Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಭಯ ಬಿದ್ದ ಸಿದ್ದುಗೀಗ ಅಹಿಂದ ಆಸರೆಯೇ?

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಗದ್ದುಗೆಯಿಂದ ಕೆಳಗಿಳಿಯುವ ಆತಂಕ ಎದುರಾಗಿದೆ. ಹೀಗಾಗಿಯೇ ಅವರೀಗ ಮತ್ತೆ ಅಹಿಂದ ಸಮಾವೇಶಗಳಿಗೆ ಚಾಲನೆ ನೀಡುವ ಮುನ್ಸೂಚನೆ ನೀಡಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಮಾವೇಶ ಇದಕ್ಕೆ ಒಂದು ನಿದರ್ಶನ ಅಷ್ಟೇ. ಮುಂದಿನ ದಿನಗಳಲ್ಲಿ ಇಂತಹ ಸಮಾವೇಶಗಳು ಇನ್ನಷ್ಟು ನಡೆಯಲಿವೆ. ಇಲ್ಲಿ ಗಮನಿಸಲೇಬೇಕಾದ ಸಂಗತಿ ಎಂದರೆ ಈ ಸಮಾವೇಶಗಳು ಕಾಂಗ್ರೆಸ್ ಪಕ್ಷದ ಬಲ ಸಂವರ್ಧನೆ ಮಾಡುವುದಕ್ಕಿಂತ ಹೆಚ್ಚಾಗಿ ಸಿದ್ಧರಾಮಯ್ಯನವರ ಬಲ ಸಂವರ್ಧನೆಗಾಗಿ ನಡೆಯಲಿವೆ ಎಂಬುದು.

ಈ ಹಿಂದೆ ರಾಜ್ಯದಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೂ ಸಿದ್ಧರಾಮಯ್ಯ ಅಹಿಂದ ಸಮಾವೇಶಗಳ ಮೊರೆ ಹೋಗಿದ್ದರು. ಆಗಿನ ಸನ್ನಿವೇಶ ಬೇರೆಯಾಗಿತ್ತು. ಧರ್ಮಸಿಂಗ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅವರಿಗೆ ಜೆಡಿಎಸ್‌ನಲ್ಲೇ ಪರಕೀಯತೆ ಕಾಡತೊಡಗಿತ್ತು. ಪಕ್ಷದ ಸಮಾವೇಶಗಳಿಗೆ ಅಂತ ಹೋದರೆ ಅಲ್ಲಿ ದೇವೆಗೌಡರ ಮಗ ಕುಮಾರಸ್ವಾಮಿಯವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿತ್ತು. ಪಕ್ಷದ ಕಾರ್ಯಕರ್ತರು ಸಿದ್ಧರಾಮಯ್ಯನವರಿಗೆ ಕೊಡುವುದಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಕುಮಾರಸ್ವಾಮಿಯವರಿಗೆ ಕೊಡುತ್ತಿದ್ದರು. ಭವಿಷ್ಯದಲ್ಲಿ ಇದು ತಮ್ಮನ್ನು ಕೆಳಗಿಳಿಸುವ, ಮೂಲೆಗುಂಪು ಮಾಡುವ ತಂತ್ರ ಎಂಬುದನ್ನು ಅರ್ಥ ಮಾಡಿಕೊಂಡ ಸಿದ್ಧರಾಮಯ್ಯ ತಕ್ಷಣವೇ ಅಹಿಂದ ವರ್ಗಗಳ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾದರು. ಆ ಸಂದರ್ಭದಲ್ಲಿ ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಹಿಂದ ಸಮಾವೇಶಗಳು ಅದ್ದೂರಿಯಾಗಿಯೇ ನಡೆದವು.

ಅಷ್ಟೇ ಅಲ್ಲ, ಆ ಮೂಲಕ ಸಿದ್ಧರಾಮಯ್ಯ ತಮ್ಮ ಮುಂದಿನ ಗುರಿಗೆ ದಾರಿ ತಯಾರು ಮಾಡಿಕೊಳ್ಳುತ್ತಿದ್ದಾರೆ ಎಂಬ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿತು. ಯಾವಾಗ ಸಿದ್ಧರಾಮಯ್ಯ ಅಹಿಂದ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಈ ಸಮಾವೇಶಗಳಲ್ಲಿ ಹೇಳತೊಡಗಿದರೋ ಇದು ಸಹಜವಾಗಿಯೇ ಮಾಜಿ ಪ್ರಧಾನಿ ದೇವೆಗೌಡರ ಅಸಮಾಧಾನಕ್ಕೆ ಕಾರಣವಾಯಿತು. ಹಾಗಂತಲೇ ಅವರು ಸಿದ್ಧರಾಮಯ್ಯನವರನ್ನು ಕರೆಸಿ ಚರ್ಚಿಸಿದರು. ಅಹಿಂದ ಸಮಾವೇಶಗಳನ್ನು ನಡೆಸುವುದು ಸರಿಯಲ್ಲ ಎಂದರು. ಇರುವ ಸರ್ಕಾರವೇ ನಮ್ಮದು. ಹೀಗಿರುವಾಗ ಅಹಿಂದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೂಗಾಡಿದರೆ ಜನರಿಗೆ ರವಾನೆಯಾಗುವ ಸಂದೇಶವೇನು? ಸಿದ್ಧರಾಮಯ್ಯನವರಿಗೆ ನಾವು ಅನ್ಯಾಯ ಮಾಡುತ್ತಿದ್ದೇವೆ ಎಂದಲ್ಲವೇ? ನಾವು ನಿಮಗೇನೂ ಅನ್ಯಾಯ ಮಾಡುವುದಿಲ್ಲ ಎಂದು ದೇವೆಗೌಡರು ಪರಿ ಪರಿಯಾಗಿ ಹೇಳಿದರು. ಆದರೆ ಅಷ್ಟೊತ್ತಿಗಾಗಲೇ ದೇವೆಗೌಡರ ದಾರಿ ಏನು? ಅನ್ನುವುದಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿಯವರ ಗುರಿಯೇನು? ಅನ್ನುವುದು ನಿಕ್ಕಿಯಾಗಿತ್ತು. ಧರ್ಮಸಿಂಗ್ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಉರುಳಿಸಿ ಬಿಜೆಪಿ ಜತೆ ಕೈ ಜೋಡಿಸುವ ಕುಮಾರಸ್ವಾಮಿಯ ಇಂಗಿತಕ್ಕೆ ಆಗಲೇ ನಿದರ್ಶನಗಳು ದೊರೆಯತೊಡಗಿದ್ದವು.

ಹೀಗಾಗಿ ಇನ್ನು ಜೆಡಿಎಸ್‌ನಲ್ಲಿದ್ದರೆ, ಇದ್ದರೂ ಜೀ ಹುಜೂರ್ ಅನ್ನುವಂತೆ ನಡೆದುಕೊಂಡರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಇತಿಶ್ರೀ ಹಾಡಿದಂತೆ ಎಂಬುದು ಸಿದ್ಧರಾಮಯ್ಯನವರಿಗೆ ಮನವರಿಕೆಯಾಗಿತ್ತು. ಹೀಗಾಗಿ ಅವರು ತಾವಾಗಿ ಬರಸೆಳೆದು ಅಪ್ಪಿಕೊಂಡ ಅಹಿಂದ ಅಸ್ತ್ರವನ್ನು ಕೈ ಬಿಡಲು ಒಪ್ಪಲಿಲ್ಲ. ಪರಿಣಾಮವಾಗಿ ಸಿದ್ಧರಾಮಯ್ಯನವರನ್ನು ಉಪಮುಖ್ಯಮಂತ್ರಿ ಹುದ್ದೆಯಿಂದ ಜೆಡಿಎಸ್ ಕೆಳಗಿಳಿಸಿತು. ಇದಾದ ನಂತರದ ದಿನಗಳಲ್ಲಿ ಏನು ನಡೆಯಿತು ಅನ್ನುವುದೀಗ ಇತಿಹಾಸ. ಒಂದರ ಹಿಂದೆ ಒಂದರಂತೆ ಅಹಿಂದ ಸಮಾವೇಶಗಳನ್ನು ನಡೆಸುತ್ತಾ ಹೋದ ಸಿದ್ಧರಾಮಯ್ಯ ಒಂದು ಮಟ್ಟಕ್ಕೆ ಶೋಷಿತ ವರ್ಗಗಳ ಚಾಂಪಿಯನ್ ಎಂಬ ಪಟ್ಟ ಧರಿಸಿಕೊಂಡಿದ್ದು ಕೂಡ ನಿಜ. ಆದರೆ ತಮಗೆ ಇಂತಹ ಪಟ್ಟ ನೀಡಿದ ಅಹಿಂದ ಸಮಾವೇಶಗಳನ್ನು ತುಂಬ ಕಾಲ ಮುನ್ನಡೆಸಿಕೊಂಡು ಹೋಗುವುದು ಸಿದ್ಧರಾಮಯ್ಯನವರಿಗೂ ಕಷ್ಟವಾಗಿತ್ತು. ಯಾಕೆಂದರೆ ಇವತ್ತಿನ ಸನ್ನಿವೇಶದಲ್ಲಿ ಯಾವುದೇ ಶಕ್ತಿ ಪ್ರದರ್ಶನ ನಡೆಸಬೇಕೆಂದರೂ ಸಂಪನ್ಮೂಲದ ಅಗತ್ಯ ಹೆಚ್ಚು. ಇಂತಹ ಸಂಪನ್ಮೂಲವನ್ನು ತುಂಬ ದಿನಗಳ ಕಾಲ ಹೂಡಲು ಅವರ ಜತೆಯಲ್ಲಿದ್ದವರು ಅಥವಾ ಬೆಂಬಲಕ್ಕೆ ನಿಂತಿದ್ದವರು ತಯಾರಿರಲಿಲ್ಲ.

ಇಂತಹ ಸಂದರ್ಭದಲ್ಲೇ ಅವರನ್ನು ಕಾಂಗ್ರೆಸ್ ಕಡೆ ಸೆಳೆದುಕೊಂಡು ಹೋದವರು ಹಿರಿಯ ನಾಯಕರಾದ ಎಚ್.ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣ. ಹೀಗೆ ಅಹಿಂದ ವೇದಿಕೆಯಿಂದ ಕಾಂಗ್ರೆಸ್ ಪಾಳಯಕ್ಕೆ ಜಿಗಿದ ಸಿದ್ಧರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಷ್ಟೊಂದು ಜಿದ್ದಾಜಿದ್ದಿನಿಂದ ನಡೆದ ಉಪಚುನಾವಣೆ ಬಹುಶಃ ಯಾವುದೂ ಇರಲಿಲ್ಲ. ಸಿದ್ಧರಾಮಯ್ಯನವರನ್ನು ಸೋಲಿಸಿ, ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ಒಂದು ಮಗ್ಗುಲಲ್ಲಿ ಬಿಜೆಪಿಯನ್ನು ಮತ್ತೊಂದು ಮಗ್ಗುಲಲ್ಲಿ ಹಣ ಬಲ, ಜಾತಿ ಬಲವನ್ನು ಇಟ್ಟುಕೊಂಡು ಹೋರಾಡಿದರು. ಅದೇನೇ ಮಾಡಿದರೂ ಫೈನಲಿ ಗೆದ್ದಿದ್ದು ಸಿದ್ಧರಾಮಯ್ಯ. ಇಷ್ಟಾದ ನಂತರ ಅವರು ತಿರುಗಿ ನೋಡುವ ಪ್ರಮೇಯ ಬರಲಿಲ್ಲ. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೋದ ನಂತರ ಪ್ರತಿಪಕ್ಷದ ನಾಯಕರಾಗುವ ಅವಕಾಶ ಅವರಿಗೆ ದೊರೆಯಿತು. ನಿಜ ಹೇಳಬೇಕೆಂದರೆ ಈ ಹುದ್ದೆಯನ್ನು ಅವರು ಪಟ್ಟು ಹಿಡಿದೇ ದಕ್ಕಿಸಿಕೊಂಡಿದ್ದರು. ಅಲ್ಲಿಗೆ ಅಹಿಂದ ವರ್ಗಗಳ ಶಕ್ತಿಯನ್ನು ತಮ್ಮ ನಾಯಕತ್ವಕ್ಕೆ ಗೊಬ್ಬರವನ್ನಾಗಿ ಬಳಸಿಕೊಳ್ಳುವಲ್ಲಿ ಒಂದು ಮಟ್ಟದ ಯಶಸ್ಸು ಕಂಡ ಸಿದ್ಧರಾಮಯ್ಯ ಇದರ ಪರಿಪೂರ್ಣ ಯಶಸ್ಸು ಕಂಡಿದ್ದು ಕಳೆದ ವಿಧಾನಸಭಾ ಚುನಾವಣೆಯ ನಂತರ.

ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ದಲಿತ ನಾಯಕರಾದ ಖರ್ಗೆ, ಪರಮೇಶ್ವರ್ ನಿಂತಿದ್ದರಾದರೂ, ನೇರ ಪೈಪೋಟಿಯಲ್ಲಿದ್ದುದು ಪರಮೇಶ್ವರ್ ಅವರೇ ಎಂಬುದು ನಿಸ್ಸಂದೇಹ. ಯಾಕೆಂದರೆ ಆ ಹೊತ್ತಿಗಾಗಲೇ ಖರ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಿಲ್ಲಿಯಿಂದ ನೇರವಾಗಿ ಅವರನ್ನು ಕರೆತಂದು ಸಿಎಂ ಗದ್ದುಗೆಯ ಮೇಲೆ ಕೂರಿಸಲು ಹೈಕಮಾಂಡ್ ಮನಃಪೂರ್ವಕವಾಗಿ ಬಯಸಿತ್ತು ಎಂದು ಹೇಳುವುದು ಕಷ್ಟ. ಆ ದೃಷ್ಟಿಯಿಂದ ನೋಡಿದರೆ ಸಿದ್ಧರಾಮಯ್ಯನವರಿಗೆ ಪೈಪೋಟಿ ಅಂತಿದ್ದುದು ಪರಮೇಶ್ವರ್ ಅವರಿಂದ ಮಾತ್ರ. ಆದರೆ ಪರಮೇಶ್ವರ್ ಚುನಾವಣೆಯಲ್ಲಿ ಸೋತರು. ಯಾವ ಕಾರಣಕ್ಕಾಗಿ ಅವರು ಸೋತರು? ಯಾರ‍್ಯಾರು ಸೇರಿ ಅವರ ಸೋಲಿಗಾಗಿ ಚಕ್ರವ್ಯೂಹ ರಚಿಸಿದರು? ಎಂಬುದೆಲ್ಲ ರಹಸ್ಯದ ವಿಷಯವೇನಲ್ಲ. ಹೀಗೆ ತಮ್ಮ ವಿರುದ್ಧ ರೂಪಿಸಲಾದ ಚಕ್ರವ್ಯೂಹ ಮತ್ತು ಆ ಚಕ್ರವ್ಯೂಹಕ್ಕೆ ಸಿಕ್ಕು ತಾವು ಬಲಿಯಾದ ಸನ್ನಿವೇಶ ಈಗ ಸಹಜವಾಗಿಯೇ ಪರಮೇಶ್ವರ್ ಅವರನ್ನು ಕಾಡುತ್ತಿವೆ.

ಒಂದು ಸಲ ಸಿಎಂ ಹುದ್ದೆಯ ಮೇಲೆ ಕುಳಿತ ಕೂಡಲೇ ಸಿದ್ಧರಾಮಯ್ಯ ಒಂದಷ್ಟು ಹೊಂದಾಣಿಕೆಯ ರಾಜಕೀಯ ಮಾಡಿದ್ದರೆ, ಪರಮೇಶ್ವರ್ ಅವರನ್ನು ಡಿಸಿಎಂ ಹುದ್ದೆಯ ಮೇಲೆ ಕೂರಿಸಬೇಕು ಎಂಬ ಪ್ರಸ್ತಾಪಕ್ಕೆ ಬೆಂಬಲ ನೀಡಿದ್ದರೆ ಆಟಕ್ಕೆ ಬೇರೆಯೇ ತಿರುವು ಸಿಗುತ್ತಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ತಮಗೆ ಪರ್ಯಾಯವಾದ ಶಕ್ತಿ ಕೇಂದ್ರವೊಂದು ತಲೆ ಎತ್ತಲೇಬಾರದು ಎಂಬ ಹಟಕ್ಕೆ ಬಿದ್ದ ಸಿದ್ಧರಾಮಯ್ಯ ಇದಕ್ಕೆ ಅವಕಾಶ ಕೊಡಲೇ ಇಲ್ಲ. ಈ ಅಂಶ ಸಹಜವಾಗಿಯೇ ಪರಮೇಶ್ವರ್ ಅವರನ್ನು ಕೆರಳಿಸಿದೆ. ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಸಮಾವೇಶದಲ್ಲಿ ಅದನ್ನವರು ಬಹಿರಂಗವಾಗಿ ವ್ಯಕ್ತಪಡಿಸಿದರು ಕೂಡ. ಹೀಗೆ ಪರಮೇಶ್ವರ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡ ಬೆಳವಣಿಗೆ ಸಣ್ಣದೇನಲ್ಲ. ಕಾಂಗ್ರೆಸ್‌ನಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಮೆಸೇಜು ಇದರಿಂದ ರವಾನೆ ಆಗಿದೆ. ಇದು ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೇರ ಹೊಡೆತ ಕೊಡಲಿದೆ ಎಂಬುದು ನಿಸ್ಸಂದೇಹ.

ಅಂದ ಹಾಗೆ ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ದಲಿತ ಸಮುದಾಯದ ಗಣನೀಯ ಪ್ರಮಾಣದ ಮತಗಳಿವೆ ಎಂಬುದು ರಹಸ್ಯವೇನಲ್ಲ. ಕನಿಷ್ಠ ಎರಡೂವರೆಯಿಂದ ಮೂರು ಲಕ್ಷದಷ್ಟು ದಲಿತ ಮತದಾರರು ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಪರಮೇಶ್ವರ್ ವ್ಯಕ್ತಪಡಿಸಿದ ಅಸಮಾಧಾನ ಎಂಬ ಬತ್ತಿಗೆ ಸಣ್ಣದೊಂದು ಬೆಂಕಿ ಕಡ್ಡಿ ಗೀರಿದರೂ ಸಾಕು. ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸುತ್ತದೆ. ಹಾಗೇನಾದರೂ ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತು ಸೀಟುಗಳನ್ನು ಗೆಲ್ಲುವ ಕಾಂಗ್ರೆಸ್‌ನ ಕನಸು ಈಡೇರಲು ಸಾಧ್ಯವೇ ಇಲ್ಲ. ಈ ಸಂಖ್ಯೆ ಹತ್ತಕ್ಕಿಂತ ಕಡಿಮೆಯಾದರೆ ಸಹಜವಾಗಿಯೇ ತಮ್ಮ ಕುರ್ಚಿ ಅಲುಗಾಡುತ್ತದೆ ಎಂಬುದು ಸಿದ್ಧರಾಮಯ್ಯನವರಿಗೆ ಗೊತ್ತು. ತಮ್ಮ ಕುರ್ಚಿ ಅಲುಗಾಡಿಸಲು ಪಕ್ಷದಲ್ಲಿರುವ ಹಲವು ಶಕ್ತಿಗಳು ಯತ್ನಿಸುತ್ತಿವೆ ಎಂಬುದೂ ಗೊತ್ತು. ಹೀಗಾಗಿ ಅವರೀಗ ಮತ್ತೆ ಅಹಿಂದ ವರ್ಗಗಳ ಮೊರೆ ಹೋಗುವ ಯತ್ನಕ್ಕಿಳಿದಿದ್ದಾರೆ. ಆಂಜನೇಯ ಅವರಂತಹ ದಲಿತ ನಾಯಕರನ್ನು ಮುಂದಿಟ್ಟುಕೊಂಡು ಅವರು ರಣಾಂಗಣಕ್ಕಿಳಿದಿರುವ ರೀತಿ ನೋಡಿದರೆ ಪರಮೇಶ್ವರ್ ಅವರಂತಹ ನಾಯಕರನ್ನು ಕಂಗೆಡಿಸುವ ಉದ್ದೇಶ ಇರುವುದು ಸ್ಪಷ್ಟವಾಗುತ್ತದೆ. ಹೀಗೆ ಮಾಡುವ ಮೂಲಕ ಪರಮೇಶ್ವರ್ ಅವರನ್ನು ಅಲುಗಾಡಿಸುವುದು ಕಷ್ಟ. ಆದರೆ ದಲಿತ ಸಮುದಾಯದಲ್ಲಿ ಒಂದು ರೀತಿಯ ಗೊಂದಲವನ್ನಂತೂ ಮೂಡಿಸಬಹುದು ಅಂತ ಸಿದ್ಧರಾಮಯ್ಯನವರ ಗ್ಯಾಂಗು ಭಾವಿಸಿದಂತಿದೆ.

ಆದರೆ ದಲಿತ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಸಂದೇಶ ರವಾನೆಯಾಗಿದೆ ಮತ್ತು ಆ ಸಮುದಾಯ ಇದಕ್ಕಾಗಿ ಅಸಮಾಧಾನಗೊಂಡಿದೆ ಎಂಬುದು ಸುಳ್ಳಂತೂ ಅಲ್ಲ. ಆಂಜನೇಯ ಅವರಂತಹವರನ್ನು ಮುಂದಿಟ್ಟುಕೊಂಡು ತಾವು ದಲಿತ ಪರ ನಾಯಕ ಎಂದು ಪ್ರತಿಬಿಂಬಿಸಿಕೊಳ್ಳುವ ಸಿದ್ಧರಾಮಯ್ಯನವರ ಉದ್ದೇಶ ಈಡೇರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ದಲಿತ ಸಮುದಾಯ ಬಯಸುತ್ತಿದ್ದುದು ಮುಖ್ಯಮಂತ್ರಿ ಹುದ್ದೆ. ಆದರೆ ಪರಮೇಶ್ವರ್ ಅವರ ಸೋಲಿನಿಂದಾಗಿ ಈ ನಿರೀಕ್ಷೆ ಉಪಮುಖ್ಯಮಂತ್ರಿ ಹುದ್ದೆಗೆ ಸೀಮಿತವಾಯಿತು. ಆದರೆ ಈ ನಿರೀಕ್ಷೆಯೂ ಈಡೇರುತ್ತಿಲ್ಲ ಎಂದಾದಾಗ ದಲಿತ ಸಮುದಾಯ ಸಹಜವಾಗಿಯೇ ಕೆರಳುತ್ತದೆ. ಇದನ್ನು ಊಹಿಸಿರುವ ಸಿದ್ಧರಾಮಯ್ಯ ಅಹಿಂದ ವರ್ಗಗಳ ವಿಶ್ವಾಸ ಪಡೆಯಲು ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ದೇವೆಗೌಡ ಅಂಡ್ ಫ್ಯಾಮಿಲಿಯ ಹಿಡಿತದಲ್ಲಿದ್ದ ಜೆಡಿಎಸ್‌ನಲ್ಲಿದ್ದಾಗ ಇಂತಹ ರಣತಂತ್ರ ಸಫಲವಾಗಿದ್ದಕ್ಕೆ ಅದರದೇ ಆದ ಕಾರಣಗಳಿದ್ದವು. ಆದರೆ ಈಗ ಕರ್ನಾಟಕದಲ್ಲಿ ಇರುವುದೇ ಕಾಂಗ್ರೆಸ್ ಸರ್ಕಾರ. ಅದರಲ್ಲೂ ಮುಖ್ಯವಾಗಿ ಸಿದ್ಧರಾಮಯ್ಯನವರ ನೇತೃತ್ವದ್ದೇ ಸರ್ಕಾರ. ಹೀಗಿರುವಾಗ ಅವರು ಅಹಿಂದ ಸಮಾವೇಶಗಳನ್ನು ನಡೆಸುತ್ತಾ, ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ತಮ್ಮ ಪಕ್ಷದ ನಾಯಕರನ್ನೇ ಗದುಮಬೇಕೆಂಬ ಉದ್ದೇಶವಿಟ್ಟುಕೊಂಡರೆ ಅದು ಸಫಲವಾಗುವುದು ಕಷ್ಟ.

ಅಂದ ಹಾಗೆ ಅಹಿಂದ ವರ್ಗಗಳಿಗೆ ಶಕ್ತಿ ತುಂಬುವ ಮತ್ತು ಆ ವರ್ಗಗಳನ್ನು ಮತ್ತಷ್ಟು ಗಟ್ಟಿಯಾದ ಮತಬ್ಯಾಂಕ್ ಅನ್ನಾಗಿ ರೂಪಿಸಿಕೊಳ್ಳುವ ಉದ್ದೇಶವೇ ಮುಖ್ಯವಾಗಿದ್ದರೆ ಅದು ಬೇರೆ ಮಾತು. ಆದರೆ ಒಂದು ಕಡೆಯಿಂದ ಅಲ್ಪಸಂಖ್ಯಾತ ನಾಯಕರನ್ನು ಗದುಮುತ್ತಾ, ಮತ್ತೊಂದು ಕಡೆಯಿಂದ ದಲಿತ ನಾಯಕರನ್ನು ಅದುಮುತ್ತಾ ತಲೆ ಎತ್ತಲು ಯತ್ನಿಸುತ್ತಿರುವ ಸಿದ್ಧರಾಮಯ್ಯನವರ ಯತ್ನಕ್ಕೆ ಯಶಸ್ಸು ಸಿಗುವುದು ಕಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕುಳಿತ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅವರು ಹೆಜ್ಜೆ ಇಟ್ಟಿದ್ದರೆ, ಅಹಿಂದ ವರ್ಗಗಳ ಸಮಾವೇಶ ನಡೆಸಿದ್ದರೆ ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ಜಾಸ್ತಿ ಆಗುತ್ತಿತ್ತು. ಸಿದ್ಧರಾಮಯ್ಯನವರ ಕುರ್ಚಿ ಮತ್ತಷ್ಟು ಗಟ್ಟಿಯಾಗುತ್ತಿತ್ತು. ಆದರೆ ತಾವು ಕುಳಿತ ಕುರ್ಚಿಯ ಕೆಳಗಿನ ಜಾಗ ದಿನದಿಂದ ದಿನಕ್ಕೆ ದುರ್ಬಲವಾಗುವಂತೆ ನೋಡಿಕೊಳ್ಳುತ್ತಾ, ಮತ್ತೊಂದು ಕಡೆಯಿಂದ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿರುವ ಸಿದ್ಧರಾಮಯ್ಯ ತಾವೇ ತಾವಾಗಿ ಒಂದು ವಿಚಿತ್ರ ಸುಳಿಯಲ್ಲಿ ಸಿಲುಕಿದಂತೆ ಕಾಣುತ್ತಿದ್ದಾರೆ. ಅದೇ ಸದ್ಯದ ವಿಶೇಷ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books