Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕೇಂದ್ರದ ಕಿವಿ ಹಿಂಡಲು ರಾಜ್ಯದಲ್ಲಿ ತೃತೀಯ ಶಕ್ತಿ ಎದ್ದು ನಿಲ್ಲಲೇಬೇಕು

ದಿಲ್ಲಿಯ ಅಧಿಕಾರ ಸೂತ್ರವನ್ನು ಶತಾಯಗತಾಯ ಹಿಡಿಯಲೇಬೇಕು ಎಂದು ಹೊರಟಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಒಂದು ಸಮೃದ್ಧ ಹುಲ್ಲುಗಾವಲಿನಂತೆ ಕಾಣುತ್ತಿರುವುದು ರಹಸ್ಯವೇನಲ್ಲ. ಎಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಗಳಿಸಿದ ಮೇಲೆ ದಿಲ್ಲಿಯ ಕಾಂಗ್ರೆಸ್ ನಾಯಕರ ನಿರೀಕ್ಷೆ ಹೆಚ್ಚಾಗಿದೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಕಟ್ಟಿ ಶೇಕಡಾ ಹತ್ತರಷ್ಟು ಮತಗಳನ್ನು ಗಳಿಸಿ, ಬಿಜೆಪಿಯ ಸೊಂಟ ಅಲುಗಾಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡ ನಂತರ ಬಿಜೆಪಿ ನಾಯಕರಿಗೆ ಇಲ್ಲಿ ಮಿನಿಮಮ್ ಹನ್ನೆರಡರಿಂದ ಹದಿನೈದು ಸೀಟುಗಳನ್ನು ಗೆಲ್ಲುವ ವಿಶ್ವಾಸ ಬಂದಿದೆ. ಇದು ಸಹಜವೂ ಹೌದು. ಆದರೆ ದಿಲ್ಲಿ ಗದ್ದುಗೆಯ ಮೇಲೆ ಕೂರಲು ಹೊರಟಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಿರೀಕ್ಷೆ ಅಷ್ಟು ಸುಲಭವಾಗಿ ಈಡೇರುತ್ತದೆಯೇ? ಸದ್ಯದ ಸ್ಥಿತಿ ನೋಡಿದರೆ ಹಾಗನ್ನಿಸುತ್ತಿಲ್ಲ.

ಕಾರಣವೂ ಸ್ಪಷ್ಟ. ಯಾಕೆಂದರೆ, ರಾಜ್ಯ ಕಾಂಗ್ರೆಸ್‌ನಲ್ಲಾಗಲೀ, ರಾಜ್ಯ ಬಿಜೆಪಿಯಲ್ಲಾಗಲೀ ನಾಯಕರ ನಡುವೆ ಪರಸ್ಪರ ಹೊಂದಾಣಿಕೆಯೇ ಇಲ್ಲ. ಟಿಕೆಟ್ ಹಂಚಿಕೆ ವಿಷಯದಲ್ಲಿ ಯಾವುದೇ ಪಕ್ಷದಲ್ಲಿ ಗೊಂದಲಗಳಾಗುವುದು ಸಹಜ. ಆದರೆ ನಾಯಕರ ನಡುವೆ ದ್ವೇಷವೇ ಹೆಮ್ಮರವಾಗಿ ಬೆಳೆದು ನಿಂತುಬಿಟ್ಟರೆ ಚುನಾವಣೆಯಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರುವುದು ಸಹಜ. ಉದಾಹರಣೆಗೆ ಬಿಜೆಪಿಯನ್ನೇ ತೆಗೆದುಕೊಳ್ಳಿ. ಯಡಿಯೂರಪ್ಪನವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಸಿಕೊಂಡ ನಂತರ ಅವರು ವಿಭಜಿಸಿದ್ದ ಶೇಕಡಾ ಹತ್ತರಷ್ಟು ಮತಗಳು ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತಮಗೆ ದಕ್ಕುತ್ತವೆ, ಅದೇ ಕಾಲಕ್ಕೆ ಮೋದಿ ಅಲೆ ಶೇಕಡಾ ಐದರಷ್ಟು ಮತಗಳನ್ನು ಹೆಚ್ಚುವರಿಯಾಗಿ ತಂದುಕೊಡುತ್ತದೆ ಅಂತ ಬಿಜೆಪಿಯ ನಾಯಕರು ನಂಬಿದ್ದಾರೆ. ಆದರೆ ವಾಪಸು ಬಂದ ಯಡಿಯೂರಪ್ಪನವರನ್ನು ಬಿಜೆಪಿಯ ಬಹುತೇಕ ನಾಯಕರು ಮನಪೂರ್ವಕವಾಗಿ ಸ್ವೀಕರಿಸುತ್ತಲೇ ಇಲ್ಲ. ಇದ್ದುದರಲ್ಲೇ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಬೆಟರ್ರು. ಯಾರೇನೇ ಟೀಕಿಸಲಿ, ಆದರೆ ಟೀಕೆ ಮಾಡುವ ಸಂದರ್ಭ ಬಂದರೂ ಮನಪೂರ್ವಕವಾಗಿ ಟೀಕೆ ಮಾಡುವ, ಹೊಗಳುವ ಸನ್ನಿವೇಶ ಬಂದರೂ ಮನಪೂರ್ವಕವಾಗಿ ಹೊಗಳುವ ಈಶ್ವರಪ್ಪ ಇವತ್ತು ಕರ್ನಾಟಕದ ಬಿಜೆಪಿ ಪಾಳಯದಲ್ಲಿರುವ ಒಬ್ಬೇ ಒಬ್ಬ ಮುಕ್ತ ಮನಸ್ಸಿನ ನಾಯಕ. ಯಾವಾಗ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಲು ಹೊರಟರೋ, ಆಗ ಇದೇ ಈಶ್ವರಪ್ಪ ಅಯ್ಯೋ, ಅವರು ಹೋಗುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಹೋಗಿ ಒಂದು ವರ್ಷದೊಳಗೆ ಮತ್ತೆ ಪಕ್ಷಕ್ಕೆ ವಾಪಸು ಬರುವುದನ್ನು ನಿಲ್ಲಿಸಲೂ ಸಾಧ್ಯವಿಲ್ಲ ಎಂದಿದ್ದರು.

ಆಗೆಲ್ಲ ಈಶ್ವರಪ್ಪನವರ ಮಾತು ಆವೇಶದ ನೆಲೆಯಿಂದ ವ್ಯಕ್ತಗೊಂಡವು ಅನ್ನಿಸುತ್ತಿತ್ತು. ಆದರೆ ಅವರು ಹೇಳಿದ ಮಾತು ಅಕ್ಷರಶಃ ನಿಜವಾಯಿತು. ಈಗ ಅದೇ ಈಶ್ವರಪ್ಪ, ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಯಡಿಯೂರಪ್ಪ ಕೇಂದ್ರ ಮಂತ್ರಿಯಾಗಬೇಕು ಎಂಬುದು ನಮ್ಮ ಹೆಬ್ಬಯಕೆ ಎಂದು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಈಶ್ವರಪ್ಪ ತಮ್ಮ ಮಾತಿಗೆ ಕಮಿಟ್ ಆಗಿರುತ್ತಾರೆ, ಹೋರಾಡುತ್ತಾರೆ ಎಂಬುದು ನಿಜ. ಹೀಗಾಗಿಯೇ ಈಶ್ವರಪ್ಪನವರಿಗೆ ಬಿಜೆಪಿಯಲ್ಲಿ ಯಾರೂ ಖಾಯಂ ಶತ್ರುಗಳಿಲ್ಲ. ಆದರೆ ಉಳಿದವರ ವಿಷಯದಲ್ಲಿ ಇಂತಹ ಮಾತುಗಳನ್ನಾಡಲು ಸಾಧ್ಯವಿಲ್ಲ. ಯಾಕೆಂದರೆ ದಿಲ್ಲಿ ಗದ್ದುಗೆಯ ಮೇಲೆ ಎನ್‌ಡಿಎ ಮೈತ್ರಿಕೂಟ ಬಂದು ಕೂರುತ್ತದೆ ಎಂಬ ವಿಶ್ವಾಸ ದಟ್ಟವಾಗುತ್ತಿದ್ದಂತೆಯೇ ಕರ್ನಾಟಕದಿಂದ ಯಾರು ಗೆಲ್ಲಬೇಕು? ಯಾರು ಗೆಲ್ಲಬಾರದು? ಎಂಬ ವಿಷಯದಲ್ಲಿ ಪ್ರಮುಖ ನಾಯಕರು ತಮ್ಮದೇ ಆದ ಲೆಕ್ಕಾಚಾರಗಳನ್ನಿಟ್ಟುಕೊಂಡಿದ್ದಾರೆ. ಉದಾಹರಣೆಗೆ ಅನಂತಕುಮಾರ್ ಅವರನ್ನೇ ತೆಗೆದುಕೊಳ್ಳಿ. ಅವರಿಗೀಗ ಯಡಿಯೂರಪ್ಪನವರನ್ನು ಹೊರತುಪಡಿಸಿ ಬೇರೆ ಯಾವ ಪ್ರಮುಖ ನಾಯಕರೂ ಸಂಸದರಾಗಿ ದಿಲ್ಲಿಗೆ ಬರುವುದು ಇಷ್ಟವಿಲ್ಲ. ಹೀಗಾಗಿ ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರೆ ಅದಕ್ಕವರು ಉಲ್ಟಾ ಹೊಡೆಯುತ್ತಾರೆ.

ಇದೇ ರೀತಿ ಹಲವು ನಾಯಕರ ವಿಷಯದಲ್ಲಿ ಅನಂತಕುಮಾರ್ ಅವರಿಗೆ ತಮ್ಮದೇ ಆದ ಲಾಭ, ನಷ್ಟದ ಲೆಕ್ಕಾಚಾರಗಳಿವೆ. ಈ ಮಾತು ಯಡಿಯೂರಪ್ಪನವರಿಗೂ ಅನ್ವಯವಾಗುತ್ತದೆ. ಅವರು ಒಂದು ಕಡೆಯಿಂದ ತಾವೂ ಸಂಸದರಾಗಬೇಕು, ತಮ್ಮ ಪರಮಾಪ್ತರಾದ ಶೋಭಾ ಕರಂದ್ಲಾಜೆ ಅವರೂ ಸಂಸದರಾಗಬೇಕು ಎಂದು ಬಯಸುತ್ತಾರೆ. ಹೀಗೆ ಕರ್ನಾಟಕದ ಪಡಸಾಲೆಯಿಂದ ಗೆದ್ದು ಹೋದರೆ, ಅದೇ ಕಾಲಕ್ಕೆ ದಿಲ್ಲಿ ಗದ್ದುಗೆಯ ಮೇಲೆ ಎನ್‌ಡಿಎ ಮೈತ್ರಿಕೂಟ ಬಂದು ಕುಳಿತರೆ ಲಿಂಗಾಯತರ ಕೋಟಾದಡಿ ತಾವು, ವಕ್ಕಲಿಗರ ಕೋಟಾ ಮತ್ತು ಮಹಿಳಾ ಕೋಟಾದಡಿ ಶೋಭಾ ಕರಂದ್ಲಾಜೆ ಮಂತ್ರಿಗಳಾಗಬಹುದು ಎಂದವರು ಲೆಕ್ಕ ಹಾಕಿದ್ದಾರೆ. ಪರಿಣಾಮವಾಗಿ ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪನವರಂತೆ ಮುಕ್ತವಾಗಿ, ಪ್ರಾಮಾಣಿಕವಾಗಿ ಮಾತನಾಡುವ ನಾಯಕರು ಕಾಣುತ್ತಲೇ ಇಲ್ಲ. ಬಹುತೇಕ ನಾಯಕರು ಆಡುತ್ತಿರುವುದೇ ಒಂದು, ಅವರ ಮನಸ್ಸಿನಲ್ಲಿರುವುದೇ ಒಂದು. ಇಂತಹ ಬೆಳವಣಿಗೆ ಯಾವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದರೆ ಒಬ್ಬರು ಮತ್ತೊಬ್ಬರ ಕಾಲನ್ನು ಹೇಗೆ ಎಳೆಯಬೇಕು? ಎಂಬ ಯೋಚನೆಯಲ್ಲೇ ಮುಳುಗಿ ಬಿಜೆಪಿ ಅದರ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಇನ್ನು ಕಾಂಗ್ರೆಸ್ ವಿಷಯಕ್ಕೆ ಬನ್ನಿ. ಅಲ್ಲಿ ಶುರುವಿನಿಂದಲೂ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬ ಗುಂಪುಗಳು ವಿದ್ಯುಕ್ತವಾಗಿ ಕೆಲಸ ಮಾಡುತ್ತಲೇ ಇವೆ. ಮೂಲ ಕಾಂಗ್ರೆಸ್‌ನ ದಂಡನಾಯಕರಾದ ಪರಮೇಶ್ವರ್, ಡೀಕೇಶಿ, ಬೇಗ್ ಸೇರಿದಂತೆ ಒಂದು ಬಣದ ವಿರುದ್ಧ ಸಿದ್ಧರಾಮಯ್ಯ ಗ್ಯಾಂಗು ನಿರಂತರವಾಗಿ ಹೋರಾಡುತ್ತಲೇ ಇದೆ. ಸಿದ್ಧರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮನ್ನು ತುಳಿಯಲು ಹವಣಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಈ ಗುಂಪು ಕೂಡಾ ವಿದ್ಯುಕ್ತವಾಗಿಯೇ ಕಾಲೆಳೆಯುವ ಯತ್ನ ಮಾಡುತ್ತಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ಹಂಚಿಕೆ ವಿಷಯ ಬಂದಾಗ ಎರಡು ಗುಂಪುಗಳ ನಡುವೆ ಪರಸ್ಪರ ಹೊಂದಾಣಿಕೆಯೇ ಆಗುತ್ತಿಲ್ಲ. ಶಿವಮೊಗ್ಗದಿಂದ ಹಿಡಿದು ಧಾರವಾಡದ ತನಕ ಕನಿಷ್ಠ ಹನ್ನೆರಡರಿಂದ ಹದಿನಾಲ್ಕು ಕ್ಷೇತ್ರಗಳಲ್ಲಿ ಯಾರು ಕಣಕ್ಕಿಳಿಯಬೇಕು? ಎಂಬ ಪ್ರಶ್ನೆ ಬಂದರೆ ಸಿದ್ಧರಾಮಯ್ಯ ಒಂದು ಅಭಿಪ್ರಾಯ ಹೇಳುತ್ತಾರೆ, ಪರಮೇಶ್ವರ್ ಗ್ಯಾಂಗು ಒಂದು ಅಭಿಪ್ರಾಯ ಹೇಳುತ್ತದೆ. ರಾಜ್ಯ ಸರ್ಕಾರದ ಮೇಲೆ ಸಿದ್ಧರಾಮಯ್ಯ ಗ್ಯಾಂಗು ಹೊಂದಿರುವ ಹಿಡಿತವನ್ನು ಲೋಕಸಭಾ ಚುನಾವಣೆಯ ನಂತರ ಸಡಿಲಗೊಳಿಸುವುದು ಮಾತ್ರವಲ್ಲ, ಅಗತ್ಯ ಬಿದ್ದರೆ ಅವರನ್ನು ಸಿಎಂ ಹುದ್ದೆಯಿಂದಲೇ ಕೆಳಗಿಳಿಸಬೇಕು ಎಂಬ ಲೆಕ್ಕಾಚಾರ ಈ ಪಡೆಗಿದೆ.
ಒಂದು ವೇಳೆ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಸಿಕ್ಕು, ಅವರು ಸಂಸತ್ತಿಗೆ ಆರಿಸಿ ಹೋದರೂ ಸಿದ್ಧರಾಮಯ್ಯನವರ ವಿರುದ್ಧ ಬಂಡಾಯದ ರಣಕಹಳೆ ಊದಬಹುದು. ಒಂದು ವೇಳೆ ತಮ್ಮ ಪಡೆಯ ಬಹುತೇಕರು ಗೆದ್ದು ಬರದಿದ್ದರೆ ಇದರ ಹೊಣೆಗಾರಿಕೆಯನ್ನು ಸಿದ್ಧರಾಮಯ್ಯನವರ ಹೆಗಲ ಮೇಲೆ ಹೊರಿಸಿ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಈ ಗುಂಪು ಯೋಚಿಸುತ್ತಿದೆ. ಪರಿಣಾಮವಾಗಿ ದಿಲ್ಲಿ ಗದ್ದುಗೆಯ ಮೇಲೆ ಕೂರಲು ಚಡಪಡಿಸುತ್ತಿರುವ ಮತ್ತು ಈ ವಿಷಯದಲ್ಲಿ ಕರ್ನಾಟಕದಿಂದ ತಮಗೆ ಬಂಪರ್ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಲೆಕ್ಕಾಚಾರ ತಲೆ ಕೆಳಗಾಗುವ ಸಾಧ್ಯತೆಯೂ ಇದೆ. ಅಂದ ಹಾಗೆ ಇಂತಹ ಸನ್ನಿವೇಶವನ್ನು ಜೆಡಿಎಸ್ ಹೇಗೆ ಬಳಸಿಕೊಳ್ಳುತ್ತದೆ ಎಂಬುದೂ ಮುಖ್ಯ. ಯಾಕೆಂದರೆ ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರ ಮಧ್ಯೆ ನಡೆಯುತ್ತಿರುವ ಅಹಂ ಸಂಘರ್ಷ ಇದೇ ರೀತಿ ಮುಂದುವರಿದರೆ ಲಾಭ ಪಡೆಯುವ ಹೆಚ್ಚಿನ ಅವಕಾಶ ದಕ್ಕುವುದು ಜೆಡಿಎಸ್ ಪಕ್ಷಕ್ಕೇ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಖ್ಯ ಮಾಡಿದ ಪರಿಣಾಮವಾಗಿ ಜೆಡಿಎಸ್‌ಗೆ ದೊಡ್ಡ ಮಟ್ಟದ ಲಾಭವಾಗಲಿಲ್ಲ. ಹೀಗಾಗಿ ಈ ಸಲ ಬಿಜೆಪಿ ಕಣಕ್ಕಿಳಿದರೆ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅದು ಗೆಲುವು ಗಳಿಸುವ ಸಾಧ್ಯತೆ ಇದೆ. ಆದರೆ ಮಂಡ್ಯದ ವಿಷಯಕ್ಕೆ ಬಂದಾಗ ಅದು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸದ್ಯದ ಸ್ಥಿತಿಯಲ್ಲಿ ಅದು ಮಾಜಿ ಶಾಸಕ ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ಬಯಸಿದೆಯಾದರೂ, ಪುಟ್ಟರಾಜು ವಿಷಯದಲ್ಲಿ ಮಂಡ್ಯದ ಜೆಡಿಎಸ್ ನಾಯಕರಿಗಿರುವ ಅಸಮಾಧಾನವನ್ನು ಹೋಗಲಾಡಿಸುವ ಯತ್ನ ಮಾಡಬೇಕು. ಯಾಕೆಂದರೆ ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಬಹುತೇಕ ನಾಯಕರನ್ನು ಸೋಲಿಸಲು ಪುಟ್ಟರಾಜು ಯತ್ನಿಸಿದ್ದರು ಎಂಬ ಅಸಮಾಧಾನದ ಹೊಗೆ ಇನ್ನೂ ಉಳಿದೇ ಇದೆ. ಇಂತಹ ಅಸಮಾಧಾನದ ಹೊಗೆಯನ್ನು ನಿವಾರಿಸಲು ಜೆಡಿಎಸ್ ಯತ್ನಿಸದಿದ್ದರೆ ಹಳೆಯ ಫಲಿತಾಂಶವೇ ಪುನರಾವರ್ತನೆಯಾಗುತ್ತದೆ.


ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿದು ತಮ್ಮ ಮೂಲ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ ಸಾಕು, ಅದರ ಲಾಭ ಜೆಡಿಎಸ್‌ಗೆ ದಕ್ಕುತ್ತದೆ. ಮೈಸೂರಿನಲ್ಲಿ ಲಿಂಗಾಯತ ಸಮುದಾಯದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿ ವಕ್ಕಲಿಗ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯದ ಗಣನೀಯ ಪ್ರಮಾಣದ ಮತಗಳನ್ನು ಸೆಳೆದರೆ ಅಲ್ಲೂ ಗೆಲುವು ದಕ್ಕುವ ಸಾಧ್ಯತೆ ಇದೆ. ಹಾಸನದಲ್ಲಿ ಖುದ್ದು ದೇವೆಗೌಡರೇ ಕಣಕ್ಕಿಳಿಯುವುದರಿಂದ ಗೆಲ್ಲುವ ವಿಷಯದಲ್ಲಿ ಅನುಮಾನವೇನಿಲ್ಲ. ಉಳಿದಂತೆ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಅದಕ್ಕಿದೆ. ಇಂತಹ ಅವಕಾಶವನ್ನು ಜೆಡಿಎಸ್ ಬಳಸಿಕೊಳ್ಳುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಯಾರೇನೇ ಹೇಳಲಿ, ಇವತ್ತಿನ ಸನ್ನಿವೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಕರ್ನಾಟಕದ ಹಿತ ಕಾಪಾಡಲು ಮೂರನೇ ಶಕ್ತಿ ದೊಡ್ಡ ಮಟ್ಟದಲ್ಲಿ ತಲೆ ಎತ್ತುವ ಅಗತ್ಯವೂ ಇದೆ. ಯಾಕೆಂದರೆ ದಿಲ್ಲಿ ಗದ್ದುಗೆಯ ಮೇಲೆ ಯುಪಿಎ ಬಂದು ಕೂರಲಿ, ಎನ್‌ಡಿಎ ಬಂದು ಕೂರಲಿ, ಕರ್ನಾಟಕದ ಹಿತ ಕಾಪಾಡುವ ವಿಷಯ ಬಂದಾಗ ಅವು ಮಲತಾಯಿ ಧೋರಣೆ ತೋರುವುದೇ ಜಾಸ್ತಿ. ಹೀಗಾಗಿ ಈ ಎರಡೂ ಶಕ್ತಿಗಳಿಗೆ ಎದುರೇಟು ನೀಡಲು ಮೂರನೇ ಶಕ್ತಿಯೊಂದು ಕರ್ನಾಟಕದಲ್ಲಿ ತಲೆ ಎತ್ತಲೇಬೇಕು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದ ಅಧಿಕಾರ ಗದ್ದುಗೆಯ ಮೇಲೆ ಕುಳಿತ ಯುಪಿಎ ಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ತೋರಿದ್ದೇ ಜಾಸ್ತಿ. ಹೋಗಲಿ, ಇಂತಹ ಅನ್ಯಾಯದ ವಿರುದ್ಧ ಹೋರಾಡುವ ಇಚ್ಛಾ ಶಕ್ತಿಯನ್ನು ಕಾಂಗ್ರೆಸ್ ಸಂಸದರು ತೋರಿಸಿದರಾ ಎಂದರೆ ಅದೂ ಇಲ್ಲ. ಎನ್‌ಡಿಎ ಬಂದು ಅಧಿಕಾರದ ಗದ್ದುಗೆಯ ಮೇಲೆ ಕುಳಿತರೂ ಅಷ್ಟೇ. ಹೀಗಾಗಿ ದಿಲ್ಲಿ ಗದ್ದುಗೆಯ ಮೇಲೆ ನಾಳೆ ಯಾವ ಮೈತ್ರಿಕೂಟ ಬಂದು ಕೂರುತ್ತದೋ ಆ ಮಾತು ಬೇರೆ. ಆದರೆ ಕರ್ನಾಟಕದ ಪಡಸಾಲೆಯಲ್ಲಿ ಜೆಡಿಎಸ್ ನೇತೃತ್ವದ ತೃತೀಯ ಶಕ್ತಿ ದೊಡ್ಡ ಮಟ್ಟದಲ್ಲಿ ತಲೆ ಎತ್ತುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಇವತ್ತು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಣ ಕಚ್ಚಾಟ, ಪರಸ್ಪರರ ಕಾಲೆಳೆದಾಟ ನೋಡಿದರೆ ತೃತೀಯ ಶಕ್ತಿ ಒಂದು ಮಟ್ಟದಲ್ಲಿ ತಲೆ ಎತ್ತುವ ಲಕ್ಷಣಗಳು ದಟ್ಟವಾಗಿವೆ. ಹಾಗಾಗಲಿ ಎಂದೇ ಹಾರೈಸೋಣ. ಯಾಕೆಂದರೆ ಇಂತಹ ಒಂದು ಶಕ್ತಿ ಇದ್ದರೆ ದಿಲ್ಲಿಯ ಆಳರಸರ ಮೇಲೆ ಪ್ರಭಾವ ಬೀರಲು, ರಾಜ್ಯದ ಹಿತ ಕಾಪಾಡಲು ಸಾಧ್ಯವಾಗುತ್ತದೆ. ಅಂತಹ ಕೆಲಸ ಕಾಂಗ್ರೆಸ್‌ನಿಂದಲೂ ಸಾಧ್ಯವಿಲ್ಲ. ಬಿಜೆಪಿಯಿಂದಲೂ ಸಾಧ್ಯವಿಲ್ಲ ಎಂಬುದು ನಿಸ್ಸಂಶಯ. ಈ ದೃಷ್ಟಿಯಿಂದಲಾದರೂ ತೃತೀಯ ರಂಗ ಕರ್ನಾಟಕದಲ್ಲಿ ತಲೆ ಎತ್ತಲಿ ಎಂದು ಹಾರೈಸೋಣ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books