Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ವಿಪರೀತ ಮುದ್ದು ಕೂಡ ಎಂಥ ಅಪಾಯಕಾರಿ ನೋಡಿ?

ವಿಪರೀತ ಮುದ್ದು!
ಅದನ್ನು over pampering ಮಾಡುವುದು ಅಂತಾರೆ. ಉದಾಹರಣೆ ಕೊಡ್ತೀನಿ ನೋಡಿ. ನಿಮ್ಮ ಮಗು ಚಾಕೊಲೇಟ್ ಕೊಡಿಸು ಅಂತ ಹಟ ಮಾಡುತ್ತದೆ. ನೀವು ‘no’ ಅನ್ನುತ್ತೀರಿ. ಅದು ರಂಪಾರಾಮಾಯಣ ಮಾಡುತ್ತದೆ. ಸಿಟ್ಟಿಗೆದ್ದು ಮಗುವಿನ ಕೆನ್ನೆಗೆ ರಪ್ಪನೆ ಹೊಡೆಯುತ್ತೀರಿ. ಚಾಕೊಲೇಟ್ ಮರೆತು ಅಳುತ್ತ ಸುಮ್ಮನಾಗುತ್ತದೆ ಮಗು. ಅದು ಕೆನ್ನೆಗೆ ಬಿದ್ದ ಏಟನ್ನೂ ಮರೆತು ಹೋಗುತ್ತದೆ. ಆದರೆ ನೀವು? ಮನಸು ಚುರುಚುರು. ಅಬೋಧ ಮಗುವಿನ ಕೆನ್ನೆಗೆ ಹೊಡೆದು ಬಿಟ್ಟೆನಲ್ಲಾ ಅಂತ ಕರುಳು ಮರಮರ. ಸಂಜೆ ಹತ್ತಿಗೆ ಮಗುವಿಗೊಂದು surprise ಕೊಡ್ತೀನಿ ಅಂದುಕೊಂಡು ಹತ್ತು ಚಾಕಿಗಳನ್ನು ಒಂದೇ ಸಲಕ್ಕೆ ಕಣ್ಣು ಮುಚ್ಕೋ ಅಂತ ಹೇಳಿ ಮಗುವಿನ ಬೊಗಸೆಗೆ ಸುರಿಯುತ್ತೀರಿ.

ಅದೇ over pampering.
ಕೆನ್ನೆಗೆ ಹೊಡೆದು ಮಗುವಿನ ಮನಸನ್ನು ಘಾಸಿಗೊಳಿಸಿರುತ್ತೀರಿ. ಕೆಲವು ಸಲ ಅವುಗಳನ್ನು ಮಗು ಕಾಲಾಂತರದಲ್ಲಿ ಮರೆತು ಬಿಡಬಹುದು. ಆದರೆ ಕೆಲವು ತೀವ್ರ ಶಿಕ್ಷೆಗಳು ಅವುಗಳ ಮನಸು, ವ್ಯಕ್ತಿತ್ವಗಳ ಮೇಲೆ ಒಂದು ವಿಕಾರವಾದ ಗಾಯದ ಕಲೆ, ಸ್ಕಾರ್ ಉಂಟು ಮಾಡಿ ಬಿಡುತ್ತವೆ. ಹೀಗಾಗಿ ನಾನು ಮಕ್ಕಳನ್ನು ಹೊಡೆಯುವುದರ ವಿರೋಧಿ. ರಸ್ತೆಯಲ್ಲಿ ಯಾರೇ ಮಗುವನ್ನು ಹೊಡೆಯುತ್ತಿದ್ದರೂ, ಅದು ಅದರ ತಾಯಿಯೇ ಆಗಿದ್ದರೂ ಕಾರಿನಿಂದ ಇಳಿದು ಗಲಾಟೆ ಮಾಡಿ, ಆಕೆಗೆ ಕೊಂಚ ತಿಳುವಳಿಕೆ ಹೇಳಿ ಮುಂದಕ್ಕೆ ಹೋಗುತ್ತೇನೆ. ನನ್ನ ಮನೆಗಳಲ್ಲಿ ಬಾಲಾಪರಾಧಕ್ಕಿಂತ ದೊಡ್ಡ ನಿರ್ಬಂಧವೆಂದರೆ ಅವರನ್ನು ದೈಹಿಕವಾಗಿ ಶಿಕ್ಷಿಸುವುದು.
ಅವರು ಹಟಕ್ಕೆ ಬಿದ್ದಾಗ ಅದನ್ನು ನಿಗ್ರಹಿಸಲು ಬೇರೆ ಬೇರೆ ದಾರಿಗಳಿವೆ. ಮೊದಲನೆಯದೆಂದರೆ ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಿ, ಹಟ ಮರೆಸುವುದು. ಕಣ್ಣು ಬೆದರಿಕೆ ಕೂಡ ಸಾಕಷ್ಟು ಸಲ ಕೆಲಸ ಮಾಡುತ್ತದೆ. “ಅಪ್ಪಂಗೆ ಹೇಳ್ತೀನಿ ನೋಡು!" ಎಂಬುದು ಅತಿಪುರಾತನ, old age, time tested ಟ್ರಿಕ್ಕು. ನಮ್ಮ ಮನೆಯಲ್ಲಿ ಲಲಿತೆ ಅದೆಷ್ಟು ಸಲ ಈ ಬೆದರಿಕೆ ಹಾಕುತ್ತಿದ್ದಳೆಂದರೆ ನಾನು ಎಲ್ಲೇ ಮೂಲೆಯಲ್ಲಿ ಕುಳಿತು ಬರೆಯುತ್ತಿರಲಿ, “ರ್ರೀ, ನೋಡ್ರೀ ಇವಳೂ..." ಅನ್ನುತ್ತಿದ್ದಳು. ನಾನು ತಲೆ ಕೂಡ ಮೇಲೆತ್ತದೆ “ಏಯ್... ಏನೇ ಮಗಳೇ ಅದೂ" ಅನ್ನುತ್ತಿದ್ದೆ. ಕಡೆಕಡೆಗೆ, “ಲಲಿತಾ ನಾನು ಮಕ್ಕಳ ಪಾಲಿಗೆ ಭೀತಿ ಹುಟ್ಟಿಸುವ ಯಂತ್ರದಂತಾಗಿ ಬಿಡ್ತೀನೇನೋ?" ಎಂದು ಆತಂಕ ವ್ಯಕ್ತಪಡಿಸಿದೆ. ಈಗ ಮೊಮ್ಮಕ್ಕಳಾಗಿದ್ದಾರೆ. ಆ ಮೂವರ ಪಾಲಿಗೆ ನಾನು ‘ಫ್ರೆಂಡ್’ ದಾದಾಜಿ. ಅವರೇ ಹೆದರಿಸುತ್ತಾರೆ, ಕೈಯಲ್ಲಿನ ಸಿಗರೇಟು ಆರಿಸಲೇಬೇಕು, ಅವರು ನನ್ನ ಕೋಣೆಗೆ ಬಂದರೆ.

well, ಅತೀ ಮುದ್ದಿನ ಬಗ್ಗೆ ಹೇಳುತ್ತಿದ್ದೆ. ಈ ಅತೀಮುದ್ದು ಕೇವಲ ಮಕ್ಕಳಿಗೆ ಅನ್ವಯಿಸುವುದಿಲ್ಲ. ಮೊದಲು ಅವರ ಮನಸಿನ ಮೇಲೆ scar ಉಳಿಸುತ್ತದೆ. ಅದು ಮಗುವಿನೆಡೆಗೆ ನೀವು ಮಾಡಿದ ಮೊದಲ ಅಪರಾಧ. ಎರಡನೆಯದು ಅವರ ಹಲ್ಲನ್ನು ಆ ಹತ್ತು ಚಾಕಿ ಹಾಳು ಮಾಡುತ್ತವೆ. ನನ್ನ ಮೊದಲ ಇಬ್ಬರು ಮಕ್ಕಳಿಗೆ ಸುಮಾರು ಮೊದಲ ಐದು ವರ್ಷ ಚಾಕೊಲೇಟಿನ ರುಚಿಯನ್ನೂ ತೋರಿಸಿರಲಿಲ್ಲ. ಮೂರು ಮತ್ತು ನಾಲ್ಕನೆಯ ಮಕ್ಕಳಿಗೆ ಅದು ತುಂಬ ಚಿಕ್ಕಂದಿನಲ್ಲೇ ಅಭ್ಯಾಸವಾಗಿ ಹೋಯಿತು. ಹೀಗಾಗಿ ಇಬ್ಬರವೂ ಹಲ್ಲು ಕೊಂಚ ಸುಮಾರು. ನನ್ನ ತಾಯಿಯ dental line (ಹಲ್ಲಿನ ಸಾಲು) ಅದ್ಭುತವಾಗಿದ್ದವು. ಆ ಕೃಪೆ ನನಗೆ ಬಂತು. ನನ್ನಿಬ್ಬರು ಹೆಣ್ಣು ಮಕ್ಕಳಿಗೂ ಬಂದಿವೆ. ಕೇವಲ ಹಲ್ಲು ಹಾಳಾಗುವುದೊಂದೇ ಅಲ್ಲ. ಚಾಕೊಲೇಟ್ ಮತ್ತು ಕೋಕ್‌ನಂಥ ಪಾನೀಯಗಳಲ್ಲಿ ಒಂದು ವಿಶೇಷವಾದ ಕೆಮಿಕಲ್ ಇರುತ್ತದೆ ಎಂಬ ಗುಮಾನಿ ನನ್ನದು. ಆ ಕೆಮಿಕಲ್ ಮಕ್ಕಳಲ್ಲಿ ಚಾಕಿ ಮತ್ತು ಕೋಕ್‌ನೆಡೆಗೆ ಅಡಿಕ್ಷನ್ ಉಂಟು ಮಾಡಿ ಬಿಡುತ್ತದೆ. ನೀವು ಫೇಡೆ ಕೊಡಿ, ಮೈಸೂರ್ ಪಾಕ್ ಕೊಡಿ, ಕಡ್ಲೆ ಮಿಠಾಯಿ ಕೊಡಿ? ಘೆಟ. ಅವು ಚಾಕಿಯೇ ಬೇಕೆಂದು ಹಟ ಹಿಡಿಯುತ್ತವೆ. ಅದಕ್ಕೆ ಕಾರಣ ಈ ಕೆಮಿಕಲ್. ಅನಿವಾರ್ಯ ಸ್ಥಿತಿಯಲ್ಲಿ ಚಾಕಿ ತಿಂದರೆ, ತಕ್ಷಣ ಹಲ್ಲು ಬ್ರಷ್ ಮಾಡಿಸಿ. ಬ್ರಷ್‌ನ್ ತುಂಬ, ಜಾಹಿರಾತುಗಳಲ್ಲಿ ತೋರಿಸುವಂತೆ ಪೇಸ್ಟ್ ಸುರಿಯಬೇಡಿ. ಒಂದು ಕಿರುಬೆರಳ ತುದಿಯಷ್ಟೇ ಹನಿ ಹಾಕಿ. ಅಷ್ಟು ಸಾಕು. ನಿಮಗೂ ಅಷ್ಟೆ.

over pampering ಎಂಬುದು ಪತ್ನಿಯ ವಿಷಯದಲ್ಲೂ ಅನ್ವಯಿಸುತ್ತದೆ. ಕೈಕೆಳಗೆ ಕೆಲಸ ಮಾಡುವವರಿಗೂ ಅನ್ವಯಿಸುತ್ತದೆ. “ನೀನೊಬ್ಬಳೇ ಅಲ್ಲ, ನಿನ್ನ ಮನೆತನದವರೇ ಅಷ್ಟು. ನಿಮ್ಮದು ಕೆಟ್ಟ ಸ್ವಭಾವ. ಹಾಳು ಬಿದ್ದು ಹೋಗಿ ನೀವು" ಅಂದುಬಿಡುತ್ತಾನೆ ಗಂಡ. ಅಥವಾ “ನಂಗೆ ಮೊದಲಿಂದಲೂ ಈ ಬಗ್ಗೆ ಅನುಮಾನ. ಕಾಲೇಜಿಗೆ ಹೋಗ್ತಾ ಇದ್ದಾಗಲೇ ನಿಂಗೆ ಬಾಯ್ ಫ್ರೆಂಡ್ಸ್ ಇದ್ದರು" ಅಂದು ಬಿಡುತ್ತಾನೆ. ಅಂದ ಮಾತು ಮುತ್ತು ಜಾರಿದಂತೆ. ಮಣ್ಣಿಗೆ ಬಿದ್ದರೆ ಗಲೀಜು. ಕಲ್ಲ ಮೇಲೆ ಬಿದ್ದರೆ ಚೂರು ಚೂರು. ಆದರೆ ಆಕೆಗೆ ಆದ ಘಾಸಿ? ನೀವು ಗಂಡ. ನೀವೇ ಸರ್ವಸ್ವ. ನಿಮ್ಮನ್ನು ಸಹಿಸಿಕೊಂಡು, ಇಡೀ ಕುಟುಂಬದ ಏಳಿಗೆಗೆ ಆಕೆ ಶ್ರಮಿಸುತ್ತಿರುತ್ತಾಳೆ. ಅಂಥ ಹೆಣ್ಣುಮಗಳ ವಂಶವನ್ನೇ ಹೀಯಾಳಿಸುವುದು, ಶೀಲವನ್ನೇ ದೂಷಿಸುವುದು-ಇವೆಲ್ಲ ಸುಲಭಕ್ಕೆ ಮಾಯುವ ಗಾಯಗಳಲ್ಲ. ಮಾಯ್ದರೂ ಅಸಹ್ಯಕರ scarಗಳು ಉಳಿಯುತ್ತವೆ. ಹಾಗೆ ಮಾಡಿದ ಎರಡು ದಿನಗಳಿಗೆ ಮನಸು ಚುರುಚುರು. “I am sorry" ಅಂತ ಬೈದ ಮರುಕ್ಷಣ ಅಂದು ಬಿಟ್ಟರೆ ಘಾಸಿಯ ತಾಪ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ ದಡ್ಡ ಗಂಡಂದಿರು (ದಡ್ಡ : ನೆನಪಿರಲಿ) ಎರಡನೇ ದಿನ ಹೆಂಡತಿಯನ್ನು ರಮಿಸಲು ಎರಡು ಸೀರೆ ಕೊಂಡು ಹೋಗಿ ಕೊಟ್ಟು ಬಿಡುತ್ತಾರೆ: surprise ಕೊಟ್ಟೆ ಅಂದುಕೊಳ್ಳುತ್ತಾರೆ. ಕೆಲವರು ಒಂದೇ ಸಲಕ್ಕೆ ಐದು ರೇಷ್ಮೆ ಸೀರೆ ಕೊಡುತ್ತಾರೆ. ಒಡವೆ ಕೊಡಿಸಿ ಬಿಡುತ್ತಾರೆ. ಅವತ್ತೇ ರಾತ್ರಿ ಆಕೆಯನ್ನು ಮಿಲನ ಮಹೋತ್ಸವಕ್ಕೆ ಆಹ್ವಾನಿಸುತ್ತಾರೆ. ಆಕೆಗೆ ಇವ್ಯಾವೂ ನೆನಪಿಗುಳಿಯುವುದಿಲ್ಲ. ಆ ಮಿಲನ ಮಹೋತ್ಸವದಲ್ಲಿ ದೇಹ ತಲ್ಲೀನವಾಗಬಹುದೇ ಆಗಲಿ ನೊಂದ ಮನಸು ದೂರವೇ ಉಳಿಯುತ್ತದೆ. ಅದಕ್ಕೆ ಅನ್ನಿಸಿಕೊಂಡ ಮೂದಲಿಕೆಗಳ ಗಾಯವಿದೆ. ರೇಷ್ಮೆ ಸೀರೆ, ಒಡವೆ, ಆ ಮಹೋತ್ಸವ ಉಹುಂ, ಅವು ಮನದ ಗಾಯ ಮಾಯಿಸುವುದಿಲ್ಲ. ಇದಕ್ಕಿರುವ ಪರಿಹಾರವೊಂದೇ. ತುಂಬ ಸಿಟ್ಟು ಬಂದಾಗ ಕೂಡಲೆ react ಮಾಡದೆ ಐದು ನಿಮಿಷ ಕುಳಿತು ಯೋಚಿಸಬೇಕು. ಯಾವ ಕಾರಣಕ್ಕೆ ಸಿಟ್ಟಿದೆಯೋ ಆ ಕಾರಣಕ್ಕೆ, to the point ನಮ್ಮ ಭಿನ್ನಾಭಿಪ್ರಾಯ ತಿಳಿಸಬೇಕು. ಕೊಂಚ ಹೊತ್ತು ಮಾತು ಬಿಟ್ಟರೂ ಅಲ್ಲಿಗೆ ನಿಮ್ಮ ಭಿನ್ನಾಭಿಪ್ರಾಯ, ಬೇಸರಗಳನ್ನು ವ್ಯಕ್ತಪಡಿಸಿದಂತೆಯೇ ಆಗುತ್ತದೆ. ಆನಂತರ ಇಬ್ಬರೂ ಸಮಾಧಾನಚಿತ್ತರಾಗಿ ಕೂತು ಮಾತನಾಡಬೇಕು. That is the best way of quarrelling. ನನ್ನ-ಲಲಿತೆಯ ದಾಂಪತ್ಯದಲ್ಲಿ ಹೆಚ್ಚೆಂದರೆ ಮೂರು ಸಲ ಶರಂಪರ ಜಗಳವಾಡಿದ್ದೇವೆ. ಆದರೆ ಅರ್ಧಗಂಟೆಗಿಂತ ಹೆಚ್ಚು ಹೊತ್ತು ಯಾವತ್ತೂ ಮಾತು ಬಿಟ್ಟಿಲ್ಲ.
ವಿ.ಸೂ: ಈ ಎಲ್ಲ ಮಾತುಗಳೂ ಹೆಂಗಸರಿಗೂ ಅನ್ವಯಿಸುತ್ತವೆ. No conditions apply.

Of course, ಮಿಲನ ಮಹೋತ್ಸವವೆಂಬುದು ಅನೇಕ ಜಗಳಗಳನ್ನು ರಾಜಿಯಲ್ಲಿ ಬದಲಿಸುವ ಅತ್ಯುತ್ತಮ ಖಾಸಗಿ ಕೋರ್ಟು. ಆದರೆ ಒಬ್ಬ ಸಂಗಾತಿಗೆ ಅದರಲ್ಲಿ ಮನಸಿಲ್ಲದಿದ್ದಾಗ ಅದು ಅವರ ಮೇಲೆ ವಿಧಿಸಲಾದ ಶಿಕ್ಷೆ.
ಕಡೆಯ ಮಾತು: “ದಿಲ್ಲಿ ಹೆಂಗಸರ ಪಾಲಿಗೆ safe city ಅಲ್ಲ. ಶೀಲಾ ದಿಕ್ಷೀತ್ ಪರಿಸ್ಥಿತಿ ಏನಾಯಿತೋ ನೋಡಿ" ಎಂಬುದು ಹೊಸ ಎಸ್ಸೆಮ್ಮೆಸ್ ಜೋಕು. ಆದರೆ ರಾಜಕಾರಣದ ನಕಾಶೆಯಲ್ಲೇ ಇರದಿದ್ದ ಕೇಜ್ರಿವಾಲಾ ಅರವಿಂದ್‌ರನ್ನು ಅಣ್ಣಾ ಹಜಾರೆ ಚಳವಳಿಯ ಕಾರಣದಿಂದಾಗಿ ಜನ pamper (ಮುದ್ದು) ಮಾಡಿದರು. ಮುಂದೆ ಅದು over pampering ಆಯಿತು. ಆತ ಮುಖ್ಯಮಂತ್ರಿಯಾದರು. ‘ಬೇಡವೇ ಬೇಡ’ ಅಂದಿದ್ದ ಸರ್ಕಾರಿ ಕಾರು, ಸರ್ಕಾರಿ ನಿವಾಸ, ಬಾಡಿಗಾರ್ಡ್‌ಗಳ ಝಡ್ ಸೆಕ್ಯೂರಿಟಿ ಎಲ್ಲ ಬಂದವು. ಅವರದೇ ಪಕ್ಷದ ನಾಯಕ-ಶಾಸಕರು ತಿರುಗಿಬಿದ್ದರು. ಒಂದು ಜ್ವರ, ಹತ್ತಿದ ಭೇದಿ, ಅಧಿಕಾರದ ರುಚಿ-ಎಲ್ಲವೂ ಅತೀ ಮುದ್ದಿನ ಪರಿಣಾಮಗಳಲ್ಲವೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books