Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

"ಗೆಲುವು'' ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, "ದೇವರು ತುಂಬ ಹೃದಯವಂತ. ನಿನಗೆ ಅದ್ಭುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು''. ಕೂಡಲೆ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: "ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!'' ಮನುಷ್ಯನ ವಿಶ್ವಾಸವೆಂದರೆ ಅದು.

ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು goal ಅಲ್ಲ, ಹತ್ತಿನಿಂತ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತ ಹೋಗುವಂತಹುದು. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯುತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತ ಕೂತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಗೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ, ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.

ನೀವು ಇತಿಹಾಸವನ್ನೇ ನೋಡಿ. ಅಲ್ಲೆಲ್ಲೋ ಅಲೆಗ್ಝಾಂಡರ್ ಇದ್ದಾನೆ. ಮತ್ತೆಲ್ಲೋ ಬುದ್ಧ ಇದ್ದಾನೆ. ಬಾಬರ್ ಇದ್ದಾನೆ. ತಾಮರ‍್ಲೇನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೇ. ಇವರೆಲ್ಲರ ವ್ಯಕ್ತಿತ್ವಗಳನ್ನೂ study ಮಾಡಿದಾಗ, ಎಲ್ಲರಲ್ಲೂ ಕೆಲವು common qualityಗಳಿದ್ದವು ಅನಿಸುತ್ತದೆ. ಅವರು ಬದುಕಿದ್ದ ಕಾಲ ಯಾವುದೇ ಇರಲಿ. ಆ ಗುಣಗಳು ಮಾತ್ರ common ಆಗಿ ಎಲ್ಲರಲ್ಲೂ ಇರುತ್ತವೆ. ಆ ಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆ ಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲುವು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ್‌ನನ್ನು ನೋಡುತ್ತೇವೆ. ಹುಮಾಯೂನ್‌ನ ಬಲಹೀನತೆಗಳೇನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು avoid. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.

ಇಷ್ಟಕ್ಕೂ ಗೆಲುವೆಂಬುದು ಬಹಳ ದೊಡ್ಡ ನಿಗೂಢತೆಯೇನಲ್ಲ. ಅದರಲ್ಲಿ ರಹಸ್ಯವೆಂಬ ಯಾವ ಮಣ್ಣಂಗಟ್ಟಿಯೂ ಇಲ್ಲ. ಕೆಲವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದೃಷ್ಟವಂತನಾಗಿರುವುದಿಲ್ಲ. ಖಂಡಿತ ಕೆಟ್ಟವನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲವರಿಗೆ "ಗೆಲುವು'' ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವೀ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವೀ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಂತೋಷ, ಸಮಾಧಾನ, ಮನಸ್ಸಿನ ನೆಮ್ಮದಿ ಇವೆಲ್ಲ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ. ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೇನೋ ಆಗಿರಲೂಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿಬಿಡಲೂಬಹುದು. ಆದರೆ ಕರಾರುವಾಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ chase ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.

ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೆ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ feel ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೆ ನಿಲ್ದಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? positive ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದಿವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.

ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟುಗಳನ್ನು "ಆಹಾ" ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ಧಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ : ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಶವಲ್ಲ: ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ. ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.

ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈ ಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು: ಅದು ಗೆಲುವಿನ ಮೊದಲ ಶತ್ರು. ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲ್ಯಾನ್ ಇಲ್ಲದಿರುವುದು, ಖಚಿತವಾದ goalಗಳಿಲ್ಲದಿರುವುದು, ಮಾಡಬೇಕು ಅಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿ ಹೊತ್ತುಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಹೋಗುವುದು, ಚಿಕ್ಕಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿಯಿಲ್ಲದೆ ಹೋಗುವುದು, ಹಿಡಿದ ಕೆಲಸ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿವೆ ಇಲ್ಲದಿರುವುದುಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹಿಂದಕ್ಕೆಳೆದುಬಿಡುತ್ತವೆ.

ಕ್ಷಮಿಸಿ, ಮೊನ್ನೆ ಗೆಲುವಿನ ಬಗ್ಗೆ ಪುಸ್ತಕವೊಂದನ್ನು ಓದುತ್ತಿದ್ದಾಗ ನಾನು ಮಾಡಿಕೊಂಡ ಚಿಕ್ಕ ಟಿಪ್ಪಣಿಯಿದು. ಪುಸ್ತಕವನ್ನು ಬರೆದವರು ಶಿವ್‌ಖೇರಾ.
ಈ ವಾರಕ್ಕೆ ನಿಮಗಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books