Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ರಾಹುಲ್‌ಗಾಂಧಿ ಪ್ರಧಾನಿ ಹುದ್ದೆಗೇರುವ ಪವಾಡ ನಡೆಯುತ್ತದೆಯೇ?

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್‌ಗಾಂಧಿ ದಿಢೀರ್ ಬೆಳವಣಿಗೆಯಲ್ಲಿ ಈ ದೇಶದ ಪ್ರಧಾನಿ ಗದ್ದುಗೆಯ ಮೇಲೆ ಬಂದು ಕೂರಲಿದ್ದಾರಾ? ಹಾಗೊಂದು ಅನುಮಾನ ಇಡೀ ದೇಶವನ್ನು ಕಾಡುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಆಳುತ್ತಿರುವ ಪ್ರಧಾನಿ ಇದ್ದಕ್ಕಿದ್ದಂತೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಜಾಗ ಬಿಟ್ಟು ಕೊಟ್ಟ ನಿದರ್ಶನಗಳಿಲ್ಲ. ಆದರೆ ತಮ್ಮ ಕೈಲಿ ಆಳಲು ಬೇಕಾದ ಸಂಖ್ಯಾಬಲವಿಲ್ಲ ಎಂಬ ಕಾರಣಕ್ಕಾಗಿ ಬೇರೆ ರಂಗಗಳ ನಾಯಕರ ಕೈಗೆ ಅಧಿಕಾರ ಕೊಟ್ಟು ಕೊನೆಗೆ ಕಾಲೆಳೆದ ನಿದರ್ಶನಗಳು ಹಲವಾರಿವೆ. ಚೌಧರಿ ಚರಣ್‌ಸಿಂಗ್ ಅವರಿಗೆ ಬೆಂಬಲ ಕೊಟ್ಟು ಕೆಲ ದಿನಗಳ ಕಾಲ ಅವರು ಪ್ರಧಾನಿ ಹುದ್ದೆಯಲ್ಲಿ ಕೂರುವಂತೆ ಮಾಡಿದ್ದ ಇಂದಿರಾಗಾಂಧಿ ಆನಂತರ ರಪ್ಪಂತ ಅವರನ್ನು ಕೆಳಗಿಳಿಸಿದ್ದರು. ಮುಂದೆ ಚಂದ್ರಶೇಖರ್ ಪ್ರಧಾನಿ ಆಗಿದ್ದಾಗ ಅವರ ಕಾಲೆಳೆದು ಬೀಳಿಸುವ ಕೆಲಸ ಮಾಡಿದ್ದೂ ಕಾಂಗ್ರೆಸ್ಸೇ. ಆನಂತರ ತೊಂಭತ್ತಾರರಲ್ಲಿ ದೇಶದ ಪ್ರಧಾನಿಯಾದ ದೇವೆಗೌಡರು ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್‌ನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯ ಮೇಲೆ ಸದಾಕಾಲ ಕಣ್ಣಿಟ್ಟಿರುತ್ತಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಅವರನ್ನು ಗದ್ದುಗೆಯಿಂದ ಕೆಳಗಿಳಿಸಲಾಯಿತು.
ದೇವೆಗೌಡರ ನಂತರ ಪ್ರಧಾನಿ ಹುದ್ದೆಗೇರಿದ ಇಂದ್ರಕುಮಾರ್ ಗುಜ್ರಾಲ್ ಅವರ ಸಂಪುಟದಲ್ಲಿ ಡಿಎಂಕೆ ಸದಸ್ಯರಿದ್ದಾರೆ. ರಾಜೀವ್ ಹತ್ಯೆ ನಡೆಸಿದ ಎಲ್‌ಟಿಟಿಇ ಜತೆ ಡಿಎಂಕೆಗೆ ಸಂಬಂಧವಿದೆ. ಹೀಗಾಗಿ ರಾಜೀವ್ ಹಂತಕರ ಜತೆ ಸಂಬಂಧ ಇಟ್ಟುಕೊಂಡಿರುವ ಡಿಎಂಕೆ ಸದಸ್ಯರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳಕೂಡದು ಎಂದು ಕಾಂಗ್ರೆಸ್ ತಕರಾರು ತೆಗೆಯಿತು. ಈ ತಕರಾರಿಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ವಾಪಸು ಪಡೆಯಿತು. ಇವೆಲ್ಲ ನೆಪ ಅಷ್ಟೇ. ಮುಂದೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರ ರಚನೆಯಾದಾಗ ಅದೇ ಡಿಎಂಕೆ ಬೆಂಬಲ ಪಡೆದ ಕಾಂಗ್ರೆಸ್ ರಾಜೀವ್ ಹತ್ಯೆಯ ವಿಚಾರದ ಬಗ್ಗೆ ಮಾತೇ ಆಡಲಿಲ್ಲ. ಹೀಗೆ ರಾಜಕೀಯ ಚದುರಂಗದಾಟದಲ್ಲಿ ಪ್ರಧಾನಿ ಗದ್ದುಗೆಗೇರಲು ಯಾರಿಗೆ ಬೆಂಬಲ ನೀಡಿತೋ, ಅಂತಹವರ ಕಾಲೆಳೆದ ಅಪೂರ್ವ ಅನುಭವ ಕಾಂಗ್ರೆಸ್‌ಗಿದೆ. ಆದರೆ ಈಗಿನ ಸ್ಥಿತಿಯೇ ಬೇರೆ. ಹೀಗಾಗಿಯೇ ಇಡೀ ದೇಶದಲ್ಲಿ ಒಂದು ಬಗೆಯ ಅನುಮಾನದ ಅಲೆ ಎದ್ದಿದೆ. ಇನ್ನೇನು ಪ್ರಧಾನಿ ಹುದ್ದೆಯಿಂದ ಮನಮೋಹನ್‌ಸಿಂಗ್ ಕೆಳಗಿಳಿದು ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಗದ್ದುಗೆಯ ಮೇಲೆ ಕೂರಿಸಲು ವೇದಿಕೆ ಅಣಿ ಮಾಡಿಕೊಡುತ್ತಾರಾ? ಎಂಬುದು ಈ ಅನುಮಾನ.

ಹೀಗೆ ಅನುಮಾನ ಪಡಲು ಅಗತ್ಯವಾದಷ್ಟು ಕಾರಣಗಳೂ ಇವೆ. ಮೊದಲನೆಯದಾಗಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ನಾಯಕರಲ್ಲಿ ಮೊದಲಿನ ಉಮ್ಮೇದು ಉಳಿದಿಲ್ಲ. ಬಾಯಿ ತೆಗೆದರೆ ಸಾಕು ಬಬ್ರುವಾಹನನ ಪೌರುಷ ತೋರಿಸುವ ದಿಗ್ವಿಜಯ್‌ಸಿಂಗ್ ತಮ್ಮ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ರಾಜಸ್ತಾನ, ಛತ್ತೀಸ್‌ಗಡದಲ್ಲಿ ಅದೇನೇ ತಿಪ್ಪರಲಾಗ ಹಾಕಿದರೂ ಹಸ್ತ ಮೇಲೇಳಲಿಲ್ಲ. ಬದಲಿಗೆ ನೆಲದ ಮುಖ ನೋಡಿತು. ದಿಲ್ಲಿಯಲ್ಲಿ ಆಮ್‌ಆದ್ಮಿ ಪಾರ್ಟಿಗೆ ಬೆಂಬಲ ನೀಡಿ ಸರ್ಕಾರ ರಚಿಸಿದರೂ ಅದು ಕೇಜ್ರಿವಾಲ್‌ರ ಸರ್ಕಾರವೇ ಹೊರತು ಕಾಂಗ್ರೆಸ್ ತನಗಿರುವ ಜನ ಬೆಂಬಲದ ಆಧಾರದ ಮೇಲೆ ನಿಲ್ಲುವ ಶಕ್ತಿ ಪಡೆಯಲೇ ಇಲ್ಲ. ಇದ್ದುದರಲ್ಲಿ ಮಿಜೋರಾಂ ಒಂದೇ ಅದರ ಕೈ ಸೇರಿದ್ದು. ಆದರೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಮಿಜೋರಾಂನಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಶಕ್ತಿ ಏನೂ ಇಲ್ಲ. ಇರುವ ಒಂದೋ, ಎರಡು ಸೀಟುಗಳನ್ನು ಪಡೆದರೂ ಅದು ದೊಡ್ಡ ಪವರ್ರೇನೂ ಅಲ್ಲ. ಹೀಗೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಯಾವಾಗ ಕಾಂಗ್ರೆಸ್‌ಗೆ ಉಲ್ಟಾ ಹೊಡೆಯಿತೋ, ಆಗ ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರೇ ಕಾಂಗ್ರೆಸ್ ವಿಷಯದಲ್ಲಿ ಗುರುಗುಟ್ಟಿದರು. ಕೈ ಪಕ್ಷದ ನಾಯಕತ್ವ ದುರ್ಬಲವಾಗಿದೆ. ಅದು ಗೆಲ್ಲಿಸುವ ಸ್ಥಿತಿಯಲ್ಲಿಲ್ಲ ಎಂದರು. ಅವರು ಹೀಗೆ ಹೇಳಿದ್ದರ ಹಿಂದೆ ಏನು ಉದ್ದೇಶವಿದೆ? ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಮುತ್ಸದ್ಧಿತನವೇನೂ ಬೇಕಾಗಿಲ್ಲ.

ಭವಿಷ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟದ ಹಿರಿಯಣ್ಣನ ಜಾಗದಲ್ಲಿ ಕೂರಲು ಕಾಂಗ್ರೆಸ್ ಅರ್ಹತೆ ಕಳೆದುಕೊಳ್ಳುತ್ತಿದೆ ಎಂಬುದೇ ಅವರ ಮಾತಿನ ಅರ್ಥ. ಇದನ್ನು ಶರದ್ ಪವಾರ್ ನೇರವಾಗಿ ಹೇಳಿದ್ದಾರೆ. ಉಳಿದವರು ಹೇಳದಿದ್ದರೂ ಕಾಂಗ್ರೆಸ್‌ನ್ನು ನಂಬಿಕೊಂಡು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ದೇಶದ ಯಾವುದೇ ರಾಜ್ಯಗಳನ್ನು ತೆಗೆದುಕೊಳ್ಳಿ. ಕಾಂಗ್ರೆಸ್ ಬಂಪರ್ ಲಾಭ ಪಡೆಯುವ ಒಂದೇ ಒಂದು ರಾಜ್ಯ ಯಾವುದು ಅಂತ ಗುರುತಿಸುವುದು ಕಷ್ಟ. ಇದ್ದುದರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇತ್ತು. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಕ್ರಾಂತಿಯ ನಂತರ ಬಿಜೆಪಿ ಪಡಸಾಲೆಗೆ ಮರಳುವುದು ನಿಶ್ಚಿತವಾಗಿರುವುದರಿಂದ ಮತ್ತು ಇಂತಹ ಮರಳುವಿಕೆಯ ಮೂಲಕ ಬಿಜೆಪಿ ಮತ್ತೆ ತನ್ನ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ನಿಕ್ಕಿಯಾಗಿರುವುದರಿಂದ ಕಾಂಗ್ರೆಸ್‌ನ ಬಲ ತನ್ನಿಂತಾನೇ ಕುಸಿದು ಹೋಗುವ ಲಕ್ಷಣಗಳು ದಟ್ಟವಾಗಿವೆ. ಸಾಲದೆಂಬಂತೆ ಸ್ವಚ್ಛ ಸರ್ಕಾರ ಕೊಡುತ್ತೇನೆ. ಆರೋಪ ಇರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಸಿದ್ಧರಾಮಯ್ಯನವರನ್ನು ಏಕಾಏಕಿಯಾಗಿ ರಾಹುಲ್‌ಗಾಂಧಿ ಅವರೇ ದುರ್ಬಲಗೊಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಬಿಜೆಪಿ ಪಡಸಾಲೆಯಿಂದ ಹೊರಗಿದ್ದರು. ಲಿಂಗಾಯತ ವರ್ಗದ ಮತಗಳು ಒಡೆದವು. ಹೀಗಾಗಿ ಕಾಂಗ್ರೆಸ್ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ಆದರೆ ಈ ಸಲ ಯಡಿಯೂರಪ್ಪನವರನ್ನು ಕೆಜೆಪಿಯಲ್ಲೇ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ. ಹೀಗಿರುವಾಗ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ವರ್ಗ ಬಿಜೆಪಿ ಕಡೆ ನಿಲ್ಲುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದ ನೆರವಿಗೆ ಅಹಿಂದ ವರ್ಗಗಳ ಬೆಂಬಲ ಸಾಲುವುದಿಲ್ಲ. ಅಹಿಂದ ವರ್ಗಗಳ ಬೆಂಬಲದ ಜತೆಗೆ ಒಂದು ಪ್ರಬಲ ವರ್ಗದ ಬೆಂಬಲ ಬೇಕು. ಆ ವರ್ಗ ಒಕ್ಕಲಿಗ ವರ್ಗವೇ ಆಗಬೇಕು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕ್ಯಾಬಿನೆಟ್ಟಿಗೆ ಸೇರಿಸಿಕೊಳ್ಳಿ. ಇಲ್ಲದೇ ಹೋದರೆ ಆ ವರ್ಗ ಅತ್ತ ಜೆಡಿಎಸ್ ಜತೆಗೂ ನಿಲ್ಲಲಾಗದೆ, ಇತ್ತ ಕಾಂಗ್ರೆಸ್ ಕಡೆಗೂ ನಿಲ್ಲಲಾಗದೆ ಫೈನಲಿ ಅದರ ಲಾಭವೂ ಬಿಜೆಪಿಗೇ ಸಿಕ್ಕಿ ಬಿಡಬಹುದು. ಆದ್ದರಿಂದ ಭ್ರಷ್ಟಾಚಾರದ ಮಾತು ಪಕ್ಕಕ್ಕಿಡಿ. ಇವತ್ತು ಚುನಾವಣೆಗಳನ್ನು ಎದುರಿಸುವ ರಾಜಕೀಯ ಪಕ್ಷಗಳು ಪುಳಿಯೋಗರೆ, ಮೊಸರನ್ನ ಹಂಚಿ ಗೆಲ್ಲುವುದಿಲ್ಲ. ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ನಮ್ಮ ಕೈಗೆ ಎಷ್ಟು ಬಲವಿದೆಯೋ, ಅಷ್ಟು ಹೋರಾಟ ಮಾಡಬಹುದು. ಬಲವೇ ಇಲ್ಲದೆ ನೈತಿಕತೆಯ ಮಾತನಾಡುತ್ತಾ ಹೋರಾಡಿದರೆ ಗೆಲ್ಲುವುದು ಅಸಾಧ್ಯದ ಕೆಲಸ ಎಂಬಂತೆ ರಾಹುಲ್‌ಗಾಂಧಿ ಮಾತನಾಡಿದ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಬೇರೆ ದಾರಿ ಕಾಣಲಿಲ್ಲ.

ಹಾಗಂತ ಡಿ.ಕೆ.ಶಿ, ರೋಷನ್‌ಬೇಗ್ ಸಚಿವ ಸಂಪುಟಕ್ಕೆ ಸೇರಿದ ಕೂಡಲೇ ಕಾಂಗ್ರೆಸ್ ಬಲ ಹೆಚ್ಚಾಗಿ ಬಿಡುತ್ತದೆ ಅಂತಲ್ಲ. ಯಾಕೆಂದರೆ ಈ ಮಧ್ಯೆ ದಲಿತ ಸಮುದಾಯದ ಆಕ್ರೋಶ ಕಳೆದ ಏಳೂವರೆ ತಿಂಗಳಿನಿಂದ ಕೊತ ಕೊತ ಅನ್ನುತ್ತಲೇ ಇದೆ. ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಕಾರಣರಾದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಅನ್ಯಾಯವಾಗಿದೆ ಎಂಬ ಮಾತು ಆ ಸಮುದಾಯದಲ್ಲಿ ವ್ಯಾಪಕವಾಗಿ ಕೇಳುತ್ತಿದೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ಒಳಗಾಗಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸದೇ ಹೋದರೆ ದಲಿತ ಸಮುದಾಯ ದೊಡ್ಡ ಮಟ್ಟದಲ್ಲೇ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತದೆ. ವಸ್ತು ಸ್ಥಿತಿ ಎಂದರೆ ದಲಿತ ವರ್ಗದ ಎಡಗೈ ಸಮುದಾಯ ಒಳಮೀಸಲಾತಿ ವ್ಯವಸ್ಥೆಗೆ ವಿರುದ್ಧವಾದ ಕಾಂಗ್ರೆಸ್ ಪಕ್ಷವನ್ನು ನಂಬುವುದಿಲ್ಲ. ಹೀಗಾಗಿ ಅದರ ಪ್ರೀತಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಮೇಲಿದೆ. ಆದರೆ ಕರ್ನಾಟಕದ ಪಡಸಾಲೆಯಲ್ಲಿ ಬಹುಜನ ಸಮಾಜ ಪಕ್ಷ ಇನ್ನೊಂದು ಪಕ್ಷವನ್ನು ಸೋಲಿಸುವ ಶಕ್ತಿಯೇ ವಿನಾ ಗೆದ್ದು ಅಧಿಕಾರ ಸೂತ್ರ ಹಿಡಿಯುವ ಶಕ್ತಿಯಲ್ಲ. ಹೀಗಾಗಿ ದಲಿತ ವರ್ಗದ ಎಡಗೈ ಸಮುದಾಯ ಕಾಂಗ್ರೆಸ್‌ಗೆ ಪರ್ಯಾಯವಾಗಿ ಆರಿಸಿಕೊಂಡಿದ್ದು ಬಿಜೆಪಿಯನ್ನು ಎಂಬುದು ರಹಸ್ಯವೇನಲ್ಲ.

ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಡೆದು ಮೂರು ಹೋಳಾಯಿತು. ಅದೇ ಕಾಲಕ್ಕೆ ಕಾಂಗ್ರೆಸ್‌ನ ಮುಂಚೂಣಿಗೆ ಪರಮೇಶ್ವರ್ ಬಂದು ನಿಂತರು. ಹೀಗಾಗಿ ಎಡಗೈ ಸಮುದಾಯವೂ ಸೇರಿದಂತೆ ಕರ್ನಾಟಕದ ದಲಿತ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿತು. ಆದರೆ ಗೆದ್ದು ಬಂದ ಮೇಲೆ ಪರಮೇಶ್ವರ್‌ಗೆ ಯಾವ ಸ್ಥಾನವೂ ಸಿಗಲಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ವಾದ ಪದೇಪದೇ ಕೇಳಿ ಬಂದರೂ ಅದು ಈಡೇರಲಿಲ್ಲ. ಹೀಗಾಗಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ಒಳಗಾಗಿ ಇದು ಸಾಧಿತವಾಗದಿದ್ದರೆ ಅನುಮಾನವೇ ಬೇಡ. ಕಾಂಗ್ರೆಸ್ ಪಾಲಿಗೆ ಅದು ಹೊಡೆತ ಕೊಡಲಿದೆ. ಹೀಗಾಗಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮಿನಿಮಮ್ ಇಪ್ಪತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಕಾಣಿಸಿಕೊಂಡಿದ್ದರೂ ಈಗ ಅಂತಹ ವಾತಾವರಣವಿಲ್ಲ. ಆದ್ದರಿಂದ ದೇಶದ ಯಾವ ರಾಜ್ಯಗಳ ಕಡೆ ನೋಡಿದರೂ ಕಾಂಗ್ರೆಸ್‌ನ ಗಳಿಕೆ ನೂರರ ಗಡಿ ದಾಟುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ರಾಹುಲ್‌ಗಾಂಧಿಯೇ ಪ್ರಧಾನಿ ಕ್ಯಾಂಡಿಡೇಟ್ ಅಂತ ಘೋಷಿಸಿದರೂ ಬಿಜೆಪಿಯ ನರೇಂದ್ರಮೋದಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರ ಮುಂದೆ ಅವರು ಸಪ್ಪೆ ಸಪ್ಪೆ. ಹೀಗಾಗಿ ಏನೇ ಗರಿಷ್ಟ ಯತ್ನ ಮಾಡಿದರೂ ತೃತೀಯ ರಂಗದ ನಾಯಕರ ಕೃಪೆಯಿಂದ ಅವರು ದಿಲ್ಲಿ ಗದ್ದುಗೆಯ ಮೇಲೆ ಬಂದು ಕೂರುವ ಸಾಹಸ ಮಾಡಬೇಕೇ ವಿನಾ ಸ್ವಂತ ಶಕ್ತಿಯನ್ನು ನೆಚ್ಚಿಕೊಂಡು ಅಲ್ಲ.
ಯಾವಾಗ ತೃತೀಯ ರಂಗವನ್ನು ನೆಚ್ಚಿಕೊಂಡು ಹೆಜ್ಜೆ ಇಡಬೇಕಾಗುತ್ತದೋ, ಆಗ ರಾಹುಲ್ ಗಾಂಧೀಜಿ ಬನ್ನಿ. ನೀವೇ ಪ್ರಧಾನಿಯಾಗಿ ಎಂಬ ಔದಾರ್ಯವನ್ನು ತೃತೀಯರಂಗದ ನಾಯಕರು ತೋರಿಸುತ್ತಾರಾ? ನೋ ಚಾನ್ಸ್. ಈಗಾಗಲೇ ಆ ಹುದ್ದೆಯ ಮೇಲೆ ಕೂರಲು ತಮಗೆ ಸಿಗಬಹುದಾದ ಕಡೆ ಅವಕಾಶ ಇದು ಅಂತ ಭಾವಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್, ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಅವರಂತಹವರು ಪಿಎಂ ಗದ್ದುಗೆಯ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಈ ಮಧ್ಯೆ ತಮಿಳುನಾಡಿನ ಜಯಲಲಿತಾ ಅವರಂತಹವರಿಗೂ ಒಂದು ಸಲ ದೇಶದ ಪ್ರಧಾನಿ ಆಗುವ ಆಕಾಂಕ್ಷೆ ಇದೆ. ಹೀಗಾಗಿ ಅವರೂ ಎನ್‌ಡಿಎ, ಯುಪಿಎ, ತೃತೀಯರಂಗ ಸೇರಿದಂತೆ ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳದೆ ಕೇವಲ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗ ಮುಂಬರುವ ಲೋಕಸಭಾ ಚುನಾವಣೆಯ ನಂತರ ರಾಹುಲ್‌ಗಾಂಧಿ ಪ್ರಧಾನಿ ಗದ್ದುಗೆಯ ಮೇಲೆ ಕೂರುವ ವಾತಾವರಣ ನಿರ್ಮಾಣವಾಗುತ್ತದೆ ಅಂತ ಹೇಳಲು ಯಾವ ಕಡೆಯಿಂದಲೂ ಸಾಕ್ಷಿ, ಸಬೂತು ಸಿಗುವುದಿಲ್ಲ. ಹೀಗಾಗಿಯೇ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಒಂದು ಸಲ ನೋಡಬೇಕು ಎಂದು ಬಯಸುವ ಕಾಂಗ್ರೆಸ್ ನಾಯಕರು ಮನಮೋಹನ್‌ಸಿಂಗ್ ಅವರನ್ನು ಕೆಳಗಿಳಿಸಿ ಮೂರ‍್ನಾಲ್ಕು ತಿಂಗಳ ಮಟ್ಟಿಗಾದರೂ ರಾಹುಲ್ ಪ್ರಧಾನಿ ಗದ್ದುಗೆಯ ಮೇಲೆ ಕೂರಲಿ ಎಂದು ಬಯಸುತ್ತಿದ್ದಾರೆ.

ಅಂದ ಹಾಗೆ ಇವರೆಲ್ಲರ ವಾದವೆಂದರೆ ಈಗ ಆರೋಪ ಇರುವುದು ಯುಪಿಎ ಸರ್ಕಾರದ ಮೇಲೆ. ಅರ್ಥಾತ್ ಇದರ ಹೊಣೆಯನ್ನು ಹೆಗಲ ಮೇಲೆ ಹೊರಬೇಕಿರುವುದು ಮನಮೋಹನ್‌ಸಿಂಗ್. ಹೀಗಾಗಿ ಅವರನ್ನು ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಸಿ ರಾಹುಲ್‌ಗಾಂಧಿ ಅವರನ್ನು ಆ ಜಾಗಕ್ಕೆ ತಂದು ಕೂರಿಸೋಣ. ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸೋಣ ಅನ್ನುವುದು. ಯುವ ನಾಯಕ ರಾಹುಲ್‌ಗಾಂಧಿ ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಮಾತನಾಡಿದ್ದಾರೆ. ಜನ ಮೆಚ್ಚುವಂತೆ ನಡೆದುಕೊಂಡಿದ್ದಾರೆ. ಅಂತಹವರು ಒಂದು ಸಲ ಪ್ರಧಾನಿ ಹುದ್ದೆಗೆ ಬಂದು ಕೂತ ಮೇಲೆ ದೇಶದ ಜನರಿಗೆ ಭರವಸೆಗಳ ಮೇಲೆ ಭರವಸೆ ನೀಡಿದರಾಯಿತು. ಆಗ ಸಹಜವಾಗಿಯೇ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತದೆ. ಆಗ ಸರ್ಕಾರವನ್ನು ನಾವೇ ರಚಿಸಿದರೂ ಆಯಿತು. ತೃತೀಯರಂಗಕ್ಕೆ ಬೆಂಬಲ ಕೊಟ್ಟು ಫ್ರಂಟ್‌ಲೈನ್‌ನಲ್ಲಿ ಉಳಿದುಕೊಂಡರೂ ಆಯಿತು. ಒಟ್ಟಿನಲ್ಲಿ ರಾಹುಲ್‌ಗಾಂಧಿ ಅವರು ಪ್ರಧಾನಿ ಹುದ್ದೆಯ ಮೇಲೆ ಕೂರುವುದನ್ನು ನೋಡಿದರೆ ದೇಶದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದೂರದ ವಿಶ್ವಾಸವಂತೂ ಉಳಿಯುತ್ತದೆ. ಅದಕ್ಕಾದರೂ ಅವರು ಪ್ರಧಾನಿ ಗದ್ದುಗೆಯ ಮೇಲೆ ಕೂರಲಿ ಎಂಬುದು ಇವರ ವಾದ.

ಅವರ ವಾದದಲ್ಲಿ ಹುರುಳಿಲ್ಲ ಅಂತಲೂ ಅಲ್ಲ. ಯಾಕೆಂದರೆ ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಸ್ವಯಂಬಲದ ಮೇಲಾಗಲೀ, ತೃತೀಯರಂಗದ ಬೆಂಬಲದಿಂದಾಗಲೀ ಅಧಿಕಾರ ಹಿಡಿಯುವ ಸ್ಥಿತಿಯಲ್ಲಿಲ್ಲ. ಒಂದು ಸಲ ಕೇಂದ್ರದ ಅಧಿಕಾರ ಗದ್ದುಗೆಯಿಂದ ಐದು ವರ್ಷ ದೂರ ಉಳಿಯುವ ಸ್ಥಿತಿ ಬಂದರೆ ಆನಂತರ ಕಾಂಗ್ರೆಸ್ ಎಂಬ ದೋಣಿಯನ್ನು ಮುನ್ನಡೆಸುವ ಉತ್ಸಾಹ ರಾಹುಲ್‌ಗಾಂಧಿಯಲ್ಲಾಗಲೀ, ಪ್ರಿಯಾಂಕಾ ಗಾಂಧಿಯಲ್ಲಾಗಲೀ ಕಾಣುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಕೆಲ ದಿನಗಳಲ್ಲಿ ಪವಾಡ ಸಂಭವಿಸುತ್ತದೆಯೇ? ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಒಬ್ಬ ಪ್ರಧಾನಿ, ಇನ್ನು ನನಗೆ ಅಧಿಕಾರ ಸಾಕು, ಸುಸ್ತಾಗಿದ್ದೇನೆ. ಯುವಕರು ಅಧಿಕಾರ ಹಿಡಿಯಲಿ ಎಂದು ಹೇಳಿ ಕಿರೀಟ ಕಳಚಿಡುವ ಕೆಲಸ ಆಗುತ್ತದೆಯೇ? ಗೊತ್ತಿಲ್ಲ. ಆದರೆ ಈ ಬಗ್ಗೆ ನಡೆಯುತ್ತಿರುವ ಚರ್ಚೆ ಮಾತ್ರ ಕುತೂಹಲ ಹುಟ್ಟಿಸುವಂತಿದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books