Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಾನು ಮತ್ತು ನನ್ನ ಮೂರು ಕುಟುಂಬ...

ನಿಮಗೆ ಗೊತ್ತು.
ನನಗೂ ನೆನಪಿದೆ. ನನ್ನದು elephantine memory. ಆನೆಗಾತ್ರದ ಜ್ಞಾಪಕ ಶಕ್ತಿ. ಇರುವುದು ಮೂರೇ ಶಕ್ತಿ. ಒಂದು ಜೀರ್ಣಶಕ್ತಿ. ಈಗ ಊಟ ಕಡಿಮೆ ಮಾಡಿದ್ದೇನೆ. ಹತ್ತು ವರ್ಷದ ಹಿಂದೆ ಎಂಟು ಜೋಳದ ರೊಟ್ಟಿ ಒಂದು ಗುಕ್ಕಿಗೆ ತಿನ್ನುತ್ತಿದ್ದೆ. ಈಗ ಒಂದು ರೊಟ್ಟಿಗೆ ಸುಸ್ತು. ಎರಡನೆಯದು ನೆನಪಿನ ಶಕ್ತಿ. ಅದು ನನ್ನ gene poolನಲ್ಲಿ ಅಂದರೆ, ವಂಶವಾಹಿನಿಯಲ್ಲಿ ಇದೆ. ನನ್ನ ಮಾವ ಬೆಳಗೆರೆ ಕೃಷ್ಣ ಶಾಸ್ತ್ರಿಗಳಿಗೆ ಅದಿತ್ತು. ಅಮ್ಮನಿಗಿತ್ತು. ನಾನು ವಂಶವಾಹಿನಿಯಾಗಿ ಬಸಿದುಕೊಂಡಿದ್ದೇನೆ. ಮೂರನೆಯದು ಮಿಲನ ಶಕ್ತಿ. ಅದರ details ನಿಮ್ಮ ಮಟ್ಟಿಗೆ uninteresting. ಒಂದು ನೆನಪಿನ ಶಕ್ತಿಯ ಬಗ್ಗೆ ಹೇಳುತ್ತಿದ್ದೆ.

ನನಗೆ ೧೯೬೭ರಲ್ಲಿ ಕವಿ ಗುಲ್ಜಾರ್ ಬರೆದ ಹಾಡು ನೆನಪಿದೆ: ಅಕ್ಷರಶಃ ಬಾಯಿಪಾಠ. “ಹಮ್ ನೇ ದೇಖೀ ಹೈ ಇನ್ ಆಂಖೋಂಕಿ ಮೆಹಕ್‌ತಿ ಖುಷ್‌ಬೂ... ಹಾಥ್ ಸೇ ಛೂಕೆ ಇಸೆ ರಿಷ್ತೋಂಕಾ ಇಲ್ಜಾಮ್ ನಾ ದೋ". ನಾನು ನಿನ್ನ ಕಣ್ಣಲ್ಲಿ ಹೊಳೆವ ಘಮವನ್ನು ಕಂಡಿದ್ದೇನೆ. ಇದನ್ನು ಕೈಯಲ್ಲಿ ಮುಟ್ಟಿ ಸಂಬಂಧಗಳ ಆಪಾದನೆ ಹೊರಿಸಬೇಡ ಅಂತ ಅರ್ಥ. ಕಣ್ಣಲ್ಲಿ ಮೆಹಕ್, ಅಂದರೆ ಹೊಳವು. ಆದರೆ ಖುಷ್‌ಬೂ ಅಂದರೆ ಘಮ. ಕಣ್ಣಲ್ಲಿ ಘಮ ಕಾಣಲು ಸಾಧ್ಯವೇ? ಗುಲ್ಜಾರ್ ಅವರ ಕವಿತೆಯ ಚಂದವಿರುವುದೇ ಇಂಥ opposite ಸಿಮಿಲಿಗಳಲ್ಲಿ. ಕಣ್ಣಲ್ಲಿ ಕಂಡ ಹೊಳವು, ಘಮ: ಅವು ನನಗೆ ಇಷ್ಟ. ಆದರೆ ಅವುಗಳನ್ನು ಕೈಯಿಂದ ಮುಟ್ಟಿ ‘ಸಂಬಂಧ’ದ ಆರೋಪ ಮಾಡಬೇಡ. ಹಾಗಂತ ೧೯೬೭ರಲ್ಲಿ ಬರೆದ ಗುಲ್ಜಾರ್ ಇವತ್ತಿಗೂ ಬರೆಯುತ್ತಿದ್ದಾನೆ. “ಬೀಡಿ ಜಲೈಲಾ ಜಿಗರ್ ಸೇ ಪಿಯಾ ಜಿಗರ್ ಮಾ ಬಡೀ ಆಗ್ ಹೈ...." ಇದನ್ನು ‘ಓಂಕಾರ’ ಚಿತ್ರಕ್ಕಾಗಿ ೨೦೧೧ರಲ್ಲಿ ಬರೆದರು. ಅದರ ಅರ್ಥ ಅವರ potency ಅಂದರೆ ಮಿಲನ ಸ್ಥೈರ್ಯ ಎಷ್ಟು ವರ್ಷ ಹೇಗೆ ಜಾಗೃತವಾಗಿತ್ತು ಅಂತ. ಅರ್ಥ ಮಾಡಿಕೊಳ್ಳಿ. ನಾನು ಈಗಷ್ಟೆ ಹೇಳಿದೆ. ಕುಮಾರವ್ಯಾಸನಿಗೆ ಹುಳುಕು ಹಲ್ಲಿತ್ತಾ? ಕಾಲು ಕುಂಟುತ್ತಿತ್ತಾ? ತೊದಲುತ್ತಿತ್ತಾ? ಷೇಕ್ಸ್‌ಪಿಯರ್ ಸಲಿಂಗಕಾಮಿಯಾ? ಅರ್ನೆಸ್ಟ್ ಹೆಮಿಂಗ್ವೇಗೆ ಆರು ಹೆಂಡಂದಿರಿದ್ದರಾ? ಇವೆಲ್ಲ ಯಾರಿಗೆ ಬೇಕು! ಗದುಗಿನ ವೀರನಾರಾಯಣನ ದೇವಸ್ಥಾನದಲ್ಲಿ ಕುಳಿತು “ಶ್ರೀವನಿತೆಯರಸನೇ ವಿಮಲ ರಾಜೀವ ಪೀಠಗ ಪಿತನೇ, ಜಗತಪಾದನ..." ಅಂತ ಬರೆದ ಕುಮಾರವ್ಯಾಸ ಅಂದರೆ ಗದುಗಿನ ನಾರಣಪ್ಪ ನಮಗೆ ಬೇಕು. ಸಾಹಿರ್ ಲುಧಿಯಾನವಿಯ “ಕಭೀ ಕಭೀ ಮೇರೆ ದಿಲ್ ಮೆ ಖಯಾಲ್ ಆತಾ ಹೈ" ಅಂತ ಬರೆದ ಆ ಸಾಹಿರ್ ಬೇಕು.

ಒಮ್ಮೆ ತೆಲುಗಿನ ಮಹಾ ಕವಿ ಶ್ರೀ ಶ್ರೀ, ಅಂದರೆ ಶ್ರೀರಂಗಂ ಶ್ರೀನಿವಾಸರಾವ್ ಅವರನ್ನು ಹುಡುಗಿಯೊಬ್ಬಳು ಸಂದರ್ಶನ ಮಾಡ್ತಾಳೆ. “ನಿಮಗೆ ಇಬ್ಬರು ಹೆಂಡಿರು. ಆದರೆ ಅನೇಕ ಹೆಂಗಸರೊಂದಿಗೆ ನಿಮಗೆ ಸಂಪರ್ಕವಿದೆ ಎಂಬ ಮಾತಿದೆ" ಇದಕ್ಕೆ ನೀವು ಏನು ಹೇಳುತ್ತೀರಿ? ಎಷ್ಟು ಜನರೊಂದಿಗೆ ಮಲಗಿದ್ದೀರಿ ಎಂದು ಕೇಳುತ್ತಾಳೆ. ಅದಕ್ಕೆ ಶ್ರೀ ಶ್ರೀ ಕೊಟ್ಟ ಉತ್ತರವಿಷ್ಟೆ.
“ನೀನು ಉಪ್ಪಿಟ್ಟು ತಿಂದಿದ್ದೀಯಾ. ನಿನ್ನ ಬದುಕಿನಲ್ಲಿ ಎಷ್ಟು ಬಾರಿ ತಿಂದಿದ್ದೀನಿ ಎಂಬ ನೆನಪಿದೆಯಾ. ಹಾಗೆ ನಾನು ಎಷ್ಟು ಹೆಂಗಸರೊಂದಿಗೆ ಮಲಗಿದ್ದೇನೆ ಎನ್ನುವುದು ಲೆಕ್ಕಕ್ಕಿಲ್ಲ. ಆದರೆ, ಪ್ರೀತಿಸಿದ ಹೆಣ್ಣಿನೊಂದಿಗೆ ಕೇವಲ ಭೋಗಕ್ಕಾಗಿ ನಾನು ಯಾವತ್ತೂ ಮಲಗಿಲ್ಲ ಎಂದು ಉತ್ತರಿಸುತ್ತಾರೆ. ಇದು ಕವಿಗಳ ಬದುಕು; ಕ್ರಿಯಾಶೀಲರ ಬದುಕು. ನಮಗೆ ಅವರ ಕವಿತೆ, ಅವರ ಕಾವ್ಯ, ಅವರ ಗದ್ಯ, ಅವರ ಬದುಕು ಮಾದರಿಯಾಗಬೇಕು. ಅವರ ಚಟಗಳಲ್ಲ.

ನಾನು ಈಗ ಸಂಪೂರ್ಣವಾಗಿ ಜನಶ್ರೀ ವಾಹಿನಿಯ ಸಿಇಓ ಮತ್ತು ಪ್ರಧಾನ ಸಂಪಾದಕನಾಗಿ ಸಾರಥ್ಯ ವಹಿಸಿದ್ದೇನೆ. ನನ್ನ ಕನಸು ಅಕ್ಷರಗಳೊಂದಿಗೆ ಮಾತ್ರ. ‘ಪತ್ರಿಕೆ’ ನನ್ನ ಮೊದಲ ಆದ್ಯತೆ. ‘ಹಾಯ್ ಬೆಂಗಳೂರ್!’ ನನ್ನ ಪಾಲಿಗೆ ಕಲ್ಪವೃಕ್ಷ. ‘ಓ ಮನಸೇ...’ ನನ್ನ ಕನಸಿನ ಕೂಸು. ಇವುಗಳಿಗಾಗಿ ನಾನು ನನ್ನ ಬದುಕಿನ ಅನೇಕ ವರ್ಷಗಳು, ಕನಿಷ್ಠ ಪಕ್ಷ ಹದಿನೆಂಟು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನೀವು ಯಾವತ್ತಿಗೂ ನನ್ನ ದೊರೆಗಳೇ. ನಾನು ನಿಮ್ಮ ವಾರಗೂಲಿ. ಈಗ ‘ಓ ಮನಸೇ...’ ಆರಂಭವಾದ ಮೇಲೆ ನಾನು ಪಾಕ್ಷಿಕಗೂಲಿ. ನಿಮ್ಮ ನಿರೀಕ್ಷೆಯನ್ನು ಹದಿನೆಂಟು ವರ್ಷಗಳಿಂದ ಸುಳ್ಳು ಮಾಡಿಲ್ಲ.

ಕಾರ್ಗಿಲ್ ಯುದ್ಧವಾಯ್ತು. ರಣರಂಗದಲ್ಲಿ ನಿಂತ ಇಬ್ಬರೇ ಕನ್ನಡಿಗ ಪತ್ರಕರ್ತರಲ್ಲಿ ನಾನು ಮತ್ತು ನನ್ನ ನೆಚ್ಚಿನ ವರದಿಗಾರ ಆರ್.ಟಿ.ವಿಠ್ಠಲಮೂರ್ತಿ. ಅಫಘನಿಸ್ತಾನವನ್ನು ಅಮೆರಿಕಾ ಕುಟ್ಟಿ ಪುಡಿ ಮಾಡಿದಾಗ ಯುದ್ಧರಂಗದಲ್ಲಿದ್ದ ಏಕೈಕ ಕನ್ನಡಿಗ ಪತ್ರಕರ್ತ ನಾನೇ. ಗುಜರಾತ್‌ನಲ್ಲಿ ಭೂಕಂಪವಾದಾಗ ನಾನು ಮತ್ತು ನನ್ನ ಆತ್ಮಸಂಗಾತಿ ನಿವೇದಿತಾ ಅಲ್ಲಿಗೆ ಹೋದೆವು. ಒರಿಸ್ಸಾದಲ್ಲಿ ಚಂಡಮಾರುತ ಬಂತು. ಹೋದವರು ಇಬ್ಬರೇ ಕನ್ನಡಿಗರು. ಒಬ್ಬರು ಕೇಂದ್ರ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಮತ್ತು ನಾನು.
ಎಲ್ಲೆಲ್ಲಿ ಮನುಷ್ಯನ ಸಂಕಷ್ಟಗಳಿದ್ದವೋ ಅಲ್ಲಿಗೆ ಹೋಗಿ ಅದನ್ನು ವರದಿ ಮಾಡಿದವನು ನಾನು. ಕಣ್ಣೀರು ಒರೆಸುವ ಹುಸಿ ಪ್ರಯತ್ನ ನನ್ನದಲ್ಲ. ಕರ್ನಾಟಕದಲ್ಲಿ ಹದಿನೇಳು ಜನ ಯೋಧರು ಮೃತರಾದರು. ಅವತ್ತಿಗೆ ಪ್ರಧಾನಿ ಫಂಡ್‌ಗೆ ಹಣ ಕೊಡಿ ಎಂದು ಸರ್ಕಾರ ಕೇಳಿತು. ನನ್ನ ಮೇಲೆ ನಂಬಿಕೆ ಇದ್ದರೆ ಕೈ ಹಿಡಿಯಿರಿ. ಅದನ್ನು ನಾನು ಕರ್ನಾಟಕದ ಮಡಿದ ಯೋಧರಿಗೆ ತಲುಪಿಸುತ್ತೇನೆ ಎಂದು ಪತ್ರಿಕೆಯಲ್ಲಿ ಬರೆದೆ. ದೊರೆಗಳೇ, ನೀವು ಹದಿನೇಳು ಲಕ್ಷ ರುಪಾಯಿ ಕೊಟ್ಟಿರಿ. ದಿವಂಗತರಾದ ಎಚ್.ನರಸಿಂಹಯ್ಯ, ಗೆಳೆಯ ಜಯಂತ್ ಕಾಯ್ಕಿಣಿ ಮತ್ತು ನಾನು ಮೂರು ಜನರ ಒಂದು ಕಮಿಟಿ ಮಾಡಿದೆವು. ನೀವು, ನಿಮ್ಮ ಅನ್ನ ಬಿಟ್ಟು, ಊಟ ಬಿಟ್ಟು, ಸಂಬಳ ಬಿಟ್ಟು ಹದಿನೇಳು ಲಕ್ಷ ರುಪಾಯಿ ಕೊಟ್ಟಿರಿ. ಆ ಹದಿನೇಳು ಕುಟುಂಬಗಳನ್ನು ಕರೆಸಿ, ಸಮಾರಂಭ ಮಾಡಿ ತಲಾ ಒಂದು ಲಕ್ಷ ರುಪಾಯಿ ಕೊಟ್ಟೆ. ಇದನ್ನು ಮಾದರಿಯಾಗಿಟ್ಟುಕೊಂಡು ರಾಜಕಾರಣಿಗಳು, ಮಠಾಧಿಪತಿಗಳು ಸರಿಸುಮಾರು ಒಂದೊಂದು ಕುಟುಂಬಕ್ಕೆ ಎರಡು ಕೋಟಿ ರುಪಾಯಿಗಳನ್ನು ಕೊಟ್ಟರು. ಇದು ನನ್ನ ಪತ್ರಿಕೋದ್ಯಮದ ಸಾಧನೆಗಳ ಪೈಕಿ ಒಂದು. ನೀವು, ಅಂದರೆ ಕೆಲವರು ಸರ್ಕಾರಗಳನ್ನು ಕೆಡವಿ, ಪಕ್ಷಗಳನ್ನು ಗೆಲ್ಲಿಸಿಲ್ಲ. ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ ಎಂದು ಬರೆಯುತ್ತಾರೆ, ಮಾತನಾಡುತ್ತಾರೆ. ಪತ್ರಿಕೋದ್ಯಮ ಎಂದರೆ ಇದ್ಯಾವುದೂ ಅಲ್ಲ. ಸರ್ಕಾರವನ್ನು ರೂಪಿಸುವವರು ಜನ. ರಾಜಕಾರಣಿಗಳನ್ನು ಚುನಾಯಿಸುವವರು ಜನ ಮತ್ತು ಅವರನ್ನು ಇಳಿಸುವವರು ಕೂಡ ಜನರೇ.

ನಾನು ಅನೇಕ ಭಾಷಣಗಳಲ್ಲಿ ಹೇಳಿದ್ದೇನೆ. “ನಿಮ್ಮ ಊರಿಗೆ ಬಂದು ನಿಮ್ಮ ಶಾಸಕರನ್ನು ಬೈದರೆ ಇಷ್ಟು ಚಪ್ಪಾಳೆ ಹೊಡೆಯುತ್ತೀರಿ. ನನಗೆ ಗೊತ್ತು ಮಧ್ಯಮ ವರ್ಗದವರಾದ ನೀವು ಯಾರಿಗೂ ಮತದಾನ ಮಾಡುವುದಿಲ್ಲ. ನಿಮ್ಮ ಚಪ್ಪಾಳೆ, ನೀವು ಹಾಕಿದ, ನೀವು ಗೆಲ್ಲಿಸಿದ ಶಾಸಕನ ಬಗ್ಗೆ ನೂರಾರು ಕಿಲೋಮೀಟರು ಕ್ರಮಿಸಿ ಬಂದ ನಾನು ಮಾತನಾಡಿದರೇ ಹೊಡೆಯುವ ಚಪ್ಪಾಳೆಯಿದೆಯಲ್ಲಾ ಅದು ಮತವಾಗಿ ಪರಿವರ್ತಿತವಾಗಬೇಕು. ನಾನು ಬೈದರೆ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂತೋಷಕ್ಕಾಗಿ ನಾನು ಬೈಯಲು ಬರುವುದಿಲ್ಲ. ನೀವು ಆರಿಸಿದ ಪ್ರತಿನಿಧಿಯ ವಿರುದ್ಧ, ಮತ್ತು ಅವನ ಮನಪರಿವರ್ತನೆಗಾಗಿ ಮಾತನಾಡುತ್ತೇನೆ. ನಾನು ಜನನಾಯಕ. ಜನ್ಮದಲ್ಲಿ ಎಂದೂ ವಿಧಾನಸೌಧಕ್ಕೆ ಕಾಲಿಡುವುದಿಲ್ಲ. ಈತನಕ ಇಟ್ಟಿಲ್ಲ. ನನಗೆ ರಾಜಕೀಯ ಆಕಾಂಕ್ಷೆಗಳಿಲ್ಲ. ಒಬ್ಬೊಬ್ಬ ಶಾಸಕ, ಒಬ್ಬೊಬ್ಬ ಸಂಸದ ಈ ನಾಡಿಗೆ, ಈ ದೇಶಕ್ಕೆ ಏನು ಮಾಡಿದ? ಏನು ಮಾತಾಡಿದ? ಏನು ಶ್ರಮಿಸಿದ ಇವುಗಳನ್ನು ಗಮನಿಸುವ ಕಾವಲು ನಾಯಿ watch dog.

ದೊರೆಯೇ, ನಿಮ್ಮ ದನಿಯಾಗಲು ನಾನು ಹೊಸ ಜವಾಬ್ದಾರಿಯನ್ನು ಹೊತ್ತಿದ್ದೇನೆ. "ಜನಶ್ರೀ" ವಾಹಿನಿಯ ಪ್ರಧಾನ ಸಂಪಾದಕ ಮತ್ತು ಸಿಇಓ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಇದು ರೆಡ್ಡಿಗಳ ಆಯ್ಕೆ ಅಲ್ಲ: ನನ್ನ ವಿನಂತಿಯೂ ಅಲ್ಲ. ಒಂದು ಕನ್ನಡ ವಾಹಿನಿಯನ್ನು ಬದುಕಿಸುವ, ಜೀವ ತುಂಬುವ ಪ್ರಯತ್ನ. ಅಲ್ಲಿ ನನಗೆ ಸಂಬಳ ಕೇವಲ ಒಂದು ರುಪಾಯಿ ಮಾತ್ರ. ನನ್ನ ಅತ್ಯಂತ ನಂಬುಗೆಯ ನೆಚ್ಚಿನ ವರದಿಗಾರ ಸುನೀಲ್ ಹೆಗ್ಗರವಳ್ಳಿಯನ್ನು ಅದರ ಸುದ್ದಿ ಮುಖ್ಯಸ್ಥನನ್ನಾಗಿ ಮಾಡಿದ್ದೇನೆ. ನನ್ನ ಕೈಯಲ್ಲಿ ಪಳಗಿದ, ಬೈಸಿಕೊಂಡ, ಒದೆ ತಿಂದ, ಕಣ್ಣೀರಿಟ್ಟ, ಸೆಟೆದುಕೊಂಡ, ಪತ್ರಕರ್ತನಾಗಿ ರೂಪುಗೊಂಡ ಹುಡುಗ ಅವನು. ಅವನು ಈಗ ಸುದ್ದಿ ಸಂಪಾದಕ. ನಾನು ಸಹ್ಯೋದ್ಯೋಗಿಗಳನ್ನು ಆಯ್ಕೆ ಮಾಡುತ್ತೀನಿ. ಬದುಕಿನಲ್ಲಿ ಅಪ್ಪ-ಅಮ್ಮಂದಿರನ್ನು, ಅಣ್ಣ-ತಮ್ಮಂದಿರನ್ನು, ಅಕ್ಕ-ತಂಗಿಯರನ್ನು ಮಾತ್ರ ಆಯ್ಕೆ ಮಾಡಲಾಗದು. ಆದರೆ, ಗೆಳೆಯರನ್ನು, ಸಹೋದ್ಯೋಗಿಗಳನ್ನು ಖಂಡಿತವಾಗಿಯೂ ಆಯ್ಕೆ ಮಾಡಬಹುದು. ಇದನ್ನು ನಿಮ್ಮ ಜೀವನದಲ್ಲೂ ಪ್ರಯತ್ನಿಸಿ ಅಳವಡಿಸಿಕೊಳ್ಳಿ.

ಇವನೊಬ್ಬನಿದ್ದಾನೆ. ಲಕ್ಷ್ಮೀಸಾಗರ ಸ್ವಾಮಿಗೌಡ ಎಂಬ ಹುಡುಗ. ಆದರೆ ಅದ್ಭುತ ಕೆಲಸಗಾರ ಮತ್ತು ನಿಯತ್ತಿನ ಮನುಷ್ಯ. ನಿಯತ್ತು ನನಗಲ್ಲ ಪತ್ರಿಕೋದ್ಯಮಕ್ಕೆ. ಈ ಹುಡುಗನಿಗೆ ಕೈಚಾಚಿ ಗೊತ್ತಿಲ್ಲ. ಪದೇಪದೇ ಸಾಲ ಕೇಳುತ್ತಾನೆ. “ಕೇವಲ... ನನ್ನನ್ನು." ಅವನ ಮಗು ನನ್ನ ಶಾಲೆಯಲ್ಲೇ ಓದುತ್ತಿದೆ. ಇವನನ್ನು ನಾನು ವರದಿಗಾರನ ಹುದ್ದೆಯಿಂದ ತೆಗೆದು ಹಾಕಿ ಸಹಾಯಕ ಸಂಪಾದಕನನ್ನಾಗಿ ಮಾಡಿದ್ದೇನೆ. ಅದರರ್ಥ ಇವನನ್ನು ಪರೀಕ್ಷಿಸಲು ನನಗೆ ಕೇವಲ ಹದಿಮೂರು ವರ್ಷ ಬೇಕಾಯಿತು. ಗೆಳೆಯರನ್ನು, ಸಹೋದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ I am very very choosy. ಇವರು ನನ್ನ ಗೆಳೆಯರು, ನನ್ನ ಸಿಬ್ಬಂದಿಯಲ್ಲ. ನನಗೆ ಮೂರು ಕುಟುಂಬಗಳಿವೆ. ಒಂದು ಲಲಿತ ಬೆಳಗೆರೆ ಕುಟುಂಬ. ಎರಡನೆಯದು ಯಶೋಮತಿ ಆಚಾರ್ ಕುಟುಂಬ. ಆದರೆ, ಮೊದಲಿನ ಆದ್ಯತೆ ‘ಹಾಯ್ ಬೆಂಗಳೂರ್!’ ಕುಟುಂಬಕ್ಕೆ. ಅದಕ್ಕಿಂತ ದೊಡ್ಡ ಆದ್ಯತೆ ನನ್ನ ಓದುಗ ದೊರೆಗೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books