Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹೊಸ ವರ್ಷಕ್ಕೆ ಚಿಯರ್ಸ್ ಹೇಳುವ ಮುನ್ನ..

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನದ ವಿಷಾದದೊಂದಿಗೆ ಈ ವರ್ಷಕ್ಕೆ ಗುಡ್‌ಬೈ ಹೇಳುತ್ತಾ ಹೊಸ ವರ್ಷಕ್ಕೆ ಅಡಿ ಇಡುವ ಅನಿವಾರ್ಯತೆ ಎದುರಾಗಿದೆ. ತಮ್ಮ ಬದುಕು, ಕೆಲಸಗಳ ಮೂಲಕ ನಾಡನ್ನು ಶ್ರೀಮಂತಗೊಳಿಸಿದ ಜೀವಗಳು ಇನ್ನಿಲ್ಲ ಎಂದಾಗ ಮನವೆಂಬ ಆಕಾಶದ ತುಂಬ ವಿಷಾದದ ಕಾರ್ಮೋಡ ಕವಿಯುತ್ತದೆ. ಜಿಎಸ್ಸೆಸ್ ಅಗಲಿಕೆ ಅಂತಹುದೊಂದು ಕಾರ್ಮೋಡ ಕವಿಯುವಂತೆ ಮಾಡಿದೆ. ಕಣ್ಣೀರು ಮಳೆಯಾಗಿ ಸುರಿಯುತ್ತಿದೆ. ಆದರೆ ಬದುಕು ಹೇಗೆ ಸಹಜವೋ ಸಾವು ಕೂಡಾ ಅಷ್ಟೇ ಸಹಜ. ಜಿಎಸ್ಸೆಸ್ ಇನ್ನಿಲ್ಲ ಎಂದರೂ ಅವರ ಕೃತಿಗಳ ಮೂಲಕ, ಮತ್ತೆ ಮತ್ತೆ ಕಾಡುವ ಕವನಗಳ ಮೂಲಕ ಅವರ ಅಸ್ತಿತ್ವ ಸದಾ ಕಾಲ ಹಸಿರಾಗಿಯೇ ಇರುತ್ತದೆಂಬ ಸಾಂತ್ವನದೊಂದಿಗೆ ನಾವು ಹೊಸ ವರ್ಷಕ್ಕೆ ಕಾಲಿಡೋಣ.

ಸುಮ್ಮನೆ ಅವಲೋಕಿಸುತ್ತಾ ಹೋದರೆ ನಮ್ಮ ಸುತ್ತಲ ಬದುಕಿನಲ್ಲಿ ಆವರಿಸುತ್ತಿರುವ ದುಗುಡಗಳ ಬಗ್ಗೆಯೇ ಖೇದವಾಗುತ್ತದೆ. ಮನುಷ್ಯ ಮನುಷ್ಯನ ನಡುವಣ ಸಂಬಂಧಗಳಿಗೆ ಮೌಲ್ಯವೇ ಇಲ್ಲದಂತಹ ಕಾಲಘಟ್ಟಕ್ಕೆ ಬಂದು ನಿಂತಂತೆ ಭಾಸವಾಗುತ್ತದೆ. ಇದು ಜಾಗತೀಕರಣದ ಪ್ರಭಾವ ಎಂಬುದು ಎಷ್ಟು ನಿಜವೋ, ಅದರ ಬಲೆಯಿಂದ ಹೊರಬರಲಾಗದ ಮನಃಸ್ಥಿತಿಯೂ ಅಷ್ಟೇ ಮುಖ್ಯ ಕಾರಣ. ಹೀಗಾಗಿಯೇ ಮೊನ್ನೆ ಕೆಲ ಸ್ನೇಹಿತರು ಸೇರಿದಾಗ ಮಾತು ಈ ವಿಷಯದತ್ತಲೇ ಹೊರಳಿಕೊಂಡಿತು.
ಬಡತನದಲ್ಲಿ ಇದ್ದ ಸುಖವನ್ನು ಶ್ರೀಮಂತಿಕೆ ಉಳಿಸಿಕೊಡಲಿಲ್ಲ ಎಂದು ಒಬ್ಬ ಗೆಳೆಯ ಖೇದ ವ್ಯಕ್ತಪಡಿಸಿದ. ಎಷ್ಟು ನಿಜ ಅಲ್ಲವೇ? ಬಡತನದ ಬವಣೆ ಒಳ್ಳೆಯದಲ್ಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಬವಣೆಯಿಂದ ಪಾರಾಗುವ ಧಾವಂತದಲ್ಲಿ ನಾವು ಒಂದು ಚಕ್ರಸುಳಿಗೆ ಸಿಲುಕಿಕೊಂಡು ಬಿಡುತ್ತೇವೆ. ಈ ಸುಳಿಯಾದರೂ ಎಷ್ಟು ಸುದೀರ್ಘ ಕಾಲ ನಮ್ಮನ್ನು ತನ್ನ ತೆಕ್ಕೆಯೊಳಗಿಟ್ಟುಕೊಂಡು ಮುಂದುವರಿಯುತ್ತದೆ ಎಂದರೆ ನಮಗೆ ಅರಿವಾಗುವ ಮುನ್ನವೇ ನಮ್ಮ ಸುಖ, ಸಂತೋಷ, ನೆಮ್ಮದಿ ಎಲ್ಲವನ್ನೂ ಅದು ಕಿತ್ತುಕೊಂಡುಬಿಟ್ಟಿರುತ್ತದೆ. ಅಷ್ಟೊತ್ತಿಗಾಗಲೇ ಹೊಟ್ಟೆ ತುಂಬ ಊಟ ಮಾಡುವ ಶಕ್ತಿ ಹೋಗಿರುತ್ತದೆ. ನಿದ್ರಾದೇವಿ ಸುಲಭವಾಗಿ ಮೈ ಮನಸ್ಸನ್ನು ಆವರಿಸುವ ಕಾಲ ದಾಟಿರುತ್ತದೆ. ಒಟ್ಟಿನಲ್ಲಿ ನೆಮ್ಮದಿ ಎಂಬುದು ಕಳೆದೇ ಹೋಗಿರುತ್ತದೆ. ಮತ್ತೆ ಅದನ್ನು ವಾಪಸ್ಸು ಪಡೆಯೋಣವೆಂದರೆ ವಯಸ್ಸೂ ಐವತ್ತರ ಗಡಿ ತಲುಪಿರುತ್ತದೆ.

ಆಗ ನೆಮ್ಮದಿಯ ಬದುಕಿಗೆ ಕಾತರಿಸಿದರೂ ವಾಪಸ್ಸು ಹೋಗುವುದು ಕಷ್ಟ. ಹಚ್ಚಿಕೊಂಡ ಕೆಲಸ, ಇರುವ ಜವಾಬ್ದಾರಿ, ತಲುಪಬೇಕಾದ ಗುರಿ ಹೀಗೆ ಎಲ್ಲವೂ ಸೇರಿ ಹೆಜ್ಜೆ ಮುಂದಿಡುವಂತೆ ಮಾಡುತ್ತವೆಯೇ ಹೊರತು ಮರಳಿ ಹೋಗುವ ಅವಕಾಶ ನೀಡುವುದು ಕಡಿಮೆ. ಹಾಗೆ ಮರಳಿ ಹೋಗುವ ಅವಕಾಶವನ್ನು ಕಲ್ಪಿಸಿಕೊಳ್ಳಬೇಕು ಎಂದು ಬಯಸುವ ಸಾವಿರ ಜನರ ಪೈಕಿ ಒಬ್ಬರಿಗೋ ಇಬ್ಬರಿಗೋ ಅಂತಹ ಅವಕಾಶ ಸಿಗಬಹುದೇನೋ, ಆದರೆ ಉಳಿದವರ ವಿಷಯದಲ್ಲಿ ಬದುಕು ನಿಷ್ಕರುಣಿ. ಹಾಗಂತ ತೀರಾ ನಿರಾಶರಾಗಿಬಿಡುವ ಅಗತ್ಯವೂ ಇಲ್ಲ.

ಯಾಕೆಂದರೆ ಆದಷ್ಟೂ ನೆಮ್ಮದಿಯತ್ತ ಸಾಗಲು ನಮಗೆ ಕಾಲಾವಕಾಶ ದಕ್ಕುತ್ತದೆ. ಅದನ್ನು ಸ್ವಲ್ಪ ಮಟ್ಟಿಗೆ ಸರಿ ಹೊಂದಿಸಿಕೊಳ್ಳುವ ಮನಃಸ್ಥಿತಿ ನಮಗಿರಬೇಕು ಅಷ್ಟೇ. ಹೀಗಾಗಿ ಇದ್ದುದರಲ್ಲೇ ನೆಮ್ಮದಿಯಿಂದ ಬದುಕುವ ಕಡೆ ಗಮನ ಹರಿಸಬೇಕು. ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ, ಒಂದು ಹಾಡು ಹೀಗೆ ಬದುಕನ್ನು ಪ್ರಫುಲ್ಲಗೊಳಿಸುವ ಅನೇಕ ಸಂಗತಿಗಳು ನಮ್ಮ ಅಕ್ಕ ಪಕ್ಕದಲ್ಲೇ ಇರುತ್ತವೆ. ನಮ್ಮ ಪಂಚೇಂದ್ರಿಯಗಳ ನೋಟ ಆ ಕಡೆ ಸರಿಯಬೇಕು ಅಷ್ಟೇ. ‘ನಾನು ಬಡವ ಆಕೆ ಬಡವಿ ಒಲವೇ ನಮ್ಮ ಬದುಕು..’ ಅಂತ ದ.ರಾ.ಬೇಂದ್ರೆ ಬರೆದ ಪದ್ಯ ಬದುಕಿನ ಓಟಕ್ಕೆ ತೆರೆದುಕೊಂಡ ಮನುಷ್ಯನಿಗೆ ಸರಿ ಹೋಗದೇ ಇರಬಹುದು. ಇದೊಳ್ಳೆ ಕತೆಯಾಯ್ತು, ನಾನು ಬಡವನಾಗಿದ್ದು, ನನ್ನ ಸಂಗಾತಿಯೂ ಬಡವಳಾಗಿದ್ದರೆ ಬರೀ ಒಲವಿಟ್ಟುಕೊಂಡು ಏನು ಮಾಡಬಹುದು ಎಂಬ ಭಾವ ಕಾಡಬಹುದು.

ಆದರೆ ಒಂದಲ್ಲ ಒಂದು ದಿನ ಅದರ ಅರ್ಥ ತಿಳಿಯುತ್ತದೆ. ಅರೇ ಹೌದಲ್ಲ, ನಮ್ಮ ಬದುಕಿನ ಓಟದಲ್ಲಿ, ದುಡಿಮೆಯ ಓಟದಲ್ಲಿ, ಗುರಿ ತಲುಪುವ ಓಟದಲ್ಲಿ ನಾವು ಒಲವು ಅನ್ನುವುದನ್ನೇ ಮರೆತುಬಿಟ್ಟಿದ್ದೇವೆ ಮತ್ತು ಒಲವಿನ ಕಣ್ಮರೆಯೇ ನಮ್ಮ ಅಶಾಂತಿಯ ಮೂಲ ಎಂಬುದು ಕನ್‌ಫರ್ಮ್ ಆಗುತ್ತದೆ. ಅಷ್ಟರಲ್ಲಾಗಲೇ ಹದಿನೈದಿಪ್ಪತ್ತು ವರ್ಷಗಳೋ, ಇಪ್ಪತ್ತೈದು ವರ್ಷಗಳೋ ಕಳೆದು ಹೋಗಿರುತ್ತವೆ. ಹೀಗಾಗಿ ಒಂದು ವಿಷಾದದೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಒಲವನ್ನು ಮರಳಿ ಗಳಿಸಿಕೊಳ್ಳುವ, ಆ ಮೂಲಕ ಮನುಷ್ಯ ಸಂಬಂಧಗಳ ಸೌಖ್ಯವನ್ನು ಕಾಪಾಡಿಕೊಳ್ಳುವ ಕಡೆ ನಮ್ಮ ಮನಸ್ಸು ಸರಿಯಬೇಕು.

ಒಂದು ಕಾಲದಲ್ಲಿ ಮನೆ ಮನೆಗಳಲ್ಲೂ ಇದ್ದ ಈ ಸೌಖ್ಯವನ್ನು ಅರ್ಥ ಮಾಡಿಕೊಳ್ಳಲು ನಾವು ಇವತ್ತು ಫಿಲಾಸಫರುಗಳ ಮೊರೆ ಹೋಗಬೇಕಾಗಿದೆ.ಅದಕ್ಕಾಗಿ ಸೆಪರೇಟ್ ಕೋಚಿಂಗ್ ಕ್ಲಾಸುಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕಿಂತ ದೊಡ್ಡ ವಿಷಾದದ ಸಂಗತಿ ಬೇರೇನಿದೆ? ಅರ್ಥಾತ್, ಬದುಕಿನ ಮೌಲ್ಯಗಳ ಬಗ್ಗೆ ತಿಳಿ ಹೇಳುವ ಒಂದು ಪರಂಪರೆ ಏನಿತ್ತು, ಆ ಪರಂಪರೆ ಈಗ ಉಳಿದಿಲ್ಲ. ಯಾವುದು ಸರಿ? ಯಾವುದು ತಪ್ಪು? ಬದುಕು ನಡೆಸಲು ಅಗತ್ಯವಾಗಿರುವುದೇನು? ಸುಖದ ಬಳ್ಳಿ ಅಂದರೆ ಏನು? ಇಂತಹ ಎಲ್ಲ ವಿಷಯಗಳನ್ನು ತಿಳಿ ಹೇಳುವ ಜೀವನಕ್ರಮ ನಮ್ಮಲ್ಲಿ ಹಾಸು ಹೊಕ್ಕಾಗಿತ್ತು.

ಆದರೆ ಈಗ ಅಂತಹ ಕ್ರಮವೇ ಅಸ್ತಿತ್ವದಲ್ಲಿಲ್ಲ. ಇದನ್ನು ಪುನರ್‌ಸ್ಥಾಪನೆ ಮಾಡುವುದು ಇವತ್ತಿನ ಅತ್ಯಂತ ದೊಡ್ಡ ಜವಾಬ್ದಾರಿ. ವಿಪರ್ಯಾಸವೆಂದರೆ ಜಾಗತೀಕರಣದ ಹೊಡೆತ ಯಾವ ಪರಿ ನಮ್ಮನ್ನು ಆವರಿಸಿಕೊಂಡಿದೆ ಎಂದರೆ ಒಂದೊಂದು ಚುನಾವಣೆಗಳು ಬಂದು ಹೋದ ಮೇಲೂ ದೇಶವನ್ನು ಭ್ರಷ್ಟಾಚಾರದ ಕಬಂಧ ಬಾಹುಗಳು ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಳ್ಳುತ್ತವೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ತಯಾರಿಯನ್ನೇ ಗಮನಿಸಿ. ಒಂದು ಕಡೆಯಿಂದ ನರೇಂದ್ರಮೋದಿ ಮತ್ತೊಂದು ಕಡೆಯಿಂದ ರಾಹುಲ್‌ಗಾಂಧಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಬಿಜೆಪಿಯೇ ಇರಬಹುದು, ಕಾಂಗ್ರೆಸ್ ಪಕ್ಷವೇ ಇರಬಹುದು, ಕಡಿಮೆ ಹಣ ಖರ್ಚು ಮಾಡುತ್ತವೆಯೇ? ನನ್ನ ಪ್ರಕಾರ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಈ ಸಲ ಎಲ್ಲ ರಾಜಕೀಯ ಪಕ್ಷಗಳು ಸೇರಿ ಕನಿಷ್ಟ ಒಂದು ಸಾವಿರ ಕೋಟಿ ರುಪಾಯಿಗಳ ಬಂಡವಾಳ ಹೂಡುತ್ತವೆ.

ಈ ಬಂಡವಾಳದ ದೊಡ್ಡ ಪಾಲು ಬಂಡವಾಳಶಾಹಿಗಳ ಮೂಲಕ ಬರುತ್ತದೆ. ಅದು ಕೈಗಾರಿಕೋದ್ಯಮಿಗಳಿರಬಹುದು, ಭೂ ಮಾಫಿಯಾ ಡಾನುಗಳಿರಬಹುದು ಅಥವಾ ಇನ್ಯಾವುದೇ ಮೂಲಗಳು ಇರಬಹುದು.ಒಟ್ಟಿನಲ್ಲಿ ಒಂದು ಸಾವಿರ ಕೋಟಿ ರುಪಾಯಿಗಳಷ್ಟು ಹಣ ಲೋಕಸಭಾ ಚುನಾವಣೆಗೆ ವೆಚ್ಚ ಆಗುತ್ತದೆ. ಇಷ್ಟು ಹಣ ಲೋಕಸಭಾ ಚುನಾವಣೆಯ ಮೇಲೆ ಬಂಡವಾಳವಾದರೆ ನಾಳೆ ಚುನಾವಣೆ ಮುಗಿದ ಮೇಲೆ ಅದನ್ನು ಬಡ್ಡಿಸಹಿತ ಪಡೆಯುವುದು ಅನಿವಾರ್ಯವಲ್ಲವೇ? ಬಂಡವಾಳ ಹಾಕಿದವರೇನು ಸುಮ್ಮನೆ ಇರುತ್ತಾರೆಯೇ? ನೋ ಚಾನ್ಸ್! ಅರ್ಥಾತ್, ನಾವು ನಮಗರಿವಿಲ್ಲದಂತೆಯೇ ಒಂದು ಚಕ್ರಸುಳಿಗೆ ಸಿಲುಕಿದ್ದೇವೆ.

ಇಷ್ಟವೋ ಕಷ್ಟವೋ, ಈ ಚಕ್ರಸುಳಿಯ ಜತೆ ಮುನ್ನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ನಾಳೆ ಒಂದು ಮಗು ಇಂಜಿನೀರಿಂಗ್ ಓದಬೇಕು ಎಂದರೆ ಒಂದೂ ಕಾಲು ಲಕ್ಷ ರುಪಾಯಿ ಫೀಸು ಕೊಡಬೇಕು ಅನ್ನುವ ಪರಿಸ್ಥಿತಿ ಬಂತು ಅಂತಿಟ್ಟುಕೊಳ್ಳಿ. ಬಡಮಧ್ಯಮ ವರ್ಗದವರು ಎಲ್ಲಿಂದ ಈ ಪ್ರಮಾಣದ ಹಣ ತರಬೇಕು? ಸಾಲ ಸೋಲ ಮಾಡಿ ಕಟ್ಟಿದರೂ ಅದನ್ನು ತೀರಿಸಲು ಏನು ಮಾಡಬೇಕು? ನಿಜ, ಈ ಕುರಿತು ಎಲ್ಲ ಕಡೆಗಳಿಂದ ಕೂಗು ಮೇಲೆದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಸಭೆ ಮಾಡಿ, ೨೦೦೬ರ ಉನ್ನತ ಶಿಕ್ಷಣ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರುವುದಿಲ್ಲ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಚರ್ಚಿಸಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನೀರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಹಳೆಯ ಪದ್ಧತಿಯೇ ಮುಂದುವರಿಯುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಅವರು ಹೇಳಿದ ಪ್ರಕಾರ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿದರೂ ಫೈನಲಿ, ವಿದ್ಯಾರ್ಥಿಗಳು ಕೊಡುವ ಶುಲ್ಕದ ಪ್ರಮಾಣ ಕೊಂಚ ಕಡಿಮೆಯಾಗಬಹುದೇ ಹೊರತು ಈ ವರ್ಷದಷ್ಟೇ ಇರಲು ಸಾಧ್ಯವಿಲ್ಲವಲ್ಲ? ಅಂದರೆ ಈ ವರ್ಷ ಇಂಜಿನೀರಿಂಗ್ ಓದಲು ಅರವತ್ತು ಸಾವಿರ ರುಪಾಯಿಗಳನ್ನು ಕೊಡಬೇಕಾದವರು ನಾಳೆ ಎಪ್ಪತ್ತೈದು-ಎಂಭತ್ತು ಸಾವಿರ ರುಪಾಯಿಗಳನ್ನು ಕೊಡಬೇಕಾಗುತ್ತದೆ. ಆ ಪ್ರಮಾಣದ ಹಣವನ್ನಾದರೂ ಪೋಷಕರು ತುಂಬಲೇಬೇಕಲ್ಲ? ಇದು ಸಧ್ಯದ ಸ್ಥಿತಿ. ಹೀಗೆ ನೋಡನೋಡುತ್ತಲೇ ಜಾಗತೀಕರಣದ ಚಕ್ರಸುಳಿಯಲ್ಲಿ ಸಿಲುಕಿದ ಭಾರತೀಯರ ಬದುಕು ದಿನದಿಂದ ದಿನಕ್ಕೆ ಸಂಕಷ್ಟದತ್ತ ನಡೆಯುತ್ತಿದೆಯೇ ಹೊರತು ಅವರ ನಡೆ ಸಮಾಧಾನದ ವೇದಿಕೆಯ ಕಡೆ ಹೊರಳುತ್ತಿಲ್ಲ.

ನಾಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿದು ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಅಥವಾ ತೃತೀಯ ರಂಗವೇ ಗದ್ದುಗೆಯ ಮೇಲೆ ಕುಳಿತರೂ ಜಾಗತೀಕರಣದ ನೆಲೆಯ ಮೇಲೆ ಅವುಗಳ ನಡೆ ಇರುತ್ತದೆ. ಈಗಾಗಲೇ ಅಡುಗೆ ಅನಿಲಕ್ಕೆ ಕೊಡುವ ಸಬ್ಸಿಡಿಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಎಷ್ಟು ನೈಸಾಗಿ ಹೆಜ್ಜೆ ಇಟ್ಟಿದೆ ಎಂದರೆ, ನಿಮಗೆ ಅಡುಗೆ ಅನಿಲದ ಸಬ್ಸಿಡಿ ಬೇಕೇ? ಹಾಗಿದ್ದರೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ, ಅದರ ನಂಬರನ್ನು ಕೊಡಿ, ನಿಮ್ಮ ಬ್ಯಾಂಕ್ ಖಾತೆಗೆ ಈ ಸಬ್ಸಿಡಿ ಹಣವನ್ನು ಜಮಾ ಮಾಡುತ್ತೇವೆ ಎಂದು ಹೇಳುತ್ತಿದೆ.

ಕೆಲ ದಿನಗಳ ಮಟ್ಟಿಗೆ ಈ ನಾಟಕ ನಡೆಯುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ ಅಡುಗೆ ಅನಿಲದ ಮೇಲೆ ಸಬ್ಸಿಡಿ ಪಡೆಯಬೇಕು ಎಂದರೆ ನಿಮ್ಮ ಆದಾಯದ ಮಿತಿ ಇಷ್ಟಿರಬೇಕು ಎಂದು ಷರತ್ತು ಹಾಕುತ್ತದೆ. ಐದು ರುಪಾಯಿ ಇದ್ದರೆ ಹೊಟ್ಟೆ ತುಂಬ ಉಣ್ಣಬಹುದು ಎಂಬ ಮಟ್ಟಿಗೆ ಇವತ್ತು ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ನಾಳೆ ಇವರೇ ಗ್ಯಾಸ್‌ಗೆ ಸಂಬಂಧಿಸಿದಂತೆ ಸಬ್ಸಿಡಿ ಪಡೆಯಲು ವಾರ್ಷಿಕ ಒಂದು ಲಕ್ಷ ರುಪಾಯಿಗಳಿಗಿಂತ ಹೆಚ್ಚಿನ ಆದಾಯ ಇರಬಾರದು ಎಂದು ಷರತ್ತು ಹಾಕುತ್ತಾರೆ ಅಥವಾ ಅವರ ಮೂಲಕ ಅಮೆರಿಕ ಇಂತಹ ಷರತ್ತು ಹಾಕಿಸುತ್ತದೆ. ಅಲ್ಲಿಗೆ ಗ್ಯಾಸ್ ಸಿಲಿಂಡರ್‌ಗೆ ಪಡೆಯುವ ಸಬ್ಸಿಡಿಯ ಕತೆ ಮುಗಿಯಿತು. ಥೋ, ಇವರು ಕೊಡುವ ಗ್ಯಾಸ್ ಸಿಲಿಂಡರಿಗೆ ಇಷ್ಟೆಲ್ಲ ಕಿರಿಕಿರಿ ಫೇಸು ಮಾಡಬೇಕಾ ಅಂತ ರೋಸಿ ಹೋಗುವ ಬಹುತೇಕ ಜನ ಸಬ್ಸಿಡಿಯ ಉಸಾಬರಿಗೇ ಹೋಗದೆ ಸುಮ್ಮನಿದ್ದು ಬಿಡುತ್ತಾರೆ. ಜಾಗತೀಕರಣ ಎಂಬ ವ್ಯವಸ್ಥೆಗೆ ಬೇಕಾಗಿರುವುದೇ ಇದು. ನೋಡುತ್ತಾ ನೋಡುತ್ತಾ ಫೈನಲಿ ಯಾರಿಗೂ ಯಾವ ರೀತಿಯ ಸಬ್ಸಿಡಿಯೂ ಸಿಗಬಾರದು. ಇದೇ ಅದರ ನೀತಿ.

ಹೀಗೆ ಭಾರತದಂತಹ ಅಭಿವೃದ್ಧಿಶೀಲ ದೇಶದ ಬದುಕು ಸುಸ್ತಾಗುತ್ತಾ ನಡೆದಷ್ಟೂ ಅದರ ಮೇಲೆ ಹಿಡಿತ ಸಾಧಿಸುವುದು ಸುಲಭ. ಹೀಗಾಗಿ ನಮಗೆ ಇಚ್ಛೆ ಇದೆಯೋ ಇಲ್ಲವೋ, ಈ ಚಕ್ರಸುಳಿಯಿಂದ ಪಾರಾಗುವುದು ಮಾತ್ರ ಕಷ್ಟ. ಏರುತ್ತಿರುವ ಜನಸಂಖ್ಯೆ, ದುಡಿಯುವ ಉತ್ಸುಕತೆಯನ್ನೇ ಕಳೆಯುವಂತಹ ಮನಃಸ್ಥಿತಿಗೆ ಜನರನ್ನು ನೂಕುತ್ತಿರುವ ಸರ್ಕಾರಗಳು, ಹೀಗೆ ಎಲ್ಲವೂ ಸೇರಿ ದೇಶದ ಬದುಕು ಮತ್ತಷ್ಟು ದುಸ್ತರವಾಗುತ್ತದೆ ಎಂಬುದು ಸ್ಪಷ್ಟ.

ಇಂತಹ ಕಾಲಘಟ್ಟದಲ್ಲಿ ನಾವು ನಮ್ಮ ಮೂಲಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಗಾಂಧಿ, ಬುದ್ಧ ಅವರಂತಹ ಮಹಾನುಭಾವರು ಹೇಳಿದ್ದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಸರಳತೆಯ ಮಂತ್ರ ಜತೆಗಿಲ್ಲದಿದ್ದರೆ ಮುಂದಿನ ಬದುಕು ಇನ್ನಷ್ಟು ಸಂಕಷ್ಟಮಯವಾಗಲಿದೆ ಎಂಬುದನ್ನು ಈಗಲೇ ಅರ್ಥ ಮಾಡಿಕೊಳ್ಳಬೇಕು. ಬದುಕಿಗಾಗಿ, ಅದು ಎದುರಿಗಿಡುವ ಅನಿವಾರ್ಯತೆಗಾಗಿ ನಾವು ಕೆಲಸ ಮಾಡೋಣ.ಆದರೆ ಅದರ ಮಧ್ಯೆಯೇ ಸರಳ ಬದುಕಿನ ಪಾಠವನ್ನು ಮತ್ತೆ ರೂಢಿಸಿಕೊಳ್ಳೋಣ. ಫೈನಲಿ, ನಮ್ಮ ಬದುಕಿಗೆ ಬೇಕಿರುವುದು ನೆಮ್ಮದಿ, ಸುಖ, ಶಾಂತಿಯೇ ಹೊರತು ಅರ್ಥಹೀನ ತೊಳಲಾಟಗಳಲ್ಲ.

ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಎಲ್ಲಿ ನೋಡಿದರೂ ನಿರಾಶೆಯ ಮೋಡ ಕವಿದಿರುವ ಈ ಕಾಲಘಟ್ಟದಲ್ಲಿ ನಮ್ಮನ್ನು ಮತ್ತೆ ಕೈ ಹಿಡಿದೆಬ್ಬಿಸುವ ಶಕ್ತಿ ಇರುವುದು ಈ ಸರಳತೆಗೆ ಎಂಬುದನ್ನು ಮರೆಯದಿರೋಣ. Anyway ನಿಮಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲ ಒಳ್ಳೆಯದಾಗಲಿ. ಗುಡ್‌ಲಕ್.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books