Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಜಾತಿಯ ವರ್ತುಲದೊಳಗೆ ಆಮ್ ಆದ್ಮಿ ಗೆಲ್ಲುತ್ತಾ?

ಕರ್ನಾಟಕದ ರಾಜಕಾರಣ ವಿಚಿತ್ರ ತಿರುವನ್ನು ಪಡೆಯುತ್ತಿರುವ ಲಕ್ಷಣಗಳು ಕಾಣತೊಡಗಿವೆ. ದೆಹಲಿಯಲ್ಲಿ ಕ್ಷಿಪ್ರದಂಗೆಯ ಮೂಲಕ ಯಶಸ್ಸು ಕಂಡ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಲು ಇಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ದಲಿತ ಸಂಘರ್ಷ ಸಮಿತಿಗಳು ಅಣಿಯಾಗತೊಡಗಿವೆ. ಈ ರೀತಿ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸುವ ಉತ್ಸುಕತೆ ಸರ್ವೋದಯ ಕರ್ನಾಟಕ ಪಕ್ಷದ ದೇವನೂರ ಮಹಾದೇವರಂತಹ ಪ್ರಾಮಾಣಿಕರಲ್ಲಿ ಬಂದಿದ್ದರೆ ಅದು ಸಹಜ ಬೆಳವಣಿಗೆ. ಹೇಗೆ ಜಾತಿ ವ್ಯವಸ್ಥೆ ಎಂಬುದು ಒಂದು ವ್ಯವಸ್ಥೆಯಲ್ಲಿ ತಾರತಮ್ಯದ ವಾತಾವರಣವನ್ನು ಉಂಟು ಮಾಡುತ್ತದೋ? ಭ್ರಷ್ಟಾಚಾರ ಕೂಡ ಅಂತಹದೇ ತಾರತಮ್ಯದ ವಾತಾವರಣವನ್ನು ಸೃಷ್ಟಿಸುತ್ತದೆ. ಅಷ್ಟೇ ಅಲ್ಲ, ದುಡ್ಡಿನ ಬಲ ಇದ್ದವರು ಮಾತ್ರ ರಾಜಕೀಯ ಮಾಡಲು, ಅಧಿಕಾರ ನಡೆಸಲು, ತಮಗೆ ಬೇಕಾದ ಕಾನೂನು ಮಾಡಲು ಅರ್ಹರು ಎಂಬಂತಹ ಘೋರ ಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗುತ್ತದೆ. ನೋಡ ನೋಡುತ್ತಿದ್ದಂತೆಯೇ ಅದು ಇಡೀ ಸಮಾಜವನ್ನು ದುರ್ಬಲಗೊಳಿಸಿ, ಅಶಾಂತಿಯ ಛಾಯೆ ದಟ್ಟವಾಗುವಂತೆ ಮಾಡುತ್ತದೆ. ಇಂತಹ ವ್ಯವಸ್ಥೆ ಇರಬಾರದು ಎಂದು ಸದಾಕಾಲ ಹೋರಾಡುತ್ತಾ ಬಂದ ಅಗ್ರಗಣ್ಯರ ಪೈಕಿ ದೇವನೂರ ಮಹಾದೇವ ಒಬ್ಬರು.
ಇನ್ನು ದಲಿತ ಸಂಘರ್ಷ ಸಮಿತಿ ಕೂಡ ಅಷ್ಟೇ. ತನ್ನೊಳಗಿನ ಕಚ್ಚಾಟದಿಂದ ಎಷ್ಟೇ ಹೋಳುಗಳಾಗಿದ್ದರೂ ಫೈನಲಿ, ಸಮಾಜದಲ್ಲಿರುವ ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕಲು ಹೋರಾಡುತ್ತಿರುವ ಸಂಘಟನೆ. ಹೀಗಾಗಿ ಸರ್ವೋದಯ ಕರ್ನಾಟಕ ಹಾಗೂ ದಲಿತ ಸಂಘರ್ಷ ಸಮಿತಿಯಂತಹ ಶಕ್ತಿಗಳು ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಲು ಹೊರಟ ಬೆಳವಣಿಗೆ ನಿಜಕ್ಕೂ ಕುತೂಹಲಕಾರಿ. ಅಂದ ಹಾಗೆ ಈ ರೀತಿ ಆಮ್ ಆದ್ಮಿ ಪಕ್ಷದ ಜತೆ ಸರ್ವೋದಯ ಕರ್ನಾಟಕ ಹಾಗೂ ದಲಿತ ಸಂಘರ್ಷ ಸಮಿತಿ ಕೈ ಜೋಡಿಸಿದರೆ ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವೇ? ಹಾಗೆಂಬ ಪ್ರಶ್ನೆ ಕೇಳಿ ಬಂದರೆ ಅದು ಸಹಜವೇ. ಇವತ್ತು ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಲು ಹೊರಟಿರುವ ಬಹುತೇಕ ನಾಯಕರು, ಇಂತಹ ಬೆಳವಣಿಗೆ ಸಾಧಿತವಾದರೆ ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿಗೆ ಹೊಡೆತ ಬೀಳುತ್ತದೆ. ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವುದರೊಂದಿಗೆ ಆಮ್ ಆದ್ಮಿ ಪಕ್ಷ ಕೂಡ ತಲೆ ಎತ್ತುತ್ತದೆ ಎಂದು ಭಾವಿಸಿದ್ದಾರೆ.

ಅವರ ಪ್ರಕಾರ, ಆಮ್ ಆದ್ಮಿ ಪಕ್ಷದ ಬಗ್ಗೆ ಆಕರ್ಷಿತರಾಗಿರುವುದು ವಿಶೇಷವಾಗಿ ಯುವ ಸಮುದಾಯ. ಈ ಯುವ ಸಮುದಾಯಕ್ಕೀಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ದೊಡ್ಡ ಆಕರ್ಷಣೆ. ಸತತ ಮೂರು ಬಾರಿ ಗುಜರಾತ್‌ನ ಮುಖ್ಯಮಂತ್ರಿಯಾಗಿರುವ ನರೇಂದ್ರಮೋದಿ ತಮ್ಮ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಿದ್ದಾರೆ. ಹದಿನೈದು ಲಕ್ಷ ಕೋಟಿ ರುಪಾಯಿಗಳಿಗೂ ಅಧಿಕ ಬಂಡವಾಳವನ್ನು ಕೈಗಾರಿಕೋದ್ಯಮಿಗಳು ಹೂಡುವಂತೆ ಮಾಡಿದ್ದಾರೆ. ಇಂತಹ ಕೈಗಾರಿಕೀಕರಣ ವ್ಯಾಪಕವಾಗಿ ಅನುಷ್ಠಾನಗೊಂಡಿರುವ ಪರಿಣಾಮವಾಗಿ ಗುಜರಾತ್‌ನಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಹೀಗಾಗಿ ಅವರು ಪ್ರಧಾನಿಯಾದರೆ ದೇಶ ಜಾಗತೀಕರಣದ ಎರಡನೇ ಘಟ್ಟದಿಂದ ಮೂರನೇ ಘಟ್ಟಕ್ಕೆ ತಲುಪುತ್ತದೆ. ಆ ಮೂಲಕ ಕೈಗಾರಿಕೀಕರಣ ತನ್ನ ಉತ್ತುಂಗ ಸ್ಥಿತಿಗೆ ತಲುಪುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯುವ ಸಮುದಾಯದ ಮನಸ್ಸಿನ ಮೇಲೆ ಆವರಿಸಿರುವ ಕರಿ ಛಾಯೆ ತಿಳಿಯಾಗುತ್ತದೆ. ಹಾಗಂತ ದೇಶದ ಯುವ ಸಮುದಾಯ ಭಾವಿಸಿದೆ. ಮತ್ತು ಇದನ್ನು ಆ ಯುವ ಸಮುದಾಯದ ಮನಸ್ಸಿನಲ್ಲಿ ಛಾಪಿಸುವಂತೆ ಮಾಡುವಲ್ಲಿ ಕೈಗಾರಿಕೋದ್ಯಮಿಗಳು ಮಾಧ್ಯಮಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದು ಒಂದು ಮಟ್ಟದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವುದು ನಿಜ. ಇತ್ತೀಚಿನ ಸಮೀಕ್ಷೆಗಳು ಕೂಡ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ ನೂರರಷ್ಟು ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಈ ರೀತಿಯ ಸಮೀಕ್ಷೆಗಳು ಪ್ರಕಟವಾಗುತ್ತಿರುವ ಕಾಲದಲ್ಲೇ ಸರ್ವೋದಯ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿಯಂತಹ ಶಕ್ತಿಗಳು ಆಮ್ ಆದ್ಮಿ ಪಾರ್ಟಿ ಜತೆ ಕೈ ಜೋಡಿಸಲು ಹೊರಟಿರುವುದರಿಂದ ನಿಜಕ್ಕೂ ಖುಷಿಯಾಗಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂಡ್ ಗ್ಯಾಂಗ್. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಗಣಿ ಕಪ್ಪದ ಆರೋಪ ಹೊತ್ತ ಮಾಜಿ ಸಿಎಂ ಯಡಿಯೂರಪ್ಪನವರನ್ನು ಬಿಜೆಪಿಯಿಂದ ಹೊರಗೆ ಕಳಿಸಿ, ಕೆಜೆಪಿ ಕಟ್ಟುವಂತೆ ಮಾಡುವಲ್ಲಿ ದಿಲ್ಲಿಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದರು. ಹೀಗೆ ಬಿಜೆಪಿಯಿಂದ ಹೊರಗೆ ಹೋದ ಯಡಿಯೂರಪ್ಪ ಕೆಜೆಪಿ ಕಟ್ಟಿದರು. ಶೇಕಡಾ ಹತ್ತರಷ್ಟು ಮತಗಳನ್ನು ಗಳಿಸಿದರು. ಆ ಮೂಲಕ ಬಿಜೆಪಿಯ ಮತಬ್ಯಾಂಕ್ ವಿಭಜನೆಯಾಗುವಂತೆ ಮಾಡಿದರು. ಅದರ ನಿಚ್ಚಳ ಲಾಭ ಗಳಿಸಿದ್ದು ಕಾಂಗ್ರೆಸ್.

ಒಂದು ವೇಳೆ ಯಡಿಯೂರಪ್ಪನವರೇನಾದರೂ ಬಿಜೆಪಿಯಲ್ಲೇ ಉಳಿದುಕೊಂಡಿದ್ದರೆ ಅನುಮಾನವೇ ಬೇಡ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠವೆಂದರೂ ಎಪ್ಪತ್ತೈದರಿಂದ ಎಂಭತ್ತು ಸೀಟುಗಳನ್ನು ಗಳಿಸುತ್ತಿತ್ತು ಮತ್ತು ಜೆಡಿಎಸ್ ಜತೆ ಕೈ ಜೋಡಿಸಿ ಮೈತ್ರಿಕೂಟ ಸರ್ಕಾರವನ್ನು ರಚಿಸುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಇದಕ್ಕೆ ಅವಕಾಶ ಕೊಡಲಿಲ್ಲ. ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಅಜ್ಞಾತವಾಸದಿಂದ ಹೊರಬಂದು ಅಧಿಕಾರ ಹಿಡಿಯುವಂತಾಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಜಯ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ತಲ್ಲಣಗೊಳಿಸಿದೆ. ಅಷ್ಟೇ ಅಲ್ಲ, ಮುಂಬರುವ ಸಂಸತ್ ಚುನಾವಣೆಯ ನಂತರ ಯುಪಿಎ ಹಿರಿಯಣ್ಣ ಕಾಂಗ್ರೆಸ್‌ನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ಸರ್ಕಾರ ರಚಿಸುವ ಲೆಕ್ಕಾಚಾರ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಶಕ್ತಿಗಳಲ್ಲಿ ಕಾಣಿಸಿಕೊಂಡಿದೆ.
ಹೀಗಾಗಿದ್ದೇ ತಡ, ಬಿಜೆಪಿಯಿಂದ ಹೊರಗಿದ್ದ ಯಡಿಯೂರಪ್ಪ ಪಕ್ಷಕ್ಕೆ ವಾಪಸು ಬಂದಿದ್ದಾರೆ. ಈಗವರಿಗೆ ಜೈಲು ಸೇರುವ ಭೀತಿಯೂ ಇಲ್ಲ. ಒಂದು ವೇಳೆ ಅಂತಹ ಯತ್ನ ನಡೆದರೆ ಕಾಂಗ್ರೆಸ್ ಪಾಲಿಗೆ ಅದು ಸೋಲಿನ ಸುಳಿಯನ್ನು ಸೃಷ್ಟಿಸುವ ಬೆಳವಣಿಗೆಯೇ ಆಗಿಬಿಡಬಹುದು. ಇದು ಕಾಂಗ್ರೆಸ್ ನಾಯಕರಿಗೂ ಗೊತ್ತು. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರಿಂದ ಸಿಕ್ಕ ಲಾಭವನ್ನು ಪಡೆಯಲು ಅವರು ಪರ್ಯಾಯ ಮೂಲವನ್ನು ಹುಡುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ಸರ್ವೋದಯ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿಗಳು ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಿದರೆ ಬಿಜೆಪಿಗೆ ನಿಶ್ಚಿತವಾಗಿಯೂ ಡ್ಯಾಮೇಜ್ ಆಗುತ್ತದೆ ಎಂದವರು ಭಾವಿಸಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ, ಸರ್ವೋದಯ ಕರ್ನಾಟಕ ಪಕ್ಷ ಮತ್ತು ದಲಿತ ಸಂಘರ್ಷ ಸಮಿತಿ ಅರವಿಂದ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಿದರೆ ಕರ್ನಾಟಕದ ನೆಲೆಯಲ್ಲಿ ನಿಶ್ಚಿತವಾಗಿಯೂ ಅದೊಂದು ಶಕ್ತಿಯಾಗಿ ತಲೆ ಎತ್ತುತ್ತದೆ.

ಆದರೆ ಅದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಅನ್ನಿಸಿಕೊಂಡ ನರೇಂದ್ರ ಮೋದಿ ಕಡೆ ಕುತೂಹಲದಿಂದ ನೋಡುತ್ತಿರುವ ಯುವ ಸಮುದಾಯದ ಮತಗಳನ್ನು ಸೆಳೆಯಲು ಸಫಲವಾಗುತ್ತದೆಯೇ? ಈ ಪ್ರಶ್ನೆ ಬಂದಾಗ ಹೌದು ಎಂದು ಹೇಳುವುದು ಕಷ್ಟ. ಯಾಕೆಂದರೆ ಭ್ರಷ್ಟಾಚಾರದ ವಿರುದ್ಧ ಪ್ರಬಲ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಅಣ್ಣಾ ಹಜಾರೆ ಹೋರಾಟ ಆರಂಭಿಸಿದಾಗ ಕರ್ನಾಟಕದ ಪಡಸಾಲೆಯಲ್ಲೂ ಅದಕ್ಕೆ ಉತ್ತಮ ಬೆಂಬಲ ವ್ಯಕ್ತವಾಯಿತು. ಆದರೆ ಈ ರೀತಿ ಬೆಂಬಲ ನೀಡಿದ ಶಕ್ತಿಗಳ ಪೈಕಿ ತುಂಬ ಮುಖ್ಯವಾಗಿದ್ದುದು ಬಿಜೆಪಿ ಎಂಬುದು ಸ್ಪಷ್ಟ. ಯಾಕೆಂದರೆ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರದ ಯುಪಿಎ ಸರ್ಕಾರದ ಹಗರಣಗಳನ್ನು ಎತ್ತಿ ತೋರಿಸುವುದು ಬಿಜೆಪಿಗೆ ಬೇಕಾಗಿತ್ತು. ಅದಕ್ಕಾಗಿ ಅದು ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಕರ್ನಾಟಕದ ನೆಲೆಯಲ್ಲೂ ಬೆಂಬಲ ನೀಡಿತು. ಆದರೆ ಯಾವಾಗ ಅಣ್ಣಾ ಹಜಾರೆ ಫೀಲ್ಡಿನಿಂದ ಹೊರಗೆ ಬಂದರೋ? ಇದಾದ ನಂತರ ಇಲ್ಲಿ ನಡೆಯುತ್ತಿದ್ದ ಹೋರಾಟದ ಕಾವು ತನ್ನಿಂತಾನೇ ಇಳಿದು ಹೋಯಿತು.

ಅಂದ ಹಾಗೆ ದಿಲ್ಲಿಯಲ್ಲಿ ನಡೆದ ಇಂತಹ ಹೋರಾಟದ ಗರ್ಭದಿಂದಲೇ ಜನಿಸಿದ್ದು ಆಮ್ ಆದ್ಮಿ ಪಕ್ಷ. ಆದರೆ ಅಲ್ಲಿ ಜನಿಸಿದ ರೀತಿಯಲ್ಲಿ ಆಮ್ ಆದ್ಮಿ ಪಕ್ಷ ಬೇರೆ ಕಡೆ ತಲೆ ಎತ್ತಲಿಲ್ಲ. ಆದರೆ ಯಾವಾಗ ಅದು ದಿಲ್ಲಿಯಲ್ಲಿ ಅಧಿಕಾರ ಸೂತ್ರ ಹಿಡಿಯಿತೋ? ಮತ್ತು ಅದಕ್ಕೆ ಬೆಂಬಲ ನೀಡಿ ಅಧಿಕಾರ ಸೂತ್ರ ಹಿಡಿಯುವಂತೆ ಕಾಂಗ್ರೆಸ್ ನೋಡಿಕೊಂಡಿತೋ? ಇದಾದ ಮೇಲೆ ಕಾಂಗ್ರೆಸ್ ನಾಯಕರಿಗೆ ಒಂದು ನಂಬಿಕೆ ಹುಟ್ಟಿಕೊಂಡಿದೆ. ಅದೆಂದರೆ ಆಮ್ ಆದ್ಮಿ ಪಕ್ಷದ ಜತೆ ಸಂಘರ್ಷದ ವಾತಾವರಣವನ್ನು ಉಳಿಸಿಕೊಂಡು ದೇಶದ ಹಲವು ರಾಜ್ಯಗಳಲ್ಲಿ ಆಮ್ ಆದ್ಮಿ ತಲೆ ಎತ್ತಲು ಸಹಕಾರ ನೀಡಬೇಕು, ಆ ಮೂಲಕ ಬಿಜೆಪಿಯ ಮತದಾರರನ್ನು ಸೆಳೆಯಬೇಕು ಎಂಬುದು. ಅದರಲ್ಲೂ ಮುಖ್ಯವಾಗಿ ಯುವ ಮತದಾರರ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆಯುವಂತೆ ನೋಡಿಕೊಂಡರೆ, ಆ ಮೂಲಕ ಎನ್‌ಡಿಎ ಮೈತ್ರಿಕೂಟದ ಶಕ್ತಿ ಇನ್ನೂರರ ಗಡಿ ತಲುಪುವಷ್ಟಕ್ಕೇ ಸುಸ್ತಾಗುವಂತೆ ಮಾಡಿದರೆ ಆಗ ಮತ್ತೊಂದು ರೌಂಡು ಆಟವಾಡಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಈ ಆಟದ ಸಂದರ್ಭದಲ್ಲಿ ರಾಹುಲ್‌ಗಾಂಧಿಗೆ ಪ್ರಧಾನಿ ಆಗುವ ಅವಕಾಶ ದಕ್ಕದೇ ಹೋಗಬಹುದು. ಆದರೆ ತೃತೀಯ ರಂಗ ತಲೆ ಎತ್ತುವುದು ಗ್ಯಾರಂಟಿ. ಆಗ ಎನ್‌ಸಿಪಿ ನಾಯಕ ಶರದ್ ಪವಾರ್ ಅವರೋ, ಎಐಎಡಿಎಂಕೆಯ ಜಯಲಲಿತಾ ಅವರೋ ಪ್ರಧಾನಿಯಾದರೂ ಪರವಾಗಿಲ್ಲ. ಒಟ್ಟಿನಲ್ಲಿ ತೃತೀಯ ಶಕ್ತಿಗೆ ಬೆಂಬಲ ನೀಡಿ ದಿಲ್ಲಿಯ ಅಧಿಕಾರ ಸೂತ್ರದ ಮೇಲೆ ತನ್ನ ಹಿಡಿತ ಇರುವಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಯೋಚನೆ. ಹೀಗಾಗಿಯೇ ಕರ್ನಾಟಕದಲ್ಲಿ ಆಮ್ ಆದ್ಮಿ ಬೆಳೆದರೆ ತನಗೇ ಲಾಭ ಎಂದು ಕಾಂಗ್ರೆಸ್ ಲೆಕ್ಕ ಹಾಕಿದೆ. ಆದರೆ ದಿಲ್ಲಿಯಲ್ಲಿ ಆಮ್ ಆದ್ಮಿಗೆ ದಕ್ಕಿದ ಯಶಸ್ಸು ಇಲ್ಲಿ ದಕ್ಕುತ್ತದೆ ಅಂತ ಹೇಳುವುದು ಕಷ್ಟ. ಯಾಕೆಂದರೆ ದಿಲ್ಲಿ ಹೇಳಿ ಕೇಳಿ ಕಾಸ್ಮೋಪಾಲಿಟನ್ ಸಿಟಿ. ದೇಶದ ಎಲ್ಲ ಮೂಲೆಗಳಿಂದ ಬಂದ ಜನ ಸಮುದಾಯ ಅಲ್ಲಿದೆ. ಹೀಗಾಗಿ ಅಲ್ಲಿ ಜಾತಿ ವ್ಯವಸ್ಥೆಯ ಕಬಂಧ ಬಾಹುಗಳನ್ನು ನಿರ್ಮಿಸಿ ರಾಜಕೀಯ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ. ಇಂತಹ ಕಡೆಗಳಲ್ಲಿ ಕ್ಷಿಪ್ರ ದಂಗೆಗಳು ಯಶಸ್ವಿಯಾಗಿ ಬಿಡಬಹುದು. ಆದರೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ತಳವೂರಿರುವ ಕರ್ನಾಟಕದಂತಹ ರಾಜ್ಯಗಳಲ್ಲಿ ಅಂತಹ ಕ್ಷಿಪ್ರ ದಂಗೆಗಳನ್ನು ಸೃಷ್ಟಿಸುವುದು ಕಷ್ಟ. ಹೀಗಾಗಿ ನಾಳೆ ದಲಿತ ಸಂಘರ್ಷ ಸಮಿತಿ ಮತ್ತು ಸರ್ವೋದಯ ಕರ್ನಾಟಕದಂತಹ ಪಕ್ಷಗಳು ಆಮ್ ಆದ್ಮಿ ಜತೆ ಕೈ ಜೋಡಿಸಿದರೆ ಆಯಾ ಶಕ್ತಿಗಳ ಜತೆ ಗುರುತಿಸಿಕೊಂಡ ಜಾತಿಗಳ ಮತಗಳನ್ನು ಗಳಿಸಬಹುದೇ ವಿನಃ ಯುವ ಮತದಾರರನ್ನು ದೊಡ್ಡ ಮಟ್ಟದಲ್ಲಿ ಸೆಳೆಯಲು ಸಾಧ್ಯವಿಲ್ಲ.

ಹಾಗೇನಾದರೂ ಆದರೆ, ಆಮ್ ಆದ್ಮಿ ಪಕ್ಷ ಸೆಳೆಯುವ ಮತಗಳು ಕಾಂಗ್ರೆಸ್ ಪಕ್ಷದ ಪಾಲಿಗೆ ನಷ್ಟವುಂಟು ಮಾಡುತ್ತವೆಯೇ ಹೊರತು ಬಿಜೆಪಿಗೆ ಹೊಡೆತ ಕೊಡುವುದಿಲ್ಲ. ಯಾಕೆಂದರೆ ಕಳೆದ ಸರ್ವೋದಯ ಕರ್ನಾಟಕ ಪಕ್ಷ ಮತ್ತು ದಲಿತ ಸಂಘರ್ಷ ಸಮಿತಿಯ ಶಕ್ತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ. ಹೀಗಿರುವಾಗ ಆ ಮತಗಳು ಆಮ್ ಆದ್ಮಿ ಪಕ್ಷದ ಕಡೆ ವಾಲಿದರೆ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೇ ಹೊರತು ಬಿಜೆಪಿಗಲ್ಲ. ಆದರೆ ಈ ಅಂಶವನ್ನು ಗಮನಿಸದ ಕಾಂಗ್ರೆಸ್ ನಾಯಕರು, ಆಮ್ ಆದ್ಮಿ ಪಕ್ಷ ತಲೆ ಎತ್ತಿದರೆ, ಬಿಜೆಪಿಗೆ ಹೊಡೆತ ಕೊಟ್ಟರೆ ಇಪ್ಪತ್ತರಷ್ಟು ಎಂಪಿ ಸೀಟುಗಳನ್ನು ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಆದರೆ ಅವರ ಲೆಕ್ಕಾಚಾರ ಅವರಿಗೇ ತಿರುಗುಬಾಣವಾದರೆ ಅದರಲ್ಲಿ ಅಚ್ಚರಿ ಏನಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books