Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂತೂ ನಾನು ಪತ್ರಕರ್ತನಾದೆ!

ಇಂಥವು ನನ್ನ ಬದುಕಿನಲ್ಲಿ ಪದೇಪದೇ ಸಂಭವಿಸಿವೆಯಾದರೂ ಈ ಸಲದ ಅನಿರೀಕ್ಷಿತ ಘಟನೆ ನನ್ನನ್ನು ರೋಮಾಂಚನಗೊಳಿಸಿದೆ. ಮೊನ್ನೆ ಶಾಮರಾಯರ ಹೆಣ್ಣು ಮಕ್ಕಳಿಬ್ಬರನ್ನು ಭೇಟಿಯಾಗಿ ಅವರಿಗೆ ತಾಯಿ ಸೀತಾಬಾಯಿಯವರ ನಿಧನಕ್ಕೆ ಸಂತಾಪ, ಸಮಾಧಾನ ಹೇಳಿಬಂದೆ. ಆ ನನ್ನ ಇಬ್ಬರು ಅಕ್ಕಂದಿರು ಶಾಮರಾಯರ ಸುಮಾರು ನಾಲ್ಕು ಸಾವಿರ ಪುಸ್ತಕಗಳ ಅಪೂರ್ವ ಭಂಡಾರವನ್ನೇ ನನಗೆ ಕೊಡುಗೆಯಾಗಿ ಕೊಟ್ಟರು. ಅಷ್ಟೇ ಆಗಿದ್ದರೆ ತಂದೆಯಿಂದ ಬಂದ ಆಸ್ತಿ ಎಂದುಕೊಂಡು ಸಂತೋಷಪಡುತ್ತಿದ್ದೆ. ಆದರೆ ಅವುಗಳೊಂದಿಗೆ ಶಾಮರಾಯರ ಜೀವನ ಚರಿತ್ರೆಯ ಇಡೀ ಕರಡು ಪ್ರತಿಯನ್ನೇ ನನ್ನ ಕೈಗೆ ಕೊಟ್ಟು ಹರಸಿದರು. ಅದರ ಅಂತ್ಯ ಭಾಗ ಬರೆಯುವ ಮುನ್ನವೇ ಶಾಮರಾಯರು ಕೊನೆಯುಸಿರೆಳೆದಿದ್ದರು. ಅವರ ಅತ್ಯಂತ ಯಾತನೆಯ ಆ ಕೊನೆಯ ದಿನಗಳಿಗೆ ನಾನು ಪ್ರತ್ಯಕ್ಷ ಸಾಕ್ಷಿ.
ಅವರ ಆತ್ಮಚರಿತ್ರೆಯನ್ನು ಪೂರ್ಣಗೊಳಿಸಿ ಇಷ್ಟರಲ್ಲೇ ತಮ್ಮ ಕೈಗಿಡುತ್ತೇನೆ. ಶಾಮರಾಯರ ಜೀವನ ಚರಿತ್ರೆಯ ಒಂದು ಅಧ್ಯಾಯದ ಆಯ್ದ ಭಾಗವನ್ನು ನಿಮ್ಮ ರುಚಿಗಾಗಿ ಇಲ್ಲಿ ನೀಡುತ್ತಿದ್ದೇನೆ.
-ರವಿ ಬೆಳಗೆರೆ


ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ನಾನು ಬೆಳಗಾವಿಗೆ ಹೋಗಿದ್ದೆನಾದ್ದರಿಂದ ನನ್ನ ಮೊದಲನೆಯ ಚಿಂತೆ ಹೊಟ್ಟೆಯದಾಗಿತ್ತು. ಆದರೆ ಈ ಸಮಸ್ಯೆಯನ್ನು ಶ್ರೀ ಮೊಹರೆ ಹನುಮಂತರಾಯರು ಬಹಳ ಸುಲಭವಾಗಿ ಬಗೆಹರಿಸಿದರು. ಊಟಕ್ಕೆ ಯೋಚನೆ ಮಾಡಬೇಡ, ಇಲ್ಲಿಯೇ ಇರು, ನಮ್ಮ ಜೊತೆಗೇ ಊಟ ಮಾಡು, ನಾವೇ ಅಡಿಗೆ ಮಾಡುತ್ತೇವೆ. ಅದರಲ್ಲಿ ನೀನೂ ಸಹಾಯ ಮಾಡು, ಎಂದು ಹೇಳಿದರು. ಆಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನ್ನ ಚಿಂತೆಗಳೆಲ್ಲ ಮಾಯವಾಗಿ, ಮೈ ಹಗುರವಾಯಿತು. ಉತ್ಸಾಹ ಇಮ್ಮಡಿಯಾಯಿತು. ಕೂಡಲೇ ಒಪ್ಪಿಕೊಂಡೆ. ಆ ಸಮಯದಲ್ಲಿ ಶ್ರೀ ಮೊಹರೆಯವರು, ಶ್ರೀ ದಿವಾಕರ ರಂಗರಾಯರು ಮತ್ತು ಶ್ರೀ ಲಿಮೆಯ ಎಂಬ ಓರ್ವ ಖಾದೀ ಕಾರ‍್ಯಕರ್ತರು ಅಡಿಗೆ ಮಾಡಿಕೊಂಡು, ಊಟ ಮಾಡುತ್ತಿದ್ದರು. ಶ್ರೀ ಮೊಹರೆಯವರು ಪೇಟೆಯಿಂದ ಅಕ್ಕಿ, ಬೇಳೆ, ಗೋಧಿ ಹಿಟ್ಟು, ತರಕಾರಿ ತಂದರೆ, ಶ್ರೀ ದಿವಾಕರರು ಅಡಿಗೆ ಮಾಡುತ್ತಿದ್ದರು. ಶ್ರೀ ಲಿಮೆಯ ಅವರು ಪಾತ್ರೆಗಳನ್ನು ತೊಳೆಯುತ್ತಿದ್ದರು. ಮುಂದೆ ಕೆಲವು ತಿಂಗಳ ನಂತರ ಶ್ರೀ ಲಿಮೆಯ ಅವರು ಧಾರವಾಡಕ್ಕೆ ವರ್ಗವಾಗಿ ಹೋದ ಮೇಲೆ, ಆ ಕೆಲಸವನ್ನು ನಾನು ಮಾಡುತ್ತಿದ್ದೆ.

ಒಂದು ದಿನ ನಾವು ಊಟ ಮಾಡುತ್ತಿದ್ದಾಗ ಶ್ರೀ ದಿವಾಕರರು “ಶಾಮರಾವ್, ನೀವು ಯಾವ ವಿಭಾಗದಲ್ಲಿ ಕೆಲಸ ಮಾಡುತ್ತೀರಿ" ಎಂದು ಕೇಳಿದರು. ಆ ಕಚೇರಿಯಲ್ಲಿ ನಾನಾ ವಿಭಾಗಗಳಿವೆ. ಯಾವ ವಿಭಾಗದಲ್ಲಿ ನಾನು ಕೆಲಸ ಮಾಡಬಲ್ಲೆ ಎಂಬುದು ನನಗೇ ಗೊತ್ತಿರಲಿಲ್ಲ. ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದಷ್ಟೇ ಹೇಳಿದೆ. ಆಗ ಶ್ರೀ ಮೊಹರೆಯವರು, “ಹಾಗಾದರೆ ನೀವು ನಾಳೆಯಿಂದ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿ" ಎಂದರು. ಆಗಲಿ ಎಂದು ಹೇಳಿದೆ.

ಅಂತೂ, ಅಂದಿನಿಂದ ನಾನು ಪತ್ರಕರ್ತನಾದೆ. ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದ ಶ್ರೀ.ಹ.ರಾ.ಪುರೋಹಿತರು ಮತ್ತು ಮುಖ್ಯ ವರದಿಗಾರರಂತೆ ಸುದ್ದಿ ವಿಶ್ಲೇಷಣೆಗಳನ್ನು ಬರೆಯುತ್ತಿದ್ದ ಶ್ರೀ ಚಿಕ್ಕೋಡಿ ಅನಂತರಾಯರು ನನ್ನನ್ನು ಅತ್ಯಂತ ಆದರದಿಂದ ಸ್ವಾಗತಿಸಿ, ನನ್ನ ಯೋಗಕ್ಷೇಮ ವಿಚಾರಿಸಿ, ಸಂಪಾದಕೀಯ ವಿಭಾಗದ ಕೆಲಸ ಕಾರ‍್ಯಗಳನ್ನು ತಿಳಿಸಿಕೊಟ್ಟರು ಮತ್ತು ಇನ್ನೂ ಕೆಲವು ಸಹೋದ್ಯೋಗಿಗಳ ಪರಿಚಯವನ್ನೂ ಮಾಡಿಕೊಟ್ಟರು. ಇವರಿಬ್ಬರೂ ಪತ್ರಿಕೋದ್ಯಮದಲ್ಲಿ ನನ್ನ ಪ್ರಥಮ ಗುರುಗಳೆಂದು ಹೇಳಿದರೆ ತಪ್ಪಾಗಲಾರದು.

ಆ ಕಾಲದಲ್ಲಿ ಬೆಳಗಾವಿಯಲ್ಲಿ ಮರಾಠಿ ಮಾತನಾಡುವ ಜನ ಶೇಕಡಾ ಅರವತ್ತರಷ್ಟಿದ್ದರು. ಶಾಲೆ, ಕಾಲೇಜುಗಳು ಸಹ ಮರಾಠಿಯಲ್ಲಿಯೇ ನಡೆಯುತ್ತಿದ್ದವು. ಇಡೀ ನಗರದಲ್ಲಿ ನಾಲ್ಕೈದು ಕನ್ನಡ ಶಾಲೆಗಳಿದ್ದರೂ ಅವುಗಳ ಸ್ಥಿತಿ ಶೋಚನೀಯವಾಗಿತ್ತು. ಸರ್ಕಾರ ಮತ್ತು ನಗರಸಭೆ ಈ ಶಾಲೆಗಳನ್ನು ನಿರ್ಲಕ್ಷಿಸಿತ್ತು. ಕನ್ನಡ ಶಾಲೆಗಳಿಗೆ ಧನ ಸಹಾಯ ಮಾಡುತ್ತಿರಲಿಲ್ಲ. ಶಿಕ್ಷಕರನ್ನೂ ನೇಮಿಸುತ್ತಿರಲಿಲ್ಲ. ಇದರಿಂದ ಈ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಕನ್ನಡಿಗರು ಸಹ ಹಿಂಜರಿಯುತ್ತಿದ್ದರು. ಇಡೀ ನಗರದ ವ್ಯವಹಾರ ಭಾಷೆ ಮರಾಠಿಯಾಗಿದ್ದರಿಂದ ಕನ್ನಡಕ್ಕೆ ಹೆಚ್ಚು ಪ್ರೋತ್ಸಾಹವಿರಲಿಲ್ಲ. ಅತ್ಯಂತ ವಿಷಾದದ ಸಂಗತಿಯೆಂದರೆ ಎಷ್ಟೋ ಕನ್ನಡಿಗರು ಸಹ ಮರಾಠಿಯಲ್ಲಿಯೇ ಮಾತನಾಡುತ್ತಿದ್ದರು. ಕನ್ನಡದಲ್ಲಿ ಮಾತನಾಡಿಸಿದರೂ, ಮರಾಠಿಯಲ್ಲಿ ಉತ್ತರ ಕೊಡುತ್ತಿದ್ದರು. ಇನ್ನು ವೃತ್ತ ಪತ್ರಿಕೆಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಬೆಳಗಾವಿಯಲ್ಲಿ ಎರಡು ಅಥವಾ ಮೂರು ಮರಾಠಿ ದಿನಪತ್ರಿಕೆ ಪ್ರಕಟವಾಗುತ್ತಿದ್ದವು. ಅವುಗಳಲ್ಲಿ ‘ತರುಣ ಭಾರತ’ ಎಂಬ ದಿನಪತ್ರಿಕೆಯ ಪ್ರಸಾರ ಉಳಿದ ಪತ್ರಿಕೆಗಳಿಗಿಂತ ಹೆಚ್ಚಾಗಿತ್ತು. ಆದರೆ, ಮುಂಬಯಿ, ಪುಣೆ, ಕೊಲ್ಲಾಪುರಗಳಿಂದಲೂ ಅನೇಕ ಮರಾಠಿ ದಿನಪತ್ರಿಕೆಗಳು ಬೆಳಗಾಗುವುದರೊಳಗಾಗಿ ಬರುತ್ತಿದ್ದವು. ಅವುಗಳಲ್ಲಿ ಲೋಕಶಕ್ತಿ, ಸಕಾಳ ಮತ್ತು ಕೇಸರಿ ಪ್ರಮುಖವಾದವು. ಶೇಕಡಾ ಎಂಬತ್ತರಷ್ಟು ಜನ ಈ ಪತ್ರಿಕೆಗಳನ್ನೇ ಓದುತ್ತಿದ್ದರು. ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಬಹಳ ಕಡಿಮೆ. ಇದರಲ್ಲಿ ಸಂಯುಕ್ತ ಕರ್ನಾಟಕದ ಪ್ರಸಾರವೇ ಹೆಚ್ಚು. ಕೇವಲ ಎಂಟು ನೂರು ಪ್ರತಿಗಳು ಮಾತ್ರ ನಗರದಲ್ಲಿ ಹಂಚಲ್ಪಡುತ್ತಿದ್ದವು. ಬೇರೆ ಊರುಗಳ ಪ್ರಸಾರವನ್ನು ಲೆಕ್ಕ ಹಾಕಿದರೂ ಸಂಯುಕ್ತ ಕರ್ನಾಟಕದ ಒಟ್ಟು ಪ್ರಸಾರ ನಾಲ್ಕೈದು ಸಾವಿರಕ್ಕಿಂತ ಹೆಚ್ಚಿರಲಿಲ್ಲ. ಸಿನೆಮಾ ಮಂದಿರಗಳ ಪರಿಸ್ಥಿತಿಯೂ ಇದೇ ಆಗಿತ್ತು. ಒಟ್ಟು ಎಂಟು-ಹತ್ತು ಸಿನೆಮಾ ಮಂದಿರಗಳಿದ್ದರೂ ಕನ್ನಡ ಚಿತ್ರಗಳು ಮಾತ್ರ ಪ್ರದರ್ಶನವಾಗುತ್ತಿರಲಿಲ್ಲ. ಶಿವಾನಂದ ಥಿಯೇಟರ್ ಮತ್ತು ರಂಗೂಬಾಯಿ ಪ್ಯಾಲೆಸ್ ಎಂಬ ಎರಡು ನಾಟಕ ಶಾಲೆಗಳಿದ್ದವು. ಅಲ್ಲಿಯೂ ಕೇವಲ ಮರಾಠಿ ನಾಟಕಗಳು ಮತ್ತು ಮರಾಠಿ ಸಾಂಸ್ಕೃತಿಕ ಮೇಳಗಳು ನಡೆಯುತ್ತಿದ್ದವು.

ಬಹುಶಃ ಇದರ ಪರಿಣಾಮವೋ ಏನೋ, ನನಗೂ ಮರಾಠಿ ಭಾಷೆ ಕಲಿಯುವ ಕುತೂಹಲ ಉಂಟಾಯಿತು. ಪ್ರಾಥಮಿಕ ಶಾಲೆಯ ಮರಾಠಿ ಪುಸ್ತಕಗಳನ್ನು ತಂದು, ಅಕ್ಷರಾಭ್ಯಾಸ ಮಾಡತೊಡಗಿದೆ. ಮರಾಠಿ ದಿನಪತ್ರಿಕೆಗಳನ್ನು ತಂದು, ಮುಖಪುಟದ ದಪ್ಪಕ್ಷರದ ತಲೆಬರಹಗಳನ್ನು ಓದಲಾರಂಭಿಸಿದೆ. ಮರಾಠಿ ಸಿನೆಮಾಗಳನ್ನು ಹೆಚ್ಚು ಹೆಚ್ಚಾಗಿ ನೋಡಲಾರಂಭಿಸಿದೆ. ನಮ್ಮ ಆಫೀಸಿನ ಎದುರಿನಲ್ಲೇ ಇದ್ದ ‘ಹಂಸ’ ಟಾಕೀಸಿನಲ್ಲಿ (ಈಗಲೂ ಅದು ಅಲ್ಲಿಯೇ ಇದೆ) ಮ್ಯಾನೇಜರ್ ಆಗಿದ್ದ ಶ್ರೀ ಮುಳೆ ಎಂಬುವವರು ನನ್ನ ಮಿತ್ರರಾಗಿದ್ದರು. ಆದ್ದರಿಂದ ನಾನು ಅಲ್ಲಿಗೆ ಆಗಾಗ್ಗೆ ಹೋಗಿ ಮರಾಠಿ ಚಿತ್ರಗಳನ್ನು ನೋಡುತ್ತಿದ್ದೆ. ಇದರಿಂದ ನನಗೆ ಆ ಭಾಷೆ ಸ್ವಲ್ಪ ಮಟ್ಟಿಗೆ ತಿಳಿಯುವಂತಾಯಿತು. ಆಫೀಸಿಗೆ ಬರುತ್ತಿದ್ದವರೊಂದಿಗೆ ಹರುಕು ಮುರುಕು ಮರಾಠಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದೆ. ಅನೇಕರು ನನ್ನ ಮರಾಠಿಯನ್ನು ಕೇಳಿ ನಗುತ್ತಿದ್ದರು. ಎಷ್ಟೋ ಸಲ ಪುಲ್ಲಿಂಗ, ಸ್ತ್ರೀಲಿಂಗಗಳ ವ್ಯತ್ಯಾಸ ತಿಳಿಯದೆ ಮಾತನಾಡುತ್ತಿದ್ದುದರಿಂದ ಅನೇಕರು ಹಾಸ್ಯ ಮಾಡುತ್ತಿದ್ದರು. ಕೆಲವು ಮಿತ್ರರು ನನ್ನ ಭಾಷೆಯನ್ನು ತಿದ್ದುತ್ತಿದ್ದರು.

ಪುಣೆ, ಮುಂಬಯಿ, ಕೊಲ್ಲಾಪುರಗಳಿಂದ ಮರಾಠಿ ಪತ್ರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಗೆ ಬರುತ್ತಿದ್ದವು. ಸುದ್ದಿಗಾರರು ಸಹ ಸಾಕಷ್ಟಿದ್ದರು. ಅವರೊಡನೆ ನನ್ನ ಸ್ನೇಹ ಸಂಬಂಧ ಉತ್ತಮವಾಗಿಯೇ ಇತ್ತು. ಬೆಳಗಾವಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಪ್ರಚಾರ ಹೊಂದಿದ್ದ, ‘ತರುಣ ಭಾರತ’ ಎಂಬ ಮರಾಠಿ ದಿನಪತ್ರಿಕೆಯ ಮಾಲೀಕರು ಮತ್ತು ಸಂಪಾದಕರಾಗಿದ್ದ ಶ್ರೀ ಬಾಬುರಾವ್ ಠಾಕೂರ್ ಎಂಬುವರು ನನ್ನ ಆಪ್ತ ಸ್ನೇಹಿತರಲೊಬ್ಬರಾಗಿದ್ದರು. ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಬೆಳಗಾವಿ ಪತ್ರಕರ್ತರ ಸಂಘದಲ್ಲಿ ನಾವಿಬ್ಬರೂ ಪದಾಧಿಕಾರಿಗಳು ಸಹ ಆಗಿದ್ದೆವು. ಶ್ರೀ ಠಾಕೂರರು ಕಟ್ಟಾ ಮಹಾರಾಷ್ಟ್ರೀಯರು. ಮರಾಠಿ ಭಾಷೆ, ಸಂಸ್ಕೃತಿಗಳ ಬಗ್ಗೆ ಅವರಿಗೆ ತುಂಬಾ ಅಭಿಮಾನವಿತ್ತು. ಇಷ್ಟೇ ಅಲ್ಲ, ಬೆಳಗಾವಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಮಹಾರಾಷ್ಟ್ರ ರಾಜ್ಯಕ್ಕೇ ಸೇರಬೇಕೆಂದು ಚಳವಳಿ ನಡೆಸುತ್ತಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿಯೂ ಅವರು ಪ್ರಮುಖ ಸದಸ್ಯರಾಗಿದ್ದರು. ಆದರೂ ಅವರು ಕನ್ನಡವನ್ನು ಮತ್ತು ಕನ್ನಡಿಗರನ್ನು ದ್ವೇಷಿಸುತ್ತಿರಲಿಲ್ಲ. ಮರಾಠಿ ದಿನಪತ್ರಿಕೆಯ ಸಂಪಾದಕರಾಗಿದ್ದರೂ ಅನೇಕ ಕನ್ನಡ ಮುಖಂಡರೊಡನೆ ಸ್ನೇಹ ಸಂಬಂಧವನ್ನಿಟ್ಟುಕೊಂಡಿದ್ದರು. ಅದರಲ್ಲಿಯೂ, ಕನ್ನಡ ದಿನಪತ್ರಿಕೆಯ ವರದಿಗಾರನಾಗಿದ್ದ ನನ್ನೊಡನೆ, ಅವರ ಸ್ನೇಹ ಸಂಬಂಧ ತುಂಬಾ ಆತ್ಮೀಯವಾಗಿತ್ತು. ಅನೇಕ ಸಭೆ, ಸಮಾರಂಭಗಳಿಗೆ ಒಟ್ಟಿಗೆ ಹೋಗುತ್ತಿದ್ದೆವು. ಅಲ್ಲಿ ಕನ್ನಡ ಮುಖಂಡರು ಮಾಡಿದ ಭಾಷಣವನ್ನು ನಾನು ಹರಕು ಮುರುಕು ಮರಾಠಿಯಲ್ಲಿ ಸ್ವಲ್ಪ ಮಟ್ಟಿಗೆ ಇಂಗ್ಲಿಷಿನಲ್ಲಿ ಅವರಿಗೆ ಹೇಳುತ್ತಿದ್ದೆ. ಅನೇಕ ವೇಳೆ ನಾನು ಉಪಯೋಗಿಸುತ್ತಿರುವ ಕನ್ನಡ ಹಾಗೂ ಮರಾಠಿ ಶಬ್ದಗಳನ್ನು ಕೇಳಿ ನಮ್ಮ ಸಂಪಾದಕೀಯ ಸ್ನೇಹಿತರು ಮೂದಲಿಸುತ್ತಿದ್ದರು. ಅವರಿಗೆ ಇದು ಒಂದು ತಮಾಷೆಯಾಗಿತ್ತು. ಎಷ್ಟೋ ಸಲ ಅವರು ನನ್ನ ಮರಾಠಿ ಭಾಷೆಯ ಶಬ್ದಗಳನ್ನು ತಿದ್ದುತ್ತಿದ್ದರು ಮತ್ತು ಸರಿಯಾದ ಶಬ್ದಗಳನ್ನು ಹೇಳಿಕೊಡುತ್ತಿದ್ದರು. ಅದರಲ್ಲಿಯೂ, ಮರಾಠಿ ಭಾಷೆಯಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಶಬ್ದಗಳ ವ್ಯತ್ಯಾಸ ತಿಳಿದುಕೊಳ್ಳುವುದು ತುಂಬಾ ಕಷ್ಟ. ನಾನು ರೂಮಿನೊಳಗಿದ್ದಾಗ ಹೊರಗೆ ಯಾರಾದರೂ ಬಂದರೆ ‘ಕೋಣ್’ ಎಂದರೆ ಯಾರು? ಎಂದು ಕೂಗುವ ಬದಲು ‘ಕೋಣಾ’ ಎಂದು ಕೂಗುತ್ತಿದ್ದೆ.

ನಮ್ಮಲ್ಲಿ ಎಷ್ಟೋ ಜನರಿಗೆ ಸಂಸಾರಗಳಿದ್ದರೂ, ಅದರ ನಿರ್ವಹಣೆಗಾಗಿ ಆಡಳಿತವರ್ಗದವರನ್ನು ಕಾಡಿಸುತ್ತಿರಲಿಲ್ಲ, ಪೀಡಿಸುತ್ತಿರಲಿಲ್ಲ. ಕೊಟ್ಟಷ್ಟನ್ನು ಕೊಟ್ಟಾಗ ತೆಗೆದುಕೊಳ್ಳುತ್ತಿದ್ದರು. ಇನ್ನೊಂದು ವಿಶೇಷವೆಂದರೆ, ಇವರು ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆಯಲ್ಲಿ ಊಟ ಮಾಡಿ ಕಚೇರಿಗೆ ಬಂದರೆ ರಾತ್ರಿ ಮನೆಗೆ ಹೋಗುವುದು ಪತ್ರಿಕೆ ಮುದ್ರಣವಾಗಿ, ಪಾರ್ಸಲ್‌ಗಳನ್ನು ರೈಲ್ವೇ ಸ್ಟೇಷನ್ನಿಗೆ ಕಳುಹಿಸಿದ ಮೇಲೆಯೇ. ಎಷ್ಟೋ ಸಲ ಸಂಪಾದಕೀಯ ವರ್ಗದವರೇ ಪಾರ್ಸಲ್‌ಗಳನ್ನು ರೈಲ್ವೇ ಸ್ಟೇಷನ್ನಿಗೆ ಹೊತ್ತುಕೊಂಡು ಹೋಗುತ್ತಿದ್ದರು. ಬೆಳಗಾವಿಯ ಮಳೆ ಬಹಳ ಪ್ರಸಿದ್ಧ. ನಾಲ್ಕು ತಿಂಗಳು ಹಿಡಿದ ಮಳೆ ಬಿಡುವುದಿಲ್ಲ. ಜನರು ಸಹ ಕೊಡೆ ಹಿಡಿದುಕೊಂಡೇ ಓಡಾಡುತ್ತಿದ್ದರು. ಮಲೆನಾಡಿನ ಪರಿಚಯ ಇರುವವರಿಗೆ ಬೆಳಗಾವಿಯ ಪರಿಸ್ಥಿತಿ ಬಗ್ಗೆ ಹೇಳಬೇಕಾಗಿಲ್ಲ. ಕೊಡೆ ಇಲ್ಲದೆ ಯಾರೂ ಹೊರಗೆ ಕಾಲಿಡುತ್ತಿರಲಿಲ್ಲ. ಒಮ್ಮೆ ನಾನು ಮತ್ತು ಶ್ರೀ ದಿವಾಕರ ರಂಗರಾಯರು ಪಾರ್ಸಲ್‌ಗಳನ್ನು ಹೊತ್ತುಕೊಂಡು, ರೈಲ್ವೇ ಸ್ಟೇಷನ್ನಿಗೆ ಹೋಗುತ್ತಿದ್ದಾಗ ಅಂಬಾಭವನ ಹೊಟೇಲ್ ಹತ್ತಿರ ದೊಡ್ಡ ಚರಂಡಿಯಲ್ಲಿ ಬಿದ್ದು ಮತ್ತೆ ಎದ್ದಿದ್ದೆವು. ಈ ಘಟನೆ ನಡೆದು ಅರವತ್ತೈದು ವರ್ಷಗಳಾಗಿದ್ದರೂ ಇನ್ನೂ ಜ್ಞಾಪಕದಲ್ಲಿದೆ.

ನಾನು ಕಾಲೇಜು ವಿದ್ಯಾಭ್ಯಾಸ ಮಾಡಿ ಬಂದವನೆಂಬ ಕಾರಣ ಎಲ್ಲರಿಗೂ ನನ್ನ ಬಗ್ಗೆ ವಿಶ್ವಾಸ, ಗೌರವ ಉಂಟಾಗಲು ಕಾರಣವಾಗಿರಬಹುದು. ಆದರೆ ಕಾಲೇಜಿನಲ್ಲಿ ನಾನು ಇದ್ದದ್ದು ಕೇವಲ ಒಂದು ವರ್ಷ. ಕಲಿತದ್ದು ಬಹಳ ಕಡಿಮೆ. ತರಗತಿಗಳಿಗೆ ಹೋಗುವುದಕ್ಕಿಂತ ವಿವಿಧ ಬಡಾವಣೆಗಳಲ್ಲಿ, ವಾರಾನ್ನಕ್ಕಾಗಿ ಮನೆಗಳನ್ನು ಹುಡುಕುವುದರಲ್ಲಿಯೇ ಹೆಚ್ಚು ಕಾಲ ಕಳೆದೆ. ನಿಜ ಹೇಳಬೇಕೆಂದರೆ, ಕಾಲೇಜು ಬಿಟ್ಟಾಗ ನನಗೆ ಇಂಗ್ಲಿಷಿನಲ್ಲಿ ಒಂದು ವಾಕ್ಯ ಬರೆಯುವುದಕ್ಕೂ ಬರುತ್ತಿರಲಿಲ್ಲ. ಆದರೆ ಸಂಯುಕ್ತ ಕರ್ನಾಟಕದಲ್ಲಿ ನಾನು ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನು ಓದುತ್ತಿದ್ದುದರಿಂದ, ಇಂಗ್ಲಿಷಿನಲ್ಲಿ ಸುದ್ದಿಗಳನ್ನು ಓದಲು ಮತ್ತು ಇಂಗ್ಲಿಷ್ ಸುದ್ದಿಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಯಿತು. ಇಷ್ಟೇ ಅಲ್ಲ, ಮುಂದೆ ಕೆಲವೇ ತಿಂಗಳುಗಳಲ್ಲಿ ಹಿಂದೂ ಪತ್ರಿಕೆಯ ಅಗ್ರ ಲೇಖನಗಳನ್ನು ಓದಿ, ಅರ್ಥ ಮಾಡಿಕೊಂಡು, ಅದೇ ರೀತಿ ಕನ್ನಡದಲ್ಲಿ ಬರೆಯುವ ಅಭ್ಯಾಸವನ್ನೂ ರೂಢಿಸಿಕೊಂಡೆ. ಅನುಭವವೆಂದರೆ ಇದೇ ಅಲ್ಲವೇ? ಅಷ್ಟೇ ಏಕೆ, ಕೆಲವು ತಿಂಗಳುಗಳ ನಂತರ, ಮಹಾತ್ಮಾಗಾಂಧಿಯವರ ‘ಹರಿಜನ’ ಪತ್ರಿಕೆಯ ಮುಖ್ಯ ಲೇಖನಗಳನ್ನು ಭಾಷಾಂತರಿಸುವ ಅನುಭವವನ್ನೂ ಪಡೆದು, ಶ್ರೀ ಮೊಹರೆಯವರಿಂದ ಬಹಳ ಚೆನ್ನಾಗಿ ಭಾಷಾಂತರ ಮಾಡುತ್ತೀಯ ಎಂಬ ಸರ್ಟಿಫಿಕೇಟನ್ನೂ ಪಡೆದೆ. ಆದರೆ ಎಷ್ಟೋ ಸಲ ತಪ್ಪುಗಳನ್ನೂ ಮಾಡುತ್ತಿದ್ದೆ. ನನ್ನ ಇಂತಹ ತಪ್ಪುಗಳಿಂದ ನಡೆದ ಒಂದೆರಡು ಅನಾಹುತದ ಪ್ರಕರಣಗಳ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇಂತಹ ತಪ್ಪುಗಳನ್ನು ಮಾಡಿದಾಗ, ನನ್ನ ಹಿರಿಯ ಸಹೋದ್ಯೋಗಿಗಳು ಮತ್ತು ಶ್ರೀ ಮೊಹರೆಯವರು ಸಹ ನನ್ನನ್ನು ಬೈದಿದ್ದಾರೆ, ಎಚ್ಚರಿಸಿದ್ದಾರೆ, ಹೊರಗೆ ದಬ್ಬುವುದಾಗಿ ಬೆದರಿಸಿದ್ದಾರೆ.

ಆ ಕಾಲದಲ್ಲಿ ‘ಮೆಮೋ’ ಕೊಡುವ ಅಥವಾ ಅಮಾನತುಗೊಳಿಸುವ ಪದ್ಧತಿ ಅಥವಾ ಶಿಸ್ತಿನ ಕ್ರಮ ಇತ್ಯಾದಿ ಇರಲಿಲ್ಲ. ಪ್ರತಿ ಸಲವೂ ನನ್ನ ಹಿರಿಯ ಸಹೋದ್ಯೋಗಿಗಳು ನನ್ನ ತಪ್ಪನ್ನು ತೋರಿಸಿಕೊಟ್ಟು, ತಿದ್ದುಪಡಿ ಮಾಡಿ ಪ್ರಕಟಿಸುತ್ತಿದ್ದರು. ಮತ್ತು ಸುದ್ದಿ ಹೇಗೆ ಬರೆಯಬೇಕೆಂಬುದನ್ನು ನನಗೆ ಹೇಳಿಕೊಡುತ್ತಿದ್ದರು. ಬಹುಶಃ ಈ ಕಾರಣದಿಂದಲೇ ನಾನು ಕಡೆಯ ತನಕ ಪತ್ರಕರ್ತನಾಗಿ ಉಳಿಯಲು ಸಾಧ್ಯವಾಯಿತು. ಇಲ್ಲದೆ ಇದ್ದರೆ ಪತ್ರಿಕೋದ್ಯಮಕ್ಕೆ ಎಂದೋ ಶರಣು ಹೊಡೆದು ಬೇರೆ ಯಾವುದಾದರೊಂದು ನೌಕರಿ ಹಿಡಿದು ಹೋಗಬೇಕಾಗುತ್ತಿತ್ತು. ನನ್ನನ್ನು ಪತ್ರಕರ್ತನಾಗಿ ಮಾಡಿದ, ಉತ್ತಮ ಮಟ್ಟದ ಪತ್ರಿಕೋದ್ಯಮ ರೀತಿ ನೀತಿಗಳನ್ನು ಹಾಗೂ ಲಕ್ಷಣಗಳನ್ನು ಕಲಿಸಿಕೊಟ್ಟ ನನ್ನ ಆದರ್ಶ ಗುರು ಶ್ರೀ ಮೊಹರೆ ಹನುಮಂತರಾಯರಿಗೆ ಮತ್ತು ನನ್ನ ಹಿರಿಯ ಸಹೋದ್ಯೋಗಿಗಳಾಗಿದ್ದ ಶ್ರೀ ಹ.ರಾ.ಪುರೋಹಿತರಿಗೂ, ಶ್ರೀ ಚಿಕ್ಕೋಡಿ ಅನಂತರಾಯರಿಗೂ ನಾನು ಚಿರಋಣಿ.

ಎಪ್ಪತ್ತು ವರ್ಷಗಳ ಹಿಂದೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಬೆಳಗಾವಿಯಲ್ಲಿ ಪ್ರಾರಂಭವಾದಾಗ ಇಡೀ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬಹಳ ಜೋರಾಗಿ ನಡೆಯುತ್ತಿತ್ತು. ಮುಂಬಯಿ ಕರ್ನಾಟಕದಲ್ಲಿಯೂ ಅದು ವ್ಯಾಪಕವಾಗಿ ಹಬ್ಬಿತ್ತು. ಮಹಾತ್ಮಾಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಂಸ್ಥೆ, ಬ್ರಿಟಿಷ್ ಸರ್ಕಾರದ ವಿರುದ್ಧ ಕಾನೂನು ಭಂಗ ಚಳವಳಿಯನ್ನು ಪ್ರಾರಂಭಿಸಿತ್ತು. ಪ್ರತಿದಿನ ಸಾವಿರಾರು ಮುಖಂಡರು, ಲಕ್ಷಾಂತರ ಕಾರ‍್ಯಕರ್ತರು ಬ್ರಿಟಿಷ್ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿ, ಸೆರೆಮನೆ ಸೇರುತ್ತಿದ್ದರು. ಸರ್ಕಾರದ ದಬ್ಬಾಳಿಕೆಯನ್ನು ವಿರೋಧಿಸಿ ಪ್ರತಿದಿನ ಹರತಾಳ, ಮೆರವಣಿಗೆ, ಸತ್ಯಾಗ್ರಹ, ಮುಷ್ಕರ, ಶಾಲೆ ಕಾಲೇಜುಗಳಿಗೆ ಮತ್ತು ಕೋರ್ಟು ಕಚೇರಿಗಳಿಗೆ ಬಹಿಷ್ಕಾರ ಇತ್ಯಾದಿ ನಡೆಯುತ್ತಿದ್ದವು. ಸಭೆ, ಮೆರವಣಿಗೆಗಳನ್ನು ಚದುರಿಸಲು ಪೊಲೀಸಿನವರು ಲಾಠಿ ಪ್ರಹಾರ ಮಾಡುತ್ತಿದ್ದರು. ಗುಂಡು ಹಾರಿಸಿ ಜನರನ್ನು ಚದುರಿಸುತ್ತಿದ್ದರು. ಲಾಠಿ ಪ್ರಹಾರದಿಂದ ಗಾಯಗೊಂಡವರ, ಗುಂಡು ಹಾರಿಸಿದ್ದರಿಂದ ಸತ್ತವರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿತ್ತು.

ಇಂತಹ ಸಮಯದಲ್ಲಿಯೇ ನಾನು ಸಂಯುಕ್ತ ಕರ್ನಾಟಕಕ್ಕೆ ಸೇರಿದ್ದೆ. ಆ ಪತ್ರಿಕೆಯಲ್ಲಿ ಒಬ್ಬ ಜವಾಬ್ದಾರಿ ವರದಿಗಾರನೂ ಆಗಿದ್ದೆ. ರಾಜಕೀಯ ವಿದ್ಯಮಾನಗಳು ಬಹಳ ಜೋರಾಗಿ ನಡೆಯುತ್ತಿತ್ತು. ಬೆಳಗಾವಿ ಕರ್ನಾಟಕ ಕಾಂಗ್ರೆಸ್ಸಿನ ಕೇಂದ್ರ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿದ್ದುದರಿಂದ, ಇಲ್ಲಿಗೆ ಎರಡೂ ರಾಜ್ಯಗಳ ಕಾಂಗ್ರೆಸ್ ಮುಖಂಡರು ಬಂದು ಹೋಗುತ್ತಿದ್ದರು. ಮಹಾತ್ಮಾಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ನಂತರ, ಬೆಳಗಾವಿ ಕರ್ನಾಟಕ ಕಾಂಗ್ರೆಸ್ಸಿನವರ ತವರು ಮನೆ ಎಂದೆನಿಸಿತ್ತು. ಕರ್ನಾಟಕದ ಸಿಂಹ ಎಂದು ಕರೆಯಲ್ಪಡುತ್ತಿದ್ದ ಶ್ರೀ ದೇಶಪಾಂಡೆ ಗಂಗಾಧರರಾಯರು ಇದೇ ಊರಿನಲ್ಲಿದ್ದರು. ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ಸಿನ ಎಲ್ಲ ಚಟುವಟಿಕೆಗಳು ನಡೆಯುತ್ತಿದ್ದವು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅನೇಕ ಕಾಂಗ್ರೆಸ್ ಮುಖಂಡರು ಮೇಲಿಂದ ಮೇಲೆ ಬೆಳಗಾವಿಗೆ ಬರುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಧ್ವಜಾರೋಹಣ, ಮೆರವಣಿಗೆ, ಹರತಾಳ, ಪ್ರತಿಭಟನೆ ಮುಂತಾದ ಕಾರ‍್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಸರ್ಕಾರದ ನಿಷೇಧಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸುತ್ತಿದ್ದರು. ಸಾಮಾನ್ಯವಾಗಿ ಎಲ್ಲ ಪ್ರಮುಖ ಕಾಂಗ್ರೆಸ್ ಮುಖಂಡರ ಭಾಷಣಗಳ ವರದಿ ಮಾಡಲು ನಾನೇ ಹೋಗುತ್ತಿದ್ದೆ. ಮರಾಠಿಯಲ್ಲಿ ಮಾತನಾಡುವ ಅವರ ಭಾಷಣ ಪೂರ್ತಿ ಅರ್ಥವಾಗದಿದ್ದರೂ ಮರಾಠಿ ಪತ್ರಕರ್ತರ ಸಹಾಯದಿಂದ ಅದರ ಸಾರಾಂಶವನ್ನು ಬರೆಯುತ್ತಿದ್ದೆ. ಆದರೆ ಕನ್ನಡ ಕಾಂಗ್ರೆಸ್ ಮುಖಂಡರ ಭಾಷಣಗಳನ್ನು ವಿವರವಾಗಿ ವರದಿ ಮಾಡುತ್ತಿದ್ದೆ. ಅಂದಿನ ಪತ್ರಿಕೆಗಳಲ್ಲಿ ಮುಖಂಡರು ಸಾರ್ವಜನಿಕ ಸಭೆಗಳಲ್ಲಿ ಮಾಡುತ್ತಿದ್ದ ಭಾಷಣಗಳು, ಮೆರವಣಿಗೆ, ಹರತಾಳ, ಪ್ರತಿಭಟನೆ, ಪೊಲೀಸರ ದಬ್ಬಾಳಿಕೆ, ಲಾಠಿ ಪ್ರಹಾರ, ದಸ್ತಗಿರಿಗಳು, ಗುಂಡು ಹಾರಿಸಿದ ಪ್ರಕರಣ, ಇವೇ ಸುದ್ದಿಗಳು ಪ್ರಮುಖವಾಗಿ ಪ್ರಕಟವಾಗುತ್ತಿದ್ದವು. ಈಗಿನಂತೆ ಆಗ ದೇಶ ವಿದೇಶಗಳ ಸುದ್ದಿಗಳನ್ನು ತರಿಸಿಕೊಳ್ಳಲು ಏಜೆನ್ಸಿಗಳಿರಲಿಲ್ಲ. ರೇಡಿಯೋ, ದೂರದರ್ಶನ ಮೊದಲಾದ ಸೌಲಭ್ಯಗಳೂ ಇರಲಿಲ್ಲ. ಇಷ್ಟೇ ಅಲ್ಲ, ರಾಜ್ಯದ ಬೇರೆ ಬೇರೆ ಊರುಗಳಿಂದ ಸುದ್ದಿಗಳನ್ನು ಕಳಿಸಲು ವರದಿಗಾರರೂ ಇರುತ್ತಿರಲಿಲ್ಲ. ಏಕೆಂದರೆ ಅವರಿಗೆ ವೇತನ ಕೊಡಲು ಅಥವಾ ಅಂಚೆ ವೆಚ್ಚಕ್ಕಾಗಿ ಗೌರವಧನವನ್ನಾದರೂ ಕೊಡಲು ಹಣ ಇರುತ್ತಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಘಟನೆಗಳು ಎಲ್ಲಿಯಾದರೂ ನಡೆದರೆ, ಅದನ್ನು ಆ ಊರಿನ ಕಾಂಗ್ರೆಸ್ ಮುಖಂಡರು ಅಥವಾ ಬೇರೆ ಯಾರಾದರೂ ಪತ್ರಿಕೆಯ ಅಭಿಮಾನಿಗಳು ಬರೆದು ಕಳಿಸಿದರೆ ಅದನ್ನೇ ಪ್ರಕಟಿಸುತ್ತಿದ್ದೆವು. ಎಷ್ಟೋ ಸಲ ಈ ಸುದ್ದಿಗಳು ಒಂದೆರಡು ದಿನಗಳ ಅಥವಾ ವಾರಗಳ ಹಿಂದಿನ ಸುದ್ದಿಯಾಗಿರುತ್ತಿತ್ತು. ಆದರೆ ಬೇರೆ ಮಾರ್ಗ ಇರಲಿಲ್ಲ. ಸುದೈವದಿಂದ ನಮ್ಮ ಪತ್ರಿಕೆಯ ಓದುಗರು ಇಂತಹ ಹಳೆಯ ಸುದ್ದಿಗಳನ್ನೇ ಉತ್ಸಾಹದಿಂದ, ಆಸಕ್ತಿಯಿಂದ ಓದುತ್ತಿದ್ದರು. ಇದು ನಮ್ಮ ಪುಣ್ಯ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books