Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಿಮ್ಮ ಬದುಕು ಹುರಿಗೊಳಿಸಿದ ಮೃದಂಗವಾಗಬೇಕಾದರೆ...

Nothing is impossible.
ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲ, ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬಹುದು. ಹಾಗಂತ ತತ್ವಜ್ಞಾನಿಗಳು ಹೇಳುತ್ತಾರೆ, ಮ್ಯಾನೇಜ್‌ಮೆಂಟ್ ಗುರುಗಳೂ ಅದನ್ನೇ ಹೇಳುತ್ತಾರೆ, ಆಟದಲ್ಲಿ ಸೋತ ಮಗನಿಗೂ ಅಮ್ಮ ಅದನ್ನೇ ಹೇಳುತ್ತಾಳೆ, ನಾನು ಓದಿದ ಶಾಲೆಯ ಮೇಷ್ಟ್ರೂ ಇದನ್ನೇ ಹೇಳಿದ್ದರು. ಹೇಳುವ ಧಾಟಿಯಲ್ಲಿ ಅಥವಾ ರೀತಿಯಲ್ಲಿ ವ್ಯತ್ಯಾಸ ಇರಬಹುದು. ಅವರ ಮಾತಿಗೆ ಉದಾಹರಣೆಯಾಗಿ ಒಂದಿಷ್ಟು ನೀತಿಕತೆಗಳು, ಪುರಾಣಪ್ರಸಂಗಗಳು, ನಿಜಜೀವನದಲ್ಲಿ ಸಂಭವಿಸಿದ ಘಟನೆಗಳು ಸೇರಿಕೊಳ್ಳಬಹುದು. ಕೇಜ್ರಿವಾಲಾನಿಗಿಂತ ಉದಾಹರಣೆ ಬೇಕಾ? ಮೊನ್ನೆಮೊನ್ನೆಯಷ್ಟೇ ತನ್ನ ಸುತ್ತ ಒಂದು ಚಿಕ್ಕ ಗುಂಪು ಸೇರಿಸಿಕೊಂಡು ಬೀದಿಯಲ್ಲಿ ನಿಂತುಕೊಂಡು, ಸರ್ಕಾರದ ವಿರುದ್ಧ ಕೂಗಾಡುತ್ತಿದ್ದ ಕೇಜ್ರಿವಾಲ್ ಇವತ್ತು ದೆಹಲಿಯ ಮುಖ್ಯಮಂತ್ರಿ. ಅವರ ಕೂಗಾಟ ಈಗಲೂ ಮುಂದುವರಿದಿದೆ ಅನ್ನೋದು ಬೇರೆ ಮಾತು.

ನಮ್ಮ ವಾಟಾಳ್ ಕೂಡಾ ಕೆಲವು ದಶಕಗಳಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ, ಆದರೆ ಅವರ ಕೂಗು ಬೀದಿರೋದನವಾಯಿತೇ ವಿನಹಾ ಅವರಿಗೆ ಅಧಿಕಾರದ ಭಾಗ್ಯ ತಂದುಕೊಡಲಿಲ್ಲ ಯಾಕೆ? ಕೇಜ್ರಿವಾಲಾನನ್ನು ದೆಹಲಿಯ ಜನ ಸ್ವೀಕರಿಸಿದಷ್ಟು ಸೀರಿಯಸ್ಸಾಗಿ ಕನ್ನಡಿಗರು ಯಾಕೆ ವಾಟಾಳ್ ಅವರನ್ನು ಸ್ವೀಕರಿಸಲಿಲ್ಲ? ಅದು ಅವರ ವ್ಯಕ್ತಿತ್ವದಲ್ಲಿರುವ ದೋಷವಾ ಅಥವಾ ಕನ್ನಡಿಗರ ಜಡತ್ವಕ್ಕೆ ಸಂಕೇತವಾ? ನನ್ನ ಪ್ರಕಾರ ಎರಡೂ ಅಲ್ಲ. ವಾಟಾಳ್ ಹೋರಾಟದಲ್ಲಿ ಪ್ರಾಮಾಣಿಕತೆಯಿತ್ತು, ಆದರೆ ಗೆಲುವಿಗೆ ಬೇಕಾದ ಶ್ರದ್ಧೆಯಾಗಲೀ, ಛಲವಾಗಲೀ ಇರಲಿಲ್ಲ. ಹಾಗಾಗಿ ಅವರೇನೇ ಮಾಡಿದರೂ ಅದು ಅವರ ವೈಯಕ್ತಿಕ ಹೋರಾಟವಾಗಿಯೇ ಜನರಿಗೆ ಕಾಣಿಸಿತಷ್ಟೇ ಹೊರತಾಗಿ ಜನರ ಹೋರಾಟವಾಗಿ ಪರಿವರ್ತನೆಯಾಗಲಿಲ್ಲ.

ಸುಮ್ಮನೇ ನಿಂತು ನೋಡುವವರಿಗೆ ಇದು ಪವಾಡದಂತೆಯೇ ಕಾಣಿಸುತ್ತದೆ. ನೀವು ಅರುಣಿಮಾ ಸಿನ್ಹಾ ಹೆಸರು ಕೇಳಿರಬಹುದು. ಈಕೆ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ. ಎರಡು ವರ್ಷದ ಹಿಂದೆ ಈಕೆ ರೈಲಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಈಕೆಯನ್ನು ಹೊರಗೆಸೆದರು. ಅರುಣಿಮಾಳ ಎಡಗಾಲು ಚಲಿಸುತ್ತಿದ್ದ ರೈಲಿನ ಕೆಳಗೆ ಸಿಕ್ಕು ಕತ್ತರಿಸಿಹೋಯಿತು. ಅಲ್ಲಿಗೆ ಆಕೆಯ ಕೆರಿಯರ್ ಮತ್ತು ಭವಿಷ್ಯ ಎರಡೂ ನಾಶವಾಗಿ ಹೋಯಿತು. ಹಾಗಂತ ಜನ ಅಂದುಕೊಂಡರು. ಆದರೆ ಕಳೆದ ತಿಂಗಳು ಅರುಣಿಮಾ ಒಂಟಿಕಾಲಲ್ಲೇ ಎವರೆಸ್ಟ್ ಶಿಖರದ ತುತ್ತತುದಿಯೇರಿ ಬಂದಳು. ಜಗತ್ತು ನಿಬ್ಬೆರಗಾಯಿತು.

“ನಾನು ಕಾಲು ಕಳೆದುಕೊಂಡಾಗ ಪ್ರತಿಯೊಬ್ಬರೂ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ಆ ಅನುಕಂಪದ ನೋಟದಿಂದ ಪಾರಾಗುವುದಕ್ಕಾದರೂ ನಾನು ಜೀವನದಲ್ಲಿ ಏನಾದರೂ ಮಾಡಲೇಬೇಕಾಗಿತ್ತು" ಇದು ಶಿಖರದಿಂದಿಳಿದು ಬಂದ ನಂತರ ಅರುಣಿಮಾ ಆಡಿದ ಮಾತು.

ಹಾಗಂತ ಜಗತ್ತಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಅಂತ ಸಾರಾಸಗಟಾಗಿ ತೀರ್ಮಾನಕ್ಕೆ ಬರೋದಕ್ಕಾಗುತ್ತಾ. ನೆವರ್, ಹಕ್ಕಿ ಥರ ಮನುಷ್ಯ ಆಗಸದಲ್ಲಿ ಹಾರಾಡುವುದಕ್ಕಾಗುತ್ತಾ, ಸಿನೆಮಾ ಹೀರೋ ಥರ ಏಕಕಾಲದಲ್ಲಿ ಹತ್ತಾರು ದುಷ್ಟರನ್ನು ಸದೆಬಡಿಯುವುದಕ್ಕಾಗುತ್ತಾ, ಸಮುದ್ರದ ನೀರು ಖಾಲಿ ಮಾಡೋದಕ್ಕಾಗುತ್ತಾ ಅಂತ ಸಿನಿಕರು ಪ್ರಶ್ನಿಸಬಹುದು. ಆಗ ಉಪಯೋಗಕ್ಕೆ ಬರುವುದೇ ತರ್ಕ, ಅಂದರೆ ಲಾಜಿಕ್ಕು. ನದಿಯಾಚೆಗೆ ನಿಧಿ ಇದೆ, ನಿಧಿ ಪಡೆದುಕೊಳ್ಳಬೇಕಾದರೆ ನೀವು ಈಜುತ್ತಾ ಆಚೆ ದಡ ಸೇರಬೇಕು. ನಿಮಗೆ ನಿಧಿಯ ಮೇಲೆ ಆಸೆ, ಆದರೆ ಈಜು ಬರುವುದಿಲ್ಲ. ಏನು ಮಾಡುತ್ತೀರಿ? ಇದು ನನ್ನ ಕೈಲಾಗದ ಕೆಲಸ ಅಂತ ಹೊರಟುಹೋಗುತ್ತೀರೋ ಅಥವಾ ಈಜು ಕಲಿತು ನಿಧಿಯನ್ನು ದಕ್ಕಿಸಿಕೊಳ್ಳುತ್ತೀರೋ? ಮಹತ್ವಾಕಾಂಕ್ಷಿಗಳು ಎರಡನೆಯದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಿಮ್ಮೊಳಗೊಂದು ಕನಸಿದ್ದರೆ, ಅದನ್ನು ನನಸಾಗಿಸುವ ತಯಾರಿ ಇದ್ದರೆ ಯಾವುದೂ ಅಸಾಧ್ಯ ಅಲ್ಲ.
ಉದಾಹರಣೆಗೆ ‘ಪ್ರಹಾರ್’ ಚಿತ್ರದಲ್ಲಿ ನಾನಾಪಾಟೇಕರ್ ಒಂದು ಡಜನ್ ಖಳರೊಂದಿಗೆ ಸೆಣಸಾಡುತ್ತಾನೆ. ಎಡಭುಜಕ್ಕೆ ಕತ್ತಿಯೇಟು ತಗಲಿದರೂ ಒಂದೇ ಕೈಯಲ್ಲಿ ಎಲ್ಲರನ್ನೂ ನಿರ್ನಾಮ ಮಾಡುತ್ತಾನೆ. ಅದು ನಮಗ್ಯಾರಿಗೂ ಅಸಹಜ ಅನಿಸಲಿಲ್ಲ. ಅದಕ್ಕೆ ಕಾರಣ ಚಿತ್ರದಲ್ಲಿ ಆತ ಒಬ್ಬ ಸೈನಿಕನಾಗಿದ್ದವನು, ಶತ್ರುಗಳನ್ನು ಎದುರಿಸುವುದು ಹೇಗೆ ಅನ್ನುವುದನ್ನು ತಿಂಗಳುಗಟ್ಟಲೆ ಅಭ್ಯಾಸ ಮಾಡಿದ್ದವನು. ಹಿ ಈಸ್ ಎ ಟ್ರೇನ್ಡ್ ಸೋಲ್ಜರ್. ಅಂಥಾದ್ದೊಂದು ತಯಾರಿ ಇದ್ದಿದ್ದರಿಂದಲೇ ಹತ್ತಾರು ಜನರನ್ನು ಏಕಕಾಲಕ್ಕೆ ಎದುರಿಸುವುದು ಆತನಿಗೆ ಸಾಧ್ಯವಾಯಿತು.

ನಾನಾಪಾಟೇಕರ್ ಯುದ್ಧವನ್ನು ಬದುಕಿನ ಹೋರಾಟಕ್ಕೂ ಅನ್ವಯಿಸಬಹುದು. ಬಹಳ ಜನರು ಹೋರಾಟಕ್ಕೆ ಮುಂಚೆಯೇ ಕದನವಿರಾಮ ಘೋಷಿಸುತ್ತಾರೆ. ನನ್ನ ಗೆಳೆಯನೊಬ್ಬ ಅನಂತಮೂರ್ತಿ ಅವರ ಶಿಷ್ಯನಾಗಿದ್ದ. ಕಲಿಕೆಯಲ್ಲಿ ಮುಂದಿದ್ದ, ಚೆನ್ನಾಗಿಯೂ ಬರೆಯಬಲ್ಲವನಾಗಿದ್ದ. ಒನ್ ಫೈನ್ ಡೇ, ಆತ ಪೆನ್ನು ಎತ್ತಿಟ್ಟ. ನಾನಿನ್ನು ಬರೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಏನಾಯಿತು ಅಂತ ಕೇಳಿದೆ. “ನಾನೇನೇ ಬರೆದರೂ ವ್ಯರ್ಥ ಕಣಯ್ಯ, ಅನಂತಮೂರ್ತಿ ಥರ ಬರೆಯೋದಕ್ಕಾಗುತ್ತಾ. ಅವರ ಜೀವನಾನುಭವ, ಒಳನೋಟ, ಅವರು ಬಳಸುವ ಭಾಷೆ, ಇವೆಲ್ಲವನ್ನೂ ನಾನು ಬಾಡಿಗೆಗೆ ಪಡೆದುಕೊಳ್ಳುವುದಕ್ಕಾಗುತ್ತಾ" ಅಂತ ಚರ್ಚೆಗೆ ಇಳಿದ. “ಅಲ್ಲ ಕಣಯ್ಯಾ, ನಿನಗೆ ಅನಂತಮೂರ್ತಿ ಮೇಷ್ಟ್ರು ಆಗಿದ್ದಿರಬಹುದು, ಅವರೇ ನಿನ್ನ ಪಾಲಿಗ ಐಕಾನ್ ಅಂತಾನೂ ಅನಿಸಿರಬಹುದು. ಆದರೆ ಅವರಂತೆಯೇ ಆಗಬೇಕು ಅನ್ನುವ ಹಠ ಯಾಕೆ. ನೀನು ನಿನ್ನ ಅನುಭವವನ್ನೇ ಬಂಡವಾಳವಾಗಿಟ್ಟುಕೊಂಡು ಬರಿ. ಸಾಹಿತ್ಯಲೋಕದಲ್ಲಿ ಅನಂತಮೂರ್ತಿಯವರು ಇದ್ದಹಾಗೆ ಭೈರಪ್ಪನವರೂ ಇದ್ದಾರೆ. ಇನ್ನೂ ಹಲವಾರು ದಿಗ್ಗಜರಿದ್ದಾರೆ. ನಿನ್ನ ಥರಾನೇ ಎಲ್ಲರೂ ಅಂದುಕೊಂಡರೆ ಹೊಸ ಲೇಖಕರು ಹುಟ್ಟಿಕೊಳ್ಳುವುದಾದರೂ ಹೇಗೆ. ಇಲ್ಲಿ ಎಲ್ಲರಿಗೂ ಒಂದು ಸ್ಪೇಸ್ ಅನ್ನೋದಿರುತ್ತೆ. ಅದನ್ನು ನಾವು ಹುಡುಕಿಕೊಳ್ಳಬೇಕು" ಅಂತ ನಾನು ಹಿತೋಪದೇಶ ಮಾಡಿದೆ. “ನೀನು ಹೇಳುವುದು ನಿಜ ಇರಬಹುದು, ಆದರೆ ನಾನು ಬರೆದಿದ್ದನ್ನು ಅನಂತಮೂರ್ತಿಯವರ ಬರವಣಿಗೆ ಜೊತೆ ಹೋಲಿಸಿದಾಗ ಕ್ಷುಲ್ಲಕ ಅನಿಸುತ್ತದೆ, ಬರೆದರೆ ಅವರ ಥರ ಬರೀಬೇಕು, ಇಲ್ಲದಿದ್ದರೆ ಸುಮ್ಮನಿರಬೇಕು ಅನಿಸುತ್ತದೆ" ಅಂದುಬಿಟ್ಟ. ಅವನು ಆಮೇಲೆ ಯಾವತ್ತೂ ಬರೆಯಲಿಲ್ಲ, ಯಾವುದೋ ಹಂತದಲ್ಲಿ ಓದುವುದನ್ನೂ ನಿಲ್ಲಿಸಿದ. ಈಗ ಅವನು ಅನಂತಮೂರ್ತಿಯವರನ್ನೂ ಓದುವುದಿಲ್ಲ. ಊರಲ್ಲಿ ಕೃಷಿ ಮಾಡುತ್ತಿದ್ದಾನೆ, ಸಾಹಿತ್ಯದ ಕೃಷಿ ಮಾಡಬೇಕು ಅಂತ ಕನಸು ಕಂಡವನು ಈಗ ಹೊಲದಲ್ಲಿ ಅಸಲಿ ಕೃಷಿಯಲ್ಲಿ ನಿರತನಾಗಿದ್ದಾನೆ. ಅದರಿಂದ ಕನ್ನಡ ಸಾರಸ್ವತ ಲೋಕಕ್ಕೇನೂ ನಷ್ಟವಾಗಲಿಲ್ಲ ಬಿಡಿ. ಸಾಹಿತಿ ಸತ್ತರೆ ರೈತ ಹುಟ್ಟುತ್ತಾನೆ ಅನ್ನುವ ಸೋಜಿಗ ಸೃಷ್ಟಿಯಾಯಿತು ಅಷ್ಟೆ.

ಶಿಕ್ಷಣದಿಂದ ವಂಚಿತರಾದವರು, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದವರು, ವಿಭಿನ್ನ ಚೇತನರು, ಇವರೆಲ್ಲರೂ ಕೀಳರಿಮೆಯಿಂದ ಬಳಲುತ್ತಿರುವುದನ್ನು ಒಪ್ಪಿಕೊಳ್ಳಬಹುದು. ಯಾಕೆಂದರೆ ಅಲ್ಲೊಂದು ಸಕಾರಣವಿರುತ್ತದೆ. ಚೆನ್ನಾಗಿ ಓದಿಕೊಂಡವರು, ಒಳ್ಳೇ ನೌಕರಿಯಲ್ಲಿರುವವರೂ ಕೂಡಾ ಇಂಥಾದ್ದೊಂದು ಮೆಂಟಲ್ ಬ್ಲಾಕ್‌ಗೆ ಒಳಗಾಗುವುದು ಯಾಕೆ? ಅದನ್ನು ಸೋಮಾರಿತನ ಅನ್ನಬಹುದಾ? ಅಲ್ಪತೃಪ್ತಿ ಅನ್ನಬಹುದಾ? ತನಗಿಂತ ಮೇಲಿರುವವರ ಬಗ್ಗೆ ಇರುವ ಅಸೂಯೆ ಅನ್ನಬಹುದಾ ಅಥವಾ ಅಪ್ಪಟ ಸಿನಿಕತನ ಅನ್ನಬಹುದಾ? ಇದಕ್ಕೆ ಪೂರಕವಾಗಿ ಇನ್ನೊಂದು ಕತೆ ಹೇಳುತ್ತೇನೆ. ನನ್ನ ಸಂಬಂಧಿಕ ಹುಡುಗನೊಬ್ಬನಿಗೆ ಹುಟ್ಟಿದಾರಭ್ಯ ತೊದಲುವಿಕೆ ಇತ್ತು. ಒಂದು ವಾಕ್ಯವನ್ನು ಪೂರ್ತಿ ಮಾಡಬೇಕಾದರೆ ಎರಡು ನಿಮಿಷ ತೆಗೆದುಕೊಳ್ಳುತ್ತಿದ್ದ. ಒಂದ್ಸಾರಿ ಅವನು ಮಾತು ಮುಗಿಸಲಿ ಅಂತ ನಾವೇ ಚಡಪಡಿಸುತ್ತಿದ್ದೆವು. ಆದರೆ ಅವನ ತಂದೆ ಸೊಗಸಾಗಿ ದೇವರನಾಮ ಹಾಡುತ್ತಿದ್ದರು. ಅಷ್ಟೇ ಅಲ್ಲ, ಪ್ರತಿ ಶನಿವಾರ ರಾತ್ರಿಯಿಂದ ಬೆಳಗು ಹರಿಯುವ ತನಕ ಮನೆಯಲ್ಲೇ ಭಜನೆ ಕಾರ್ಯಕ್ರಮ ನಡೆಸುತ್ತಿದ್ದರು. ನೂರಾರು ಜನ ಅವರ ಮನೆಗೆ ಬಂದು ಪುಣ್ಯ ಸಂಪಾದನೆ ಮಾಡುತ್ತಿದ್ದರು. ಆ ಅತಿಥಿಗಳ ಪೈಕಿ ಒಬ್ಬ ವೈದ್ಯರೂ ಇದ್ದರು. ಒಂದು ದಿನ ಆ ವೈದ್ಯರಿಗೊಂದು ವಿಚಿತ್ರ ಐಡಿಯಾ ಹೊಳೆಯಿತು. ಆ ಹುಡುಗನನ್ನು ಕರೆದು ನೀನ್ಯಾಕೆ ಭಜನೆ ಹಾಡಬಾರದು ಎಂದರು. ಆತ ಮೊದಲು ಗಾಬರಿಯಾದ, ಇನ್ನಷ್ಟು ಪುಸಲಾಯಿಸಿದ ನಂತರ “ಜಯ ಓಂ ಮಹಾಕಾಳಿ, ಜಗದಂಭ ಜಯಕಾಳಿ" ಅಂತ ಒಂದು ಭಜನೆ ಹಾಡಿಯೇ ಬಿಟ್ಟ. ನೀವು ನಂಬಿದರೆ ನಂಬಿ, ಇಡೀ ಹಾಡಲ್ಲಿ ಒಂದು ಬಾರಿಯೂ ಸ್ಟಾಮರಿಂಗ್ ಅನ್ನುವುದು ಆತನನ್ನು ಕಾಡಲೇ ಇಲ್ಲ. ಹಾಗೆ ಹಾಡುವುದಕ್ಕೆ ಶುರು ಮಾಡಿದವನು, ಮಾತಲ್ಲೂ ಅದೇ ಸ್ಪಷ್ಟತೆಯನ್ನು ಸಾಧಿಸಿದ. ಈಗ ಆತ ನಮ್ಮೂರಲ್ಲಿ ಒಳ್ಳೆಯ ಭಾಷಣಗಾರ ಅನ್ನುವ ಹೆಸರು ಪಡೆದಿದ್ದಾನೆ.

ಬದುಕಿನ ಯಾವುದೋ ಹಂತದಲ್ಲಿ ತಮ್ಮ ಬೆಳವಣಿಗೆಗೆ ತಾವೇ ಬ್ರೇಕ್ ಹಾಕಿಕೊಳ್ಳುವವರನ್ನು ಬ್ರೆಜಿಲ್ ಚಿಂತಕ Acomodator( A comodater ಅಲ್ಲ) ಎಂದು ಕರೆಯುತ್ತಾನೆ. ಎಸ್ಸೆಸ್ಸೆಲ್ಸಿಯಲ್ಲಿ ನೂರಕ್ಕೆ ತೊಂಭತ್ತೈದು ಪರ್ಸೆಂಟು ಅಂಕ ಗಳಿಸಿದ ಹುಡುಗ ಪಿಯೂಸಿಯಲ್ಲಿ ಯಾಕೆ ಫೇಲ್ ಆಗುತ್ತಾನೆ? ಬಹುಶಃ ಆತನ ಬದುಕಿನಲ್ಲಿ ಹಿಂದೆ ಯಾವತ್ತೋ ನಡೆದ ದುರ್ಘಟನೆಯೊಂದು ಆತನನ್ನು ಹಿಂದೆ ಎಳೆಯುತ್ತಿರಬಹುದು. ಒಂದು ಸೋಲು, ಒಂದು ಯಾತನೆ, ಪ್ರೀತಿಯಲ್ಲಿ ಸೋತು ಹೋದ ಅವಮಾನ ಅಥವಾ ಆತನಿಗೇ ಅರ್ಥವಾಗದೇ ಹೋದ ಒಂದು ಗೆಲುವು, ಆತನನ್ನು ಹೇಡಿಯಾಗಿಸಿರಬಹುದು. ಆತ ಮುಂದೆ ಹೋಗುತ್ತಿದ್ದಂತೆ ಆ ಹಳೆಯ ಕಡಿವಾಣ ಅವನನ್ನು ಹಿಂದಕ್ಕೆ ಎಳೆಯುತ್ತಿರಬಹುದು. ಹಾಗಿದ್ದರೆ ಇದರಿಂದ ಹೊರಗೆ ಬರುವುದು ಹೇಗೆ? ಒಂದ್ಸಾರಿ ಆ ಘಟನೆಯನ್ನು ಒಂದು ಸಾರಿ ಕಣ್ಣಮುಂದೆ ತಂದುಕೊಂಡು ರಿವೈಂಡ್ ಮಾಡಿ. ಅದು ಯಾಕಾಯಿತು, ಹೇಗಾಯಿತು, ಅದಕ್ಕೆ ಕಾರಣರಾರು ಅನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಳ್ಳಿ.

ನನ್ನದೇ ಉದಾಹರಣೆ ತೆಗೆದುಕೊಳ್ಳಿ. ನಾನು ಪಿಯೂಸಿ ಓದುತ್ತಿದ್ದಾಗ ಮೃದಂಗ ಕಲಿಯುವುದಕ್ಕೆ ಹೊರಟೆ. ಆದರೆ ಎರಡೇ ತಿಂಗಳಲ್ಲಿ ಮಿಕ್ಕವರು, ನನಗಿಂತ ಕಿರಿಯರು ನನಗಿಂತ ಫಾಸ್ಟ್ ಆಗಿದ್ದಾರೆ ಅನಿಸಿತು. ‘ತಾ ದಿ ತೋಂ ನಂ’ಗಿಂತ ಆಚೆ ನಾನು ಹೋಗಲೇ ಇಲ್ಲ. ಮಿಕ್ಕವರು ತಕ್ಕಿಟ, ದಿಕ್ಕಿಟ, ತೋಂಕಿಟ, ನಂಕಿಟ ಅಂತ ಬಾರಿಸುತ್ತಾನೇ ಇದ್ದರು. ಅವರನ್ನು ನೋಡುತ್ತಾ ನಾನೊಬ್ಬ ಮೀಡಿಯೋಕರ್, ನನಗೂ ಮೃದಂಗಕ್ಕೂ ಆಗಿಬರುವುದಿಲ್ಲ. ನಾನಿದೇ ಥರ ಮುಂದುವರಿದರೆ ಮಿಕ್ಕವರ ಮುಂದೆ ನಾಚಿಕೆಗೀಡಾಗುತ್ತೇನೆ ಅನ್ನುವ ಆತಂಕ ಆವರಿಸಿತು. ಹಾಗಾಗಿ ನಾನು ಆ ಪಾಯಿಂಟಲ್ಲೇ ನಿಂತುಬಿಟ್ಟೆ, ಮೃದಂಗ ಕಲಿಕೆಗೆ ಎಳ್ಳುನೀರು ಬಿಟ್ಟೆ. ಅನಂತರವೂ ಹಲವು ವರ್ಷ ಯಾರೋ ಮೃದಂಗ ನುಡಿಸುತ್ತಿದ್ದರೆ ನನ್ನದೆಯೊಳಗೆ ಅವಮಾನದ ಢಮರುಗ ಅನುರಣಿಸುತ್ತಿತ್ತು. ಒಂದು ಫೈನ್ ಡೇ ಈ Acomodaterನಿಂದ ಹೊರಗೆ ಬರಲೇಬೇಕು ಅಂತ ನಿಶ್ಚಯಿಸಿದೆ. ನಾವು ನಮ್ಮ ಚರಿತ್ರೆಯನ್ನು ಮರೆಯಬೇಕು, ಮರೆಯಬೇಕಾದರೆ ಅದನ್ನು ಮತ್ತೆಮತ್ತೆ ಕಣ್ಣಮುಂದೆ ತಂದು ನಿಲ್ಲಿಸಿ ದಂಡಿಸಬೇಕು. ಯಾಕೆಂದರೆ ನಮ್ಮ ಸುತ್ತಮುತ್ತ ಇರುವ ಸಂಗತಿಗಳೆಲ್ಲಾ ಬದಲಾಗುತ್ತಲೇ ಇವೆ. ಮೃದಂಗದಂಥಾ ಆ ರಿದಂಗೆ, ಲಯಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಆಗಲೇ ನಾವು ಮುಂದುವರಿಯುವುದಕ್ಕೆ ಸಾಧ್ಯ. ಇದು ನನ್ನ ಮಿತಿ ಅಂದುಕೊಂಡು ನಿಂತಲ್ಲೇ ನಿಂತರೆ ಅದು ನಿಮ್ಮ ಇತಿಶ್ರೀಯೂ ಆಗಬಹುದು. ಎಲ್ಲವನ್ನೂ ದಾಟಿ ನಡೆಯಿರಿ, ಸ್ನೇಹಿತರನ್ನು ಇನ್ನಷ್ಟು ಜಾಸ್ತಿ ಪ್ರೀತಿಸಿ, ಬದುಕಲ್ಲಿ ಇನ್ನಷ್ಟು ರಿಸ್ಕ್ ತೆಗೆದುಕೊಳ್ಳಿ.
ಆಗ ಬದುಕು ಅನ್ನುವುದು ಹುರಿಗೊಳಿಸಿದ ಮೃದಂಗವಾಗುತ್ತದೆ. ಮನಸ್ಸು ತಕ್ಕಿಟ ಧಿಕ್ಕಿಟ ತೋಂಕಿಟ...

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books