Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಗಿಳಿಬಾಗಿಲಲ್ಲಿ ಕುಳಿತ ಅಳಿಲು ಮತ್ತು ಭಾಷೆ ಮರೆತವರ ಅಳಲು

“ಮಗನೇ, ನನ್ನ ಕೋಣೆಯ ಕಿಟಿಕಿಯಾಚೆ ನೋಡಿದ್ಯಾ.. ಅಳಿಲು ನಾಲ್ಕು ಮರಿ ಹಾಕಿದೆ"
“ಅಳಿಲು ಅಂದರೇನು, ಪ್ಯಾರೆಟ್ಟಾ ಡ್ಯಾಡೀ?"
“ಥೂ ನಿನ್ನ. ಅಳಿಲು ಅಂದರೆ sqirriel ಕಣೋ.."
“ಹಾಗೆ ಹೇಳು ಮತ್ತೆ, ಅಳಿಲು ಗಿಳಿಲು ಅಂದ್ರೆ ನಂಗೆ ಹ್ಯಾಗೆ ಅರ್ಥವಾಗಬೇಕು"
ಗೆಳೆಯರೊಬ್ಬರು ಈ ಪ್ರಸಂಗವನ್ನು ಹೇಳುತ್ತಾ “ನನ್ಮಗನ ಮಾತು ಕೇಳುತ್ತಿದ್ದ ಹಾಗೇ ಅದೇ ಕಿಟಿಕಿಗೆ ತಲೆ ಚಚ್ಚಿಕೊಳ್ಳೋಣ ಅನಿಸಿತು. ಅಳಿಲಿಗೆ ನೋವಾಗಬಹುದು ಅಂತ ಸುಮ್ಮನಾದೆ" ಅಂತ ಬಿದ್ದುಬಿದ್ದು ನಕ್ಕರು. ನಾನು ನಗಲಿಲ್ಲ. ಅವರದ್ದೊಂದು ವಿಚಿತ್ರ ಸಮಸ್ಯೆ. ಏಳನೇ ಕ್ಲಾಸ್ ಓದುತ್ತಿರುವ ಅವರ ಮಗನಿಗೆ ಎಲ್ಲಾ ಪ್ರಾಣಿ ಪಕ್ಷಿಗಳ ಹೆಸರುಗಳನ್ನು ಇಂಗ್ಲಿಷಲ್ಲಿ ಹೇಳಿದರಷ್ಟೇ ಅರ್ಥವಾಗುತ್ತದೆ. ಹಾಗಾಗಿ ತಾನೀಗ ಒಂದು ಕನ್ನಡ-ಇಂಗ್ಲಿಷ್ ನಿಘಂಟನ್ನು ಜೇಬಲ್ಲೇ ಇಟ್ಟುಕೊಂಡು ಮಗನ ಜೊತೆ ಮಾತಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು. ಅದರಿಂದಾಗಿ ತನ್ನ ಇಂಗ್ಲಿಷ್ ಕೂಡಾ ಸಾಕಷ್ಟು ಸುಧಾರಿಸಿದೆ ಎಂಬ ಇನ್ನೊಂದು ಪ್ರಾಕ್ಟಿಕಲ್ ಜೋಕನ್ನೂ ಮಾಡಿದರು. ಸದ್ಯ, ಅವರ ಅದೃಷ್ಟಕ್ಕೆ ಇಡ್ಲಿ-ವಡೆ-ಉಪ್ಪಿಟ್ಟಿಗೆ ಇಂಗ್ಲಿಷಲ್ಲಿ ಏನಂತಾರೆ ಅಂತ ಮಗ ಕೇಳುತ್ತಿಲ್ಲವಂತೆ!

ಮಕ್ಕಳು ಇಂಗ್ಲಿಷಲ್ಲಿ ಮಾತಾಡಿದರೆ ಅಪ್ಪ ಅಮ್ಮಂದಿರಿಗೆ ಹೆಮ್ಮೆ. ಆದರೆ ಪ್ರತಿಯೊಂದು ಕನ್ನಡ ಪದದ ಅರ್ಥವನ್ನು ಇಂಗ್ಲಿಷಲ್ಲಿ ಹೇಳು ಅಂದರೆ ಕಿರಿಕಿರಿ. ಯಾಕೆಂದರೆ ಅವರು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಗೆಳೆಯರ ಮಾತು ಕೇಳುತ್ತಿದ್ದಂತೆ ನನಗೆ ನನ್ನ ಬಾಲ್ಯದ ನೆನಪಾಯಿತು. ಆಗ sqirriel ಅಂದರೆ ಏನು ಅಂತ ನನ್ನಮ್ಮನನ್ನು ನಾನು ಕೇಳಿದ್ದೆ. ಹಾಗೆಂದರೆ ಅಳಿಲು ಅಂತ ಆಕೆ ಹೇಳಿದಾಕ್ಷಣ ನನಗೆ ಚಿಂವ್ ಚಿಂವ್ ಅಂತ ಅಳಿಲು ಮಾಡುವ ಸದ್ದು ನೆನಪಾಗಿತ್ತು, ಅದು ಅಳಿಲಿನ ಭಾಷೆ. ಪ್ರಾಣಿಪಕ್ಷಿಗಳಿಗೂ ಒಂದು ಭಾಷೆ ಇರುತ್ತದೆ, ಆ ಮೂಲಕವೇ ಅವುಗಳ ನಡುವೆ ಸಂವಹನ ಕ್ರಿಯೆ ನಡೆಯುತ್ತದೆ. ಪ್ರೀತಿಗೊಂದು ಸಂದೇಶ, ಸಿಟ್ಟಿಗೊಂದು ಧ್ವನಿ, ಜಗಳಕ್ಕೊಂದು ಸದ್ದು. ಇವ್ಯಾವುದರ ಅಗತ್ಯವಿಲ್ಲದೇ ನಡೆಯುವ ಕ್ರಿಯೆಗೊಂದು ಬಾಡಿ ಲಾಂಗ್ವೇಜು. ಆದರೆ ಮನುಷ್ಯರು ಆಡುವ ಭಾಷೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಕನ್ನಡ ನನ್ನ ಭಾಷೆ. ನನ್ನ ನಾಯಿಯನ್ನು ಕೂಡಾ ಕನ್ನಡದಲ್ಲೇ ಮಾತಾಡಿಸುತ್ತೇನೆ. ನಾಯಿಗೆ ಅದು ಅರ್ಥವಾಗುತ್ತೋ ಬಿಡುತ್ತೋ, ನನ್ನ ಮನಸ್ಸಿಗೇನೋ ಸಮಾಧಾನ. ಸಿಟ್ಟು ಬಂದರೆ ಮೊದಲು ಬಾಯಲ್ಲಿ ಬರುವುದು ಅವಿವೇಕಿ ಅನ್ನುವ ಪದ, ರಾಸ್ಕಲ್ ಅನ್ನುವುದು ಆಮೇಲೆ.

ನಿಮಗೆ ತಿಳಿದಿರುವ ಹಾಗೆ ಭಾಷೆಗೊಂದು ಚಿತ್ರಕಶಕ್ತಿಯೂ ಇರುತ್ತದೆ. ಬೆಕ್ಕು ಅನ್ನುವಲ್ಲಿಗೆ ನಮ್ಮ ಮನಸ್ಸು ಸುಮ್ಮನಾಗುವುದಿಲ್ಲ. ಬೆಕ್ಕಿನ ಹಾವಭಾವ, ಬೆಕ್ಕಿನ ನಡಿಗೆ, ಮ್ಯಾಂವ್ ಮ್ಯಾಂವ್ ಅನ್ನುವ ಧ್ವನಿ ಎಲ್ಲವೂ ಒಂದರ ಹಿಂದೊಂದರಂತೆ ಮನಸ್ಸಿನ ಕಿಟಿಕಿ ಮುಂದೆ ಮೆರವಣಿಗೆ ಹೊರಡುತ್ತವೆ. ಕವಿಯ ಕಣ್ಣಿಗೆ ಬೆಕ್ಕು ಅನ್ನುವುದು ಸದ್ದು ಮಾಡದೇ ತನ್ನ ಕೆಲಸ ಮುಗಿಸುವ ಕುತಂತ್ರಿಯ ಥರ ಕಾಣಿಸಬಹುದು, ಮನೆಯೊಡತಿಗೆ ಅದು ಇಲಿಗಳನ್ನು ತಿಂದು ಮನೆಗುಪಕರಿಸುವ ಒಳ್ಳೆಯ ಪ್ರಾಣಿ, ಮಕ್ಕಳಿಗೆ ಮುದ್ದು ಮಾಡುವುದಕ್ಕೊಂದು ನೆಪಮಾತ್ರ ಜೀವಿ -ಹೀಗೇ ಅವರವರ ಭಾವಕ್ಕೆ ತಕ್ಕಂತೆ ಒಂದು ವಸ್ತು, ಪ್ರಾಣಿ ಅಥವಾ ಪಕ್ಷಿ ಬಹುರೂಪಿಯಾಗುತ್ತಾ ಹೋಗುತ್ತದೆ. ಅದನ್ನು ಕಲ್ಪನಾಶಕ್ತಿ ಅನ್ನುತ್ತೀರೋ ಅಥವಾ ಒಂದು ಚಿಂತನೆಯ ವಿಸ್ತಾರ ಎಂದು ಕರೆಯುತ್ತೀರೋ ಅನ್ನುವುದು ನಿಮಗೆ ಬಿಟ್ಟಿದ್ದು.

ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳು ಈ ಸುಖದಿಂದ ವಂಚಿತರಾಗುತ್ತಾರೇನೋ ಅನ್ನುವ ಆತಂಕ ನನ್ನದು. ಯಾಕೆಂದರೆ ಬೆಕ್ಕನ್ನು ಕ್ಯಾಟ್ ಎಂದು ನೀವು ಅನುವಾದಿಸಿ ಅದರ ಮನಸ್ಸೊಳಗೆ ತುಂಬಿದ ತಕ್ಷಣ ಮಗು ಸುಮ್ಮನಾಗುತ್ತದೆ. ಅದಕ್ಕೆ ಮಿಕ್ಕಿದ್ದೇನೂ ಹೊಳೆಯುವುದಿಲ್ಲ. ಆ ಕ್ಷಣಕ್ಕೆ ಮಗುವಿನ ಮನಸ್ಸಲ್ಲಿ ಒಂದು ಬೆಕ್ಕಿನ ಚಿತ್ರ ಸ್ಥಾಪಿತವಾಗಬಹುದು, ಮೊಬೈಲಲ್ಲಿ ತೆಗೆದ ಫೊಟೋದಂತೆ. ಅದರ ಥಾಟ್ ಪ್ರೊಸೆಸ್ ಥೇಟು ಫೊಟೋದಂತೆಯೇ ಅಲ್ಲಿಗೇ ಸ್ಟಿಲ್ ಆಗುತ್ತದೆ. ಅಬ್ಬಬ್ಬಾ ಅಂದರೆ ಕ್ಯಾಟ್‌ವಾಕ್ ಅನ್ನುವ ಪದ ನೆನಪಾದೀತು. ಚಂದಮಾಮನ ಕತೆ ಹೇಳಿದರೆ ಮಕ್ಕಳೀಗ ನಿದ್ದೆ ಮಾಡುವುದಿಲ್ಲ, ಅಷ್ಟೇಕೆ ಹ್ಯಾರಿ ಪಾಟರ್ ಪುಸ್ತಕವನ್ನೂ ಅವರೀಗ ಓದುವುದಿಲ್ಲ, ಆ ಸಿನೆಮಾಗಳನ್ನು ನೋಡುವುದೂ ಕಡಿಮೆಯಾಗಿದೆ. ಅವರ ಲೋಕವನ್ನೀಗ ಆವರಿಸಿರುವುದು angry bird, temple tomನಂಥಾ ಮೊಬೈಲ್ ಆಟಗಳು. ನಮ್ಮಜ್ಜಿ ನಮಗೆ ಹೇಳಿದ ಕತೆಗಳಿಗೆ ಈಗ ವಯಸ್ಸಾಗಿವೆ, ಅವುಗಳನ್ನು ಕೇಳುವವರಿಲ್ಲದೇ ನಾವೇ ಮರೆಯುತ್ತಿದ್ದೇವೆ.

ಪರೀಕ್ಷೆಗಳು ಮತ್ತು ಅಡ್ಮಿಷನ್ ಇವೆರಡೂ ಒಂದಕ್ಕೊಂದು ಡಿಕ್ಕಿ ಹೊಡೆಯುವ ಕಾಲ ಇದು. ಎಸ್ಸೆಸ್ಸೆಲ್ಸಿ ಓದುವ ಮಕ್ಕಳಿಗೆ ಪರೀಕ್ಷೆಯ ಟೆನ್ಷನ್, ಇನ್ನೂ ನಾಲ್ಕು ವರ್ಷ ದಾಟದ ಮಕ್ಕಳ ಅಪ್ಪ ಅಮ್ಮಂದಿರಿಗೆ ಸೀಟು ಹುಡುಕುವ ಟೆನ್ಷನ್. ಫೆಬ್ರವರಿಯಲ್ಲಿರುವುದು ಇಪ್ಪತ್ತೆಂಟೇ ದಿನ. ಕನ್ನಡ ಮೀಡಿಯಂನಲ್ಲಿ ಮಕ್ಕಳನ್ನು ಓದಿಸಿದರೆ ಅವರಿಗೆ ಭವಿಷ್ಯವಿಲ್ಲ ಅಂತ ಸಿಟಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಹೆಣ್ಮಗಳೂ ಹೇಳುತ್ತಾಳೆ. ಹಾಗಾಗಿ ಎಲ್ಲರೂ ಇಂಗ್ಲಿಷಲ್ಲಿ ಓದುತ್ತಾರೆ. ಇಂಗ್ಲಿಷಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದಕ್ಕೆ ಹೆಣಗುತ್ತಾರೆ. ಇಂಗ್ಲೆಂಡಿನ ಯಾವುದೋ ಮೂಲೆಯಲ್ಲಿ ಕುಳಿತು ಬರೆಯುವ ಸಾಹಿತಿಯ ಪುಸ್ತಕಗಳು ಇವರಿಗೆ ಭಾಷೆಯ ಕಾರಣಕ್ಕೆ ಅರ್ಥವಾದೀತು, ಆದರೆ ಅಲ್ಲಿಯ ವಾತಾವರಣ, ಸಂಸ್ಕೃತಿಯನ್ನು ಕಣ್ಣ ಮುಂದೆ ತಂದುಕೊಳ್ಳುವುದು ಕಷ್ಟವಾಗುತ್ತದೆ. ನಾವು ನೀವೆಲ್ಲಾ ತರಾಸು, ಅನಕೃ, ತ್ರಿವೇಣಿ, ಇಂದಿರಾ ಅವರ ಕಾದಂಬರಿಗಳನ್ನು ಓದುತ್ತಾ ಬೆಳೆದವರು. ಬುದ್ದಿಭಾವ ಬಲಿಯುತ್ತಿದ್ದಂತೆಯೇ ಅನಂತಮೂರ್ತಿ, ಭೈರಪ್ಪನವರ ಕಾದಂಬರಿಗಳತ್ತ ಹೊರಳಿದವರು. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಆ ಮಹಾನುಭಾವರ ಕಾಣಿಕೆ ದೊಡ್ಡದು. ನೀನು ಚೆನ್ನಾಗಿ ಬರೀತಿ ಕಣಯ್ಯಾ ಅಂತ ಯಾರಾದರೂ ಪ್ರೀತಿಯಿಂದ ಬೆನ್ನು ಚಪ್ಪರಿಸಿದರೆ ನನಗೆ ನನ್ನ ಪ್ರೈಮರಿ ಶಾಲೆಯ ಮೇಷ್ಟ್ರುಗಳು ಮತ್ತು ಕನ್ನಡದ ಸಾಹಿತಿಗಳೂ ನೆನಪಾಗುತ್ತಾರೆ. ಆದರೆ ನಮ್ಮ ಮಕ್ಕಳಿಗೆ ಆ ಭಾಗ್ಯವಿಲ್ಲ. ಅವರು ಇಂಗ್ಲಿಷಲ್ಲಿ ಸಲೀಸಾಗಿ ಮಾತಾಡಬಲ್ಲರು, ಆದರೆ ಅಷ್ಟೇ ಸಲೀಸಾಗಿ ಬರೆಯುವುದಕ್ಕಾಗುವುದಿಲ್ಲ, ಯಾಕೆಂದರೆ ಒಂದು ಭಾಷೆಯನ್ನು ಹೊಸದಾಗಿ ಕಲಿತ ಮಾತ್ರಕ್ಕೆ ಆ ಭಾಷೆ ಪ್ರತಿನಿಧಿಸುವ ದೇಶದ ಸಂಸ್ಕೃತಿಯನ್ನು ನಮ್ಮೊಳಗೆ ಅವಾಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಂಗ್ಲಿಷಲ್ಲಿ ಬರೆಯುವ ಭಾರತೀಯ ಲೇಖಕರಿಗೂ ಇದೇ ಮಾತು ಅನ್ವಯವಾಗುತ್ತದೆ. ತಮ್ಮ ಭಾವನೆಗಳನ್ನು, ಸಂವೇದನೆಗಳನ್ನು ತಮಗೆ ಒಗ್ಗದ ಭಾಷೆಗೆ ಅನುವಾದಿಸಿ ಬರೆದಂತಿರುತ್ತವೆ ಆ ಕೃತಿಗಳು. ಆರ್.ಕೆ.ನಾರಾಯಣ್, ಖುಷ್ವಂತ್ ಸಿಂಗ್, ಮಳಗಾಂವ್ಕರ್ ಥರದ ಒಂದಿಬ್ಬರು ಈ ಮಾತಿಗೆ ಅಪವಾದವಾಗಿರಬಹುದು.
ಕನ್ನಡ ಭಾಷೆ ಬಾರದೇ ಇರುವವರ ಜೊತೆ ಮಾತಾಡುವಾಗ ನನಗೂ ಇಂಥಾ ಸಮಸ್ಯೆಗಳು ಕಾಡಿದ್ದುಂಟು. ಯಾಕೆಂದರೆ ನಾನೇನು ಹೇಳಬೇಕೋ ಆ ವಾಕ್ಯ ಮೊದಲು ನನ್ನೊಳಗೆ ಕನ್ನಡದಲ್ಲಿ ಮೂಡುತ್ತದೆ. ನಂತರ ಅದನ್ನು ಮನಸ್ಸೊಳಗೇ ಇಂಗ್ಲಿಷಿಗೆ ಅನುವಾದಿಸಿ ನಂತರ ಮಾತಿಗಿಳಿಸಬೇಕು. ಇದೊಂಥರ ಡಬ್ಬಲ್ ವರ್ಕ್. ಒಂದು ಭಾಷೆಯ ಮೇಲೆ ನಿಮಗೆ ಹಿಡಿತವಿದ್ದಾಗ ಅದರಿಂದ ಸಿಗುವ ಅನುಕೂಲಗಳಿಗೆ ಎಣೆಯೇ ಇಲ್ಲ. ಶೃಂಗೇರಿಯ ದೇವಸ್ಥಾನದ ರಸ್ತೆಯಲ್ಲಿ ಉಪ್ಪಿನಕಾಯಿ ಮಾರುವ ಮುದುಕರೊಬ್ಬರು ಎಂಥಾ ಸೊಗಸಾದ ಕನ್ನಡ ಮಾತಾಡುತ್ತಾರೆಂದರೆ ಆ ಕಾರಣಕ್ಕೇ ಅವರು ತಯಾರಿಸಿದ ಕೆಟ್ಟ ಉಪ್ಪಿನಕಾಯಿ ಮತ್ತು ನಿಂಬೆಹಣ್ಣಿನ ತೊಕ್ಕನ್ನು ನೀವು ಖರೀದಿಸುತ್ತೀರಿ.

ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಒಂದಿಷ್ಟು ಮುಸ್ಲಿಂ ಹುಡುಗರಿಗೆ ಟ್ಯೂಷನ್ ಹೇಳುತ್ತಿದ್ದೆ. ಅವರಿಗೆ ಕನ್ನಡ ಬರುತ್ತಿರಲಿಲ್ಲ, ನನ್ನ ಇಂಗ್ಲಿಷ್ ಸುಮಾರು. ಹೀಗಾಗಿ ನಾನು ಹೇಳಿದ್ದು ಅವರಿಗೆ ಎಷ್ಟರಮಟ್ಟಿಗೆ ಅರ್ಥವಾಗುತ್ತಿತ್ತೋ ಆ ಅಲ್ಲಾಹುವೇ ಬಲ್ಲ. ಈಗ ಅವರೆಲ್ಲಾ ಬೆಳೆದು ದೊಡ್ಡವರಾಗಿ ಒಳ್ಳೊಳ್ಳೇ ನೌಕರಿಯಲ್ಲಿದ್ದಾರೆ. ನಾನು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಬಳಿ ಟ್ಯೂಷನ್ ಹೇಳಿಸಿಕೊಳ್ಳುತ್ತಿದ್ದೇನೆ. ಅದು ಇಂಗ್ಲಿಷ್ ಅಥವಾ ಇನ್ಯಾವುದೋ ಭಾಷೆಯ ಕಲಿಕೆ ಅಲ್ಲ. ಮೊಬೈಲು, ಕಂಪ್ಯೂಟರ್, ಐಪಾಡ್ ಮೊದಲಾದ ಉಪಕರಣಗಳು ಆಡುವ ಭಾಷೆ. ತಮ್ಮ ಚಿಂತನೆಗಳನ್ನು ಬಿಳಿಹಾಳೆಗೆ ಡೌನ್‌ಲೋಡ್ ಮಾಡಿಕೊಳ್ಳುವ ಯುವ ಲೇಖಕರ ಮಧ್ಯೆ ನಾನು ಮಾತ್ರ ಪೆನ್ನು ಮತ್ತು ಹಾಳೆಯನ್ನೇ ನೆಚ್ಚಿಕೊಂಡಿದ್ದೇನೆ. ನಾನೇನೇ ಬರೆದರೂ ಇದು ನನ್ನದೇ ಸೃಷ್ಟಿ, ಇದರ ಮಾಲೀಕ ನಾನೇ ಅನ್ನುವ ಹೆಮ್ಮೆ ಜೊತೆಗಿರುತ್ತದೆ.

ಯಾಕೆಂದರೆ ಅಕ್ಷರಗಳು ತೆರೆಯ ಮೇಲೆ ಮೂಡುವುದಕ್ಕಿಂತ, ಹಾಳೆಯ ಮೇಲೆ ಅರಳುವಾಗ ನೀಡುವ ಸುಖವೇ ನನ್ನ ಪಾಲಿಗೆ ದೊಡ್ಡದು. ತನ್ನ ಮಕ್ಕಳಿಗೆ ತಾಯಿ ಅಳಿಲು ಭಾಷೆ ಕಲಿಸಿಕೊಡುವುದನ್ನು ನೋಡುತ್ತಿರುವ ಹೊತ್ತಿಗೆ ಈ ಪುಟ್ಟ ಟಿಪ್ಪಣಿ ಬರೆಯಬೇಕು ಅನಿಸಿತು. ಈಗ ಮನಸ್ಸು ಚಿಂವ್ ಚಿಂವ್ ಅನ್ನುತ್ತಿದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 March, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books