Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂಥದ್ದೊಂದು ಬೀಗ ಯಾರಾದರೂ ಮಾಡಿದ್ದಾರಾ, ಹೇಳಿ?

ಟೇಬಲ್ಲಿನ ಮೇಲಿದ್ದ ಬೀಗ-ಬೀಗದ ಕೈಯನ್ನೇ ದಿಟ್ಟಿಸಿದೆ. ಅಗೋಚರ ಮನುಷ್ಯನೊಬ್ಬ ಕೇವಲ ತನ್ನ ಕೈಯನ್ನು ಕೊಳವೊಂದರಲ್ಲಿ ಅದ್ದಿ ಕುಳಿತಿದ್ದಾನೇನೋ ಅನ್ನಿಸುವಂತಹ ಭಾವ. ಪ್ರತೀ ಸಲ ಬೀಗ-ಬೀಗದ ಕೈ ನೋಡಿದಾಗಲೂ ನನಗೆ ಹಾಗೇ ಅನ್ನಿಸುತ್ತದೆ. ನಾನೂ ನಾನಾ ತರಹದ ಬೀಗ-ಬೀಗದ ಕೈಗಳನ್ನು ನೋಡಿದ್ದೇನೆ. ಕೆಲವರಿಗೆ ಅವುಗಳನ್ನು ಕಲೆಕ್ಟ್ ಮಾಡುವ ರೂಢಿಯಿರುತ್ತದೆ. ಕೆಲವರಿಗೆ ಅದನ್ನು ರಿಪೇರಿ ಮಾಡುವ ಚಟ. ನನಗೆ ಬೀಗಗಳ ಬಗ್ಗೆ ಹೆಚ್ಚಿನದೇನೂ ಅರ್ಥವಾಗುವುದಿಲ್ಲ. ಅವುಗಳ ಮೇಲೆ ಬರೆದಿರುತ್ತದಾದ್ದರಿಂದ ಒಳಗೆ ಆರೋ-ಎಂಟೋ ಲಿವರುಗಳಿರುತ್ತವೆ ಎಂಬುದು ಗ್ರಹಿಕೆಗೆ ಬಂದಿದೆ. ಅಷ್ಟು ಬಿಟ್ಟರೆ ಬೀಗವೆಂಬುದು ಮನೆಯಿಂದ ಹೊರಡುವಾಗ, ಬೀಗದ ಕೈಯೆಂಬುದು ಮನೆಗೆ ಹಿಂತಿರುಗಿದಾಗ ನೆನಪಾಗುವಂಥ ಎರಡು ನಿರ್ಜೀವ ವಸ್ತುಗಳಷ್ಟೆ. ಯಾರ ಮನೆಗಾದರೂ ಹೋದಾಗ ಬಾಗಿಲಿಗೆ ಬೀಗ ಹಾಕಿದ್ದರೆ, ಅವರು ಮನೆಯಲ್ಲಿಲ್ಲ ಎಂದು ಪರಿಗಣಿಸುವಂತಹ ಸೀದಾ ಸಾದಾ ಭೋಳೆತನ. ಅವರು ಮನೆಯೊಳಗೆ ಹೆಂಡತಿಯನ್ನು ಕೂಡಿ ಹಾಕಿ ಹೋಗಿರಬಹುದೆಂದು ಸುಳ್ಳೇ ಯಾಕಾದರೂ ಅಂದುಕೊಳ್ಳಬೇಕು? ಬೀಗ ಹಾಕಿದ ಮನೆಯ ಕಿಟಕಿಯಲ್ಲಿ ಅವರ ಹೆಂಡತಿ ಕಾಣಿಸಿದರೆ ಆ ಮಾತು ಬೇರೆ. ಆಗಲೂ ಅಷ್ಟೆ: ಮರೆತು ಬೀಗ ಹಾಕಿಕೊಂಡು ಹೋಗಿರಬಹುದು ಎಂಬ ಬೆನಿಫಿಟ್ ಆಫ್ ಡೌಟ್ ಗಂಡನಿಗೆ ಸಿಗುತ್ತದೆ. ಅಕಸ್ಮಾತ್ ಗಂಡನೇ ಕಿಟಕಿಯಲ್ಲಿ ಕಾಣಿಸಿದನೆಂದಿಟ್ಟುಕೊಳ್ಳಿ: ಅಲ್ಲೇ ಮಗ್ಗುಲಿಗೆ ನಿಂತು ಯೋಗಕ್ಷೇಮ ವಿಚಾರಿಸಿಕೊಂಡು ಬಂದುಬಿಡಬಹುದು. ಅಥವಾ ಆತನೊಂದಿಗೆ ಮಾತನಾಡಿದ ಮೇಲೆ, ಹೆಂಡತಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾಳೆ ಎಂಬ ನಿರ್ಣಯಕ್ಕೂ ಬರಬಹುದು.

ಬಿಡಿ, ಬೀಗ ಮತ್ತು ಬೀಗದ ಕೈ ಬಗ್ಗೆ ಮಾತನಾಡೋಣ. ಬದುಕಿನಲ್ಲಿ ನಾನು ತರಹೇವಾರಿ ಬೀಗಗಳನ್ನು ನೋಡಿದ್ದೇನೆ. ಏನೇನೂ ದುಡಿಮೆ ಇರದಿದ್ದ ಕಾಲದಲ್ಲಿ, ಇದ್ದೊಂದು ಚಾಪೆ-ದಿಂಬು ಮಾತ್ರ ನನ್ನ ಆಸ್ತಿಯಾಗಿದ್ದ ಕಾಲದಲ್ಲಿ ರೂಮಿಗೆ ಬೀಗವನ್ನೇ ಹಾಕುತ್ತಿರಲಿಲ್ಲ. ಆಮೇಲೆ ಸ್ವಲ್ಪ ದುಡ್ಡು ಬಂತು. ಜೊತೆಗೆ ಬೀಗವೂ ಬಂತು. ದುಡ್ಡು ಬರುವುದು ಹೆಚ್ಚಾಗುತ್ತ ಹೋದಂತೆ ಬೀಗದ ಗಾತ್ರವೂ ದೊಡ್ಡದಾಯಿತು. ಎಲ್ಲಿಗಾದರೂ ಹೊರಟರೆ ಅದೊಂದು ರಗಳೆ. ಮನೆಯ ಕಿಟಕಿ, ಬಾಗಿಲು ಎಲ್ಲ ಹಾಕಿ, ದೀಪಗಳನ್ನೆಲ್ಲ ಆರಿಸಿ, ಹೊರಕ್ಕೆ ಬಂದು ಚಿಲುಕ ಹಾಕಿ, ಅದಕ್ಕೆ ಬೀಗ ಹಾಕಿ: ಉಹುಂ, ಅಲ್ಲಿಗೆ ನಿಲ್ಲುವುದಿಲ್ಲವಲ್ಲಾ? ಎರಡೆರಡು ಬಾರಿ ಬೀಗ ಜಗ್ಗಿ ನೋಡುತ್ತೇವೆ. ಕೆಲವು ಸಲ ಬೀಗ ಹಾಕಿ ಅಷ್ಟು ದೂರಕ್ಕೆ ನಡೆದು ಹೋದವರು, ಬೀಗ ಸರಿಯಾಗಿ ಬಿದ್ದಿದೆಯೋ ಇಲ್ಲವೋ ಅಂತ ಅನುಮಾನವಾಗಿ ವಾಪಸು ಬಂದು ಇನ್ನೊಮ್ಮೆ, ಮಗದೊಮ್ಮೆ ಜಗ್ಗಿ ನೋಡುತ್ತೇವೆ. ಅನುಮಾನ ಅಷ್ಟಕ್ಕೇ ಬಗೆಹರಿದರೆ ಸರಿ. ಪದೇಪದೆ ಬೀಗ ಜಗ್ಗಿ ನೋಡುತ್ತಿದ್ದರೆ ಡಾಕ್ಟರ್ ಬಳಿಗೆ ಹೋಗಬೇಕಾಗುತ್ತದೆ. ಅದಕ್ಕವರು ಹೆಸರಿಡುತ್ತಾರೆ: ಅಬ್ಸೆಸಿವ್-ಕಂಪಲ್ಸಿವ್ ಡಿಸ್ ಆರ್ಡರ್!

ಕೆಲವು ದುಂಡನೆಯ ಬೀಗಗಳಿರುತ್ತವೆ. ಕೆಲವು ಚೌಕನೆಯವಿರುತ್ತವೆ. ನಾನು ಉದ್ದನೆಯ ಬೀಗಗಳನ್ನು ನೋಡಿದ್ದೇನೆ. ಈಗಿನ ಮಾತು ಬಿಡಿ, ಬಾಗಿಲುಗಳ ಒಳಗೇ ಬೀಗಗಳು ಅಡಕವಾಗಿರುತ್ತವೆ. ಹೊರಗಣ್ಣಿಗೆ ಬೀಗ ಕಾಣಿಸುವುದೇ ಇಲ್ಲ. ಬೀಗದ ಕೈಗಳು ಮಾತ್ರ ಯಾರಿಗಾದರೂ ಕಾಯಿಸಿ ಬರೆ ಇಡಬಹುದು: ಅಷ್ಟು ಉದ್ದನೆಯವಿರುತ್ತವೆ. ಒಮ್ಮೆ ತಿರುಗಿಸಿದರೆ ತೆರಕೊಳ್ಳುವ ಬೀಗಗಳು, ಎರಡು ಬಾರಿ ತಿರುಗಿಸಿದರೇನೇ ತೆರೆದುಕೊಳ್ಳುವ ಬೀಗಗಳು, ಸುಮ್ಮನೆ ಹೊರಗಿನಿಂದ ಎಳೆದುಕೊಂಡರೆ ತಂತಾವೇ lock ಆಗಿಬಿಡುವ ಬೀಗಗಳು, ಸರಿಯಾಗಿ ನೆನಪಿಟ್ಟುಕೊಂಡು ಆ ನಂಬರುಗಳನ್ನು ತಿರುವಿದರೆ ಮಾತ್ರ ತೆರೆದುಕೊಳ್ಳುವ ಬೀಗಗಳು-ಒಂದೇ ಎರಡೇ? ಈಗೀಗ ದುಬಾರಿ ಹೊಟೇಲುಗಳಲ್ಲಿ ಬೀಗದ ಕೈಗಳೇ ಇರುವುದಿಲ್ಲ. ಬದಲಿಗೆ ಕಾರ್ಡುಗಳಿರುತ್ತವೆ. ಆಫೀಸಿನಲ್ಲಿ ಕಾರ್ಡು swipe ಮಾಡಿದಂತೆ ಮಾಡಿಬಿಟ್ಟರೆ ತೆರೆದುಕೊಳ್ಳುವ ಬೀಗಗಳಿರುತ್ತವೆ. ನಾನು ಅಂಥ ಬೀಗಗಳನ್ನೂ ನೋಡಿದ್ದೇನೆ. ಎಷ್ಟೋ ಸಲ ಬೀಗದ ಕೈಗಳನ್ನು ಕಳೆದುಕೊಂಡಿದ್ದೇನೆ.
"ನಿಮ್ಮ ಮನೆಯದೊಂದೇ ಏಕೆ, ತಿಜೋರಿಯದೊಂದೇ ಏಕೆ- ಬದುಕಿನ ಭಾಗ್ಯದ ಬೀಗವನ್ನು ಬೇಕಾದರೂ ಐದು ನಿಮಿಷಗಳಲ್ಲಿ ಛಕ್ಕಂತ ಬಿಚ್ಚಿಕೊಡುತ್ತೇನೆ. ನಿಮಗೆ ತಿಳಿದಿದ್ದು ಕೊಡಿ ಸಾರ್?" ಎಂದು ಮಾತನಾಡುವ ಬೀಗದ ರಿಪೇರಿಯವನೊಬ್ಬ ರಸ್ತೆಯ ಪಕ್ಕದಲ್ಲೇ ಕುಳಿತಿರುತ್ತಾನೆ. ಅಸಲು ಅವನ ಭಾಗ್ಯದ ತಿಜೋರಿಯ ಬಾಗಿಲು ತೆರೆದುಕೊಳ್ಳುವಂಥ ಬೀಗದ ಕೈ ಅವನಿಗೇ ಸಿಕ್ಕಿರುವುದಿಲ್ಲ. ಆದರೂ ಅಂಥವನನ್ನು ಕರೆದುಕೊಂಡು ಬಂದು, ಕಳೆದುಹೋದ ನನ್ನ ಅಲಮಾರಿನ ಬೀಗ ತೆಗೆಸಿಕೊಂಡಿದ್ದೇನೆ. ಡೂಪ್ಲಿಕೇಟ್ ಬೀಗದ ಕೈ ಮಾಡಿಸಿಕೊಂಡಿದ್ದೇನೆ. ಆ ಡೂಪ್ಲಿಕೇಟೂ ಕಳೆದುಹೋದಾಗ ಹೊಸ ಅಲಮಾರು ಖರೀದಿಸಿದ್ದೇನೆ. ಇದನ್ನೆಲ್ಲ ನೀವೂ ಮಾಡಿರಬಹುದು.
ಒಂದು ಕ್ಷಣದ ಮಟ್ಟಿಗೆ ಯೋಚಿಸಿ ನನ್ನ ಪ್ರಶ್ನೆಗೆ ಉತ್ತರ ಹೇಳುತ್ತೀರಾ? ಬೀಗದ ಕೈಯೇ ಇಲ್ಲದ ಬೀಗವನ್ನು ಈ ಜಗತ್ತಿನಲ್ಲಿ ಯಾರಾದರೂ ತಯಾರು ಮಾಡಿದುದನ್ನು ಎಲ್ಲಾದರೂ ನೋಡಿದ್ದೀರಾ? No chance
.
ಈಗ ಈ ಲೇಖನವನ್ನು ಇನ್ನೊಮ್ಮೆ ಮೊದಲಿನಿಂದ ಓದುತ್ತ ಬನ್ನಿ. "ಬೀಗ'' ಎಂಬುದನ್ನು "ಕಷ್ಟ" ಅಂತ ಓದಿಕೊಳ್ಳಿ. "ಬೀಗದ ಕೈ" ಎಂಬುದನ್ನು ಕಷ್ಟದ ಪರಿಹಾರ ಅಂತ ಅರ್ಥ ಮಾಡಿಕೊಳ್ಳಿ. ವಿಷಯವೇನೆಂಬುದು ನಿಮಗೇ ಸ್ಪಷ್ಟವಾಗುತ್ತ ಹೋಗಿಬಿಡುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಕಷ್ಟವೇ ಇಲ್ಲ. ಹೇಗೆ ಚಾವಿ ಕಳೆದುಹೋದ ಬೀಗ ಬಿಚ್ಚಿಕೊಡಲು ಅವನೊಬ್ಬ ನಮಗಾಗಿ ಕಾಯುತ್ತ ಕುಳಿತಿರುತ್ತಾನೋ, ನಮ್ಮ ಕಷ್ಟಗಳನ್ನು ಪರಿಹರಿಸುವವನೂ ಒಬ್ಬನಿರುತ್ತಾನೆ. ಆತ ಮನುಷ್ಯ ರೂಪದಲ್ಲೇ ಇರಬೇಕೆಂದಿಲ್ಲ. ಅದೊಂದು just idea ಆಗಿರಬಹುದು. ಅದೇ ನಿಮ್ಮ ಕೀಲಿ ಕೈ. ಒಂದು ಶ್ರಮವಿರಬಹುದು. ರಾತ್ರಿಯಿಡೀ ಓದುವುದಿರಬಹುದು. ಯಾವುದೋ ಜಾಗಕ್ಕೆ, ಅಂದುಕೊಂಡ ವೇಳೆಯೊಳಗಾಗಿ ಮುಟ್ಟಿಕೊಳ್ಳುವ ಹರಸಾಹಸವಿರಬಹುದು, ಒಂದು ಹೊಸ ಪರಿಚಯವಿರಬಹುದು, ಚಿಕ್ಕ ಸಂಧಾನವಿರಬಹುದು, ಏಕಾಂತದಲ್ಲಿ ಮಾಡಬೇಕಾದ ಸಾಧನೆಯಿರಬಹುದು, ಒಂದು ಟೀಮು ಕಟ್ಟಿ ಸಾರಬೇಕಾದ ಯುದ್ಧವಿರಬಹುದು: ಅವೆಲ್ಲವೂ ಕೀಲಿಕೈಗಳೇ. ಇಂಥ ಬೀಗಕ್ಕೆ ಇಂಥದ್ದೇ ಕೀಲಿಕೈಯಿ ಎಂದು ಗೊತ್ತಾಗಲು ಸ್ವಲ್ಪ ತಡವಾಗಬಹುದು. ಅಷ್ಟೇ ಹೊರತು, ಚಾವಿಯೇ ಇಲ್ಲದ ಬೀಗವನ್ನು ಆ ಭಗವಂತನೆಂಬ ಭಗವಂತ ಕೂಡ ಮಾಡಿಲ್ಲ. ಮಾಡಲಾರ.

ಕಷ್ಟಗಳು ಕೂಡ ಬೀಗಗಳಂತೆಯೇ ಚಿಕ್ಕವು, ದೊಡ್ಡವು, ಸ್ಟೀಲಿನವು, ಹಿತ್ತಾಳೆಯವು, ಹೊಸವು, ಹಳೆಯವು, ದುಂಡನೆಯವು, ಚೌಕನೆಯವು, ಉದ್ದನೆಯವು, ಕಣ್ಣಿಗೇ ಕಾಣದಂತಹವು ಹೀಗೆ ನಾನಾ ರೀತಿಯವಿರುತ್ತವೆ. ಗಾಬರಿಯಾಗಬೇಡಿ. ಭಾರೀ ಗಾತ್ರದ ಬೀಗವನ್ನು ಒಂದು ಚೋಟುದ್ದದ ಕೀಲಿ ಕೈ "ಕ್ಳಕ್ಕನೆ" ತೆರೆದುಬಿಡುತ್ತದೆ. ಆಮೇಲಾಮೇಲೆ ನಿಮಗೇ ಅಭ್ಯಾಸವಾಗಿ ಬಿಡುತ್ತದೆ. ಎಂಥ ಕತ್ತಲಿದ್ದರೂ ತಡಕಾಡುತ್ತ ಹೋಗಿ, ಬೀಗ ಸವರಿ, ಕಿಸೆಯಲ್ಲೋ, ಜನಿವಾರದ ತುದಿಗೋ, ಉಡದಾರದ ಮೊನೆಗೋ ಇರುವ ಬೀಗದ ಕೈ ಹೊರಕ್ಕೆ ತೆಗೆದು, ಹಾಗೇ ತಡಕಾಡಿ ಸರಿಯಾದ ಕೀಲಿಕೈಯನ್ನು ಸರಿಯಾದ ಬೀಗಕ್ಕೇ ಇಟ್ಟು ಕ್ಷಣಾರ್ಧದೊಳಗಾಗಿ ಕದ ಬಿಚ್ಚಿ ಲೈಟು ಹಾಕಿ ಬಿಡುತ್ತೀರಿ.
ಹಮ್ಮಯ್ಯ!
ನಿಮ್ಮ ಕಷ್ಟದ ಬೀಗಗಳಿಗೆಲ್ಲ ಸರಿ ಹೊಂದುವ ಚಾವಿ ಸಿಗಲಿ ಅಂತ ಹಾರೈಸುತ್ತೇನೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books