುಖೇಶ್‌ಗೆ ಪ್ರಾಣ. ಆತನನ್ನು ಎಷ್ಟು ಆರಾಧಿಸುತ್ತಿದ್ದನೆಂದರೆ, ಥೇಟು ಸೈಗಲ್‌ನಂತೆಯೇ ಹಾಡುತ್ತಿದ್ದ. ಈ ತಾಕತ್ತನ್ನು ನಂಬಿಕೊಂಡೇ ಆತ ದಿಲ್ಲಿಯಿಂದ ಮುಂಬಯಿಗೆ ಹೋದ. ಅಲ್ಲಿ ಮುಖೇಶ್‌ನ ಚಿಕ್ಕಪ್ಪ ಬಾಲಿವುಡ್‌ನ ಹೆಸರಾಂತ ನಟ: ಮೋತಿಲಾಲ್. ಅದಿನ್ನೂ ೧೯೪೧ರ ಮಾತು. ಮುಖೇಶ್‌ಗೆ ಮೊದಲ ಬಾರಿಗೆ ‘ನಿರ್ದೋಶ್’ ಎಂಬ ಚಿತ್ರದಲ್ಲಿ ನಳಿನಿ ಜಯವಂತ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಅದು ಯಶಸ್ಸು ಕಾಣಲಿಲ್ಲ. ಆಮೇಲೆ ೧೯೪೫ರಲ್ಲಿ ಮುಖೇಶ್ ತನ್ನ ಐತಿಹಾಸಿಕ ಹಾಡು ಹಾಡಿದ, ದಿಲ್ ಜಲ್ತಾ ಹೈ ತೋ ಜಲ್‌ನೇ ದೋ! ಈ ಹಾಡು ಅದ್ಯಾವ ಪರಿ ಸೈಗಲ್‌ನ ಅನುಕರಣೆಯಾಗಿತ್ತೆಂದರೆ, ಅದನ್ನು ಕೇಳಿಸಿಕೊಂಡ ಕೆ.ಎಲ್.ಸೈಗಲ್ “ಇದನ್ನು ನಾನು ಎಂದೂ ಹಾಡಿದಂತಿಲ್ಲವಲ್ಲ!" ಎಂದು ಉದ್ಗರಿಸಿದ್ದ. ಇದು ಸೈಗಲ್‌ನದೇ ಹಾಡು ಅಂತ ಬೆಟ್ ಕಟ್ಟಿ ಸೋತವರು ಸಾವಿರಾರು ಮಂದಿ. ‘ಪೆಹಲೀ ನಜರ್’ ಎಂಬ ಚಿತ್ರಕ್ಕೆ ಮುಖೇಶ್ ಅದನ್ನು ಹಾಡಿದ್ದ. ಈ ಹಾಡಿಗೆ ನಟಿಸಿದ್ದು, ಆತನ ಚಿಕ್ಕಪ್ಪ ಮೋತಿಲಾಲ್.

ಮತ್ಯಾರೂ ಅನುಕರಿಸಲು ಸಾಧ್ಯವೇ ಇಲ್ಲದಂತಹ ತೀವ್ರವಾದ ನೋವೊಂದು ಮುಖೇಶ್‌ನ ಧ್ವನಿಯಲ್ಲಿತ್ತು. ತುಂಬ ಸಜ್ಜನನಾದ, ಮಾನಸಿಕವಾಗಿ ಗಾಯಗೊಂಡ ಮನುಷ್ಯನೊಬ್ಬ ದನಿ ತೆಗೆದು ಹಾಡುತ್ತಿದ್ದಾನೆ ಅಂತ ಕೇಳಿದ ಕೂಡಲೇ ಅನ್ನಿಸುತ್ತಿತ್ತು. “ಆತನ ಬಾಯಿಂದ ಹೊರಟದ್ದೆಲ್ಲ ಮುತ್ತು. ಮುಖೇಶ್‌ನ ದನಿಯಲ್ಲಿನ timber, ಅದು ಈ ಜಗತ್ತಿನದಲ್ಲ" ಎಂದು ಪ್ರಖ್ಯಾತ ಸಂಗೀತ ನಿರ್ದೇಶಕ ಸಲೀಲ್ ಚೌಧುರಿ ಹೊಗಳಿದ್ದರು. ಮುಖೇಶನ ಗಾಯನವೇ ಅಂತಹುದು. ಅದರಲ್ಲಿ ದುಃಖದ, ಯಾತನೆಯ, ನಿರಾಸೆಯ, ಸಂಕಟದ ಸಾವಿರ ಸಾವಿರ shadeಗಳಿರುತ್ತಿದ್ದವು. ಆತ ತುಂಬ ಬೇಗನೆ ತನ್ನ ಬಲಹೀನತೆಯನ್ನು ತಿದ್ದಿಕೊಂಡ. ಸೈಗಲ್‌ನಂತೆ ಹಾಡುವುದು ಸರಿಯಲ್ಲ ಅಂತ ಅರಿತ. ಚಿತ್ರರಂಗಕ್ಕೆ ಮತ್ತೊಬ್ಬ ಸೈಗಲ್ ಬೇಕಿರಲಿಲ್ಲ. ಮುಖೇಶ್ ಬೇಕಿದ್ದ. “ಝೂಮ್ ಝೂಮ್ ಕೇ ನಾಚೋ ಆಜ್..." ಅಂತ fresh ಆದ ದನಿಯಲ್ಲಿ ಮುಖೇಶ್ ಹಾಡಿದಾಗ ಇಡೀ ದೇಶ ಪುಳಕಗೊಂಡಿತು. ಆತ ಹಾಡಿದ ಮೊದಲ ನಾಲ್ಕು ಹಾಡುಗಳೇ ೧೯೪೯ರಲ್ಲಿ ಆತನನ್ನು ಮನೆ ಮಾತನ್ನಾಗಿಸಿದವು. ಅಷ್ಟರಲ್ಲಿ ರಾಜ್‌ಕಪೂರ್ ನಿರ್ದೇಶನದ ಮತ್ತು ಆತನದೇ ನಿರ್ಮಾಣದ ‘ಆಗ್’ ಸಿನೆಮಾ ಬಿಡುಗಡೆಯಾಯಿತು. ‘ಜಿಂದಾ ಹೂಂ ಇಸ್ ತರ‍್ಹಾ ಕೆ ಗಮೇ ಜಿಂದಗೀ ನಹೀ’ ಎಂದು ಮುಖೇಶ್ ದನಿ ತೆಗೆದಾಗ, ಅದು ಚಿತ್ರದ ನಾಯಕ ರಾಜ್‌ಕಪೂರ್‌ನ ಎಲ್ಲ ನಿಸ್ಸಹಾಯಕತೆ, ನಿರಾಸೆಯನ್ನು perfect ಆಗಿ ಹೊರಹಾಕಿತ್ತು. ಹಾಗೆ ೧೯೪೮ರಲ್ಲಿ ಆರಂಭವಾದ ರಾಜ್‌ಕಪೂರ್-ಮುಖೇಶ್ ಜೋಡಿಯ ಅಮೋಘ ಪಯಣ ೧೯೭೫ರ ತನಕ ಅಬಾಧಿತವಾಗಿ ಮುಂದುವರೆಯಿತು. ಆವಾರಾ, ಶ್ರೀ೪೨೦, ಪರ‍್ವರಿಷ್, ಅನಾಡಿ, ಸಂಗಮ್, ಮೇರಾ ನಾಮ್ ಜೋಕರ್, ಕಭೀ ಕಭೀ ಮುಂತಾದ ಸಿನೆಮಾಗಳಿಗೆ ಮುಖೇಶ್ ಹಾಡಿದ ಗೀತೆಗಳು ಆತನನ್ನು ಅಮರನನ್ನಾಗಿಸಿಬಿಟ್ಟವು. ಆರಂಭದಲ್ಲಿ ನೌಷಾದ್ ಮತ್ತು ಅನಿಲ್ ಬಿಸ್ವಾಸ್ ಮುಖೇಶನ ಕೈಲಿ ಅತ್ಯುತ್ತಮ ಗೀತೆಗಳನ್ನು ಹಾಡಿಸಿದರು. ಮುಂದೆ ರಾಜ್‌ಕಪೂರ್, ಮುಖೇಶ್, ಲತಾ, ಶಂಕರ್-ಜೈಕಿಶನ್, ಶೈಲೇಂದ್ರ ಮತ್ತು ಹಸರತ್ ಜೈಪುರಿ ಅವರದೊಂದು ಪಕ್ಕಾ ಟೀಮೇ ಆಗಿಹೋಯಿತು. ಆಮೇಲೆ ಲಕ್ಷ್ಮೀಕಾಂತ್-ಪ್ಯಾರೇಲಾಲ್, ಎಸ್.ಡಿ.ಬರ್ಮನ್, ಕಲ್ಯಾಣಜೀ-ಆನಂದ್‌ಜೀ, ಸಲೀಲ್ ಚೌಧುರಿ, ಉಷಾ ಖನ್ನಾ ಮುಂತಾದವರಿಗೆಲ್ಲ ಮುಖೇಶ್ ಹಾಡಿದರು. ‘ಕಹೀ ಬಾರ್ ಯೂಂಹೀ ದೇಖಾ ಹೈ’ ಅಂತ ರಜನೀಗಂಧಾ ಚಿತ್ರಕ್ಕೆ ಮುಖೇಶ್ ಹಾಡಿದಾಗ ಅದಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಮುಂದೆ ನಾಲ್ಕು ಫಿಲಂಫೇರ್ ಪ್ರಶಸ್ತಿಗಳನ್ನು ಆತ ಬಾಚಿಕೊಂಡ. ಮೇರಾ ನಾಮ್ ಜೋಕರ್ ಚಿತ್ರಕ್ಕಾಗಿ ಆತ ಹಾಡಿದ ‘ಜಾನೆ ಕಹಾಂ ಗಯೇ ವೊ ದಿನ್’ ಹಾಡನ್ನು ನಾನು ಅದೆಷ್ಟು ಸಾವಿರ ಸಲ ಕೇಳಿದ್ದೇನೋ?
ಆಗೆಲ್ಲ ಟ್ರಾನ್ಸಿಸ್ಟರ್ರೇ ನನ್ನ ಸಂಗಾತಿ. ನನ್ನ ಮನೆಯಲ್ಲಿ ಒಂದು ಕೊಳಕಾದ ಕತ್ತಲೆ ಕೋಣೆಯಿತ್ತು. ಶಾಸ್ತ್ರಕ್ಕೊಂದು ತಿಂಡಿ ಅಂತ ತಿಂದು ಕೋಣೆ ಸೇರಿಕೊಂಡು ಬಿಟ್ಟರೆ ಅದು ನನ್ನದೇ ಪ್ರಪಂಚ. ಕೆಲವು ಬಾರಿ ನಾನೇ ಚಹ ಕಾಯಿಸಿಕೊಂಡು ಕುಡಿಯುತ್ತಿದ್ದೆ. ಉಳಿದಂತೆ ಪುಸ್ತಕ, ರೇಡಿಯೋ, ಸಿಗರೇಟು, ಕಣ್ಣೀರು. ನನ್ನ ಪಾಲಿನ ಅತ್ಯಂತ ವ್ಯಾಕುಲದ ದಿನಗಳವು. ಅವತ್ತು ಬಹುಶಃ ಗಣೇಶ ಚತುರ್ಥಿ ಅಥವಾ ಅದರ ಹಿಂಚು ಮುಂಚಿನ ದಿನ. ತಾರೀಕು ೧೯೭೬ರ ಆಗಸ್ಟ್ ಇಪ್ಪತ್ತೇಳು. ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದವನು ಇದ್ದಕ್ಕಿದ್ದಂತೆ ತಣ್ಣಗಾಗಿ ಹೋದೆ. ನನ್ನ ಪರಮ ಪ್ರೀತಿಯ ಗಾಯಕ ಮುಖೇಶ್ ಅಮೆರಿಕದ ಡೆಟ್ರಾಯಿಟ್‌ನಲ್ಲಿ ತೀವ್ರವಾದ ಹೃದಯಾಘಾತದಿಂದ ತೀರಿಹೋಗಿದ್ದ. ಕಣ್ಣೀರು ತಡೆಯಲಾಗಲಿಲ್ಲ. ರೇಡಿಯೋ ಮೂಲಕ ನಾನು ಕೇಳಿದ ದುರ್ವಾರ್ತೆಗಳ ಪೈಕಿ ಅದೂ ಒಂದು. ಎರಡನೆಯದು ಶಂಕರನಾಗ್‌ನ ಸಾವು. ಅವತ್ತು ಸಂಜೆ ನಾನು-ಲಲಿತಾ ಭೇಟಿಯಾಗಿದ್ದೆವು. ಇಬ್ಬರಲ್ಲೂ ಮಾತಿರಲಿಲ್ಲ. ಅವಳಿಗೂ ಮುಖೇಶ್ ಎಂದರೆ ಎಲ್ಲಿಲ್ಲದ ಪ್ರೀತಿ. ರಾಜ್‌ಕಪೂರ್‌ನ ಸಿನೆಮಾಗಳೆಂದರೆ ಇಷ್ಟ. ಇಬ್ಬರಿಗೂ ಏನೋ ಕಳೆದುಕೊಂಡಂತಾಗಿತ್ತು. ಹತ್ತಿರದ ಬಂಧುವೊಬ್ಬ ಬಿಟ್ಟು ಹೋದ ತಬ್ಬಲಿತನ.

ಆದರೆ ಅವತ್ತಿನಿಂದಲೂ ಮುಖೇಶ್ ನನ್ನ ಒಡನಾಡಿಯಾಗೇ ಉಳಿದಿದ್ದಾನೆ. ಈ ದುಡ್ಡುಪಡ್ಡು ಬಂದ ಮೇಲೆ ತುಂಬ ಒಳ್ಳೆಯ music system ತಂದಿಟ್ಟುಕೊಂಡಿದ್ದೇನೆ. ಮುಖೇಶ್‌ನ ಅಪರೂಪದ ಹಾಡುಗಳ ಕಲೆಕ್ಷನ್ ನನ್ನಲ್ಲಿವೆ. ಇಷ್ಟೆಲ್ಲ ಆದ ಮೇಲೆ ಯಾಕೋ ಇತ್ತೀಚೆಗೊಂದು ಹುಚ್ಚು ಕೋರಿಕೆ. ಒಮ್ಮೆ ದಿಲ್ಲಿಗೆ ಹೋಗಬೇಕು. ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಹರಿದ್ವಾರದಗುಂಟ ರುದ್ರಪ್ರಯಾಗಕ್ಕೆ ಹೋಗಬೇಕು. ಅವತ್ತು ಆ ಕಾರು ನಿಂತ ಜಾಗ, ಆ ಇಳಿಜಾರು ಇನ್ನೂ ನನಗೆ ನೆನಪಿವೆ. ಒಂದು ಮಧ್ಯರಾತ್ರಿ ಅಲ್ಲಿ ಟ್ಯಾಕ್ಸಿ ನಿಲ್ಲಿಸಿ ಅದೇ ಮುಖೇಶನ ಹಾಡು ಕೇಳಿಸಿಕೊಳ್ಳಬೇಕು:
“ಅಬ್ ಚೈನ್ ಸೆ ರೆಹನೇ ದೋ
ಮೇರೇ ಪಾಸ್ ನ ಆವೋ!"
ಇಂಥ ಆಸೆಗಳನ್ನು ಈಡೇರಿಸಿಕೊಳ್ಳುವುದು ಇವತ್ತಿನ ಮಟ್ಟಿಗೆ ಕಷ್ಟವೇನಲ್ಲ. ಆದರೆ ಅದರಲ್ಲೇನಾದರೂ ಅರ್ಥವಿದೆಯೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books