Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂಥ ಸಿಟ್ಟೂ ಬಿಟ್ಟು ಹೋಗಿ ಬಿಡುತ್ತದೆ, ಹೇಳದೆ ಕೇಳದೆ!

ನನ್ನೊಂದಿಗೆ ಸರಿಸುಮಾರು ನಲವತ್ತು ವರ್ಷ ನಿರಂತರವಾಗಿ ಇದ್ದಂತಹುದು ಅದ್ಹೇಗೋ ಏನೋ, ಹೇಳದೆ ಕೇಳದೆ ನಾಪತ್ತೆಯಾಗಿ ಬಿಟ್ಟಿದೆ. ಅದು ಇದ್ದಷ್ಟು ದಿನ ಧುಮುಗುಡುತ್ತಿತ್ತು, ಹೆದರಿಸುತ್ತಿತ್ತು, ಅವರಿವರ ಕೈಲಿ ಕೆಲಸ ಮಾಡಿಸುತ್ತಿತ್ತು. ನನ್ನನ್ನೂ ಕೆಲಸಕ್ಕೆ ಹಚ್ಚುತ್ತಿತ್ತು, ನಿಂತು ಹೆಸರು ಕೆಡಿಸುತ್ತಿತ್ತು, ಕೆರಳಿ ಕೆಟ್ಟವನನ್ನಾಗಿ ಮಾಡುತ್ತಿತ್ತು. ಒಮ್ಮೆ ಒಳಗೇ ಕುದಿಯುತ್ತಿತ್ತು, ಮತ್ತೊಮ್ಮೆ ಸಂಬಂಧವೇ ಇಲ್ಲದವರ ಮೇಲೆ ಭೋರ್ಗರೆಯುತ್ತಿತ್ತು, ಪಶ್ಚಾತ್ತಾಪಕ್ಕೆ ನೂಕುತ್ತಿತ್ತು, ಗೆಳೆಯರನ್ನು ಕಳೆಯುತ್ತಿತ್ತು, ಬರೆಯಲು ಕೂಡಿಸುತ್ತಿತ್ತು, ಕೆದಕಿ ಛೇಡಿಸುತ್ತಿತ್ತು!
ಅಂಥದ್ದು ಅದೆಲ್ಲಿ ನಾಪತ್ತೆಯಾಗಿಬಿಟ್ಟಿತು?
ಅದರ ಹೆಸರು ಸಿಟ್ಟು!

ನನ್ನ ಸಿಟ್ಟು ನನ್ನ ಮೇಲೆ ನನಗೇ ಅಸಹ್ಯವಾಗುವಷ್ಟು ತೀವ್ರವಾಗಿದ್ದದ್ದು ಹೌದು. ಸರಿಸುಮಾರು ನನ್ನ ಒಂಬತ್ತು-ಹತ್ತನೇ ವಯಸ್ಸಿನಿಂದಲೇ ನನಗೆ ಸಿಟ್ಟು ರೂಢಿಯಾಗಿತ್ತು. ನನ್ನದು ಮುನಿಸಿಕೊಳ್ಳುವ ಮಟ್ಟದ ಸಿಟ್ಟಲ್ಲ. ಸುಮ್ಮನೆ ಮಾತನಾಡಿ, ಬೈಯ್ದು ಮುಗಿಸಿಕೊಳ್ಳುವಂಥ ಸಿಟ್ಟೂ ಅಲ್ಲ. ಕೈಗೆ ಏನು ಸಿಕ್ಕರೆ ಅದನ್ನು ಬೀಸಿ ಬಿಡುವಂಥ, ಸ್ವಲ್ಪ ಕೆಣಕಿದರೂ ಎದುರಿನವರ ಕೆನ್ನೆಗೆ ರಾಚಿ ಬಿಡುವಂಥ, ಕೆರಳಿ ಕೂಗು ಹಾಕಿದರೆ ಎದುರಿಗಿರುವವರ ಎದೆ ನಡುಗಿ ಹೋಗುವಂಥ ಕೆಟ್ಟ ಸಿಟ್ಟು. ಅನೇಕರು ನನಗೆ ಬುದ್ಧಿ ಹೇಳಿದ್ದಾರೆ, ಬೈದಿದ್ದಾರೆ, ಕಣ್ಣೀರಿಟ್ಟಿದ್ದಾರೆ, ಸಲಹೆ ಕೊಟ್ಟಿದ್ದಾರೆ, ಬಿಟ್ಟು ಹೋಗಿದ್ದಾರೆ, "ಯತ್ಲಾಗಾದರೂ ಹಾಳು ಬಿದ್ದು ಹೋಗಲಿ'' ಅಂತ ಸುಮ್ಮನೆ ಸಹಿಸಿಕೊಂಡಿದ್ದಾರೆ." ಈ ಸಿಟ್ಟಿನಲ್ಲಿ ಯಾವತ್ತಾದರೊಂದು ದಿನ ಮಾಡಬಾರದ ಅನಾಹುತ ಮಾಡಿ ಬಿಡ್ತೀಯ'' ಅಂತ ಎಚ್ಚರಿಸಿದವರೂ ಇದ್ದಾರೆ.

ಅಂಥ ಐತಿಹಾಸಿಕ (?) ಸಿಟ್ಟು ಅದೆಲ್ಲಿ ನಾಪತ್ತೆಯಾಯಿತೋ ನೋಡಿ: I could just overcome it.
ನಮ್ಮ ಮನೆಯಲ್ಲಿ ಸಿಟ್ಟು ಆನುವಂಶಿಕ. ಅಂಥ ಪ್ರಶಾಂತ ಮೂರ್ತಿಯಾದ ನನ್ನ ಸೋದರಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕೆಂಡಾಮಂಡಲ ಸಿಟ್ಟು ಮಾಡಿಕೊಳ್ಳುತ್ತಿದ್ದುದು ನನಗೆ ನೆನಪಿದೆ. ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳದೂ ಹೆಸರಾಂತ ಸಿಟ್ಟೇ. ನನ್ನ ದೊಡ್ಡಮ್ಮನ ಮಕ್ಕಳೂ ಸಿಟ್ಟಿನವರೇ. ಆದರೆ ನನ್ನ ತಲೆಮಾರಿನವರ ಪೈಕಿ ನಾನೇ ಅತ್ಯಂತ ಕುಖ್ಯಾತ sitter! ಆದರೆ ನಾವ್ಯಾರೂ ನಮ್ಮ ಸಿಟ್ಟನ್ನು ಬಹುಕಾಲ ಮುಂದುವರೆಸಿದವರಲ್ಲ. ಬಂದ ಸಿಟ್ಟನ್ನು ಕೂಗಾಡಿ, ಎಗರಾಡಿ ಕಳೆದುಕೊಳ್ಳುತ್ತೇವೆಯೇ ಹೊರತು ಯಾರ ಮೇಲೂ ಸಿಟ್ಟೊಂದನ್ನು ಸಾಧಿಸಿ, ಮನಸ್ಸಲ್ಲಿಟ್ಟುಕೊಂಡು, ಸಮಯ ಬಂದಾಗ ದ್ವೇಷ-ಸೇಡು ತೀರಿಸಿಕೊಂಡವರಲ್ಲ. ನಮ್ಮದು ಒಂದೇ ಸಮಸ್ಯೆ: ನಮಗೆ cool ಆಗಿರಲಿಕ್ಕೆಬಾರದು. ಉಳಿದ ವೇಳೆಗಳಲ್ಲಿ ತುಂಬ jovial ಆಗಿ ಎಲ್ಲರನ್ನೂ ನಗಿಸುತ್ತ ನಾವೂ ನಕ್ಕು, ನಮಗಿಂತ ಹಗುರ ಮನಸ್ಸಿನವರು ಈ ಜಗತ್ತಿನಲ್ಲೇ ಇಲ್ಲವೇನೋ ಎಂಬಂತಿರುತ್ತೇವೆ. ನಾವು ಇಡೀ ದಿವಸ ಧುಮುಗುಡುವ ದೂರ್ವಾಸರಲ್ಲ. ಹತ್ತಿರಕ್ಕೆ ಬಂದರೆ ಭಸ್ಮ ಮಾಡುವ ಜಮದಗ್ನಿಗಳಲ್ಲ. ಆದರೆ ಒಮ್ಮೆ ಪಿತ್ಥ ಕೆರಳಿತೋ? ಕೆಂಡಾಮಂಡಲ. ಹುಟ್ಟಿನಿಂದಲೂ ನಮಗೆ ವಿವೇಕವೇ ಇರಲಿಲ್ಲವೇನೋ ಎಂಬಂತಾಡಿ ಬಿಡುತ್ತೇವೆ. ಆ ಕ್ಷಣದ ಸಿಟ್ಟನ್ನಷ್ಟೇ ಅಲ್ಲ: ಎಷ್ಟೋ ವರ್ಷಗಳ ಅಸಮಾಧಾನಗಳನ್ನೆಲ್ಲ ನೆನಪು ಮಾಡಿಕೊಂಡು "ಹ್ಞಾಂ, ನೀನು ಅವತ್ತು ಹಾಗೆ ಮಾಡಿದ್ಯಾ...'' ಅಂತ ಎದುರಿಗಿದ್ದವರನ್ನು ಹಣಿದು, ಕುಕ್ಕಿದ ಹೇನಿನಂತೆ ಮಾಡಿ ಬಿಡುತ್ತೇವೆ.

ಇಂಥ ಸಿಟ್ಟು ಯಾರಿಗಾದರೂ ಯಾಕೆ ಬರುತ್ತೆ ಅಂತ ಯೋಚಿಸುತ್ತ ಕೂತಿದ್ದೆ. ನನಗೆ ಮೊದಲು ತೋಚಿದ್ದೇ-perfectionism! ಅದೊಂದು ಖಾಯಿಲೆ. ಏನು ಮಾಡಿದರೂ ತುಂಬ ಪರ್‌ಫೆಕ್ಟ್ ಆಗಿ ಮಾಡಬೇಕೆಂಬ ರೋಗ. ಎಲ್ಲಾದರೂ ಕೊಂಚ ಏರುಪೇರಾದರೆ ಸಿಟ್ಟು ಚರಗುಡುತ್ತದೆ. ಇದು ಕಡೆಕಡೆಗೆ ಎಲ್ಲಿಗೆ ಬಂದು ತಲುಪುತ್ತದೆಂದರೆ, ಇರಬೇಕಾದ ಜಾಗದಲ್ಲಿ ಕೂಂಬು, ಕನ್ನಡಕ ಇರಲಿಲ್ಲವೆಂದರೂ ಹೆಂಡತಿ ಮಕ್ಕಳ ಮೇಲೆ ರೇಗಿ ಕನ್ನಡಿ ಒಡೆದುಹಾಕುವ ಮಟ್ಟಕ್ಕೆ ತಲುಪುತ್ತದೆ. ನನ್ನ ಜೊತೆಗೆ ದುಡಿಯುತ್ತಿದ್ದ ಅನೇಕರಿಗೆ ಸಮಸ್ಯೆಯಾಗುತ್ತಿದ್ದುದೇ ಈ perfectionismನ ಪೀಡನೆಯಿಂದಾಗಿ.

ವಿಪರೀತ ಕೆಲಸ ಮೈಮೇಲೆ ಎಳೆದುಕೊಂಡರೂ ಪದೇಪದೆ ಸಿಟ್ಟು ಬರುತ್ತದೆ. ಅಂದು ಕೊಂಡ ಟೈಮಿಗೆ ಕೆಲಸ ಆಗಿರುವುದಿಲ್ಲ. ಕೈಲಿರುವ ಕೆಲಸವನ್ನು ನಾಲ್ಕು ಜನಕ್ಕೆ ನಾವು ಹಂಚುವುದೂ ಇಲ್ಲ. ಅವರಿವರು ಮಾಡಿದರೆ ನಮಗೆ ಸರಿಹೋಗುವುದಿಲ್ಲ. ಎಲ್ಲವನ್ನೂ ನಾವೇ ಮಾಡುತ್ತೇವೆ ಮತ್ತು ಪರ್‌ಫೆಕ್ಟಾಗೇ ಮಾಡುತ್ತೇವೆ, ಅಂದುಕೊಂಡ ವೇಳೆಗೇ ಮಾಡಿ ಮುಗಿಸುತ್ತೇವೆ ಅಂತ ಹೊರಟಾಗಲೇ ಮಾರಾಮಾರಿ. ಕೆಲವೊಮ್ಮೆ ಕೈಲಾಗದತನವೂ ಮನುಷ್ಯನನ್ನು ಕೋಪಿಷ್ಟನನ್ನಾಗಿ ಮಾಡುತ್ತದೆ. ಮೈಯಲ್ಲೆಲ್ಲೂ ಒಂದೇ ಕಡೆ ಅರಪಾವು ಮಾಂಸವಿಲ್ಲದ ನರಪೇತಲನೊಬ್ಬ ತನ್ನ ಹೆಂಡತಿ ಮಕ್ಕಳ ಮೇಲೆ ಯಾವ ಪರಿ ಕೂಗುತ್ತಿರುತ್ತಾನೋ ಗಮನಿಸಿ. ಅದು ಕೈಲಾಗದವನ ಅಕ್ಕಸ. ಹಾಗೆಯೇ, ಇಳಿವಯಸ್ಸಿನ ತಂದೆ-ತಾಯಿಯರ ಮೇಲೆ ಎಗ್ಗಿಲ್ಲದೆ ಕೈ ಮಾಡುವ, ಬಾಯಿಗೆ ಸಿಕ್ಕಂತೆ ಮಾತನಾಡುವ ಯುವಕ-ಯುವತಿಯರಿರುತ್ತಾರೆ. ಅವರದು ಶುದ್ಧ ಸ್ವೇಚ್ಛೆಯಿಂದ ಹುಟ್ಟಿದ ಸಿಟ್ಟು. ಚಿಕ್ಕಂದಿನಿಂದ ಒಂದು ಶಿಸ್ತಿಲ್ಲದೆ ಬೆಳೆದವರು, ಒಡೆದ ಕುಟುಂಬ (broken family) ಗಳಲ್ಲಿ ಬೆಳೆದವರು, ವಿಧವೆಯರ ಒಬ್ಬಂಟಿ ಮಕ್ಕಳು, ಡಿವೋರ್ಸಿಗಳ ಮಕ್ಕಳು ಇಂಥದೊಂದು ಸ್ವೇಚ್ಛೆ ಮತ್ತು ಸಿಟ್ಟು ಬೆಳೆಸಿಕೊಳ್ಳುತ್ತಾರೆ. ವಿಪರೀತ ಜಗಳವಾಡುವ ದಂಪತಿಗಳ ಮಕ್ಕಳಲ್ಲೂ ಹೀಗೆ ಸಿಟ್ಟು ಕಾಣಿಸಿಕೊಳ್ಳುತ್ತದೆ. ಮತ್ತೂ ಒಂದು ಗಮನಿಸಬೇಕಾದ ಸಂಗತಿಯೆಂದರೆ-ದೈಹಿಕವಾಗಿ ಬಲಹೀನರಾದವರಲ್ಲಿ ಸಿಟ್ಟು ಥರಗುಡುವಂತೆಯೇ, ನೈತಿಕವಾಗಿ ಅಶುದ್ಧರಾದವರಲ್ಲಿ, ಕಾನೂನು ಮೀರಿ ನಡೆಯುವವರಲ್ಲಿ, ಪೊಲೀಸರಿಗೆ ಹೆದರುವವರಲ್ಲಿ ಇಂಥ ಸಿಟ್ಟು ಕುಣಿದಾಡುತ್ತಿರುತ್ತದೆ.

ನಿಮ್ಮ ಸಿಟ್ಟು ಯಾವ ಮೂಲದ್ದು ಅಂತ ಗೊತ್ತು ಮಾಡಿಕೊಂಡರೆ, ಅದನ್ನು ಕಳೆದುಕೊಳ್ಳುವುದು ಸುಲಭ. "ನನ್ನ ಸ್ವಭಾವವೇ ಹಾಗೆ: ಸಿಟ್ಟಿನ ಸ್ವಭಾವ'' ಅಂದುಕೊಳ್ಳಬೇಡಿ. "ನಮ್ಮನೇಲಿ ಎಲ್ಲರೂ ಸಿಟ್ಟಿನವರೇ. ಸಿಟ್ಟೊಂದು ಬಿಟ್ರೆ ನಮ್ಮಲ್ಲಿ ಯಾರೂ ಕೆಟ್ಟವರಿಲ್ಲ'' ಅಂತಲೂ ಭಾವಿಸಬೇಡಿ. ತುಂಬ ಸಲ ಆನುವಂಶಿಕ ಅನ್ನಿಸುವಂತಹ ಸಿಟ್ಟು ಅಸಲಿಗೆ ಆನುವಂಶಿಕವಾಗಿರುವುದಿಲ್ಲ. ಅದು ಅನುಕರಣೆಯಾಗಿರುತ್ತದೆ. ತಂದೆಯ ಸಿಟ್ಟು ನೋಡಿ ನೋಡಿ, ಮಗ ಕಲಿತುಬಿಡುತ್ತಾನೆ. ಗಂಡನ ಸಿಟ್ಟನ್ನು ಹೆಂಡತಿ ಅನುಕರಿಸುತ್ತಾಳೆ. ಹೀಗೆ ಕಲಿತ ಸಿಟ್ಟನ್ನು ಮರೆಯುವುದು ಕಷ್ಟವೇನಲ್ಲ.

ಸಿಟ್ಟು ಬಂದಾಗ ಒಂದರಿಂದ ನೂರು ಎಣಿಸಿ, ರಬ್ಬರ್ ಬಾಲ್ ಹಿಸುಕಿರಿ, ದೇವರ ಸ್ತ್ರೋತ್ರ ಮಾಡಿ, ಸ್ಥಳ ಬದಲಾಯಿಸಿ-ಇವೆಲ್ಲ ತಾತ್ಕಾಲಿಕ ಶಮನಗಳು. ಕೆಲಬಾರಿ ಇವುಗಳ ಮೇಲೇ ಸಿಟ್ಟು ಬಂದು ಬಿಡುತ್ತದೆ. ಸಿಟ್ಟು ಕಳೆದುಕೊಳ್ಳುವ ಬೆಸ್ಟ್ ವಿಧಾನವೆಂದರೆ, ಸಿಟ್ಟು ಯಾಕೆ ಬರುತ್ತದೆ ಅಂತ ಅದರ ಮೂಲಕ್ಕೇ ಹೋಗಿಬಿಡುವುದು. ವಿಪರೀತ ಕೆಲಸ ಮಾಡುತ್ತಿದ್ದರೆ ಅದನ್ನು ಹಂಚಿ, ಕೆಲಸ ಕಡಿಮೆ ಮಾಡಿಕೊಳ್ಳಿ. ಕೆಲಸ ಕೆಟ್ಟರೆ "ಹಾಳು ಬಿದ್ದೋಗ್ಲಿ'' ಅಂತ ಸುಮ್ಮನಾಗುವುದನ್ನು ರೂಢಿ ಮಾಡಿಕೊಳ್ಳಿ. ಜಗತ್ತಿನಲ್ಲಿ ನೀವೊಬ್ಬರೇ ಸರಿಯಾಗಿ ಕೆಲಸಮಾಡುವವರು: "ಇನ್ಯಾರು ಮಾಡಿದರೂ ಸರಿ ಹೋಗಲ್ಲ ನಂಗೆ'' ಅನ್ನುವಂಥ ಕುಸುಪಿಷ್ಠೆಗಳನ್ನು ಬಿಟ್ಟುಬಿಡಿ. ಕೈಲಾಗದ ತನದಿಂದಾಗಿ ಸಿಟ್ಟು ಬರುತ್ತಿದ್ದರೆ ದೈಹಿಕವಾಗಿ ದೃಢವಾಗಲು ನೋಡಿ. ಕೇವಲ ಹೆಂಡತಿ ಮಕ್ಕಳ ಮೇಲೆ ಸಿಟ್ಟು ಬರುತ್ತಿದ್ದರೆ, ಆ ಸಿಟ್ಟನ್ನು ಬೇರೆಯವರ ಮೇಲೆ ತಿರುಗಿಸಿ ನೋಡಿ: ಪಾಠ ಅವರೇ ಕಲಿಸುತ್ತಾರೆ. ನೀವು ಅಪ್ಪಅಮ್ಮನ ಮೇಲೆ ಸಿಟ್ಟು ಮಾಡಿಕೊಂಡು ಒರಟಾಟ ಆಡುತ್ತಿದ್ದರೆ, ಅದನ್ನೇ ನಿಮ್ಮ ಮಕ್ಕಳು ನಿಮಗೆ ಮಾಡುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಅಂತಿಮವಾಗಿ, "ಈ ಸಿಟ್ಟಿನಿಂದ ನಷ್ಟವಾಗುವುದು ನಮಗೇ'' ಅಂತ ಅರ್ಥವಾಗಿಬಿಟ್ಟರೆ ಸಿಟ್ಟು ತಂತಾನೆ ನಶಿಸಿಹೋಗುತ್ತದೆ.

ಇವ್ಯಾವೂ ಉಪಯುಕ್ತವಾಗದಿದ್ದರೆ ಸೈಕಿಯಾಟ್ರಿಸ್ಟ್ ಒಬ್ಬರನ್ನ ಭೇಟಿಯಾಗಿ ಕೆಲವು ಮಾತ್ರೆಗಳು ಖಂಡಿತ ಸಹಾಯಮಾಡುತ್ತವೆ.
ಇಂತಿ ಸಿಟ್ ಲೆಸ್...

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books