Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಭ್ರಷ್ಟಾಚಾರದ ಹಿಂದಿನ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕಿದೆ!

ರಾಷ್ಟ್ರ ರಾಜಕೀಯದ ಪಡಸಾಲೆಯಲ್ಲಿ ಭ್ರಷ್ಟಾಚಾರದ ಕುರಿತಂತೆ ಮತ್ತೊಮ್ಮೆ ವ್ಯಾಪಕ ಚರ್ಚೆ ಆರಂಭವಾಗಿದೆ. ದಿಲ್ಲಿಯ ಮುಖ್ಯಮಂತ್ರಿ, ಆಮ್‌ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ದೇಶದಲ್ಲಿರುವ ರಾಜಕಾರಣಿಗಳ ಪೈಕಿ ಭ್ರಷ್ಟರು ಯಾರು ಅಂತ ತಮ್ಮದೇ ಒಂದು ಪಟ್ಟಿ ಪ್ರಕಟಿಸಿದ್ದಾರೆ. ಅದರಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿಯಿಂದ ಹಿಡಿದು ಕೇಂದ್ರ ಸಚಿವ ಕಪಿಲ್ ಸಿಬಲ್ ತನಕ ಹೆಸರುಗಳಿವೆ. ಕರ್ನಾಟಕಕ್ಕೂ ತಮ್ಮ ಕೈ ಚಾಚಿರುವ ಅರವಿಂದ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರನ್ನು ಭ್ರಷ್ಟರ ಪಟ್ಟಿಗೆ ಸೇರಿಸಿದ್ದಾರೆ. ಇದರ ಪರ-ವಿರುದ್ಧ ಒಂದು ವ್ಯಾಪಕ ಚರ್ಚೆ ಆರಂಭವಾಗಿದೆ. ಅಂದ ಹಾಗೆ ಕೇಜ್ರಿವಾಲ್ ಹೆಸರಿಸಿದವರಷ್ಟೇ ಭ್ರಷ್ಟಾಚಾರ ಮಾಡಿದವರೇ? ಉಳಿದ ರಾಜಕಾರಣಿಗಳು ಭ್ರಷ್ಟಾಚಾರದ ಹತ್ತಿರಕ್ಕೂ ಸುಳಿದಿಲ್ಲವೇ? ಕುತೂಹಲದ ಸಂಗತಿ ಎಂದರೆ ಕೇಜ್ರಿವಾಲ್ ಈ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು.

ಫೈವ್ ಸ್ಟಾರ್ ಹೊಟೇಲ್‌ಗೆ ಹೋಗಿ ಮೈಮೇಲೆ ಏನನ್ನೂ ಬೀಳಿಸಿಕೊಳ್ಳದೆ ಎದ್ದು ಬರುವವನನ್ನು ಭ್ರಷ್ಟ ಎನ್ನುವುದಿಲ್ಲ. ಆದರೆ ಯಡಿಯೂರಪ್ಪನವರಿಗೆ ಈ ರೀತಿ ಮೈಮೇಲೆ ಬೀಳಿಸಿಕೊಳ್ಳದೆ ಊಟ ಮಾಡುವ ಕಲೆ ಗೊತ್ತಿರಲಿಲ್ಲ. ಹೀಗಾಗಿ ಅವರನ್ನು ಭ್ರಷ್ಟ ಎಂದು ಕರೆಯುವ ಸ್ಥಿತಿ ನಿರ್ಮಾಣವಾಯಿತು ಎಂಬುದು ಅವರ ಮಾತಿನ ಸಾರಾಂಶ. ಅವರು ಆಡಿದ ಈ ಮಾತಿನ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ ನನಗೆ ಅವರ ಮಾತಿನಲ್ಲಿ ಯಾವ ತಪ್ಪೂ ಕಾಣಲಿಲ್ಲ. ಅರೇ, ಇವತ್ತು ಯಾರಾದರೊಬ್ಬ ರಾಜಕಾರಣಿ ಚುನಾವಣೆಯಲ್ಲಿ ಬಂಡವಾಳ ಹಾಕದೆ ಗೆದ್ದು ಬರುವ ಸ್ಥಿತಿ ಈ ದೇಶದಲ್ಲಿ ಎಲ್ಲಾದರೂ ಇದೆಯೇ? ಮೊನ್ನೆ ಮೊನ್ನೆ ದಿಲ್ಲಿಯಲ್ಲಿ ಅಂತಹ ಪವಾಡ ನಡೆಯಿತಲ್ಲ? ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ಲವಲೇಶವೂ ಇಲ್ಲದೆ ಅಧಿಕಾರದ ಗದ್ದುಗೆ ಹಿಡಿಯಿತಲ್ಲ? ಅಂತ ಮಾತನಾಡುವುದು ಬಹಳ ಸುಲಭ. ಆದರೆ ಅವರ ಪಕ್ಷ ಹಣವನ್ನೇ ಖರ್ಚು ಮಾಡದೆ ಅಧಿಕಾರಕ್ಕೆ ಬಂತು ಅಂತ ಯಾರಾದರೂ ಹೇಳಿದರೆ ಅದು ಹಾಸ್ಯಾಸ್ಪದ. ಆಮ್ ಆದ್ಮಿ ಪಕ್ಷ ಕೂಡ ದೇಣಿಗೆಯನ್ನು ಸ್ವೀಕರಿಸಿದೆ. ಹೀಗೆ ಅವರಿಗೆ ದೇಣಿಗೆ ಕೊಟ್ಟವರು ಯಾರು? ಹೊಲ-ಗದ್ದೆಗಳಲ್ಲಿ ಕಷ್ಟ ಪಟ್ಟು ದುಡಿದೋ, ತಮ್ಮ ಶ್ರಮದ ಬೆವರನ್ನು ಚೆಲ್ಲಿದವರೋ ಕೊಟ್ಟ ದೇಣಿಗೆಯಾ ಅದು? ರಾಜಕೀಯ ಪಕ್ಷಗಳು ತಮ್ಮ ತಮ್ಮ ಅನುಕೂಲಕ್ಕಾಗಿ ದೇಣಿಗೆಯ ಮಾರ್ಗವನ್ನು ಸೃಷ್ಟಿಸಿಕೊಂಡಿವೆ.

ಆದರೆ ದುಡ್ಡು ಯಾವ ಮೂಲದಿಂದ ಬಂದಿದ್ದರೇನು? ಚುನಾವಣೆಗಾಗಿ ಒಂದು ಪ್ರಮಾಣದ ಹಣವನ್ನು ಆ ಪಕ್ಷ ಖರ್ಚು ಮಾಡಿದೆ ಎಂದಲ್ಲವೇ? ನಮ್ಮ ಸಿದ್ಧರಾಮಯ್ಯ ಕೂಡ ಚುನಾವಣೆಗಿಂತ ಮುಂಚಿತವಾಗಿ ಹೇಳಿದ್ದರು. ಈಗಿನ ಚುನಾವಣಾ ವ್ಯವಸ್ಥೆ ಹೇಗಿದೆ ಎಂದರೆ, ಗೆಲ್ಲಬೇಕು ಎಂದರೆ ಅಪಾರ ಪ್ರಮಾಣದ ಹಣ ಖರ್ಚು ಮಾಡಬೇಕು ಅಂತ. ಜೆಡಿಎಸ್‌ನಿಂದ ಹೊರಗೆ ಬಂದು ಕಾಂಗ್ರೆಸ್‌ಗೆ ಸೇರಿದ ಮೇಲೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ನನ್ನನ್ನು ಸೋಲಿಸಲು ನಡೆದ ತಂತ್ರದ ವಿರುದ್ಧ ಹೋರಾಡಲು ನಾನೂ ಹಣದ ಮೊರೆ ಹೋಗಬೇಕಾಯಿತು. ಆ ಸಂದರ್ಭದಲ್ಲಿ ನನಗೂ ತುಂಬ ಜನ ದುಡ್ಡು ತಂದು ಕೊಟ್ಟರು. ಆದರೆ ಹೀಗೆ ಬಂದ ದುಡ್ಡಿನ ಮೂಲ ಯಾವುದು? ಅದು ಒಬ್ಬ ಬಡವ ಕುರಿ ಮಾರಿ ತಂದು ಕೊಟ್ಟ ದುಡ್ಡಷ್ಟೇ ಅಲ್ಲ, ಯಾವ್ಯಾವ ಮೂಲದಿಂದ ಬಂತೋ ಹೇಳುವುದು ಹೇಗೆ? ಹೀಗಾಗಿ ನಾನು ಕೂಡ ತುಂಬ ಸಾಚಾ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ ಅಂತ ಆತ್ಮಾವಲೋಕನ ಮಾಡಿಕೊಂಡಿದ್ದರು.

ರಮೇಶ್‌ಕುಮಾರ್, ಸಿದ್ಧರಾಮಯ್ಯ ಅವರಂತಹ ನಾಯಕರು ಮಾಡಿಕೊಳ್ಳುವ ಆತ್ಮಾವಲೋಕನವನ್ನು ನಾವು ಪಾಸಿಟಿವ್ ನೆಲೆಯಲ್ಲಿ ನೋಡಬೇಕೇ ಹೊರತು ಓಹೋ, ಇವನೂ ಕಳ್ಳನೇ ಅಂತ ಮಾತಾಡಿಬಿಟ್ಟರೆ ಅದು ಸಿನಿಕತನವೇ ಹೊರತು ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಲು ಏನು ಮಾಡಬೇಕು? ಅಂತ ಯೋಚಿಸುವ ಮನಸ್ಥಿತಿ ಆಗಲಾರದು. ರಾಮಮನೋಹರ ಲೋಹಿಯಾ ಹೇಳಿದಂತೆ ಒಂದು ವ್ಯವಸ್ಥೆ, ಅವ್ಯವಸ್ಥೆಯತ್ತ ಸಾಗಿ, ಅಲ್ಲಿಂದ ಕುವ್ಯವಸ್ಥೆಯತ್ತ ತಲುಪುತ್ತದೆ. ಆನಂತರ ಸುವ್ಯವಸ್ಥೆ ನೆಲೆಸುವ ಸನ್ನಿವೇಶಕ್ಕೆ ವೇದಿಕೆ ಅಣಿಯಾಗುತ್ತದೆ. ಅದರಂತೆ ಈಗಾಗಲೇ ಭಾರತದಲ್ಲಿ ವ್ಯವಸ್ಥೆ ಹದಗೆಟ್ಟು, ಅವ್ಯವಸ್ಥೆ ಎಂಬ ಹೆಗಲು ದಾಟಿ ಕುವ್ಯವಸ್ಥೆಗೆ ತಲುಪಿದೆ. ಇದನ್ನು ಸುವ್ಯವಸ್ಥೆಗೆ ತರಬೇಕೆಂದರೆ ಭ್ರಷ್ಟಾಚಾರದ ಕುರಿತು, ಅದು ಯಾವ್ಯಾವ ರೀತಿ ವ್ಯಾಪಿಸುತ್ತಾ ಹೋಗುತ್ತದೆ. ಅದರಲ್ಲಿ ಯಾರ‍್ಯಾರು ಯಾವ್ಯಾವ ರೀತಿ ತಮ್ಮ ಪಾಲು ಸಲ್ಲಿಸುತ್ತಾ ಹೋಗುತ್ತಾರೆ ಎಂಬುದರ ಕುರಿತು ಸವಿವರವಾದ ಚರ್ಚೆ ಆಗಬೇಕು.

ತೊಂಬತ್ತಾರರಲ್ಲಿ ಜನತಾ ದಳ ಹದಿನಾರು ಸೀಟುಗಳನ್ನು ಗೆದ್ದಿತಲ್ಲ? ಆ ಸಂದರ್ಭದಲ್ಲಿ ಪಕ್ಷದ ಕ್ಯಾಂಡಿಡೇಟುಗಳಿಗೆ ಕನಿಷ್ಠ ಐವತ್ತು ಲಕ್ಷದಷ್ಟು ಹಣವನ್ನು ಒದಗಿಸಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಕ್ಯಾಂಡಿಡೇಟುಗಳು ಮಾಡಿದ ವೆಚ್ಚದ ಪ್ರಮಾಣ ಸರಾಸರಿ ಇಪ್ಪತ್ತು ಕೋಟಿ ರುಪಾಯಿಗಳಿಗೇರಿತ್ತು. ಅರ್ಥಾತ್, ಒಂದು ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷದ ಒಬ್ಬ ಅಭ್ಯರ್ಥಿ ಇಪ್ಪತ್ತು ಕೋಟಿ ರುಪಾಯಿ ವೆಚ್ಚ ಮಾಡುವ ಸ್ಥಿತಿ ಇತ್ತು. ಅಂದರೆ ಎಲ್ಲ ರಾಜಕೀಯ ಪಕ್ಷಗಳು ಇಲ್ಲಾ, ಇಲ್ಲಾ, ಎಲ್ಲ ಕ್ಲೀನು ಮಾಡಿಬಿಡುತ್ತೇನೆ ಅಂತ ಚುನಾವಣಾ ಕಣಕ್ಕಿಳಿಯುವವರು ಸೇರಿದಂತೆ ಎಲ್ಲರೂ ಸೇರಿ ಪ್ರಮುಖ ಅಂತ ಗುರುತಿಸಬಹುದಾದ ಕ್ಷೇತ್ರಗಳಲ್ಲಿ ಐವತ್ತು ಕೋಟಿ ರುಪಾಯಿಗಳಷ್ಟು ಹಣ ಬಂಡವಾಳವಾಗಿ ಹೂಡಿಕೆಯಾಗಿತ್ತು. ಮೊನ್ನೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ದುಡ್ಡು ಎಂಬುದು ನೀರಿನಂತೆ ಹರಿಯಿತು. ಈ ಪ್ರಮಾಣದ ಹಣ ಯಾಕೆ ಬೇಕಾಗುತ್ತದೆ? ಮತದಾರರಲ್ಲೂ ಒಂದು ದೊಡ್ಡ ವರ್ಗ ಭ್ರಷ್ಟವಾಗದೆ ಇದ್ದರೆ ಯಾಕೆ ಈ ಪ್ರಮಾಣದ ಹಣ ಬೇಕಾಗುತ್ತದೆ? ಇಂತಹ ವರ್ಗದ ಮತದಾರರಿಗೆ ಹಣ ತಲುಪಿಸುವ ಆಯಾ ಪಕ್ಷಗಳ ಸ್ಥಳೀಯ ನಾಯಕರೂ ಹಣ ತಿನ್ನುತ್ತಾರೆ. ನಿಜ, ಆದರೆ ದಿನ ಕಳೆದಂತೆ ಹೆಚ್ಚೆಚ್ಚು ಮತದಾರರಿಗೆ ದುಡ್ಡು ಹರಿದು ಹೋಗುತ್ತಿದೆ ಎಂದರೆ ನಮ್ಮ ಚುನಾವಣಾ ವ್ಯವಸ್ಥೆಯಲ್ಲೇ ಲೋಪವಿದೆ.

ಅಂದಹಾಗೆ ನಾವು ನೆನಪಿನಲ್ಲಿಡಬೇಕಾದ ಮತ್ತೊಂದು ಸಂಗತಿ ಇದೆ. ರಾಜಕಾರಣಿಗಳನ್ನು ಮೀರಿಸಿ ದುಡ್ಡು ಮಾಡುವ ಕೈಗಾರಿಕೋದ್ಯಮಿಗಳ ಒಂದು ಗುಂಪು ಮತ್ತು ಅಧಿಕಾರಿಗಳ ಒಂದು ಪಡೆ ತನ್ನ ಮುಖ ಕಾಣದಂತೆ ಚುನಾವಣೆಯ ಹಿಂದೆ ನಿಂತು ತನ್ನ ಪ್ರಭಾವ ಬೀರುತ್ತಿರುತ್ತದೆ. ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ಬದಲಿಗೆ ಜನರ ಕಣ್ಣಿಗೆ ತಕ್ಷಣ ಕಾಣುವವರು ರಾಜಕಾರಣಿಗಳು. ಅರೇಸ್ಕೀ, ಒಂದು ಎಲೆಕ್ಷನ್‌ಗೆ ಈತ ಈ ಪ್ರಮಾಣದ ಹಣ ಖರ್ಚು ಮಾಡುತ್ತಿದ್ದಾನೆ ಎಂದರೆ ಏನ್ರೀ ಅರ್ಥ? ಅಂತ ಮಾತನಾಡುವವರು ಈ ರಾಜಕಾರಣಿಗೆ ಹಣ ಒದಗಿಸಿದ ಮೂಲದ ಕುರಿತು ಚಕಾರ ಎತ್ತುವುದಿಲ್ಲ. ನೂರಾರು ಕೋಟಿ, ಸಾವಿರಾರು ಕೋಟಿ ರುಪಾಯಿಗಳನ್ನು ಕ್ಷಣ ಮಾತ್ರದಲ್ಲಿ ಬಾಚುವ ಈ ಪಡೆ ತನಗೆ ಬೇಕಾದ ಅಧಿಕಾರ ವ್ಯವಸ್ಥೆ ಜಾರಿಯಲ್ಲಿರಲಿ ಅಂತ ಒಂದು ಪ್ರಮಾಣದ ಬಂಡವಾಳವನ್ನು ಹೂಡಿರುತ್ತದೆ. ಭೂ ಮಾಫಿಯಾದಿಂದ ಹಿಡಿದು, ಗಣಿ ಮಾಫಿಯಾದ ತನಕ, ತೈಲ ಮಾಫಿಯಾದಿಂದ ಹಿಡಿದು ಎಲ್ಲ ರೀತಿಯ ಮಾಫಿಯಾಗಳ ಹಿಂದೆ ಇಂತಹ ಪ್ರಭಾವಿಗಳ ಕೈ ಇರುತ್ತದೆ. ಆ ಕೈಯಲ್ಲಿ ರಾಜಕಾರಣಿ ಎಂಬಾತ ಒಂದು ದಾಳ ಮಾತ್ರ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಅಂದ ಹಾಗೆ ಈ ವ್ಯವಸ್ಥೆಯನ್ನು ಬದಲು ಮಾಡುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಯಾಕೆಂದರೆ ಜಾಗತೀಕರಣಕ್ಕೆ ತನ್ನನ್ನು ತೆರೆದುಕೊಂಡ ಭಾರತ ಎಂಬ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅಮೆರಿಕ ಸೇರಿದಂತೆ ಜಗತ್ತಿನ ನಾನಾ ದೇಶಗಳ ಉದ್ಯಮಪತಿಗಳು ತಂತ್ರ ಹೂಡುತ್ತಿದ್ದಾರೆ. ಇವತ್ತು ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಆ ಕಂಪನಿಗಳ ಏಜೆಂಟರ ಥರ ಆಗಿವೆ. ಇದು ಸಣ್ಣ ಮಟ್ಟದ ಅಪಾಯವಲ್ಲ. ಇದೇ ಸ್ಥಿತಿ ಮುಂದುವರಿದರೆ ಜನ ರಾಜಕಾರಣಿಗಳನ್ನು ದೂರುತ್ತಾ, ಅವರು ಭ್ರಷ್ಟರು, ಇವರು ಭ್ರಷ್ಟರು ಎಂದು ಕೂಗಾಡುತ್ತಾ ಫೈನಲಿ, ಈ ದೇಶದ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಉದ್ಯಮಪತಿಗಳಿಗೆ ಅನುಕೂಲಕರವಾದ ಒಂದು ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತಾರೆ. ಹೀಗಾಗಿ ನನ್ನ ಪ್ರಕಾರ, ಮಾತೆತ್ತಿದರೆ ನಾವು ನಮ್ಮ ರಾಜಕಾರಣಿಗಳು, ಭ್ರಷ್ಟರು ಎಂದು ಅರಚುತ್ತಾ ಕೂರುವ ಮೊದಲು ಇದರ ಹಿಂದಿರುವ ಜಾಗತಿಕ ಕೈವಾಡವನ್ನೂ ಅರ್ಥ ಮಾಡಿಕೊಳ್ಳಬೇಕು.

ಇವತ್ತು ಒಂದು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಒಬ್ಬ ಅಭ್ಯರ್ಥಿ ಹತ್ತರಿಂದ ಹದಿನೈದು ಕೋಟಿ ರುಪಾಯಿಗಳಷ್ಟು ಬಂಡವಾಳ ಹೂಡುವ ಸ್ಥಿತಿ ಬಂದಿದೆ ಎಂದರೆ ಅದೇನು ತಮಾಷೆಯ ಮಾತಲ್ಲ. ಅಂತಹ ಅಭ್ಯರ್ಥಿಯನ್ನು ತಿರಸ್ಕರಿಸಿದ ಮಾತ್ರಕ್ಕೆ ಆ ಜಾಗದಲ್ಲಿ ಸತ್ಯಹರಿಶ್ಚಂದ್ರ ಬಂದು ಸೆಟ್ಲಾಗುವುದಿಲ್ಲ. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ನಾಯಕ ಶಾಂತವೇರಿ ಗೋಪಾಲಗೌಡರಂತಹ ನಾಯಕರು ಜನರ ಬಳಿ ಹೋಗಿ ಒಂದು ನೋಟು, ಒಂದು ವೋಟು ಅಂತ ಕೇಳುತ್ತಿದ್ದ ಕಾಲವಿತ್ತು. ಆಗ ಜನ ಕೂಡ ಒಂದು ನೋಟಿನ ಜತೆ ವೋಟು ಕೊಟ್ಟು ಶಾಂತವೇರಿ ಗೋಪಾಲಗೌಡರಂತಹ ನಾಯಕರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸುತ್ತಿದ್ದರು. ಇವತ್ತು ಗೆದ್ದು ಬಂದಿರುವ ಇನ್ನೂರಾ ಇಪ್ಪತ್ನಾಲ್ಕು ಶಾಸಕರ ಪೈಕಿ ಯಾವುದೇ ಒಬ್ಬ ಶಾಸಕ ನಾನು ಹಣ ಖರ್ಚು ಮಾಡದೇ ಗೆದ್ದು ಬಂದೆ ಅಂತ ಹೇಳಿದರೆ ಅನುಮಾನವೇ ಬೇಡ. ಆತನಿಗೆ ಮಾಲೆ ಹಾಕಿ ಮೆರವಣಿಗೆ ಮಾಡಬೇಕು. ಆದರೆ ಯಾವುದೇ ಒಬ್ಬ ಶಾಸಕ ಅಂತಃಸಾಕ್ಷಿಯಾಗಿ ಅಂತಹ ಮಾತು ಹೇಳಲು ಸಾಧ್ಯವೇ? ಅದರರ್ಥ; ಗೆದ್ದು ಬಂದವರೆಲ್ಲ ಪರಮಭ್ರಷ್ಟರು ಅಂತ ಅರ್ಥವಲ್ಲ. ಬದಲಿಗೆ ಇವತ್ತು ಹಣವಿಲ್ಲದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ನೆಲೆಯಲ್ಲಿ ಇದನ್ನು ನೋಡಬೇಕು.

ಇವತ್ತು ವಿಧಾನಸಭೆಗೆ ಆಯ್ಕೆಯಾಗಿ ಬಂದ ಶಾಸಕರ ಪೈಕಿ ನಿಜಕ್ಕೂ ಸೆನ್ಸಿಟಿವ್ ಆದ, ಜನಪರವಾಗಿ ಯೋಚಿಸುವ, ಕೆಲಸ ಮಾಡುವ ಹಲವು ಶಾಸಕರಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರಿಗಿರುವ ಬದ್ಧತೆ. ಇಂತಹ ಬದ್ಧತೆ ಬಹುತೇಕ ಶಾಸಕರಲ್ಲಿ ಕಾಣುವಂತೆ ಮಾಡಬೇಕೆಂದರೆ ಮೊಟ್ಟ ಮೊದಲು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಅದಕ್ಕಿಂತ ಮುಖ್ಯವಾಗಿ ನಮ್ಮ ಮತದಾರರು ಮೇಲೆದ್ದು ನಿಲ್ಲಬೇಕು. ನಮ್ಮ ಕ್ಷೇತ್ರದ ಪ್ರತಿನಿಧಿಯಿಂದ ನಾವು ಏನನ್ನು ಬಯಸುತ್ತೇವೆ? ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಬೇಕು. ಪ್ರತಿಯೊಬ್ಬ ಕ್ಯಾಂಡಿಡೇಟ್‌ನ ಹಿನ್ನೆಲೆಯನ್ನು ಗಮನಿಸಬೇಕು. ಈತನಿಗೆ ವೋಟು ಕೊಟ್ಟು ಗೆಲ್ಲಿಸಿದರೆ ನಮಗಾಗಿ ಕೆಲಸ ಮಾಡುವ ಬದ್ಧತೆ ಈತನಿಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ಮತದಾರರ ಮನಸ್ಸಿನಲ್ಲಿ ಮೂಡಬೇಕಾದ ಜಾಗೃತಿ. ಅದೇ ಕಾಲಕ್ಕೆ ಚುನಾವಣಾ ವ್ಯವಸ್ಥೆಯಲ್ಲಿ ದೊಡ್ಡದೇ ಆದ ಬದಲಾವಣೆ ಬರಬೇಕು. ಒಂದು ಎಮ್ಮೆಲ್ಲೆ ಎಲೆಕ್ಷನ್ನಿನಲ್ಲಿ ಹದಿನೈದೋ, ಇಪ್ಪತ್ತೋ ಲಕ್ಷ ರುಪಾಯಿ ಮಾತ್ರ ಖರ್ಚು ಮಾಡಬೇಕು ಎಂದು ಷರತ್ತು ಹಾಕಿ ಸುಮ್ಮನೆ ಚುನಾವಣಾ ಆಯೋಗ ಸುಮ್ಮನೆ ಕೂತುಬಿಟ್ಟರೆ ಅದು ಆಗು ಹೋಗುವ ಮಾತಲ್ಲ. ಬೆಂಗಳೂರಿನಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪ್ರಮಾಣದ ಹಣವನ್ನು ಅಭ್ಯರ್ಥಿಯ ಪರ ಪ್ರಚಾರಕ್ಕಲ್ಲ, ಒಂದೋ, ಎರಡೋ ಬೂತುಗಳ ಕಾರ್ಯಕರ್ತರಿಗೆ ಕೊಟ್ಟು ಪೂರೈಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚುನಾವಣಾ ವ್ಯವಸ್ಥೆಯ ಬದಲಾವಣೆಗೆ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ಮತ್ತು ಮತದಾರರ ಮಧ್ಯೆ ಒಂದು ಸಮಗ್ರ ಚರ್ಚೆ ನಡೆಯಬೇಕು.

ಇಂತಹ ಚರ್ಚೆಯ ಮೂಲಕ ಪಾರದರ್ಶಕವಾದ ಒಂದು ಚುನಾವಣಾ ವ್ಯವಸ್ಥೆಯನ್ನು ನಡೆಸಲು ದಾರಿ ಆಗಬೇಕು. ಆದರೆ ಇದು ಸುಲಭದ ಮಾತಲ್ಲ. ಯಾಕೆಂದರೆ ಜಾಗತೀಕರಣದ ಭೂತ ದೇಶದ ಒಳ ಹೊಕ್ಕ ಮೇಲೆ, ಈ ದೇಶವನ್ನೇ ತಮ್ಮ ಮುಷ್ಟಿಗೆ ತೆಗೆದುಕೊಳ್ಳಲು ಜಾಗತಿಕ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಇಂತಹ ಸಂಚನ್ನು ವಿಫಲಗೊಳಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಜವಾಬ್ದಾರಿ ಮತದಾರರಾದ ನಮ್ಮ ನಿಮ್ಮ ಮೇಲೂ ಇದೆ. ಯಡಿಯೂರಪ್ಪ ಭ್ರಷ್ಟ ಎಂದು ಹೇಳಿ ಕೈ ತೊಳೆದುಕೊಳ್ಳುವುದು ಸುಲಭ. ಆದರೆ ಯಾವ್ಯಾವ ಶಕ್ತಿಗಳು ಯಡಿಯೂರಪ್ಪನವರನ್ನು ಇಂತಹ ಕೂಪಕ್ಕೆ ತಳ್ಳಿದವು ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿ ಇರಬಹುದು, ಅನಂತಕುಮಾರ್ ಇರಬಹುದು, ವೀರಪ್ಪ ಮೊಯ್ಲಿ ಇರಬಹುದು ಅಥವಾ ಇನ್ಯಾವುದೇ ರಾಜಕಾರಣಿ ಇರಬಹುದು. ಬಂಡವಾಳ ಹೂಡದೆ ಗೆಲ್ಲಲು ಸಾಧ್ಯವಿಲ್ಲ. ಅಥವಾ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ.

ಹೀಗಾಗಿ ಅರವಿಂದ ಕೇಜ್ರಿವಾಲ್ ಆಡಿದ ಮಾತಿನಿಂತ ಖುಷಿಯಾಗಿ, ತೋಳ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ನಾವೂ ಒಂದು ಕಲ್ಲೆತ್ತಿ ಬಿಸಾಡುವ ಬದಲು ಯಾವ ಕಾರಣಕ್ಕಾಗಿ ನಮ್ಮ ರಾಜಕೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಭ್ರಷ್ಟವಾಗುತ್ತಿದೆ ಎಂಬುದನ್ನು ಯೋಚಿಸಬೇಕು. ಒಂದು ರಾಜಕೀಯ ವ್ಯವಸ್ಥೆ ಭ್ರಷ್ಟವಾಗಲು ಕಾರಣವಾಗುವ ಮಾಫಿಯಾಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಾಫಿಯಾದ ಬುಡ ಅಲುಗಾಡಿಸಲು ಏನು ಮಾಡಬೇಕು? ಅನ್ನುವ ಕುರಿತು ಚರ್ಚೆ ನಡೆಯಬೇಕು. ಯಾಕೆಂದರೆ ಯಡಿಯೂರಪ್ಪ, ಕುಮಾರಸ್ವಾಮಿ, ಅನಂತಕುಮಾರ್, ವೀರಪ್ಪ ಮೊಯ್ಲಿ ಅವರಂತವರು ರಾಜಕೀಯ ಬಿಟ್ಟ ಕೂಡಲೇ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ ನಿಲ್ಲುವುದಿಲ್ಲ. ಯಾಕೆಂದರೆ ತೆರೆಯ ಹಿಂದಿರುವ ಮಾಫಿಯಾಕ್ಕೆ ಇಂತಹ ನೂರಾರು ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ಇರುತ್ತದೆ. ಅಂತಹ ಶಕ್ತಿಯನ್ನು ನಿರ್ಮೂಲ ಮಾಡುವುದು ಹೇಗೆ? ಎಂಬುದೇ ನಮ್ಮ ಮುಂದಿರುವ ಪ್ರಶ್ನೆಯಾಗಬೇಕು. ಅದಕ್ಕೆ ಉತ್ತರ ಕಂಡು ಹಿಡಿಯುವ ಕೆಲಸವಾಗಬೇಕು. ಅದನ್ನು ಬಿಟ್ಟು, ಹಿಟ್ ಅಂಡ್ ರನ್ ಕೇಸ್ ಥರ, ಇಂತಿಂಥವರು ಭ್ರಷ್ಟರು ಎಂದು ದೂರಿ ಓಡಿ ಹೋದರೆ ಏನು ಪ್ರಯೋಜನ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books