Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಪ್ಪಿ ತಪ್ಪಿ ಕೂಡ ಯಾರಿಗೂ ಶಾಶ್ವತ ಸರ್ಟಿಫಿಕೇಟ್ ಕೊಡಬೇಡಿ

ಕೆಲವು ಸಂಗತಿಗಳಿರುತ್ತವೆ. ಮುಖ್ಯವಾಗಿ, ನಾವು ಪತ್ರಿಕೋದ್ಯಮಿಗಳು ಕಲಿಯಲೇಬೇಕಾದ ಪಾಠಗಳವು. ಇತ್ತೀಚೆಗೆ ಖ್ಯಾತ ಲೇಖಕ, ಬುಡಕಟ್ಟು ಸಮೂಹದ ನಾಯಕ, ನಾಟಕಕಾರ, ನ್ಯಾಷನಲ್ ಲಾ ಸ್ಕೂಲ್‌ನ ಪ್ರಾಧ್ಯಾಪಕ -ಹೀಗೆ ಏನೆಲ್ಲ ಆಗಿರುವ ಡಾ.ಬಾಲಗುರುಮೂರ್ತಿ ಅವರೊಂದಿಗೆ ಮಾತನಾಡುತ್ತಿದ್ದೆ. ಒಂದು passing referenceನಂತೆ ಮಾತಿನ ಮಧ್ಯೆ “ಯಾರನ್ನಾದರೂ ಒಳ್ಳೆಯವನು ಅನ್ನಬಾರದು ರವೀ. ಅಂದುಬಿಟ್ಟರೆ, ಇವತ್ತು ಒಳ್ಳೆಯವನಾ ಅಂತ ಚೆಕ್ ಮಾಡಿಕೊಳ್ಳಬೇಕಾಗುತ್ತದೆ" ಅಂದರು ಡಾ.ಬಾಲಗುರುಮೂರ್ತಿ.

ಹೌದಲ್ಲಾ ಅಂತ ತುಂಬ ಸಲ ಯೋಚಿಸಿದೆ. ಈ ತಪ್ಪನ್ನು ನಾವು ಅನೇಕ ಸಲ ಮಾಡುತ್ತೇವೆ. ಪತ್ರಿಕೆಯಲ್ಲಿ ಬರೆಯುವಾಗ ಯಾರನ್ನೋ ಮಹಾನ್ ಸಂತ, ಪರಮ ಸಾಧ್ವಿ ಶಿರೋಮಣಿ ಅಂತೆಲ್ಲ ಬರೆದಿರುತ್ತೇವೆ. ಅಂತೆಯೇ ಇನ್ಯಾರನ್ನೋ ಪಾಪಿ, ಪರಮನೀಚ, ಕಳ್ಳ-ಸುಳ್ಳ ಅಂತೆಲ್ಲ ಬರೆದಿರುತ್ತೇವೆ. ಅವರೆಲ್ಲ ನಾಳೆಯೂ, ಮುಂದಿನ ವರ್ಷವೂ, ಹತ್ತು ವರ್ಷಗಳ ನಂತರವೂ ಮಹಾನ್ ಸಂತರಾಗಿ ಅಥವಾ ಪರಮ ನೀಚರಾಗಿ ಉಳಿದಿರುತ್ತಾರಾ? ಯಾಂವ ಬಲ್ಲ? ಚೆಕ್ ಮಾಡಿಕೊಳ್ಳುತ್ತೀವಾ? ಬಹಳ ಸಲ ಅದನ್ನು ಮರೆಯುತ್ತೇವೆ. ಕೆಲವು ಪ್ರಕರಣಗಳಲ್ಲಿ ವ್ಯಕ್ತಿಗಳಲ್ಲಿನ ಪಾಸಿಟಿವ್ ಅಥವಾ ನೆಗೆಟಿವ್ ಬದಲಾವಣೆಗಳಾದಾಗ ಅವನ್ನೂ endorse ಮಾಡಿರುತ್ತೇವೆ.

ಒಂದು ಉದಾಹರಣೆ ನೋಡಿ, ನಾನೇ ಅನೇಕ ಸಲ ಬಾಲಗಂಗಾಧರ ಸ್ವಾಮಿಗಳನ್ನು ಟೀಕೆ ಮಾಡಿದ್ದೆ. ಆದರೆ ನಾನು ಮೂರು ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಆಸ್ಪತ್ರೆ BGS ಆಸ್ಪತ್ರೆಗೆ ಶಸ್ತ್ರ ಕ್ರಿಯೆಗೆ ಅಂತ ಅಡ್ಮಿಟ್ ಆದಾಗ ಡಯಾಲಿಸಿಸ್ ಮಾಡಿಸಿಕೊಳ್ಳಲು ತಮ್ಮ ಆಸ್ಪತ್ರೆಗೆ ಬಂದವರು ನಾನಿದ್ದೇನೆಂದು ಗೊತ್ತಾಗಿ, ತಾವೇ ನನ್ನ ವಾರ್ಡ್‌ಗೆ ನಡೆದು ಬಂದರು. ಮಾತಾಡಿ, ಆರೋಗ್ಯ ವಿಚಾರಿಸಿಕೊಂಡು “ನನ್ನಿಂದ ಮತ್ತೇನಾದರೂ ಆಗಬೇಕಿದೆಯಾ?" ಅಂತ ಕೇಳಿದರು. ಬಹುಶಃ ಪತ್ರಕರ್ತರು ಉಚಿತ ಚಿಕಿತ್ಸೆ, ಬಿಲ್‌ನಲ್ಲಿ ಕನ್ಸೆಷನ್ನು ಇತ್ಯಾದಿಗಳನ್ನು ಕೇಳುತ್ತಾರೆ ಎಂಬ ಅಭಿಪ್ರಾಯವಿರಬೇಕು. “ಈ ಬದುಕು, ನನ್ನ ಓದುಗ ದೊರೆಗಳು ನನಗೆ ಆಗಿ ಮಿಕ್ಕುವಷ್ಟು ಹಣ, ಗೌರವ ಕೊಟ್ಟಿದ್ದಾರೆ. ಅವರಿಗೆ ನಾನು ಅಭಾರಿ. ನಿಮ್ಮ ಪ್ರೀತಿಗೆ ಋಣಿ" ಅಂದೆ. ಸ್ವಾಮೀಜಿ ಒಮ್ಮೆ ನನ್ನ ನೆತ್ತಿ ನೇವರಿಸಿ ಹೊರಟು ಹೋದರು. ನಿಮಗೆ ಗೊತ್ತು. ದೇವರನ್ನೂ, Godmenಗಳನ್ನೂ ನಾನು ನಂಬುವುದಿಲ್ಲ. ಆದರೆ ನೆತ್ತಿ ಸವರಿದ್ದು ಒಬ್ಬ ಹಿರಿಯರು, ಸಹೃದಯಿ. ಅವರ ಪ್ರೀತಿ ನನ್ನನ್ನು ಕರಗಿಸಿತ್ತು.

ಮೊನ್ನೆ ಕೋಮಾಕ್ಕೆ ಹೋಗಿ, ಸಾವಿನೊಂದಿಗೆ ಬಡಿದಾಡಿ ಜೀವಂತ ಎದ್ದು ಬಂದೆನಲ್ಲ? ಅದೂ ಬಾಲಗಂಗಾಧರರ ಕೊಡುಗೆಯೇ. ಆ ಹೊತ್ತಿಗಾಗಲೇ ಅವರು ತೀರಿಕೊಂಡಿದ್ದರು. ಆದರೆ BGSನಲ್ಲಿ ‘Liver Team’ ಎಂಬುದೊಂದನ್ನು ರೂಪಿಸಿದ್ದಾರೆ. ಡಾ.ಕೈಸರ್, ಡಾ.ಸೋನಾಲ್ ಮತ್ತು ಡಾ.ಮಾಥ್ಯೂ ಮುಂತಾದ ಎಕ್ಸ್‌ಪರ್ಟ್‌ಗಳಿರುವ ವೈದ್ಯರ ಟೀಮ್ ಅದು. ಕೋಮಾದಲ್ಲಿದ್ದಾಗ ಅವರು ಪ್ರತಿನಿತ್ಯ ನನ್ನ ಕುಟುಂಬದವರನ್ನು ಕರೆದು ನನ್ನ ದೇಹಸ್ಥಿತಿ ವಿವರಿಸಿ ಕೌನ್ಸಿಲ್ ಮಾಡುತ್ತಿದ್ದರು. ಕೋಮಾದಿಂದ ಚೇತರಿಸಿಕೊಂಡ ಮರುಕ್ಷಣ ಕುಟುಂಬದ ಎಲ್ಲರಿಗೂ ಫೋನ್ ಮಾಡಿ ಹರುಷದ ಸುದ್ದಿ ಹೇಳಿದರು. ಡಾ.ಸೋನಾಲ್ ನಾನು ಎದ್ದು ಕುಳಿತ ಮರುದಿನ ಐ.ಸಿ.ಯುಗೆ ಬಂದು ನೆತ್ತಿ ನೇವರಿಸಿದರು. ಸಾವಿನೊಂದಿಗೆ ಟಕ್ಕರ್ ಕೊಟ್ಟು ಬದುಕಿ ಬಂದಿದ್ದೀಯ... my friend, ನಿನ್ನ ಬದುಕಿನ ರೀತಿ ನೀತಿ ಬದಲಿಸಿಕೋ ಅಂದರು. ಯಾಕೋ ಬಾಲಗಂಗಾಧರ ಸ್ವಾಮಿಗಳ ನೆನಪಾಗಿ ಕಣ್ಣು ಹನಿಗೂಡಿದವು.

ಇದನ್ನೇಕೆ ಬರೆದೆ ಅಂದರೆ, ನಾನು ಆತ್ಮೀಯ ಗೆಳೆಯ-ಗೆಳತಿಯರು ಅಂತ ಅನೇಕರ ಬಗ್ಗೆ ಬರೆದೆ. ಅವರು ವಿನಾಕಾರಣ ನನ್ನ ಮೇಲೆ ಹಗೆ ಸಾಧಿಸಿದರು. ತಪ್ಪು ನನ್ನದೇ. ಅವರ ಒಳ್ಳೆಯತನ ಅಥವಾ ಅವರಲ್ಲಿನ ಬದಲಾವಣೆಗಳನ್ನು ಪ್ರತಿನಿತ್ಯ ಚೆಕ್ ಮಾಡಲಿಲ್ಲ.
ಇದೇ ರೀತಿ ನಾವು ಮನುಷ್ಯರ ಲೈಂಗಿಕ ಜೀವನ ಕಂಡು ಅಥವಾ ಕೇಳಿ, ಅವರ ಒಟ್ಟಾರೆ ವ್ಯಕ್ತಿತ್ವವನ್ನು ಅಳೆದು ಬಿಡುತ್ತೇವೆ. It is definitely wrong. ಒಬ್ಬಾತ ಸಲಿಂಗಿ (homosexual) ಆದರೆ ಅದರಿಂದ ಸಮಾಜಕ್ಕೇನು ನಷ್ಟ? ಒಬ್ಬ ಯುವತಿ ಸಲಿಂಗಿ (lesbian) ಆದರೆ ಅದರಿಂದ ಯಾರಿಗೇನು ತೊಂದರೆ? ಆಯ್ಕೆ, ಅದರ ಸಂತಸ, ಅದರ ಸಂಕಟ ಎಲ್ಲವೂ ಅವರಿಗೆ ಬಿಟ್ಟದ್ದು. ಒಬ್ಬಾತ ರೇಪ್ ಮಾಡಿದರೆ ಅದು ಖಂಡನೀಯ. ಅದು ಅಪರಾಧ. ಆದರೆ ಪರಸ್ಪರ ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಲೈಂಗಿಕ ಸುಖ, ಪರಸ್ಪರ ಸಮ್ಮತಿಯೊಂದಿಗೆ ಹಂಚಿಕೊಂಡರೆ ಅದು ಅಪರಾಧ ಹೇಗಾದೀತು? ಅಫಘನಿಸ್ತಾನ, ಪಾಕಿಸ್ತಾನ ಸೇರಿದಂತೆ ಸಲಿಂಗ ಕಾಮಿಗಳಿಗೆ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಮರಣದಂಡನೆಯಂತಹ ಕ್ರೂರ ಶಿಕ್ಷೆ ನೀಡುತ್ತವೆ. ಮೊನ್ನೆ ಸುಪ್ರೀಂಕೋರ್ಟ್ ಸಲಿಂಗ ರತಿಯ ಬಗ್ಗೆ ನೀಡಿದ ತೀರ್ಪು ಅದರಷ್ಟೇ ಖಂಡನೀಯ. ಅದನ್ನೇ, ಮಕ್ಕಳನ್ನು-ಅಪ್ರಾಪ್ತರನ್ನು ಲೈಂಗಿಕವಾಗಿ ಬಳಸಿಕೊಂಡರೆ ನಿಜಕ್ಕೂ ಅವರಿಗೆ ಜೀವಾವಧಿ ಶಿಕ್ಷೆ ನೀಡಲಿ. ಆದರೆ ಬದುಕಿನಲ್ಲಿ ಬೇಸತ್ತು ಅಥವಾ ನಿಸ್ಸಹಾಯಕರಾಗಿ ಅಥವಾ ಮಾನಸಿಕ ರೋಗಗಳಿಂದಾಗಿ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದರೆ ಅವರಿಗೆ ಕೌನ್ಸೆಲಿಂಗ್ ಮಾಡಿಸಬೇಕು. ಆದರೆ ನಮ್ಮ ಕಾನೂನು ಅವರನ್ನು ಶಿಕ್ಷಿಸಲು ಯತ್ನಿಸುತ್ತದೆ. ಯಾವ ನ್ಯಾಯ?

ಊಟ ತನ್ನಿಚ್ಛೆ, ಉಡುಗೆ ಪರರಿಚ್ಛೆ ಅನ್ನುತ್ತಾರೆ. ನಮಗೆ ಚಿತ್ರಾನ್ನ ಇಷ್ಟ. ಇನ್ನೊಬ್ಬರಿಗೆ ಬಿರಿಯಾನಿ ಇಷ್ಟ. What is wrong. ಉಡುಗೆ ಎಂಬುದು ಕೇವಲ ಅಲಂಕಾರಿಕವಲ್ಲ: ಅದು ಮೈ ಮುಚ್ಚುವ, ಸಭ್ಯತೆ ಕಾಪಾಡಿಕೊಳ್ಳುವ ಸಂಗತಿ. ಆದರೆ ದಿಲ್ಲಿಯಲ್ಲಿ ಒಂದು ಭಯಾನಕ ಸಾಮೂಹಿಕ ಮಾನಭಂಗ ನಡೆದಾಗ “ರೇಪ್ ಮಾಡಿದವರಷ್ಟೇ ಅಲ್ಲ ಮಾಡಿಸಿಕೊಂಡವಳೂ ತಪ್ಪಿತಸ್ಥಳೇ. ಅವಳು ಆ ಕಾಮಾತುರರನ್ನು ‘ಅಣ್ಣಂದಿರೇ’ ಅಂದು ಬಿಡಬೇಕಾಗಿತ್ತು" ಎಂದು ಸಂತ (?) ಬಾಪು ಅಸಾರಾಂ ಹೇಳಿಕೆ ನೀಡಿದ. What nonsense? ಅವನೇ ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಮಾನಭಂಗ ಪ್ರಕರಣದ ಪ್ರಥಮ ಆರೋಪಿಯಾಗಿ ಜೈಲಿನಲ್ಲಿದ್ದಾನೆ, ತನ್ನ ಮಗನೊಂದಿಗೆ. ಅವನನ್ನು ‘ಬಾಪೂ’ (ತಂದೆ) ಎಂದು ಕರೆದ ಭಕ್ತೆಯರೇ ಅವನಿಂದ ರೇಪ್‌ಗೆ ಒಳಗಾಗಿದ್ದಾರೆ.

ಹಿರಿಯ ಪತ್ರಕರ್ತ ‘ವೈಎನ್ಕೆ’ ಅವರು ಸಲಿಂಗಿ ಎಂಬ ಗುಸುಗುಸು ಅನೇಕ ವರ್ಷಗಳಿಂದ ಇತ್ತು. ಕಡೆ ಕಡೆಯ ವರ್ಷಗಳಲ್ಲಿ, ಈಗ ಕೊಳಕು ಪತ್ರಿಕೋದ್ಯಮ-ಟೀವಿ ಪ್ರಪಂಚದ ಇನ್ನೊಂದು ರೀತಿಯ ಕೊಳಕು ಮಾಡಿ ಪತ್ರಿಕೋದ್ಯಮದ ಮ್ಯಾಪ್‌ನಲ್ಲೇ ಇಲ್ಲದಂತಾಗಿರುವ ಭಶ್ವೇಶ್ವರ ವಿಠ್ಠನೆಂಬುವವನೊಂದಿಗೂ ಅವರಿಗೆ ಆ ನಂಟಿತ್ತು. ಅವರನ್ನು ಕೆಲವು ಗೆಳೆಯರು Y.N.Gay (Gay ಅಂದರೆ ಸಲಿಂಗಿ) ಅಂತ ತಮಾಷೆ ಮಾಡುತ್ತಿದ್ದರು. ಇವತ್ತಿಗೆ ನಮಗೆ ನೆನಪಿರುವುದು ವೈ.ಎನ್ಕೆ ಅವರ ಬರಹ, ಅವರ ಪನ್ ಮತ್ತು ಅವರ ternd settingಗಳೇ ಹೊರತು ಅವರ ಲೈಂಗಿಕ ಆಸಕ್ತಿಗಳಲ್ಲ.

ಹೀಗಿರುವಾಗ, ಒಬ್ಬ ಮನುಷ್ಯನನ್ನು ಆ ಕ್ಷಣಕ್ಕೆ ಅವನು ಮಾಡಿದ ಕೆಲಸಕ್ಕೆ ಅವನನ್ನು ಒಳ್ಳೆಯವನು ಅಥವಾ ಕೆಟ್ಟವನು ಎಂದು ನಿರ್ಧರಿಸಬೇಕೇ ಹೊರತು ಕಾರುಗಳಿಗೆ life time road tax ಕಟ್ಟಿದ ಹಾಗೆ ಶಾಶ್ವತ ಸರ್ಟಿಫಿಕೇಟ್ ಕೊಟ್ಟು ಬಿಡಬಾರದು.
ಏನಂತೀರಿ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books