Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕ್ಷಿಪ್ರ ದಂಗೆಗಳನ್ನು ದೂರಗಾಮಿ ನೆಲೆಯಲ್ಲಿ ನಿಂತು ನೋಡಿದಾಗ..

ಕ್ಷಿಪ್ರ ದಂಗೆಗಳು ತಕ್ಷಣಕ್ಕೆ ಯಶಸ್ವಿಯಾದಂತೆ ಕಂಡರೂ ದೂರಗಾಮಿ ನೆಲೆಯಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ೧೮೫೭ರಲ್ಲಿ ಬ್ರಿಟಿಷರ ವಿರುದ್ಧ ಆರಂಭವಾದ ಸಿಪಾಯಿ ದಂಗೆ ಭಾರತೀಯರಲ್ಲಿ ಹುಟ್ಟಿಸಿದ ಆತ್ಮವಿಶ್ವಾಸ, ಇನ್ನೇನು ಪರಕೀಯರ ದಬ್ಬಾಳಿಕೆಯಿಂದ ಬಿಡುಗಡೆ ಆಗುವ ಕಾಲ ಸನ್ನಿಹಿತವಾಯಿತು ಎಂಬ ನಂಬಿಕೆ ಸಣ್ಣದೇನಾಗಿರಲಿಲ್ಲ. ಆದರೆ ಬ್ರಿಟಿಷರು ತುಂಬ ವ್ಯವಸ್ಥಿತವಾಗಿ ಈ ದಂಗೆಯ ಬಿಸಿಯನ್ನು ಆರಿಸಿದರು. ಇದಾದ ನಂತರ ಕೇಳಿ ಬಂದಿದ್ದೇ ಈ ಮಾತು: ಕ್ಷಿಪ್ರ ದಂಗೆಗಳು ತಕ್ಷಣಕ್ಕೆ ಯಶಸ್ವಿಯಾದಂತೆ ಕಂಡರೂ ದೂರಗಾಮಿ ನೆಲೆಯಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಇವತ್ತು ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡರೆ ಆಮ್ ಆದ್ಮಿ ಪಕ್ಷದ ವಿಷಯದಲ್ಲೂ ಇಂತಹದೇ ಅಭಿಪ್ರಾಯ ಮೂಡುತ್ತದೆ. ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ ರೀತಿಯಿಂದ ಆಕ್ರೋಶಗೊಂಡ ಒಂದು ಗುಂಪು ಆಮ್ ಆದ್ಮಿಯ ರೂಪ ತಾಳಿತು. ಅಣ್ಣಾ ಹಜಾರೆ, ಕಿರಣ್ ಬೇಡಿ, ಸಂತೋಷ್ ಹೆಗ್ಡೆ ಸೇರಿದಂತೆ ಹಲವು ಪ್ರಮುಖರಿದ್ದ ಒಂದು ಗುಂಪು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಇಡೀ ದೇಶದ ಜನ ಎಚ್ಚೆತ್ತುಕೊಳ್ಳುವಂತೆ ಮಾಡಿದರೆ ಅದನ್ನು ರಾಜಕೀಯವಾಗಿ ಎನ್‌ಕ್ಯಾಷ್ ಮಾಡಿಕೊಂಡವರು ಅರವಿಂದ ಕೇಜ್ರಿವಾಲ್. ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಶುರುವಾದ ದಂಗೆ ಲೋಕಪಾಲ್ ಮಸೂದೆಯ ಜಾರಿಗೆ ಆಗ್ರಹಿಸುವುದರೊಂದಿಗೆ ಕಾಲ ಕ್ರಮೇಣ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದರೆ ಅರವಿಂದ ಕೇಜ್ರಿವಾಲ್ ಮಾತ್ರ ಇರುವ ಬಿಸಿಯನ್ನೇ ಉಳಿಸಿಕೊಂಡು ಹೋರಾಟ ನಡೆಸಿದರು. ಇದರ ಪರಿಣಾಮವಾಗಿ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇಪ್ಪತ್ತೇಳು ಸೀಟುಗಳನ್ನು ಗಳಿಸಿತು.
ವಾಸ್ತವವಾಗಿ ಅಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು ಬಿಜೆಪಿಯೇ ಆದರೂ, ಸ್ವಯಂಬಲ ಇಲ್ಲದ ಕಾರಣದಿಂದಾಗಿ ಸರ್ಕಾರ ರಚಿಸಲು ತಾನು ಸಿದ್ಧವಿಲ್ಲ ಎಂದು ಬಿಜೆಪಿ ಕೈ ತೊಳೆದುಕೊಂಡು ಬಿಟ್ಟಿತು. ಇದು ಆಮ್ ಆದ್ಮಿ ಪಕ್ಷವನ್ನು ಪಾರ್ಲಿಮೆಂಟ್ ಚುನಾವಣೆಯ ಒಳಗೆ ಆಪೋಶನ ತೆಗೆದುಕೊಳ್ಳುವ ಅದರ ಪ್ರಯತ್ನದ ಒಂದು ಭಾಗವೇ? ಎಂಬ ಶಂಕೆ ಇದೆಯಾದರೂ, ಸ್ವಂತ ಶಕ್ತಿ ಇಲ್ಲದೆ ಸರ್ಕಾರ ರಚಿಸಬಾರದು ಎಂಬ ಅದರ ತೀರ್ಮಾನದ ಹಿನ್ನೆಲೆಯಲ್ಲಿ ಅದರ ಅಪಾರ ಅನುಭವ ಅಡಗಿತ್ತು ಎಂಬುದನ್ನೂ ಮರೆಯಲಾಗದು. ಆದರೆ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್‌ಗೆ ಬಿಜೆಪಿಯ ಈ ಟೆಕ್ನಿಕ್ಕು ಅರ್ಥವಾಗಲಿಲ್ಲ. ಅದೇ ಕಾಲಕ್ಕೆ ಸರ್ಕಾರ ರಚಿಸಬೇಕಾ? ಬನ್ನಿ, ನಾವು ಬೆಂಬಲ ಕೊಡುತ್ತೇವೆ ಎಂಬ ಕಾಂಗ್ರೆಸ್‌ನ ದೂರಗಾಮಿ ಉದ್ದೇಶವೂ ಸಾರಾಸಗಟಾಗಿ ಅರ್ಥವಾಗಲಿಲ್ಲ. ಹೀಗಾಗಿ ಜನರ ಅಭಿಪ್ರಾಯ ಕೇಳಿ ಸರ್ಕಾರ ರಚಿಸುವ ಕುರಿತು ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು ಕೇಜ್ರಿವಾಲ್.

ಫೈನಲಿ, ಬಿಜೆಪಿ ಸರ್ಕಾರ ರಚಿಸುವುದೇ ಇಲ್ಲ ಎಂದು ಕುಳಿತಾಗ ಜನರಾದರೂ ಏನು ಮಾಡಲು ಸಾಧ್ಯ? ಹೇಗಿದ್ದರೂ ಜನರ ಜೀವನವನ್ನು ಹಸನು ಮಾಡುತ್ತೇವೆ ಅಂತ ಹೇಳಿದ್ದೀರಿ. ಹೀಗಾಗಿ ನೀವೇ ಅಧಿಕಾರ ಹಿಡಿದುಕೊಳ್ಳಿ. ಕಾಂಗ್ರೆಸ್ ಬೆಂಬಲ ಪಡೆದುಕೊಳ್ಳಿ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಅದರನುಸಾರ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿಯ ಅಧಿಕಾರ ಸೂತ್ರ ಹಿಡಿಯಿತು. ಬರ ಬರುತ್ತಿದ್ದಂತೆಯೇ ಕರೆಂಟ್ ರೇಟಿನಲ್ಲಿ ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ಕೊಡುತ್ತೇವೆ ಅಂತ ಘೋಷಿಸಿತು. ಏಳು ನೂರು ಲೀಟರ್ ನೀರನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿತು. ಯಾವಾಗ ಕೇಜ್ರಿವಾಲ್ ಸರ್ಕಾರ ಈ ರೀತಿ ಮಾತನಾಡಿತೋ, ಆಮ್ ಆದ್ಮಿ ಪಾರ್ಟಿಗೂ, ಬೇರೆ ಪಕ್ಷಗಳಿಗೂ ತುಂಬ ವ್ಯತ್ಯಾಸವಿದೆ ಎಂಬ ಅಭಿಪ್ರಾಯ ಕ್ರಮೇಣ ಕರಗತೊಡಗಿತು. ಇವತ್ತು ದೇಶದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಯುವ ಸಮುದಾಯಕ್ಕೆ ಕೆಲಸ ಕೊಡುವುದು ಮತ್ತು ಆ ಮೂಲಕ ಎಲ್ಲ ರಂಗಗಳಲ್ಲೂ ಉತ್ಪಾದನೆಯ ಸಾಧ್ಯತೆಯನ್ನು ಹೆಚ್ಚಿಸಿ ಆರ್ಥಿಕ ಶಕ್ತಿಯನ್ನು ಬೆಳೆಸುವುದು.

ಆದರೆ ಇವತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡುತ್ತಿರುವುದೇನು? ಅದು ರೂಪಿಸಿರುವ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದರೆ ದೇಶದ ಎಂಭತ್ತೊಂದು ಕೋಟಿ ಜನರಿಗೆ ಎರಡು ರುಪಾಯಿಗೆ ಕೆಜಿಯಂತೆ ಅಕ್ಕಿ ಸಿಗುತ್ತದೆ. ಇವತ್ತು ದೇಶದ ಜನಸಂಖ್ಯೆ ಸುಮಾರು ನೂರಿಪ್ಪತ್ತೈದು ಕೋಟಿ. ಈ ಪೈಕಿ ಎಂಭತ್ತೊಂದು ಕೋಟಿ ಜನರಿಗೆ ಎರಡು ರುಪಾಯಿಗೆ ಕೆಜಿಯಂತೆ ಅಕ್ಕಿ ಕೊಡುತ್ತೇವೆ. ಅದು ಕೊಡುತ್ತೇವೆ, ಇದು ಕೊಡುತ್ತೇವೆ ಎಂದು ಹೇಳಿದರೆ ಆಳದಲ್ಲಿ ಈ ದೇಶದ ದುಡಿಮೆಯ ಶಕ್ತಿಯನ್ನು ನಾವು ಕಳೆಯುತ್ತಿದ್ದೇವೆ ಎಂದೇ ಅರ್ಥ. ಹಾಗಂತ ಇಂತಹ ಯೋಜನೆಗಳು ಬೇಡವೇ? ಬೇಕು. ಆದರೆ ನಿಜವಾಗಿ ಯಾರಿಗೆ ಇದರ ಅವಶ್ಯಕತೆ ಇದೆಯೋ ಅಂತಹವರಿಗೆ ಇದು ದಕ್ಕಬೇಕು. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಒಂದು ರುಪಾಯಿಗೆ ಕೆಜಿಯಂತೆ ಅಕ್ಕಿ ಕೊಡುತ್ತೇವೆ ಅಂತ ಹೊರಟ ಸಿದ್ಧರಾಮಯ್ಯನವರ ಸರ್ಕಾರ ಆರೇ ತಿಂಗಳಲ್ಲಿ ಏದುಸಿರು ಬಿಡುತ್ತಿದೆ. ಕಾರಣ; ಕೊಡಲು ಅಕ್ಕಿ ಸಿಗುತ್ತಿಲ್ಲ. ಶುರುವಿನಲ್ಲಿ ಛತ್ತೀಸ್‌ಗಡದಿಂದ ಅಕ್ಕಿ ತರಿಸಿಕೊಂಡರು. ಅಲ್ಲಿಂದ ಅಕ್ಕಿ ಖರೀದಿಸಿ, ಅದನ್ನು ಸಾಗಾಣಿಕೆ ಮಾಡಿ, ಪಡಿತರ ವ್ಯವಸ್ಥೆಯ ಮೂಲಕ ಅದರನ್ನು ವಿತರಿಸುವ ವೇಳೆಗೆ ಒಂದು ಕೆಜಿ ಅಕ್ಕಿ ಮೇಲಿನ ವೆಚ್ಚ ಇಪ್ಪತ್ತೆಂಟು ರುಪಾಯಿ ಆಗುತ್ತದೆ. ಇಂತಹ ಅಕ್ಕಿಯನ್ನು ಒಂದು ರುಪಾಯಿಗೆ ವಿತರಿಸಿದ ಮೇಲೆ ಅಕ್ಕಿ ಬೆಳೆಯುವ ರೈತನ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತದೆ?

ಅಲ್ರೀ, ನಾನು ಬೆವರು ಸುರಿಸಿ, ಶ್ರಮಿಕರನ್ನು ಕಷ್ಟಪಟ್ಟು ಬಳಸಿಕೊಂಡು ಅಕ್ಕಿ ಬೆಳೆಯುತ್ತೇನೆ. ಫೈನಲಿ, ಹಾಕಿದ ಬಂಡವಾಳವನ್ನು ತೆಗೆದು ನೋಡಿದರೆ ಸಿಗುವ ಲಾಭ ಅಷ್ಟಕ್ಕಷ್ಟೇ. ಆದರೆ ಏನೂ ಮಾಡದೆ ನೆಮ್ಮದಿಯಿಂದ ಮೂವತ್ತು ರುಪಾಯಿ ಕೊಟ್ಟು ಮೂವತ್ತು ಕೆಜಿ ಅಕ್ಕಿ ತೆಗೆದುಕೊಳ್ಳುವವನ ಬದುಕು ನನಗಿಂತ ಹಸನಾಗಿದೆ ಅಂತ ಅಂದುಕೊಳ್ಳುವುದಿಲ್ಲವೇ? ಹೀಗೆ ಒಬ್ಬ ರೈತ ತನ್ನ ಹೃದಯಾಂತರಾಳದಿಂದ ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಅನ್ನಿ. ಆಗೇನಾಗುತ್ತದೆ? ಸಹಜವಾಗಿ ಆತ ಕೂಡ ಇಂತಹ ಅಕ್ಕಿಯನ್ನು ಖರೀದಿಸಿ ಶ್ರಮವಿಲ್ಲದೆ ಬದುಕಲು ಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ಆದರೆ ಇದರಿಂದ ಆಗುವ ಪರಿಣಾಮಗಳ ಕುರಿತು ಚಿಂತಿಸಬೇಕು. ಅದಕ್ಕಾಗಿ ನಾವು ತುಂಬ ದೂರ ಹೋಗಬೇಕಾಗಿಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೂ ಸಾಕು. ಛತ್ತೀಸ್‌ಗಡದಿಂದ ತರಿಸುತ್ತಿರುವ ಅಕ್ಕಿಯ ರೇಟು ದುಬಾರಿ ಆಯಿತು ಕಣ್ರೀ. ಅದರ ಬದಲು ಕರ್ನಾಟಕದಲ್ಲೇ ರೈತ ಬೆಳೆಯುತ್ತಿರುವ ಭತ್ತ ಖರೀದಿ ಮಾಡೋಣ. ಇಪ್ಪತ್ತು-ಇಪ್ಪತ್ತೆರಡು ರುಪಾಯಿಗೆ ಕೆಜಿಯಂತೆ ಸಿಗುತ್ತದೆ. ಸಾಗಾಣಿಕೆ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಸಿದ್ಧರಾಮಯ್ಯ ಸರ್ಕಾರ ತೀರ್ಮಾನ ಕೈಗೊಂಡಿತು.

ಅಷ್ಟೇ ಅಲ್ಲ; ನೋಡಿ, ನಾವು ನಮ್ಮ ರೈತರಿಗೆ ಉತ್ತೇಜನ ಕೊಡಲು ಹೊರಟಿದ್ದೇವೆ ಅಂತ ಹೇಳಿಕೊಂಡಿತು. ಆದರೆ ಇವತ್ತೇನಾಗಿದೆ? ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದ್ದರೂ ಪಡಿತರ ವ್ಯವಸ್ಥೆಗೆ ಅಗತ್ಯವಾದಷ್ಟು ಭತ್ತ ಸಿಗುತ್ತಿಲ್ಲ. ಯಾಕೆಂದರೆ ಭತ್ತ ಬೆಳೆಯುವ ಮೂಲಕ ತಾವು ಲಾಭ ಗಳಿಸುತ್ತೇವೆ. ಭದ್ರ ಭವಿಷ್ಯ ಕಟ್ಟಿಕೊಳ್ಳುತ್ತೇವೆ ಎಂಬ ನಂಬಿಕೆ ಅವರಲ್ಲಿಲ್ಲ. ಹೀಗಾಗಿಯೇ ಇವತ್ತು ಪಡಿತರ ವ್ಯವಸ್ಥೆಯಡಿ ಒಂದು ರುಪಾಯಿಗೆ ಕೆಜಿಯಂತೆ ಒದಗಿಸುತ್ತಿರುವ ಅಕ್ಕಿಯಲ್ಲಿ ಕಲ್ಲು, ಮಣ್ಣು ಸೇರಿಕೊಳ್ಳುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯ ತನಕ ಇದನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕಪ್ಪಾ ಅಂದುಕೊಳ್ಳುವ ಮಟ್ಟಕ್ಕೆ ಸಿದ್ಧರಾಮಯ್ಯನವರ ಸರ್ಕಾರ ಸುಸ್ತಾಗಿದೆ. ಹೀಗಾಗಿ ಈಗ ಅದರ ವರಸೆ ಬದಲಾಗಿದೆ. ಅದೇನೋ ಕಣ್ರೀ, ಜನ ಈಗ ಅಕ್ಕಿಗಿಂತ ಜಾಸ್ತಿ ಗೋಧಿ ಕೇಳುತ್ತಿದ್ದಾರೆ. ಹೀಗಾಗಿ ಗೋಧಿಯನ್ನೇ ಹೆಚ್ಚಾಗಿ ಕೊಡುತ್ತೇವೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಗೋಧಿ ಆದರೆ ಸಮಸ್ಯೆ ಏನಿಲ್ಲ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಗೋದಾಮುಗಳಲ್ಲಿ ದಂಡಿಯಾಗಿ ಗೋಧಿ ಸಂಗ್ರಹವಾಗಿದೆ. ಹೀಗಾಗಿ ಅದನ್ನು ಖರೀದಿಸುವುದು ಸುಲಭ. ಮತ್ತು ಅಕ್ಕಿಗಿಂತ ಕಡಿಮೆ ದರದಲ್ಲಿ ಖರೀದಿಸಲು ಸಾಧ್ಯ.

ಹೇಗೆ ಒಂದು ಸರ್ಕಾರದ ಯೋಜನೆ ಕಾಲ ಕ್ರಮೇಣ ತನ್ನ ಖದರನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಮತ್ತು ಅದರ ಉತ್ಸಾಹವನ್ನು ಬಸಿಯುತ್ತಾ ಹೋಗುತ್ತದೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಷ್ಟೇ. ಇದರರ್ಥ ಬೇರೇನೂ ಅಲ್ಲ. ಸ್ವಾತಂತ್ರ್ಯ ಬಂದ ನಂತರ ಕಾಲ ಕ್ರಮೇಣ ನಮ್ಮ ರಾಜಕೀಯ ಪಕ್ಷಗಳು ಜನರ ದುಡಿಯುವ ಶಕ್ತಿಯನ್ನು ಕಸಿದುಕೊಳ್ಳುತ್ತಾ ಬಂದಿವೆಯೇ ವಿನಾ ಅದನ್ನು ಹೆಚ್ಚು ಮಾಡುವ ಕೆಲಸ ಮಾಡಿಲ್ಲ. ಯಾವಾಗ ಒಂದು ದುಡಿಮೆಯ ಸಂಸ್ಕೃತಿ ತನ್ನ ತಾಕತ್ತು ಕಳೆದುಕೊಳ್ಳುತ್ತದೋ, ಆಗ ಬದುಕಿನ ಒಟ್ಟಾರೆ ಸಾಂಸ್ಕೃತಿಕ ಮೌಲ್ಯವೇ ಅಧಃಪತನದತ್ತ ಸಾಗುತ್ತದೆ. ಇಂತಹ ಸಂದರ್ಭದಲ್ಲೇ ಹತಾಶೆ ಸೃಷ್ಟಿಯಾಗುವುದು. ನೆರೆಯ ತಮಿಳ್ನಾಡಿನಲ್ಲಿ ನೋಡಿ. ಅಕ್ಕಿಯಿಂದ ಹಿಡಿದು ಬೇಳೆಯ ತನಕ, ಮೆಣಸಿನ ಪುಡಿಯಿಂದ ಹಿಡಿದು ಬೆಲ್ಲದ ತನಕ ಮತದಾರರಿಗೆ ಹಲವಾರು ವಸ್ತುಗಳು ಫ್ರೀ. ಟೀವಿ, ಲ್ಯಾಪ್ ಟಾಪು ಫ್ರೀ. ಎಲ್ಲ ಸವಲತ್ತುಗಳು ಮನೆ ಬಾಗಿಲಿಗೇ ಬಂದು ಬಿದ್ದರೆ ಮನುಷ್ಯ ಯಾಕೆ ದುಡಿಯುತ್ತಾನೆ? ಹೀಗಾಗಿ ನಿಜವಾದ ಬಡವರಿಗೆ, ಯಾರಿಗೆ ದುಡಿಯುವ ಶಕ್ತಿಯೇ ಇಲ್ಲವೋ, ಯಾರು ನಿರ್ಗತಿಕರೋ, ಯಾರು ತಮ್ಮ ಜೀವನ ನಡೆಸಲು ಸಾಧ್ಯವಿಲ್ಲವೋ ಅಂತಹವರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು.

ಆದರೆ ದೇಶದ ಎಂಭತ್ತೊಂದು ಕೋಟಿ ಜನರಿಗೆ ಎರಡು ರುಪಾಯಿಗೆ ಕೆಜಿಯಂತೆ ಅಕ್ಕಿ ಕೊಡುವ ಸ್ಥಿತಿ ಇದೆ ಎಂದರೆ ನಮ್ಮ ಸರ್ಕಾರಗಳು ಜನರನ್ನು ಯಾವ ಮಟ್ಟದಲ್ಲಿ ನಿಶ್ಯಕ್ತರನ್ನಾಗಿ ಮಾಡುತ್ತಿವೆ ಅನ್ನುವುದು ಅರ್ಥವಾಗುತ್ತದೆ. ಕಾಲಕ್ರಮೇಣ ಇಂತಹ ಯೋಜನೆಗಳು ಏನು ಮಾಡುತ್ತವೆ ಎಂದರೆ ದೇಶಕ್ಕೆ ಅಗತ್ಯವಾದ ಆಹಾರವನ್ನು ದೇಶದಲ್ಲಿ ಬೆಳೆದುಕೊಳ್ಳಲಾಗದ ಸ್ಥಿತಿಯನ್ನು ನಿರ್ಮಿಸುತ್ತವೆ. ಆಗ ಬೇರೆ ದೇಶಗಳ ಕೈಕಾಲು ಹಿಡಿದು ಅಕ್ಕಿ, ಬೇಳೆ, ಗೋಧಿ ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಒಂದು ಕಾಲದಲ್ಲಿ ದೇಶ ಬರಗಾಲದಿಂದ ತತ್ತರಿಸುತ್ತಿರುವಾಗ ನಾವು ಅಮೆರಿಕಾ, ರಷ್ಯಾ, ಚೀನಾದಿಂದ ಗೋಧಿ, ಅಕ್ಕಿ ಪಡೆದ ದಿನಗಳಿವೆ. ಆ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷ ಲಿಂಡನ್ ಜಾನ್ಸನ್‌ರಿಂದ ಭಿಕಾರಿ ದೇಶ ಅನ್ನಿಸಿಕೊಂಡ ಅಪಮಾನ ಇನ್ನೂ ಹಸಿರಾಗಿದೆ. ಆಗಲೇ ತಾನೇ ಇಂದಿರಾ ಗಾಂಧಿ ಹಸಿರು ಕ್ರಾಂತಿಗೆ ಕೈ ಹಾಕಿ ದೇಶವನ್ನು ಅವಮಾನದಿಂದ ಪಾರು ಮಾಡಲು ಯತ್ನಿಸಿದ್ದು. ಹೀಗೆ ಒಂದು ಸಲ ಅವಮಾನದಿಂದ ಪಾರಾದ ನೆನಪಿದ್ದರೂ ಮತ್ತೆ ನಾವು ಅಂತಹದೇ ಅಪಮಾನಕ್ಕೆ ಈ ದೇಶವನ್ನು ದೂಡಲು ಹೊರಟರೆ ಹೇಗೆ?

ದಂಗೆ ಎಬ್ಬಿಸಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷಕ್ಕೆ ಇದು ನೆನಪಿನಲ್ಲಿರಬೇಕಿತ್ತು. ಜನ ಯಾವ ಕಾರಣಕ್ಕಾಗಿ ಯುಪಿಎ ಮೈತ್ರಿಕೂಟ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ? ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಹಿಡಿದು, ವ್ಯಾಪಕವಾಗಿರುವ ಭ್ರಷ್ಟಾಚಾರದ ತನಕ ಹಲವು ವಿಷಯಗಳಿಂದ ರೋಸತ್ತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಸಲು ಏನು ಮಾಡಬೇಕು? ಭ್ರಷ್ಟಾಚಾರವನ್ನು ತಡೆಯಲು ಏನು ಮಾಡಬೇಕು? ಅನ್ನುವ ಕುರಿತು ದೂರಗಾಮಿ ನೆಲೆಯಲ್ಲಿ ಯೋಚಿಸಬೇಕು. ತುರ್ತು ದಂಗೆಗಳು ದೊಡ್ಡ ಭರವಸೆಯನ್ನೇನೋ ಮೂಡಿಸುತ್ತವೆ. ಅಧಿಕಾರವನ್ನೂ ದಕ್ಕಿಸಿಕೊಡುತ್ತವೆ. ಅಸ್ಸಾಂನಲ್ಲಿ ಈ ಹಿಂದೆ ಪ್ರಫುಲ್ಲ ಕುಮಾರ್ ಮಹಂತ ಮೇಲೆದ್ದು ಬಂದ ರೀತಿ ಮತ್ತು ಬಂದಷ್ಟೇ ವೇಗವಾಗಿ ಮೂಲೆಗುಂಪಾದ ರೀತಿಯನ್ನು ಗಮನಿಸಿದ್ದರೂ ಆಮ್ ಆದ್ಮಿ ಸ್ಥಾಪಕ ಅರವಿಂದ ಕೇಜ್ರಿವಾಲ್ ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದರು.

ನಿಜ, ದೆಹಲಿಯಲ್ಲೀಗ ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇರಬೇಕು ಕೂಡ. ಯಾಕೆಂದರೆ ದೆಹಲಿ ಈ ರಾಷ್ಟ್ರದ ರಾಜಧಾನಿ. ಹೀಗಿರುವಾಗ ಪೊಲೀಸ್ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರಕ್ಕೆ ಹಿಡಿತ ಇರಲೇಬೇಕು. ಆದರೆ ಕೇಜ್ರಿವಾಲ್ ಏನು ಮಾಡಬಹುದಿತ್ತೆಂದರೆ, ರಾಜ್ಯ ಸರ್ಕಾರಕ್ಕೆ ತನ್ನದೇ ಆದ ಪೊಲೀಸ್ ವ್ಯವಸ್ಥೆಯೊಂದರ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಬೇಕಿತ್ತು. ಒಬ್ಬ ಮುಖ್ಯಮಂತ್ರಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ನೇರವಾಗಿ ಹೊರುವುದರಿಂದ ಅದು ಅಗತ್ಯವೂ ಕೂಡ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಜತೆ ಒಂದು ಅಮೈಕಬಲ್ ಮಾತುಕತೆಯ ಮೂಲಕ ಅಂತಹ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಅದು ಯತ್ನಿಸಬಹುದಿತ್ತು. ಆದರೆ ಅದು ಆ ಕೆಲಸ ಮಾಡಲಿಲ್ಲ. ಬದಲಿಗೆ ಆಮ್ ಆದ್ಮಿ ಸರ್ಕಾರದಲ್ಲಿ ಕಾನೂನು ಮಂತ್ರಿ ಆಗಿರುವ ಸೋಮನಾಥ ಭಾರ್ತಿ ಅವರೇ ತಮ್ಮ ಪಕ್ಷದ ಕಾರ್ಯಕರ್ತರ ಜತೆಗೂಡಿ ಉಗಾಂಡ, ನೈಜೀರಿಯಾ ಪ್ರಜೆಗಳು ವಾಸವಾಗಿರುವ ಪ್ರದೇಶಕ್ಕೆ ನುಗ್ಗಿ, ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ, ಮಾದಕ ವಸ್ತುಗಳ ಜಾಲ ಕೆಲಸ ಮಾಡುತ್ತಿದೆ ಎಂದು ದಾಂಧಲೆ ಎಬ್ಬಿಸಿದರು.

ಅವರು ಹೇಳುತ್ತಿರುವುದರಲ್ಲಿ ಸಂಪೂರ್ಣ ಸುಳ್ಳಿದೆ ಅಂತ ಹೇಳಲೂ ಸಾಧ್ಯವಿಲ್ಲ. ಆದರೆ ಈ ಕೆಲಸ ಮಾಡಲು ಒಂದು ವ್ಯವಸ್ಥೆ ಬೇಕು. ಸರ್ಕಾರದಲ್ಲಿರುವ ಮಂತ್ರಿಗಳು, ಒಂದು ಪಕ್ಷದ ಕಾರ್ಯಕರ್ತರು ಇದನ್ನು ಮಾಡಲು ಶುರುವಿಟ್ಟುಕೊಂಡರೆ ನಾಳೆ ಪ್ರತಿಯೊಂದು ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿಯನ್ನು ಆರಂಭಿಸುತ್ತಾರೆ. ಕರ್ನಾಟಕದಲ್ಲಿ ಆಗಿದ್ದೆ ಇದಲ್ಲವೇ? ಹೀಗಾಗಿ ಅರವಿಂದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಒಂದು ಆಡಳಿತ ಪಕ್ಷವಾಗಿ ಗೋಚರವಾಗುವುದಕ್ಕಿಂತ ಹೆಚ್ಚಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಂತೆ ಭಾಸವಾಗುತ್ತಿದೆ. ಇದೇ ಕಾರಣಕ್ಕಾಗಿ ಜಗತ್ತಿನ ಮಹಾನ್ ಹೋರಾಟಗಾರರ ಪೈಕಿ ಅನೇಕರು ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಪಕ್ಷಗಳನ್ನು ಕಟ್ಟಿಕೊಳ್ಳಲಿಲ್ಲ. ಬದಲಿಗೆ ಒಂದು ಒತ್ತಡ ಹೇರಬಲ್ಲ ಶಕ್ತಿಯಾಗಿ ಉಳಿದುಕೊಂಡರು. ಎಲ್ಲೆಲ್ಲಿ ಇಂತಹ ಶಕ್ತಿಗಳು ಉಳಿದುಕೊಂಡವೋ, ಅಲ್ಲೆಲ್ಲ ಸರ್ಕಾರಗಳು ಎಚ್ಚರದಿಂದ ಕೆಲಸ ಮಾಡಲು ಸಾಧ್ಯವಾಯಿತು.

ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮಾಡಿದ್ದೂ ಇದನ್ನೇ. ಇಲ್ಲಿ ಆ ಕೆಲಸ ಮಾಡಬಹುದಾಗಿದ್ದ ರೈತ ಸಂಘ ರಾಜಕೀಯಕ್ಕಿಳಿದು ಫೇಲಾಗಿದ್ದೂ ಇದಕ್ಕೇ. ಅದರರ್ಥ ಬೇರೇನೂ ಅಲ್ಲ. ಬದುಕಿನ ಮೌಲ್ಯವನ್ನು ಹೆಚ್ಚಿಸಬೇಕು ಎಂಬ ಪ್ರಯತ್ನಕ್ಕಿಳಿಯುವ ಶಕ್ತಿಗಳು ಒತ್ತಡದ ಗುಂಪಾಗಿ ಉಳಿದಾಗ ಮಾತ್ರ ಒಂದು ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಯಾವಾಗ ಇದನ್ನೂ ಮೀರಿ ರಾಜಕೀಯ ಅಧಿಕಾರಕ್ಕಾಗಿ ತುರ್ತು ದಂಗೆಗೆ ಕಾರಣವಾದ ಗುಂಪು ಹಪಹಪಿಸುತ್ತದೋ ಆಗ ಅದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗದೆ ಸೊರಗುತ್ತದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕತೆ ಹಾಗೇ ಆಗಿದೆ. ಈ ಬೆಳವಣಿಗೆಯ ಕುರಿತು ಎಲ್ಲರೂ ಕೂಲಂಕುಷವಾಗಿ ಯೋಚಿಸುವುದು ಒಳಿತು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books