Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಇಪ್ಪತ್ಮೂರು ವರ್ಷಗಳ ನಂತರ ಮತ್ತೆ ಆತನನ್ನು ಹುಡುಕಿಕೊಂಡು ಅಲೆವ ಸುಖ

ಎಷ್ಟು ವರ್ಷಗಳ ಬಳಿಕ?
ಇತನೀ ಮುದ್ದತ್ ಬಾದ್ ಮಿಲೇ ಹೋ... ಅನ್ನುತ್ತಾನೆ ಉರ್ದು ಕವಿ. ‘ಎಷ್ಟು ವರ್ಷಗಳ ನಂತರ ಸಿಕ್ಕೆ...’ ಎಂಬ ಸಂತಸದ ಉದ್ಗಾರ. ‘ಅಪನೀ ಕಹೋ, ಅಬ್ ತುಮ್ ಕೈಸೇ ಹೋ...’ ನನ್ನ ಮಾತು ಹಾಗಿರಲಿ, ನಿನ್ನದು ಹೇಳು ಸುದ್ದಿ, ನೀನು ಹೇಗಿದ್ದೀ ಎಂಬ ಆರ್ದ್ರ ನಾದ.
ನನ್ನ first love ಬಳಿಗೆ ಹಿಂತಿರುಗುತ್ತಿದ್ದೇನಾ? ಗೊತ್ತಿಲ್ಲ. First love ಹೆಸರು ಉರ್ದು. ಅದೆಂಥ ಚೆಂದದ ಭಾಷೆ ಅಂದರೆ, ಅದರ ತಾಕತ್ತು ಮತ್ತು ಖದರು ಎಂಥದು ಅಂದರೆ, ‘ಉರ್ದು ಮರ್ದೋಂ ಕಿ ಜುಬಾನ್ ಹೈ’ ಅಂತಾರೆ: ಉರ್ದು ಗಂಡಸರ ಭಾಷೆ ಅಂತ. ಆದರೆ ಉರ್ದುವಿನಲ್ಲಿ ಅತ್ಯಂತ ಶ್ರೇಷ್ಠವಾದುದು ಮತ್ತು ಮಧುರವಾದದ್ದು ಅಂತ ಏನು ಸೃಷ್ಟಿಯಾಗಿದೆಯೋ ಅದೆಲ್ಲವೂ ಸ್ತ್ರೀಯರಿಗಾಗಿ! ನನ್ನಲ್ಲಿ ಉರ್ದುವಿನೆಡೆಗೆ ಪ್ರೀತಿ ಹುಟ್ಟಿಸಿದ್ದು ಒಬ್ಬ ಚೆಂದನೆಯ ಮುಸ್ಲಿಂ ಹುಡುಗಿ. ಎರಡು ವರ್ಷಗಳಲ್ಲಿ ಯಾವ ಪರಿ ಪಳಗಿಬಿಟ್ಟೆನೆಂದರೆ ನನ್ನ ಮುಸ್ಲಿಂ ಗೆಳೆಯರು ಹೊಟ್ಟೆಕಿಚ್ಚು ಪಡುವಷ್ಟು. ಅದಕ್ಕೇ ಬಹುಶಃ ಕವಿ ಗುಲ್ಜಾರ್ “ವೋಹ್ ಯಾರ್ ಹೈ ಜೋ ಖುಷ್‌ಬೂ ಕಿ ತರಹಾ / ಜಿಸ್‌ಕೀ ಜುಬಾನ್ ಉರ್ದು ಕಿ ತರಹಾ’ ಎಂದು ಬರೆಯುತ್ತಾರೆ.

Actually ನಾನು ಮತ್ತೆ ಸಾಹಿರ್‌ನನ್ನು ಓದತೊಡಗಿದ್ದೇನೆ. ಗೆಳೆಯ ಅಶೋಕ ಶೆಟ್ಟರ್ ಅದನ್ನು revisiting a writer ಅನ್ನುತ್ತಾನೆ. ಉದಾಹರಣೆಗೆ, ಇಪ್ಪತ್ತೈದು ವರ್ಷಗಳ ಹಿಂದೆ ನಿಮಗೆ ಭೈರಪ್ಪ ತುಂಬ ಇಷ್ಟದ ಕಾದಂಬರಿಕಾರರಾಗಿದ್ದರು ಅಂತ ಇಟ್ಟುಕೊಳ್ಳಿ. ಸಾಲಾಗಿ ಅವರ ಪುಸ್ತಕ ಜೋಡಿಸಿಟ್ಟುಕೊಂಡು ಒಂದಾದ ಮೇಲೊಂದರಂತೆ, ರೇಶ್ಮೆ ಹುಳು ತನ್ನ ಸೊಪ್ಪು ಮೇಯ್ದ ಹಾಗೆ, ಒಂದೊಂದನ್ನೇ ತಿಂದು ಹಾಕಿದಿರಿ. ಆಮೇಲೆ ಬೇರೆ ಲೇಖಕನಿಗೆ ವಲಸೆ ಹೋದಿರಿ. ಮತ್ತೀಗ ಇಪ್ಪತ್ತೈದು ವರ್ಷಗಳ ನಂತರ ಷೆಲ್ಫಿನ ಕೈಗೆಟುಕದಷ್ಟು ಮೇಲಿನ ಭಾಗಕ್ಕೆ ಸೇರಿದ್ದ ಭೈರಪ್ಪನವರ ಪುಸ್ತಕಗಳನ್ನು ಒಂದೊಂದಾಗಿ ಇಳಿಸಿಕೊಂಡು ಓದತೊಡಗುತ್ತೀರಿ. ಧರ್ಮಶ್ರೀ, ಜಲಪಾತ, ವಂಶವೃಕ್ಷ, ತಬ್ಬಲಿಯ ನೀನಾದೆ ಮಗನೆ, ನಿರಾಕರಣ, ಪರ್ವ-ಹೀಗೆ. That is revisiting a writer. ಇಪ್ಪತ್ತೈದು ವರ್ಷಗಳಲ್ಲಿ ನೀವು ಬೆಳೆದಿದ್ದೀರಾ? ಎಷ್ಟು ಬೆಳೆದಿದ್ದೀರಿ? ಅಂದಹಾಗೆ, ಭೈರಪ್ಪ ಬೆಳೆದಿದ್ದಾರಾ? ಎಷ್ಟು? ಹೇಗೆ? ಎರಡರದೂ ಕಿಮ್ಮತ್ತು ಕಟ್ಟಬಹುದು.

ನನ್ನ ಅಕ್ಕರೆಯ ಕಿರಿಯ ಗೆಳೆಯ ಸಂವರ್ಥ ‘ಸಾಹಿಲ್’ ಮೊನ್ನೆ ಒಂದು ಮೇಯ್ಲ್ ಕಳಿಸಿದ್ದ: ಸಾಹಿರ್ ಬಗ್ಗೆ ಅಕ್ಷಯ್ ಮನ್‌ವಾನಿ ಬರೆದ ಪುಸ್ತಕವೊಂದರ ಒಂದು ಅಧ್ಯಾಯದ attachment ಅದರೊಂದಿಗಿತ್ತು. ಗಬಗಬನೆ ಓದಿಬಿಟ್ಟೆ. ಹಿಂದೆ ೧೯೯೧ರಲ್ಲಿ, ಅಂದರೆ ಇಪ್ಪತ್ಮೂರು ವರ್ಷಗಳ ಹಿಂದೆ ಸಾಹಿರ್ ಬಗ್ಗೆ ಒಂದು ಪುಟ್ಟ ಪುಸ್ತಕ ಬರೆದಿದ್ದೆ: ‘ಪ್ಯಾಸಾ’. ಆತನ ಕೆಲವು ಪದ್ಯಗಳನ್ನು ಅನುವಾದಿಸಿದ್ದೆ: ಇವತ್ತಿಗೂ ಆ ಬಗ್ಗೆ ನಾಚಿಕೆ- ಹಿಂಜರಿಕೆ ಇವೆ. ಆದರೆ ಸಾಹಿರ್ ಬದುಕಿನ ಚಿತ್ರಣ ಚೆಂದಗೆ ಕಟ್ಟಿಕೊಟ್ಟಿದೆ. ನಂಗೊತ್ತು, ಪ್ರೇಮದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ನನ್ನೊಳಗೊಬ್ಬ master stylist ಹುಟ್ಟಿ ನಿಲ್ಲುತ್ತಾನೆ. ಸಾಹಿರ್ ಮಹಾನ್ ಪ್ರೇಮಿ. ಆತ ತನ್ನ ಅಮ್ಮನನ್ನು ಪ್ರೀತಿಸಿದ. ತಂಗಿಯರನ್ನು ಪ್ರೀತಿಸಿದ. ಕಾಲೇಜಿನಲ್ಲಿ ಮಹೀಂದರ್ ಕೌರಳನ್ನು ಪ್ರೀತಿಸಿದ. ತುಂಬ ನಾಜೂಕಾದ, ಪರಮ ಸುಂದರಿಯಾದ ಆ ಶ್ರೀಮಂತ ವಕೀಲನ ಮಗಳು ಇದ್ದಕ್ಕಿದ್ದಂತೆ ಕ್ಷಯ ಬಂದು ಸತ್ತು ಹೋದಳು. ಕಾಲೇಜಿನಿಂದ ಹೊರಹಾಕಿಸಿಕೊಳ್ಳುವುದಕ್ಕೆ ಮುನ್ನ ಅವಳ ಗೈರುಹಾಜರಿಯ ದುಃಖದಿಂದ ಚೇತರಿಸಿಕೊಂಡು ಇಷಾರ್ ಕೌರ್‌ಳನ್ನು ಪ್ರೀತಿಸಿದ.

ಅವಳೂ ತಪ್ಪಿ ಹೋದಳು. ಆಮೇಲೆ ಆ ತರಹದ ಪ್ರೀತಿಗಳು ಹಲವಾರಾದವು. ಆದರೆ ಇವತ್ತಿಗೂ ಸಾಹಿತ್ಯಿಕ ಇತಿಹಾಸದಲ್ಲಿ ಮರೆಯಲಾಗದೆ ಉಳಿದಿರುವುದೆಂದರೆ, ಸಾಹಿರ್ ಲುಧಿಯಾನವಿ ಮತ್ತು ಅಮೃತಾ ಪ್ರೀತಮ್‌ರ ನಡುವಿನ ಸ್ನೇಹ-ಪ್ರೀತಿ. ದೀಪದ ಸೊಡರಿಗೆ ಸಿಕ್ಕು ಉರಿದು ಹೋಗುವ ಪತಂಗದಂತೆ ಸಾಹಿರ್‌ನನ್ನು intense ಆಗಿ, ಸತ್ತು ಹೋಗುವಷ್ಟು ಗಾಢವಾಗಿ ಪ್ರೀತಿಸಿದಳು ಅಮೃತಾ. ಆಕೆಗಾಗಲೇ ಪ್ರೀತಮ್‌ಸಿಂಗ್‌ರೊಂದಿಗೆ ಮದುವೆಯಾಗಿತ್ತು. ಆದರೂ ಪ್ರೀತಿಸಿದಳು. ಗರ್ಭವತಿಯಾಗಿದ್ದಾಗ ಸಾಹಿರ್‌ನ ಪೊಟೋ ನನ್ನ ಕೋಣೆಯಲ್ಲಿ ಇಟ್ಟುಕೊಂಡಿದ್ದೆ. ಅದಕ್ಕಿಂತ ಹೆಚ್ಚಾಗಿ, ಸಾಹಿರ್ ನನ್ನ ಮೈಮನಸ್ಸು ತುಂಬಿ ನಿಂತಿದ್ದ. ಆತನ ಪ್ರಭಾವ ನನ್ನ ಮೇಲೆ ಎಷ್ಟು ಗಾಢವಾಗಿತ್ತೆಂದರೆ, ಹುಟ್ಟಿದ ಎಷ್ಟೋ ವರ್ಷಗಳ ನಂತರ ನನ್ನ ಮಗ ಬಂದು ಕೇಳಿದ್ದ: ಅಮ್ಮಾ, ನಾನು ಸಾಹಿರ್‌ನ ಹಾಗೇ ಇದೀನಿ ನೊಡೋಕೆ ಅಂತಾರೆ. ನಾನು ಸಾಹಿರ್ ಮಗನಾ? ತುಂಬ ಗಾಢವಾಗಿ ಯೋಚಿಸಿ ಅವನ ಕಣ್ಣುಗಳನ್ನೇ ನೋಡುತ್ತಾ “ಇಲ್ಲ" ಅಂದಿದ್ದೆ. ಒಂದು ಸತ್ಯವನ್ನು ಹೇಳುವುದು ಎಷ್ಟು ಕಷ್ಟ ಎಂದು ನಿಡುಸುಯ್ಯುತ್ತಾಳೆ ಅಮೃತಾ.

‘ಮುದ್ದೀನ ಗಂಡನ ಬಿಟ್ಟೆ/ ಉದ್ದಿಯ ಹೊಲವ ಬಿಟ್ಟೆ’ ಅನ್ನುತ್ತಾಳೆ ಎಲ್ಲೋ ಇರುವ ಕಿನ್ನರಿ ಜೋಗಿಯ ಅರಮನೆ ಹುಡುಕಿಕೊಂಡು ಹೊರಟ ಗೃಹಿಣಿ. ಹಾಗೆ ಸಾಹಿರ್‌ನ ಅರಸುತ್ತಾ ಹೊರಟು ಹೋದಳು ಅಮೃತಾ. ‘ಥತ್ ಹಾದರಗಿತ್ತಿ’ ಅನ್ನಬಹುದು ಪ್ರಪಂಚ: ಹಾದರ ಕೇವಲ ದೇಹಕ್ಕೆ ಸಂಬಂಧಿಸಿದ್ದು. ಮನಸ್ಸಿಗೆ ಸಂಬಂಧಪಟ್ಟ ವಲಸೆ, ‘ಓಡಿ ಹೋಗುವಿಕೆ’ಗಳಿವೆಯಲ್ಲ? ಅದು ನಿಜಕ್ಕೂ ಆರಾಧನೆಗಳು. ನಾನೊಮ್ಮೆ ಮಹಾನ್ ಗಾಯನ ಮಾಂತ್ರಿಕ ಹಿರಿಯಳನ್ನು ಕೇಳಿದ್ದೆ.
“ಅಮ್ಮಾ, ಚಿತ್ರಕಲೆ-ಬರವಣಿಗೆ-ಹಾಡುವಿಕೆ-ಶಿಲ್ಪಕಲೆ ಮುಂತಾದವೆಲ್ಲ ದೈವೀಕ, ಅವು ಪವಿತ್ರ ಅಂತಾರೆ. ಶೀಲಗೆಟ್ಟರೆ ನಮಗೆ ಜನ್ಮತಃ ಬಂದ ಆ ಕಲೆಗಳು ಕ್ರಮೇಣ ಕ್ಷೀಣಿಸಿ ನಾಶವಾಗಿ ಹೋಗುತ್ತವೆ ಅಂತಾರೆ. ಆದರೆ ಎಷ್ಟು ಜನ ಅದ್ಭುತ ಬರಹಗಾರರು, ಕವಿಗಳು, ಶಿಲ್ಪಿಗಳು, ಗಾಯಕರು ಲೋಲುಪರಾಗಿರುತ್ತಾರಲ್ಲವೆ? ಹಾಡುವ, ಬರೆಯುವ, ಚಿತ್ರ ಬಿಡಿಸುವ ಹೆಂಗಸರು ಕೂಡ: ಹಾದರವೆಂಬುದು ಈ ಶಾಪಗ್ರಸ್ತರಿಗೇ ಯಾಕೆ ಗಂಟು ಬೀಳುತ್ತದೆ. ತುಂಬ ಪ್ರಸಿದ್ಧ ಗಾಯಕಿಯರು ವೇಶ್ಯೆಯರಾಗಿರುವುದು ಉಂಟು... ನೀವು..." ಅಂದೆ.
“ತಮ್ಮಾ, ಅದು ಹಾದರ ಅಂತ ನೀನಂದರೆ ಅದು ಹಾದರವೇ. ಆದರೆ ಅದು ಕೇವಲ ದೇಹದ್ದು. ನನ್ನ ಮನಸ್ಸಿನಲ್ಲಿ ನಾನು ಸಂಸಾರ ಮಾಡಿದ್ದು, ಕೂಡಿದ್ದು, ಒಪ್ಪಿಸಿಕೊಂಡದ್ದು-ಒಬ್ಬೇ ಗಂಡನಿಗೆ. ಅದರ ಹೆಸರು ಸಂಗೀತ" ಅಂದವರೇ ಕನ್ನಡಕದ ಹಿಂದಿನ ಕಣ್ಣುಗಳನ್ನು ಯಾವುದೋ ಶೂನ್ಯದತ್ತ ಬಿಸಾಕಿ ಕುಳಿತಿದ್ದರು ಆ ತಾಯಿ.

ಅಮೃತಾ ಪ್ರೀತಮ್ ಮತ್ತು ಸಾಹಿರ್ ಬಗ್ಗೆ ಆಗ ನಾನು ಬರೆಯುತ್ತಿದ್ದೆ.
ಬರೆಯುತ್ತ ಬರೆಯುತ್ತ, ಸಾಹಿರ್ ಮತ್ತು ನಾನು ಎಷ್ಟೊಂದು ‘ಒಂದೇ’ ಅಲ್ಲವೆ ಅನಿಸುತ್ತಿತ್ತು. ಆತನ ಹೆಸರು ಅಬ್ದುಲ್ ಹಯೀ. ಭಯಂಕರ ಒರಟ, ಕಾಮಪಿಪಾಸು, ಶ್ರೀಮಂತ, ರಕ್ತದಾಹಿ ಜಮೀಂದಾರನ ಹನ್ನೊಂದನೆಯ ಹೆಂಡತಿಗೆ ಹುಟ್ಟಿದವನು ಸಾಹಿರ್. ಅಬ್ದುಲ್ ಹಯೀ ಅಂತ ಅವನಿಗೆ ಹೆಸರಿಡಲಾಗಿತ್ತು. ಕಾಕತಾಳೀಯ ನೋಡಿ, ಆ ಕ್ರೂರಿ ಜಮೀಂದಾರನ ಮನೆಯ ಪಕ್ಕದಾತನ ಹೆಸರು ಮಿಯಾ ಅಬ್ದುಲ್ ಹಯೀ. ಅವನ ಮೇಲೆ ಈ ಜಮೀಂದಾರನಿಗೆ ಜನ್ಮ ದ್ವೇಷ. ಸಾಯಂಕಾಲವಾದರೆ ಸಾಕು ಅಂಗಳದಲ್ಲಿ ಕುರ್ಚಿ ಹಾಕಿಸಿಕೊಂಡು ಕುಳಿತು,
“ಏಯ್, ಅಬ್ದುಲ್ ಹಯೀ... ಮಾದರ್ ಛೋದ್... ಈಚೆಗೆ ಬಾರೋ. ಅಬ್ದುಲ್ ಹಯೀ ಬೆಹನ್ ಛೋದ್ ನಿನ್ನಮ್ಮನ್ನ ಕರೆಯೋ" ಎಂದು ಬಯ್ಯಲಾರಂಭಿಸುತ್ತಿದ್ದ ಜಮೀಂದಾರ.

“ಯಾಕೆ ಹೀಗೆ ಬೈತೀಯ" ಎಂದು ಪಕ್ಕದ ಮನೆಯಾತ ಕೇಳಿದರೆ,
“ನಿನ್ನನ್ನು ಯಾರಯ್ಯ ಬೈದರು? ನನ್ನ ಮಗನನ್ನ ಬೈತಿದೀನಿ..." ಅನ್ನುತ್ತಿದ್ದ. ಹಾಗೆ ಬೈಗುಳ ಕೇಳಿಸಿಕೊಂಡೇ ಬೆಳೆದವನು ಸಾಹಿರ್. ಅಬ್ದುಲ್ ಹಯೀ ಎಂಬ ಹೆಸರೇ ಅವನಿಗೊಂದು ಹಿಂಸೆ. ಯಾವುದೋ ಹೆಸರಿನ ಹಕ್ಕಿಯ ಪಂಜರದಲ್ಲಿ ನಾನಿದ್ದೇನೆ ಎಂಬ ಭಾವ. ಹೀಗಾಗಿ, ಅವಕಾಶ ಸಿಕ್ಕ ಕೂಡಲೆ ಹೆಸರು ಬದಲಾಯಿಸಿಕೊಂಡು ಬಿಟ್ಟ. ಅದು ಕವಿತೆಯ ನೆರವಿನಿಂದ ಆದದ್ದು. ‘ಸಾಹಿರ್’ ಅಂದರೆ ಮೋಡಿಗಾರ-ಮಾಂತ್ರಿಕ ಎಂಬೆಲ್ಲ ಅರ್ಥ ಬರುತ್ತವೆ. ತನ್ನ ಕವಿತೆಗಳು, ಗೀತೆಗಳು, ಗಝಲುಗಳು ಇಡೀ ಜಗತ್ತಿನ ಮೇಲೆ ಮುಂದೆಂದೋ ಮೋಡಿ ಮಾಡುತ್ತವೆ ಎಂಬ ಅತಿ ಚಿಕ್ಕ ಕಲ್ಪನೆಯೂ ಇಲ್ಲದ ಕಾಲದಲ್ಲಿ ಅಬ್ದುಲ್ ಹಯೀ ತನ್ನ ಆರಾಧ್ಯ ದೈವದಂತಹ ಪರಮಗುರು ಶತಮಾನದ ಕವಿ ದಾಗ್ ದೆಹಲವಿಯ ಗಝಲೊಂದರಲ್ಲಿ ‘ಸಾಹಿರ್’ ಎಂಬ ಶಬ್ದ ಓದುತ್ತಿದ್ದಂತೆಯೇ ತನ್ನ ಕಾವ್ಯನಾಮವನ್ನು ‘ಸಾಹಿರ್’ ಎಂದು ಇಟ್ಟುಕೊಂಡು ಬಿಟ್ಟ. ಕಾವ್ಯನಾಮವನ್ನು ಹೆಚ್ಚು ಕಡಿಮೆ ಹೋಲುವ ಈ pen nameಗೆ ಉರ್ದುವಿನಲ್ಲಿ ‘ತಖಲ್ಲುಸ್’ ಅನ್ನುತ್ತಾರೆ. ಆದರೆ ತಖಲ್ಲುಸ್ ಅಂದರೆ ಕೇವಲ ಕಾವ್ಯನಾಮವಲ್ಲ: to escape ಎಂಬ ಅರ್ಥವೂ ಇದೆ. ಹಾಗಂದರೆ ಪರಾರಿಯಾಗುವುದು ಅಂತಲೂ ಅಲ್ಲ. ಒಂದರ್ಥದಲ್ಲಿ ಅದರ ಮರೆಯಲ್ಲಿ ನಿಂತು ನಮ್ಮ ಐಡೆಂಟಿಟಿ ಮರೆ ಮಾಚುವುದು ಅನ್ನೋ ಅರ್ಥ. ಇನ್ನೊಂದು ತೆರನಾಗಿ ಹೇಳುವುದಾದರೆ ಅಬ್ದುಲ್ ಹಯೀ ಎಂಬ ತನ್ನ ಜನ್ಮತಃ ಬಂದ (?) ಐಡೆಂಟಿಟಿಯನ್ನು ಕಳೆದುಕೊಂಡು ‘ಸಾಹಿರ್’ ಎಂಬ ಹೊಸ ಐಡೆಂಟಿಟಿ ಪಡೆಯುವ ಯತ್ನ ಅವನದಾಗಿತ್ತು. ಬಾಲ್ಯದಲ್ಲಿ ಬಿದ್ದಾಗ ಆದ ಮೊಳಕಾಲ ಚಿಪ್ಪಿನ ಗಾಯಗಳು ಆಗಲೇ ಮಾಯುತ್ತವೆ: ಆದರೆ ಅವುಗಳ ಕಲೆಗಳು ನಾವು ಬದುಕಿರುವ ತನಕ ಉಳಿಯುತ್ತವೆ. ನಿಜವಲ್ಲವೆ? ಅಬ್ದುಲ್ ಹಯೀ ಮಾಯ್ದ ಗಾಯದ ಕಲೆ ಅಳಿಸಲು ಅಂಥದೊಂದು ಪ್ರಯತ್ನ ಮಾಡಿದ್ದು.
ಆ ಕಾಲಕ್ಕೆ ಹೆಸರು ಅಥವಾ ತಖಲ್ಲುಸ್‌ನೊಂದಿಗೆ ತಮ್ಮ ಹುಟ್ಟೂರಿನ ಹೆಸರನ್ನು ಸೇರಿಸಿಕೊಳ್ಳುವ ಸಂಪ್ರದಾಯವಿತ್ತು. ದೆಹಲಿಯವರಾದ್ದರಿಂದ ದಾಗ್ ದೆಹಲವಿ, ಗೋರಖಪುರದವರಾದ್ದರಿಂದ ಫಿರಾಕ್ ಗೋರಖಪುರಿ, ಮಲೀಹಾಬಾದ್‌ನವರಾದ್ದರಿಂದ ಜೋಶ್ ಮಲೀಹಾಬಾದಿ, ಮೊರಾದಾಬಾದ್‌ನ ಅಲಿ ಸಿಕಂದರ್ ಅವರು ತಮ್ಮ ಹೆಸರನ್ನು ಜಿಗರ್ ಮೊರಾದಾಬಾದಿ, ಸುಲ್ತಾನ್‌ಪುರ್‌ನವರಾದ್ದರಿಂದ ಮಜರೂಹ್ ಸುಲ್ತಾನ್‌ಪುರಿ, ಲಖಸಾದವರಾದ್ದರಿಂದ ಮಜಾಜ್ ಲಖನವೀ ಹೀಗೆ ಹೆಸರಿಟ್ಟುಕೊಳ್ಳುತ್ತಿದ್ದರು. ಲುಧಿಯಾನಾದ ಅಬ್ದುಲ್ ಹಯೀ ‘ಸಾಹಿರ್ ಲುಧಿಯಾನವಿ’ ಆದದ್ದು ಹೀಗೆ.

ನನಗೆ ಯಾರಿಟ್ಟರು ಇವತ್ತಿನ ಹೆಸರು. ಅಮ್ಮ ‘ರವಿ’ ಎಂದಷ್ಟೆ ಇಟ್ಟಳು. ಬೇರೆ ಉದ್ದನೆಯ ಹೆಸರಿಟ್ಟರೆ ಅದನ್ನು cut short ಮಾಡಿ ವಿರೂಪಗೊಳಿಸುತ್ತಾರೆ ಎಂಬ ಪೊಸೆಸಿವ್‌ನೆಸ್ ಅಮ್ಮನದು. ಆದರೆ ಅದಕ್ಕೊಂದು ಇನಿಷಿಯಲ್ ಬೇಕಲ್ಲ? B.Ravi ಅಂತ ಬರೆಸಿದಳು. B ಅಂದರೆ ಆಕೆಯ ಅಂದಾಜಿನಲ್ಲಿ ‘ಬಳ್ಳಾರಿ’ ಎಂಬುದಾಗಿತ್ತು. ಏಕೆಂದರೆ ಆಕೆ ಎಲ್ಲ ಬಂಧ-ಬಂಧನ ಕಳೆದು-ಕಳಚಿಕೊಂಡು ಬಳ್ಳಾರಿಗೆ ಬಂದು ಅಲ್ಲೇ ನೌಕರಿ ಹಿಡಿದು ನೆಲೆಸಿದ್ದಳು. ನಂಗೆ ಅದೇನು ಗೊತ್ತು. ಅಮ್ಮನ ಹೆಸರು B.ಪಾರ್ವತಮ್ಮ. ಅಲ್ಲಿ B ಅಂದರೆ ಆಕೆಯ ಹುಟ್ಟೂರು ಮತ್ತು ವಂಶಸ್ಥರ ಹೆಸರು ಬೆಳಗೆರೆ. ಹೈಸ್ಕೂಲಿನಲ್ಲಿ ಗೋಪಿನಾಥರಾವ್ ಎಂಬ ನನ್ನ ಶಿಕ್ಷಕರು “ಬಿ ಅಂದ್ರೆ ಏನಲೇ?" ಅಂತ ಕೇಳಿದ್ದರು: ಕ್ಯುಮುಲೇಟಿವ್ ರೆಕಾರ್ಡ್ ಭರ್ತಿ ಮಾಡುವಾಗ. ಅಮ್ಮನ ಉದ್ದೇಶವೇ ಗೊತ್ತಿರದೆ, ಅಮ್ಮನಿಗೊಂದು ಮಾತೂ ಹೇಳದೆ ‘ಬಿ’ ಅಂದ್ರೆ ಬೆಳಗೆರೆ ಎಂದು ಬರೆಸಿಬಿಟ್ಟೆ. ಆಗ ನಾನು ಎಸೆಸೆಲ್ಸಿ ಓದುತ್ತಿದ್ದೆ. ನಿಮಗೆ ಈ ಮುಂಚೆ ಹೇಳಿದ್ದೆನೇನೋ ನೆನಪಿಲ್ಲ: ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ಆಗೊಂದು ಮಾಸ ಪತ್ರಿಕೆ ಬರುತ್ತಿತ್ತು. ಅದರಲ್ಲಿ ನನ್ನ ಮೊಟ್ಟ ಮೊದಲ ಸಣ್ಣ ಕತೆ ಪ್ರಕಟವಾಗಿತ್ತು. ‘ಬರೆದವರು : ಬಿ.ರವಿ’ ಎಂದು ಅಚ್ಚು ಮಾಡಿದ್ದರು. ಮೊದಲ ಬಾರಿಗೆ ರವಿ ಬೆಳಗೆರೆ ಅಂತ ಅಚ್ಚಾದದ್ದು ಧಾರವಾಡದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ನಾನು ಬರೆದ ಕಥೆ, ವಿಶ್ವವಿದ್ಯಾಲಯದ ಸಾಹಿತ್ಯಿಕ ಪತ್ರಿಕೆಯಲ್ಲಿ ಪ್ರಕಟವಾದಾಗ. ಉತ್ತರ ಕರ್ನಾಟಕದಲ್ಲಿ ಯಾರೂ ಬಿ.ರವಿ ಅಂತ ಹೆಸರಿಟ್ಟುಕೊಳ್ಳುವುದಿಲ್ಲ. ನನ್ನ ಹೆಸರು ರವಿ ಲಕ್ಷ್ಮಣರಾವ್ ಬೆಳಗೆರೆ ಅಂತಲೇ ಅವತ್ತಿನ ರೆಕಾರ್ಡ್‌ಗಳಲ್ಲಿ ದಾಖಲಾಗಿದೆ. Actually speaking, ಅದೂ ತಪ್ಪೇ. ರವಿ ಲಕ್ಷ್ಮಣರಾವ್ ಹಾನಗಲ್ ಅಂತ ಆಗಬೇಕಿತ್ತು. ಆದರೆ ಮೊಳಕಾಲ್ಮೂರಿನ ಬಳಿ ಇರುವ ಹಾನಗಲ್ಲು ಗ್ರಾಮದ ನೆಲದ ಹುಡಿ ನನ್ನ ಅಂಗಾಲಿಗೆ ಮೆತ್ತಿಕೊಳ್ಳಲೇ ಇಲ್ಲ. ನನ್ನ ತಂದೆ ಲಕ್ಷ್ಮಣರಾವ್‌ನ ಫೊಟೋ ನೋಡಿದಾಗ ನನ್ನ ವಯಸ್ಸು ಐವತ್ತು ವರ್ಷ. ತುಂಬ ಜತನದಿಂದ ಎತ್ತಿಟ್ಟುಕೊಂಡಿದ್ದೇನೆ: ಎರಡು ಫೊಟೋಗಳಿವೆ. ಆತ ತನ್ನ ನಾಲ್ವರು ಪತ್ನಿಯರ ಪೈಕಿ ಇಬ್ಬರೊಂದಿಗೆ-ಪ್ರತ್ಯೇಕ ಪ್ರತ್ಯೇಕವಾಗಿ- ತೆಗೆಯಿಸಿಕೊಂಡ ಫೊಟೋಗಳವು. ಅವು ನನಗೆ ಹೇಗೆ ಸಿಕ್ಕವು ಅಂತ ಬರೆಯಲು ಕುಳಿತರೆ ಅದೇ ಒಂದು ರೋಮಾಂಚಕ ಕಥೆ. ಎಂದಾದರೂ ಆತ್ಮ(?)ಚರಿತ್ರೆ ಅಂತ ಬರೆದರೆ ಅದರಲ್ಲಿ ಒಂದು ಅಧ್ಯಾಯ ಲಕ್ಷ್ಮಣರಾವ್ ಎಂಬ ಅಪರಿಚಿತ ಚಿತ್ರದ ಬಗ್ಗೆ ಬರೆದೇನು: ಫೊಟೋ ಕೂಡ ಪ್ರಕಟಿಸಿಯೇನು.

ಇನ್ನೊಂದು ಸಂಗತಿ ನೋಡಿ: ನನ್ನ ಅಮ್ಮನ ಮನೆಯಲ್ಲಿ ಅನೇಕರು ಬರಹಗಾರರಿದ್ದರು. ಅವರೆಲ್ಲ ತಮ್ಮ ಹೆಸರಿಗಿಂತ ಮುಂಚೆ ‘ಬೆಳಗೆರೆ’ ಅಂತ ಬರೆದುಕೊಂಡವರು. ಬೆಳಗೆರೆ ಚಂದ್ರಶೇಖರ ಶಾಸ್ತ್ರಿ , (ನನ್ನ ತಾತ) ಬೆಳಗೆರೆ ಸೀತಾರಾಮ ಶಾಸ್ತ್ರಿ, (ಸೋದರಮಾವ) ಬೆಳಗೆರೆ ಕೃಷ್ಣ ಶಾಸ್ತ್ರಿ, ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ-ಹೀಗೆ. ನಾನು ಬೆಳಗೆರೆ ರವಿ ಅಂತಾದರೂ ಇಟ್ಟುಕೊಳ್ಳಬಹುದಿತ್ತು. ಅದೇಕೋ ಪ್ರಾಸ ಹೊಂದುತ್ತಿಲ್ಲ ಅನ್ನಿಸಿತು. ರವಿ ಬೆಳಗೆರೆ ಅಂತ ಇಟ್ಟುಕೊಂಡೆ. ಇದೇನೂ ಮಹಾನ್ ಪ್ರಯೋಗವಲ್ಲ. ಆದರೆ I was the first writer to do it in my family. ಅಷ್ಟು ಚೆಂದನೆಯ ಕವಿತೆ, ಗೀತೆ, ಠುಮರಿ, ಹಾಡುಗಳನ್ನು ಆತ ಅಬ್ದುಲ್ ಹಯೀ ಎಂಬ ಹೆಸರಿನಲ್ಲೇ ಬರೆದಿದ್ದರೆ ಅದೇ ಹೆಸರು ನಮಗೆ ಇಷ್ಟವಾಗುತ್ತಿತ್ತು. ಬೆಳಗೆರೆ ರವಿ ಅಥವಾ ಆರ್.ಎಲ್.ಹಾನಗಲ್ ಕೂಡ ಇಷ್ಟೇ ಖ್ಯಾತಿ-ಕುಖ್ಯಾತಿ ಪಡೆಯುತ್ತಿದ್ದವಲ್ಲವೆ? ‘ತಖಲ್ಲುಸ್’ ಆ ಅರ್ಥದಲ್ಲಿ ನನಗೆ ಬಹುಶಃ ಬೇಕಾಗಿತ್ತು.

ಸಾಹಿರ್‌ಗೆ ಪ್ರಪಂಚವೆಂದರೆ ಅಮ್ಮ. ಅಮ್ಮ ಎಂದರೆ ಪ್ರಪಂಚ. ಆಕೆಯ ಹೆಸರು ಸರ್ದಾರ್ ಬೇಗಮ್. ಆಕೆಯ ಗಂಡನಿಗೆ ಹತ್ತು ಮದುವೆಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಹನ್ನೊಂದನೆಯಾಕೆ ಸರ್ದಾರ್ ಬೇಗಮ್. ಗಂಡನ ಕ್ರೌರ್ಯ, ಒರಟುತನ, ದಬ್ಬಾಳಿಕೆ ಇವುಗಳನ್ನು ಸಹಿಸಲಾರದೆ, ಆತನ ನೆರಳು ಮಗನ ಮೇಲೆ ಬೀಳಕೂಡದು ಎಂದು ನಿರ್ಧರಿಸಿ ಮಗುವಿನ ಸಮೇತ ಗಂಡನ ಮನೆಯಿಂದ ಹೊರಬಂದಳು. ಅಣ್ಣನ ಮನೆಯಲ್ಲಿದ್ದಳು. ಅಣ್ಣ ಓದಿದವನಲ್ಲ. ಹಣ್ಣಿನ ವ್ಯಾಪಾರಿ. ಆದರೆ ತಂಗಿಯ ಮಗ ಓದಲಿ ಅಂದ. ಹಟಕ್ಕೆ ಬಿದ್ದು, ಇದ್ದ ಚೂರುಪಾರು ಒಡವೆ ಮಾರಿ ಸಾಹಿರ್‌ನನ್ನು ಓದಿಸಿದಳು. ಗಂಡನ ಮೇಲೆ ಕೇಸು ಹಾಕಿ ನ್ಯಾಯಾಲಯದಲ್ಲಿ ಮಗು ತನ್ನೊಂದಿಗೇ ಇರಬೇಕು ಎಂಬ ತೀರ್ಪು ತಂದುಕೊಂಡಿದ್ದಳು. ಕೇಸು ನಡೆಸಿದರೆ ಮಗುವನ್ನು ಅಪಹರಿಸಿ ಬಿಡುತ್ತೇನೆ, ಕೊಂದು ಬಿಡುತ್ತೇನೆ ಅಂತ ಗಂಡ ಹೆದರಿಸಿದ್ದ. ಹೀಗಾಗಿ ಸಾಹಿರ್‌ನನ್ನು ಕಣ್ಣ ಮೊನೆಯಿಂದ ಆಚೆಗೆ ಹೋಗದಂತೆ ಸಾಕಿದಳು. ಭಯಂಕರ insecurity ಆಕೆಗಿತ್ತು. ಆದರೆ ಮಗ ಬೆಳೆದು ಮೈತುಂಬ ಗೆಳೆಯರನ್ನು ಹಚ್ಚಿಕೊಂಡಾಗ ಸಮಾಧಾನಗೊಂಡಳು. ಸಾಹಿರ್ ಅವತ್ತಿಗಾಗಲೇ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಕೂಟ (A.I.S.F) ಸೇರಿದ್ದ. ಮಿಲ್ ಕಾರ್ಮಿಕರ ಸಭೆಗಳಿಗೆ ಹೋಗಿ ಕ್ರಾಂತಿ ಗೀತೆ ಹಾಡುತ್ತಿದ್ದ, ಓದುತ್ತಿದ್ದ, ಭಾಷಣ ಮಾಡುತ್ತಿದ್ದ. ಸದ್ಯ ನನ್ನ ಮಗ ಇವರೆಲ್ಲರ ನಡುವೆ safe ಆಗಿದ್ದಾನೆ ಅಂದುಕೊಳ್ಳುತ್ತಿದ್ದಳು ತಾಯಿ. ಅನಕ್ಷರಸ್ಥ ಕುಟುಂಬದಿಂದ ಬಂದ ಸಾಹಿರ್ ಕವಿತೆ ಬರೆಯಲಾರಂಭಿಸಿದಾಗ ಆಕೆ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. “ನೀನು ಬರಹಗಾರನಾಗ್ತೀಯ ರವೀ" ಅಂತ ಅಮ್ಮ ನನ್ನ ಮೊದಲ, ಬಿ.ರವಿ ಹೆಸರಿನಲ್ಲಿ ಪ್ರಕಟವಾದಾಗ ತಬ್ಬಿ ಮುದ್ದಾಡಿದ್ದು ನನಗೆ ಈಗಲೂ ನೆನಪಿದೆ. ಆಗ ನಾನು ಓದುತ್ತಿದ್ದುದು ಎಂಟನೆಯ ಕ್ಲಾಸು.

ಆದರೆ ಸಾಹಿರ್ ಅಮ್ಮನೊಂದಿಗೆ ಜಗಳವಾಡುತ್ತಿದ್ದ. ಆಮೇಲೆ ಸರ್ದಾರ್ ಬೇಗಮ್ ಅಳುತ್ತಾ ಮಲಗಿದರೆ ವಿಪರೀತ disturb ಆಗಿ ಬಿಡುತ್ತಿದ್ದ. ಮನೆಯ ತುಂಬ ಒಂದೇ ಶತಪಥ. ಅಮ್ಮನಿಗೆ ಸಂತೋಷವಾಗಲಿಕ್ಕೆ ಏನೇನು ಬೇಕೋ ಅದನ್ನೆಲ್ಲ ಮಾಡುತ್ತಿದ್ದ. ಆಕೆ ಕಣ್ಣೊರೆಸಿಕೊಂಡು ನಗುತ್ತ ಎದ್ದು ಕುಳಿತರೆ ಅವನಿಗೆ ಹುಚ್ಚು ಸಂತಸ. ಲಲಿತೆಯನ್ನು ಕೇಳಿ ನೋಡಿ: ಇದೆಲ್ಲ ನನ್ನ-ಅಮ್ಮನ ಮಧ್ಯೆ ಅದೆಷ್ಟು ಸಲ ಆಗುತ್ತಿತ್ತೋ? ನಾವು ಯಾರನ್ನು ತುಂಬ ಪ್ರೀತಿಸುತ್ತೇವೆಯೋ ಅವರೊಂದಿಗೇ ಅಲ್ಲವೆ ನಮ್ಮ ಜಗಳ, ಮುನಿಸು, ಕದನ, ಸಂಧಾನ, ಸಂತಸ? ಸಾಹಿರ್‌ನ ಸಿಗರೇಟು, ಕುಡಿತ, ಎಲ್ಲೂ ನೌಕರಿಗೆ ಸೇರದಿರುವುದು-ಎಲ್ಲವೂ ಆಕೆಗೆ ನೋವು ಕೊಟ್ಟವು. ಸಾಹಿರ್ ಎಂಥ ಅತಿರೇಕಿಯೆಂದರೆ, ಬಂದ ಹುಡುಗಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಾಳೋ ಇಲ್ಲವೋ ಅಂತ ಕಡೆತನಕ ಮದುವೆಯಾಗಲೇ ಇಲ್ಲ. ನಾನು ಲಲಿತೆಯನ್ನು ಮದುವೆಯಾದದ್ದು, ಅವಳು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂಬ ಕಾರಣಕ್ಕೆ. ಕಟ್ಟ ಕಡೆಯ ದಿನದ ತನಕ ಅಂಥ ಅತಂತ್ರ ಆರ್ಥಿಕ ಜೀವನದಲ್ಲೂ ಲಲಿತೆ ಅಮ್ಮನನ್ನು ಹೂವಿನ ಪಕಳೆಯಷ್ಟು ಜೋಪಾನವಾಗಿ ನೋಡಿಕೊಂಡಳು. ‘ನಿಮ್ಮ ಕುಟುಂಬ, ಮಕ್ಕಳು, ಮೊಮ್ಮಕ್ಕಳು ಎಲ್ಲ ತುಂಬ ಸುಖವಾಗಿರುವುದಕ್ಕೆ ಅಮ್ಮನ ಆಶೀರ್ವಾದವೇ ಕಾರಣ’ ಅಂತ ಹಳೆಯ ಗೆಳೆಯರು ಅನ್ನುತ್ತಾರೆ. ಅಷ್ಟು ಆಶೀರ್ವಾದದ ಶಕ್ತಿ ಇದ್ದ ಅಮ್ಮ ಸುಖದ ದಿನಗಳಲ್ಲಿ ಯಾಕೆ ನಮ್ಮೊಂದಿಗಿಲ್ಲ? ನನ್ನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಅಂತ ನನಗೆ ಗೊತ್ತು.

Well, ಮತ್ತೆ ಸಾಹಿರ್‌ನನ್ನ, ಅಮೃತಾ ಪ್ರೀತಮ್‌ಳನ್ನ, ಇಮ್ರೋಜ್‌ರನ್ನ, ಗುಲ್ಜಾರ್‌ರನ್ನ ಓದತೊಡಗಿದ್ದೇನೆ. ಸಾಹಿರ್ ಹಾಡು ಬರೆದ ಬರಸಾತ್ ಕೀ ರಾತ್, ಧೂಲ್ ಕಾ ಫೂಲ್, ಪ್ಯಾಸಾ, ಹಮ್ ದೋನೋ, ಗಜಲ್, ನಯಾದೌರ್ ಮುಂತಾದ ಸಿನೆಮಾಗಳಿಂದ ಹಿಡಿದು ‘ಕಭೀ ಕಭೀ’ ಸಿನೆಮಾದ ತನಕ ಎಲ್ಲ ಹಾಡುಗಳನ್ನೂ ಕೇಳುತ್ತಿದ್ದೇನೆ.
ಇಂಥ ವಿಷಯಗಳಲ್ಲಿ ನನ್ನ ಆನಂದ ಹೊಟ್ಟೆಕಿಚ್ಚು ಹುಟ್ಟಿಸುವಂತಹುದು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books