Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂದು ಪಟೇಲರಾಡಿದ ಮಾತು ಥಟ್ಟನೆ ನೆನಪಾಯಿತು!

ಸರಿ ಸುಮಾರು ಹದಿನೈದು ವರ್ಷಗಳ ಹಿಂದೆ ತುಂಬಿದ ವಿಧಾನಸಭೆಯಲ್ಲಿ ನಿಂತು ಮಾತನಾಡುತ್ತಿದ್ದ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ತುಂಬ ನೇರವಾಗಿ ಆ ವಿಷಯವನ್ನು ಪ್ರಸ್ತಾಪಿಸಿದ್ದರು. “ನಾವು ರಾಜಕಾರಣಿಗಳು, ಮತಕ್ಕಾಗಿ ಸುಳ್ಳುಗಳನ್ನೇ ಹೇಳುತ್ತಾ ಹೋದರೆ ಒಂದು ದಿನ ಜನ ಕಂಗಾಲಾಗುವ ಸ್ಥಿತಿ ಬರುತ್ತದೆ. ಹಾಗಾಗಬಾರದು ಎಂದರೆ ನಾವು, ರಾಜಕಾರಣಿಗಳು ಸತ್ಯವನ್ನು ಹೇಳುವ ಧೈರ್ಯವನ್ನು ರೂಢಿಸಿಕೊಳ್ಳಬೇಕು. ನಾವಾಡುವ ಸತ್ಯಕ್ಕೆ ನಾವೇ ಬಲಿಯಾದರೂ ಪರವಾಗಿಲ್ಲ. ಆದರೆ ಭವಿಷ್ಯದ ಪೀಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು." ಈ ಮಾತುಗಳನ್ನಾಡಿದ ಪಟೇಲರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂಬುದು ಬೇರೆ ಮಾತು. ಆದರೆ ಹದಿನೈದು ವರ್ಷಗಳ ಹಿಂದೆ ಅವರಾಡಿದ ಮಾತುಗಳು ದಿನ ಕಳೆದಂತೆ ಹೆಚ್ಚೆಚ್ಚು ಪ್ರಸ್ತುತವಾಗುತ್ತಾ ಹೋಗುತ್ತಿವೆ ಎಂಬುದು ಮಾತ್ರ ನಿಜ.

ಅಂದ ಹಾಗೆ ಅವತ್ತು ಪಟೇಲರು ಅಂತಹ ಮಾತುಗಳನ್ನಾಡಲು ಇದ್ದ ಕಾರಣ ಸ್ಪಷ್ಟವಾಗಿತ್ತು. ರೈತರಿಗೆ ಉಚಿತ ವಿದ್ಯುತ್ ಕೊಡಬೇಕು ಎಂಬುದೂ ಸೇರಿದಂತೆ ಅಂದಿನ ಪ್ರತಿಪಕ್ಷ ನಾಯಕರು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅವರ ಪ್ರಸ್ತಾಪದಲ್ಲಿ ಹುರುಳಿರಲಿಲ್ಲ ಅಂತಲೂ ಅಲ್ಲ. ದೇಶಕ್ಕೆ ಅನ್ನ ಕೊಡುವ ರೈತನಿಗೆ ಉಚಿತ ವಿದ್ಯುತ್ ಕೊಡುವುದರಲ್ಲಿ ತಪ್ಪೇನಿದೆ? ಅನ್ನುವ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದರು. ಆದರೆ ಜಾಗತೀಕರಣ ಎಂಬ ಭೂತ ದೇಶವನ್ನು ಪ್ರವೇಶಿಸಿ ಮೂರು ವರ್ಷಗಳಷ್ಟೇ ಕಳೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಟೇಲರು ಅಂತಹ ಮಾತುಗಳನ್ನಾಡಿದ್ದರು. ಅವರ ಮಾತು ಕ್ರಮೇಣ ನಿಜವಾಗುತ್ತಿದೆ. ಜನರಿಗೆ ಸತ್ಯ ಹೇಳುವ ಅನಿವಾರ್ಯತೆ ರಾಜಕಾರಣಿಗಳಿಗೆ ಎದುರಾಗುತ್ತಿದೆ. ವಿಪರ್ಯಾಸವೆಂದರೆ ಇಂತಹ ಸತ್ಯ ಹೇಳುವ ವಿಷಯದಲ್ಲಿ ರಾಜಕಾರಣಿಗಳು ಈಗಲೂ ಧೈರ್ಯ ತೋರಿಸುತ್ತಿಲ್ಲ. ಅವರಿವರಿರಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಈ ವಿಷಯದಲ್ಲಿ ತುಂಬ ಧೈರ್ಯ ತೋರಿಸುತ್ತಿಲ್ಲ. ಕಾರಣ ಸ್ಪಷ್ಟ. ಸತ್ಯ ಹೇಳಿದರೆ, ಸತ್ಯದ ಹೆಸರಿನಲ್ಲಿ ಪ್ರತಿಯೊಂದು ಹೆಜ್ಜೆ ಇಡುತ್ತಾ ಹೋದರೆ ಅವರ ಪಕ್ಷಕ್ಕೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹತ್ತು ಸೀಟು ಗೆಲ್ಲುವುದೂ ಕಷ್ಟವಾಗುತ್ತದೆ.

ಹಾಗಂತಲೇ ಮೊನ್ನೆ ಮಂಡಿಸಿದ ಬಜೆಟ್‌ನಲ್ಲಿ ಅವರು ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ಮಾತನ್ನಾಡಿದ್ದಾರೆ. ಬಜೆಟ್‌ನಲ್ಲಿ ಯೋಜನಾ ವೆಚ್ಚ ಎಂದರೆ ಹೆಚ್ಚು ಲಾಭ ತರುವ ಕೆಲಸಗಳಿಗಾಗಿ ಹೂಡುತ್ತಿರುವ ಬಂಡವಾಳ ಎಂದರ್ಥ. ಯೋಜನೇತರ ವೆಚ್ಚ ಎಂದರೆ ಒಂದೋ ಅದು ಪರೋಕ್ಷವಾಗಿ ಲಾಭ ತರುವ, ಇಲ್ಲವೇ ಲಾಭ ತರದ ವೆಚ್ಚ ಎಂದರ್ಥ. ಮೊನ್ನೆ ಮುಂಡಿಸಿದ ಬಜೆಟ್‌ನಲ್ಲಿ ಸಿದ್ಧರಾಮಯ್ಯ ೬೬,೫೦೦ ಕೋಟಿ ರುಪಾಯಿಗಳಷ್ಟು ಹಣವನ್ನು ಯೋಜನಾ ವೆಚ್ಚಕ್ಕಾಗಿ ಮೀಸಲಿಟ್ಟಿರುವುದಾಗಿ ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ ಬಾರಿ ಯೋಜನಾ ವೆಚ್ಚಕ್ಕಾಗಿ ನಿಗದಿ ಮಾಡಲಾಗಿದ್ದ ಹಣವನ್ನು ಸರ್ಕಾರ ವೆಚ್ಚ ಮಾಡಿತೇ? ಎಂದು ಕೇಳಿದರೆ ಅದಕ್ಕೆ ಉತ್ತರ ಸಿಗುವುದೇ ಇಲ್ಲ. ಕಾರಣ ಸ್ಪಷ್ಟ. ಯೋಜನೇತರ ವೆಚ್ಚಕ್ಕಾಗಿ ಇಟ್ಟಿರುವ ಹಣದ ಪೈಕಿ ಒಂದು ರುಪಾಯಿಯಷ್ಟು ವ್ಯತ್ಯಾಸವನ್ನೂ ಒಂದು ಸರ್ಕಾರ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈ ಬಾಬ್ತಿನಿಂದಲೇ ನಾವು ಸರ್ಕಾರಿ ನೌಕರರಿಗೆ ಸಂಬಳ ಕೊಡಬೇಕು. ಈ ಬಾಬ್ತಿನಿಂದಲೇ ಆರೋಗ್ಯ ಸೇವೆಗಳನ್ನು ಒದಗಿಸಿಕೊಡಬೇಕು. ಹೀಗೆ ಯೋಜನೇತರ ವೆಚ್ಚಕ್ಕಾಗಿ ನಾವು ಮಾಡಲು ಹೊರಟಿರುವ ಸದ್ಯದ ವೆಚ್ಚ ಎಪ್ಪತ್ತೆರಡು ಸಾವಿರ ಕೋಟಿ ರುಪಾಯಿಗಳು.

ಈ ಎಪ್ಪತ್ತೆರಡು ಸಾವಿರ ಕೋಟಿ ರುಪಾಯಿಗಳ ಪೈಕಿ ಒಂದು ರುಪಾಯಿಯನ್ನೂ ನಾವು ಯೋಜನಾ ವೆಚ್ಚಕ್ಕಾಗಿ ಕೊಡಲು ಸಾಧ್ಯವಿಲ್ಲ. ಆದರೆ ಯೋಜನಾ ವೆಚ್ಚಕ್ಕಾಗಿ ಅಂತ ಎತ್ತಿಟ್ಟ ಹಣದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಯೋಜನೇತರ ವೆಚ್ಚಕ್ಕಾಗಿ ಬಳಸುವ ಅನಿವಾರ್ಯ ಸ್ಥಿತಿ ನಮಗೆ ಬರಬಹುದು. ಬರಬಹುದಲ್ಲ, ಬರುತ್ತದೆ. ಅದು ನಿರಂತರವಾಗಿ ಬರುತ್ತಲೇ ಇರುತ್ತದೆ. ನಾಳೆ ಬೇಸಿಗೆಯಲ್ಲಿ ಬರಗಾಲದ ತೀವ್ರತೆ ಅತಿಯಾದರೆ, ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ, ಮೇವಿನ ಸಮಸ್ಯೆ ಮೇಲೆರಗಿದರೆ ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಹಣವನ್ನು ಕೊಡುವುದಿಲ್ಲ. ಯಾಕೆ ಕೊಡುವುದಿಲ್ಲ ಎಂದರೆ ಅದರದೇನೂ ಕುಬೇರನ ಖಜಾನೆಯಲ್ಲ. ರಾಜಕೀಯ ಲಾಭಕ್ಕಾಗಿ ಕೆಲವು ರಾಜ್ಯಗಳಿಗೆ ಅನುಕೂಲ ಒದಗಿಸಿಕೊಡುವ ವಿಷಯದಲ್ಲಿ ಒಂದಷ್ಟು ಧಾರಾಳತನ ತೋರಬಹುದು. ಆದರೆ ಒಂದು ರಾಜ್ಯ ಅನುಭವಿಸುವ ಎಲ್ಲ ಸಂಕಷ್ಟಗಳನ್ನು ಅದು ತನ್ನ ಮೈಮೇಲೆ ಎಳೆದುಕೊಳ್ಳುತ್ತದೆ ಎಂದಲ್ಲ. ಹೀಗಾಗಿ ನಾವು ಬರಗಾಲ, ವಿದ್ಯುತ್ ಸಮಸ್ಯೆಯಂತಹ ಕಷ್ಟಗಳನ್ನು ಎದುರಿಸುವಾಗ ಕೇಂದ್ರ ಸರ್ಕಾರ ಎಲ್ಲ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊರುತ್ತದೆ ಅಂತ ನಿರೀಕ್ಷಿಸುವುದು ಸರಿಯಲ್ಲ.

ಹೀಗಾಗಿ ಸಿದ್ಧರಾಮಯ್ಯನವರ ಸರ್ಕಾರ ಕಳೆದ ವರ್ಷ ಯೋಜನಾ ವೆಚ್ಚಕ್ಕಾಗಿ ಅಂತ ಎತ್ತಿಟ್ಟ ಹಣದ ಪೈಕಿ ಶೇಕಡಾ ಮೂವತ್ತಕ್ಕಿಂತ ಹೆಚ್ಚು ಪ್ರಮಾಣದ ಹಣವನ್ನು ಯೋಜನೇತರ ವೆಚ್ಚಕ್ಕೆ ಅಂತಲೇ ಎತ್ತಿ ಕೊಡಬೇಕಾಯಿತು. ಒಂದು ವಿಷಯ ನಿಮಗೆ ಗೊತ್ತಿರಲಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಳೆ ಸರಿಯಾಗಿ ಬರಲಿಲ್ಲ ಎಂಬ ಕಾರಣಕ್ಕಾಗಿ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳಿಗೂ ಅಧಿಕ ಪ್ರಮಾಣದ ಹಣವನ್ನು ಕೇವಲ ವಿದ್ಯುತ್ ಖರೀದಿಗಾಗಿ ವೆಚ್ಚ ಮಾಡಲಾಯಿತು. ಈಗಿನ ಬಜೆಟ್‌ನಲ್ಲಿ ವಿದ್ಯುತ್ ಖರೀದಿಗಾಗಿ ಆರು ಸಾವಿರ ಕೋಟಿ ರುಪಾಯಿಗಳನ್ನು ಎತ್ತಿಡಲಾಗಿದೆ. ಆದರೆ ಇದಕ್ಕೂ ಹೆಚ್ಚು ಹಣ ನಮಗೆ ಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ರಾಜ್ಯದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡುವುದು ಕಷ್ಟದ ಕೆಲಸ.
ಪ್ರತಿ ವರ್ಷ ಹದಿನೈದರಿಂದ ಇಪ್ಪತ್ತು ಮಿಲಿಯನ್ ಯೂನಿಟ್‌ನಷ್ಟು ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ಕರೆಂಟು ಇಪ್ಪತ್ನಾಲ್ಕು ಗಂಟೆ ಕೊಡಲು ಸಿದ್ಧ. ಆದರೆ ಇದಕ್ಕಾಗಿ ಹಣ ಪಾವತಿ ಮಾಡಬೇಕು ಅಂತ ಬೇರೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದರರ್ಥ ಏನು? ಇವತ್ತಲ್ಲ, ನಾಳೆ ತಾವು ಪಡೆಯುವ ವಿದ್ಯುತ್‌ಗೆ ರೈತ ಬಿಲ್ ಕಟ್ಟುವುದು ಅನಿವಾರ್ಯ ಎಂಬ ಪೂರ್ವ ಸೂಚನೆ ಇದಲ್ಲವೇ? ಇಲ್ಲವಾದರೆ ಇಂತಹ ಮಾತುಗಳು ಹೇಗೆ ಹೊರಬರುತ್ತಿದ್ದವು. ಒಬ್ಬ ರೈತ ತನಗೆ ಬೇಕೆಂದು ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಹಾಕಿಸಿಕೊಳ್ಳಬಹುದು. ಆದರೆ ಎಲ್ಲ ರೀತಿಯ ರೈತರೂ ದಿನದ ಇಪ್ಪತ್ನಾಲು ತಾಸು ಕರೆಂಟು ಬೇಕೇ ಬೇಕು ಅನ್ನುತ್ತಾರೆ. ಇದು ಒಂದು ರೀತಿಯಲ್ಲಿ ರೈತರನ್ನು ಪಳಗಿಸುವ ಪ್ರಕ್ರಿಯೆ. ಡಿ.ಕೆ.ಶಿವಕುಮಾರ್ ಆಡುತ್ತಿರುವುದರಲ್ಲಿ ತಪ್ಪೇನಿಲ್ಲ. ಇವತ್ತು ರೈತರಿಗೆ ಏಳು ಗಂಟೆ ಕಾಲ ಉಚಿತ ತ್ರೀ ಫೇಸ್ ವಿದ್ಯುತ್ ನೀಡುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಅವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದಕ್ಕಾಗಿಯೇ ನಾನು ಹೇಳುವುದು, ಎಲ್ಲಿಯವರೆಗೆ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ದರ ಸಿಗುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಇದ್ದಿದ್ದೇ. ಒಂದು ಕಡೆ ಉಚಿತ ವಿದ್ಯುತ್ ನೀಡಲು ಸರ್ಕಾರಗಳಿಗೆ ಹಿಂಸೆ. ಮತ್ತೊಂದು ಕಡೆ ತಾವು ಬೆಳೆದ ಬೆಳೆಗೆ ವೈಜ್ಞಾನಿಕ ದರ ಸಿಗುತ್ತಿಲ್ಲ ಎಂಬ ಅಸಮಾಧಾನ ರೈತನಿಗೆ.

ಇವೆರಡನ್ನೂ ಸರಿಪಡಿಸಬೇಕಾದರೆ ಒಂದು ಸರ್ಕಾರವೇ ಎಷ್ಟು ಗಟ್ಟಿಯಾಗಿ ಬೆಳೆಯಲು ಸಾಧ್ಯವೋ ಅಷ್ಟು ಗಟ್ಟಿಮುಟ್ಟಾಗಿ ಬೆಳೆಯಬೇಕು. ಇವತ್ತು ವಿದ್ಯುತ್ ಖರೀದಿಗೆ ಅಂತ ಆರು ಸಾವಿರ ಕೋಟಿ ರುಪಾಯಿ ಎತ್ತಿಟ್ಟಿರಲ್ಲ ಸಿದ್ಧರಾಮಯ್ಯ, ಉಳಿದ ಐದು ಸಾವಿರ ಕೋಟಿ ರುಪಾಯಿಗಳಿಂದ ಏನು ಮಾಡುತ್ತೀರಿ? ಇವತ್ತು ನಿಮ್ಮ ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡುತ್ತೀರೋ? ಒಂದು ಮೆಗಾವ್ಯಾಟ್ ವಿದ್ಯುತ್ ತಯಾರಿಸಲು ಆರು ಕೋಟಿ ರುಪಾಯಿ ಬೇಕಲ್ಲ ಅದನ್ನು ಕೊಡುತ್ತೀರೋ? ಏನು ಮಾಡುತ್ತೀರಿ ಅಂತ ಹೇಳಬೇಕಲ್ಲ? ಅದನ್ನು ಬಿಟ್ಟು ರೈತರಿಗೆ ಹಣ ಕೊಟ್ಟರೆ ದಿನದ ಇಪ್ಪತ್ನಾಲ್ಕು ತಾಸು ಕರೆಂಟು ನೀಡುತ್ತೇವೆ ಅಂತ ಹೊರಟರೆ ಸಾಕೇ? ನೀವು ಒಂದಷ್ಟು ವಿದ್ಯುತ್‌ನ್ನು ಉತ್ಪಾದಿಸಬೇಕಲ್ಲ? ಅಂತಹ ಸೂಚನೆಗಳನ್ನೇ ನಿಮ್ಮ ಬಜೆಟ್ ಕೊಡುತ್ತಿಲ್ಲ. ಐದು ವರ್ಷದ ಅವಧಿಯಲ್ಲಿ ಬಿಜೆಪಿಯವರು ಇಪ್ಪತ್ತು ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದರು. ನೀವು ಮೂವತ್ತು ಸಾವಿರ ಕೋಟಿ ರುಪಾಯಿ ಖರ್ಚು ಮಾಡುತ್ತೀರಿ. ಇದರಲ್ಲಿ ತುಂಬ ವ್ಯತ್ಯಾಸವೇನು ಬಂತು. ಹಾಗಿದ್ದರೆ ಪ್ರತಿಪಕ್ಷದ ನಾಯಕರಾಗಿ ಆಡುತ್ತಿದ್ದ ಮಾತುಗಳೆಲ್ಲ ಎಲ್ಲಿಗೆ ಹೋದವು?

ಈ ಬಿಜೆಪಿಯವರು ಇರುವ ದುಡ್ಡನ್ನೆಲ್ಲ ವಿದ್ಯುತ್ ಖರೀದಿಗೆ ನೀಡುತ್ತಿದ್ದಾರೆಯೇ ಹೊರತು, ವಿದ್ಯುತ್ ಉತ್ಪಾದಿಸುವ ಕಡೆ ಅವರ ಗಮನವಿಲ್ಲ ಅಂತಲ್ಲವೇ ನೀವು ಹೇಳುತ್ತಿದ್ದುದು. ನೀವು ಮಾಡುತ್ತಿರುವುದು ಕೂಡ ಅದನ್ನೇ. ಯಾಕೆಂದರೆ ಜನ ಕೇಳಿದ ತಕ್ಷಣ ಕೊಡಲು ನಿಮಗೆ ವಿದ್ಯುತ್ ಬೇಕು. ಆದರೆ ದೂರಗಾಮಿ ನೆಲೆಯಲ್ಲಿ ಪೂರ್ತಿ ಖಾಸಗಿಯವರ ಸ್ವತ್ತಾಗಿ ಬಿಡುವ ವಿದ್ಯುತ್‌ನ್ನು ರೈತ ನಾಳೆ ಇಪ್ಪತ್ನಾಲ್ಕು ತಾಸು ಖರೀದಿಸಿದರೂ ಅಷ್ಟೇ. ಎರಡು ತಾಸು ಖರೀದಿಸಿದರೂ ಅಷ್ಟೇ. ಕ್ರಮೇಣ ಇದನ್ನು ತಾನೇ ನೀವು ಮಾಡಲು ಹೊರಟಿರುವುದು. ಒಂದು ವರ್ಷಕ್ಕೆ ಅಂತ ವಿದ್ಯುತ್ ಖರೀದಿಸಲು ಆರು ಸಾವಿರ ಕೋಟಿ ರುಪಾಯಿ ಎತ್ತಿಡುವ ಬದಲು ಎರಡು ಅಥವಾ ಮೂರು ಸಾವಿರ ಕೋಟಿ ರುಪಾಯಿಗಳನ್ನು ಸರ್ಕಾರಿ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಿ ಐನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿತ್ತು. ಆದರೆ ನೀವು ಅದನ್ನೇಕೆ ಮಾಡ ಹೊರಟಿಲ್ಲ. ಅನುಮಾನ ಬರುವುದು ಇಂತಹ ಜಾಗಗಳಲ್ಲಿಯೇ. ಅದು ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಹುಟ್ಟುವ ಪ್ರಶ್ನೆಯಲ್ಲ. ಸಿದ್ಧರಾಮಯ್ಯ ಕೂಡ ಜನಪ್ರಿಯ ಬಜೆಟ್ ಮಂಡಿಸಲು ಹೋಗಿ ಹಾದಿ ತಪ್ಪಿದರೇ ಎಂಬ ಅನುಮಾನ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ.

ಯಾವುದೇ ಆರ್ಥಿಕ ತಜ್ಞನಿರಲಿ, ಮೊದಲು ಸರ್ಕಾರದ ಬಂಡವಾಳ ಬೆಳೆಯಬೇಕು ಎಂದು ಬಯಸಬೇಕು. ಅದಕ್ಕೆ ಬೇಕಿರುವುದು ಒಂದೇ. ಜನರೆದುರು ಸತ್ಯ ಹೇಳುವ ಧೈರ್ಯ ಬೆಳೆಯಬೇಕು. ಅದು ಬೆಳೆಯುವ ತನಕ ಬಜೆಟ್‌ಗಳು ಜನಪ್ರಿಯ ಬಜೆಟ್‌ಗಳಾಗುತ್ತವೆಯೇ ಹೊರತು ಜನಪರ ಬಜೆಟ್ ಆಗುವುದಿಲ್ಲ. ಇವತ್ತು ಜನಪ್ರಿಯತೆ ಎಂದರೆ ತಕ್ಷಣಕ್ಕೆ ನೆಮ್ಮದಿ ನೀಡುವ ಕೆಲಸ. ಜನ ಪರ ಎಂದರೆ ದೂರಗಾಮಿ ನೆಲೆಯಲ್ಲಿ ಆಗುವ ಅಭಿವೃದ್ಧಿ ಕೆಲಸ. ಯೋಜನಾ ವೆಚ್ಚಕ್ಕೆ ೬೬,೫೦೦ ಕೋಟಿ ರುಪಾಯಿ ಕೊಟ್ಟ ಮೊದಲ ಬಜೆಟ್ ಅಂತ ಇವತ್ತು ನೀವು ಹೇಳಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಐವತ್ತು ಸಾವಿರ ಕೋಟಿ ರುಪಾಯಿಗಳಿಗಿಂತ ಹೆಚ್ಚು ವೆಚ್ಚ ಮಾಡಲು ನಿಮಗೆ ಸಾಧ್ಯವಿಲ್ಲ. ಯಾಕೆಂದರೆ ಎಪ್ಪತ್ತೆರಡು ಸಾವಿರ ಕೋಟಿ ರುಪಾಯಿಗಳನ್ನು ಯೋಜನೇತರ ವೆಚ್ಚಕ್ಕೆ ಅಂತ ಏನು ಕೊಟ್ಟಿದ್ದೀರೋ ಅದು ಎಂಬತ್ತೈದು-ತೊಂಬತ್ತು ಸಾವಿರ ಕೋಟಿ ರುಪಾಯಿಗಳಿಗೇರುತ್ತದೆ. ರಾಜ್ಯ ಅಷ್ಟರ ಮಟ್ಟಗೆ ಅಪಾಯಕಾರಿ ವಲಯದಲ್ಲಿದೆ ಅನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books