Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಜ್ಯೋತಿಷ್ಯವಲ್ಲದ ಜ್ಯೋತಿಷ್ಯ ಎಂಬ ಹೊಸ ಮ್ಯಾಜಿಕ್

ರವಿ ಬೆಳಗೆರೆ ಭವಿಷ್ಯ ಹೇಳುತ್ತಾರಾ?

ಅದು ಬಿಡಿ : ಭವಿಷ್ಯ ನಂಬುತ್ತಾರಾ? ಇದು ಪ್ರಶ್ನೆ. ಅಸಲು ಪತ್ರಿಕೆಗಳಲ್ಲಿ ಪ್ರಕಟವಾಗುವ ದಿನ ಭವಿಷ್ಯ, ವಾರ ಭವಿಷ್ಯ ಮತ್ತು ಮಾಸ ಭವಿಷ್ಯಗಳನ್ನು ಕಣ್ತಪ್ಪಿನಿಂದಲೂ ಓದದ ನಾನು ಅದೆಲ್ಲವನ್ನೂ ಶುದ್ಧ ಅಪದ್ಧ ಎಂದೇ ಭಾವಿಸುತ್ತೇನೆ. ಆ ಪರಿ, ಎಲ್ಲ ರಾಶಿ-ನಕ್ಷತ್ರಗಳವರ ಭವಿಷ್ಯ ಬರೆಯುವ, ಟೀವಿಗಳಲ್ಲಿ ಶುದ್ಧ ಹಣೇ ಬರಹ ಬರೆಯುವ ಬ್ರಹ್ಮನಂತೆ (?) ಕುಳಿತು ಭವಿಷ್ಯ ಬೊಗಳುವ ಪಂಡಿತರಿಗೆ, ಅಸಲು ತಮ್ಮ ಭವಿಷ್ಯ ಗೊತ್ತೇನೋ ಕೇಳ್ರೀ? ದೂರದ ಮಾತು ಹಾಗಿರಲಿ, ಭವಿಷ್ಯ ಹೇಳಿ ಸ್ಟುಡಿಯೋದ ಮೆಟ್ಟಿಲಿಳಿದು ಹೋಗುವ ಅವರಿಗೆ ಎಷ್ಟನೇ ಮೆಟ್ಟಿಲ ಮೇಲಿಂದ ಜಾರಿ ಬೀಳುತ್ತೇವೆಂಬುದು ಗೊತ್ತೇನೋ ಕೇಳಿ ಎಂದು ಗೇಲಿ ಮಾಡುತ್ತಿರುತ್ತೇನೆ. ಬೆಂಗಳೂರಿನ ಅನೇಕ ಕುಖ್ಯಾತ ಜ್ಯೋತಿಷಿಗಳನ್ನು ಗೇಲಿ ಮಾಡಿ, ಅವರ ಖದೀಮತನವನ್ನು expose ಮಾಡಿ ನನ್ನ ಪತ್ರಿಕೆಯಲ್ಲಿ ಲೇಖನ-ವರದಿ ಪ್ರಕಟಿಸಿದ್ದೇನೆ. ಬ್ರಹ್ಮಾಂಡ ಪಿಂಡ ನರೇಂದ್ರ ಶರ್ಮ ಎಂಬ ಅವಿವೇಕಿ ನನ್ನ ಪಾಲಿನ ಅತಿ ದೊಡ್ಡ ಜೋಕು. ನಾನು ನನ್ನ ಜಾತಕ ತೋರಿಸಿ ಯಾರನ್ನಾದರೂ, ನನಗೆ ಮುಂದೇನಾಗಬಹುದು ಎಂದು ಯಾವತ್ತಿಗೂ ಕೇಳಿಲ್ಲ. ನನ್ನ ಮಕ್ಕಳ date of birth ಮತ್ತು ಹುಟ್ಟಿದ ಸಮಯ ಗೊತ್ತೇ ಹೊರತು, ಅವರ ಯಾವ ಜಾತಕಗಳನ್ನೂ ನಾನು ಬರೆಸಿಲ್ಲ. ಇತ್ತೀಚೆಗೆ ಕೆಲ ಕಾಲ ಅನಾರೋಗ್ಯದಿಂದ ನರಳುತ್ತಿದ್ದಾಗ ನನ್ನ ಹೆಂಡತಿ ‘ಮಾಟ ತೆಗೆಯುವವ’ರನ್ನು ಕರೆಸಿದ್ದಳಂತೆ. ನನಗೆ ಅದು ಗೊತ್ತೂ ಇಲ್ಲ. ತೆಗೆದದ್ದು ಏನನ್ನ ಅಂತ ಕುತೂಹಲಕ್ಕಾಗಿಯೂ ಕೇಳಲಿಲ್ಲ. ಇಷ್ಟಾದರೂ ನನ್ನ ಬದುಕಿನಲ್ಲಿ ಒಬ್ಬೇ ಒಬ್ಬ ಕೊರವಂಜಿಯಂಥವಳು ಹೇಳಿದ ಮೂರು ಸಂಗತಿಗಳು ಸತ್ಯವಾಗಿವೆ. “ನೀನು ಊರು ಬಿಡುತ್ತೀಯ" ಅಂತ ಸತ್ಯನಾರಾಯಣ ಪೇಟೆಯ ವೃದ್ಧ ಬ್ರಾಹ್ಮಣರೊಬ್ಬರು ಹೇಳಿದ ಮಾತು ನಿಜವಾಗಿದೆ. ‘ಪತ್ರಿಕೆ’ ಆರಂಭಿಸುವ ಮುನ್ನ “ಈ ಕ್ಷೇತ್ರದಲ್ಲಿ ನೀನು ಪ್ರಖರವಾಗಿ ಬೆಳೆಯುತ್ತೀಯ" ಎಂದು ಬೆಂಗಳೂರಿನ ವೃದ್ಧರೊಬ್ಬರು ಅಂದ ಮಾತು ಸತ್ಯವಾಗಿದೆ. ಇವೆಲ್ಲವುಗಳನ್ನೂ ನಾನು ಕಾಕತಾಳೀಯ ಅಥವಾ flukeಗಳೆಂದೇ ಭಾವಿಸುತ್ತೇನೆ.

ಆದರೆ ವಿಚಿತ್ರವೆಂಬಂತೆ ನಾನು ರಸ್ತೆ ಪಕ್ಕದಲ್ಲಿ ಕುಳಿತು ಪಂಜರದಲ್ಲಿ ಹಾರಲಾಗದ ಒಂದು ರೆಕ್ಕೆ ಮುರಿದ ಗಿಳಿಯನ್ನಿಟ್ಟುಕೊಂಡು ಶಾಸ್ತ್ರ ಹೇಳುವ ಗಿಳಿ ಶಾಸ್ತ್ರದವರನ್ನು ಇಷ್ಟಪಡುತ್ತೇನೆ. ನೆನಪಿರಲಿ, ನಂಬುತ್ತೇನೆ ಅಂತ ನಾನು ಅನ್ನುತ್ತಿಲ್ಲ. ನನ್ನ ದೃಷ್ಟಿಯಲ್ಲಿ ಅವರು ಅತ್ಯುತ್ತಮ mind readers. ಒಂದರ್ಥದಲ್ಲಿ ಸೈಕಾಲಜಿಸ್ಟ್‌ಗಳು. ಅವರು ಏನನ್ನು ಹೇಳುತ್ತಾರೋ ಆ ಮಾತು ಬಿಡಿ : ಐದರಿಂದ ಐವತ್ತು ರುಪಾಯಿ ಪಡೆದು ಪ್ರಶ್ನೆ ಕೇಳುವವನ ಮನಸ್ಸನ್ನು ಅರಿತು, ಅವನಿಗೆ ಆ ಕ್ಷಣಕ್ಕೆ ಬೇಕಾದ ಆತ್ಮವಿಶ್ವಾಸದ ಒಂದು ಔನ್ಸ್ ಕುಡಿಸಿ ಕಳಿಸುತ್ತಾರೆ. ಅಲ್ಲಿ ತಾಯತ ಕಟ್ಟಿಸಿಕೊಳ್ಳಿ, ಈ ದೇವರಿಗೆ ಐದು ತರಹದ ಎಣ್ಣೆ ಹಾಕಿ ದೀಪ ಹಚ್ಚಿ, ನಿಮ್ಮ ಮನೆಯ ಬಾಗಿಲನ್ನು ಪೂರ್ವದಿಂದ ಪಶ್ಚಿಮಕ್ಕೆ ತಿರುಗಿಸಿ, ನಾವು ಕೊಡುವ ಹರಳು ಉಂಗುರ ಮಾಡಿಸಿಕೊಂಡು ಹಾಕಿಕೊಳ್ಳಿ-ಇಂತಹ ಮುಂಡ ಬೋಳಿಸುವ ದಂಧೆಗೆ ಇಳಿಯುವುದಿಲ್ಲ.

ನಿಮಗೆ ಗೊತ್ತಿರಲಿ, ಲಾಡ್ಜ್‌ಗಳಲ್ಲಿ ಹಸ್ತ ಸಾಮುದ್ರಿಕೆ ಹೇಳುತ್ತೇವೆ ಎಂದು ಬೋರ್ಡು ಹಾಕಿಕೊಳ್ಳುವವರಿಂದ ಹಿಡಿದು ಮಹಾನ್ ಗಣಿತ ಶಾಸ್ತ್ರಜ್ಞರೆಂದು ಹೇಳಿಕೊಂಡು ಸ್ಟಾರ್ ಹೊಟೇಲುಗಳಲ್ಲಿ ಕೋಣೆ ಮಾಡಿಕೊಂಡು ಸಾವಿರಗಟ್ಟಲೆ ಫೀ ಕಿತ್ತುವ ಅಪದ್ಧ ಜ್ಯೋತಿಷಿಗಳ ತನಕ ಎಲ್ಲರೂ fake ಮತ್ತು farse. ಇದೇ ಗಣಿತ ಶಾಸ್ತ್ರ ತಜ್ಞೆ ಶಕುಂತಲಾ ದೇವಿಯವರನ್ನು, ಅವರದೇನೋ ಸಮಸ್ಯೆ ಇತ್ತು-ಬನ್ನಿ ಎಂದು ಕರೆದ ಕಾರಣಕ್ಕೆ ಆಕೆಯಿಂದ ಅಶೋಕಾ ಪಂಚತಾರಾ ಹೊಟೇಲಿಗೆ ಹೋದೆ. ಅಬ್ಬರದ ರೇಶಿಮೆ ಸೀರೆ ಉಟ್ಟುಕೊಂಡು, ಒಡವೆಗಳಿಂದ ತೂಕವಂತರಾಗಿ ಕುಳಿತಿದ್ದ ಅವರು ತಮ್ಮ ತೊಂದರೆ ಹೇಳಿಕೊಂಡರು. ಅದರ notes ಮಾಡಿಕೊಂಡೆ. ಕೊನೆಗೆ ನನಗೊಂದು complementaryಯಾಗಿ ಭವಿಷ್ಯ ಹೇಳಲು ಕುಳಿತರು.

“ನಿಮ್ಮ ಜನ್ಮ ದಿನಾಂಕ ಮತ್ತು ಸಮಯ ಹೇಳಿ" ಅಂದರು.
ಹೇಳಿದೆ.
ಆದರೆ ಆನಂತರ ಆಕೆ ನನ್ನ ಭವಿಷ್ಯ ಅಂತ ಏನು ಹೇಳಿದರು, ಅದೆಲ್ಲವೂ ಸುಳ್ಳಾಗಿತ್ತು. ಸಾವಿರಾರು, ಲಕ್ಷಾಂತರ ವಿಧದ ನಂಬಿಕೆ -ಮೂಢನಂಬಿಕೆಗಳಿರುವ ಭಾರತದಂತಹ ದೇಶದಲ್ಲಿ ಜ್ಯೋತಿಷ್ಯ ಹೇಳುವವರ ಹಿಂಡೇ ಇದೆ. ಕಾಲಕಾಲಕ್ಕೂ ಹುಟ್ಟಿಕೊಳ್ಳುತ್ತದೆ. ಚಂದ್ರಶೇಖರ ಭಟ್ಟ ಎಂಬ ಜ್ಯೋತಿಷಿಯಂತೂ ಜ್ಯೋತಿಷ್ಯ ಹೇಳುವುದರ ಜೊತೆಗೆ ಶೂನ್ಯ(?)ದಿಂದ ಬೆಳ್ಳಿ-ಬಂಗಾರದ ಗಣಪತಿ, ಲಿಂಗ ಇತ್ಯಾದಿಗಳನ್ನು ಸೃಷ್ಟಿಸಿಕೊಡುವ ಗಿಮಿಕ್ ರೂಢಿಸಿಕೊಂಡಿದ್ದಾರೆ. ಇದೆಲ್ಲವೂ ಬಹುಕಾಲ ನಡೆಯುವುದಿಲ್ಲ. “ಒಬ್ಬರನ್ನು ಒಂದು ಸಲ ಮೋಸ ಮಾಡಬಹುದು : ಎಲ್ಲರನ್ನೂ ಒಂದು ಸಲ ಮೋಸ ಮಾಡಬಹುದು. ಆದರೆ ಎಲ್ಲರನ್ನೂ ಎಲ್ಲ ಸಲ ಮೋಸ ಮಾಡಲು ಸಾಧ್ಯವಿಲ್ಲ" ಎಂಬ ನಾಣ್ನುಡಿಯೊಂದಿದೆ. But, ಎಲ್ಲಿಯ ತನಕ ಮೂರ್ಖರು, ಅಮಾಯಕರು, ಅಜ್ಞಾನಿಗಳು, ಆತ್ಮವಿಶ್ವಾಸವಿಲ್ಲದವರೂ ಇರುತ್ತಾರೋ- ಅಲ್ಲಿಯ ತನಕ ಗುರೂಜಿಗಳು, ಬಾಬಾಗಳು, ಜ್ಯೋತಿಷಿಗಳು, ಹಸ್ತ ಸಾಮುದ್ರಿಕೆಯವರು, ಮಾಟ-ಮಂತ್ರ ಮಾಡುವವರು ಇದ್ದೇ ಇರುತ್ತಾರೆ: ಅಂತೆಯೇ ವಾಸ್ತು ಪಿತಾಮಹರೂ ಇರುತ್ತಾರೆ. ಇದು ಭಾರತದ್ದೊಂದೇ ಸಮಸ್ಯೆಯಲ್ಲ: ಜಗತ್ತಿನ ಎಲ್ಲ ದೇಶಗಳಲ್ಲೂ ಇವರ ಹಾವಳಿ ನಾನಾ ರೂಪದಲ್ಲಿದೆ.

ಇವರೆಲ್ಲರ ಮಧ್ಯೆ ‘ಜ್ಯೋತಿಷ್ಯವಲ್ಲದ ಜ್ಯೋತಿಷ್ಯ’ ಹೇಳುವವರೂ ಇದ್ದಾರೆ. ಅವರು ತುಂಬ ವೈಜ್ಞಾನಿಕವಾಗಿ ರಾಶಿ ಚಕ್ರವನ್ನು (sun signs) ಅಭ್ಯಸಿಸುತ್ತಾರೆ. ಅದು ಕೂಡ ಪರಿಪೂರ್ಣ ಅಂತ ನಾನು ಭಾವಿಸುವುದಿಲ್ಲ. ಒಂದು ನಿರ್ದಿಷ್ಟ ಅವಧಿ ಅಥವಾ ಕಾಲಮಾನದಲ್ಲಿ ಹುಟ್ಟಿದವರ ವರ್ತನೆ, ವ್ಯಕ್ತಿತ್ವ ಹೀಗೇ ಇರುತ್ತದೆ ಎಂದು ನಿರ್ಧರಿಸುತ್ತಾರೆ. ‘ಸಾಮಾನ್ಯವಾಗಿ ಮೇಷ ರಾಶಿಯವರು ಹೀಗೇ ಇರುತ್ತಾರೆ’ ಎಂಬ ಪರಿಕಲ್ಪನೆ ಅವರದು. ಭವಿಷ್ಯ ಅಥವಾ ಜ್ಯೋತಿಷ್ಯ ಹೇಳುವುದು ಅವರ ಉದ್ದೇಶ ಅಲ್ಲದಿದ್ದರೂ ಒಂದು ರಾಶಿಗೆ ಸೇರಿದವರ, (ಅಂದರೆ ಒಂದು) sun signಗೆ ಸೇರಿದವರ ಕುರಿತಾದ ಅಧ್ಯಯನ ಮಾಡಿ, ‘ಅವರು ಹೆಚ್ಚು ಕಡಿಮೆ ಹೀಗಿರುತ್ತಾರೆ’ ಎಂಬ ನಿರ್ಣಯಕ್ಕೆ ಬರಬಹುದು. ಆದರೆ ಮೇಷ ರಾಶಿಯಲ್ಲಿ ಹುಟ್ಟಿದ ಎಲ್ಲರೂ ಹೀಗೇ ಇರುತ್ತಾರೆ ಎಂದು ಯಾರೂ ಹೇಳಲಾರರು. ಹೇಳಿದರೆ ಅದನ್ನು ನಂಬಲಿಕ್ಕೂ ಆಗದು. ನೋಡಿ, ಕುಂಭ (Aquarius) ರಾಶಿಯಲ್ಲಿ ಅಬ್ರಹಾಂ ಲಿಂಕನ್ ಮತ್ತು ಅಮೆರಿಕದ ಇನ್ನೊಬ್ಬ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್ ಹುಟ್ಟಿದರು. ಅದೇ ರಾಶಿಯಲ್ಲಿ ಅಭಿಷೇಕ್ ಬಚ್ಚನ್ ಹುಟ್ಟಿದ್ದಾನೆ. ತೆಲುಗಿನಲ್ಲಿ ಹೊಸ ಛಾಪು ಮೂಡಿಸಿದ ರವಿತೇಜ ಹುಟ್ಟಿದ್ದಾನೆ. ಪ್ರೇಕ್ಷಕರಲ್ಲಿ ನಿಜವಾದ ಧಡಕನ್ ಹುಟ್ಟಿಸಿದ ಊರ್ಮಿಳಾ ಮಾತೋಂಡ್ಕರ್‌ಳದೂ ಕುಂಭವೇ. ಅಂತೆಯೇ ಪ್ರೀತಿ ಜಿಂಟಾ. ವಿಪರ್ಯಾಸವೆಂದರೆ ‘ಸಂಸಾರದಲ್ಲಿ ಸಂಗೊಳ್ಳಿ’ ಖ್ಯಾತಿಯ ದರ್ಶನ್ ಕೂಡ ಕುಂಭದವನೇ. ಅಬ್ರಹಾಂ ಲಿಂಕನ್‌ಗೂ-ದರ್ಶನ್‌ಗೂ ಎಲ್ಲಿಂದೆಲ್ಲಿಯ ಹೋಲಿಕೆ? ಆದರೆ believe me, ಓದುತ್ತ ಹೋದರೆ ಇವರೆಲ್ಲರಲ್ಲೂ common ಅನ್ನಿಸುವಂತಹ ಕೆಲವಾದರೂ ಗುಣ ಸ್ವಭಾವಗಳಿದ್ದೇ ಇರುತ್ತವೆ. Both positive and negative. ಈ ಬಗ್ಗೆ ಸುಮಾರು ಹದಿನೈದು ವರ್ಷಗಳಿಂದ ಆಸಕ್ತಿ ವಹಿಸಿ, ಮನುಷ್ಯನ ವ್ಯಕ್ತಿತ್ವ ಮತ್ತು ಮನಸ್ಸುಗಳ ಬಗ್ಗೆ ಅಪಾರವಾದ ಆಸಕ್ತಿ ಇರುವ ನಾನು sun signs ಬಗ್ಗೆ ಬರೆದಿರುವ ಕೆಲವು ಪ್ರಖ್ಯಾತರ ಪುಸ್ತಕಗಳನ್ನು ಓದಿದೆ. ಅವರಲ್ಲಿ ಮೊದಲಿಗರು ಅಂದರೆ ಲಿಂಡಾ ಗುಡ್ ಮನ್. ಆನಂತರ ಪಿ. ಖುರಾನಾ, ಅದಾ ಔಬಿನ್, ಕ್ರಿಸ್ ಬ್ರಾಂಟ್ ರಿಸ್ಕೆ ಮುಂತಾದವರನ್ನು ಓದಿದೆ. ಈ ಮಧ್ಯೆ ಭಾರತದ ಬಹುದೊಡ್ಡ (?) ಜ್ಯೋತಿಷಿ ಬೇಜಾನ್ ದಾರೂವಾಲಾ ಅವರ ಪುಸ್ತಕಗಳನ್ನೂ ಓದಿದೆ. ಅವರೊಂದಿಗೆ ಮಾತೂ ಆಡಿದೆ. “ನೀವು ನನ್ನ ಜ್ಯೋತಿಷ್ಯದ, ವರ್ಷ ಭವಿಷ್ಯದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಿರಾ?" ಅಂತ ಆತ ಕೇಳಿದರು. ಆತನಿಗೆ ನನ್ನನ್ನು ಪರಿಚಯಿಸಿದ ಭಾನುಮತಿ “ರವಿಯವರು ಕನ್ನಡದ ಪ್ರಖ್ಯಾತ ಲೇಖಕರು" ಅಂದಿದ್ದರಂತೆ.

“ಮಾಡಲು ಬೇರೆ ಕೆಲಸ ಬೇಕಾದಷ್ಟಿದೆ" ಎಂದು ಉತ್ತರಿಸಿ ಸುಮ್ಮನಾದೆ.
ಈಗಾಗಲೇ ನಾನು ಅಂದುಕೊಂಡಂತೆ, ಇದು funny ಪ್ರಯತ್ನ. ಆಲ್ ಇಂಡಿಯಾ ರೇಡಿಯೋದ ‘FM ಕನ್ನಡ ಕಾಮನ ಬಿಲ್ಲು’ ಕಾರ್ಯಕ್ರಮದಲ್ಲಿ ನಾನು talk show ಕೊಡುವಾಗ ಈ ‘ಜ್ಯೋತಿಷ್ಯವಲ್ಲದ ಜ್ಯೋತಿಷ್ಯ’ದ ಬಗ್ಗೆ ಅನೇಕ ಕೇಳುಗರಲ್ಲಿ ಭಯಂಕರ ಕ್ಯೂರಿಯಾಸಿಟಿ ಉಂಟಾಗಿತ್ತು. Talk showನ ಕೊನೆಯಲ್ಲಿ ಮೂರು ನಿಮಿಷ ಮಾತ್ರ ಭವಿಷ್ಯ-ಜ್ಯೋತಿಷ್ಯಗಳ ಬಗ್ಗೆ ಮಾತನಾಡುತ್ತಿದ್ದೆ.
“ಅದನ್ನು ಕೊನೆಯಲ್ಲಿ ಹೇಳುವ ಬದಲು ಮೊದಲೇ ಹೇಳಿ ಬಿಡಿ ರವೀ. ಎಲ್ಲೋ ಹೊರಡಬೇಕಾಗಿರುತ್ತದೆ. ನಿನ್ನ ಜ್ಯೋತಿಷ್ಯ ವಾಣಿಯನ್ನು ಕೇಳದ ಹೊರತು ಸಮಾಧಾನವಿರುವುದಿಲ್ಲ" ಅಂತ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ ಅವರಿಂದ ಹಿಡಿದು ಹತ್ತಿರದ ಗೆಳೆಯರ ತನಕ ಅನೇಕರು ದುಂಬಾಲು ಬೀಳುತ್ತಿದ್ದರು.

Well, ಕೆಲವು ಸಲ ಕೆಲವರ date of birth ಅಥವಾ ರಾಶಿ ಸಂಗ್ರಹಿಸಿ ಅವರನ್ನು ಅಧ್ಯಯನ ಮಾಡಿದಾಗ ನಾನು ವಿವಿಧ ಪುಸ್ತಕಗಳಲ್ಲಿ ಓದಿದ ಸಂಗತಿಗಳು ಇವರಿಗೆ ಅನ್ವಯವಾಗುತ್ತವೆಯಲ್ಲವಾ? ಕಡೇಪಕ್ಷ ಅದರ ಕೆಲವು ಭಾಗಗಳು? ಅನ್ನಿಸಿದ್ದು ನಿಜ. ಓದಿದ ಪುಸ್ತಕಗಳನ್ನೆಲ್ಲ ಒತ್ತಟ್ಟಿಗೆ ಇಟ್ಟು ನಾನು ಬಲ್ಲ ಕೆಲವರನ್ನು ಸ್ಥೂಲವಾಗಿ ಅಭ್ಯಸಿಸಿದೆ. ಪುಸ್ತಕಗಳಲ್ಲಿ ಓದಿದುದನ್ನು ಮತ್ತೆ ತಿರುವಿ ಹಾಕಿದರೆ ಅದರಲ್ಲಿ ಬರೆದುದಕ್ಕೂ, ಇವರ ವರ್ತನೆಗೂ ಸಾಮ್ಯವಿದೆ ಅನ್ನಿಸಿತು. ಕೆಲವು ಸಾರ್ವಜನಿಕ ವ್ಯಕ್ತಿಗಳನ್ನು ಕೂಡ ಅವರ ವರ್ತನೆಗಳ, ಹೇಳಿಕೆಗಳ, ಭಾಷಣಗಳ, ನಟನೆಗಳ, ವ್ಯಕ್ತಿಗತ ಬದುಕಿನ ವಿವರಗಳ, ಅವರ ಕೆರಿಯರ್ ಗ್ರಾಫ್‌ಗಳ ಆಧಾರದ ಮೇಲೆ ಅಧ್ಯಯನ ಮಾಡಿದೆ. ತುಂಬ ವ್ಯತ್ಯಾಸವೇನೂ ಕಾಣಲಿಲ್ಲ. ಇದರೊಂದಿಗೆ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಕೆಲವು ಕೃತಿಗಳನ್ನೂ ಅಭ್ಯಸಿಸಿದೆ. ಈ ಅಧ್ಯಯನ, ಟಿಪ್ಪಣಿ, ಈ ಬಗ್ಗೆ ಅವರಿವರಿಂದ ಓದಿಸಿ ಕೇಳಿಸಿಕೊಂಡ ವಿವರಗಳು ಯಾವ ಪರಿ ನನ್ನ ಮೇಜನ್ನು ಆಕ್ರಮಿಸಿಕೊಂಡವೆಂದರೆ, “ರವಿ ಬೆಳಗೆರೆ ಭವಿಷ್ಯ ಹೇಳುತ್ತಾನೆ" ಎಂದು ಬೋರ್ಡು ಹಾಕಿಬಿಟ್ಟರೆ, ಮರುದಿನದಿಂದಲೇ ಭರ್ಜರಿ ವ್ಯಾಪಾರ ಶುರು.

ಆದರೆ ನಾನು ಯಾವತ್ತಿಗೂ, ಎಲ್ಲಿಯೂ ಬೋರ್ಡು ಹಾಕಿಕೊಂಡು ಕುಳಿತವನಲ್ಲ. ಕೂಡುವುದೇ ಆದರೆ ಪುಟ್ಟದೊಂದು ಕ್ಲಿನಿಕ್ ಮಾಡಿ ಮಕ್ಕಳಿಗೆ, ಅವರ ತಂದೆ ತಾಯಂದಿರಿಗೆ ತುಂಬ ಅವಶ್ಯಕವಾದ ಕೌನ್ಸೆಲಿಂಗ್ ಮಾಡುವಂಥ ಲೋಕೋಪಯೋಗಿ ಕೆಲಸ ಮಾಡುತ್ತೇನೆ. ಅದಕ್ಕೆ ಮುನ್ನ ನಾನು psychology, psychiatry ಓದಬೇಕು. ಈ ವಯಸ್ಸಿನಲ್ಲಿ, ನಾನು ಓದಿರುವ ಎಂ.ಎ. (ಇತಿಹಾಸ)ದ ಡಿಗ್ರಿಗೆ ಯಾವ ಸೈಕಾಲಜಿ ಕ್ಲಾಸಿನಲ್ಲಿ ಸೀಟು ಸಿಗುತ್ತದೆ? ಅದರಂತೆಯೇ, forensic science (ವಿಧಿ ವಿಜ್ಞಾನ) ನನ್ನ ಪ್ರಮುಖ ಆದ್ಯತೆ. ಹುಟ್ಟು ಎರಡೇ ವಿಧದ್ದು: ಒಂದು through proper channel. ಅಂದರೆ ಅವರು ಎಲ್ಲರಂತೆಯೇ ಯೋನಿ ಸಂಜಾತರು. ಎರಡನೆಯದು, ಸಿಝೇರಿಯನ್ ಸೆಕ್ಷನ್. ಹೊಟ್ಟೆಗೆ ಕತ್ತರಿ ಹಾಕಿ, ಹೆರಿಗೆಯ ನೋವೇ ಗೊತ್ತಾಗದಂತೆ ಮಗುವನ್ನು ಹೆರುವಿಕೆ. ಹೀಗೆ ಹುಟ್ಟು ಎರಡೇ ವಿಧದ್ದಾದರೆ, ಸಾವು ಸಾವಿರ ವಿಧದ್ದು ಅಂತಾರೆ ಫೊರೆನ್ಸಿಕ್ ತಜ್ಞ ಡಾ.ದೇವದಾಸ್. ನನಗೆ ಈ psychology ಮತ್ತು forensic scienceಗಳ ಬಗ್ಗೆ ಅಪರಿಮಿತ ಆಸಕ್ತಿ.

“ರವಿ ಬೆಳಗೆರೆ crime ಬಗ್ಗೆ ಬರೆದರೂ, ಮಾನವ ಸಂಬಂಧಗಳ ಬಗ್ಗೆ ಬರೆದರೂ ತುಂಬ ಚೆನ್ನಾಗಿ ಮನಮುಟ್ಟುವಂತೆ ಬರೆಯುತ್ತಾನೆ" ಎಂಬುದು ನನ್ನ ಓದುಗರ ಅಭಿಪ್ರಾಯ. crime ಬಗ್ಗೆ ಬರೆದು ಬರೆದು ಸಾಕಾಗಿದೆ. No more fun . ಆದರೆ ಸೈಕಾಲಜಿ ನನ್ನ first love. ಅದನ್ನು ನಂಬಿಕೊಂಡೇ, ಅದನ್ನು ಇಟ್ಟುಕೊಂಡೇ ಈ ರಾಶಿ ಚಕ್ರದ ಸೀರೀಸ್ ಬರೆಯಲು ಕುಳಿತಿದ್ದೇನೆ.
ನಿಮ್ಮ ರಾಶಿ ಮೇಷವಿರಬಹುದು, ಮಿಥುನವಿರಬಹುದು, ನನ್ನಂತೆಯೇ ಮೀನವಿರಬಹುದು. ನಿಮ್ಮ ಆಸಕ್ತಿಯ, ನಿಮ್ಮ ರಾಶಿಯ, ನಿಮ್ಮ ಪತ್ನಿಯ ರಾಶಿಯ, ಮಕ್ಕಳ ರಾಶಿಯ, ನೌಕರರ ಮತ್ತು ನಿಮ್ಮ ಧಣಿಯ ರಾಶಿಗೆ ಸಂಬಂಧಪಟ್ಟ ಈ ಪುಸ್ತಕವನ್ನು ಕೈಗೆತ್ತಿಕೊಳ್ಳಿ. ನಿಮಗೇ ಗೊತ್ತಿಲ್ಲದ ಕೆಲವು ಸಂಗತಿಗಳು ನಿಮ್ಮ ಬಗ್ಗೆಯೇ ಗೊತ್ತಾಗುತ್ತವೆ. Enjoy that. ಯಾರೋ ಹೇಳಿದರು, ಯಾರೋ ಬರೆದರು ಅಂತ ಅದನ್ನೇ ವೇದವಾಕ್ಯವನ್ನಾಗಿ ಸ್ವೀಕರಿಸಿ ಕನ್ನಡಕ್ಕೆ ತರ್ಜುಮೆ ಮಾಡಿ ನಿಮ್ಮ ಪುಟ್ಟ libraryಗೆ dump ಮಾಡಿ ಕಾಸು ಮಾಡಿಕೊಳ್ಳುವ ಮನುಷ್ಯ ನಾನಲ್ಲ. ನನಗೆ ಸರಿ ಅನ್ನಿಸಿದ್ದನ್ನು ಹೇಳಲು ಹಿಂಜರಿಯುವವನೂ ಅಲ್ಲ. ಹೀಗಾಗಿ ಈ ಪುಸ್ತಕವನ್ನು ನೀವು ನಂಬಬಹುದು.

ಪ್ರತಿ ರಾಶಿ (sun sign)ಗೂ ಒಂದೊಂದು ಪುಟ್ಟ ಪುಸ್ತಕವಿದೆ. ಅದರ ಬೆಲೆ ಕೇವಲ ೫೦/- ರುಪಾಯಿ. ಅಷ್ಟೂ ರಾಶಿಗಳ ಬಗ್ಗೆ ಬರೆಯಲಾದ ಪುಸ್ತಕದ ಬೆಲೆ ೬೦೦/- ರುಪಾಯಿ. Not very costly. ಓದಲಿಕ್ಕೆ ಕುತೂಹಲಕಾರಿ ಮತ್ತು ಜ್ಞಾನದಾಯಕ. ನಿಮಗೆ ಬೇಕಾದ್ದು ಆರಿಸಿಕೊಳ್ಳಿ. ಒಂದು ರಾಶಿ, ಉದಾಹರಣೆಗೆ ಮೇಷ : ಅದನ್ನು ಆಯ್ದುಕೊಂಡರೆ ಮೇಷ ರಾಶಿಯ ಗಂಡಸು, ಹೆಣ್ಣು ಅಥವಾ ಹೆಂಡತಿ, ಮೇಷ ರಾಶಿಯ ಮಗು, ಮೇಷ ರಾಶಿಯ ನೌಕರ ಅಥವಾ ಧಣಿ-ಅವರೆಲ್ಲರ ಆರೋಗ್ಯ, ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು-ಹೀಗೆ ಪ್ರತಿಯೊಂದನ್ನೂ ಈ ೫೦/ ರುಪಾಯಿಯ ಪುಟ್ಟ ಪುಸ್ತಕ ವಿವರಿಸುತ್ತದೆ. ನಂಬುವುದಕ್ಕೆ, ತಿರಸ್ಕರಿಸುವುದಕ್ಕೆ, ತಕರಾರು ತೆಗೆಯುವುದಕ್ಕೆ ನಿಮಗೆ ಎಂದಿನಂತೆ ಹಕ್ಕು ಇದ್ದೇ ಇದೆ. ಓದಿದ ಮೇಲೆ ನಿಮಗಿದು ಇಷ್ಟವಾದರೆ, ಒಂದು ಸಾಲು ಬರೆಯಿರಿ ಅಥವಾ ಮೇಲ್ ಮಾಡಿರಿ.

ನೀವು ಎಂದಿನಂತೆ ಈ ಪ್ರಯತ್ನವನ್ನೂ ಬರಮಾಡಿಕೊಳ್ಳುತ್ತೀರಿ ಎಂಬ ನಂಬಿಕೆಯೊಂದಿಗೆ...

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books