Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಲಿಯಲು ಸಿದ್ಧರಿದ್ದರೆ ಈ ನಾಲ್ಕೂ ಪಾಠ ಕಲಿಸುತ್ತವೆ!

ನಾಲ್ಕೂ ನಾವು ಅನುಭವಿಸಿದ, ನಿತ್ಯ ಅನುಭವಿಸುವ ಸಂಗತಿಗಳೇ. ಖುಷಿ, ಪ್ರಯತ್ನ, ದುಃಖ, ಸೋಲು!
ಈ ನಾಲ್ಕನ್ನೂ ಅನುಭವಿಸದಿರುವವರು ಯಾರಿದ್ದಾರೆ ಹೇಳಿ? ಇವುಗಳ ತೀವ್ರತೆ ಮತ್ತು ಗಾತ್ರ ಕೆಲವರಲ್ಲಿ ಕಡಿಮೆಯಿರಬಹುದು, ಕೆಲವರಲ್ಲಿ ಹೆಚ್ಚಿರಬಹುದು. ಆವರಿಸಿಕೊಂಡ ಸಂತೋಷ "ಕಡೆತನಕ ಇರುತ್ತೇನೆ" ಅಂತ ಹೇಳಿದಂತೆ ಭಾಸವಾಗಬಹುದು. ಈ ದುಃಖ ಇನ್ನು ಮುಗಿಯುವುದೇ ಇಲ್ಲವೇನೋ ಅನ್ನಿಸಲೂಬಹುದು. ಪ್ರಯತ್ನ ಪದೇಪದೇ ಡಿಫೀಟು ಮಾಡುತ್ತಿರಬಹುದು. ಸೋಲು ತಿಂಗಳಿಗೊಮ್ಮೆ ಎದ್ದು ಬಂದು ಮುಖಕ್ಕೆ ರಾಚುತ್ತಿರಬಹುದು. ಆದರೆ ಈ ನಾಲ್ಕನ್ನೂ ತಪ್ಪಿಸಿಕೊಂಡು ಬದುಕುತ್ತೇನೆ ಅಂದುಕೊಳ್ಳುವುದು ಎಂಥ ಯೋಗಿಗೂ ಅಸಾಧ್ಯ.

ಮೊನ್ನೆ ಯಾರೋ ಕೇಳಿದರು: ನಿಮ್ಮ ಜೀವನದ ಒಟ್ಟು ಸಿದ್ಧಾಂತ ಏನು ಬೆಳಗೆರೆ? ಅಂತ. I want to be happy person ಅಂತಷ್ಟೆ ಉತ್ತರಿಸಿದೆ. ಅನೇಕರಿಗೆ ನಾನು ಹಾಕಿಕೊಡುವ ಆಟೋಗ್ರಾಫ್ ಕೂಡ ಅದೇ. Be a happy person. ನಾನು ಅತ್ಯಂತ ನೆಮ್ಮದಿಯ, ಸಂತೋಷದ, ಜೋವಿಯಲ್ ಆದ ವ್ಯಕ್ತಿಯಾಗಿರಬೇಕು. ನನ್ನ ಬದುಕಿನ ಉದ್ದೇಶವೇ ಅದು. ಅದಕ್ಕಾಗಿಯೇ ಮಕ್ಕಳೊಂದಿಗೆ ಆಡುತ್ತೇನೆ, ಪ್ರಾಣಾಯಾಮ ಮಾಡುತ್ತೇನೆ, ಪುಸ್ತಕ ಓದುತ್ತೇನೆ, ಕಾಡಿಗೆ ಹೋಗುತ್ತೇನೆ, ತುಂಬ ಬರೆಯುತ್ತೇನೆ etc, ಉಳಿದ ಗೋಳು-ದುಗುಡ ದುಮ್ಮಾನಗಳೆಲ್ಲ ನಿಮಗಿರುವಂತೆ ನನಗೂ ಇವೆ. ದುಃಖದ ಚಾದರಗಳಿವೆ: Paches of pathos. ಬೇಸರದ ಸಾಯಂಕಾಲಗಳಿವೆ. ನಿದ್ರೆ ಸುಳಿಯದ ರಾತ್ರಿಗಳಿವೆ. ಇವೆಲ್ಲವನ್ನೂ ಆಚೆಗೆ ನೂಕಿ ಖುಷಿಯಾಗಿ ಬದುಕುವುದು ನನಗೆ ಗೊತ್ತಾಗಿದೆ. ಒಂದು ಹಾಡು ಇಷ್ಟವಾಗಿಬಿಟ್ಟರೆ ಅದನ್ನು ನೂರು ಸಲ ಕೇಳಿಬಿಡುತ್ತೇನೆ: ಒಂದೇ ದಿನದಲ್ಲಿ. ನಿಮಗದು ಹುಚ್ಚು ಅನ್ನಿಸಬಹುದು. ನನ್ನ ಹುಚ್ಚು ಕೂಡ ನನಗೆ ಸಂತಸವನ್ನು ತರುತ್ತದೆ. ಸಂತೋಷವಾಗಿರುವ ಮನುಷ್ಯ ಅದನ್ನೇ ಹಂಚುತ್ತಾನೆ.

ಆದರೆ ಪ್ರಯತ್ನವಿದೆಯಲ್ಲ? ಅದು ದೊಡ್ಡ ಯಜ್ಞ . ಏಸುಕ್ರಿಸ್ತ ಕೂಡ ಏಸುಕ್ರಿಸ್ತನಾಗುವ ಪ್ರಯತ್ನ ಮಾಡುತ್ತಿದ್ದನಂತೆ. ಇನ್ನು ನಾವು ಯಾವ ಗಿಡದ ತೊಪ್ಪಲು? ಆದರೆ ಪ್ರಯತ್ನ ಮನುಷ್ಯನನ್ನು ತುಂಬ ಗಟ್ಟಿಗೊಳಿಸುತ್ತದೆ. ಏಕೆಂದರೆ ಪ್ರಯತ್ನವೆಂಬುದು ನೂರರಲ್ಲಿ ತೊಂಬತ್ತೊಂಬತ್ತು ಸಲ ನಮ್ಮನ್ನು ಡಿಫೀಟು ಮಾಡಿರುತ್ತದೆ. ಹನ್ನೆರಡು ನಿಮಿಷದಲ್ಲಿ ಒಂದು ಕಿಲೋಮೀಟರು ನಡೆಯುತ್ತೇನೆ ಅಂದುಕೊಂಡೇ ಮೊದಲ ಹೆಜ್ಜೆಯಿಡುತ್ತೇನೆ. ಉಹುಂ, ಪ್ರತೀ ಸಲ ಸೋಲುತ್ತೇನೆ. ಈ ಸೋಲೇ ನನ್ನನ್ನು ಗಟ್ಟಿಗೊಳಿಸುವುದು! ಒಂದು ಸಲ ಎಲ್ಲಾದರೂ ಕುಳಿತು ೞಈ ತನಕ ನಾನು ಮಾಡಿದ ಪ್ರಯತ್ನಗಳು ಮತ್ತು ಎದುರಿಸಿದ ಸೋಲುಗಳುೞ ಅಂತ ಒಂದು ಪುಸ್ತಕ ಬರೆದು ಬಿಟ್ಟರೆ ಅದು ಈ ವರ್ಷದ best seller ಆಗಿ ಬಿಡಬಹುದು. ನನ್ನ ಪ್ರಯತ್ನದಲ್ಲಿ ಒಂದು method ಇದೆ. ಮಾಡಿದ ಕೆಲಸವನ್ನೇ ನಾನು ಮತ್ತೆ ಮತ್ತೆ ಮಾಡುತ್ತ ಕೂಡುವುದಿಲ್ಲ. ಅದನ್ನೇ ಬೇರೆಯ ರೀತಿಯಲ್ಲಿ ಮಾಡಲಾರಂಭಿಸುತ್ತೇನೆ. ನನಗೆ ಗೊತ್ತು, ಮತ್ತೆ ಆರಂಭಿಸುವುದು ಅಂದರೆ, ಪ್ರತಿಯೊಂದನ್ನೂ ಮತ್ತೆ ಮೊದಲಿನಿಂದ (ಯಥಾ ಪ್ರಕಾರ ಅಂತೀವಲ್ಲ, ಹಾಗೆ) ಮಾಡತೊಡಗುವುದು. ಕೆಲವು ಸಲ ಅದೊಂದು ಪರಮ ಬೋರಿನ ಕೆಲಸ ಅನ್ನಿಸಿಬಿಡುತ್ತದೆ. ಆದರೆ ಪ್ರಯತ್ನವನ್ನು ನಾನು ಬಿಡುವುದಿಲ್ಲ. ಮುನಿದ ಹುಡುಗಿಯನ್ನು ಹಟಕ್ಕೆ ಬಿದ್ದು, ಹ್ಯಾಂವಕ್ಕೆ ಬಿದ್ದು ಓಲೈಸುವ, ಪರಿಪರಿಯಾಗಿ ಬಿನ್ನವಿಸುವ ಕಡು ಮೊಂಡ ಪ್ರೇಮಿಯಂತೆ ಆ ಪ್ರಯತ್ನವನ್ನು ಜಾರಿಯಲ್ಲಿ ಇಟ್ಟೇ ಇರುತ್ತೇನೆ. ಪ್ರಯತ್ನವೊಂದೇ ನನ್ನನ್ನು ತುಂಬ ಗಟ್ಟಿಗೊಳಿಸಿದಂತಹುದು.

ಇನ್ನು ದುಃಖ. ಜಗತ್ತಿನಲ್ಲಿ ನಾನು ಅನುಭವಿಸಿದ ದುಃಖ ದೊಡ್ಡದಾ? ನೀವು ಅನುಭವಿಸಿದ ದುಃಖ ದೊಡ್ಡದಾ? ಎಂಬ ಪ್ರಶ್ನೆಯೇ ಮೂರ್ಖತನದ್ದು. ಅಮ್ಮ ಎತ್ತಿಕೊಳ್ಳಲಿಲ್ಲ, ಮುದ್ದು ಮಾಡಲಿಲ್ಲ ಎಂಬ, ಮಗುವಿನ ದುಃಖ ಕೂಡ ದುಃಖವೇ. ಎತ್ತಾಡಿಸಿ ಬೆಳೆದ ಮಗ ರೆಕ್ಕೆ ಬಲಿತ ಮೇಲೆ ತನ್ನೆಡೆಗೆ ತಿರುಗಿ ಕೂಡ ನೋಡದೆ ಹೊರಟು ಹೋದ ಎಂಬ ಅಮ್ಮನ ದುಃಖವೂ, ಅಗಾಧ ದುಃಖವೇ. ಹೆಂಡತಿ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂಬ ದುಃಖ, ಒಲಿದ ಹುಡುಗಿ ಕಾರಣವಿಲ್ಲದೆ ಮುನಿದಳು ಎಂಬ ದುಃಖ, ಇಷ್ಟು ಚಿಕ್ಕ ವಯಸ್ಸಿಗೆ ಪೀಡೆಯಂಥ ಈ ಖಾಯಿಲೆ ಗಂಟು ಬಿದ್ದಿತಲ್ಲ ಎಂಬ ದುಃಖ, ಬೆಳೆದ ಮಗ ಗೆಳೆಯನಂತಾಗಲಿಲ್ಲವೆಂಬ ದುಃಖ, ಆಸೆಯಿಂದ ಕಟ್ಟಿಸಿದ ಮನೆ ಮಾರಬೇಕಾಗಿ ಬಂತಲ್ಲ ಎಂಬ ದುಃಖ-ಎಲ್ಲವೂ ದುಃಖಗಳೇ. ಇದರಲ್ಲಿ ಯಾವುದು ಕಡಿಮೆ, ಯಾವುದು ಜಾಸ್ತಿ? ಕೆಲವು ತಾತ್ಕಾಲಿಕ ದುಃಖಗಳಾಗಿರುತ್ತವೆ. ಕೆಲವು ನಮ್ಮೊಂದಿಗೇ ಉಳಿದು ಹೋಗುವಂತಹವಾಗಿರುತ್ತವೆ. ನಾನು ಇಂತಹ ಕಡು ದುಃಖಗಳನ್ನು ಅನುಭವಿಸಿದ್ದೇನೆ. ಆದರೆ ದುಃಖದಿಂದಲೂ ಫಾಯಿದೆಯಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ದುಃಖಗಳು ನನ್ನನ್ನು ಹೆಚ್ಚು "ಮನುಷ್ಯನನ್ನಾಗಿ" ಮಾಡಿವೆ. ಯಾರದೋ ದುಃಖಕ್ಕೆ ಕಣ್ಣೀರಾಗುವುದನ್ನ, ನೆರವಿಗೆ ಹೋಗುವುದನ್ನ, ಕಣ್ಣೊರೆಸುವುದನ್ನ ಕಲಿಸಿಕೊಟ್ಟಿವೆ. ಇದೊಂದೇ ಕಾರಣಕ್ಕಾಗಿ ನಾನು ದುಃಖಗಳಿಗೆ ಋಣಿ. ಅಯ್ಯೋ, ನನ್ನ ಹೆಂಡತಿ ಮಕ್ಕಳಿಗೆ ಹೀಗಾಗಿ ಬಿಟ್ಟಿದ್ದಿದ್ದರೆ.... ಎಂಬ ಯೋಚನೆಯೊಂದೇ ಸಾಕು: ನನ್ನನ್ನು ಕರಗುವಂತೆ ಮಾಡುತ್ತವೆ. ಮಗನನ್ನು ಕರೆದುಕೊಂಡು, ಅವನ ವಿದ್ಯಾಭ್ಯಾಸಕ್ಕಾಗಿ ಮನೆ ಮನೆ ಸಹಾಯ ಕೇಳಿಕೊಂಡು ಅಲೆಯುವ ಹೆಣ್ಣುಮಗಳನ್ನು ಕಂಡಾಗ ಥಟ್ಟನೆ ನನಗೆ ನನ್ನ ತಾಯಿಯ ನೆನಪು. ಯಾಕೆ ಅಂದರೆ, ದುಃಖದ ಗುಣವೇ ಅಂತಹುದು. ಅದು ಇನ್ನೊಬ್ಬರ ದುಃಖಕ್ಕೆ ಮಿಡಿಯುವಂತೆ ಮಾಡುತ್ತದೆ. ಒಂದು ಚಿಕ್ಕ ಅಪಾಯವೆಂದರೆ, ದುಃಖ ಕೆಲವು ಸಲ ನಮ್ಮನ್ನು ಸಿನಿಕರನ್ನಾಗಿಯೂ, ಮತ್ತೆ ಕೆಲವು ಸಲ ನಿಷ್ಕ್ರಿಯರನ್ನಾಗಿಯೂ ಮಾಡಿಬಿಡುತ್ತದೆ. ಹಾಗಾಗಬಾರದು.
ಅದಕ್ಕೇ ಹೇಳಿದ್ದು: ದುಃಖ makes you humane.

ಇನ್ನು ಸೋಲು!
ಇಸ್ಪೀಟಿನಲ್ಲಿ (ಒಟ್ಟಾರೆಯಾಗಿ ಜೂಜಿನಲ್ಲಿ) ಸೋಲುವವರ ಬಗ್ಗೆ ನನಗೆ ಸಿಂಪಥಿಯಿಲ್ಲ. ಉಳಿದೆಲ್ಲ ತೆರನಾದ ಸೋಲುಗಳೂ ಅದ್ಭುತ ಅನುಭವಗಳೇ. ಇವತ್ತು ನನ್ನನ್ನು ಜನ ಸಭೆಗಳಿಗೆ ಕರೆಯುತ್ತಾರೆ. ಪ್ರಶಸ್ತಿಗಳು ಬಂದಿವೆ. ಹಾರ ತುರಾಯಿಗಳೆಲ್ಲ ಕಂಡಿದ್ದೇನೆ. ಆಟೋಗ್ರಾಫು ಕೊಟ್ಟಿದ್ದೇನೆ. ಭಾಷಣ ಬಿಗಿದಿದ್ದೇನೆ. ಅದೆಲ್ಲ ಆದ ಮೇಲೂ ನಾನು ಅಹಂಕಾರಿಯಾಗದೆ, ಉನ್ಮತ್ತನಾಗದೆ, no nonsense ಎಂಬ ವ್ಯಕ್ತಿತ್ವ ರೂಢಿಸಿಕೊಂಡು ಬದುಕುತ್ತಿದ್ದೇನೆಂದರೆ-ಅದಕ್ಕೆ ಕಾರಣ ಸೋಲು. ಅದು ನಿಮ್ಮನ್ನು ಸಜ್ಜನರನ್ನಾಗಿ, ಸಾತ್ವಿಕರನ್ನಾಗಿ, ಹೆಗಲ ಮೇಲೆ ತಲೆಯಿರುವವರನ್ನಾಗಿ ಇಡುತ್ತದೆ. ನನ್ನ ಜೀವನದ ಮೊಟ್ಟಮೊದಲ ಸೋಲು ಅಂದರೆ-ಬಯಸಿದ ಬಾಳ ಗೆಳತಿ ಸಿಗದೆ ಹೋದದ್ದು. ಅದು ಅನೇಕ ಸರಣಿ ಸೋಲುಗಳಿಗೆ ಕಾರಣವಾಯಿತು. ಹದಿನಾರು ವರ್ಷ ನನ್ನನ್ನು ಹಣಿದು ಹಣ್ಣು ಮಾಡಿತು. ಆದರೆ ಕೈ ಬಿಟ್ಟು ಹೋಗುವಾಗ ಆ ಸೋಲೇ ನನಗೆ ಬಹಳ ದೊಡ್ಡ ಉಪಕಾರ ಮಾಡಿ ಹೋಯಿತು. ಪೂರ್ತಿ ನಿಗರ್ವಿಯನ್ನಾಗಿಸಿತು. ಸಭ್ಯನನ್ನಾಗಿಸಿತು. ವಿವೇಕವಂತನನ್ನಾಗಿಸಿತು.

ಹೀಗಾಗಿ ನಾನು ನಾಲ್ಕಕ್ಕೂ ಋಣಿ. ಖುಷಿ, ಪ್ರಯತ್ನ, ದುಃಖ ಮತ್ತು ಸೋಲು.
ಎಲ್ಲವುಗಳಿಂದಲೂ ಪಾಠ ಕಲಿಯೋಣ. ತಪ್ಪೇನಿದೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books