Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಚಿಕ್ಕ ಪುಟ್ಟ ಸಂತಸಗಳ ಮಧ್ಯೆಯೇ ಧೃತಿಗೆಡಿಸುವ ಘಟನೆಗಳು

ಸುಖ್ ತೋ ಇಕ್ ಛಾಂವ್ ಢಲ್ ತೀ
ಆತೀ ಹೈ ಜಾತೀ ಹೈ
ದುಃಖ್ ತೋ ಅಪನಾ ಸಾಥೀ ಹೈ...
ಅನ್ನುತ್ತಾನೆ ಕವಿ ಮಜರೂಹ್ ಸುಲ್ತಾನ್ ಪುರಿ. ಸುಖವೆಂಬುದು ಆಗ ಬಂದು ಹೀಗೆ ಹಗುವ ನೆಳಲಿನಂತಹುದು. ದುಃಖ ಅಂತೀರಾ? ಅದು ನಮ್ಮ ನಿರಂತರ ಸಂಗಾತಿ ಅನ್ನೋ ಅರ್ಥ. ನಿಮಗೆ ಗೊತ್ತು, ನಾನು ನಿರಾಶಾವಾದಿಯಲ್ಲ. ಆದರೆ ಒಂದು ಶಾಶ್ವತ ದುಃಖ ನನ್ನೊಂದಿಗೆ ನಿರಂತರವಾಗಿ ಇದೆ. ನಾನಿರುವವರೆಗೂ ಇರುತ್ತದೆ. ಹೀಗಾಗಿ ಸಣ್ಣ ಸಣ್ಣ ಸಂತೋಷಗಳು ಕೂಡ ನನ್ನನ್ನು ಉಲ್ಲಸಿತನನ್ನಾಗಿ ಮಾಡುತ್ತವೆ. ಮೊನ್ನೆ ಒಂದು Raphis Excelsa (Raphis palm) plant ತಂದುಕೊಟ್ಟ ಶಿವ ಮರಕಿಣಿ. ಅವನು ಉದಯನಷ್ಟೇ ಗಾಢ ಗೆಳೆಯ. ನಿಷ್ಣಾತ ತೋಟಗಾರಿಕಾ ತಜ್ಞ. ಇದೊಂದು ಚೆಂದನೆಯ ಸಸಿ. potನಲ್ಲಿಟ್ಟು ಕೋಣೆಯಲ್ಲೇ ನಮ್ಮ ಜೊತೆಯಲ್ಲೇ ಬೆಳೆಸಬಹುದು. ನಾನು ಬೆಡ್‌ರೂಮಿನಲ್ಲಿಟ್ಟುಕೊಂಡಿದ್ದೇನೆ. ಅದರೊಂದಿಗೆ ಇನ್ನೆರಡು potಗಳಲ್ಲಿ ಕೃಷ್ಣ ತುಳಸಿ ಮತ್ತು ನೆಲನಲ್ಲಿ. ಹೀಗೇ ಸಸಿಗಳ ಹುಚ್ಚು ಬೆಳೆದರೆ ನನ್ನ ಬೆಡ್‌ರೂಮೇ ಪಾರ್ಕ್ ಆಗಿ ಹೋಗುತ್ತದೆ. That's great. ಗಿಡ ಸಾಕುವುದು, ಬೆಳೆಸುವುದು-ಉಹುಂ, ಅದಲ್ಲ ಸಂಗತಿ. ಸಸಿಗಳೊಂದಿಗೆ ನಾವೂ ಬೆಳೆಯುತ್ತೀವಲ್ಲ? ಅದು ಬೀಜ ಮಾತು. ‘ಬೀಜ ಮಾತು’ ಎಂಬುದು ಉತ್ತರ ಕರ್ನಾಟಕದ ಬಳಕೆಯ ಕನ್ನಡ. ‘ಈ ಆಡಿದೆ ನೋಡು... ಅದು ಬೀಜ ಮಾತು’ ಅನ್ನುತ್ತಾರೆ. ಅದು ಅಪ್ಪಟ ಸತ್ಯ ಎಂಬರ್ಥದ ಉದ್ಗಾರ.

ಹೀಗೆ ಚಿಕ್ಕ ಚಿಕ್ಕ ಸಂತಸಗಳಲ್ಲಿ ನಾನು ದೊಡ್ಡ ಮತ್ತು ಶಾಶ್ವತ ದುಃಖಗಳನ್ನು ಅಷ್ಟರಮಟ್ಟಿಗೆ ಮರೆಯುತ್ತೇನೆ. ಒಳ್ಳೆಯದೊಂದು ಹಾಡು, ಗಝಲ್, ಪುಸ್ತಕವೊಂದರ ಯಾವುದೋ ಸಾಲು, ಫೇಸ್‌ಬುಕ್‌ನಲ್ಲಿ ಕಂಡ ಪುಟಾಣಿ ಪದ್ಯ, ಮುದ್ದಾದ ಮಗುವಿನ ನಗು, ಒಂದು ಗಾಢ ಮೈಥುನ, ಒಳ್ಳೆಯ ಬಾಡೂಟ, ಸುಖ ನಿದ್ರೆ ಇವೆಲ್ಲವೂ ಸಂಭ್ರಮಿಸಬೇಕಾದ ಚಿಕ್ಕ-ದೊಡ್ಡ ಸಂತೋಷಗಳೇ.
ಆದರೆ ಧಿಡೀರನೆ ಕೆಲವು ಕೆಟ್ಟ ಸುದ್ದಿಗಳು ಬಂದಾಗ ಕಂಗೆಟ್ಟು ಬಿಡುತ್ತೇನೆ. ಮೊನ್ನೆ ವಿಜಯಕ್ಕ ಫೋನ್ ಮಾಡಿದರು. ಅವರು ಅಮೆರಿಕದಲ್ಲಿ ನೆಲೆಗೊಂಡಿದ್ದಾರೆ. “ರವೀ, ಅಮ್ಮ ಹೋಗಿಬಿಟ್ರು" ಎಂದು ಬಿಕ್ಕತೊಡಗಿದರು. ನಿಜಕ್ಕೂ ಎದೆಯೊಡೆದಂತಾಯಿತು. ಅವರ ತಂದೆ ಶಾಮರಾಯರು ನನ್ನ ಬದುಕನ್ನು ಸಂದಿ-ಗೊಂದಿ-ಗಟಾರಗಳಿಂದ ಕೈ ಹಿಡಿದು ಎಳೆ ತಂದು ಹೆದ್ದಾರಿಗೆ ನಡೆಯಲು ಬಿಟ್ಟವರು. ನನ್ನ ಬದುಕಿನಲ್ಲಿ ನನ್ನನ್ನು ತುಂಬ ಇಂಪ್ರೆಸ್ ಮಾಡಿದವರು ಮೂರು ಜನ ‘KS’ಗಳು. ಮೊದಲನೆಯ KS ಕೊಂಡಪಲ್ಲಿ ಸೀತಾರಾಮಯ್ಯಗಾರು. ಅವರು ಆಂಧ್ರದಲ್ಲಿ ನಕ್ಸಲೀಯ ಚಳವಳಿ ಹುಟ್ಟು ಹಾಕಿದವರು. ಅವರೊಂದಿಗೆ ತಿಂಗಳುಗಟ್ಟಲೆ ತಿರುಗಿ, ಜೊತೆಯಲ್ಲಿ ಉಳಿದು, ಅವರಿಗಾಗಿ ಒಂದು ನಕ್ಸಲ್ ಚಳವಳಿಯ ಡಾಕ್ಯುಮೆಂಟ್ ತರ್ಜುಮೆ ಮಾಡಿಕೊಟ್ಟಿದ್ದೆ. ಆ ದಿನಗಳಲ್ಲಿ ಸತತವಾಗಿ ಏಳು ದಿನ ಒಂದು ರೂಮಿನಲ್ಲಿ ಕುಳಿತು, ಒಂದು ಹೆಜ್ಜೆಯೂ ಹೊರ ಹಾಕದೆ, ಕಲ್ಕತ್ತಾದಲ್ಲಿ ಕೂತು ಬರೆದೆ. ಜೊತೆಗಿದ್ದರು ಕೊಂಡಪಲ್ಲಿ ಸೀತಾರಾಮಯ್ಯ. ಅವರ ಜೀವನ ಕಥನವನ್ನೂ ನಾನು ಬರೆದೆ: ಪೂರ್ತಿಯಾಗಲಿಲ್ಲ. “ಮುಗಿಸುವ ಮುನ್ನ ಇಬ್ಬರೂ ಒಮ್ಮೆ (ಇವತ್ತಿಗೂ ಅದು ನಕ್ಸಲ್ ಚಳವಳಿಯ ಕೇಂದ್ರಬಿಂದು) ದಂಡಕಾರಣ್ಯಕ್ಕೆ ಹೋಗಿ ಬರೋಣ" ಅಂದಿದ್ದರು. ಅಷ್ಟರಲ್ಲಿ ನಾನು ‘ಹಾಯ್ ಬೆಂಗಳೂರ್!’ನ ಭರಾಟೆಗೆ, ಕೆಲಸಕ್ಕೆ, ನಿರಂತರ ದುಡಿತಕ್ಕೆ ಬಿದ್ದುಬಿಟ್ಟೆ. ಪತ್ರಿಕೆಯ ಸೃಷ್ಟಿ ೩೦ರ ಸಂಚಿಕೆಯಿಂದ ಸೃಷ್ಟಿ ೫೦ರ ಸಂಚಿಕೆಯ ತನಕ ಅದು ‘ನಕ್ಸಲೀಯರ ನಾಡಿನಲ್ಲಿ’ ಎಂಬ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಇನ್ನೇನು ದಂಡಕಾರಣ್ಯಕ್ಕೆ ಹೋಗೋಣ ಎಂಬಷ್ಟರಲ್ಲಿ ಅವರಿಗೆ ಪಾರ್ಕಿನ್ಸನ್ ಖಾಯಿಲೆಯ ಭ್ರಮೆ ತೀವ್ರವಾಗಿ, ಕಡೆಗೆ ಈ ಪ್ರಪಂಚದಿಂದಲೇ ನಡೆದು ಹೋದರು. ‘ಭ್ರಮೆ’ ಅಂತ ಯಾಕಂದೆ ಅಂದರೆ, ಅವರಿಗೆ ನಕ್ಸಲ್ ಚಳವಳಿಯ ಬಗ್ಗೆ ಭ್ರಮಾನಿರಸನವಾಗಿತ್ತು. ಅವರಿಗೆ ಮಾವೋ ಮತ್ತು ಮೂಲ ಮಾವೋ ಸಿದ್ಧಾಂತದ ಬಗ್ಗೆ ಯಾವ ಮಟ್ಟದ ಪ್ರೀತಿ, ನಂಬಿಕೆಗಳು ಇದ್ದುವೆಂದರೆ, ಮಾವೋತ್ಸೆ-ತುಂಗ್ ಪಾರ್ಕಿನ್ಸನ್‌ನಿಂದ ನರಳಿ ತೀರಿಕೊಂಡರು. ತಮಗೂ ಅದೇ ಖಾಯಿಲೆ ಬಂದಿದೆಯೆಂಬ imaginary ಭಯ ಕೊಂಡಪಲ್ಲಿಯವರಿಗೆ ಆರಂಭವಾಗಿ, ಅದು ಅವರ ಅವಸಾನಕ್ಕೆ ಕಾರಣವಾಯಿತು. ಅಲ್ಲಿಗೆ ಅವರ ಬದುಕಿನ ಕಥನದ ನನ್ನ ಬರವಣಿಗೆಯೂ ನಿಂತು ಹೋಯಿತು.

ಇನ್ನೊಬ್ಬರು ‘KS’. ಅವರು ಖುಷ್ವಂತ್ ಸಿಂಗ್. ಆ ಬಗ್ಗೆ ನಾನು ಸಾಕಷ್ಟು ಬರೆದಿದ್ದೇನೆ. ಅವರ ಕೃತಿಗಳನ್ನು ಅನುವಾದಿಸಿದ್ದೇನೆ. ಮೊನ್ನೆ ಅವರನ್ನು ನೋಡಲು ಯತ್ನಿಸಿದೆ. “Dont ring the bell under u r expected" ಎಂಬ ಅದೇ ವಿಚಿತ್ರ ಬೋರ್ಡು ಅವರ ಮನೆಯ ಬಾಗಿಲಿಗಿತ್ತು. ಅಂಥದೊಂದು ಬೋರ್ಡನ್ನು ನಾನು ಈ ತನಕ ಇನ್ನೊಬ್ಬರ ಮನೆಯ ಬಾಗಿಲಲ್ಲಿ ನೋಡಿಲ್ಲ. ಫೋನು ಮಾಡಿದೆ. ಸಹಾಯಕ ಫೋನೆತ್ತಿಕೊಂಡ. “ಅವರು ಒಂದು ತೆರನಾದ ಕೋಮಾದಲ್ಲಿದ್ದಾರೆ. ಯಾರನ್ನೂ ಗುರುತು ಹಿಡಿಯುತ್ತಿಲ್ಲ. ನೀವು ಬರದಿದ್ದರೇನೇ ಒಳ್ಳೆಯದು" ಅಂದ. ಕೊನೆಯ ಬಾರಿಗೆ ಅವರನ್ನು ಜೀವಂತವಾಗಿ ನೋಡುವ ಆಸೆಯೂ ವಿಫಲವಾಗಿ ಹಿಂತಿರುಗಿದೆ. ಈಗ ಫೆಬ್ರುವರಿ ೨, ೨೦೧೪ರಂದು ಅವರ ತೊಂಬತ್ತನೇ ಜನ್ಮ ದಿನಾಚರಣೆ. ಶತಾಯಗತಾಯ ಕುಳಿತು ಅವರ ಸುದೀರ್ಘ ಕಾದಂಬರಿ ‘ದಿಲ್ಲಿ’ಯ ಕನ್ನಡಾನುವಾದ ಮಾಡಿ ಅವತ್ತೇ ಬಿಡುಗಡೆ ಮಾಡಿ ಬಿಡಬೇಕು ಎಂದು ನಿರ್ಧರಿಸಿದ್ದೇನೆ. ಅದನ್ನು ಬರೆಯಲು ಖುಷ್ವಂತ್ ಇಪ್ಪತ್ತು ವರ್ಷ ತೆಗೆದುಕೊಂಡಿದ್ದಾರೆ. ಅನುವಾದ ಮಾಡಲಿಕ್ಕೆ ಹದಿನೈದು ದಿನ ಸಾಕೆ? God knows. ನನಗೆ ನನ್ನ ತಾಕತ್ತಿನ ಬಗ್ಗೆ ವಿಶ್ವಾಸವಿದೆ. ಪರಮ ಗುರುವಿನ ಬಗ್ಗೆ ಗೌರವವಿದೆ.

ಮೂರನೆಯ ‘KS’ ನಿಮಗೆ ಸುಪರಿಚಿತರು. ಅವರು ಕಡಲಬಾಳು ಶಾಮರಾಯರು. ಮಾತನಾಡಿಸಿದರೆ ಪುಳಕ. ನಕ್ಕರೆ ‘ನಿನಗೆ ಇಷ್ಟರಲ್ಲೇ ಏನೋ ಕಾದಿದೆ’ ಎಂಬ ವಾರ‍್ನಿಂಗ್. ಪಕ್ಕದಲ್ಲಿ ಕೂಡಿಸಿಕೊಂಡು ಊಟ ಮಾಡಿಸಿದರೆ ತಂದೆ ಮಗನಿಗೆ ಉಣಿಸಿದ ಹಾಗೆ. ಪುಸ್ತಕದ ಅಂಗಡಿಗೆ ಕರೆದೊಯ್ದರೆ ಮಗುವಿಗೆ ಅಮ್ಮ sweet stallಗೆ ಕರೆದೊಯ್ದು ಬೇಕಾದ್ದು ಆರಿಸಿಕೋ ಮಗೂ ಎಂದು ನಗುತ್ತ ಹೇಳಿದ ಹಾಗೆ. ‘ಏನ ನೀನೂ...’ ಅಂತಲೇ ಮಾತು, ಬೈಗುಳ ಆರಂಭಿಸುತ್ತಿದ್ದ ಶಾಮರಾಯರು “ಏನ್ರೀ ರವಿಯವರೇ..." ಅಂದು ಬಿಟ್ಟರೆ ಬಂತು ಆಪತ್ತು ಎಂದು ತತ್ತರಿಸುತ್ತಿದ್ದೆ. ನನಗಿಂತ ಸರಿಯಾಗಿ ಎರಡರಷ್ಟು ಆಯುಷ್ಯ ಹೊಂದಿದ್ದ ‘ಕಸ್ತೂರಿ’ ಮಾಸಪತ್ರಿಕೆ ಹಾಗೂ ‘ಕರ್ಮವೀರ’ ವಾರಪತ್ರಿಕೆಗಳ ಸಂಪಾದಕನನ್ನಾಗಿ ಮಾಡಿದರು. ಆ ಉಪಕಾರ ಮರೆತರೆ ನಾನು ನನ್ನ ಇನ್ನೊಬ್ಬ ಮಹಾಗುರುವನ್ನು ಮರೆತಂತೆಯೇ.

ಆದರೆ ಶಾಮರಾಯರ ಪತ್ನಿ ಸೀತಮ್ಮನವರು ಶಾಮರಾಯರ ತದ್ವಿರುದ್ಧದ ಸ್ವಭಾವದವರು. ಆ ತಾಯಿ ಮುಖ ಗಂಟಿಕ್ಕಿದ್ದನ್ನು ನಾನು ಯಾವತ್ತೂ ನೋಡಿಲ್ಲ. ಶಾಮರಾಯರು ಊರಿಗೆಲ್ಲ ಆರ್ಭಟದ ವ್ಯಕ್ತಿ ಎಂಬಂತಿದ್ದರಾದರೂ ಸೀತಮ್ಮನವರೆದುರು ಅಪ್ಪಟ ಆಜ್ಞಾನುವರ್ತಿ husband. “ಏ, ರವೀ ಬಂದಾನ ನೋಡು. ತಿಂಡಿ ಮಾಡು. ನಂಜೊತೀಗೇ ತಿಂತಾನೆ" ಅನ್ನುತ್ತಿದ್ದರು. ತಿಂಡಿಯಾದ ಮೇಲೆ ಶಾಮರಾಯರು ಕೇಳದೆ ಇದ್ದರೂ ಅಮ್ಮ ಕಾಫಿ ತಂದುಕೊಡುತ್ತಿದ್ದರು. ಒಂದು ಸಲ “ಅಮ್ಮಾ, ನಂಗೆ ಕಾಫಿಗೆ ಸಕ್ಕರೆ ಹಾಕಬೇಡಿ" ಅಂದೆ. “ಅಯ್ಯೋ ನಿಮಗೂ ಬಂದು ಬಿಡ್ತಾ ಡಯಾಬಿಟೀಸೂ?" ಅಂತ ಅನೇಕರು ಕೇಳುತ್ತಾರೆ: ಅದೇನೋ ಏಡ್ಸ್ ಬಂತೇನೋ ಎಂಬಂತೆ. ಆದರೆ ಅಮ್ಮ ಏನೆಂದರು ಗೊತ್ತೆ? “ಆರೋಗ್ಯ ಸರಿಯಾಗಿ ನೋಡ್ಕಳಪ್ಪಾ"! ಅಷ್ಟೆ. ಅದಾದ ಇಪ್ಪತ್ತು ವರ್ಷ ಅವರ ಮನೆಗೆ ಹೋಗುತ್ತಿದ್ದೆ. ಒಂದು ಕಪ್‌ನಲ್ಲಿ ಬರೀ ಚಮಚೆ ಹಾಕಿ ಕಾಫಿ ತಂದು ಕೊಡುತ್ತಿದ್ದರು. ಅದರರ್ಥ, ಚಮಚೆ ಇರುವ ಕಪ್ ನಿನ್ನದು-ಅದರಲ್ಲಿ ಸಕ್ಕರೆ ಇಲ್ಲ! “ಅಮ್ಮಾ ಇಪ್ಪತ್ತು ವರ್ಷ ಆದ್ರೂ ಇಷ್ಟು ಚಿಕ್ಕ ವಿಷಯ ನೆನಪಿಟ್ಟುಕೊಂಡೀರಲ್ಲ? ಅದರಲ್ಲೂ ನನ್ನಂಥ ಚಿಕ್ಕ ಹುಡುಗನ ಬಗ್ಗೆ" ಅಂದೆ. “ನೋಡಪ್ಪಾ, ಇದು ಸಣ್ಣವರು-ದೊಡ್ಡವರು ಅಂಬೋ ಪ್ರಶ್ನೆ ಇದರಾಗೆ ಬರಾದಿಲ್ಲ. ಪ್ರೀತಿ ಇರ ಬೇಕಷ್ಟೆ. ಪ್ರೀತಿ ಇದ್ರೆ ಶ್ರದ್ಧೆ ಇರ‍್ತದೆ. ಶ್ರದ್ಧೆ ಇರುವಾಗ ನೆನಪಿದ್ದೇ ಇರ‍್ತದೆ. ಅದರಾಗೇನು ದೊಡ್ಡಸ್ತಿಕೆ?" ಅಂದಿದ್ದರು.

ಒಮ್ಮೆ ಅವರ ಮನೆಗೆ ಹೋದಾಗ ಅವರೇ ಮನೆಯ ಕಸ ಬಳಿಯುತ್ತಿದ್ದರು. “ಯಾಕಮ್ಮಾ, ಕೆಲಸದವರು ಬಂದಿಲ್ವಾ?" ಅಂದೆ. “ಇಲ್ಲಪ್ಪಾ, ನಾವು ಕೆಲಸದವರ‍್ನ ಇಟ್ಕೊಂಡೇ ಇಲ್ಲ. ನಾವು ವಾಸ ಮಾಡೋ ಜಾಗ ನಾವೇ ಶುಚಿಯಾಗಿಟ್ಟುಕೋಬೇಕಪ್ಪಾ. ನಾನು ಅರ್ಧ ಮನಿ ಕ್ಲೀನ್ ಮಾಡ್ತೀನಿ. ಉಳಿದ ಅರ್ಧ ಮನೀನ ನಿಮ್ಮ ರಾಯರು ಕ್ಲೀನ್ ಮಾಡ್ತಾರೆ" ಅಂದಿದ್ದರು ಸೀತಮ್ಮ. ಅಷ್ಟೇ ಅಲ್ಲ, “ರವೀ, ೧೯೩೬ರಲ್ಲಿ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ರಾಜಾಜಿ ಅವರು ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುತ್ತಿರೋ ಫೊಟೋ ದೊಡ್ಡದಾಗಿ ಪ್ರಕಟ ಆಗಿತ್ತು. ಅವತ್ತಿನಿಂದ ನಾನು ನನ್ನ ಬಟ್ಟೆ ಒಗೆದುಕೋತೀನಿ.. ಇವತ್ತಿನವರೆಗೂ" ಅಂತ ಶಾಮರಾಯರು ಹೇಳಿದ್ದರು.

ಶಾಮರಾಯರ ಹಾಗೂ ಸೀತಾಬಾಯಿಯವರ ಸುದೀರ್ಘ ದಾಂಪತ್ಯ ಅತ್ಯಂತ ಅನ್ಯೋನ್ಯವಾಗಿತ್ತು. ಇಬ್ಬರೂ ತೆಳ್ಳಗಿನ, ವಿಪರೀತ ಚಟುವಟಿಕೆಯ ಆರೋಗ್ಯವಂತ ದಂಪತಿಗಳು. ಬೆಳಿಗ್ಗೆ ಎದ್ದು ಅಮ್ಮ ಚಟಪಟ ಹೆಜ್ಜೆ ಹಾಕುತ್ತಾ ಭಾಷ್ಯಂ ಸರ್ಕಲ್‌ನಿಂದ ಪ್ರಸನ್ನ ಟಾಕೀಸಿಗೆ ಹೋಗುವ ಬೀದಿಗೆ ಹೋಗಿ ರಸ್ತೆ ಪಕ್ಕದ ತರಕಾರಿ ಮಾರುವವರೊಂದಿಗೆ ಜಗ್ಗಾಡಿ, ಚೌಕಾಸಿ ಮಾಡಿ, ಕಡೆಗೆ ಅವರು ಮೊದಲು ಕೇಳಿದಷ್ಟೇ ಹಣ ಕೊಟ್ಟು, ನಗುನಗುತ್ತಾ ವಾಪಾಸು ಬರುತ್ತಿದ್ದರು. “ಹೇಳಿದರೆ ನಾವ್ಯಾರಾದರೂ ತಂದುಕೊಡ್ತೀವಲ್ಲಮ್ಮಾ?" ಅಂದರೆ “ಅಂಗಡಿಯವರು ನನ್ನನ್ನು ಮರೆತುಬಿಟ್ರೆ ಹ್ಯಾಗಪ್ಪಾ? ನಮ್ಮ ಕೆಲಸ ನಾವು ಮಾಡಿಕೋಬೇಕು" ಅಂದು ನಗೆಯಾಡುತ್ತಿದ್ದರು. ಆಕೆ ನಿಜಕ್ಕೂ ಅದ್ಭುತ ಸೌಂದರ್ಯವತಿ. ನಕ್ಕರಂತೂ ಥೇಟು ಎಲ್ಲಂದಿರ ಅಮ್ಮನ ಹಾಗೇ ಅಮ್ಮ. ಒಮ್ಮೆ ಶಾಮರಾಯರು ಹುಬ್ಬಳ್ಳಿಗೆ ಒಂದು order copy ಕಳಿಸಿದ್ದರು. ಆಗ ಬೀದರದಲ್ಲಿ ವರದಿಗಾರರಾಗಿದ್ದ ರಾಜಾರಾವ್ ಎಂಬುವವರನ್ನು ಶಾಮರಾಯರು ಇನ್‌ಎಫಿಷಿಯಂಟ್ ಎಂಬ ಕಾರಣಕ್ಕೆ ಡಿಸ್‌ಮಿಸ್ ಮಾಡಿದ್ದರು. ಅದರ ಪ್ರತಿಯನ್ನು ಅಂದಿನ ಸಂಪಾದಕರಾದ ರಾಮಚಂದ್ರ.ಎ.ಉಪಾಧ್ಯ ಅವರಿಗೆ ಕಳಿಸಿದ್ದರು. “ಅಯ್ಯೋ, ಈ ರಾಜಾರಾಯನ್ನ ತೆಗೆದು ಹಾಕ್ಯಾರಲ್ಲೋ?" ಎಂದು ಉಪಾಧ್ಯರು ಪತ್ರದ ಪ್ರತಿ ನನ್ನ ಕೈಗಿಟ್ಟರು. ಒಂದು ಘಟ್ಟದಲ್ಲಿ ಹಾಗೆ ಡಿಸ್ಮಿಸ್ ಆದವರನ್ನು, ಸಸ್ಪೆಂಡ್ ಆದವರನ್ನು, ಒಲ್ಲದ ಜಾಗಕ್ಕೆ punishment transfer ಮಾಡಿದವರನ್ನು ಮತ್ತೆ ನೌಕರಿಗೆ ತೆಗೆದುಕೊಳ್ಳುವಂತೆ ರಾಯರೆದುರು ಹಟ ಮಾಡಿ, ಮನ ಒಲಿಸಿ, ಕಾಡಿ ಬೇಡಿ ಒಪ್ಪಿಸುವ ಕೆಲಸ ನಾನು ಮಾಡುತ್ತಿದ್ದೆ. ಆದರೆ ರಾಜಾರಾವ್ (ಹಿರಿಯರಾದ ಕೆ.ರಾಜಾರಾವ್ ಅಲ್ಲ) ನನಗೆ ಈ ಬಗ್ಗೆ ಫೋನೂ ಮಾಡಿರಲಿಲ್ಲ. ವಿನಂತಿಯ ಮಾತೇ ಇಲ್ಲ. ಕಾಕತಾಳೀಯವೆಂಬಂತೆ ಅಂದೇ ರಾತ್ರಿ ನಾನು ಮತ್ತು ಉಪಾಧ್ಯರು ರಾಯರ ಅಪ್ಪಣೆಯ ಮೇರೆಗೆ ಬೆಂಗಳೂರಿಗೆ ಬಂದಿಳಿದೆವು. ಹೊಟೇಲಿನಲ್ಲಿ ಸ್ನಾನ ಮಾಡಿ ನೇರವಾಗಿ ರಾಯರ ಮನೆಗೆ ಹೋಗಿ ಕದ ಬಡಿದರೆ, ಕದ ತೆಗೆದಿದ್ದು ಮತ್ಯಾರೂ ಅಲ್ಲ!

ಖುದ್ದು ವರದಿಗಾರ ರಾಜಾರಾವ್!
“ಸುಮ್ನಿರ್ರೀ ಪಾಪ, ಹೆಂಡ್ತಿ ಮಕ್ಕಳಿದ್ದಾರೆ. ಈ ವಯಸ್ಸಿನ್ಯಾಗೆ ನೌಕರಿ ಕಳೆದರೆ ಎಲ್ಲಿಗೆ ಹೋಗ್ತಾನೆ?" ಎಂದು ಹೇಳಿ ರಾಜಾರಾಯನ ನೌಕರಿ ಉಳಿಸಿದ್ದರು ಸೀತಮ್ಮ. ಆ ಕರುಣೆಯ ಕಣ್ಣಿಗೆ ಎಲ್ಲರೂ ಮಕ್ಕಳೇ. ಅವರ ದಾಂಪತ್ಯಕ್ಕೆ ನಾಲ್ವರು ಮಕ್ಕಳು. ರಾಜೇಶ್ವರಿ, ವಿಜಯಲಕ್ಷ್ಮಿ, ರಮೇಶ್ ಮತ್ತು ಜಯಶ್ರೀ. ಈ ಪೈಕಿ ಜಯಶ್ರೀ ಅವರ ಹೊರತಾಗಿ ಉಳಿದೆಲ್ಲರೂ ಅಮೆರಿಕದಲ್ಲಿದ್ದಾರೆ.
ಶಾಮರಾಯರು ಭಯಂಕರ ಛಲಜೀವಿ. ಪತ್ರಿಕೋದ್ಯಮಕ್ಕೆ ಬದುಕು ಮೀಸಲಾಗಿಟ್ಟವರು. ಆದರೆ ‘ಸಂಯುಕ್ತ ಕರ್ನಾಟಕ’ದ ಒಡೆತನ ಲೋಕ ಶಿಕ್ಷಣ ಟ್ರಸ್ಟ್‌ನದಿತ್ತು. ಕೊನೆಯಲ್ಲಿ ಶಾಮರಾಯರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಂಡು, ಅವರೇ ಹುಲುಸಾಗಿ ಕಟ್ಟಿ ಬೆಳೆಸಿದ ‘ಸಂ.ಕ’ದಿಂದ ಹೊರ ಹಾಕಿದರೆಂದರೆ, ಶಾಮರಾಯರ ಮನಸ್ಸು-ವಯಸ್ಸುಗಳೆರಡೂ ಘಾಸಿಗೊಂಡವು. ಆನಂತರವೂ ತಮ್ಮ ಹೋರಾಟ ಮುಂದುವರೆಸಿದರಾದರೂ ಅವರು ಒಳಗೇ ಕುಸಿದು ಹೋಗಿದ್ದರು. ಆಮೇಲೆ ತುಂಬ ವರ್ಷ ಅವರು ಬದುಕಲಿಲ್ಲ. ನೋಡಿ, ಗಂಡಸರು ಮಾನಸಿಕವಾಗಿ ತುಂಬ ಬೇಗ ಕುಸಿಯುತ್ತಾರೆ. ಹೆಂಗಸರಿಗಿರುವ ಮನೋಶಕ್ತಿ, ಧೀಶಕ್ತಿ ಗಂಡಸರಿಗಿರುವುದಿಲ್ಲ. ರಾಯರ ನಿರ್ಗಮನದ ನಂತರವೂ ಸೀತಮ್ಮನವರು ದೃಢವಾಗಿ, ಲವಲವಿಕೆಯಿಂದ ಇದ್ದರು. ಅವರದೂ ಮನಸ್ಸು ಘಾಸಿಗೊಂಡಿತ್ತು. ಆದರೆ ಆ ಲವಲವಿಕೆ ಮಾಸಿರಲಿಲ್ಲ.

ಇತ್ತೀಚೆಗೊಮ್ಮೆ ಅವರು ಬಾತ್‌ರೂಮಿನಲ್ಲಿ ಜಾರಿ ಬಿದ್ದರು. ಬೆನ್ನ ಕೆಳಗಿನ ಮೂಳೆ ಮುರಿಯಿತು. ಆಪರೇಷನ್ ಮಾಡಿ rod ಹಾಕಿದರು. ಆಗಲೂ ಎದ್ದು ಊರುಗೋಲು ಹಿಡಿದುಕೊಂಡು ಮನೆಯಲ್ಲೇ ಓಡಾಡಿಕೊಂಡಿದ್ದರು. ಆದರೆ ಎರಡನೇ ಸಲ ಮತ್ತೆ ಬಿದ್ದರು. ಈ ಬಾರಿ ಅಮ್ಮ ಚೇತರಿಸಿಕೊಳ್ಳಲಿಲ್ಲ. ಅವರ ಅಂತ್ಯ ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ.

ಗಂಡಸಿಗೆ ಧೀಶಕ್ತಿ ಇರುವುದಿಲ್ಲ, ಹೆಂಗಸರಿಗಿರುವಷ್ಟು ಅಂತ ಬರೆದೆನಲ್ಲ? ಅದಕ್ಕೆ ನಮ್ಮ ಕುಟುಂಬದಲ್ಲೇ ಇತ್ತೀಚೆಗೆ ನಡೆದ ಎರಡು ದುರ್ಘಟನೆಗಳು ಸಾಕ್ಷಿ. ಮೊದಲನೆಯದಾಗಿ ನನ್ನ ಮಗಳು ಭಾವನಾಳ ಅತ್ತಿಗೆ, ಅಂದರೆ ಶ್ರೀನಗರ ಕಿಟ್ಟಿಯ ಸ್ವಂತ ಅಕ್ಕ ಉಮಕ್ಕ ಒಮ್ಮೆ ಟೀವಿ ನೋಡುತ್ತಾ ಮನೆಯವರೆಲ್ಲರೊಂದಿಗೆ ಕುಳಿತಿದ್ದಾಗ ಅದರಲ್ಲಿ ಸ್ತನದ ಕ್ಯಾನ್ಸರ್ ಬಗ್ಗೆ ಒಂದು ಚರ್ಚೆ ಬರುತ್ತಿತ್ತು. “ಹೆಣ್ಣು ಮಕ್ಕಳು ತುಂಬ ಎಚ್ಚರಿಕೆಯಿಂದಿರಬೇಕು. ಸ್ತನದ ತೊಟ್ಟಿನ ಸುತ್ತ ಚಿಕ್ಕ ಚಿಕ್ಕ ರಂಧ್ರಗಳಾಗುತ್ತವೆ: ಕಿತ್ತಳೆಯ ಸಿಪ್ಪೆಗಿರುವಂತೆ. ಅದು ಸ್ತನದ ಕ್ಯಾನ್ಸರ್‌ನ ಸೂಚನೆ" ಅಂತ ವೈದ್ಯರು ಚರ್ಚೆಯಲ್ಲಿ ಹೇಳಿದಾಗ “ಅಯ್ಯೋ, ನನಗೆ ಇದು ಅನೇಕ ದಿನಗಳಿಂದ ಇದೆ" ಅಂದಿದ್ದಾರೆ ಉಮಕ್ಕ. ತಕ್ಷಣ ಅವರ ಮಗಳು ವೈದ್ಯರಲ್ಲಿಗೆ ಕರೆದೊಯ್ದು ತೋರಿಸಿದರೆ, ಆಕೆಗೆ ಕ್ಯಾನ್ಸರ್ ಬಂದು ಅದು ಮೂರನೆಯ stage ದಾಟಿತ್ತು. ಅವರೇನೂ ವಿಪರೀತ ಶ್ರೀಮಂತರಲ್ಲ. ಅವರ ಪತಿ ಶ್ರೀಕಂಠಯ್ಯ ತುಂಬ ಸಹೃದಯಿ, ಸೂಕ್ಷ್ಮ ಮನಸ್ಸಿನ ವ್ಯಕ್ತಿ ಮತ್ತು ನಾಡಿನ ಖ್ಯಾತ ರಂಗಕರ್ಮಿ. ಪತ್ನಿಯ ಮೇಲೆ ಎಂಥ ಅಗಾಧವಾದ ಪ್ರೀತಿಯಿತ್ತೆಂದರೆ, ಆಕೆಗೆ ಕೊಡಿಸಬೇಕಾಗಿದ್ದ ಎಲ್ಲ ಚಿಕಿತ್ಸೆ ಕೊಡಿಸಿದರು. ಉಮಕ್ಕನ ಪ್ರೀತಿಯ ಸೋದರರೆಲ್ಲರೂ ಆಕೆಯ ಮತ್ತು ಆ ಕುಟುಂಬದ ಜೊತೆ ಬೆನ್ನಾಸರೆಯಾಗಿ ನಿಂತರು.
ಆದರೆ ಒಂದು ಹಂತದಲ್ಲಿ ಡಾಕ್ಟರು ಶ್ರೀಕಂಠಯ್ಯನವರನ್ನು ಕರೆಸಿ ಹೇಳಿದರು: “ಆಕೆ ಇನ್ನು ಯಾವ ಚಿಕಿತ್ಸೆಗೂ ಸ್ಪಂದಿಸುವುದಿಲ್ಲ. ಬದುಕಿರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ" ಅಂದು ಕೈ ಚೆಲ್ಲಿದ್ದರು. ಮನೆಗೆ ಪತ್ನಿಯನ್ನು ಕರೆದುಕೊಂಡು ಬಂದ ಶ್ರೀಕಂಠಯ್ಯ ಒಂದು ದಿನ ತುಂಬ ಯೋಚಿಸಿದ್ದಾರೆ. ಗೆಳೆಯರೊಬ್ಬರು, “ನಾಳೆ ಸಿಗೋಣವಾ?" ಅಂತ ಕೇಳಿದ್ದಕ್ಕೆ “ನಾಳೆ ಫಾರಿನ್‌ಗೆ ಹೋಗ್ತೀನಿ" ಅಂದಿದ್ದಾರೆ. ಆನಂತರ ಮೇಲ್ಮಹಡಿಯಲ್ಲಿ ಕುಳಿತೇ ಪತ್ನಿಗೆ ಪತ್ರ ಬರೆದು, ನಡುಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆಯಲ್ಲಿ ಶ್ರೀಕಂಠಯ್ಯ ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದಾರೆ. ಅವತ್ತು ರಾತ್ರಿ ತುಂಬ ಹೊತ್ತು ಉಮಕ್ಕನ ಕೈ ಹಿಡಿದುಕೊಂಡು ಪಕ್ಕದಲ್ಲಿ ಕುಳಿತಿದ್ದೆ. ನಿಮಗೆ ಗೊತ್ತಿರಲಿ, ಉಮಕ್ಕನ ಅಂದರೆ ಶ್ರೀನಗರ ಕಿಟ್ಟಿಯ ಅಕ್ಕನ ಸಾವಂತೂ ನಿರ್ಧಾರಿತವಾಗಿತ್ತು. It was written on the wall ಆದರೆ, “ನಿನ್ನ ನೋವನ್ನು ನೋಡಲು ನನ್ನಿಂದ ಆಗುತ್ತಿಲ್ಲ. ಇಷ್ಟು ವರ್ಷ ಒಟ್ಟಿಗಿದ್ದೇವೆ. ಈಗ ನೀನು ಹೋದ ಮೇಲೆ ನಾನು ಹೇಗೆ ಬದುಕಿರಲಿ?" ಎಂಬ ಸಾಲುಗಳನ್ನು ಬರೆದಿಟ್ಟು ತಮ್ಮನ್ನು ಮುಗಿಸಿಕೊಂಡ ಶ್ರೀಕಂಠಯ್ಯ ಇಡೀ ಕುಟುಂಬಕ್ಕೆ ಎಂಥ ಆಘಾತ ನೀಡಿದ್ದರು! ಕಿಟ್ಟಿಯ ತಾಯಿ ಜಯಮ್ಮನವರಿಗೆ ಒಟ್ಟು ಹತ್ತು ಮಕ್ಕಳು. ಕಿಟ್ಟಿ ಹತ್ತನೆಯವನು. ಅಂಥದರಲ್ಲಿ ಆ ತಾಯಿ ಜಯಮ್ಮ, ಮಗಳ ಸಾವನ್ನು ನಿರೀಕ್ಷಿಸುತ್ತಾ ಕೂಡಬೇಕು. ಅಳಿಯ ನೋಡಿದರೆ ಹೀಗೆ ಕೊನೆಯಾಗಿ ಹೋದ. ಪಕ್ಕದಲ್ಲಿ ಕುಳಿತು ಕೈ ಹಿಡಿದುಕೊಂಡರೆ ಅವತ್ತು ರಾತ್ರಿ ಉಮಕ್ಕನಿಗೆ ಅಳುವ ಶಕ್ತಿಯೂ ಇರಲಿಲ್ಲ. I was depressed for days.

ನಿನ್ನೆ ಕೊನೆಯ ಸುದ್ದಿ ಬಂತು. ಗಂಡ ತೀರಿಕೊಂಡ ನಲವತ್ತನೇ ದಿನಕ್ಕೆ ಸರಿಯಾಗಿ ಉಮಕ್ಕ ತೀರಿಕೊಂಡರು. ಕಣ್ಣೀರು ಬರಲಿಲ್ಲ. ಕೆಲವು ಸಾವುಗಳು ನೋವಿನೊಂದಿಗೆ ಒಂದು ನಿರಾಳ ಭಾವ,relief ಕೊಡುತ್ತವೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books