Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮನಸ್ಸು ಹೇಳುತ್ತಿದೆ ಹುಡುಗಿಯರೇ ಅಂಕಲ್ ಗಳಿದ್ದಾರೆ ಎಚ್ಚರಿಕೆ!

ಕ್ಷಮಿಸಿ, ಬರೆಯಲಾರೆ ಅಂತ ಅಲ್ಲ. ‘ಓ ಮನಸೇ...’ ನನ್ನ ಕನಸಿನ ಕೂಸು. ನನ್ನಿಂದಾಗಿಯೇ ಕೂಸು ಕೆಲಕಾಲ ನನ್ನ ಮತ್ತು ನಿಮ್ಮಿಂದ ಮರೆಯಾಗಿತ್ತು. ಅದೇ ತರಹದ ಪತ್ರಿಕೆಯನ್ನು ಮಾಡಲು ಅನೇಕರು ಪ್ರಯತ್ನಿಸಿದರು. ಆದರೆ ಮನಸ್ಸು ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವಂತಹುದ್ದಲ್ಲ. ನಿಮಗೂ ಗೊತ್ತಿದೆ. ಪತ್ರಿಕೆ ಪುನರಾರಂಭಗೊಂಡಿದೆ. ಅದ್ಭುತವಾದ ಓಪನಿಂಗ್‌ ಸಿಕ್ಕಿದೆ. ಅದಕ್ಕೆ ನಾನೇ ಬರೆದ ಸುದೀರ್ಘ ಮುಖಪುಟ ಲೇಖನದ ಒಂದು ಭಾಗವನ್ನ ನಿಮ್ಮ ರುಚಿಗೆ ಇರಲಿ ಎಂಬ ಕಾರಣಕ್ಕೆ ಈ ಭಾರಿ ‘ಖಾಸ್‌ಬಾತ್’ನ ಜಾಗದಲ್ಲಿ ಅದನ್ನ ಪ್ರಕಟಿಸುತ್ತಿದ್ದೇನೆ. ದಯವಿಟ್ಟು ‘ಮನಸೇ...’ ಓದಿ. ನಿಮ್ಮ ಗೆಳೆಯರಿಗೆ, ಮನೆಯಲ್ಲಿ ತಂಗಿಯರಿಗೆ, ನಿಮ್ಮ ಗೆಳತಿಯರಿಗೆ ಓದಲು ಕೊಡಿ. ಪತ್ರಿಕೆ ನಿಮ್ಮಿಂದ ಮಾತ್ರ ಬೆಳೆಯಬೇಕು. ಅದು ನನ್ನ ಸಾತ್ವಿಕ ಹಟ. please.
-ರವಿ ಬೆಳಗೆರೆ

ಅಂಕಲ್‌ಗಳ ಪ್ರಪಂಚಕ್ಕೆ ನಿಮ್ಮನ್ನು ಕರೆದೊಯ್ಯಬೇಕು: ಜೊತೆಗೆ ಅಂಕಲ್‌ಗಳನ್ನೂ. ನೀವೊಂದು ಬಸ್ಸು ಹತ್ತುತ್ತೀರಿ. ರಾತ್ರಿ ಹೊರಟರೆ ಬೆಳಿಗ್ಗೆ ತನಕ ನಿಮ್ಮ ಪ್ರಯಾಣ. ಒಂಟಿಯಾಗಿ ಹೊರಟ ಹುಡುಗಿ ನೀವು. ಆದರೆ ನೀವು ಕುಳಿತ ಸ್ವಲ್ಪ ಹೊತ್ತಿಗೇ ಪಕ್ಕದ ಸೀಟಿಗೆ ಒಬ್ಬರು ಬಂದು ಕೂಡುತ್ತಾರೆ. ಅದೇ ಸಮಾಧಾನ, ಸದ್ಯ! ತುಂಬ ಹಿರಿಯರು. ತಂದೆಯ ವಯಸ್ಸಿನವರು ಅಂತ ಹುಡುಗಿ ಅಂದುಕೊಳ್ಳುತ್ತಾಳೆ. “ಬೆಂಗಳೂರಿಗೇನಮ್ಮಾ?" ಅಂತ ಕೇಳುತ್ತಾರೆ. ಹುಡುಗಿ ಹೌದೆನ್ನುತ್ತಾಳೆ. ತುಂಬ ಅಲ್ಲದಿದ್ದರೂ, ಕುಶಲೋಪರಿಯ, ಪರಸ್ಪರ ಪರಿಚಯ-ವಿನಿಮಯದ ಮಾತು. ರಾತ್ರಿಯಿಡೀ ಮಾತನಾಡಬೇಕಿಲ್ಲ. ಆದರೆ ಜೊತೆಗೆ ಒಂದೇ ಸೀಟಿನಲ್ಲಿ ಅಕ್ಕಪಕ್ಕ ಕುಳಿತು ಪ್ರಯಾಣಿಸಬೇಕಲ್ಲ. ಅಕಸ್ಮಾತ್ ಹುಡುಗ ಕುಳಿತಿದ್ದರೆ ಅವನು ಕೇಳಿದ ಮೊದಲ ಪ್ರಶ್ನೆಗೇ ‘shut up’ ಅಂದಂತೆ ಉತ್ತರವೇ ಕೊಡದೆ ಮೌನವಾಗಿದ್ದು ಬಿಡಬಹುದಿತ್ತು. ಹುಡುಗರಿಗೆ ಎಲ್ಲಾದರೂ ಸಲುಗೆ ಕೊಡುವುದುಂಟೆ? ಪಕ್ಕ ಕುಳಿತಿರುವಾತ ಸಭ್ಯ ಹಿರಿಯ.

ಪಟ್ಟು ಹಾಕುತ್ತಾನೆ
“ಅಂಕಲ್, ನೀವು ಆರಾಮಾಗಿ ಕೂತುಕೊಳ್ಳಿ" ಅನ್ನುತ್ತಾಳೆ, ಮುದುರಿಕೊಂಡಂತೆ ಕುಳಿತ ಹಿರಿಯನ ಇಕ್ಕಟ್ಟು ನೋಡಲಾಗದೆ. ಮತ್ತೇನೂ ಅಲ್ಲ, ಚಿಕ್ಕದೊಂದು comfort ಉದ್ದೇಶ. ಆದರೆ ಬಸ್ಸು ಹೊರಟು, ದೀಪವಾರಿ, ಬಸ್ಸಿನ ವೇಗ ನೂರು ಪಟ್ಟಾಗುತ್ತಿದ್ದಂತೆಯೇ ಹುಡುಗಿಗೆ ಗೊತ್ತಾಗಿ ಹೋಗುತ್ತದೆ. ಪಕ್ಕದಲ್ಲಿ ಪಡ್ಡೆ ಹುಡುಗ ಕುಳಿತಿದ್ದರೇನೇ ಚೆನ್ನಾಗಿತ್ತು. ಇವನು ಶನಿ ಅಂಕಲ್. ಮೈತುಂಬ ಹರಿದಾಡಲು ಯತ್ನಿಸುತ್ತಿದ್ದಾನೆ. Nasty. ತಾನು ಮುದುರಿ ಕುಳಿತಷ್ಟೂ ಬೇರೆ ಬೇರೆ ಪಟ್ಟು ಹಾಕುತ್ತಾನೆ. ಮುಚ್ಚಿಕೊಂಡಷ್ಟೂ ನುಗ್ಗುವ ಕ್ರೌರ್ಯ.

ಆಹ್ ಸುಮ್ಮನಾದ
“ಬೋಳಿ ಮಗನೇ, ನೀನು ಇನ್ನೊಂದು ಸಲ ಮೈ ಮುಟ್ಟಿದರೆ ಎದ್ದು ಗಲಾಟೆ ಮಾಡಿ ಚಪ್ಪಲಿಯಲ್ಲಿ ಹೊಡೆದು ಬಿಡ್ತೀನಿ" ಎಂದು ಅವನಿಗಷ್ಟೆ ಕೇಳಿಸುವ ಹಾಗೆ ಹೇಳುತ್ತಾಳೆ ಹುಡುಗಿ. ತಕ್ಷಣ ಶನಿ ಅಂಕಲ್ ಸುಮ್ಮನಾಗಿ ಬಿಡುತ್ತಾನೆ. ಸ್ವಲ್ಪ ಹೊತ್ತಿಗೇ ಅವನಿಗೆ ನಿದ್ದೆ. ನಿದ್ದೆಗೆ ಜಾರುವ ಮುನ್ನ “sorry" ಅನ್ನುತ್ತಾನೆ. ಆದರೆ ಸದ್ಯ ದೂರ ಕುಳಿತು ನಿದ್ರೆಗೆ ಬಿದ್ದನಲ್ಲ ಸಾಕು ಅಂದುಕೊಂಡು ಕಿಟಕಿ ಗಾಜಿಗೆ ತಲೆ ಆನಿಸಿ ಹುಡುಗಿ ನಿಧಾನವಾಗಿ ನಿದ್ರೆಗೆ ಶರಣಾಗುತ್ತಾಳೆ. ಅವನು ಮೈ ತಾಕಿದ ಕೂಡಲೆ ಎದೆ ಢವಗುಟ್ಟಿ ಸಾಯುವಷ್ಟು ಭಯವಾಗಿದ್ದು ಹೌದಾದರೂ, ತನ್ನ ಪ್ರತಿಭಟನೆಗೆ ತೆಪ್ಪಗಾದನಲ್ಲ? ಅವಳಿಗೆ ಒಂಥರಾ ಹೆಮ್ಮೆ, ನೆಮ್ಮದಿ. ಆದರೆ ಇನ್ನೇನು ನಿದ್ರೆ ಹತ್ತಿ ಗಾಢವಾಗಬೇಕು.

ಶನಿ ಅಂಕಲ್
ಮತ್ತೆ ಮೈ ಮೇಲೆ ಜಿರಳೆ ಹರಿದಾಡುತ್ತದೆ. ವ್ಯಾಕ್!
ಶನಿ ಅಂಕಲ್ ಈ ಬಾರಿ ಒರಟಾಗಿಲ್ಲ. ತುಂಬ ಮೃದುವಾಗಿ ಮುಟ್ಟುತ್ತಾನೆ. ಅದೊಂದು ತಂತ್ರ. ಶತಾಯ ಗತಾಯ ಈ ಹುಡುಗಿಯನ್ನು ಪಳಗಿಸಿಕೊಳ್ಳುತ್ತೇನೆ: atleast ಈ ರಾತ್ರಿಯ ಮಟ್ಟಿಗೆ, ಇಷ್ಟರ ಮಟ್ಟಿಗಿನ ಸಂತೋಷಕ್ಕೆ ಅಂತ ತೀರ್ಮಾನಿಸಿದ ಮೂರ್ಖನ, ನಿರ್ಲಜ್ಜನ ಮೈ-ಆತುರ. ಎದ್ದು ನಿಂತು ಆ ಹುಡುಗಿ ಗಲಾಟೆ ಮಾಡಲಾರಳು ಅಂತ ಅವನಿಗೆ ಗೊತ್ತು. ಮಾಡಿದರೆ ಬಸ್ಸಿನಲ್ಲಿನ ಜನ ಒಂದಷ್ಟು ಅಸಹ್ಯಪಡಬಹುದು, ಒದರಾಡಬಹುದು, ತನಗೆ ಎರಡೇಟು ಬಿದ್ದರೂ ಬಿದ್ದವೇ. ಕಂಡಕ್ಟರ್ ತನ್ನ ಸೀಟು ಬದಲಿಸಬಹುದು. ಅಷ್ಟೇ ತಾನೆ, ಈ ನಡುದಾರಿಯ ಕತ್ತಲಲ್ಲಿ ತನ್ನನ್ನು ಬಸ್ಸಿನಿಂದ ಇಳಿಸಿಯಂತೂ ಹೋಗುವುದಿಲ್ಲವಲ್ಲ? ಆದದ್ದಾಗಲಿ ಅಂದುಕೊಳ್ಳುತ್ತಾನೆ. ಒಂದು ವಿಷಯದಲ್ಲಿ ಮಾತ್ರ ಅವರಿಬ್ಬರೂ ಒಂದೇ ಥರ ಯೋಚಿಸುತ್ತಾರೆ.

ಅವಮಾನ ಕೊಲ್ತದೆ
‘ಗಲಾಟೆ ಮಾಡಿದರೆ ಬಸ್ಸಿನ ಜನ ಏನಾದರೂ ಮಾಡಿಯೇ ಮಾಡುತ್ತಾರೆ. ಹುಡುಗಿಯ ಬೆಂಬಲಕ್ಕೆ ನಿಲ್ಲುವುದು ಹಂಡ್ರೆಡ್ ಪರ್ಸೆಂಟ್ ಸತ್ಯ. ಆದರೆ ಬಸ್ಸಿನೊಳಗೆ ದೀಪ ಹೊತ್ತಿಕೊಂಡ ತಕ್ಷಣ ಎಲ್ಲರೂ ನೋಡುವುದು ಶನಿ ಅಂಕಲ್‌ನನ್ನಲ್ಲ. ಅವಳನ್ನ! ಅವರ ತಲೆಯಲ್ಲಿ ಏನೇನು ಕಲ್ಪನೆಗಳೋ? ಎಷ್ಟು ಮುಟ್ಟಿದ? ಏನೇನು ಮಾಡಿದನೋ? ತಪ್ಪು ನಿಜ. ಆದರೂ ಮುದುಕ ಸಂತೋಷವನ್ನ ಅಷ್ಟರ ಮಟ್ಟಿಗೆ ಪಟ್ಟಿರಬೇಕಲ್ಲ?’ ಎಂಬಂತೆ ನೋಡುತ್ತಾರೆ. ಇಡೀ ಬಸ್ಸಿನವರ ಕಣ್ಣು ತನ್ನ ಮೈ ನೆಕ್ಕುತ್ತವೆ. ಅವರೆಲ್ಲ ಅಪರಿಚಿತರೇ ಇರಬಹುದು. ಆದರೆ ಬೆಳಿಗ್ಗೆ ಬಸ್ ಇಳಿಯುವ ತನಕ ಎದ್ದು ನಿಂತ ತನ್ನನ್ನು ನೋಡಿದ ನೋಟವನ್ನೇ ನೆನಪಿನ re-playಗೆ ಹಾಕಿಕೊಳ್ಳುತ್ತಾರಲ್ಲವೆ? ಅದಕ್ಕಿಂತ ಅವಮಾನ ಏನಿದೆ. ಪರಿಚಿತರ ಎದುರಿಗೇ ಹೋಗಬೇಕೆಂದಿಲ್ಲ: ಮಾನ ಎಂಬುದು ಯಾವುದೋ ದೇಶದ ಅಪರಿಚಿತನ ಎದುರಿಗೆ ಹೋದರೂ, ಅವನನ್ನು ಜನ್ಮದಲ್ಲಿ ಮತ್ತೆ ಕಾಣದಿದ್ದರೂ ಆ ಕ್ಷಣದ ಅವಮಾನ ಕೊಂದು ಬಿಡುತ್ತದೆ. ಹೀಗಾಗಿಯೇ ಹುಡುಗಿಯರು, ಸ್ತ್ರೀಯರು ರಾತ್ರಿಯಿಡೀ ತಮ್ಮನ್ನು ಪ್ರೊಟೆಕ್ಟ್ ಮಾಡಿಕೊಳ್ಳುತ್ತಾ ನರಕ ಯಾತನೆ ಅನುಭವಿಸುತ್ತಾರೆ.
ಆದರೆ ಈ ಹುಡುಗಿ bold, ಜಾಣೆ ಮತ್ತು ಪ್ರಾಕ್ಟಿಕಲ್.

ಅವನ ಲಗೇಜು
“ನಿಲ್ಲಿಸ್ರೀ ಬಸ್‌ನ. ಇಂಥ ಶನಿಯ ಪಕ್ಕ ಕೂತು ಪ್ರಯಾಣ ಮಾಡಬೇಕಾ? ನಿದ್ದೆಯಂತೆ ನಿದ್ದೆ. ಮೈಮೇಲೇ ಬೀಳ್ತಾನೆ. ಏಯ್, ನಾಚಿಕೆ ಇಲ್ದೋನೇ ಎದ್ದು ನಿಂತ್ಕೊಳ್ಳೋ. ಉಗೀತಾರೆ ಜನ. Mr.conducter ಬಸ್ ನಿಲ್ಲಿಸಿ ಇಲ್ಲೇ. ಹಿಂದೆ ಬರೋ ಬಸ್ಸಲ್ಲಿ ನಂಗೆ seat ಮಾಡಿಕೊಡಿ. ಅದೂ ಬೆಂಗಳೂರಿಗೇ ಹೋಗುತ್ತೆ. ನಾನು ಪ್ರಾಣ ಹೋದರೂ ಈ ಬಸ್ಸಿನಲ್ಲಿ ಬರಲ್ಲ. ನೀವು ಈ ಕಾಡಲ್ಲಿ ಇಳಿಸಿ ಹೋದರೂ ಸರೀನೇ... ಮಾನಗೆಟ್ಟವನಿರೋ ಬಸ್‌ನಲ್ಲಿ ನಾನು ಪ್ರಯಾಣಿಸಲ್ಲ" ಎಂದು ಹಟಕ್ಕೆ ಬಿದ್ದುಬಿಡುತ್ತಾಳೆ. ದನಿ ದೊಡ್ಡದಾಗಿರುತ್ತದೆ. She is wild. ಆದರೆ ಕೋಪದಲ್ಲಿನ ಸಾತ್ವಿಕತೆ ಎಂಥವರಿಗೂ ಅರ್ಥವಾಗುತ್ತದೆ. Sex object ಆಗಿ ಕಾಣಬಹುದಾಗಿದ್ದವಳು, ತೊಂದರೆಯಲ್ಲಿ ತಿರುಗಿ ಬಿದ್ದು ಅಬ್ಬರಿಸುವ bold ಹುಡುಗಿಯಂತೆ, ಬೆನ್ನಲ್ಲಿ ಹುಟ್ಟಿದ ತಂಗಿಯಂತೆ ಕಾಣುತ್ತಾಳೆ. ಶನಿ ಅಂಕಲ್‌ನ ಕಥೆ, ಬಸ್ಸಿನಲ್ಲಿನ ಹುಡುಗರು ನೋಡಿಕೊಳ್ಳುತ್ತಾರೆ. ಅವನ ಲಗೇಜು ಕಿತ್ತಿ ಹೊರಕ್ಕೆ ಬಿಸಾಡುತ್ತಾರೆ. ಅವನನ್ನು ಅಲ್ಲೇ ಅಲ್ಲದಿದ್ದರೂ ಮುಂದಿನ stopನಲ್ಲಿ ಕ್ಯಾಕರಿಸಿ, ಕೆಳಗಿಳಿಸಿ ಬಿಡುತ್ತಾರೆ. ಬಸ್ಸಿನಲ್ಲಿನ ಹೆಣ್ಣುಮಕ್ಕಳು ಅಕ್ಷರಶಃ ಚಪ್ಪಲಿಯಲ್ಲಿ ಅವನನ್ನು ಹೊಡೆದು, bold ಹುಡುಗಿಯನ್ನು ತಮ್ಮ ಬಳಿ ಕೂರಿಸಿಕೊಳ್ಳುತ್ತಾರೆ. ಗಂಡಸರು ಬಂದು ಅವನ ರೆಟ್ಟೆ ಹಿಡಿದು ಎಳೆದು ನಿಲ್ಲಿಸಿ ಅವನ ಸೀಟಿನಲ್ಲಿ ಕುಳಿತು, ಮುಂದಿನ stop ತನಕ ಅವನು ನಿಂತೇ ಇರುವಂತೆ ವ್ಯವಸ್ಥೆ ಮಾಡುತ್ತಾರೆ. ಈ ಕೆಲಸ ಸುಮಾರು ಇಪ್ಪತ್ತು ವರ್ಷದ ಹಿಂದೆ ನನ್ನ ಕಣ್ಣೆದುರಿಗೇ ಆಗಿತ್ತು. ಶನಿ ಅಂಕಲ್ ಒಬ್ಬನಿಗೆ ಮೊದಲ ಏಟು ಬಾರಿಸಿ, ಅವನ ಲಗೇಜು ಕಿಟಕಿಯಿಂದ ಎಸೆದವನ ಹೆಸರು ರವಿ. I mean ರವಿ ಬೆಳಗೆರೆ.

ಮರ್ಯಾದೆ ಹೋಗಲ್ಲ
ಗೊತ್ತಿರಲಿ, ಇಡೀ ಬಸ್ಸಿನಲ್ಲಿ ದುಷ್ಟರಿರುವುದಿಲ್ಲ. ನಮ್ಮ ಹೆಣ್ಣುಮಕ್ಕಳನ್ನು ಆ ಪರಿಸ್ಥಿತಿಯಲ್ಲಿ ಎಲ್ಲರೂ object of sex ಎಂಬಂತೆ ನೋಡುವುದಿಲ್ಲ. ಅಕಸ್ಮಾತ್ ನೋಡುವವರಿದ್ದರೆ ಅದು ಅವರ ಕರ್ಮ. ಮರ್ಯಾದೆ ಹೋಗುತ್ತದೆಂದು ಹಿಂಜರಿಯುವುದಕ್ಕಿಂತ, ಆ ಅಸಹ್ಯವನ್ನು ಪ್ರತಿಭಟಿಸಿ, ರಾತ್ರಿಯಿಡೀ ಆಗಬಹುದಾದ ಹಿಂಸೆಯಿಂದ ಪಾರಾಗುವುದು ಮತ್ತು ಆತ್ಮಾಭಿಮಾನಕ್ಕಾಗಿ ಎಂಥ ಏಕಾಂಗಿ ಸ್ಥಿತಿಯಲ್ಲೂ ಬಡಿದಾಡುವುದು ನಮ್ಮ ಹುಡುಗಿಯರಿಗೆ ಅಭ್ಯಾಸವಾಗಬೇಕು. ಇನ್ನೊಬ್ಬರಿಗೆ ತೊಂದರೆಯಾದರೆ, ಗಂಡಸರಿಗಿಂತ ಮುಂಚೆ ನಾವೇ ಎದ್ದು ಅವರ ನೆರವಿಗೆ ಹೋಗಬೇಕು. ಆಗ ಅದೊಂದು ಪುಟ್ಟ ಗುಂಪಾಗುತ್ತದೆ. ಗುಂಪಿನಲ್ಲಿ ಮರ್ಯಾದೆ ಹೋಗುವುದಿಲ್ಲ. ಪ್ರತಿಭಟನೆಯ ಸ್ವರೂಪ ದಕ್ಕಿಬಿಡುತ್ತದೆ.

ಅವರಷ್ಟೇ ಅಲ್ಲ
ಸಮಸ್ಯೆ ಇರುವುದು ಇಂಥ ಶನಿ ಅಂಕಲ್‌ಗಳದು ಮಾತ್ರವಲ್ಲ. ಅದು ಕೆಲವೇ ನಿಮಿಷಗಳ ಅಥವಾ ಒಂದೇ ಒಂದು ರಾತ್ರಿಯ ಕಿರುಕುಳ, ಹಿಂಸೆ, ಮೈಮೇಲೆ ಜಿರಳೆ ಹರಿದ ಅಸಹ್ಯ ಅನುಭವ. ಆದರೆ ನಿಜವಾದ ಡೇಂಜರಸ್ ಅಂಕಲ್‌ಗಳು ಬೇರೆಯೇ ಇದ್ದಾರೆ.
ಅವರು ಪಕ್ಕದ ಮನೆಯವರು, ಹತ್ತಿರದ ಸಂಬಂಧಿಕರು, ಗೆಳತಿಯ ತಂದೆ, ಅವಳ ಚಿಕ್ಕಪ್ಪ, ಪ್ರೀತಿಸಿದ ಹುಡುಗನ ತಂದೆ, ಪಾಠ ಮಾಡುವ ಉಪನ್ಯಾಸಕ, ಹೈಸ್ಕೂಲು ಮೇಷ್ಟ್ರು, ತೀರ ರೆಗ್ಯುಲರ್ ಆಗಿ ಚಿಕಿತ್ಸೆ ಕೊಡುವ ಡಾಕ್ಟರು, ಅದೇ ಬೀದಿಯ ಪ್ರಾವಿಷನ್ ಸ್ಟೋರ್ ಮಾಲೀಕ, ನಮ್ಮ ಪಾಲಿನ ಆರಾಧ್ಯ ದೈವ-role model ಅಂತ ಅಂದುಕೊಂಡು ಆರಾಧಿಸಿದ ಅತಿ ಗಣ್ಯ ವ್ಯಕ್ತಿ, ಪರಮ ಸಾತ್ವಿಕ ಸಂತ, ಸನ್ಯಾಸಿ, ಬೋಧಕ ಗುರುವು-ಹೀಗೆ ಯಾರು ಬೇಕಾದರೂ ಆಗಿರಬಹುದು. ಈ ಸ್ವೀಟ್ ಅಂಕಲ್‌ಗಳ ಬಗ್ಗೆ ಉಳಿದೆಲ್ಲಕ್ಕಿಂತ ಹೆಚ್ಚಿನ ಎಚ್ಚರಿಕೆ ಹುಡುಗಿಯರಿಗಿರಬೇಕು.

ಇಬ್ಬರು ಕಿರಾತಕರು
ನೋಡಿ, ಲೈಂಗಿಕ ಅಪರಾಧ ಮಾಡುವವರಲ್ಲಿ ಎರಡು ವಿಧದವರು ಮುಖ್ಯ. ಒಬ್ಬ ಮಾನಭಂಗ ಮಾಡುವವನು, rapist. ಅವನಿಗೆ ಅವಕಾಶ, ಏಕಾಂತ ಸಿಗಬೇಕಷ್ಟೆ. ದಯೆ ಇಲ್ಲದೆ ಹುಡುಗಿಯನ್ನು ಹುರಿದು ಮುಕ್ಕಿ ಬಿಡುತ್ತಾನೆ. ಕೆಲವೊಮ್ಮೆ ಕೊಂದೂ ಬಿಡುತ್ತಾನೆ. ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಸಾಲದು. ಆದರೆ ಇನ್ನೊಬ್ಬನಿದ್ದಾನೆ pedophile ಜಾತಿಯವನು. ಅದರರ್ಥ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವವನು ಅಂತ. ಅವನು ಕ್ರೂರಿಯಲ್ಲದ ಕಿರಾತಕ. ಮಗುವಿನ ಮೇಲೆ ಅತ್ಯಾಚಾರ ಮಾಡಿದರೂ ಅದನ್ನು hurt ಮಾಡುವುದಿಲ್ಲ. ತುಂಬ ಮನವೊಲಿಸಿಕೊಳ್ಳುತ್ತಾನೆ. ಮುದ್ದು ಮಾಡುತ್ತಾನೆ. ಚಾಕಿ ಕೊಡಿಸುತ್ತಾನೆ. ಚಿಕ್ಕದಾದರೆ ಎತ್ತಿಕೊಂಡು ತಿರುಗುತ್ತಾನೆ. ಕೂಸುಮರಿ ಮಾಡುತ್ತಾನೆ. ಒಟ್ಟಿನಲ್ಲಿ ಅಮಾಯಕ ಮಗುವಿನ ನಂಬಿಕೆ, ಪ್ರೀತಿ ಗಳಿಸಿಕೊಳ್ಳುತ್ತಾನೆ. ಲೋಕಕ್ಕೆ ಎಷ್ಟು ಒಳ್ಳೆಯವನಾಗಿರುತ್ತಾನೆ ಅಂದರೆ ಅವನ ಬಗ್ಗೆ ಒಬ್ಬರೂ ಕೆಟ್ಟ ಮಾತನಾಡುವುದಿಲ್ಲ. ತಂದೆ ತಾಯಿ ಎಷ್ಟು ನಂಬಿರುತ್ತಾರೆಂದರೆ, ಅವನು ಕೂಸುಮರಿ ಹೊತ್ತು ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋದರೆ ಅದಕ್ಕೆ ಸಂತೋಷ ಪಡುತ್ತಾರೆ. ಅಲ್ಲೂ ಅಷ್ಟೆ: ಪೀಡೋಫೈಲ್‌ಗಳು ಭಯಂಕರ ಅತ್ಯಾಚಾರ ಮಾಡುವುದಿಲ್ಲ. ಮಗುವಿನ ಅರಿವಿಗೆ ಬಾರದಂತೆ (?) ಅದನ್ನು ಬಳಸಿಕೊಳ್ಳುತ್ತಾರೆ. ಅದರ ವಿವರಗಳು ಅತ್ಯಂತ ಜಿಗುಪ್ಸಾದಾಯಕ.

ಜೈಲಿನಲ್ಲೇ ಸತ್ತ
ಇದೇ ಮನಸ್ಸಿನ ಇನ್ನೊಬ್ಬ ಸಭ್ಯ(?) ಪಾತಕಿ ಎಂದರೆ ಸ್ವೀಟ್ ಅಂಕಲ್. ಅವನು ನಂಬಿಕೆ ಹುಟ್ಟಿಸುತ್ತಾನೆ. ಗೌರವ ಮೂಡುವಂತೆ ಮಾಡುತ್ತಾನೆ. ನಿಮಗೆ ಗೊತ್ತಿರಲಿ, ಗೌರವದ ಇನ್ನೊಂದು ಮುಖ ಭಯ. ಬಾಬಾಗಳು, ಸನ್ಯಾಸಿಗಳು, ಗುರು ಬೋಧಕರು-ಇವರದೆಲ್ಲ ಇದೇ ತಂತ್ರ. ಬಿಡದಿಯ ನಿತ್ಯಾನಂದ, ಇಂದೋರ್‌ನ ಅಸಾರಾಮ್ ಬಾಪು, ಚಿತ್ರಕೂಟ್‌ನ ಸ್ವಾಮಿ ಭೀಮಾನಂದ್, ಶ್ರೀಲಂಕಾದಿಂದ ಬಂದ ಮಹಾ ಪಾತಕಿ ಸ್ವಾಮಿ ಪ್ರೇಮಾನಂದ, ಕೇರಳದ ಸ್ವಾಮಿ ಅಮೃತ್ ಚೈತನ್ಯ, ಕುರುಕ್ಷೇತ್ರ ನಗರದ ಸ್ವಾಮಿ ನಾರಾಯಣ್ ಸಾಯಿ ಇವರೆಲ್ಲ ತಮ್ಮನ್ನು ನಂಬಿದ, ಗೌರವಿಸಿದ, ತಮಗೆ ಗೌರವಪೂರ್ವಕವಾಗಿ ಹೆದರಿ ತಲೆ ಬಾಗಿದ ಅಮಾಯಕಿಯರನ್ನು ಹುರಿದು ತಿಂದವರೇ. ಮೇಲೆ ಹೆಸರಿಸಿದವರೆಲ್ಲ ಬಂಧಿತರಾಗಿದ್ದಾರೆ, ಜೈಲಿನಲ್ಲಿದ್ದಾರೆ, ಕೆಲವರು ಜಾಮೀನಿನ ಮೇಲಿದ್ದಾರೆ. ಸುಮಾರು ನಲವತ್ತು ಜನ ಹುಡುಗಿಯರ ಮಾನಭಂಗ ಮಾಡಿದ, ಅಬಾರ್ಷನ್ ಮಾಡಿಸಿದ ಕಡೆಗೆ ಕೊಲೆಗಳನ್ನೂ ಮಾಡಿದ ಶ್ರೀಲಂಕಾದ ಸ್ವಾಮಿ ಪ್ರೇಮಾನಂದನಿಗೆ ತಮಿಳುನಾಡಿನ ನ್ಯಾಯಾಲಯ ಕೊಟ್ಟ ಶಿಕ್ಷೆಯೇನು ಗೊತ್ತೆ? ತಲಾ ಇಪ್ಪತ್ತೈದು ವರ್ಷಗಳಂತೆ ಎರಡು ಕೊಲೆಗಳಿಗೆ ಎರಡು ಶಿಕ್ಷೆ ವಿಧಿಸಿ ‘ಇವನು ಐವತ್ತು ವರ್ಷ ಕೈದಿಯಾಗಿ ಜೈಲಿನಲ್ಲಿರಬೇಕು’ ಅಂದಿತು. ಪ್ರೇಮಾನಂದ ಜೈಲಿನ ಬಾಗಿಲು ದಾಟಲೇ ಇಲ್ಲ. ಇತ್ತೀಚೆಗೆ ಒಳಗೇ ಸತ್ತು ಹೋದ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books