Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ತೆರೆದಿಟ್ಟರೆ ಅದು ಸ್ಖಲನ; ಮುಚ್ಚಿಟ್ಟರೆ ಮುಷ್ಠಿ ಮೈಥುನ...

ನಾನು ಪದೇಪದೇ ಯೋಚಿಸುತ್ತೇನೆ.
ನನಗೇಕೆ ಹೀಗಾಗುತ್ತದೆ. ನನಗೇ ಏಕೆ ಹೀಗಾಗುತ್ತದೆ.I am happy. ನನ್ನ ಬದುಕು ಸದಾ eventful. ಪ್ರತಿನಿತ್ಯ ಒಂದು ಕನಸಿನೊಂದಿಗೆ ಎದ್ದೇಳುತ್ತೇನೆ. ಅದರ ಸಾಕಾರಕ್ಕಾಗಿ ರಾತ್ರಿ ದಿಂಬಿಗೆ ತಲೆ ಚೆಲ್ಲುವ ತನಕ ಪ್ರಯತ್ನಿಸುತ್ತೇನೆ. ಇದು ಯಾವ ಗುರುವೂ ಕಲಿಸಿದ ಪಾಠವಲ್ಲ. ಇದು ಬದುಕು ಎಂಬ ಗುರುವು ಕಲಿಸಿದ ಪಾಠ. ಕೊಟ್ಟ ಜೀವನ ಪರ್ಯಂತದ home work. ನನಗೆ ಎರಡು ತರಹದ ಕನಸುಗಳಿವೆ. ಒಂದು short term ಕನಸು. ಇನ್ನೊಂದು long term ಕನಸು. ನಾನು ಇಡುವ ಪ್ರತಿ ಹೆಜ್ಜೆಯೂ ಆ ಕನಸಿನೆಡೆಗೆ ಮತ್ತು ಅದರ ಸಾಕಾರಕ್ಕೆ ಸಫಲವಾಗುತ್ತಿದೆಯಾ ಎಂದು ಪ್ರತಿ ನಿಮಿಷ ಯೋಚಿಸುತ್ತಿರುತ್ತೇನೆ. ಉದ್ದೇಶವಿಷ್ಟೇ, ನಮ್ಮ ಪ್ರತಿ ಜನ್ಮದಿನ ನಾವು ಕೇಳಿಕೊಳ್ಳಬಹುದಾದ ಒಂದೇ ಪ್ರಶ್ನೆ ಹಿಂದಿನ ವರ್ಷಕ್ಕಿಂತ ಈ ವರ್ಷ ಚೆನ್ನಾಗಿತ್ತಾ? ಹರುಷವಾಗಿತ್ತಾ? ಸಫಲವಾಗಿತ್ತಾ? ನಾವು ಅಂದುಕೊಂಡಿದ್ದು ಆಯ್ತಾ? ಇದನ್ನು ಮಾಡದೆ ಹ್ಯಾಪಿ ನ್ಯೂ ಇಯರ್, ಹ್ಯಾಪಿ ವ್ಯಾಲೆಂಟೈನ್ಸ್ ಡೇ, ಹ್ಯಾಪಿ ಬರ್ತ್ ಡೇ ಎಂಬ ಮೆಸೇಜ್‌ಗಳಿಗೆ ಅರ್ಥವೂ ಇಲ್ಲ. ಅವು ವ್ಯರ್ಥ ಕಮರ್ಷಿಯಲ್ ಪ್ರಶ್ನೆಗಳು.

ನಾನು ಯಾರಿಗೂ ಬರ್ತ್ ಡೇ ವಿಶ್ ಮಾಡುವುದಿಲ್ಲ. ನನ್ನ ಮೊಮ್ಮಕ್ಕಳ ಡೇಟ್ ಆಫ್ ಬರ್ತ್ ನನಗೆ ನೆನಪಿಲ್ಲ. ಚೇತನಾಳದು ಬಿಟ್ಟರೆ ನನಗೆ ಇನ್ನಿತರ ಮಕ್ಕಳ ಜನ್ಮ ದಿನಗಳು ಜ್ಞಾಪಕವಿಲ್ಲ. ಬಹುಶಃ ನಾನು ಚೇತನಾಳ ಜಾತಕವನ್ನೂ ಬರೆಸಿಲ್ಲ. ಉಳಿದಂತೆ ಭಾವನಾ, ಕರ್ಣ ಮತ್ತು ಹಿಮವಂತನ ಜಾತಕಗಳನ್ನು ಅವರ ತಾಯಂದಿರು ಬರೆಸಿದ್ದಿರಬಹುದು. ನನಗೂ ಅದಕ್ಕೂ ಸಂಬಂಧವಿಲ್ಲ. ಅನೇಕರ ಜಾತಕಗಳನ್ನು ಬಲ್ಲ ನನಗೆ ನನ್ನ ಜಾತಕದ ಅವಶ್ಯಕತೆ ಇಲ್ಲ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿ ಬೆಟಗೇರಿ ಎಂಬುವವರೊಬ್ಬರಿದ್ದರು. ಅವರು ಜಾತಕ ಪಂಡಿತರು. ಅವರನ್ನು ಕೇಳಿದೆ “ಏಳರಾಟ ಶನಿ ಅಂದರೆ ಸಾಡೇಸಾತಿ ಎಂದರೆ ಏನು?" ಅವರು ಹೇಳಿದರು, “ಜೀವನದಲ್ಲಿ ಮೂರು ಸಲ ಶನಿ ಪ್ರವೇಶವಾಗುತ್ತದೆ. ಮೊದಲನೆಯದು ಬಾಲ್ಯದಲ್ಲಿ ನಮಗೆ ಗೊತ್ತಾಗದಂತೆ ಕಳೆದು ಹೋಗುತ್ತದೆ. ಎರಡನೆಯದು ಮಧ್ಯವಯಸ್ಕ ಸಾಡೇಸಾತಿ. ಅದು ಬಂದಾಗ ದುಡ್ಡು, ಕೀರ್ತಿ, ಸಂತಸ, ಸಂಪತ್ತು ಎಲ್ಲವೂ ನಾಶವಾಗಿ ಹೋಗುತ್ತದೆ. ನೀನು ಸಾಕಿದ ನಾಯಿ ಕೂಡ ಸುಖವಾಗಿ ಬದುಕುವುದಿಲ್ಲ" ಎಂದರು. ಆಮೇಲೆ ಏನಾಗುತ್ತದೆ ಎಂದು ಕೇಳಿದೆ. “ಶನಿ ಹೋಗುವಾಗ ತಾನು ದೋಚಿದ್ದನ್ನಲ್ಲದೇ ಎಲ್ಲವನ್ನೂ ನಿನಗೆ ಅಭಿಷೇಕ ಮಾಡಿ ಹೋಗುತ್ತಾನೆ, ನೀನು ನಿರೀಕ್ಷಿಸದೇ ಇದ್ದ ಪ್ರತಿಯೊಂದನ್ನೂ ನಿನಗೆ ಕೊಟ್ಟು ಹೋಗುತ್ತಾನೆ. ನಿನ್ನ ಹಣ, ನಿನ್ನ ಗೌರವ, ನಿನ್ನ ತಾಕತ್ತು, ನಿನ್ನ ಕಳತ್ರ (ವಿವಾಹ ಯೋಗ) ಎಲ್ಲವನ್ನೂ ನಿನಗೆ ದ್ವಿಗುಣಗೊಳಿಸಿ ಹೋಗುತ್ತಾನೆ. ಈಗ ನಿನಗೆ ಏಳರಾಟ ಶನಿ ನಡೆದಿದೆ. ನೀನು ಏನು ಮಾಡಿದರೂ ವ್ಯರ್ಥ. ಇದು ಮುಗಿಯುವುದು ಇಂತಹ ದಿನ, ಇಂತಹ ತಾರೀಖು ಮತ್ತು ಇಂತಹ ವರ್ಷಕ್ಕೆ" ಅಂದರು.

ಸಿಗರೇಟಿನ ಕೊನೆಯ ಜುರುಕಿ ಎಳೆದು ನಿಮಗಿಂತ ದೊಡ್ಡ ಶನಿ ಇಲ್ಲ ಎಂದು ಹೇಳಿ ಎದ್ದುಬಿಟ್ಟೆ. ಆದರೆ, ನನಗೆ ಅವರು ಕೊಟ್ಟ ದಿನಾಂಕ ಮತ್ತು ವರ್ಷದ ನೆನಪಿದೆ. ನನ್ನದು elephantine memory. ನನಗೆ ಬದುಕು ನೀಡಿದ ಮೂರು ವರಗಳೆಂದರೆ ನೆನಪಿನ ಶಕ್ತಿ, ಜೀರ್ಣಶಕ್ತಿ ಮತ್ತು ಧ್ವಜಶಕ್ತಿ. ಪ್ರಶ್ನಿಸಿಕೊಂಡಾಗ ಏಳರಾಟದ ಶನಿ ಬಿಟ್ಟು ಹೋಯಿತು ಎಂದ ದಿನ ನನಗೆ ನೌಕರಿ ಸಿಕ್ಕಿತ್ತು. ಹುದ್ದೆ ಸಿಕ್ಕಿತ್ತು. ಆನಂತರ ಬಂದಿದ್ದು ನನ್ನ ಪಾಲಿನ ಕಲ್ಪವೃಕ್ಷವಾದ “ಹಾಯ್ ಬೆಂಗಳೂರ್!" ಮುಂದೆ ನಿಮಗೆ ಗೊತ್ತೇ ಇದೆ. ನೀವೆಲ್ಲಾ ಸಿಕ್ಕಿದಿರಿ. ಬದುಕು ನನಗೆ ಕರುಣಿಸಿದ್ದು ಕೇವಲ ಅಮ್ಮನನ್ನು. ಅಪ್ಪ, ನನ್ನ ಪಾಲಿಗೆ ಫೊಟೋ ಕೂಡ ಅಲ್ಲ. ಆತನ ಫೊಟೋ ನನಗೆ ಸಿಕ್ಕಿದ್ದು ನನ್ನ ಐವತ್ತನೆಯ ವಯಸ್ಸಿನಲ್ಲಿ. ಆ ದುಷ್ಟ ಬದುಕು ಅಮ್ಮನನ್ನು ಕಿತ್ತುಕೊಂಡಿತು. ಅವು ಏಳರಾಟದ ಶನಿಯ ದಿನಗಳು. ಈಗ ನೋಡಿ, ಕರ್ನಾಟಕದ ಕೆಲವು ಕೋಟಿ ತಾಯಂದಿರು, ಕೆಲವು ಕೋಟಿ ತಂಗಿಯರು, ಅಕ್ಕಂದಿರು, ಮಕ್ಕಳು ನನಗೆ ಸಿಕ್ಕಿದ್ದಾರೆ. ಆ ಸುಡುಗಾಡು ಶನಿಗೆ ಒಂದು ದೀರ್ಘದಂಡ ನಮಸ್ಕಾರ. ಅವನು ದುಡ್ಡು, ಕೀರ್ತಿ, ಖ್ಯಾತಿ ಎಲ್ಲವನ್ನೂ ಕೊಟ್ಟು ಹೋದ. ನನಗೆ ಬುದ್ಧಿ ಕೊಟ್ಟಿದ್ದರೆ ಆತನಿಗೆ ಋಣಿಯಾಗಿರುತ್ತಿದ್ದೆ. ಪಾಪ, ಅದನ್ನು ಬುಧನಿಗೆ hand over ಮಾಡಿ ಕಳ್ಳನಂತೆ ದಾರಿ ತಪ್ಪಿಸಿಕೊಂಡ. ಬುಧ ನನ್ನ ಆಳುವ ಗ್ರಹ. ಆದರೆ ಪತ್ರಕರ್ತ, ಫೊಟೋಗ್ರಾಫರ್, ಲಿಪಿಕಾರ, ಚಿತ್ರಕಾರ, ಕೆಮೆರಾಮನ್, ಶಿಲ್ಪಿ ಇವರೆಲ್ಲರನ್ನೂ ಆಳುವವನು ಶನಿ. ಅದು ನನ್ನ ಬದುಕಿನ ಗ್ರಹಿಕೆಗೆ ಬಂದ ಅನುಭವ.

ತುಂಬಾ ಸಲ ಬರೆದಿದ್ದೇನೆ. ಬೆಂಗಳೂರಿಗೆ ಬಂದಾಗ ನನ್ನ ಜೇಬಿನಲ್ಲಿ ಇದ್ದದ್ದು ಮುನ್ನೂರಾ ಎಂಬತ್ತು ರುಪಾಯಿ. ಇವತ್ತು ನನ್ನ ‘ಪ್ರಾರ್ಥನಾ’ ಶಾಲೆಯ ಕಿಮ್ಮತ್ತು ಕನಿಷ್ಠ ಐದು ಕೋಟಿ. ದುಡ್ಡಿನಿಂದ ಯಾರು ದೊಡ್ಡವರಾಗುವುದಿಲ್ಲ. ಗಳಿಸಿದ್ದು ಹೇಗೆ ಎಂಬುದು ಮುಖ್ಯ ವಿಚಾರ. ನನ್ನ ಹೆಂಡತಿಯ ಕೈಗೆ ನನ್ನ ಒಂದು ವಾರದ ಗಳಿಕೆಯ ಹಣ ಕೊಡುವಾಗ ನನ್ನ ಕೈಗಳು ನಡುಗಬಾರದು. ಇದು ನನ್ನ ಜೀವನದ ಸಿದ್ಧಾಂತ. ಯಾರೋ ಕೊಟ್ಟ ಹಣದಲ್ಲಿ ನನ್ನ ಹೆಂಡತಿಗೆ ಸೀರೆ ಕೊಡಿಸಿದರೆ ಅದೇ ಹಾದರ. ಆ ಕೆಲಸವನ್ನು ನಾನು ಇವತ್ತಿಗೂ ಮಾಡಿಲ್ಲ. ಅವಳಲ್ಲಿ ನನ್ನ ಅಂದಾಜಿನ ಪ್ರಕಾರ ಐನೂರು ಸೀರೆಗಳಿವೆ. ಆದರೆ, ನಾನು ಮದುವೆಗೆ ಮುಂಚೆ ಕೊಡಿಸಿದ ಎಂಬತ್ತು ರುಪಾಯಿಯ chicken print ಸೀರೆ ಅದು ಇವತ್ತಿಗೂ ಅವಳ ಪಾಲಿಗೆ ಅಷ್ಟಾಭರಣ. ನನ್ನ ಇಬ್ಬರು ಪತ್ನಿಯರು ನನ್ನನ್ನು corrupt ಆಗಲು ಬಿಡಲಿಲ್ಲ. ದುಡ್ಡಿಲ್ಲದಾಗ, ಗತಿಯಿಲ್ಲದಾಗ, ದಿಕ್ಕಿಲ್ಲದಾಗ ಸಾಕಿದರು, ಸಲುಹಿದರು. ಅವರ ಋಣ ಹೇಗೆ ಸಂದಾಯ ಮಾಡಲಿ. ನಾನು maverick ಅಲೆಮಾರಿ. ಕಂಡ ಪ್ರತಿ ಮುಖಗಳಲ್ಲೂ ಅಮ್ಮನನ್ನು ಹುಡುಕಿದ್ದೇನೆ. ಅದೃಷ್ಟವಿತ್ತು, ಕೆಲವರಲ್ಲಿ ಅಮ್ಮ ಕಂಡಳು. ಯಶೋಮತಿ ಪತ್ನಿಯಾದಳು. ನಾನು ಯಾವುದೇ ಫ್ರೇಮ್ ಅಂದರೆ ಚೌಕಟ್ಟಿಗೆ ಸಿಕ್ಕದ ಮನುಷ್ಯ. ಅವರು ಕೂಡ ಅದನ್ನು ಅರ್ಥ ಮಾಡಿಕೊಂಡಿದ್ದಾರೆ. ಟೀವಿ ೯ನ ಚಕ್ರವ್ಯೂಹದಲ್ಲಿ ಲಕ್ಷ್ಮಣ ಹೂಗಾರ ಕೇಳಿದ “ಹಾಗಾದರೆ ನಿಮಗೆ ಎಷ್ಟು ಜನ ಹೆಂಡ್ರು" ಅಂದ. ಆ ಪ್ರಶ್ನೆಯೇ ಅಭಾಸ. ಹೆಂಡ್ರು ಎಂಬ ಶಬ್ದ feudal ದೊರೆಗಳ ಕಾಲದಿಂದ ಬಂದಿದ್ದು. ಶ್ರೀರಾಮಚಂದ್ರ ಏಕಪತ್ನಿ ವ್ರತಸ್ಥ. ಅವನಿಗೆ ನಮಸ್ಕಾರ. ಕೃಷ್ಣದೇವರಾಯ ಇಬ್ಬರು ಹೆಂಡಿರ ಗಂಡ. Come on, ನೀವು ಯಾವುದನ್ನು ಒಪ್ಪಿಕೊಳ್ಳುತ್ತೀರಿ. “ರಾಜಾ ಬಹುಪತ್ನಿ ವಲ್ಲಭ" ಎಂಬುದು ನಾಣ್ನುಡಿಯೋ, ಮೂರ್ಖತನದ ಗಾದೆಯೋ. ಅರಸೊತ್ತಿಗೆಯ ಆಳ್ತನವೋ ನನಗೆ ಗೊತ್ತಿಲ್ಲ.

ಆದರೆ, ಮನುಷ್ಯ ಮಾನಸಿಕವಾಗಿ ಏಕಪತ್ನಿ ವ್ರತಸ್ಥ. ಗೆಳತಿಯರು ಸಾವಿರ ಮಂದಿ ಇರಲಿ, ಮನೋನಿಷ್ಠೆ ಒಬ್ಬರಿಗೆ. ಕೇವಲ ಒಬ್ಬರಿಗೆ. ಗಂಡಸು ಅಥವಾ ಹೆಂಗಸು ತನ್ನನ್ನು ತಾನು ನಿಗ್ರಹಿಸಿಕೊಳ್ಳಬೇಕು. ಮೂಡಿದ ಪ್ರೀತಿ ವಿಗ್ರಹವಾಗಬೇಕು. ಅದು ಮನಸ್ಸಿನ ಗರ್ಭಗುಡಿಯಲ್ಲಿ ಸ್ಥಾಪಿತವಾದ ಶಾಶ್ವತಮೂರ್ತಿ. ಉತ್ಸವ ಮೂರ್ತಿಗಳು ಇರುತ್ತವೆ, ಬರುತ್ತವೆ. ಬಂದು ಹೋಗುತ್ತವೆ. ಅಲ್ಲಿಗೆ ನಶಿಸುತ್ತವೆ. ವಿಗ್ರಹಮೂರ್ತಿ ಸ್ವಯಂಪ್ರಭೆಯಿಂದ ಸ್ಥಾಪಿತವಾಗಿ ಮೌನವಾಗಿ ಎಲ್ಲವನ್ನೂ ನೋಡುತ್ತಾ, ಕಾಣುತ್ತಾ ತನ್ನ ಚಿದ್ವಿಲಾಸದ ನಗೆಯನ್ನು ನಗುತ್ತಿರುತ್ತದೆ. ಆ ಮೂರ್ತಿಗೆ ತಪೋಭಂಗವಾಗಬಾರದು.

ನನ್ನ ಬದುಕಿನಲ್ಲಿ ತುಂಬಾ ತಪ್ಪುಗಳನ್ನೂ ಮಾಡಿದ್ದೇನೆ. ಗಾಲಿಬ್ ಒಂದು ಕಡೆ ಹೇಳುತ್ತಾನೆ. “ಜಿಂದಗಿ ಬರ್ ಯಹೀ ಭೂಲ್ ಕರ‍್ತಾ ರಹಾ ಧೂಲ್ ಚಹರೇ ಪೇ ತಾ, ಮೈ ಆಯಿನಾ ಸಾಫ್ ಕರ‍್ತಾ ರಹಾ" ಅರ್ಥವಿಷ್ಟೆ. “ಬದುಕಿನುದ್ದಕ್ಕೂ ಅದೇ ತಪ್ಪನ್ನು ಮಾಡಿದೆ. ಮುಖದಲ್ಲಿ ಕೊಳಕಿತ್ತು. ಕನ್ನಡಿಯನ್ನು ಒರೆಸುತ್ತಲೇ ಇದ್ದೆ." ಇದು ನನ್ನ ಐವತ್ತೈದು ವರ್ಷಗಳ ಬದುಕಿಗೆ ಅನ್ವಯಿಸುವ ಮಾತು. ಮುಖದ ಕೊಳಕು ಸಂಪೂರ್ಣ ತೊಳೆದುಕೊಂಡಿದ್ದೇನೆ. ಇನ್ನು ಕನ್ನಡಿ ನೋಡಿಕೊಳ್ಳುವುದಿಲ್ಲ. ಅದನ್ನು ಒರೆಸುವ ಪ್ರಶ್ನೆಯೇ ಇಲ್ಲ. ಕವಿಗಳು ಕೇವಲ ಕವಿಗಳಲ್ಲ. ಅವರು ದಾರ್ಶನಿಕರು, ಅನುಭಾವಿಗಳು. “ಇದು ಬಾಳು ನೋಡು, ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎಂದು ಬರೆದವರು ನನ್ನ ಪಾಲಿನ ರಾಷ್ಟ್ರಕವಿಯಲ್ಲ ವಿಶ್ವ ಕವಿ ಅಡಿಗರು. ಹಾಗೆಯೇ ಅನುಭಾವಿ ಕವಿ ಬೇಂದ್ರೆಯವರ ಆತ್ಮಸಖ ಮತ್ತು ಶಿವರಾಮ ಕಾರಂತರ ಪ್ರಕಾರ “ಹೊಲಸಂಗಿ" ಗೆಳೆಯ ಮಧುರ ಚೆನ್ನ ಒಂದು ಮಾತು ಹೇಳಿದ್ದಾರೆ.

“ಬರುವುದೇನುಂಟು ಬರುವ ಕಾಲಕೆ ಬಹುದು, ಬಯಕೆ ಬರುವುದರ ಕಣ್ಸನ್ನೆ ಕಾಣಾ" ಎಂದು ಬರೆದರು. ಅನುಭಾವಿ ಚೆನ್ನ ಮಲ್ಲಪ್ಪ. ನೀನು ಮಧುರ್ ಸಾಬ್, ನಾನು ಚೆನ್ನ, ಚೆನ್ನಮಲ್ಲಿಕಾರ್ಜುನ. ಹೀಗಾಗಿ ನಾನು ಮಧುರ ಚೆನ್ನ ಎಂದು ನುಡಿದ ಮಹಾನುಭಾವಿ ಕವಿ ಮಧುರ ಚೆನ್ನರಿಗೆ ನನ್ನ ನಮಸ್ಕಾರಗಳು. ನಿಮಗೆ ಗೊತ್ತಿರಲಿ ಅವರ ಎಂಟನೆಯ ಮಗಳು ಡಾಕ್ಟರ್ ಸೂರ್ಯಮುಖಿ ಪೊಲೀಸ್ ಇಲಾಖೆಯನ್ನು ಅಕ್ಷರಶಃ ಆಳಿದ ನನ್ನ ಆತ್ಮೀಯ ಮಿತ್ರ ಶಂಕರ ಬಿದರಿಯವರ ಪತ್ನಿ.

ಇದನ್ನೆಲ್ಲಾ ನಿಮಗೆ ಯಾಕೆ ಹೇಳಿಕೊಳ್ಳಬೇಕು ಎಂಬುದು ನನ್ನ ಪ್ರಶ್ನೆಯಲ್ಲ. ಹೇಳಿಕೊಂಬುವುದು ಏನಿದೆಯೋ ಅದನ್ನು ಹೇಳಿಕೊಂಡರಷ್ಟೇ ಸ್ಖಲನ, ಮುಚ್ಚಿಟ್ಟರೆ ಮುಷ್ಠಿ ಮೈಥುನ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books